ಟೀ - ಟೈಮ್ ಸ್ನಾಕ್ಸ್ ಗೆ, ಬೆಳಿಗ್ಗೆ ಕಾಫಿ ಜೊತೆಗೆ, ಸಡನ್ನಾಗಿ ಹಸಿವಾದಾಗ, ಅನಿರೀಕ್ಷಿತವಾಗಿ ಅತಿಥಿಗಳು ಬಂದಾಗ ಎಲ್ಲದಕ್ಕೂ ವಯಸ್ಸಿನ ಭೇಧವಿಲ್ಲದೇ ಒದಗಿ ಬರುವುದು ಎಂದರೆ ಬಿಸ್ಕೆಟ್ ಗಳು. ಭಾರತದ ಒಂದು ಬಿಸ್ಕೆಟ್ ಬ್ರ್ಯಾಂಡ್ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಹೆಗ್ಗಳಿಕೆ ಹೊಂದಿದೆ. ಅಷ್ಟೇ ಅಲ್ಲ.. ಈ ಕಂಪೆನಿ ಕಳೆದ 25 ವರ್ಷದಿಂದ ಬಿಸ್ಕೆಟ್ ದರ ಹೆಚ್ಚಿಸಿಲ್ಲ. ಆ ಕಂಪೆನಿಗೆ ಬೆಲೆ ಹೆಚ್ಚು ಮಾಡುವ ಯೋಚನೆ ಇಲ್ಲವೆಂದಲ್ಲ.. ಆದರೆ, ಒಮ್ಮೆ ಆ ಬಿಸ್ಕೆಟ್ ಪ್ಯಾಕೆಟ್ ಬೆಲೆಯನ್ನು 50 ಪೈಸೆ ಹೆಚ್ಚಿಸಿದಾಗ ಗ್ರಾಹಕರು ಪ್ರತಿಭಟನೆ ಮಾಡಿದ್ದರು. ಇಂದಿಗೂ ಅದೇ ಬೆಲೆ ಉಳಿಸಿಕೊಂಡರೂ ಈ ಕಂಪೆನಿಯ ಮೌಲ್ಯ 13000 ಕೋಟಿಯಷ್ಟಿದೆ. ಲಾಭದಲ್ಲಿಯೇ ನಡೆಯುತ್ತಿರುವ ಈ ಕಂಪೆನಿ ಮತ್ತ್ಯಾವುದೂ ಅಲ್ಲ ಪಾರ್ಲೆ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್. ಹೌಸ್ ಆಫ್ ಪಾರ್ಲೆ ಎಂಬ ಹೆಸರಿನಲ್ಲಿ ಶುರುವಾದ ಈ ಕಂಪೆನಿ ಇಂದಿಗೂ ತನ್ನ ಹೆಮ್ಮೆಯ ಪ್ರಾಡಕ್ಟ್, ಮೊದಲ ಬಿಸ್ಕೆಟ್ ಪಾರ್ಲೆ- ಜಿ ಯ ಬೆಲೆ ಹೆಚ್ಚಳ ಮಾಡಿಲ್ಲ. ಆದರೂ.. ಈ ಕಂಪೆನಿ ಟಾಪ್ ನಲ್ಲಿರುವುದಕ್ಕೆ ವಿವಿಧ ಕಾರಣಗಳಿವೆ. ಒಂದೊಂದಾಗಿ ಗಮನಿಸೋಣ. ಅದಕ್ಕೆ ಪಾರ್ಲೆ ನಡೆದು ಬಂದ ಹಾದಿಯಲ್ಲಿ ಹೆಜ್ಜೆ ಹಾಕೋಣ.
ಮುಂಬಯಿಯ ರೇಷ್ಮೆ ಮಾರಾಟದ ಕುಟುಂಬದಲ್ಲಿ ಹುಟ್ಟಿದ ಮೋಹನ್ ಲಾಲ್ ದಯಾಳ್ ಚೌಹಾಣ್ ಗೆ ಬೇರೆ ಏನನ್ನಾದರೂ ವಿಭಿನ್ನವಾಗಿ ಮಾಡುವ ಆಸೆ. ಅದಕ್ಕಾಗಿ ತಮ್ಮ 18 ನೇ ವಯಸ್ಸಿನಲ್ಲಿ ಮುಂಬಯಿಯಲ್ಲಿ ಟೈಲರಿಂಗ್ ಅಂಗಡಿಯನ್ನು ಇಟ್ಟರು. ಅದರಿಂದಲೂ ಅವರಿಗೆ ಅಷ್ಟು ತೃಪ್ತಿ ಸಿಗದಾಗ ಬೇರೆ ಏನನ್ನಾದರೂ ಮಾಡೋಣವೆಂದು ಆಲೋಚಿಸಿದರು. 1905 ರಲ್ಲಿ ಕೋಲ್ಕತ್ತಾದಲ್ಲಿ ಪ್ರಾರಂಭವಾಗಿದ್ದ ಸ್ವದೇಶೀ ಚಳುವಳಿ ಅವರ ಮನಸ್ಸಲ್ಲಿ ಒಂದು ಯೋಜನೆಗೆ ಅಡಿಪಾಯ ಹಾಕಿತ್ತು. ಸ್ವದೇಶಿ ಚಳುವಳಿ ಮುಖ್ಯ ಉದ್ದೇಶ ನಮ್ಮ ದೇಶೀಯ ವಸ್ತುಗಳನ್ನು ಬಳಸುವುದು. ಈಗ ಇದೇ ಕಾನ್ಸೆಪ್ಟ್ ಆತ್ಮನಿರ್ಭರ ಭಾರತ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ಆ ಸಂಧರ್ಭದಲ್ಲಿ ದೇಶೀಯ ಚಾಕೊಲೇಟ್ ಅಥವಾ ಬಿಸ್ಕೆಟ್ ಗಳ ಯಾವ ಮಾರಾಟವೂ ಇನ್ನೂ ಶುರುವಾಗಿರಲಿಲ್ಲ. ಬ್ರಿಟೀಷರು ಬಳಸುತ್ತಿದ್ದ ಯುನೈಟೆಡ್ ಬಿಸ್ಕೆಟ್ಸ್, ಹಂಟ್ಲಿ & ಪಾಮರ್ಸ್, ಬ್ರಿಟಾನಿಯಾ, ಗ್ಲಾಕ್ಸೋ ಎಂಬ ಬಿಸ್ಕೆಟ್ ಗಳು ಮಾತ್ರವೇ ಇದ್ದವು. ಇವುಗಳು ಕೇವಲ ಶ್ರೀಮಂತ ವರ್ಗದವರು ಮಾತ್ರ ಬಳಸುವಂತಿದ್ದವು.
ಯಾವುದೇ ಬ್ಯುಸಿನೆಸ್ ಶುರು ಮಾಡಬೇಕಿದ್ದರೂ ಅದಕ್ಕೆ ತರಬೇತಿ ಬಹಳ ಮುಖ್ಯ. ಮೊದಲಿಗೆ ಮೋಹನ್ ಲಾಲ್ ಇದಕ್ಕಾಗಿ ಜರ್ಮನಿಗೆ ಹೋಗಿ ತರಬೇತಿ ಪಡೆದು ಬಂದರು. ಅಲ್ಲಿಂದ ಬರಿಗೈಯಲ್ಲಿ ವಾಪಾಸ್ ಬರಲಿಲ್ಲ. ತಮಗೆ ಬೇಕಾದ ಸ್ನ್ಯಾಕ್ಸ್ ತಯಾರಿಸಲು 60,000 ರೂಪಾಯಿಯ ಮೆಷಿನ್ ಗಳನ್ನೂ ತಂದರು. ಮುಂಬಯಿಯ ಪಶ್ಚಿಮ ಭಾಗದಲ್ಲಿದ್ದ ಇರ್ಲಾ ಮತ್ತು ಪಾರ್ಲಾ ಎನ್ನುವ ಎರಡು ಹಳ್ಳಿಗಳ ನಡುವಿನ ಜಾಗದಲ್ಲಿದ್ದ ಹಳೆಯದಾಗಿದ್ದ, ಮಾರಾಟದ ಹಂತದಲ್ಲಿದ್ದ ಫ್ಯಾಕ್ಟರಿಯನ್ನು ಕೊಂಡು ಅದನ್ನೇ ತಮ್ಮ ಕೇಂದ್ರ ಕಛೇರಿಯನ್ನಾಗಿಸಿಕೊಂಡರು. ಆಗ ತಮ್ಮ ಕುಟುಂಬ ಸದಸ್ಯರನ್ನೂ ಸೇರಿದಂತೆ ಅಲ್ಲಿ ಕೆಲಸ ಮಾಡುತ್ತಿದ್ದದ್ದು ಕೇವಲ 12 ಮಂದಿ. ಎಲ್ಲರೂ ಮಲ್ಟಿ ಟಾಸ್ಕಿಂಗ್ ಮಾಡುತ್ತಾ ಕಾರ್ಯ ನಿರ್ವಹಿಸುತ್ತಿದ್ದವರು. ಅವರೇ ಸ್ನ್ಯಾಕ್ಸ್ ತಯಾರಕರು, ಅವರೇ ಇಂಜಿನಿಯರ್ ಗಳು, ಅವರೇ ಮ್ಯಾನೇಜರ್ ಗಳು. ಈ ಹನ್ನೆರಡು ಜನರ ತಂಡ ಬೆಳೆದು ದೊಡ್ಡದಾಗಿದೆ. ಈಗ ಭಾರತದಲ್ಲಿಯೇ 130 ಕ್ಕೂ ಹೆಚ್ಚು ಪಾರ್ಲೆ ಫ್ಯಾಕ್ಟರಿಗಳಿದ್ದು.. ಭಾರತದ ಹೊರಗೆ ಅಮೆರಿಕಾ, ನೇಪಾಳ, ನೈಜೀರಿಯಾ, ಮೆಕ್ಸಿಕೋ, ಚೀನಾ, ಇಟಲಿ, ಸ್ಪೇನ್ ,ಯುರೋಪ್, ಅಫ್ರಿಕಾಗಳನ್ನು 120 ಕ್ಕೂ ಹೆಚ್ಚು ಫ್ಯಾಕ್ಟರಿಗಳಿವೆ.
ಪಾರ್ಲೆ ಮಾರಾಟ ಶುರು ಮಾಡಿದ ಮೊದಲ ಪ್ರಾಡಕ್ಟ್ ಆರೆಂಜ್ ಕ್ಯಾಂಡಿ ಎನ್ನುವ ಚಿಕ್ಕ ಚಾಕೊಲೇಟ್ ಅನ್ನು. ಇಂದಿಗೂ ಈ ಚಾಕೊಲೇಟ್ ಒಂದು ರೂಪಾಯಿಗೆ ಲಭ್ಯವಿದೆ. 1929ರಲ್ಲಿ ಚಾಕೋಲೇಟ್ ಮಾರಾಟದೊಂದಿಗೆ ಶುರುವಾದ ಕಂಪೆನಿಗೆ ಹೆಸರಿಡಲು ಆಲೋಚಿಸುವಷ್ಟೂ ಪುರುಸೊತ್ತಿಲ್ಲದ ಸಮಯ. ಹಾಗಾಗಿ, ಕಂಪೆನಿ ಇದ್ದ ಜಾಗದ ಹೆಸರನ್ನು ಸ್ವಲ್ಪ ಬದಲಾಯಿಸಿ 'ಪಾರ್ಲೆ' ಎಂದು ಕರೆದರು. ಇದಾದ 10 ವರ್ಷಗಳ ಬಳಿಕ ಅಂದರೆ 1939ರಲ್ಲಿ ಭಾರತದ ಮೊದಲ ಬಿಸ್ಕೆಟ್ ತಯಾರಿಕಾ ಘಟಕ ಶುರುವಾಯಿತು. ಆ ಬಿಸ್ಕೆಟ್ ಹೆಸರೇ 'ಪಾರ್ಲೆ - ಜಿ'. ಆಗ ಇದನ್ನು ಪಾರ್ಲೆ ಗ್ಲೂಕೋ ಬಿಸ್ಕೆಟ್ ಎನ್ನಲಾಗುತ್ತಿತ್ತು. ಗ್ಲುಕೋಸ್ ಎನ್ನುವುದರ ಸಂಕ್ಷಿಪ್ತ ರೂಪ ಇದು. ಕಡಿಮೆ ದರದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ, ರುಚಿಯಾಗಿಯೂ ಇದ್ದ ಈ ಬಿಸ್ಕೆಟ್ ಗಳು ಎಲ್ಲರ ಮನಸೆಳೆದವು. 1940 ರಲ್ಲಿ 250 ಅಡಿ ಉದ್ದದ ಓವೆನ್ ಅನ್ನೂ ಪಾರ್ಲೆ ಬಳಸಿತು. ಇದು ಆ ಕಾಲದಲ್ಲಿ ಅತಿ ಉದ್ದದ ಒವೆನ್ ಅನ್ನು ಬಳಸಿದ ಕಂಪೆನಿ ಎನ್ನುವ ಕೀರ್ತಿಗೆ ಒಳಗಾಯಿತು. ಭಾರತೀಯರಷ್ಟೇ ಅಲ್ಲದೆ ಬ್ರಿಟೀಷರು ಸಹಾ ಈ ಬಿಸ್ಕೆಟ್ ಅನ್ನು ಬಳಸಲು ಶುರು ಮಾಡಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತೀಯ ಹಾಗೂ ಬ್ರಿಟೀಷ್ ಸೇನೆಗೂ ಇದೇ ಬಿಸ್ಕೆಟ್ ಅನ್ನು ಹಂಚಲಾಯಿತು.
ಆದರೆ, 1947 ರ ಸಂಧರ್ಭದಲ್ಲಿ ಪಾರ್ಲೆಗೆ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಅದೇ.. ಬಿಸ್ಕೆಟ್ ತಯಾರಿಕೆಗೆಗೆ ಹೆಚ್ಚು ಅವಶ್ಯಕವಾಗಿದ್ದ ಗೋಧಿ. ಭಾರತ ಸ್ವಾತಂತ್ರ್ಯಗೊಂಡು ವಿಭಜಿತವಾದ ಸಂಧರ್ಭದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುತ್ತಿದ್ದ ಪ್ರದೇಶಗಳು ಭಾರತದಿಂದ ಬೇರ್ಪಟ್ಟವು. ಇದರಿಂದಾಗಿ ಪಾರ್ಲೆ ಕೊಂಚ ಕಾಲ ತನ್ನ ಬಿಸ್ಕೆಟ್ ತಯಾರಿಕೆಯನ್ನು ನಿಲ್ಲಿಸಿತ್ತು. ಇದು ಸ್ಪಲ್ಪ ಕಾಲವಷ್ಟೇ.. ಎಲ್ಲದಕ್ಕೂ ಪರ್ಯಾಯ ಇದ್ದೇ ಇರುತ್ತದಲ್ಲವಾ..?? ಪಾರ್ಲೆ ಗೋಧಿಯ ಬದಲಾಗಿ ಬಾರ್ಲಿಯನ್ನು ಬಳಸಿ ಬಿಸ್ಕೆಟ್ ಅನ್ನು ತಯಾರಿಸಿತು. ಗೋಧಿ ಸರಾಗವಾಗಿ ಸಿಗುವಂತಾದ ಬಳಿಕ ಮಾಮೂಲು ಬಿಸ್ಕೆಟ್ ಗಳನ್ನು ತಯಾರಿಸಿತು.
1960 ರ ವರೆಗೂ ಮತ್ತಾವ ಸಮಸ್ಯೆಗಳೂ ಇರಲಿಲ್ಲ. ಬ್ರಿಟಾನಿಯಾ ಕೂಡಾ ಕೈಗೆಟುಕುವ ದರದಲ್ಲಿ ತನ್ನ ಬಿಸ್ಕೆಟ್ ಗಳನ್ನು ಮಾರಾಟ ಮಾಡಲು ಶುರು ಮಾಡಿತು. ಆಗ, ಹೆಚ್ಚಿನ ಬಿಸ್ಕೆಟ್ ಗಳನ್ನು ಗ್ಲೂಕೋ ಬಿಸ್ಕೆಟ್ ಕೊಡಿ ಎಂದೇ ಕೇಳಿ ಪಡೆಯುತ್ತಿದ್ದರು. ಗ್ಲೂಕೋ ಎಂಬ ಹೆಸರನ್ನು ತಮ್ಮ ಕಂಪೆನಿಗೆ ಮಾತ್ರ ಬಳಸಲು ಪಾರ್ಲೆ ಬಳಿ ಕಾಪಿರೈಟ್ ಇರಲಿಲ್ಲ. ಜೊತೆಗೆ, ಆ ಕಂಪೆನಿಯ ಕವರ್ ಕೂಡಾ ಒಂದೇ ರೀತಿ ಇತ್ತು. ಅದಕ್ಕಾಗಿ, ಈ ಗೊಂದಲವನ್ನು ತಪ್ಪಿಸಲು ಪಾರ್ಲೆ ಹಳದಿ ಬಣ್ಣದ ವ್ಯಾಕ್ಸ್ ಪೇಪರ್ ಅನ್ನೂ ಬಳಸಲು ಶುರು ಮಾಡಿತು. ಜೊತೆಗೆ 4-5 ವರ್ಷದ ಹುಡುಗಿಯ ಚಿತ್ರದ ಜೊತೆಗೆ ತನ್ನ ಲೋಗೋವನ್ನು ಮುದ್ರಿಸಿತು.
ಪಾರ್ಲೆ-ಜಿ ಮೇಲಿನ ಆ ಹುಡುಗಿ ಯಾರು ? ಈಗ ಹೇಗಿದ್ದಾರೆ ಗೊತ್ತಾ..?? ಎನ್ನುವ ಕೆಲವು ದಾರಿ ತಪ್ಪಿಸುವಂತಹಾ ವಿಡಿಯೋಗಳನ್ನೂ ನೀವು ಗಮನಿಸಿರಬಹುದು. ಆದರೆ, ನೈಜತೆ ಏನಿದೆ ಗೊತ್ತಾ..?? ಇದೊಂದು ಕಾಲ್ಪನಿಕ ಚಿತ್ರ. ಇದನ್ನು ಬಿಡಿಸಿದ ಎವರೆಸ್ಟ್ ನ ಕ್ರಿಯೆಟೀವ್ ಆರ್ಟಿಸ್ಟ್ ಮಂಗನ್ಲಾಲ್ ದೈಯ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ 4-5 ವರ್ಷದ ಮಗುವಿನ ಚಿತ್ರವೇ ಏಕೆ ಗೊತ್ತೇ..?? ಈ ಬಿಸ್ಕೆಟ್ ಅನ್ನು ದೊಡ್ಡವರಷ್ಟೇ ಅಲ್ಲ ಚಿಕ್ಕ ಮಕ್ಕಳಿಗೂ ತಿನ್ನಲು ಸೂಕ್ತ ಎಂಬುದನ್ನು ಹೇಳಲು. ಜೊತೆಗೆ, ಮಕ್ಕಳನ್ನು ಆಕರ್ಷಿಸುವ ಸಲುವಾಗಿ.
ಆದರೆ, 1982 ರಲ್ಲಿ ಮತ್ತೊಮ್ಮೆ ಬೇರೆಯ ರೀತಿಯ ರೀ-ಪ್ಯಾಕಿಂಗ್ ಮಾಡಿತು ಪಾರ್ಲೆ. 'ಮೀ-ಟೂ ಗ್ಲೂಕೋ ಬಿಸ್ಕೆಟ್' ಎನ್ನುವ ಹೆಸರಿನಲ್ಲಿ ಬಂದಿದ್ದ ಅಗ್ಗದ, ಗುಣಮಟ್ಟವಿಲ್ಲದ ಲೋಕಲ್ ಕಂಪನಿ ಪಾರ್ಲೆಯನ್ನೇ ಕಾಪಿ ಮಾಡಿದಂತಿತ್ತು. ಅದಕ್ಕಾಗಿ ಪಾರ್ಲೆ ಕಡಿಮೆ ದರದ ಪ್ರಿಂಟೆಡ್ ಪ್ಲಾಸ್ಟಿಕ್ ಅನ್ನು ಮೇಲುಹೊದಿಕೆಯಾಗಿಸಿತು. ಜೊತೆಗೆ 'ನೀವು ನಮ್ಮನ್ನು ಅನುಕರಿಸಬಹುದಷ್ಟೇ.. ನಮ್ಮ ಸಮನಾಗಿ ನಿಲ್ಲಲಾರಿರಿ' ಎನ್ನುವ ಟ್ಯಾಗ್ ಲೈನ್ ಅನ್ನೂ ಸೇರಿಸಿತು. ಜೊತೆಗೆ ಜಿ ಎಂದರೆ ಗ್ಲೂಕೋ ಎಂಬ ಪದದ ಬದಲಾಗಿ ಜೀನಿಯಸ್ (ಬುದ್ಧಿವಂತರು) ಎನ್ನುವ ಅರ್ಥ ನೀಡಿತು.
ಈ ಪಾರ್ಲೆ - ಜಿ ಬಿಸ್ಕೆಟ್ ಮುಂಬಯಿಯ ಹೆಸರಾಂತ ಅಂಗಡಿ ಬಾಂಬೆಯ ಸ್ವೀಟ್ ಶಾಪ್ ಜೊತೆಗೆ ಪಾರ್ಟ್ನರ್ ಶಿಪ್ ಮಾಡಿಕೊಂಡು ತನ್ನ ಹೆಸರಾಂತ ಸ್ವೀಟ್ ಶಾಪ್ ನಲ್ಲಿಯೂ ಇದನ್ನು ವಿವಿಧ ರಾಯಲ್ ಸ್ವೀಟ್ ರೂಪದಲ್ಲಿ ಬಳಸಿತು. ಕೋ-ಕೋ ಬಟರ್ ಸ್ಕಾಚ್ ಜೊತೆಗೆ, ಡಾರ್ಕ್ ಚಾಕೊಲೇಟ್ ಲೇಯರ್ ಜೊತೆಗೆ ಕ್ಯಾರಮೆಲ್ ಹಾಗೂ ಸಿಲ್ಕಿ ಬಟರ್ ಸ್ಕಾಚ್ ಅನ್ನು ಬಳಸಿ, ಹುರಿದ ಬಾದಾಮಿ ಮಿಶ್ರಣ ಮಾಡಿ, ಸೀ-ಸಾಲ್ಟ್ ಮಿಶ್ರಣದೊಂದಿಗೆ, ವಿವಿಧ ರೀತಿಯ ಚಾಕೊಲೇಟ್ ಮಿಶ್ರಣಗಳೊಂದಿಗೆ ಹೀಗೆ ರಾಯಲ್ ಸ್ವೀಟ್ ಆಗಿಯೂ ಪಾರ್ಲೆ-ಜಿ ಲಭ್ಯವಾಯಿತು. ಫಾರ್ಜಿ ಕೆಫೆ ಪಾರ್ಲೆ-ಜಿ ಚೀಸ್ ಕೇಕ್ ಅನ್ನು ತಯಾರಿಸಿತು. ಮುಂಬಯಿ 145 ಪಾರ್ಲೆ-ಜಿ ಈಟ್-ಶೇಕ್ ಎನ್ನುವ ರಾಯಲ್ ಡೆಸರ್ಟ್ ಮಾಡಿತು.
ವಿವಿಧ ರೂಪದ ಪಾರ್ಲೆ-ಜಿ ಬಿಸ್ಕೆಟ್ ಜನರ ಮನಸ್ಸಿನಲ್ಲಿ ನಿರಂತರವಾಗಿ ನೆಲೆಯೂರಿದ್ದಷ್ಟೇ ಅಲ್ಲದೇ ಕಂಪೆನಿಯ ಮೂರನೇ ಒಂದು ಭಾಗದಷ್ಟು ಲಾಭ ತಂದುಕೊಟ್ಟಿತು. ಇವತ್ತು ವರ್ಷವೊಂದಕ್ಕೆ 14,600 ಕೋಟಿಗೂ ಹೆಚ್ಚು ಬಿಸ್ಕೆಟ್ ತಯಾರಿಸುತ್ತಿದೆ. 2013 ರಲ್ಲಿ 5000 ಕೋಟಿಯಷ್ಟಿದ್ದ ಆದಾಯ, 2018-20 ರಲ್ಲಿ 8000 ಕೋಟಿಯಾಗಿ ಈಗ 13,000 ಕೋಟಿಗಿಂತಲೂ ಹೆಚ್ಚಿದೆ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ಹೆಚ್ಚಿನ ಬ್ಯುಸಿನೆಸ್ ನಷ್ಟ ಹೊಂದಿದರೆ ಪಾರ್ಲೆ ಆದಾಯದ ಅತಿ ಹೆಚ್ಚು ಲಾಭ ಪಡೆಯಿತು. 2020 ರ ಮಾರ್ಚ್ ನಿಂದ ಮೇ ವರೆಗೂ ಎನ್.ಜಿ.ಓ ಗಳು , ಗೌರ್ಮೆಂಟ್ ಏಜೆನ್ಸಿ ಗಳು ಕೋವಿಡ್ ಪರಿಹಾರದ ಪ್ಯಾಕೇಜ್ ಗಾಗಿ ಹೆಚ್ಚು ಕೊಂಡದ್ದು ಪಾರ್ಲೆ-ಜಿಯನ್ನೇ.. ಸ್ವತಃ ಕಂಪೆನಿಯೇ ಅವಶ್ಯಕತೆ ಇದ್ದವರಿಗೆ 3 ಕೋಟಿ ಬಿಸ್ಕೆಟ್ ಪ್ಯಾಕ್ ಗಳನ್ನು ನೀಡಿದೆ.
ಇಷ್ಟೆಲ್ಲಾ ಆದರೂ, ಪಾರ್ಲೆ-ಜಿ ದರ ಹೆಚ್ಚು ಮಾಡದಿರಲು ಹಾಗೂ ಲಾಭದಲ್ಲಿರಲು ಕಾರಣವಿದೆ. ಪಾರ್ಲೆ-ಜಿ ಮಾತ್ರ ಪಾರ್ಲೆ ಕಂಪೆನಿಯ ಪ್ರಾಡಕ್ಟ್ ಅಲ್ಲ.. ಕೇವಲ ಬಿಸ್ಕೆಟ್, ಚಾಕೊಲೇಟ್ ಗಳನ್ನೇ ತೆಗೆದುಕೊಂಡರೂ ಹೆಸರಾಂತ ಪಾರ್ಲೆ ಪ್ರಾಡಕ್ಟ್ ಗಳಿವೆ. ಭಾರತದ ಮೊದಲ ಸ್ವೀಟ್ ಮತ್ತು ಸಾಲ್ಟ್ ಬಿಸ್ಕೆಟ್ ಕ್ರ್ಯಾಕ್-ಜಾಕ್, 20-20, ಮೊನ್ಯಾಕೋ, ಹೈಡ್ ಅಂಡ್ ಸೀಕ್, ಪಾರ್ಲೆ ಪ್ಲ್ಯಾಟಿನಾ, ಮಿಲ್ಯಾನೋ, ಓರಿಯೋ, ಮಾರೀ.. ಮುಂತಾದ ಬಿಸ್ಕೆಟ್ ಗಳು. ಮ್ಯಾಂಗೋ ಬೈಟ್, ಮೆಲೋಡಿ, ಕಿಸ್ಮಿ, ಪಾಪಿನ್ಸ್ ಮುಂತಾದ ಚಾಕೊಲೇಟ್ ಗಳೂ ಕಂಪೆನಿಗೆ ಹೆಚ್ಚಿನ ಲಾಭ ತಂದುಕೊಡುತ್ತಿವೆ. ಆದರೂ, ಪಾರ್ಲೆ - ಜಿ ಇಂದಿಗೂ ಅದರ ಮುಖ್ಯ ಪ್ರಾಡಕ್ಟ್, ಭಾರತದ 70% ಗ್ಲೂಕೋಸ್ ಬಿಸ್ಕೆಟ್ ಲಾಭದ ಪಾಲು ಪಾರ್ಲೆ-ಜಿ ಯದ್ದು.
ಪಾರ್ಲೆ- ಜಿ ತನ್ನ ಪ್ಯಾಕೆಟ್ ನ ದರ ಹೆಚ್ಚಿಸಿಲ್ಲ ಎಂಬುದು ಎಷ್ಟು ಸತ್ಯವೋ ತನ್ನ ಗುಣಮಟ್ಟವನ್ನು ಕಡಿಮೆ ಮಾಡಿಲ್ಲ ಎಂಬುದೂ ಅಷ್ಟೇ ಸತ್ಯ. ಆದರೆ, ತೂಕ..?? ಹೌದು, ಪಾರ್ಲೆ ತನ್ನ ಬುದ್ಧಿವಂತಿಕೆ ತೋರಿರುವುದು ಇಲ್ಲೇ.. ಮೊದಲು 5 ರೂಪಾಯಿಗೆ 100 ಗ್ರಾಮ್ ದೊರೆಯುತ್ತಿದ್ದ ಬಿಸ್ಕೆಟ್ ಕ್ರಮೇಣ 95 ಗ್ರಾಂ, 90, 85 ಹೀಗೆ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಸದ್ಯಕ್ಕೆ 5 ರೂಪಾಯಿಗೆ 55 ಗ್ರಾಮ್ ಬಿಸ್ಕೆಟ್ ನೀಡುತ್ತಿದೆ.
ಎರಡನೇ ಕಾರಣ, ಬುದ್ಧಿವಂತಿಕೆಯ ಪ್ಯಾಕೇಜಿಂಗ್. ನಾವು ಬಿಸ್ಕೆಟ್ ಕಡೆಗಷ್ಟೇ ಗಮನ ನೀಡುವಾಗ ಪ್ಯಾಕೇಜಿಂಗ್ ನಮಗೆ ಪ್ರಮುಖ ಎನ್ನಿಸುವುದಿಲ್ಲ. ಕಡಿಮೆ ಗುಣಮಟ್ಟದ ಪ್ಲ್ಯಾಸ್ಟಿಕ್ ಮೇಲು ಹೊದಿಕೆಯನ್ನಷ್ಟೇ ಬಳಸಿದೆ ಪಾರ್ಲೆ. ಪ್ಯಾಕ್ ಹರಿದರೆ ಸೀದಾ ಬಿಸ್ಕೆಟ್ ಸಿಗುತ್ತದೆ. ಫ್ಯಾಮಿಲಿ ಪ್ಯಾಕ್ ನಲ್ಲಿಯೂ ಇದೇ ತಂತ್ರವನ್ನು ಗಮನಿಸಬಹುದು.
ಮೂರನೇ ಕಾರಣ, ಸ್ಕಿಲ್ ಇರುವ ಪ್ರೊಡಕ್ಷನ್ ಟೀಮ್ ಹಾಗೂ ಮಾರ್ಕೆಟಿಂಗ್ ಟೀಮ್. ಇಲ್ಲಿನ ಬಿಸ್ಕೆಟ್ ಪ್ರೊಡಕ್ಷನ್ ನಲ್ಲಿ ವೇಸ್ಟೇಜ್ ಕಡಿಮೆ. 115 ಟನ್ ಬಿಸ್ಕೆಟ್ ಗೆ 1% ವೇಸ್ಟೇಜ್ ಸಿಗುತ್ತದಷ್ಟೇ. 60 ಕಿ.ಮೀ ಒಳಗೆ ಒಂದು ಪಾರ್ಲೆ ಘಟಕವಿದೆ. ಹಾಗಾಗಿ, ಸಾಗಾಣಿಕ ವೆಚ್ಚ ಕಡಿಮೆ. ಪಾರ್ಲೆ-ಜಿ ಬೆಲೆ ಹೆಚ್ಚಾಗಿಲ್ಲ ಸರಿ. ಆದರೆ, ಬೇರೆಯ ಪಾರ್ಲೆ ಪ್ರಾಡಕ್ಟ್ ಗಳ ಬೆಲೆ ಹೆಚ್ಚಾಗಿದೆ. ಒಂದು ಪ್ರಾಡಕ್ಟ್ ಅನ್ನು ಮುಂಚೂಣಿಯಲ್ಲಿಟ್ಟು ಬ್ರ್ಯಾಂಡ್ ನೇಮ್ ನಿರ್ಮಿಸಿ ಬ್ಯುಸಿನೆಸ್ ಅನ್ನು ಈ ಹಂತಕ್ಕೆ ತರುವುದು ಸುಲಭವಲ್ಲ. ಅದರಲ್ಲೂ ಜಾಹೀರಾತು ಬ್ಯುಸಿನೆಸ್ ಪ್ರಾಡಕ್ಟ್ ಗೆ ಬಹು ಮುಖ್ಯ ಎನ್ನುವವರಿಗೆ ಪಾರ್ಲೆಯ ನಡೆ ಅಚ್ಚರಿ ಉಂಟು ಮಾಡುತ್ತದೆ. ಕಾರಣವಿಷ್ಟೇ.. ಪಾರ್ಲೆ ತನ್ನ ಮೊದಲ ಜಾಹೀರಾತು ನೀಡಿದ್ದು ದೂರದರ್ಶನದಲ್ಲಿ 1982 ರಲ್ಲಿ. ಭಾರತದ ಹೀರೋ ಎಂದೇ ಪ್ರಸಿದ್ಧವಾಗಿದ್ದ ಶಕ್ತಿಮಾನ್ ನನ್ನು ಬಳಸಿಕೊಂಡು.
ಆದರೆ, ಪಾರ್ಲೆ ಖ್ಯಾತಿ ಬಾಯಿಂದ ಬಾಯಿಗೆ ಹರಡಿದ್ದೇ ಹೆಚ್ಚು. ನವದೆಹಲಿಯ ಸ್ವಸ್ತಿಕಾ ಜಾಜೂಸ್ ಎನ್ನುವವರ ತಾತನಿಗೆ ಡಿಮೆನ್ಷಿಯಾ ಎನ್ನುವ ಮರೆವಿನ ಖಾಯಿಲೆ ಇತ್ತಾದರೂ, ಸಾವು ಹತ್ತಿರದಲ್ಲಿದ್ದಾಗಲೂ ಆತ ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಟೀ ಹಾಗೂ ಪಾರ್ಲೆ-ಜಿ ಬಿಸ್ಕೆಟ್ ಅನ್ನು ಮರೆತಿರಲಿಲ್ಲ. ಇದಕ್ಕಾಗಿ ಪಾರ್ಲೆ 3 ಕೆ.ಜಿಯ ಬಿಸ್ಕೆಟ್ ಕ್ರೇಟ್ ಅನ್ನೂ ಅವರಿಗೆ ಕಳುಹಿಸಿಕೊಟ್ಟಿತ್ತು. ಹುಡುಕುತ್ತಾ ಹೊರಟರೆ ಇಂತಹಾ ಹಲವು ದಂತಕತೆಗಳು ಸಿಗುತ್ತವೆ.
1976 ರಲ್ಲಿ ಪಾರ್ಲೆ-ಜಿ ಜಿನಿವಾದ ವರ್ಲ್ಡ್ ಸೆಲೆಕ್ಷನ್ ಅವಾರ್ಡ್ ಗೆದ್ದಿದೆ. 2011 ರ ನೈಲ್ಸೆನ್ ಸರ್ವೇ ಪ್ರಕಾರ ಪಾರ್ಲೆ ಜಗತ್ತಿನ ಅತಿ ಹೆಚ್ಚು ಬಿಸ್ಕೆಟ್ ಮಾರಾಟ ಮಾಡುವ ಕಂಪೆನಿ. ಇನ್ನೂ ಹಲವಾರು ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ಯುಸಿನೆಸ್ ನಲ್ಲಿ ಭಾವುಕತೆ ಇರಬಾರದು ಎಂಬ ತತ್ವವನ್ನು ಅಕ್ಷರಶಃ ಪಾಲಿಸಿದಂತಿದೆ ಪಾರ್ಲೆ. 2016 ಜುಲೈನಲ್ಲಿ ಪಾರ್ಲೆಯ ಮೊದಲ ಫ್ಯಾಕ್ಟರಿ.. ಪಾರ್ಲದಲ್ಲಿ ಶುರುವಾಗಿದ್ದ ಘಟಕವನ್ನು ಮುಚ್ಚಲಾಯಿತು. ಕಾರಣವೆಂದರೆ, ಪ್ರೊಡಕ್ಷನ್ ಕೆಪ್ಯಾಸಿಟಿ ಕಡಿಮೆಯಾದದ್ದಕ್ಕೆ. 87 ವರ್ಷದ ಇತಿಹಾಸವುಳ್ಳ ಕಂಪೆನಿ ಮುಚ್ಚುವುದು ಸುಲಭದ ಮಾತಲ್ಲ. ಆದರೆ, ಬ್ಯುಸಿನೆಸ್ ನಲ್ಲಿ ಭಾವುಕತೆಗೆ ಜಾಗ ಕಡಿಮೆ. ಈಗ ಆ ಫ್ಯಾಕ್ಟರಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕತೆಗೆ ಮಾತ್ರ ಲಭ್ಯವಿದೆ. ತಾತ ಮೋಹನ್ ಲಾಲ್ ಶುರು ಮಾಡಿದ ಪಾರ್ಲೆ ಕಂಪೆನಿ ಈಗ ವಿಜಯ್ ಚೌಹಾಣ್, ಶರದ್ ಚೌಹಾಣ್ ಹಾಗೂ ರಾಜ್ ಚೌಹಾಣ್ ಕೈಯ್ಯಲ್ಲಿದೆ. ಪಾರ್ಲೆಯ ಪ್ರಾಡಕ್ಟ್ ಗಳು ಫೇಲ್ ಆಗಿಯೇ ಇಲ್ಲವೆಂದೇನಿಲ್ಲ. ಆದರೆ, ಅವು ಅವುಗಳ ಕಾರಣ ಹುಡುಕಿ ಸರಿಪಡಿಸಿಕೊಂಡು ಮತ್ತೆ ಬೇರೆ ಹೆಸರಿನಿಂದ ವಾಪಾಸ್ ಬಂದಿವೆ.
ಬ್ಯುಸಿನೆಸ್ ನಲ್ಲಿ ಭಾವುಕತೆಗಿಂತ ವಾಸ್ತವತೆಗೆ, ಜಾಹೀರಾತಿಗಿಂತ ಹೆಚ್ಚಾಗಿ ಸ್ಕಿಲ್ ಕಡೆಗೆ, ಗ್ರಾಹಕರಿಗೆ ಬೇಕಾದ್ದನ್ನು ಒದಗಿಸುತ್ತಲೇ ಲಾಭದ ಕಡೆಗೆ ಹೆಜ್ಜೆ ಹಾಕುವ ಕಡೆಗೆ, ನೇರಾ-ನೇರ ಹಣಾಹಣಿ ಮಾಡುವುದಕ್ಕಿಂತ ಬುದ್ಧಿವಂತಿಕೆಯ ತಂತ್ರ ಬಳಸಿ ಬದಲಾಗುವ ಕಡೆಗೆ, ಎಷ್ಟೇ ಪ್ರಾಡಕ್ಟ್ ಇದ್ದರೂ ಒಂದು ಪ್ರಾಡಕ್ಟ್ ಅನ್ನು ಬ್ರ್ಯಾಂಡ್ ನೇಮ್ ಆಗಿ ಪರಿವರ್ತಿಸುವ ಬಗೆ, ಸ್ವದೇಶಿ ಪ್ರಾಡಕ್ಟ್ ನ ಮಹತ್ವವನ್ನು ಗ್ಲೂಕೋಸ್ ನಷ್ಟೇ ಸಿಹಿಯಾಗಿ ಜೀನಿಯಸ್ ನಂತೆ ಹೇಳುತ್ತದೆ ಪಾರ್ಲೆ.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ