ಬುಧವಾರ, ಏಪ್ರಿಲ್ 22, 2026

ಜೆಟ್ ಸೆಟ್ ಗೋ ( ಬ್ಯುಸಿನೆಸ್ ಡೈರಿ ಪುಟ - 01)



ಗೆಟ್ ಸೆಟ್ ಗೋ ಎನ್ನುವ ಬದಲಾಗಿ ಜೆಟ್ ಸೆಟ್ ಗೋ ಎಂದೇನಾದರೂ ತಪ್ಪಾಗಿ ಓದುತ್ತಿದ್ದೇವಾ.. ಎಂದು ಯೋಚನೆ ಮಾಡುತ್ತಿದ್ದೀರಾ..? ಇಲ್ಲ.. "ಜೆಟ್ ಸೆಟ್ ಗೋ" ಎಂಬುದು ಆಕಾಶವೇ ತನ್ನ ಸೀಮೆ ಎಂದುಕೊಂಡು ಪ್ರೈವೇಟ್ ಜೆಟ್ ಹಾಗೂ ಹೆಲಿಕಾಪ್ಟರ್ ಚಾರ್ಟರ್ ಗಳ ಸರ್ವೀಸ್ ಅನ್ನೇ ತನ್ನ ಬ್ಯುಸಿನೆಸ್ ಆಗಿ ಮಾರ್ಪಡಿಕೊಂಡ "ಚಿಕ್ಕ ಪಟ್ಟಣದ ಹುಡುಗಿ" ಕಂಡ ಬಹುದೊಡ್ಡ ಕನಸಿನ ನನಸಿನ ರೂಪ. ಹೌದು, ಸ್ವಯಂ ಉದ್ಯಮಿಯಾಗಿ ರೂಪುಗೊಂಡ ಹುಡುಗಿಯೊಬ್ಬಳ ಮಲ್ಟಿಮಿಲಿಯನ್ ಡಾಲರ್ ಬೆಲೆಬಾಳುವ ವಾಯುಯಾನದ ಕಂಪೆನಿ.


ಇವತ್ತು ನಾವು ಆಟೋ, ಕ್ಯಾಬ್ ಗಳನ್ನು ಬಳಸುವಷ್ಟೇ ಸುಲಭವಾಗಿ, ಅದರಷ್ಟೇ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಪ್ರೈವೇಟ್ ಜೆಟ್ ನಲ್ಲಿ ಓಡಾಡುವಂತಾದರೆ..?? ಈ ಕಾಲ ಬಹಳ ದೂರವೇನಿಲ್ಲ. ಈಗಾಗಲೇ ಇದರ ಪ್ರಾಥಮಿಕ ಹಂತ "ಸ್ಕೈ ಶಟಲ್" ಎಂಬ ಹೆಸರಿನಲ್ಲಿ 2018 ರಲ್ಲಿ ಪ್ರಾರಂಭವಾಗಿದೆ. ಈಗಾಗಲೇ ಮೂರು ಬೇರೆ ಬೇರೆ ದಾರಿಗಳನ್ನು ಸಹಾ ಗುರುತಿಸಲಾಗಿದೆ. ಮುಂಬಯಿಯ ಜುಹೂನಿಂದ ತಾರಾಪುರ ಹಾಗೂ ವಾಪಿವರೆಗೆ, ಮುಂಬಯಿಯಿಂದ ಬೆಂಗಳೂರಿನವರೆಗೆ, ಭೋಪಾಲ್ ನಿಂದ ಇಂದೋರ್ ವರೆಗೆ ಕಾರಿಡಾರ್ ಗಳನ್ನು ಮಾರ್ಕ್ ಮಾಡಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಬಳಕೆದಾರರು ಊಬರ್ ಅನ್ನು ಉಪಯೋಗಿಸುವ ದರದಲ್ಲಿ ಈ ವ್ಯವಸ್ಥೆಯನ್ನು ಉಪಯೋಗಿಸಿದ್ದಾರೆ. ಸಮಯದಲ್ಲಿ ಯಾವುದೇ ರಾಜಿ ಇಲ್ಲದೆ, ಆನ್ - ಟೈಮ್ ಪಿಕಪ್ ಹಾಗೂ ಡ್ರಾಪ್ ವ್ಯವಸ್ಥೆಯೂ ಇರಲಿದೆ. ಇದರ ಮುಂದಿನ ಹಂತವಾಗಿ ಡ್ರೋನ್ ಕಾರಿಡಾರ್ ಜೊತೆಗೂ ಒಪ್ಪಂದವಾಗಿದೆ. ಇದೆಲ್ಲವನ್ನೂ ಸಾಧ್ಯವಾಗಿಸಿರುವುದು ಊಬರ್ ಆಫ್ ಇಂಡಿಯನ್ ಸ್ಕೈ ಎಂದೇ ಹೆಸರಾಗಿರುವ ಕಂಪನಿ "ಜೆಟ್ ಸೆಟ್ ಗೋ". ಅವರದ್ದೇ ಆದ "ಸ್ಮಾರ್ಟ್" ಎಂಬ ವಿಭಿನ್ನ ತಂತ್ರಜ್ಞಾನದಿಂದ. 


ಕನಿಕಾ ಟೆಕ್ರಿವಾಲ್ "ಜೆಟ್ ಸೆಟ್ ಗೋ" ಸ್ಥಾಪನೆ ಮಾಡಿದ್ದು ತನ್ನ 22 ನೇ ವಯಸ್ಸಿನಲ್ಲಿ. ಹುಟ್ಟಿದ್ದು ಭೋಪಾಲ್ ನ ಮಾರ್ವಾಡಿ ಕುಟುಂಬದಲ್ಲಿ. ಆಕೆಯ ತಂದೆ ರಿಯಲ್ ಎಸ್ಟೇಟ್ ಹಾಗೂ ಕೆಮಿಕಲ್ ಬ್ಯುಸಿನೆಸ್ ಮಾಡುತ್ತಿದ್ದರು. ಈಕೆ ಪ್ರಾಥಮಿಕ ಶಿಕ್ಷಣ ಮುಗಿಸಿಕೊಂಡದ್ದು ದಕ್ಷಿಣ ಭಾರತದಲ್ಲಿ.. ಬೋರ್ಡಿಂಗ್ ಸ್ಕೂಲ್ ನಲ್ಲಿ ಇದ್ದುಕೊಂಡು. ಮನೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟು ಆದ್ಯತೆ ಇರಲಿಲ್ಲ. ಮದುವೆಯಾಗುವ ಹುಡುಗಿ ಯಾವುದಾದರೂ ಒಂದು ಡಿಸೈನ್ ಕೋರ್ಸ್ ಮುಗಿಸಿಕೊಂಡರೆ ಸಾಕು ಎನ್ನುವ ಮನೋಭಾವ. ಕನಿಕಾ ಬಿ.ಡಿ. ಸೋಮಾನಿ ಟೆಕ್ನಾಲಜಿಯಲ್ಲಿ ವಿಶ್ಯುಯಲ್ ಕಮ್ಯುನಿಕೇಶನ್ ಡಿಸೈನ್ ನಲ್ಲಿ ಡಿಪ್ಲೊಮಾ ಮುಗಿಸಿ, ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಎ ಎಕನಾಮಿಕ್ಸ್ ಅನ್ನು ಮುಗಿಸಿದರು. 


ಕನಿಕಾ ತನ್ನ 17 ನೇ ವರ್ಷದಿಂದಲೇ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ತನ್ನ ಓದನ್ನು ಮುಂದುವರಿಸಿದಳು. ಲಂಡನ್ ನ ಕಾವೆಂಟ್ರಿ ಯೂನಿವರ್ಸಿಟಿಯಿಂದ ಎಂ.ಬಿ.ಎ ಪದವಿ ಪಡೆದರು. ಆಕೆ ಪಾರ್ಟ್ ಟೈಮ್ ಉದ್ಯೋಗ ಮಾಡಿದ್ದು ಒಂದು ಅತಿ ಕಷ್ಟಕರವಾದ ಇಂಡಸ್ಟ್ರಿ ಎಂದೇ ಗುರುತಾಗಿದ್ದ ಪ್ರೈವೇಟ್ ಜೆಟ್ ಇಂಡಸ್ಟ್ರಿಯಲ್ಲಿ. ಕೆಲವೇ ಜೆಟ್ ಗಳಿದ್ದ ಹಾಗೂ ಚಾಲೆಂಜಿಂಗ್ ಎನಿಸಿದ್ದ ಈ ಕ್ಷೇತ್ರದಲ್ಲಿ ಈಕೆಗಿರುವ ನೈಪುಣ್ಯತೆ ಎಷ್ಟು ಎಂದರೆ ಕಣ್ಣಿಗೆ ಬಟ್ಟೆ ಕಟ್ಟಿದರೂ ಒಂದು ಜೆಟ್/ ಪ್ಲೇನ್ ಅನ್ನು ಬಿಚ್ಚಿ ಮತ್ತೆ ಮರು ಜೋಡಿಸಬಲ್ಲರು. ಆಕೆ ಹೇಳುವ ಪ್ರಕಾರ, ಆಕೆ ಕಲಿತದ್ದು ಕಾಲೇಜಿನ ಶಿಕ್ಷಣಗಳಿಂದ ಅಲ್ಲ.. ಆಕೆಯ ಕೆಲಸದ ಅನುಭವದಿಂದ. ಈ ನೈಪುಣ್ಯತೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಆಲೋಚಿಸುತ್ತಿದ್ದಾಗ ಅಪ್ಪನ ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಲ್ಲಿ ವಿಮಾನಯಾನವನ್ನೇಕೆ ಬಳಸಬಾರದು ಎಂದುಕೊಂಡು ಲಂಡನ್ ನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯ ಸಹೋದ್ಯೋಗಿ ಜೊತೆಗೆ ಪ್ರೈವೇಟ್ ಜೆಟ್ ಬ್ಯುಸಿನೆಸ್ ಶುರು ಮಾಡುವುದಾಗಿ ಹೇಳಿದಾಗ ಆಕೆಗೆ ಸಿಕ್ಕಿದ್ದು ಕುಹಕದ ನಗು. ಆದರೆ, ಅದರಿಂದ ಹಿಂಜರಿಯಲಿಲ್ಲ ಕನಿಕಾ.


2012 ರಲ್ಲಿ ಕೈಯಲ್ಲಿ ಕೇವಲ 5600 ರೂಪಾಯಿ ದುಡ್ಡು ಹಿಡಿದುಕೊಂಡು , ಯಾವುದೇ ಏರ್ ಕ್ರಾಫ್ಟ್ ಜೊತೆಗೆ ಒಪ್ಪಂದ ಮಾಡಿಕೊಳ್ಳದೇ ಕೇವಲ ಒಂದು ಅಪ್ಲಿಕೇಶನ್ ಹಿಡಿದುಕೊಂಡು ಶುರು ಮಾಡಿದ್ದೇ "ಜೆಟ್ ಸೆಟ್ ಗೋ" ಎನ್ನುವ ಏವಿಯೇಷನ್ ಬ್ಯುಸಿನೆಸ್ ಅನ್ನು. ಆಗ ಆಕೆಗೆ ಕೇವಲ 22 ವರ್ಷ. ಈ ಅಪ್ಲಿಕೇಶನ್ ಬರುವ ಮೊದಲು ಯಾರಿಗಾದರೂ ಪ್ರೈವೇಟ್ ಜೆಟ್ ಬೇಕು ಎಂದರೆ ಅವರು ಯಾವುದಾದರೂ ಬ್ರೋಕರ್ ಅನ್ನು ಇಲ್ಲವೇ ಪ್ರೈವೇಟ್ ಆಪರೇಟರ್ ಅನ್ನು ಸಂಪರ್ಕಿಸಬೇಕಿತ್ತು. ಆ ಬ್ರೋಕರ್ ಇಲ್ಲವೇ ಪ್ರೈವೇಟ್ ಆಪರೇಟರ್ ಜೆಟ್ ಅಥವಾ ಹೆಲಿಕಾಪ್ಟರ್ ಅನ್ನು ಒದಗಿಸುತ್ತಿದ್ದರಾದರೂ.. ಅದು ಬಳಕೆದಾರರ ಉಪಯೋಗದ ಆದ್ಯತೆಯ ಮೇರೆಗೆ ಅಥವಾ ಅವರ ಅನುಕೂಲದ ಬೇಡಿಕೆಯಂತಲ್ಲ.. ಬದಲಾಗಿ ತಮಗೆ ಯಾವುದರಿಂದ ಹೆಚ್ಚು ಕಮಿಷನ್ ದೊರೆಯುತ್ತದೋ ಅಂತಹಾ ಜೆಟ್ ಗಳನ್ನು. ಇಂತಹಾ ಕಮಿಷನ್ ಆಸೆಯ ಬ್ರೋಕರ್ ಹಾಗೂ ಆಪರೇಟರ್ ಗಳು ಇದ್ದ ಇಂಡಸ್ಟ್ರಿಯನ್ನೇ ಬದಲಿಸಲು ಹೊರಟಿದ್ದಳು ಕನಿಕಾ. ಆಕೆ ತನ್ನ ಕಂಪನಿಯ ಮೂಲಕ ಬಳಕೆದಾರ ಸ್ನೇಹಿ ಹಾಗೂ ಅನುಕೂಲಕರ , ಕಡಿಮೆ ವೆಚ್ಚದಲ್ಲಿ, ಪಾರದರ್ಶಕ ವೇದಿಕೆಯೊಂದನ್ನು ಸಿದ್ಧಪಡಿಸಿದ್ದರೂ ಯಾರೂ ಅದನ್ನು ಬಳಸಲು ಹಾಗೂ ಆಕೆಯನ್ನು ನಂಬಲು ಸಿದ್ದವಿರಲಿಲ್ಲ.


ಕ್ಲೈಂಟ್ ಗಳು ಆಕೆಯ ಜೊತೆಗೆ ಮೀಟಿಂಗ್ ಗಳಿಗೆ ಸಿದ್ಧವಾಗುತ್ತಿದ್ದರಾದರೂ ನಂತರದಲ್ಲಿ ಆಕೆಯನ್ನು ಇಗ್ನೋರ್ ಮಾಡುತ್ತಿದ್ದರು ಇಲ್ಲವೇ ಮೀಟಿಂಗ್ ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಆಗುತ್ತಿತ್ತು. ಇಲ್ಲವೇ, ಸರಿಯಾದ ಮೈಂಟೆನೆನ್ಸ್ ಇಲ್ಲದ ಜೆಟ್ ಸಿಗುತ್ತಿತ್ತು , ಇಲ್ಲವೇ ಸಮಯ ಪಾಲನೆ ಸರಿಯಾಗಿ ಆಗುತ್ತಿರಲಿಲ್ಲ. ಹೀಗೆ ಹಲವಾರು ರೀತಿಯ ತೊಂದರೆಗಳು ಎದುರಾದಾಗ, ಸುತ್ತಲೂ ಇದ್ದವರು.. ನಿನ್ನ ಕೈಯಲ್ಲಿ ಇದೆಲ್ಲಾ ಸಾಧ್ಯವಿಲ್ಲ, ಈ ಏವಿಯೇಷನ್ ಕ್ಷೇತ್ರ ಬಿಟ್ಟು ಕಪ್ ಕೇಕ್ ಮಾಡಿ ವ್ಯಾಪಾರ ಮಾಡು ಇಲ್ಲವೇ ಬೋಟಿಕ್ ತೆರೆ ಎಂದೆಲ್ಲಾ ಉಪದೇಶ ನೀಡಿದರು. ಇದರ ಜೊತೆಗೆ ಕನಿಕಾಗೆ ಬಿಗ್ ಶಾಕ್ ಎದುರಾಗಿದ್ದು ಆಕೆಯ ಆರೋಗ್ಯ ಸಮಸ್ಯೆಯಿಂದ. ಹಾಡ್ಗಿನ್ಸ್ ಲಿಂಫೋಮಾ ಎನ್ನುವ ಬ್ಲಡ್ ಕ್ಯಾನ್ಸರ್ ಅವಳಲ್ಲಿ 2 ನೇ ಹಂತದಲ್ಲಿತ್ತು. ಆಗ ಕನಿಕಾಗೆ ಇನ್ನೂ 22 ವರ್ಷ.  ಆದರೆ, ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಂಡು ಹಾಗೂ ತನ್ನಲ್ಲಿದ್ದ ವಿಲ್ ಪವರ್ ನಿಂದ ಕ್ಯಾನ್ಸರ್ ಅನ್ನು ಮೆಟ್ಟಿ ನಿಂತದ್ದಷ್ಟೇ ಅಲ್ಲ.. ಅದರಿಂದ ಪಾಠವನ್ನೂ ಕಲಿತಳು. "ಕ್ಯಾನ್ಸರ್ ಬಂದದ್ದರಿಂದ ಜೀವನ ಅದೆಷ್ಟು ಚಿಕ್ಕದು ಎಂದು ಗೊತ್ತಾಯಿತು. ಇದರಿಂದ ನಾನು ನನಗೋಸ್ಕರ ಹಾಗೂ ನನಗೆ ಯಾವುದು ಮುಖ್ಯವೋ ಅದಕ್ಕೋಸ್ಕರ ಬದುಕಲು ಕಲಿತೆ" ಎನ್ನುತ್ತಲೇ ಜೆಟ್ ಸೆಟ್ ಗೋಗಾಗಿ ಇನ್ನೂ ಹೆಚ್ಚಿನ ಗ್ರೌಂಡ್ ವರ್ಕ್ ಮಾಡಲು 20 ತಿಂಗಳು ಮೀಸಲಿಟ್ಟಳು. 


ಅವಳ ಈ ಕನಸಿಗೆ ಸಾಥ್ ನೀಡಿದ್ದು ಗೆಳೆಯ ಸುಧೀರ್ ಪೆರ್ಲಾ. 2 ಮಿಲಿಯನ್ ಡಾಲರ್ ಗಳನ್ನು ತೊಡಗಿಸಿ ಇದರ ಸಹ ಸ್ಥಾಪಕರಾದರು. "ಸ್ಮಾರ್ಟ್" ಎನ್ನುವ ಅಪ್ಲಿಕೇಶನ್ ಇನ್ನಷ್ಟು ಶಕ್ತಿಶಾಲಿಯಾಗಿ ರೂಪುಗೊಂಡಿತ್ತು. ಹಲವಾರು ಟೆಕ್ನಾಲಜಿಗಳನ್ನು ವಿಶಿಷ್ಟ ರೀತಿಯಲ್ಲಿ ಬಳಸಿ ತಮ್ಮದೇ ಯುನಿಕ್ ಮೈಂಟನೆನ್ಸ್ ಅನ್ನು ರೂಪಿಸಿದರು. ಮೈಂಟನೆನ್ಸ್ ಖರ್ಚು ಕಡಿಮೆಯಾಯಿತು, ಹಾರಾಟದ ಸಮಯ ಹೆಚ್ಚಾಯಿತು. ಪಾರದರ್ಶಕ ವ್ಯವಸ್ಥೆಯಿಂದ ಮೊದಲೆಲ್ಲಾ ನೀಡುತ್ತಿದ್ದ 60 % ಬ್ರೋಕರ್ ಚಾರ್ಜ್ ಉಳಿಯಿತು. ಇದೇ ಭಾರತದ ಮೊದಲ ಹಾಗೂ ಏಕೈಕ ಪ್ರೈವೇಟ್ ಜೆಟ್ ಹಾಗೂ ಹೆಲಿಕಾಪ್ಟರ್ ಚಾರ್ಟರ್ ಗಳ ಮಾರ್ಕೆಟ್ ಪ್ಲೇಸ್ ಎನ್ನಿಸಿಕೊಂಡಿತು.  ಪುರುಷರ ಪ್ರಾಬಲ್ಯವಿದ್ದ ಬ್ಯುಸಿನೆಸ್ ನಲ್ಲಿ ಅಂದು ಕನಿಕಾಳನ್ನು, ಅವಳ ಬ್ಯುಸಿನೆಸ್ ಅನ್ನು ನಂಬದವರು ಇಂದು ಆಕೆಗೆ ಹೇಳುವುದು. "ಹೆಣ್ಣು ಮೋಸ ಮಾಡುವುದಿಲ್ಲ ಎಂಬುದು ಖಾತ್ರಿ. ನಾವು ನಿಮ್ಮನ್ನು ನಂಬುತ್ತೇವೆ. ನಿಮ್ಮ ಸರ್ವಿಸ್ ನಿಂದ ನೀವು ಅದನ್ನು ನಿರೂಪಿಸಿದ್ದೀರಿ" ಎಂದು. ಬ್ಯುಸಿನೆಸ್ ಮೀಟಿಂಗ್ ಗಳಿಗೆ, ಎಲೆಕ್ಷನ್ ಓಡಾಟಗಳಿಗೆ, ವೈಯಕ್ತಿಕ ಬಳಕೆಗೆ ಎನ್ನುತ್ತಾ ಇಂದು ಭಾರತದ ಪ್ರಭಾವಿ ಹಾಗೂ ಶ್ರೀಮಂತರು ಬಳಸುವುದು ಜೆಟ್ ಸೆಟ್ ಗೋ ಅನ್ನೇ. 


ಬಳಕೆದಾರರು ಹೆಚ್ಚಾದಾಗ ಇರುವ ಪ್ರೈವೇಟ್ ಜೆಟ್ ಗಳು ಸಾಲುವುದಿಲ್ಲ ಎಂದಾದಾಗ 450 ರಿಂದ 500 ಮಿಲಿಯನ್ ಬೆಲೆ ಬಾಳುವ 10 ಪ್ರೈವೇಟ್ ಜೆಟ್ ಗಳನ್ನು ಕೊಂಡಿದ್ದಾಳೆ. ಈಗ ಈ ಕಂಪೆನಿಯ ಟರ್ನ್ ಓವರ್ 150 ಕೋಟಿಗಿಂತಲೂ ಅಧಿಕ. ಕೇವಲ 70 ಜನ ಸಿಬ್ಬಂದಿಯೊಂದಿಗೆ ಚಿಕ್ಕದಾಗಿ ಶುರುವಾದ ಕಛೇರಿ ಇಂದು ಭಾರತದಲ್ಲಿ ನಾಲ್ಕು ಸ್ಥಳದಲ್ಲಿದೆ. ದೆಹಲಿ, ಮುಂಬಯಿ, ಚೆನ್ನೈ, ಹೈದರಾಬಾದ್ ನಲ್ಲಿ ಕಾರ್ಯ ನಿರ್ವಹಿಸಿಟ್ಟಿದೆ. ಲಕ್ಷಕ್ಕೂ ಅಧಿಕ ಮಂದಿ ಜೆಟ್ ಹಾರಾಟದ ಬಳಕೆದಾರರಾಗಿದ್ದಾರೆ. 7 ರಿಂದ 15 ಸೀಟರ್ ವರೆಗಿನ ಜೆಟ್ ಗಳಿವೆ. 4 ರಿಂದ 20 ಫೀಟ್ ಹಾರಾಟಕ್ಕೆ ಅನುಮತಿ ಇದೆ. 


ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವಾಗ ಕನಿಕಾಗೆ ಪ್ರಶಸ್ತಿಗಳು ಅರಸಿ ಬಂದಿವೆ. 2015 ರಲ್ಲಿ ಬಿ.ಬಿ.ಸಿ ಇಂದ ಬಿಡುಗಡೆಯಾದ ಟಾಪ್ 100 ಮಹಿಳೆಯರ ಪಟ್ಟಿಯಲ್ಲಿ ಕನಿಕಾ ಹೆಸರಿದೆ. 2016 ರಲ್ಲಿ ಫೋರ್ಬ್ಸ್ ನಿಂದ  ಏಷ್ಯಾದ ಟಾಪ್ 30 ಎಂಟರ್ಪ್ರಿನರ್ ( 30 ರ ವಯಸ್ಸಿನ ಒಳಗಿನ ವಿಭಾಗ ) ಎಂದು ಗುರುತಿಸಲಾಗಿದೆ. 2021 ರ ಕೋಟಕ್ ಪ್ರೈವೇಟ್ ಬ್ಯಾಂಕಿಂಗ್ ಹರುನ್ ನ ಪ್ರಮುಖ ಶ್ರೀಮಂತ ಮಹಿಳೆಯರ (ಕಿರಿಯರ) ವಿಭಾಗದಲ್ಲಿದ್ದಾರೆ. ನೀತಿ ಆಯೋಗದಿಂದ ರಾಷ್ಟ್ರೀಯ ಉದ್ಯಮಿ ಪ್ರಶಸ್ತಿ ಸಹಾ ದೊರೆತಿದೆ. ಈಗಿನ್ನೂ ಕನಿಕಾ ವಯಸ್ಸು ಕೇವಲ 32. 


ಪುರುಷ ಪ್ರಾಬಲ್ಯದ ಉದ್ದಿಮೆಯಲ್ಲಿ ತೊಡಗಿ ಯಶಸ್ವಿಯಾದ ಯಾನದ ಹಾದಿ ಸ್ಫೂರ್ತಿಯಾಗಲೆಂದು ಮಹಿಳೆಯರಿಗಾಗಿ ಜೆಟ್ ಸೆಟ್ ಗೋ ನಲ್ಲಿ ಹೆಚ್ಚಿನ ಮಾನ್ಯತೆ ನೀಡಲಾಗಿದೆ. ಪ್ರತಿಯೊಂದು ಜೆಟ್ ನ ಕಾಕ್ ಪಿಟ್ (ವಿಮಾನದಲ್ಲಿ ಪೈಲೆಟ್ ಗಳ ಸ್ಥಳ) ಕೂಡಾ ಒಬ್ಬ ಮಹಿಳಾ ಪೈಲೆಟ್ ಅನ್ನು ಹೊಂದಿರಬೇಕು ಎಂದಿದ್ದಾರೆ.. ಇಂದು ಜೆಟ್ ಸೆಟ್ ಗೋನಲ್ಲಿ ಹೆಚ್ಚಿನ ಪೈಲಟ್ ಗಳು ಮಹಿಳೆಯರೇ.. 2024 ರ ಹೊತ್ತಿಗೆ ಅಲ್ಲಿನ ಉದ್ಯೋಗಿಗಳಲ್ಲಿ 50% ಪುರುಷರಿದ್ದರೆ.. ಇನ್ನುಳಿದ 50% ಮಹಿಳೆಯರು ಇರಲಿದ್ದಾರೆ. ಈಗಾಗಲೇ ಕ್ಲಿಷ್ಟಕರ ರೋಲ್ ಗಳನ್ನು ನಿಭಾಯಿಸುವವರಲ್ಲಿ 30% ಮಹಿಳೆಯರಿದ್ದಾರೆ. ತನ್ನ ಸಂಸ್ಥೆಯ ಪ್ಲೈಟ್ ಹಾರಾಟಗಳು 2024 ರ ಹೊತ್ತಿಗೆ ಕಾರ್ಬನ್ ನ್ಯೂಟ್ರಲ್ ಆಗಲಿದೆ ಎಂಬ ಭರವಸೆಯನ್ನು ಸಹಾ ನೀಡಿದ್ದಾರೆ.


ಸಿರಿವಂತರಿಗೆಂದೇ ಶುರುವಾಗಿ ಜನ ಸಾಮಾನ್ಯರಿಗೂ ತಲುಪುವ ಆಶಯ ಹೊಂದಿರುವ, ಪರಿಸರ ಸ್ನೇಹಿ ಧ್ಯೇಯ, ಮಹಿಳಾ ಸಮಾನತೆ ನೀಡುವ, ನಂಬುಗೆಯ ಈ ಬ್ಯುಸಿನೆಸ್ ನ ಹಾದಿ ಸುಲಭವಾದುದಲ್ಲ. ಓದಿಗಿಂತ ಅನುಭವದಿಂದಲೇ ಸ್ವಂತ ಶಕ್ತಿಯಿಂದ ದುಡಿಮೆಯನ್ನು ರೂಪಿಸಿಕೊಂಡು ಏವಿಯೇಷನ್ ಉದ್ಯಮಕ್ಕೆ ಹೊಸ ಹೊಳಪು ನೀಡಿದ.. ವೈಯಕ್ತಿಕ, ಸಾಂಸಾರಿಕ, ಆರೋಗ್ಯದ ಸಮಸ್ಯೆಯೆಲ್ಲವನ್ನೂ ಮೆಟ್ಟಿ ನಿಂತ ಕನಿಕಾಳಂತೆ ಬ್ಯುಸಿನೆಸ್ ಕನಸು ಆಕಾಶದೆತ್ತರಕ್ಕೇರಿದರೂ, ಅಷ್ಟೇ ಧೃಢವಾಗಿ ಹೆಜ್ಜೆಯನ್ನು ಆಳಕ್ಕೂ ಇಳಿಸಬೇಕು. ಹಣಕ್ಕಿಂತ ಸಾಮರ್ಥ್ಯ ಮುಖ್ಯ ಎಂದು ನಂಬಿ ಹೆಜ್ಜೆಯೂರಿದ ಕನಿಕಾ ಹೇಳುವುದು ಗೆಟ್ ಸೆಟ್ ಗೋ.. ಅಲ್ಲಲ್ಲ "ಜೆಟ್ ಸೆಟ್ ಗೋ"


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ