ಸೋಮವಾರ, ಏಪ್ರಿಲ್ 20, 2026

ವೈಜಯಂತಿಪುರ (ಪುಸ್ತಕ ಯಾನ - 265)


ಕಾದಂಬರಿಯ ಹೆಸರು : ವೈಜಯಂತಿಪುರ

ಪ್ರಭೇದ : ಐತಿಹಾಸಿಕ

ಲೇಖಕರ ಹೆಸರು : ಸಂತೋಷಕುಮಾರ ಮೆಹೆಂದಳೆ

ಪುಸ್ತಕದ ಬೆಲೆ : 395 ರೂ.


'ವೈಜಯಂತಿಪುರ' ಎಂಬ ಕಾದಂಬರಿಯ ಶೀರ್ಷಿಕೆಯ ಜೊತೆಗೆ ಇದು ಕದಂಬ ಸಾಮ್ರಾಟ ಮಯೂರವರ್ಮನ ಮಹಾಚರಿತೆ ಎಂದು ಉಲ್ಲೇಖವಾಗಿದೆ. ಇದು ಕದಂಬ ಸಾಮ್ರಾಟ ಮಯೂರವರ್ಮನ ಜೀವನ ಚರಿತ್ರೆಯೇ ಆದರೂ ಶೀರ್ಷಿಕೆ ಮಾತ್ರ ವೈಜಯಂತಿಪುರ ಎಂಬುದೇಕೆ ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕಾದಂಬರಿಯಲ್ಲಿ ಮಯೂರ ಶರ್ಮ/ವರ್ಮ ಆವರಿಸಿದ್ದರೂ.. ಆತನಿಗಿಂತಲೂ ವೈಜಯಂತಿಪುರ ಪ್ರಾಮುಖ್ಯತೆ ಪಡೆಯುತ್ತದೆ. ಹಾಗೆಂದು, ಇದು ಆತನ ಹುಟ್ಟೂರೇನಲ್ಲ. ಆದರೆ, ಈ ಸ್ಥಳವನ್ನೇ ತನ್ನ ರಾಜಧಾನಿಯನ್ನಾಗಿಸಿಕೊಂಡು ಒಂದು ಇಡೀ ಸಾಮ್ರಾಜ್ಯವನ್ನು ನಿರ್ಮಿಸಿದ ಖ್ಯಾತಿ ಆತನದ್ದು. ಅಲ್ಲದೇ.. ವೈಜಯಂತಿಪುರವನ್ನೇ ತನ್ನ ರಾಜಧಾನಿಯನ್ನಾಗಿ ಏಕೆ ಮಾಡಿಕೊಂಡ ಎಂಬುದು ರಾಜಕೀಯವಾಗಿ ವಿಶ್ಲೇಷಿತವಾದರೂ.. ಕಾಳಿದಾಸನ ಭೇಟಿಯ ಕುರಿತು ಉಲ್ಲೇಖಿಸಿರುವ ಪ್ರಸಂಗ ಆ ಹಿರಿಮೆಯನ್ನು ಮತ್ತಷ್ಟು ಎತ್ತಿ ಹಿಡಿಯುತ್ತದೆ. ನಾವು ಪಠ್ಯಪುಸ್ತಕಗಳಲ್ಲಿ ಬನವಾಸಿಯ ಕದಂಬರು ಎಂದೇ ಓದಿರುವ ವಿಚಾರ ನೆನಪಾದರೂ.. ಈ ಪುಸ್ತಕ ಓದಿದ ಬಳಿಕ ವೈಜಯಂತಿಪುರದ ಕದಂಬರು ಎಂದೇ ಮನಸ್ಸಿನಲ್ಲಿ ಕೂತಿದೆ. 


ಈ ಐತಿಹಾಸಿಕ ಕಾದಂಬರಿಯಲ್ಲಿ ಮಯೂರವರ್ಮನ ವೈಯಕ್ತಿಕ ವಿಚಾರ ಹಾಗೂ ಆತನ ವೈಯಕ್ತಿಕ ಮಾಹಿತಿಗಿಂತಲೂ ಆತ ರಾಜ್ಯ ಕಟ್ಟಿದ ಬಗ್ಗೆ ಹಾಗೂ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾದ ರೀತಿ ಆತನ ಯುದ್ಧ ತಂತ್ರ ಹೀಗೆ ಇತಿಹಾಸದ ದಾಖಲಾತಿಗಳನ್ನು ಹೆಚ್ಚಾಗಿ ಓದುಗರಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಬುದ್ಧಿ ಮತ್ತು ಬಲ ಸೇರಿದರೆ ಆಗುವ ಬದಲಾವಣೆಯ ನೈಜ ಚಿತ್ರಣ ಇಲ್ಲಿದೆ.


ಮಯೂರ ಎಂಬ ಹೆಸರು ಕೇಳಿದಾಗ ಮೊದಲಿಗೆ ವರನಟ ಡಾಕ್ಟರ್ ರಾಜ್ ಕುಮಾರ್ ಅಭಿನಯದ ಚಲನಚಿತ್ರ ನೆನಪಾಗುತ್ತದೆ. ಆದರೆ, ಚಲನಚಿತ್ರಕ್ಕೂ ಈ ಕಾದಂಬರಿಗೂ ಬಹಳಷ್ಟು ವ್ಯತ್ಯಾಸಗಳು ಕಂಡುಬರುತ್ತವೆ. ಅಲ್ಲದೇ, ಇಲ್ಲಿನ ಕಾದಂಬರಿಯಲ್ಲಿ ಮಾಹಿತಿಯ ಜೊತೆಗೆ ಅದರ ಆಕರವೂ ಉಲ್ಲೇಖಿತವಾಗಿದೆ. ಶಾಸನಗಳ ದಾಖಲಾತಿ ಇದೆ. ಕನ್ನಡಿಗರು ತಮ್ಮದೇ ಸಾಮ್ರಾಜ್ಯವನ್ನು ಕಟ್ಟಿಕೊಂಡ ಬಗೆ ಇದೆ. ಬನವಾಸಿ ಅಂದರೆ ವೈಜಯಂತಿಪುರದ ಭವ್ಯತೆ ಇದೆ.


ಕೆಲವು ಅವಮಾನಗಳು ಮನುಷ್ಯನನ್ನು ಕುಗ್ಗಿಸಿದರೆ ಇನ್ನು ಕೆಲವು ಅವಮಾನಗಳು ಅವನಲ್ಲಿ ಕೆಚ್ಚು ಹುಟ್ಟಿಸುತ್ತವೆ. ಅದು ಅವಮಾನದ ತೀವ್ರತೆಯ ಪರಿಣಾಮವಲ್ಲ. ಬದಲಾಗಿ ಅವಮಾನಕ್ಕೊಳಗಾದ ಮನುಷ್ಯನಲ್ಲಿ ಹುಟ್ಟುವ ಕೆಚ್ಚಿನ ಪರಿಣಾಮ.


ತಾತ ವೀರಶರ್ಮರ ಬಳಿ ವಿದ್ಯಾಭ್ಯಾಸ ನಡೆಸುತ್ತಿದ್ದ ಮಯೂರಶರ್ಮನಿಗೆ ಮತ್ತಷ್ಟು ಕಲಿಯುವ ತುಡಿತ. ತಾಯಿ ಇಲ್ಲದ ಮಗು ಹಾಗೂ ತಂದೆ ಪಲ್ಲವರ ಸಾಮ್ರಾಜ್ಯದಲ್ಲಿ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದವರು. ಹಾಗಾಗಿ, ತಾತ ವೀರಶರ್ಮರ ಗರಡಿಯಲ್ಲಿ ಪಳಗುತ್ತಿದ್ದ ಮಯೂರಶರ್ಮ. ಮೊಮ್ಮಗನ ಉತ್ಸಾಹಕ್ಕೆ, ಕಲಿಯುವ ಹಂಬಲಕ್ಕೆ ತಣ್ಣೀರೆರೆಚದೆ ಆಗಿನ ಕಾಲದಲ್ಲಿ ತಾತ ಮೊಮ್ಮಗ ಇಬ್ಬರೂ ಕುದುರೆ ಹತ್ತಿ ಕಂಚಿಗೆ ಮಹತ್ವಾಕಾಂಕ್ಷಿಗಳಾಗಿ ಹೊರಟೇ ಬಿಟ್ಟರು. ಆಗ ಪಲ್ಲವರ ಸಾಮ್ರಾಜ್ಯವೇ ದಕ್ಷಿಣದಲ್ಲಿ ಅತಿ ಪ್ರಾಬಲ್ಯಯುತ ಸಾಮ್ರಾಜ್ಯ. ಅಲ್ಲಿ ಕಣ್ಣಿಗೆ ಬೀರುವ ಸಾಮ್ರಾಜ್ಯದ ಹಾಗೂ ಸಾಮಂತರ ನಡೆಗಳನ್ನು ಮಯೂರ ಸೂಕ್ಷ್ಮಗ್ರಾಹಿಯಾಗಿ ಗಮನಿಸುತ್ತಿರುತ್ತಾನೆ. ಅದರ ಚಿತ್ರಣವೂ ಕಾಣುತ್ತದೆ. ಆತನಿಗೆ ಶಾಸ್ತ್ರದ, ವೇದಾಭ್ಯಾಸದ ಕಲಿಕೆಗಿಂತಲೂ ಕ್ಷತ್ರಿಯರ ಉತ್ಸಾಹದ ಕಲಿಕೆಯತ್ತಲೇ ಹೆಚ್ಚು ಗಮನ. ಅದು ತಂದೆಯ ಬಳುವಳಿಯೂ ಆಗಿರಬಹುದು.


ರಾಜ ಪರಿವಾರಕ್ಕಿಂತಲೂ ಚುರುಕಾಗಿದ್ದ ಮಯೂರ ಶರ್ಮನ ಕಲಿಯುವಿಕೆ, ಎದ್ದು ಕಾಣಿಸುವಿಕೆ ಹಾಗೂ ಸಾಮಾನ್ಯರೊಂದಿಗಿನ ಬೆರೆಯುವಿಕೆ ಅವರಿಗೆ ಕಣ್ಣು ಕಿಸುರಾಗುತ್ತದೆ. ಎಲ್ಲಾ ಗುರುಗಳ ಬಳಿಯಲ್ಲಿಯೂ ಇದೇ ಅವಸ್ಥೆ. ಆಗಾಗ ಗುರುಕುಲಗಳನ್ನು ಬದಲಾಯಿಸಬೇಕಾಗಿ ಬರುವ ಸಂದರ್ಭ. ನಂತರ, ರಾಜಪರಿವಾರದಿಂದ ಅವಮಾನಿತನಾಗಿ ಆ ಸ್ಥಳವನ್ನೇ ಬಿಟ್ಟು ರಾತ್ರೋರಾತ್ರಿ ಅಲ್ಲಿಂದ ಹೊರಟು ನಿಂತಾಗ ತಾತ ವೀರಶರ್ಮರ ಮಾರ್ಗದರ್ಶನದಿಂದ ಮಯೂರಶರ್ಮನ ಕನಸಿಗೊಂದು ರೂಪುರೇಷೆ ಸಿಕ್ಕುತ್ತದೆ. ಅದಕ್ಕೆ ಕಾವಲಾಗಿ ನಿಲ್ಲುವುದು ತಂದೆ ಬಂಧುಸೇನ. ಪಲ್ಲವರ ನಿರ್ಮೂಲನಕ್ಕೆ ಹಾಗೂ ಪಲ್ಲವರ ದೊರೆ ಶಿವಸ್ಕಂದವರ್ಮನ ಅಹಂಕಾರದ ಆಡಳಿತಕ್ಕೆ ಕೊನೆಗಾಣಿಸಲು ಆತನಿಗೆ ಸಂಘಟನೆಯ ಅಗತ್ಯವಿತ್ತು. ಆತನೊಬ್ಬನ ಕೈಲಾಗುವ ಕೆಲಸವಾಗಿರಲಿಲ್ಲ ಅದು. ಆಗ ಅವರು ಆರಿಸಿಕೊಂಡದ್ದು ಕುಡುಂಬಿಗಳನ್ನು. 


ಕಾಡುಗೊಂಡರ, ನಾಡಬೇಡರ ನಡುವೆ ಬೆರೆತು ಹೋಗಿದ್ದ ಬುಡಕಟ್ಟಿನ ಜನಾಂಗದ ಕುಡುಂಬಿಗಳನ್ನು/ ಕಡಂಬುಗಳನ್ನು/ ಕದಂಬಿಗಳನ್ನು ಸಂಘಟಿಸಿರುವುದು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲಿಯೂ ಯಾರಿಗೂ ಅದರ ಸುಳಿವು ಸಿಕ್ಕದಂತೆ, ಕಾಡಿನ ಮಧ್ಯದಲ್ಲಿ ನಡೆಯುವ ಅಭ್ಯಾಸಗಳು ಹಾಗೂ ಸಂಘಟನೆಗೆ ಆತ ಪಟ್ಟ ಶ್ರಮವೆಷ್ಟು ಎಂಬುದನ್ನು ಲೇಖಕರು ಎಳೆಎಳೆಯಾಗಿ ಚಿತ್ರಿಸಿದ್ದಾರೆ. ಮಯೂರ ಶರ್ಮ ಮಯೂರ ವರ್ಮನಾಗಿದ್ದು ಶಿವ ಸ್ಕಂದವರ್ಮನನ್ನು ಸೋಲಿಸಿ.. ಆತನ 'ವರ್ಮ' ಎಂಬ ಪದವನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಳ್ಳುವುದರಿಂದ. ಇಲ್ಲಿ ಅದಕ್ಕೆ ಎರಡು ಕಾರಣಗಳು ಕಾಣುತ್ತವೆ. ಮೊದಲನೆಯದು, ಆತನ ಅಹಂಕಾರವನ್ನು ಮುರಿದು ಪಲ್ಲವರ ಸಾಮ್ರಾಜ್ಯವನ್ನು ಕೊನೆಗಾಣಿಸಿದ್ದು.. ಮತ್ತೊಂದು, ರಾಜ ಮನೆತನದವನು ತಾನು ಎಂದು ಜನತೆಗೆ ಬಿಂಬಿಸಿಕೊಳ್ಳಲು ವರ್ಮ ಎಂಬ ಪದ ಆಗ ಮಯೂರನಿಗೆ ಸೂಕ್ತವೆನ್ನಿಸಿತ್ತು. 


ಆತ ರಾಜ್ಯವನ್ನು ಕಟ್ಟಲು ಕೇವಲ ಕುಡುಂಬಿಗಳ ಸಂಘಟನೆ ಮಾತ್ರವೇ ಕಾರಣವಾಗಿರಲಿಲ್ಲ. ಅವರ ಸಹಾಯದಿಂದ ಆತ ಚಿಕ್ಕ-ಪುಟ್ಟ ಕಾಡಿನಂಚಿನ ಸಾಮಂತರನ್ನು ತನ್ನ ವಶ ಮಾಡಿಕೊಂಡು, ಪಲ್ಲವರಿಗೆ ಸಾಮಂತರಾಗಿದ್ದವರನ್ನು ಸೋಲಿಸಿ.. ಸೇನೆಯಲ್ಲಿದ್ದ ಸೋತವರೆಲ್ಲರನ್ನೂ ಮರಣದಂಡನೆಗೆ ಗುರಿಪಡಿಸುವ ಬದಲಾಗಿ ಅವರ ನಿಷ್ಠೆಯ ಪರೀಕ್ಷೆಗೆ ಒಂದು ಅವಕಾಶ ನೀಡುತ್ತಾನೆ. ಇಲ್ಲಿ ಈತ ನಂಬಿಕೆಯ ಪರೀಕ್ಷೆ ಮಾಡುತ್ತಿದ್ದರೆ ಅಲ್ಲಿ ಅವರಿಗೆ ಬದುಕಿನ ಪರೀಕ್ಷೆ. ಮಯೂರ ಕೇವಲ ಬುದ್ದಿಯಿಂದ ಅಥವಾ ಕೇವಲ ಬಲದಿಂದ ಸಾಮ್ರಾಜ್ಯವನ್ನು ಸ್ಥಾಪಿಸಲು ಮುಂದಾಗಲಿಲ್ಲ. ಆತ ಎರಡರ ಸಮ್ಮಿಶ್ರಣ ಎಂಬುದು ಪ್ರತಿ ಹೆಜ್ಜೆಗೂ ಸಾಬೀತಾಗುತ್ತಾ ಹೋಗುತ್ತದೆ. 


ಆತ ಗೆರಿಲ್ಲಾ ಯುದ್ಧದ ರಣನೀತಿಯನ್ನು ಶುರು ಮಾಡಿದ್ದು ಹೌದಾದರೂ.. ಹೊಸ ಹೊಸ ರಣತಂತ್ರಗಳ ರೂಪುಗೊಳಿಸುವಿಕೆ ಕೂಡಾ ಇಲ್ಲಿ ಕಾಣುತ್ತಾ ಹೋಗುತ್ತದೆ. ತಾನು ರಾಜನಾಗಿ ಎಲ್ಲರನ್ನೂ ಆಳಲು ಮಾತ್ರ ಆತ ನಾಯಕನಾಗಲಿಲ್ಲ. ಬದಲಾಗಿ, ಆತನ ಪರಿಶ್ರಮ ಪ್ರತಿ ಯುದ್ಧದಲ್ಲಿ ಕಾಣುತ್ತಾ ಹೋಗುತ್ತದೆ. ಆತ ಸ್ವತಃ ಢಾಲು ಹಿಡಿದು ರಣಭೂಮಿಯಲ್ಲಿ ಕಾಣಿಸಿಕೊಂಡಾಗ, ಆ ಎರಡು ಅಲುಗಿನ ಆಯುಧದಿಂದ ಆತ ಯುದ್ಧ ಮಾಡುವ ಪರಿಯಂತೂ ಕಣ್ಣಿಗೆ ಕಟ್ಟುವಂತಿದೆ. ಇದಾದ ನಂತರ.. ಆತನ ಸಾಮ್ರಾಜ್ಯ ಬಂದ ನಂತರ ಆತ ಧಾರ್ಮಿಕವಾಗಿ, ಸಾಮಾಜಿಕವಾಗಿ ಹಾಗೂ ವ್ಯಾವಹಾರಿಕವಾಗಿ ಬಹಳಷ್ಟು ಕಾನೂನುಗಳನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ರೂಪಿಸಿದ್ದು ಆತನ ಮತ್ತೊಂದು ಗೆಲುವು. ಪ್ರಜೆಗಳ ಒಲವು, ಆಶೀರ್ವಾದವೂ.. ಆತನ ಆಡಳಿತವನ್ನು ಒಪ್ಪಿಕೊಂಡ ಬಗೆಯೂ ಕಾಣುತ್ತದೆ.


ಹೀಗೆ ಹೇಳುತ್ತಾ ಹೋದರೆ ವೈಜಯಂತಿಪುರದ ಅಧಿನಾಯಕ ಮಯೂರವರ್ಮನ ಕುರಿತು ಹೇಳುವುದು ಸಾಕಷ್ಟಿದೆ. ಹೆಣ್ಣು ದಿಕ್ಕಿಲ್ಲದ ಮನೆಯಲ್ಲಿ ಆತ ಬೆಳೆದು ಬಂದರೂ.. ಮುಂದೆ ಆತನ ಪತ್ನಿ ಶಶಾಂಕಮುದ್ರೆ ಆತನಿಗೆ ತಕ್ಕ ಪತ್ನಿ ಎನಿಸಿಕೊಳ್ಳುತ್ತಾಳೆ. ಮಗ ಚಂದ್ರಾಂಗದ ಕಂಗವರ್ಮ ಇಲ್ಲಿ ಹೆಚ್ಚು ಕಾಣದಿದ್ದರೂ ಆತನ ಉಪಸ್ಥಿತಿ ಕಾಣುತ್ತದೆ. ಚಂಡಸೇನಂತಹಾ ಸ್ನೇಹಿತ ಹಾಗೂ ಸೇನಾನಿ ಆಪ್ತನೆನಿಸುತ್ತಾನೆ. ವೀರ ಯೋಧನಾಗಿದ್ದ ಮಯೂರನ ಅಂತ್ಯ ಮಾತ್ರ ವಿಭಿನ್ನ ರೀತಿಯಲ್ಲಾಗುತ್ತದೆ. ಅದು ಇತಿಹಾಸದ ಆಧಾರಿತವೋ ಅಥವಾ ಲೇಖಕರ ಕಲ್ಪನೆಯೋ ತಿಳಿಯಲಿಲ್ಲ ಅದು ಓದುಗರನ್ನು ಭಾವುಕರನ್ನಾಗಿ ಮಾಡುತ್ತದೆ. 


'ಇತಿಹಾಸ' ಎಂದರೆ 'ಹೀಗೆ ಇತ್ತು' ಎಂಬ ಮಾಹಿತಿಯಾದರೂ.. ಅದನ್ನು ಆಸಕ್ತಿ ಮೂಡುವಂತೆ, ಓದಿಸಿಕೊಂಡು ಹೋಗುವಂತೆ ಕಟ್ಟಿಕೊಡುವಲ್ಲಿ ಲೇಖಕರು ಸಫಲರಾಗಿದ್ದಾರೆ. "ಇತಿಹಾಸವನ್ನು ಕೆಲವೇ ಕೆಲವು ವ್ಯಕ್ತಿಗಳು ನಿರ್ಮಿಸುತ್ತಾರೆ" ಎಂಬ ಮಾತನ್ನು ಉಲ್ಲೇಖಿಸುತ್ತಾರೆ. ಹಾಗೆಯೇ ಅಂತಹ ಐತಿಹಾಸಿಕ ಕಾದಂಬರಿಯನ್ನು ಸಹಾ ಸಮರ್ಥವಾಗಿ ಕಟ್ಟಿಕೊಡುವುದು ಕೆಲವೇ ಕೆಲವರು. ಏಕೆಂದರೆ, ಐತಿಹಾಸಿಕ ಕಾದಂಬರಿಯ ರಚನೆ ಸುಲಭದ ವಿಚಾರವಲ್ಲ. ಅದರಲ್ಲಿಯೂ.. ಸಿಕ್ಕ ಕೆಲವೇ ಮಾಹಿತಿಗಳನ್ನಾಧರಿಸಿ, ಸತ್ಯಕ್ಕೆ ಹತ್ತಿರವಾಗಿರುವ 300 ಪುಟಗಳಷ್ಟು ಕಾದಂಬರಿ ರಚಿಸುವುದು ಸಣ್ಣ ವಿಚಾರವಂತೂ ಅಲ್ಲವೇ ಅಲ್ಲ. ಮಾಹಿತಿಪೂರ್ಣ ಹಾಗೂ ಸೊಗಸಾದ ಕಾದಂಬರಿಯ ಓದು.


1. ಕಾದಂಬರಿಯಲ್ಲಿ ವೀರಶರ್ಮ ಹಾಗೂ ಮಯೂರ ಶರ್ಮ ತಾಣಂದೂರಿನಿಂದ ಕಂಚಿಗೆ ಹೋದ ಸ್ಥಳಗಳ ಕುದುರೆ ದಾರಿಯ ಚಿತ್ರವೊಂದು ಇತಿಹಾಸದ ಹಾದಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯೆನ್ನಿಸಿದೆ.


2. ಬುದ್ಧ ತನ್ನ ಶಾಂತಿ ಹಾಗೂ ಧರ್ಮಪ್ರಚಾರಕ್ಕೆಂದು ಹಾದು ಹೋದ ಕುರಿತು ವಿಚಾರದ ಜೊತೆಗೆ ದಕ್ಷಿಣ ಹಾಗೂ ಉತ್ತರ ರಾಜವಂಶಗಳ ಎಲ್ಲೆಯ ವಿಸ್ತರಣೆ ಅಲ್ಲಲ್ಲಿಗೇ ಇದ್ದದ್ದು ಹೇಗೆ ಎಂಬುದರ ಚಿತ್ರಣ ಕಾಣುತ್ತದೆ.


3. ತಾತ-ಮೊಮ್ಮಗನ ಪ್ರಯಾಣದಲ್ಲಿ ಪ್ರತಿ ಮೂರು ದಿನದ ಪಯಣದಲ್ಲಿ ಬದಲಾಗುತ್ತಿದ್ದ ಜೀವನಶೈಲಿ, ಭಾಷೆ, ರೀತಿ-ನೀತಿಗಳು ಪ್ರಾದೇಶಿಕ ವಿಭಿನ್ನತೆಯನ್ನು ಅರಿವಾಗಿಸುತ್ತವೆ. 


4. ಕೆಲವೆಡೆ ರೈತರೇ ಸೈನಿಕರಾಗಿ ಬದಲಾಗುತ್ತಿದ್ದದ್ದು ವೃತ್ತಿಯಲ್ಲಿ ಅನುಭವ/ಆಯ್ಕೆಯ ನೆಲೆಯಲ್ಲಿ ನೋಡುವಂತಾಗುತ್ತದೆ. ಬ್ರಾಹ್ಮಣರು ಶಸ್ತ್ರ ಮತ್ತು ಶಾಸ್ತ್ರ ಎರಡರಲ್ಲಿಯೂ ಪರಿಣಿತಿ ಹೊಂದುವಾಗ ಜಾತಿ ವ್ಯವಸ್ಥೆಯ ಆಧಾರದಲ್ಲಿ ವೃತ್ತಿ ಗುರುತಾಗುತ್ತಿರಲಿಲ್ಲವೆಂದೂ ಅರಿವಾಗಿಸಿಕೊಳ್ಳಬಹುದು. (ಆದರೆ, ಬ್ರಾಹ್ಮಣನೊಬ್ಬನು ಕತ್ತಿ ಹಿರಿಯುವುದೇ ಎಂದಿತ್ತು ಸಮಾಜ ಎನ್ನುವಾಗ ಪರಶುರಾಮರ ಉದಾಹರಣೆಯನ್ನೂ ನೀಡುವ ಪ್ರಸಂಗವಿದೆ)


5. ವೆಂಗಿರಸ, ವಲ್ಕರಾಜುವಿನಂತಹಾ ನಿಪುಣರ ಅಗತ್ಯತೆ, ಯುದ್ದಕ್ಕೆ ಸೇನೆಯ ಜೊತೆಗೆ ಜಾಗದ ಆಯ್ಕೆಯ ಕೌಶಲ್ಯವನ್ನೂ ತೋರಿದ್ದಾರೆ.


6. ಸಾಮ್ರಾಜ್ಯದ ವಿಸ್ತರಣೆಯಲ್ಲಿ ದಂಡಯಾತ್ರೆಯ ಹಾಗೂ ಗೆದ್ದ ಸ್ಥಳಗಳ ಬಂದೋಬಸ್ತು ಎಷ್ಟು ಅಗತ್ಯವೆಂಬುದನ್ನು ಪಲ್ಲವರ ಹಾಗೂ ಕದಂಬರ ಸಮಯದ ಆಳ್ವಿಕೆಯ ವ್ಯತ್ಯಾಸದಲ್ಲಿ ಮನಗಾಣಬಹುದು.


7. ಭೂಸ್ವರ್ಗ ವೈಜಯಂತಿಪುರವನ್ನು ರಾಜಧಾನಿಯನ್ನಾಗಿಸಿಕೊಂಡದ್ದು ಕಂಡ ಹಾಗೆ ತಾಣಕುಂದೂರಿನ ಪ್ರಣವೇಶ್ವರನನ್ನು ನೆನೆಯುತ್ತಾ.. ಬನವಾಸಿಯಲ್ಲಿ ನೆಲೆಸಿರುವ ಮಧುಕೇಶ್ವರನನ್ನು ಮನೆಯ ದೇವರನ್ನಾಗಿ ಸ್ವೀಕರಿಸಿರುವುದು ಕಾಣುತ್ತದೆ.


8. ಭೂದಾನ, ಕರದಾನ ಹಾಗೂ ತೆರಿಗೆ ಮುಕ್ತ ಕಾಯಿದೆಯನ್ನು ಜಾರಿಗೆ ತಂದು ಓದು ಹಾಗೂ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವವರಿಗೆ ಕರ ವಿಧಿಸದಂತೆ ಮಾಡಿ ಅಖಂಡ ಭಾರತದಲ್ಲೇ ವಿಭಿನ್ನವಾದ ಅಂದರೆ ಶ್ರೀಮಂತರಿಂದ ಹೆಚ್ಚಿನ ಕರ ವಸೂಲಾತಿ, ಬಡವರಿಂದ ಕರಮುಕ್ತ ಪದ್ದತಿ ಜಾರಿಗೆ ತಂದದ್ದು ಕಾಣುತ್ತದೆ.


9. ಭಾಷೆ ಹಾಗೂ ಹಣಕಾಸಿಗೆ ಏಕರೂಪ ವ್ಯವಸ್ಥೆ ತಂದದ್ದು ಗೋಚರವಾಗುತ್ತದೆ. ಬಾರ್ಟರ್ ಸಿಸ್ಟಮ್ ಬದಲಿಗೆ ರಾಜಾಶ್ರಯದಲ್ಲಿ ನಾಣ್ಯಗಳನ್ನು ಮುದ್ರಿಸುವ ಕುರಿತು ಮಾಹಿತಿ ಸಿಗುತ್ತದೆ.


10. ಕಾಳಿದಾಸನ ಪ್ರಸಂಗ, ಹಲ್ಮಿಡಿ ಶಾಸನ ಹಾಗೂ ಚಂದ್ರವಳ್ಳಿಯ ಶಾಸನಗಳ ಕುರಿತು ಪ್ರತ್ಯೇಕವಾಗಿ ಹೆಚ್ಚಿನ ಮಾಹಿತಿ ಇದೆ.


ದಾರಿದೀಪವಾಗಬೇಕಾದ ಇತಿಹಾಸ ಇಲ್ಲಿ ಕೇವಲ ಕಥಾನಕವಾಗದೆ, ಕರ್ನಾಟಕ ಹೆಮ್ಮೆಯಾದ ಕದಂಬರ ಆಧಾರಪೂರ್ಣ ಐತಿಹಾಸಿಕ ಕಾದಂಬರಿಯಾಗಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ