ಪುಸ್ತಕದ ಶೀರ್ಷಿಕೆ : ಮಲೆನಾಡಿನ ರೋಚಕ ಕತೆಗಳು
ಲೇಖಕರು : ಗಿರಿಮನೆ ಶ್ಯಾಮರಾವ್
ಪ್ರಕಾಶಕರು : ಗಿರಿಮನೆ ಪ್ರಕಾಶನ
ಪ್ರಥಮ ಮುದ್ರಣ : 2008
ನನ್ನ ಓದಿಗೆ ಸಿಕ್ಕಿದ್ದು : 2021ರ ಪರಿಷ್ಕೃತ ಮುದ್ರಣ
ಪುಟಗಳು : 184
ಬೆಲೆ : 160 ರೂ.
ಮಲೆನಾಡಿನ ರೋಚಕ ಕಥೆಗಳು ಸರಣಿಯ ಮೊದಲ ಪುಸ್ತಕ ಮಲೆನಾಡಿನ ರೋಚಕ ಕಥೆಗಳು. ಇದು ಸುಧಾದಲ್ಲಿ ಧಾರಾವಾಹಿಯಾಗಿ ಬಂದ 'ಕಾಫಿ ನಾಡಿನ ಕಿತ್ತಳೆ'ಯ ಪರಿಷ್ಕೃತ ಮುದ್ರಣ. ಗಿರಿಮನೆ ಶ್ಯಾಮರಾವ್ ಅವರ ಈ ಸರಣಿಯ ಎಲ್ಲಾ ಪುಸ್ತಕಗಳನ್ನು ಓದಿದ್ದರೂ ನಾನು ಪರಿಚಯಿಸುತ್ತಿರುವ ಸರಣಿಯ ಮೊದಲ ಪುಸ್ತಕ ಇದು. ಮಳೆಗಾಲದಲ್ಲಂತೂ ಈ ಪುಸ್ತಕ ಮತ್ತಷ್ಟು ಆಪ್ತವಾಗುತ್ತದೆ. ಹೊರಗಡೆಯಿಂದ ನಾವು ನೋಡುವ ಮಲೆನಾಡಿನ ಪ್ರಕೃತಿಯೇ ಬೇರೆ. ಅಲ್ಲಿ ಪ್ರತಿದಿನ ಅವರು ನೋಡುವ ಮಲೆನಾಡಿನ ಪ್ರಕೃತಿ ಹಾಗೂ ಎದುರಿಸುವ ಸಮಸ್ಯೆಗಳಿಗೆ ವಿಭಿನ್ನ ರೀತಿಯವು. ಸುಂದರವಾಗಿ ಕಂಡ ಮಲೆನಾಡು ತನ್ನೊಳಗೆ ಈ ನಿಗೂಢತೆಯನ್ನು ಇಟ್ಟುಕೊಂಡಿದೆ. ಈ ಪುಸ್ತಕದಲ್ಲಿ ಲೇಖಕರು ತಮ್ಮ ಬದುಕಿನ ರೋಚಕ ಘಟನೆಗಳ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ. ಇದು ಆಸಕ್ತಿಕರವಾಗಿದೆ. ಅಲ್ಲಲ್ಲಿ ತಿಳಿ ಹಾಸ್ಯದೊಂದಿಗೆ ಗಂಭೀರ ಸಮಸ್ಯೆಗಳನ್ನು ಹೇಳಿದ್ದಾರೆ. ಸಕಲೇಶಪುರದ ಸುತ್ತಮುತ್ತಲಿನವರಿಗೆ ಹಾಗೂ ಮಲೆನಾಡಿನಂತಹ ಪ್ರಕೃತಿಯನ್ನೇ ಹಳ್ಳಿಗಾಡಿನಲ್ಲಿ ಹೊಂದಿರುವವರಿಗೆ ಬಹಳ ಆಪ್ತವಾಗುವ ಸನ್ನಿವೇಶಗಳು ಇಲ್ಲಿವೆ.
ಮುಂಗಾರಿಗೂ ಮುನ್ನ : ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಹಾದಿಯಲ್ಲಿ ಹಾಸನದ ನಂತರ ಸಕಲೇಶಪುರದ ವೈಭವ ಕಣ್ತುಂಬುತ್ತದೆ. ಅಲ್ಲಿ ಲೇಖಕರ ಮನೆಯ ಸುತ್ತಮುತ್ತಲಿನ ವಾತಾವರಣದೊಂದಿಗೆ, ಅವರ ಮನೆಯ ಪ್ರಮುಖ ವ್ಯಕ್ತಿ ಮಂಜನನ್ನು ಪರಿಚಯಿಸಿದ್ದಾರೆ. ಚಿಕ್ಕಪ್ರಾಯದಲ್ಲಿ ದನ ಕಾಯಲು ಬಂದು ಸೇರಿದ ಮನೆಯಾಳು ಮಂಜ ಅವರಷ್ಟೇ ಪ್ರಮುಖನಾಗಿರುವುದನ್ನು ಹಾಗೂ ವಿದ್ಯೆ ಕಲಿಸಿ ಕೊಡಬೇಕೆಂಬ ಲೇಖಕರ ನಿರ್ಧಾರವನ್ನೇ ಬಿಡಿಸಿದ್ದ ಪ್ರಸಂಗವನ್ನು ಹೇಳುತ್ತಾರೆ. ಇದು ಕೇವಲ ಪ್ರವೇಶಿಕೆಯಷ್ಟೇ..
ಮೀನು ಬ್ಯಾರಿಯ ಹೋರಿ ವ್ಯಾಪಾರ: ಕಾಫಿ ಗಿಡಗಳ ಕೆಲಸದ ಜೊತೆಗೆ ಗದ್ದೆಯ ಕೆಲಸದ ಪರಿಯನ್ನು ಹೇಳುತ್ತಲೇ.. ಒಂದು ಎತ್ತು ಮುದಿಯಾಗಿ ಸತ್ತಿದ್ದರಿಂದ ಬೇಸಾಯಕ್ಕೆ ಅದಕ್ಕೊಂದು ಜೊತೆ ಹುಡುಕಬೇಕಿದ್ದರಿಂದ ಮಂಜನ ಜೊತೆ ಹೋರಿ ಹುಡುಕಲು ಹೋದಾಗ ಇದನ್ನು ತಿದ್ದಬಹುದೆಂದು ಧೈರ್ಯ ಕೊಟ್ಟ ಮಂಜ ಮುಂದೆ ಸೀನನಿಗೆ ಆದ ಅನಾಹುತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುತ್ತಾನೆ. ಅನುಭವಸ್ತನಾದ ಗೋಜನಿಗೂ ಮುಂದೆ ಮತ್ತೊಂದು ಇಂತದ್ದೇ ಅನುಭವವಾಗುತ್ತದೆ. ಇದರ ಜೊತೆಗೆ ಹೆಜ್ಜೇನಿನ ಕಡಿತದ ಪ್ರಸಂಗವಿದೆ. ಅದೆಲ್ಲದಕ್ಕೂ ಹೋರಿಯ ಕಾರಣವೇ..? ಅಲ್ಲೇ ಪಕ್ಕದಲ್ಲಿ ಕಾಫಿ ಫಸಲಿಗೆ ಮಳೆಯನ್ನೇ ನಂಬಿ ಕುಳಿತರೆ ಸಾಲುವುದಿಲ್ಲವೆಂದು ಕಟ್ಟಿಸಿದ ಕೆರೆಯಿತ್ತು. ಅದರಲ್ಲಿ ಮೀನು ಸಾಕಲು ಹೊರಟವರು ಅಲ್ಲಿ ಪಡೆದ ಅನುಭವವೇನು..? ಓದಿನೋಡಿ.
ಚಿಂಟಿ : ಚಿಕ್ಕಮ್ಮನ ಇಬ್ಬರು ಮಕ್ಕಳು ಚಿನ್ಮಯಿ ಮತ್ತು ಅವಳ ಅಣ್ಣ ನಂದ ಮಳೆಗಾಲದ ಖುಷಿ ಅನುಭವಿಸಲೆಂದು ಮನೆಗೆ ಬಂದಿದ್ದಾಗ.. ಚೂಟಿಯಾದ ಚಿನ್ಮಯಿಗೆ ಚಿಂಟಿ ಎಂದು ಅಡ್ಡ ಹೆಸರಿಟ್ಟಿದ್ದರು. ಮಳೆಗಾಲದಲ್ಲಿ ಕಿತ್ತಲೆ ಹಣ್ಣುಗಳನ್ನು ನೋಡಲು ಹೊರಟ ಚಿಂಟಿ, ನಂತರ ಮಳೆಗಾಲದ ದಿನಗಳ ಅವಳ ಓಡಾಟ, ಕೆಸರಿನಲ್ಲಿ ಪರದಾಟ, ಮುಗ್ಧವಾದ ಅವಳ ಪ್ರಶ್ನೆಗಳು ಹಲಸಿನ ಹಣ್ಣನ್ನು ಬಿಡಿಸಲು ಹೊರಟಾಗ ಚಿಂಟಿಯ ಪರದಾಟ ಜೊತೆಗೆ ಹಾವಿನ ಪ್ರಸಂಗವೂ ಇಲ್ಲಿದೆ. ಹೀಗೆ ಚಿಂಟಿಯ ಜೊತೆಯ ಹಲವಾರು ಚೇತೋಹಾರಿ ಘಟನೆಗಳಿವೆ.
ಕಾರ್ಗಾಲದ ವೈಭವ : ಮಳೆಗಾಲದ ದಿನಗಳಲ್ಲಿ ಮಳೆ ಅಳತೆ ಮಾಡುವ ಮಳೆ ಮಾಪಕ, ಚಿಂಟಿಯ ತುಂಟಾಟಗಳು, ಚಿಂಟಿ ದೊಡ್ಡ ಕೆರೆಯಲ್ಲಿ ಮುಳುಗಿ ಅವಳನ್ನು ಉಳಿಸಿದ ಪ್ರಸಂಗ ಹಾಗೂ ಅವಳಿಗೆ ಹುಷಾರು ತಪ್ಪಿ ಮಲಗಿದಾಗ ಅಲ್ಲಿನ ಪರದಾಟ ಎಲ್ಲವೂ ಚೇತೋಹಾರಿಯಾದ ವಾತಾವರಣದ ಮತ್ತೊಂದು ಮುಖವಾದ ವಾತಾವರಣದ ಅಪಾಯವನ್ನೂ ಬಿಚ್ಚಿಡುತ್ತದೆ.
ಬೇಸ್ತು : ಮಂಜ, ಗೋಜರ ಪ್ರಸಂಗಗಳು ಅದೃಷ್ಟವನ್ನು ನೆನಪಿಸಿದರೂ ಅಲ್ಲಿನ ವಾತಾವರಣದ ಅಪಾಯ ಹಾಗೂ ಅಲ್ಲಿನವರ ಗಟ್ಟಿತನವನ್ನು ತೋರುತ್ತವೆ. ಏಲಕ್ಕಿ ಗಿಡಗಳನ್ನು ಹುಡುಕಿ ಹೊರಟಾಗ ಅಲ್ಲಿಂದ 16 ಕಿಲೋಮೀಟರ್ ದೂರದ ನಡಹಳ್ಳಿಯಲ್ಲಿ ಇರುವುದು ತಿಳಿದು ಅಲ್ಲಿಗೆ ಹೋಗಿ ಬರುವ ಸಂದರ್ಭದಲ್ಲಿ ಬಸವನಿಂದ ಕಲಿತ ಪಾಠವೇನು..? ಕೆಲಸದ ಬುಡ್ಡ ಕಾಣೆಯಾದ ಸಂದರ್ಭದಲ್ಲಿಯೇ ದಾರಿಯ ಪಕ್ಕದ ಹೊಳೆಯೊಳಗೆ ಸೇರಿದ ಮೊಸಳೆಯ ಪುಕಾರು ಇದ್ದಾಗ ಆತ ಸತ್ತೇ ಹೋದನೆಂದು ಭಾವಿಸಿದವರು ಬೇಸ್ತು ಬಿದ್ದದ್ದೇಕೆ..?
ಜೀವಭಯ : "ಬದುಕಿನ ಗುರಿಯೇ ಬೊಗಳುವ ವೃತ್ತಿಯಾದ ನಾಯಿಗೆ ಬರುವ ಆವೇಶ ಮತ್ತು ಮನುಷ್ಯರಿಗೆ ಜೀವಭಯ ಏನನ್ನೂ ಮಾಡಿಸಬಹುದು." ಎನ್ನುವ ಲೇಖಕರ ಅಭಿಪ್ರಾಯದ ಹಿಂದಿನ ಅನುಭವವೇನು ಓದಿ ನೋಡಿ.
ಮಂಗ ಚೇಷ್ಟೆ : ಮಲೆನಾಡಿನಲ್ಲಿ ಮಂಗ ಚೇಷ್ಟೆ ಶುರು ಮಾಡಿದರೆ ಫಸಲು ಉಳಿಯುವುದು ಕಡಿಮೆಯೇ.. ಹಾಗಾಗಿ ಅಲ್ಲಿ ಕೋವಿ ಪ್ರಯೋಗ ಮಾಡಲು ಹೊರಟಾಗ ಅದಕ್ಕೆಲ್ಲಾ ಅಭ್ಯಾಸವಿರುವ ಭಟ್ಟಿ ಈರನೇ ಸರಿ ಎಂದು ಅವನಿಗೆ ಹೇಳಿ ಕಳುಹಿಸಿದರೆ, ಆತನನ್ನು ಎಕ್ಸೈಸ್ ನವರು ಹಿಡಿದುಕೊಂಡು ಹೋಗಿದ್ದರು. ಅದೂ.. ಕೋವಿ ಸಮೇತ. ಕೋವಿಯಾದರೂ ಅವರದ್ದಲ್ಲ.. ಬದಲಾಗಿ, ಗೌಡರ ಮನೆಯದ್ದು. ಭಟ್ಟಿ ಈರನ ಕಥೆ ಏನು..? ಆತ ಇದಕ್ಕೂ ಮುಂಚೆ ಅವರ ಕುತ್ತಿಗೆಗೆ ತಂದ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ.
ಪಂಚಕನ್ಯೆಯರ ಕೋಟೆ ಪ್ರವಾಸ : ಅಕ್ಕನ ಮಗಳ ಜೊತೆ ಬಂದ ನಾಲ್ಕು ಜನ ಗೆಳತಿಯರು ಸೇರಿ ಪಂಚಕನ್ಯೆಯರನ್ನು ನೆನಪಿಸಿಕೊಳ್ಳುತ್ತಾ.. ಅವರ ಪ್ರವಾಸದ ಅನುಭವವನ್ನು ಕಟ್ಟಿಕೊಡುತ್ತಾರೆ. ಅದರಲ್ಲಿಯೂ ಸ್ವಲ್ಪ ಎಚ್ಚರ ತಪ್ಪಿದರೂ ಮುಂಜರಾಬಾದ್ ಕೋಟೆಯಲ್ಲಿ ನಡೆಯುತ್ತಿದ್ದ ಪ್ರಸಂಗ ಹೆದರಿಕೆ ಹುಟ್ಟಿಸುತ್ತದಾದರೂ.. ಮುಂದಾಲೋಚನೆಗೆ ಹಾಗೂ ಬುದ್ಧಿವಂತಿಕೆಗೆ ಮೆಚ್ಚುಗೆಯೂ ಹುಟ್ಟುತ್ತದೆ.
ತಿಮ್ಮನ ಸೇಡು : ಯಾರಿಗೂ ತೊಂದರೆ ಕೊಡದ, ಯಾರನ್ನೂ ನೋಯಿಸದ, ಯಾರಿಗೂ ಮೋಸ ಮಾಡದ ಒಬ್ಬ ನಿರುಪದ್ರವ ಜೀವಿ ತಿಮ್ಮ ಎಂಬ ಕೆಲಸಗಾರನ ಬದುಕಿನ ಕಥೆ ಇಲ್ಲಿದೆ. ತಿಮ್ಮ ತೀರಿಕೊಂಡ ನಂತರ ಆತನ ಪತ್ನಿ ತಿಮ್ಮಿ ಚೇತರಿಸಿಕೊಳ್ಳಲಿಲ್ಲ. ಆತನ ಇಬ್ಬರು ಮಕ್ಕಳು ಅನಾಥರಾದರು. ಎರಡು ಅಸಹಜ ಸಾವುಗಳಾದ ನಂತರ ಭೈರ, ಮಲ್ಲ ಮತ್ತು ಸೋಮರನ್ನು ಜನ ನೋಡುವ ದೃಷ್ಟಿ ಬದಲಾಗಿದ್ದೇಕೆ..? ತಿಮ್ಮ ಸೇಡು ತೀರಿಸಿಕೊಂಡನೇ..? ಆ ರೀತಿಯ ಆಲೋಚನೆ ಹುಟ್ಟುವುದಕ್ಕೆ ಕಾರಣವೇನು..?
ಚಡ್ಡಿ ಮತ್ತು ಪ್ಯಾಂಟು : ಜೇನು ತೆಗೆಯುವ ಅವೈಜ್ಞಾನಿಕ ಪದ್ಧತಿಯಿಂದ ಲೇಖಕರಿಗೆ ಉಂಟಾದ ಬೇಸರ ಹಾಗೂ ಅದಕ್ಕಾಗಿ ಅವರು ಆಲೋಚಿಸಿದ ಪರಿ ಇಲ್ಲಿದೆ. ಸಣ್ಣಮಲ್ಲಪ್ಪ "ಇವರು ಪ್ಯಾಂಟು ಹಾಕಿದ್ದಾರೆ. ನಾನು ಚಡ್ಡಿ ಹಾಕಿದ್ದೀನಿ. ಇವರಿಗೂ ನಂಗೂ ಏನಿದೆ ವ್ಯತ್ಯಾಸ..? ಪ್ಯಾಂಟು ಹಾಕಿದ ಮಾತ್ರಕ್ಕೆ ಇವರೇನು ದೊಡ್ಡ ಮನುಷ್ಯರಾಗಿ ಬಿಡ್ತಾರಾ..? ಪ್ಯಾಂಟೀನ ಯೋಗ್ಯತೆ ನಂಗೊತ್ತಿಲ್ವಾ..!" ಎಂದು ಬೈದದ್ದೇಕೆ, ಅಷ್ಟಕ್ಕೂ ಆತನ ತಲೆಯಲ್ಲಿ ಏನಿತ್ತು, ಇದರ ಹಿನ್ನೆಲೆಯೇನು..? ವಿರಸದಿಂದ ಉಂಟಾಗುವ ಪ್ರಕ್ಷುಬ್ಧ ಮನಸ್ಥಿತಿಗೂ.. ಕ್ಷಮೆಯಿಂದ ಉಂಟಾಗುವ ನೆಮ್ಮದಿಗೂ ಅದೆಷ್ಟು ವ್ಯತ್ಯಾಸ ಎಂಬ ಚಿಂತನೆ ನಮಗೂ ಮೂಡದಿರುವುದಿಲ್ಲ.
ಮರೆಯಾದ ಮಹಾಲಕ್ಷ್ಮಿ : ಮಂಜ ದನ ಕಾಯುತ್ತಿದ್ದ ಕಾಲದಲ್ಲಿ ಎಲ್ಲಿಂದಲೋ ಬಂದು ಸೇರಿದ ದನ ಲಕ್ಷ್ಮಿ. ಲಕ್ಷ್ಮಿ ಎಂದರೆ ಸಾಧು ಹಾಯುವುದು, ಒದೆಯುವುದು ಗೊತ್ತೇ ಇರಲಿಲ್ಲ. ಬಂದವರೆದುರಿಗೆಲ್ಲಾ ಲಕ್ಷ್ಮಿಯ ಗುಣಗಾನ ಮಾಡುತ್ತಿದ್ದವರಿಗೆ.. ಒಮ್ಮೊಮ್ಮೆ ಲಕ್ಷ್ಮಿ ತೋರುತ್ತಿದ್ದ ರೌದ್ರ ರೂಪದಿಂದ ತೊಂದರೆಯಾದರೆ..! ಎಂದು ಅವಳನ್ನು ಮಾರಿಯೇ ಬಿಟ್ಟರು. ಜೀವಕ್ಕೆ ಕುತ್ತು ಬಂದಾಗ ಅದು ಎಷ್ಟೇ ಪ್ರೀತಿಸುವ ಜೀವಿಯಾಗಿದ್ದರೂ ಅದನ್ನು ದೂರ ಮಾಡಿಕೊಳ್ಳಲೇ ಬೇಕಲ್ಲವಾ ಎಂಬ ಆಲೋಚನೆ ಬಂದರೂ.. ಅದಕ್ಕೆ ಕಾರಣದ ಮೂಲ ಹುಡುಕಿದ್ದರೆ ಅದು ಅಲ್ಲಿಯೇ ಇರುತ್ತಿತ್ತಲ್ಲವಾ ಎಂಬ ಆಲೋಚನೆ ಲೇಖಕರಿಗೂ ಬರುತ್ತದೆ. "ಮನುಷ್ಯ ತಪ್ಪುಗಳನ್ನು ಮಾಡಲು ಅವನ ಅಜ್ಞಾನವೇ ಕಾರಣ ತಾನೇ..?" ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವಾಗ ನಮಗೂ ಹಾಗೆಯೇ ಅನ್ನಿಸುತ್ತದೆ. ಲಕ್ಷ್ಮಿಯನ್ನು ಮತ್ತೆ ಕರೆತರಬೇಕೆನಿಸಿದರೂ ಅದು ಸಾಧ್ಯವಾಗದ್ದೇಕೆ..?
ಉಪ್ಪಿನಕಾಯಿ ಮತ್ತು ಮಂಜ : ಉಪ್ಪಿನಕಾಯಿ ಹಾಗೂ ಸಂಡಿಗೆಗಾಗಿ ಮಂಜ ತಂದ ಗಾಂಧಾರಿ ಮೆಣಸಿನಕಾಯಿ ತಂದಿದ್ದ. ಇದು ಮೊದಲಿನ ಹಾಗೆ ಖಾರವೇ ಇರುವುದಿಲ್ಲವೆಂದು ಮಸ್ಕಾ ಹೊಡೆಯುತ್ತಿರುವಾಗ ಅಮ್ಮ ತಮಾಷೆಗೆಂದು.. ಹಾಗಾದ್ರೆ ನೀನು ತಂದ ಮೆಣಸಿನಕಾಯಿಗಳನ್ನು ನೀನೇ ಅರೆದು ಕುಡಿ ಎಂಬ ಮಾತನ್ನು ಗಂಭೀರವಾಗಿ ತೆಗೆದುಕೊಂಡವನಿಗೆ ಉಂಟಾದ ಪರಿಸ್ಥಿತಿ ಮುಂದೇನಾಯ್ತು..?
ಬುದ್ಧಿಯ ಬಲ : ಮರ ಕಡಿಸುವ ಸಂದರ್ಭದಲ್ಲಿ, ಅದನ್ನು ಸಾಗಿಸಲು ಸಹಾಯಕವಾಗುವ ಆನೆಯ ವಿಚಾರವನ್ನು ಪ್ರಸ್ತಾಪಿಸುತ್ತಾ.. ಅದರ ದೇಹಬಲದ ಪ್ರದರ್ಶನವನ್ನು ಹೇಳುತ್ತಲೇ.. ಬುದ್ಧಿ ಬಲದ ಮುಂದೆ ದೇಹಬಲದ ದೌರ್ಬಲ್ಯವನ್ನು ವಿಶ್ಲೇಷಿಸುತ್ತಾರೆ.
ಕಾಫಿ ನಾಡಿನಿಂದ ಕಾಂಕ್ರೀಟ್ ಕಾಡಿಗೆ.. : ಕಾಫಿ ನಾಡಿನಿಂದ ಕಾಂಕ್ರೀಟ್ ಕಾಡಿನತ್ತ ಸೆಳೆತ ಹುಟ್ಟಿಸಿಕೊಳ್ಳುತ್ತಿರುವವರಿಗೆ ಹುಟ್ಟುವ ಆಲೋಚನೆಗಳ ಮೂಲವೇನು ಹಾಗೂ ಇದೆಲ್ಲದಕ್ಕೂ ಅಲ್ಲಿನ ವಾತಾವರಣ ಹೇಗೆ ಬದಲಾದ ಪರಿಣಾಮ ತೋರುತ್ತಿದೆ ಎಂಬುದನ್ನು ಓದುವಾಗಲಂತೂ ಮನಸ್ಸು ಭಾರವಾಗುತ್ತದೆ.
ಇಲ್ಲಿನ ರೋಚಕತೆ ಮಲೆನಾಡಿನತ್ತ ನಮ್ಮನ್ನು ಸೆಳೆದೊಯ್ಯುತ್ತದೆ. ಅಲ್ಲಿನ ವಾತಾವರಣವನ್ನು ಕಟ್ಟಿಕೊಡುತ್ತಲೇ.. ಅಲ್ಲಿನ ಸವಾಲುಗಳಿಗೂ ಸಾಕ್ಷಿಯಾಗಿಸುತ್ತದೆ. ಪ್ರಕೃತಿಯ ರೋಚಕತೆಯ ಜೊತೆಗೆ ಮನುಷ್ಯನ ಸೆಣೆಸಾಟ ಹೇಗಿದೆ ಎಂಬುದರ ಚಿತ್ರಣ ಇಲ್ಲಿದೆ. ಸರಾಗವಾಗಿ ಓದಿಸಿಕೊಳ್ಳುವ ಪುಸ್ತಕ. ಈ ಸರಣಿಯ ಪುಸ್ತಕಗಳನ್ನು ಒಂದೊಂದಾಗಿ ಮುಂದೆ ಪರಿಚಯಿಸುತ್ತಾ ಹೋಗುವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ