ಎಲ್ಲಾ ಪ್ರಯಾಣದಲ್ಲಿಯೂ ಸಾಗುವ ಹಾದಿ ಎಷ್ಟು ಮುಖ್ಯವೋ ಹಾಗೆಯೇ ಸಾಗುವ ವೇಗ ಹಾಗೂ ತಲುಪುವ ಗಮ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಏಕೆಂದರೆ, ಆಯಾ ಸಮಯಕ್ಕೆ ಸರಿಯಾಗಿ ತಲುಪಿದರಷ್ಟೇ ಪ್ರಯಾಣದ ಸಾರ್ಥಕತೆ ಲಭ್ಯ. ಎಲ್ಲರಿಗೂ ಅವರವರ ಸಮಯವೆಂಬುದು ಅಷ್ಟೇ ಮುಖ್ಯ. ಹಾಗೆಂದು, ಹಿಂದಿನ ಕಾಲದವರಂತೆ ನಾವು ಎಲ್ಲಾ ಹಾದಿಯನ್ನು ಕಾಲು ದಾರಿಯಲ್ಲಿಯೇ ಕ್ರಮಿಸಲು ಸಾಧ್ಯವಿಲ್ಲ ಅಥವಾ ನಮ್ಮದೇ ಆದ ಸ್ವಂತ ವಾಹನವೊಂದು ಎಲ್ಲರ ಬಳಿಯೂ ಇರಲು ಸಾಧ್ಯವಿಲ್ಲ. ಇದ್ದರೂ ಬಹಳ ದೂರದ ಪ್ರಯಾಣಕ್ಕೆ ಅದನ್ನು ಯಾವಾಗಲೂ ಬಳಸಲೂ ಸಾಧ್ಯವಿಲ್ಲ. ಹಾಗಾಗಿ, ಸಾರ್ವಜನಿಕ ಪ್ರಯಾಣಕ್ಕೆ ಬಸ್ಸುಗಳನ್ನು ಹಾಗೂ ಸಾಮಾನು ಸಾಗಿಸಲು ಟ್ರಕ್ ಗಳನ್ನು ಬಳಸುತ್ತೇವೆ. ಬಸ್ಸು ಹಾಗೂ ಟ್ರಕ್ಕುಗಳ ವಿಚಾರ ಹೀಗೇಕೆ ಹೇಳುತ್ತಿದ್ದೇನೆಂದರೆ.. ಇಂದು ನಾನು ಹೇಳಲು ಹೊರಟಿರುವ ಅಶೋಕ ಲೇಲ್ಯಾಂಡ್ ಎಂಬುದು ಬಸ್ಸು ಮತ್ತು ಟ್ರಕ್ಕುಗಳಲ್ಲಿ ನಾವು ಸರ್ವೇಸಾಮಾನ್ಯವಾಗಿ ಕಾಣುವಂತಹಾ ಹೆಸರು. ಇಂತಹ ಅಶೋಕ ಲೇಲ್ಯಾಂಡ್ ನ ಇತ್ತೀಚಿನ ಘೋಷ ವಾಕ್ಯ "ಕೋಯಿ ಮಂಜೀಲ್ ದೂರ್ ನಹೀ" ಎನ್ನುತ್ತದೆ. ಇದರರ್ಥ "ನಾವು ತಲುಪುವ ಯಾವುದೇ ಹಾದಿಯೂ ಸಹಾ ದೂರವಿಲ್ಲ" ಎಂದು.
ಇಂತಹಾ ಅಶೋಕ ಲೇಲ್ಯಾಂಡ್ ಕೇವಲ ನಮಗೆ ಮಾತ್ರ ಚಿರಪರಿಚಿತವಾದದ್ದಲ್ಲ.. ಇಂದು ವಿಶ್ವದಲ್ಲಿಯೇ ಬಸ್ಸುಗಳನ್ನು ತಯಾರಿಸುವ ಅತಿ ದೊಡ್ಡ ಉತ್ಪಾದಕರಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಅತಿ ಹೆಚ್ಚು ಟ್ರಕ್ ಗಳನ್ನು ಉತ್ಪಾದಿಸುವವರಲ್ಲಿ 10ನೇ ಸ್ಥಾನ ಪಡೆದಿದೆ. ಭಾರತದಲ್ಲಿ ಅತಿ ಹೆಚ್ಚು ಕಮರ್ಷಿಯಲ್ ವಾಹನಗಳು.. ಅದರಲ್ಲಿ, ಮೀಡಿಯಂ ಹಾಗೂ ಹೆವಿ ವಾಹನಗಳ ಉತ್ಪಾದಕರಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೆಂದು, ಇದು ಕೇವಲ ಬಸ್ಸು, ಟ್ರಕ್ಕುಗಳಿಗೆ ಮಾತ್ರ ಸೀಮಿತವಲ್ಲದೆ.. ಮಿಲಿಟರಿಗೆ ಬೇಕಾದ ವಾಹನಗಳನ್ನು ತಯಾರಿಸುವುದರಲ್ಲಿಯೂ ಹೆಸರುವಾಸಿಯಾಗಿದೆ. ಇಂತಹಾ ಅಶೋಕ ಲೇಲ್ಯಾಂಡ್ ಸ್ಥಾಪನೆಯಾಗಿದ್ದು ಎಲ್ಲಿ, ಯಾರಿಂದ ಎಂದು ತಿಳಿದುಬರೋಣ ಬನ್ನಿ. ಈಗ ಅಶೋಕ ಲೈಲ್ಯಾಂಡ್ ಸಾಗಿ ಬಂದ ಹೆಜ್ಜೆ ಗುರುತಿನಲ್ಲಿ ಒಮ್ಮೆ ಸಾಗೋಣ.
ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ತಮ್ಮದೇ ಆದ ಬ್ಯುಸಿನೆಸ್ ಅಥವಾ ಕಾರ್ಖಾನೆಗಳನ್ನು ತಯಾರಿಸುವವರಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ಅಂದಿನ ಸ್ವದೇಶಿ ಚಳುವಳಿ ಹಾಗೂ ಇಂದಿನ ಆತ್ಮ ನಿರ್ಭರ ಭಾರತದ ಮಾರ್ಗವನ್ನೇ ತೋರುತ್ತದೆ. ಇಂತಹಾ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಪಂಜಾಬಿನ ರಘುನಂದನ್ ಸರನ್ ಅವರಿಗೆ ಯಾವುದಾದರೂ ಒಂದು ಕಾರ್ಖಾನೆಯನ್ನು ಸ್ಥಾಪಿಸುವಂತೆ ಸಲಹೆ ಮಾಡಿದವರು ಅಂದಿನ ಪ್ರಧಾನಿಗಳಾದ ಜವಹರಲಾಲ್ ನೆಹರು ಅವರು. ತಮಗೆ ಇದು ಹೊಂದುತ್ತದೆಯೋ.. ಇಲ್ಲವೋ.. ಎಂಬ ಸಂದೇಹದೊಂದಿಗೆ, ಪ್ರಧಾನಿಗಳ ಸಲಹೆಯನ್ನು ತೆಗೆದುಹಾಕಲು ಸಾಧ್ಯವಿಲ್ಲದೆ ರಘುನಂದನ್ ಅವರು ತಮ್ಮ ದೇಶಕ್ಕೆ ಉಪಯುಕ್ತ ವಾಗುವಂತಹಾ ಕಾರ್ಖಾನೆಯೊಂದನ್ನು ಸ್ಥಾಪಿಸಲು ಮುನ್ನಡಿಯಿಟ್ಟರು.
1948 ಸೆಪ್ಟೆಂಬರ್ 7 ರಲ್ಲಿ ಆಗಿನ ಮದ್ರಾಸ್ ಅಂದರೆ ಈಗಿನ ಚೆನ್ನೈನ ಎನ್ನೋರ್ ಎಂಬ ಊರಿನ ಉತ್ತರ ಭಾಗದ ರಾಜಾಜಿ ಸಾಲೈ ಎನ್ನುವ ಮೀನುಗಾರಿಕೆ ಮಾಡುತ್ತಿದ್ದ ಕುಗ್ರಾಮವೊಂದರಲ್ಲಿ ಆಟೋಮೊಬೈಲ್ ಜೋಡಣೆ ಹಾಗೂ ಪೂರೈಕೆ ಮಾಡುವಂತಹಾ ಕಾರ್ಖಾನೆಯನ್ನು ಸ್ಥಾಪಿಸಿದರು. ಈ ಕಾರ್ಖಾನೆಗೆ ತಮ್ಮ ಒಬ್ಬನೇ ಮಗನಾಗಿದ್ದ ಅಶೋಕನ ಹೆಸರಿಟ್ಟರು. ಅಂದಿನಿಂದ ಅದು 'ಅಶೋಕ ಮೋಟಾರ್ಸ್' ಎಂದೇ ಹೆಸರಾಯಿತು.
ಇಂಗ್ಲೆಂಡಿನ ಕಂಪನಿಯಾದ ಆಸ್ಟಿನ್ ಎಂಬ ಆಟೋಮೊಬೈಲ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ಅವರ ಆಸ್ಟಿನ್40 ಕಾರುಗಳ ಬಿಡಿ ಭಾಗಗಳನ್ನು ಜೋಡಣೆ ಮಾಡಿ, ಅಲ್ಲಿಂದ ಮಾರುಕಟ್ಟೆಗೆ ತಲುಪಿಸುತ್ತಿದ್ದರು. ಆದರೆ, ರಘುನಂದನ್ ಅವರಿಗೆ ಇದು ಲಾಭದಾಯಕವಾಗಿ ಕಂಡರೂ.. ಪ್ಯಾಸೆಂಜರ್ ಕಾರುಗಳು ಕೇವಲ ಖಾಸಗಿ ವಾಹನಗಳಾಗಿ ಉಪಯೋಗವಾಗುತ್ತಿದ್ದನ್ನು ಕಂಡು, ಇದಕ್ಕಿಂತಲೂ ಹೆಚ್ಚಿಗೆ ಉಪಯುಕ್ತವಾದ ಸಾರ್ವಜನಿಕ ಬಳಕೆಗೆ ಬಳಸುವಂತಹಾ ವಾಹನಗಳನ್ನು ತಯಾರು ಮಾಡಿದರೆ ಎಂಬ ಆಲೋಚನೆ ಬಂದಿತು. ಅದರ ಅಗತ್ಯತೆ, ಉಪಯುಕ್ತತೆ ಎರಡನ್ನೂ ಕಂಡುಕೊಂಡ ಅವರು ಕಾರುಗಳ ಜೊತೆಗೆ ಸಾರ್ವಜನಿಕ ಸಾರಿಗೆಗಾಗಿ ಯಾವುದಾದರೂ ಹೆವಿ ವಾಹನಗಳನ್ನು ತಯಾರಿಸಬೇಕು ಎಂದು ಆಲೋಚಿಸಿದರು. ಈ ಕುರಿತು ಸರ್ಕಾರಕ್ಕೂ ಮನವಿ ಮಾಡಿದರು.
ಸರ್ಕಾರವು ಇವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿತು. ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಒಪ್ಪಿದರು. ಇವರಿಗೆ ಬೇಕಾಗಿದ್ದ ಟೆಕ್ನಾಲಜಿಗಾಗಿ ಬೇರೆ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು. ಇಂಗ್ಲೆಂಡಿನ ಲೇಲ್ಯಾಂಡ್ ಕಂಪನಿಯ ಜೊತೆ ಹಾಗೆ ಮಾಡಿಕೊಂಡ ಒಪ್ಪಂದದ ಫಲವಾಗಿ 1954 ರಲ್ಲಿ ಅಶೋಕ ಮೋಟಾರ್ಸ್ ಇದ್ದದ್ದು 'ಅಶೋಕ ಲೇಲ್ಯಾಂಡ್' ಆಗಿ ಬದಲಾಯಿತು. ಇದೇ ಸಮಯದಲ್ಲಿ ವಿಮಾನ ಅಪಘಾತದಲ್ಲಿ ರಘುನಂದನ್ ಸರನ್ ಅವರು ತೀರಿಕೊಳ್ಳುತ್ತಾರೆ. ನಂತರ ಅಧಿಕಾರದ ಚುಕ್ಕಾಣಿ ಹಿಡಿದದ್ದು ಅವರ ಪತ್ನಿ ರಕ್ಷಾ ಸರನ್.
ಇದರ ನಂತರ ಅಶೋಕ್ ಲೇಲ್ಯಾಂಡ್ ನ ಕೋಮೆಂಟ್ ಎನ್ನುವ ಹೊಸ ಪವರ್ ಫುಲ್ ಆದ ಟ್ರಕ್ ಬಿಡುಗಡೆಯಾಯಿತು ಹಾಗೂ ಯಶಸ್ವಿಯೂ ಆಯಿತು. ವಿಶ್ವದಲ್ಲಿಯೇ ಮೊದಲ ಬಾರಿಗೆ ಫುಲ್ ಟೈಮ್ ಏರ್-ಬ್ರೇಕ್ ಅನ್ನು ಅಳವಡಿಸಿದ್ದ ಅಡ್ವಾನ್ಸ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಿದ ದೇಶ ಭಾರತ. ಹಾಗೆ ಭಾರತಕ್ಕೆ ಹೆಗ್ಗಳಿಕೆ ತಂದುಕೊಟ್ಟದ್ದೇ ಅಶೋಕ ಲೇಲ್ಯಾಂಡ್.
1967ರ ಹೊತ್ತಿಗೆ ಡಬಲ್ ಡೆಕ್ಕರ್ ಬಸ್ಸುಗಳನ್ನು ತಯಾರಿಸಿತು. ಇದಕ್ಕಾಗಿ ಟೈಟಾನ್ ಎಂಬ ಕಂಪನಿಯ ಜೊತೆಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. 1969ರ ಹೊತ್ತಿಗೆ ಕಮರ್ಷಿಯಲ್ ವಾಹನಗಳಲ್ಲಿ ಪವರ್ ಸ್ಟೇರಿಂಗ್ ಅನ್ನು ಬಳಸಿದ ಭಾರತದ ಮೊದಲ ಕಂಪನಿ ಅಶೋಕ ಲೇಲ್ಯಾಂಡ್.
ಟೆಕ್ನಾಲಜಿಯಲ್ಲಿ ಮುಂದುವರಿಯುತ್ತಿದ್ದ ಈ ಕಂಪನಿಯನ್ನು ಗಮನಿಸಿದ ಭಾರತೀಯ ಸೇನೆ ಕೂಡ ಸೇನೆಗೆ ಬೇಕಾದ ವಾಹನಗಳನ್ನು ತಯಾರಿಸಲು 1970 ರಿಂದ ಒಪ್ಪಂದ ಮಾಡಿಕೊಂಡಿತು. 1974ರ ಹೊತ್ತಿಗೆ ಅಶೋಕ ಲೇಲ್ಯಾಂಡ್ ವ್ಯವಹಾರ 100 ಕೋಟಿಯನ್ನು ದಾಟಿತ್ತು. 1975ರಲ್ಲಿ ಬ್ರಿಟಿಷ್ ಲೇಲ್ಯಾಂಡ್ ಜೊತೆ ಇದ್ದ ಒಪ್ಪಂದ ಅಫಿಶಿಯಲ್ ಆಗಿ ಮುಗಿಯಿತಾದರೂ.. ಅವರ ಸಹಾಯ 1980ರ ಆಚೆಗೂ ಮುಂದುವರೆಯಿತು. 1980 ರಲ್ಲಿ ಅಶೋಕ ಲೇಲ್ಯಾಂಡ್ ಎರಡನೇ ಉತ್ಪಾದನಾ ಘಟಕ ಹೊಸೂರಿನಲ್ಲಿ ಸ್ಥಾಪಿಸಲ್ಪಟ್ಟಿತು. ಇದರ ನಂತರ ಸೈನ್ಯಕ್ಕೆ ಬೇಕಾದ ವಾಹನಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗಲು ಶುರುವಿಟ್ಟಿತು.
1987 ರಲ್ಲಿ ಅಶೋಕ ಲೇಲ್ಯಾಂಡ್ ಕಂಪನಿಯ ಅಂತರಾಷ್ಟ್ರೀಯ ಹೋಲ್ಡಿಂಗ್ ಗಳನ್ನು ಹಿಂದುಜಾ ಗ್ರೂಪ್ ನವರು ಕೊಂಡುಕೊಂಡರು. ಹೀಗೆ ಅಶೋಕ ಲೇಲ್ಯಾಂಡ್ ನ ಮೂಲಕ ಹಿಂದುಜಾ ಗ್ರೂಪ್ ನವರು ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಪ್ರವೇಶ ಪಡೆದರು. ಇಂದಿಗೂ ಹಿಂದುಜಾ ಗ್ರೂಪ್ ಒಡೆತನದಲ್ಲಿಯೇ ಕಂಪನಿ ಮುಂದುವರಿಯುತ್ತಿದೆ.
1996ರಲ್ಲಿ ಮೊದಲ ಬಾರಿಗೆ ನೈಸರ್ಗಿಕ ಇಂಧನ ಬಳಸಿ ಚಾಲನೆ ಮಾಡುವ ಬಸ್ ಅನ್ನು ತಯಾರಿಸಲಾಯಿತು. ಮುಂಬಯಿಯ ಬಸ್ ಸರ್ವಿಸ್ ಕಂಪನಿಯೊಂದರ ಮೂಲಕ ಈ ರೀತಿಯ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು. 2018ರಲ್ಲಿ ಸನ್ ಮೊಬಿಲಿಟಿ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಸಹಾ ಶುರುಮಾಡಿತು.
ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ.. ವಿದೇಶದಲ್ಲಿಯೂ ತನ್ನ ವ್ಯವಹಾರವನ್ನು ವಿಸ್ತರಿಸಿತು. 2006ರಲ್ಲಿ ಜೆಕ್ ರಿಪಬ್ಲಿಕ್ ನಲ್ಲಿ ಟ್ರಕ್ ಬ್ಯುಸಿನೆಸ್ ಅನ್ನು ಖರೀದಿ ಮಾಡಿ, ಅಲ್ಲಿಯೂ ತನ್ನ ವ್ಯವಹಾರವನ್ನು ಶುರುಮಾಡಿದೆ. ಕೀನ್ಯಾದಲ್ಲಿಯೂ ತನ್ನ ಉತ್ಪಾದನಾ ಘಟಕವನ್ನು ಶುರು ಮಾಡುವ ಪ್ಲಾನ್ ಅನ್ನು ಹೊಂದಿದೆ. 2007ರಲ್ಲಿ ನಿಸ್ಸಾನ್ ಕಂಪನಿಯ ಜೊತೆಗೆ ಮಾಡಿಕೊಂಡ ಒಪ್ಪಂದದ ಮೂಲಕ ಹೆವಿ ವಾಹನಗಳನ್ನು ಮಾತ್ರವಲ್ಲದೆ, ಲೈಟ್ ಆದ ಕಮರ್ಷಿಯಲ್ ವಾಹನಗಳನ್ನು ತಯಾರಿಸಲು ಶುರುವಿಟ್ಟಿದೆ. ಭಾರತದಲ್ಲಿಯೂ ಹಲವಾರು ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಾ..ಕೆಲವು ನಷ್ಟದಲ್ಲಿರುವ ಕಂಪನಿಗಳನ್ನು ತಾನು ಕೊಂಡುಕೊಳ್ಳುತ್ತಾ.. ವಿದೇಶದಲ್ಲಿಯೂ ತನ್ನ ಛಾಪು ಮೂಡಿಸುತ್ತಾ ಇರುವ ಅಶೋಕ ಲೈಲ್ಯಾಂಡ್ ಇಂದು 9950 ಕೋಟಿ ವ್ಯವಹಾರ ನಡೆಸುತ್ತಿದೆ.
ಬ್ಯುಸಿನೆಸ್ ನಲ್ಲಿ ನಾವು ಮುಂದೆ ಸಾಗುತ್ತಿದ್ದೇವೆ ಎಂದ ಮಾತ್ರಕ್ಕೆ.. ದಾರಿಯೂ ಅಷ್ಟೇ ಸರಾಗವಾಗಿ ಏನೂ ಇರುವುದಿಲ್ಲ. ಕೆಲವೊಮ್ಮೆ ಮುಂದಾಲೋಚನೆಯಿಂದ ಸರಾಗವಾದ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಹಲವಾರು ಮುಂದಾಲೋಚನೆಯ ಪ್ಲಾನ್ ಗಳು ಬಹಳವೇ ಉಪಯುಕ್ತವಾಗುತ್ತವೆ. ಅಶೋಕ ಲೇಲ್ಯಾಂಡ್ ಬ್ಯುಸಿನೆಸ್ ನಲ್ಲಿ ಅಂತಹಾ ಸರಾಗವಾದ ಹಾದಿಯನ್ನು ರೂಪಿಸಿಕೊಳ್ಳುವಲ್ಲಿ.. ಗ್ರಾಹಕರ ನಂಬಿಕೆಯೇ ಪ್ರಮುಖವಾದದ್ದು ಎಂದು ಮನಗಂಡಿದೆ. ಹಾಗಾಗಿ, ಅವರು ಜಾಹೀರಾತು ಉದ್ಯಮದಲ್ಲಿ ಎಲ್ಲೆಡೆ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಪೇಪರ್, ಪ್ರಿಂಟ್ ಮೀಡಿಯಾಗಳು, ಸೋಶಿಯಲ್ ಮೀಡಿಯಾಗಳು, ಟಿ.ವಿ ಜಾಹೀರಾತುಗಳು ಹೀಗೆ ಹತ್ತು ಹಲವು ರೀತಿಯಲ್ಲಿ ಜಾಹೀರಾತುಗಳನ್ನು ನೀಡಿದರೂ.. ಇಂದಿಗೂ ಅವರು ಹೇಳುವುದು "ನಮ್ಮ ಪ್ರೊಡಕ್ಟ್ ಗಳು ತಮ್ಮ ಕುರಿತು ತಾವೇ ಜಾಹೀರಾತು ಮಾಡಿಕೊಳ್ಳಬೇಕು" ಎಂಬುದಾಗಿ. ಏಕೆಂದರೆ, ಅಷ್ಟರಮಟ್ಟಿಗಿನ ಗುಣಮಟ್ಟ ಅವುಗಳಲ್ಲಿ ಇರಬೇಕೆಂದು.
ಕೆಲವೊಮ್ಮೆ ವಾಹನಗಳ ಗುಣಮಟ್ಟ ಸಾಕಷ್ಟು ಚೆನ್ನಾಗಿದ್ದರೂ.. ಕಾಲಕಾಲಕ್ಕೆ ಅವುಗಳಿಗೆ ಬೇಕಾದ ಸರ್ವಿಸ್ ದೊರೆಯಬೇಕು. ಹವಾಮಾನದಿಂದಾಗಿಯೋ ಅಥವಾ ರಸ್ತೆಯ ಕಾರಣಕ್ಕಾಗಿಯೋ ಎಲ್ಲಿಯಾದರೂ ಕೆಟ್ಟು ನಿಂತರೆ ಅವುಗಳನ್ನು ಸರಿಪಡಿಸಲು ಸಹಾ ತಮ್ಮದೇ ಆದ ಮಾರ್ಗ ಒಂದನ್ನು ಕಂಡುಕೊಂಡಿದ್ದಾರೆ. ಗ್ರಾಹಕರಿಗೆ 'ತತ್ಕಾಲ್' ಎನ್ನುವ ಹೆಸರಿನಲ್ಲಿ ಈ ಸೇವೆಯನ್ನು ಒದಗಿಸುತ್ತಿದ್ದಾರೆ. ಈ 'ತತ್ಕಾಲ್' ಸೇವೆಗಾಗಿ ತಮ್ಮದೇ ಆದ ಗ್ರಾಹಕ ಸೇವಾ ಕೇಂದ್ರವನ್ನು ತೆರೆದಿದ್ದಾರೆ. ಗ್ರಾಹಕರು ತಮ್ಮ ವಾಹನಕ್ಕೆ ಯಾವುದಾದರೂ ಸರ್ವಿಸ್ ಅಗತ್ಯವಿದ್ದರೆ ಕರೆ ಮಾಡಬಹುದು. ಹಾಗೆ ಗ್ರಾಹಕರು ಕರೆ ಮಾಡಿದ ಯಾವ ಕರೆಯನ್ನೂ ನಿರ್ಲಕ್ಷಿಸುವುದಿಲ್ಲ ಅಥವಾ ಉತ್ತರಿಸದೆಯೂ ಇರುವುದಿಲ್ಲ. ತಮ್ಮ ಕಂಪನಿಯ ಯಾವುದಾದರೂ ವಾಹನ ಕೆಟ್ಟು ನಿಂತಿದ್ದು.. ಅವುಗಳ ಕುರಿತ ಮಾಹಿತಿ ದೊರೆತರೆ, ಆ ಮಾಹಿತಿ ದೊರೆತ ನಾಲ್ಕು ಗಂಟೆಗಳ ಒಳಗೆ ಅವರು ಅಲ್ಲಿಗೆ ಹೋಗಿ ವಾಹನದ ಪರಿಶೀಲನೆ ಮಾಡುತ್ತಾರೆ. ಅಷ್ಟೇ ಅಲ್ಲದೆ, ಮುಂದಿನ 48 ಗಂಟೆಗಳ ಒಳಗೆ ವಾಹನಕ್ಕೆ ಬೇಕಾದ ರಿಪೇರಿ ಮಾಡಿ ಅದು ಮತ್ತೆ ರಸ್ತೆಯ ಮೇಲೆ ಓಡುವಂತೆ ಮಾಡುತ್ತಾರೆ. ಇದು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡು ಬೆಳೆಸಿಕೊಳ್ಳುವ ದಾರಿಯೂ ಹೌದು. ಬ್ಯುಸಿನೆಸ್ ಕೇವಲ ಒಂದು ಸಲದ ಇನ್ವೆಸ್ಟ್ಮೆಂಟ್ ಅಲ್ಲ. ಅದಕ್ಕೆ ಪ್ರತಿ ಬಾರಿಯೂ ಭರವಸೆ, ನಂಬಿಕೆಯ ಇಂಧನ ಬೇಕಾಗಿಯೇ ಇರುತ್ತದೆ. ಈ ಕೆಲಸವನ್ನು ಮಾಡುತ್ತಿದೆ ಅಶೋಕ ಲೇಲ್ಯಾಂಡ್.
ಯಾವುದೇ ಬ್ಯುಸಿನೆಸ್ ಆದರೂ ಸಹಾ ಕಾಲದ ಜೊತೆಗೆ ಅಪ್ಡೇಟ್ ಆಗಬೇಕಾಗುತ್ತದೆ. ಈಗ ಅಶೋಕ ಲೇಲ್ಯಾಂಡ್ ಈ-ಮಾರ್ಕೆಟ್ ನಲ್ಲಿಯೂ ತಮ್ಮ ಹೆಜ್ಜೆ ಮೂಡಿಸುತ್ತಿದ್ದಾರೆ. ಗ್ರಾಹಕರು ತಮ್ಮ ಯಾವುದಾದರೂ ಹಳೆಯ ವಾಹನಗಳನ್ನು ಎಕ್ಸ್ಚೇಂಜ್ ಮಾಡಿಕೊಳ್ಳುವಂತಿದ್ದರೆ ಅಥವಾ ಅಪ್ಗ್ರೇಡ್ ಮಾಡುವಂತಿದ್ದರೆ ಅದಕ್ಕೆ ಆನ್ಲೈನ್ ವೇದಿಕೆ ಒದಗಿಸುತ್ತಿದೆ ಅಶೋಕ ಲೇಲ್ಯಾಂಡ್.
ಹಾಗೆಂದು, ಈ ಕಂಪನಿಯ ವಾಹನಗಳ ದರ ಗ್ರಾಹಕರಿಗೆ ಕಡಿಮೆ ಎನಿಸುತ್ತದೆಯಾ..?? ಎಂದರೆ ದರದ ವಿಚಾರದಲ್ಲಿ ಇವರು ರಾಜಿ ಮಾಡಿಕೊಳ್ಳುವುದೇ ಇಲ್ಲ. ಇವರ ಪ್ರತಿಸ್ಪರ್ಧಿಗಳಾದ ಟಾಟಾ ಮೋಟಾರ್ಸ್, ಭಾರತ್ ಬೆಂಜ್, ಐಚರ್ಸ್ ನ ವೋಲ್ವೋ ಇವುಗಳಿಗೆಲ್ಲಾ ಹೋಲಿಸಿದರೆ ಅಶೋಕದವರ ವಾಹನಗಳ ಬೆಲೆ ಹೆಚ್ಚು. ಇದಕ್ಕೆ ಅವರು ಸಮರ್ಥವಾದ ಸಮಜಾಯಿಷಿಯೊಂದನ್ನು ನೀಡುತ್ತಾರೆ ಸಹಾ. ಏಕೆಂದರೆ, ಒಮ್ಮೆ ಅಶೋಕ ಲೇಲ್ಯಾಂಡ್ ವಾಹನಗಳನ್ನು ಕೊಂಡುಕೊಂಡರೆ.. ಅವುಗಳ ಬಾಳಿಕೆ ಅತ್ಯಧಿಕ. ಹೆಚ್ಚು ಲೈಫ್ಸ್ ಸ್ಪಾನ್ ಹೊಂದಿದ್ದು, ಮೇಂಟೆನೆನ್ಸ್ ಚಾರ್ಜ್ ಕೂಡಾ ಅತಿ ಕಡಿಮೆ. ಹಾಗಾಗಿ, ಮೊದಲ ಬಾರಿಗೆ ಇದಕ್ಕೆ ಹೆಚ್ಚು ದರ ಎಂದು ಹೇಳುತ್ತಾರೆ. ಹೆಚ್ಚು ಕ್ವಾಲಿಟಿಯ ವಸ್ತುಗಳಿಗೆ ಹೆಚ್ಚಿನ ಹಣ ನೀಡಲೇಬೇಕು. ತಮಗೆ ಯಾವುದೇ ನಷ್ಟ ಮಾಡಿಕೊಳ್ಳದೆ, ಗ್ರಾಹಕರಿಗೆ ಒಮ್ಮೆಗೇ ಅತ್ಯುತ್ತಮ ಗುಣಮಟ್ಟದ ಪ್ರಾಡಕ್ಟ್ ಅನ್ನು ನೀಡುವುದು ಸಹಾ ಬ್ಯುಸಿನೆಸ್‌ನಲ್ಲಿ ಕಠಿಣವಾದ ನಿಲುವು ಎಂದೇ ಹೇಳಬಹುದು.
ಅಶೋಕ ಲೇಲ್ಯಾಂಡ್ ನಲ್ಲಿ ತಯಾರಾಗುವ ವಾಹನಗಳು ಆಯಾ ಸ್ಥಳಗಳಿಗೆ ಬೇಕಾದ ರೀತಿಯ ಡಿಸೈನ್ ಅನ್ನು ಹೊಂದಿರುತ್ತವೆ. 9 ಸೀಟರ್ ನಿಂದ 80 ಸೀಟರ್ ವರೆಗಿನ ಬಸ್ ಗಳೂ ತಯಾರಾಗುತ್ತವೆ. ಬ್ಯುಸಿನೆಸ್ ನಲ್ಲಿ ಒಂದೇ ಲೇಬಲ್ ಅಡಿಯಲ್ಲಿ, ಒಂದೇ ರೀತಿಯ ಪ್ರಾಡಕ್ಟ್ ಗಳು ತಯಾರಾಗಬೇಕು ಎನ್ನುವ ನಿಯಮವೇನಿಲ್ಲ. ಆಯಾ ಪ್ರದೇಶಗಳಿಗೆ ಹೊಂದುವಂತೆ, ಸ್ಥಳಗಳಿಗೆ ತಕ್ಕಂತೆ ಪ್ರಾಡಕ್ಟ್ ಗಳನ್ನು ಡಿಸೈನ್ ಮಾಡುವುದು ಸಹಾ ಬ್ಯುಸಿನೆಸ್ ನಲ್ಲಿ ಅತ್ಯಂತ ಪ್ರಮುಖವಾದ ನಿರ್ಣಯ.
ಬ್ಯುಸಿನೆಸ್ ಹಾದಿಯಲ್ಲಿ ರಾಜನಂತೆ ಸಾಗುವುದು ಸುಲಭದ ಮಾತೇನಲ್ಲ. ರಾಜನದ್ದು ಎಂದಿಗೂ ಸುಲಭದ ಹಾದಿಯೂ ಅಲ್ಲ. ಏಕೆಂದರೆ, ಸ್ಪರ್ಧೆಗೆ ತಕ್ಕ ಪ್ರತಿಸ್ಪರ್ಧಿಗಳಂತೂ ಇದ್ದೇ ಇರುತ್ತಾರೆ. ಬ್ಯುಸಿನೆಸ್ ನಲ್ಲಿ ಅದೆಲ್ಲವನ್ನೂ ದಾಟಿ ಮುನ್ನಡೆಯಲೇಬೇಕು. ಅದಕ್ಕಾಗಿ ಗುಣಮಟ್ಟದಲ್ಲಿ ರಾಜಿಯಾಗದಂತೆ, ಬೆಲೆಯಲ್ಲಿಯೂ ರಾಜಿಯಾಗದಂತೆ, ಆಯಾ ಪ್ರದೇಶಕ್ಕೆ ತಕ್ಕನಾದ ಡಿಸೈನ್ ಮಾಡಿದ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡುವಲ್ಲಿ.. ಕೇವಲ ಉತ್ಪಾದನೆಗಷ್ಟೇ ಗಮನ ನೀಡದೆ, ಅದಕ್ಕೆ ತಕ್ಕ ರೀತಿಯ ಪ್ರಮೋಷನ್ ಮಾಡುತ್ತಾ.. ಗ್ರಾಹಕರಿಗೆ ತಲುಪಿಸುವಲ್ಲಿ, ಗ್ರಾಹಕರಿಗೆ ತಮ್ಮ ಪ್ರಾಡಕ್ಟ್ ತಲುಪಿದ ನಂತರ ಹೆಚ್ಚಿನ ಸೇವೆಯ ಅವಶ್ಯಕತೆ ಇದ್ದಲ್ಲಿ.. ಅದನ್ನು ಸಮಯೋಚಿತವಾಗಿ ಹೊಂದಿಸುವಲ್ಲಿ, ನಂಬಿಕೆಗಳಿಸುತ್ತಾ ಬ್ಯುಸಿನೆಸ್ ನಲ್ಲಿ ರಾಜಬೀದಿಯಲ್ಲಿ ನಿರ್ಭಯವಾಗಿ ಸಾಗಬಹುದು ಎನ್ನುವ ಬ್ಯುಸಿನೆಸ್ ನ ಪಾಠವನ್ನು ತನ್ನ ರೂಟ್ ಮ್ಯಾಪ್ ನಿಂದ ತೋರುತ್ತಿದೆ ಅಶೋಕ ಲೇಲ್ಯಾಂಡ್.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ