ಕಾದಂಬರಿಯ ಹೆಸರು : ಬಿಡುಗಡೆ
ಪ್ರಭೇದ : ಸಾಮಾಜಿಕ ಕಾದಂಬರಿ
ಲೇಖಕರ ಹೆಸರು : ವಾಣಿ
ಪುಸ್ತಕದ ಬೆಲೆ : 195 ರೂ.
'ಬಿಡುಗಡೆ' ಕಾದಂಬರಿಯಲ್ಲಿ ಉತ್ತರ ಭಾರತದಲ್ಲಿ ಸಂಭವಿಸಿದ್ದ ಚಂಡಮಾರುತದ ಕುರಿತ ಸಂಕಷ್ಟದ ದಿನಗಳನ್ನು ಚಿತ್ರಿಸಿದ್ದಾರೆ. ಲೇಖಕಿ ಇದನ್ನು ಬರೆದ 10 ವರ್ಷಗಳ ನಂತರ ಇದು ಕಾದಂಬರಿಯಾಗಿ ಪ್ರಕಟವಾಯಿತು ಎಂದು ಲೇಖಕಿಯೇ ತಮ್ಮ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಲೇಖಕಿ ವಾಣಿಯವರ ಮೊದಲ ಕಾದಂಬರಿ ಈಗ ಸಾಹಿತ್ಯಲೋಕ ಪ್ರಕಾಶನದಿಂದ ಮತ್ತೆ ಓದುಗರಿಗೆ ದೊರೆತಿದೆ. ಬದುಕಿನ ವಿಸ್ತಾರ ನೋಟ, ಗಾಂಭೀರ್ಯಯುಕ್ತ ನಿರೂಪಣೆ ಇಷ್ಟವಾಯಿತು.
ಈ ಕಾದಂಬರಿಯನ್ನು ಓದಿದ ನಂತರ ನನಗನಿಸಿದ್ದು ವಾಣಿಯವರ ಕೌಟುಂಬಿಕ ಕಾದಂಬರಿಗಿಂತಲೂ ಇದು ವಿಭಿನ್ನ ನೆಲೆಗಟ್ಟಿನಲ್ಲಿ ಚಿತ್ರಿತವಾದ ಕಾದಂಬರಿ. ಕುಟುಂಬ ಹಾಗೂ ಸಾಮಾಜಿಕ ಸೇವೆ ಎರಡನ್ನು ಸಂಭಾಳಿಸಿಕೊಂಡು ಹೋಗುವ ಚಿತ್ರಣ ಇಲ್ಲಿದೆ. ಒಂದು ಚಂಡಮಾರುತ ಎಲ್ಲರ ಬದುಕಿನ ಮೇಲೆಯೂ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದೂ ಈ ಕಾದಂಬರಿಯಲ್ಲಿದೆ.
ರಂಗನೂರಿನ ಶಾಸ್ತ್ರಿಗಳಿಗೆ ಮೂವರು ಮಕ್ಕಳು. ಮೊದಲನೆಯವಳು ಅಮ್ಮಯ್ಯ. ಈಕೆಗೆ ಈಗಾಗಲೇ ವಿವಾಹವಾಗಿ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು, ತಂದೆಯ ಮನೆಗೆ ಸೇರಿದಳು. ತಾಯಿ ಇಲ್ಲದ ತನ್ನ ತಂಗಿ ಹಾಗೂ ತಮ್ಮನನ್ನು ತಾಯಿಯಂತೆ ಸಲಹುತಿದ್ದ ಮಮತಾಮಯಿ.
ಎರಡನೆಯ ಮಗಳು ಮೀನಾಕ್ಷಿ. ಶಾಸ್ತ್ರಿಗಳು ಈಗ ಮೀನಾಕ್ಷಿಗೆ ಮದುವೆ ಮಾಡಬೇಕೆಂದು ವರನನ್ನು ಹುಡುಕುತ್ತಿದ್ದರು. ಆದರೆ, ಮೊದಲ ಮಗಳ ಮದುವೆಯ ವಿಚಾರದಲ್ಲಿ ಸ್ವಲ್ಪ ದುಃಖವಿದ್ದುದರಿಂದ ಇದಕ್ಕಾಗಿ ಅಷ್ಟೊಂದು ಉತ್ಸಾಹದಿಂದೇನೂ ಓಡಾಡುತ್ತಿರಲಿಲ್ಲ. ಆದರೆ, ಅವರ ಗೆಳೆಯ ದಿವಂಗತ ಗೋಪಾಲರಾಯರ ಪತ್ನಿಯಿಂದ ಬಂದ ಒಂದು ಪತ್ರಕ್ಕೆ ಕಾರಣ ತಿಳಿಯಲಿಲ್ಲ. ಜಮೀನಿನ ಕಾಗದ ಪತ್ರಗಳ ಕುರಿತು ಬರೆದ ಒಂದು ಕಾಗದ ಏಕೆಂದು ಅರಿವಾಗದೇ ಅವರನ್ನು ಅವರ ಮತ್ತೊಬ್ಬ ಆತ್ಮೀಯರಾದ.. ಹಿತೈಷಿಗಳೂ ಆಗಿದ್ದ.. ವಕೀಲರಾದ ರಾಯರ ಬಳಿಗೆ ಹೋಗುವಂತೆ ಮಾಡುತ್ತದೆ.
ಜಾಣರಾದ ವಕೀಲರು ಇದರ ಜಾಡು ಹಿಡಿಯುತ್ತಾರೆ. ಗೋಪಾಲರಾಯರ ಮಗನಿಗೆ ಮೀನಾಕ್ಷಿಯನ್ನು ಕೊಡಬೇಕೆಂಬ ಆಸೆ ಇದ್ದಿತು. ಆದರೆ, ಆತ ಇನ್ನೂ ಓದುತ್ತಿದ್ದರಿಂದ, ಆತನ ಆತನಿಗೆ ಈ ಕುರಿತು ಯಾವ ಪ್ರಸ್ತಾಪವನ್ನು ಮಾಡಿರಲಿಲ್ಲ. ಆತನ ಮನಸ್ಸಿನಲ್ಲಿ ಏನಿದೆ ಎಂದು ತಿಳಿದಿರಲಿಲ್ಲ. ಈಗ ಉಪಾಯವಾಗಿ ಅವನನ್ನು ಶಾಸ್ತ್ರಿಗಳ ಮನೆಗೆ ಕಳುಹಿಸಿ ವಧುವನ್ನು ನೋಡುವಂತೆ ಮಾಡುತ್ತಿದ್ದರು ಅವನ ತಾಯಿ. ರಾಮಚಂದ್ರ ಬಂದು ಹೋದ ನಂತರ, ಮದುವೆಯ ಪ್ರಸ್ತಾಪಕ್ಕೂ ಒಪ್ಪಿ ಎರಡೂ ಕಡೆಯ ಆಶೀರ್ವಾದದಿಂದ ಮೀನಾಕ್ಷಿಯನ್ನು ಮದುವೆಯಾದನು.
ಮೀನಾಕ್ಷಿಯನ್ನು ಮದುವೆಯಾದಾಗ ರಾಮಚಂದ್ರ ಇನ್ನೂ ಓದುತ್ತಿದ್ದನು. ತಾನು ಕೆಲಸ ಹಿಡಿಯುವವರೆಗೂ ಮೀನಾಕ್ಷಿ ತನ್ನ ಮನೆಗೆ ಬರುವುದು ಬೇಡವೆಂಬ ತೀರ್ಮಾನ ತಳೆದಿದ್ದ. ತಮ್ಮ ಬಡತನದ ಬಿಸಿ ಅವಳಿಗೆ ತಾಕುವುದು ಬೇಡವೆಂದು. ತಂದೆ ಈಗಾಗಲೇ ತೀರಿ ಹೋಗಿದ್ದರೂ.. ತಾಯಿ ಕಷ್ಟಪಟ್ಟು ಅವನನ್ನು ಹಾಗೂ ಅವನ ತಂಗಿ ಇಂದಿರಾಳನ್ನು ಬೆಳೆಸುತ್ತಿದ್ದರು. ರಾಮಚಂದ್ರ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದ ನಂತರ ಕೆಲಸ ಹುಡುಕಲು ಶುರು ಮಾಡುತ್ತಾನೆ.
ಮೊದಮೊದಲಿಗೆ ಸರಿಯಾದ ಯಾವ ಕೆಲಸವೂ ಸಿಗದೇ.. ಯಾರದ್ದೋ ಸಲಹೆಯ ಮೇರೆಗೆ ಬಾಂಬೆಗೆ ಹೋಗುವಂತಾಗುತ್ತದೆ. ತಾಯಿಯ ಬಳಿ ಇರಬೇಕೆಂಬ ಅಪೇಕ್ಷೆ ಇದ್ದರೂ, ಸದ್ಯಕ್ಕೆ ತಾಯಿಯನ್ನು ನೋಡಿಕೊಳ್ಳಲು.. ಹಾಗೂ ಇಂದಿರಾಳ ಭವಿಷ್ಯವೇ ಮುಖ್ಯವಾಗಿ ಕಂಡಿದ್ದರಿಂದ ಕೆಲಸಕ್ಕೆ ದೂರದ ಊರಿಗೆ ಹೋಗುವುದು ರಾಮಚಂದ್ರನಿಗೆ ಅನಿವಾರ್ಯವಾಯಿತು. ಆಗ ರಾಮಚಂದ್ರನ ಜಾಗದಲ್ಲಿ ಆಸರೆಯಾಗಿ ನಿಂತದ್ದು ವಿಶ್ವನಾಥ.
ವಿಶ್ವನಾಥ ಬೇರಾರೂ ಅಲ್ಲ.. ವಕೀಲರಾಗಿದ್ದ ರಾಯರ ಮನೆಯಲ್ಲಿ ಓದುತ್ತಿದ್ದ ಹುಡುಗ. ರಾಯರ ಪತ್ನಿಗೆ ಹೆಚ್ಚಿನ ದಿನಗಳಲ್ಲಿ ಅನಾರೋಗ್ಯ. ಹೆಚ್ಚಾಗಿ ಅವರು ಹಾಸಿಗೆ ಹಿಡಿದಿರುತ್ತಿದ್ದರು. ಹಾಗಾಗಿ ಹಿರಿಯ ಮಗಳಾದ ಮಣಿ ಎಲ್ಲವನ್ನು ಸಂಭಾಳಿಸುತ್ತಿದ್ದಳಾದರೂ.. ರಾಯರ ಮನೆಯಲ್ಲಿ ಬಲಗೈ ಬಂಟನಂತಿದ್ದವನು, ಎಲ್ಲದಕ್ಕೂ ನೆರವಾಗುತ್ತಿದ್ದವನು ವಿಶ್ವನಾಥನೇ. ಅವರ ಮನೆಯಲ್ಲಿ ಆತನನ್ನು ಮತ್ತೊಂದು ಹೆಸರಿನಿಂದ 'ರಾಜಣ್ಣ' ಎಂದೇ ಸಂಭೋಧಿಸುತ್ತಿದ್ದರು. ಎಲ್ಲರ ಪ್ರೀತಿಯ ಕಣ್ಮಣಿಯಾಗಿದ್ದ ಅವನು ಓದಿನ ವಿಚಾರವಾಗಿ ಅವರ ಮನೆಯನ್ನು ತೊರೆದು ಬೆಂಗಳೂರಿಗೆ ಬರಬೇಕಾಗುತ್ತದೆ. ಆಗ ಅವನು ನೆಲೆಸಿದ್ದು ರಾಮಚಂದ್ರನ ಮನೆಯ ಹತ್ತಿರವೇ.
ವಿಶ್ವನಾಥನನ್ನು ಮಣಿಗೆ ವಿವಾಹ ಮಾಡಬೇಕೆಂಬುದು ರಾಯರ ಮನಸ್ಸಿನಲ್ಲಿರುತ್ತದೆ. ಆದರೆ, ಓದಿಗೆ ದೂರ ಹೋದ ವಿಶ್ವನಾಥ ಮತ್ತೆ ರಾಯರ ಮನೆಗೆ ಬಂದಾಗ.. ಮೊದಲಿನ ಆತ್ಮೀಯತೆ ಇಲ್ಲದೆ, ಯಾವುದೋ ಪೂರ್ವಗ್ರಹ ಪೀಡಿತ ಮನಸ್ಸಿನಿಂದ ರಾಯರು ಕೊಂಚ ಗಂಭೀರವಾಗಿ ಹಾಗೂ ಅವನೊಡನೆ ಮುಖ ಬಿಗಿದುಕೊಂಡೇ ಇರುವ ಅನುಭವವಾಗಿ ಅವರಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡುತ್ತಾನೆ. ಹಾಗಾಗಿ, ಬೆಂಗಳೂರಿನಲ್ಲಿ ಓದು ಮುಗಿಸಿ, ಆಗಷ್ಟೇ.. ಕರೆ ನೀಡಿದ್ದ ಸೈನಿಕ ಸೇವೆಗೆ ಅರ್ಜಿ ಸಲ್ಲಿಸಿ ಸೈನ್ಯಕ್ಕೆ ಸೇವೆ ಸಲ್ಲಿಸಲು ಹೊರಟು ನಿಲ್ಲುತ್ತಾನೆ.
ಇತ್ತ ರಾಮಚಂದ್ರನ ತಾಯಿಯ ಆರೋಗ್ಯ ಪರಿಸ್ಥಿತಿ ಹದಗೆಟ್ಟು, ಇಂದಿರಾಳನ್ನು ಚಿಕ್ಕ ವಯಸ್ಸಿನಲ್ಲಿಯೇ ಕೈಬಿಟ್ಟು..ಮೀನಾಕ್ಷಿಯ ಮಡಿಲಿಗೆ ಹಾಕಿ ಕಣ್ಮುಚ್ಚುತ್ತಾರೆ. ಮೀನಾಕ್ಷಿ ಆಕೆಯನ್ನು ನಾದಿನಿಯಂತೆ ಕಾಣದೇ ಸ್ವಂತ ಮಗಳಂತೆಯೇ ಕಾಣುತ್ತಾಳೆ. ಅಕ್ಕನ ಕಣ್ಗೊಂಬೆಯಂತೆ ಬೆಳೆದಿದ್ದ ಅವಳಿಗೆ, ತನಗಿಂತ ಸ್ವಲ್ಪ ಚಿಕ್ಕವಳಾಗಿದ್ದ ಹುಡುಗಿಗೆ ತಾಯಿಯಂತೆ ಆಸರೆ ನೀಡಿ ಮನೆಗೆ ಬೆಳಕಾಗುವ ಸಂದರ್ಭ ಬರುತ್ತದೆ. ಈಗ ರಾಮಚಂದ್ರನ ಜೊತೆಗೆ ಇಂದಿರೆ ಹಾಗೂ ಮೀನಾಕ್ಷಿಯ ವಾಸವೂ ಮುಂಬೈಯಲ್ಲಿಯೇ.
ರಾಮಚಂದ್ರನ ಗುಣವು ಬದಲಾಗಿರುತ್ತದೆ ಹಣ ಸೇರಿದಂತೆ ನಗರದ ನಾಗರಿಕತೆಗೆ ಮರುಳಾಗಿ ಅಲ್ಲಿಯ ದೊಡ್ಡಸ್ತಿಕೆಯನ್ನು ಮೈಗೂಡಿಸಿಕೊಳ್ಳುತ್ತಾನೆ. ಆದರೆ, ಮೀನಾಕ್ಷಿ ಶಾಸ್ತ್ರಿಗಳ ಮಗಳಾಗಿದ್ದವಳು.. ಆಕೆಯ ಸಂಸ್ಕಾರ ಅಲ್ಲಿಗೆ ಹೊಂದಿಕೊಳ್ಳುವಂತೆ ಮಾಡಿದರೂ.. ಅಲ್ಲಿನ ವಾತಾವರಣ ಅವಳಿಗೆ ಖುಷಿ ಕೊಡುವುದಿಲ್ಲ. ಆದರೆ, ರಾಮಚಂದ್ರ ಹಾಗೂ ಇಂದಿರೆಗಾಗಿ ಅದೆಲ್ಲವೂ ಅನಿವಾರ್ಯ. ಆ ಕಾರಣಕ್ಕೆ ಅವಳು ಗೊಣಗದೇ ಎಲ್ಲವನ್ನೂ ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗುತ್ತಿರುತ್ತಾಳೆ.
ತವರು ಮನೆಯ ಹಾದಿ ಅವಳಿಗೆ ದೂರವೇ ಆಗಿಬಿಡುತ್ತದೆ. ಇದ್ದ ಏಕೈಕ ಸಹೋದರನಾದ ಚಂದುವಿನ ಮದುವೆಗೂ ಹೋಗಲಾಗುವುದಿಲ್ಲ. ಅದಕ್ಕೆ ಕಾರಣ, ಇಂದಿರೆಯ ಪರೀಕ್ಷೆ. ಮತ್ತೆ ಅವಳು ರಂಗನೂರಿಗೆ ಬಂದಾಗ ಏಳೆಂಟು ವರ್ಷವೇ ಕಳೆದಿರುತ್ತದೆ. ಎಲ್ಲವೂ ಬದಲಾಗಿದ್ದರೂ.. ಬದಲಾಗದ್ದು ಅಮ್ಮಯ್ಯ ಹಾಗೂ ಶಾಸ್ತ್ರಿಗಳು.
ಚಂದ್ರುವಿನ ಹೆಂಡತಿ ಸೀತಮ್ಮ ಸ್ನೇಹಿತೆಯಂತೆ ಎಲ್ಲದಕ್ಕೂ ಹೊಂದಿಕೊಳ್ಳುವ ಸ್ವಭಾವದವಳು. ಈಗ ಅವರಿಗೆ ಮಗನೂ ಇದ್ದನು. ಪಟ್ಟಣದಲ್ಲೇ ಬೆಳೆದ ಇಂದಿರಾ ಈ ಸಂದರ್ಭದಲ್ಲಿ ಹಳ್ಳಿಗೂ ಹೊಂದಿಕೊಳ್ಳುತ್ತಾಳೆ. ಆಗ ಅಲ್ಲಿ ಪರಿಚಯವಾದದ್ದು ಮೀನಾಳಿಗೆ ವಾವೆಯಲ್ಲಿ ಸಹೋದರನಾಗುವ ಮೂರ್ತಿ. ಆತ ಆಗಷ್ಟೇ ತನ್ನ ಡಾಕ್ಟರ್ ಕಲಿಕೆಯನ್ನು ಮುಗಿಸಿರುತ್ತಾನೆ.
ಊರಿನಲ್ಲಿ ಹಲವಾರು ದಿನ ಇದ್ದು ಹೋಗಲು ಬಂದಿದ್ದವರಿಗೆ.. ರಾಮಚಂದ್ರನ ಆಫೀಸ್ ನಿಂದ ಬರುವ ತುರ್ತು ಕರೆ ಅರ್ಧದಲ್ಲಿಯೇ ಹೊರಡುವಂತೆ ಮಾಡುತ್ತದೆ. ಕಾರಣವೆಂದರೆ, ಕಲ್ಕತ್ತಾದಲ್ಲಿ ಈಗಾಗಲೇ ಪ್ರವಾಹ ಸಂಭವಿಸಿದ್ದು, ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿರುತ್ತದೆ. ಅದೆಲ್ಲವನ್ನೂ ಮತ್ತೆ ಮೊದಲಿನಂತೆ ಮಾಡುವ, ಸದ್ಯಕ್ಕೆ ಸಹಾಯಕ್ಕೆ ನಿಲ್ಲುವ ಹೊಣೆ ಇವನ ಮೇಲೆಯೂ ಇರುತ್ತದೆ.
ಆ ಜನರ ಪರಿಸ್ಥಿತಿಯಂತೂ ಹೇಳುವಂತದ್ದಲ್ಲ.. ಎಲ್ಲವನ್ನೂ ಕಳೆದುಕೊಂಡು ಒಂದೇ ಸಲಕ್ಕೆ ಬೀದಿಗೆ ಬಂದವರು. ಉಳಿಯಲು ತಮ್ಮದೇ ಆದ ಸ್ಥಳವಿಲ್ಲದೆ.. ಆರೋಗ್ಯದ ಸಮಸ್ಯೆ, ಸೋಂಕು ರೋಗಗಳಿಂದಲೂ ಬಳಲುತ್ತಾ, ತಮ್ಮ ಆತ್ಮವಿಶ್ವಾಸವನ್ನೂ ಕಳೆದುಕೊಂಡಿರುತ್ತಾರೆ. ಆಗ, ಅವರ ಜೊತೆಗೆ ನಿಂತ ಮೀನಾಕ್ಷಿ ತನ್ನ ತಾಯಿ ಹೃದಯದಿಂದ ಎಲ್ಲರಿಗೂ ಸಂತೈಸಿ, ಸಾಂತ್ವನ ನೀಡುತ್ತಾ ಅವರಲ್ಲಿ ಮತ್ತೆ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸುತ್ತಾಳೆ.
ಮೂರ್ತಿಗೂ ಪತ್ರ ಬರೆದು ನಿನ್ನ ಸೇವೆಗೆ ಇಲ್ಲಿ ಸರಿಯಾದ ಸ್ಥಳವಿದೆ ಎಂದು ಅಲ್ಲಿಗೆ ಕರೆಸಿಕೊಳ್ಳುತ್ತಾಳೆ. ಮೂರ್ತಿಯ ಆತ್ಮವಿಶ್ವಾಸ ತುಂಬುವ ಮಾತುಗಳು ಹಾಗೂ ಅವನ ಕೈಗುಣದಿಂದ ಅಲ್ಲಿನ ಜನರು ದಿನೇ ದಿನೇ ಆರೋಗ್ಯ ವೃದ್ಧಿಸಿಕೊಳ್ಳುತ್ತಾರೆ. ಮೀನಾಕ್ಷಿಯ ಜೊತೆಗೆ ಇಂದಿರೆಯೂ ಅಲ್ಲಿನ ಮಕ್ಕಳಿಗೆ ಕಲಿಸುವ ಹಾಗೂ ಅಲ್ಲಿನ ಸೇವಾ ಶಿಬಿರದಲ್ಲಿ ಸೇವೆ ಸಲ್ಲಿಸುವ ಕಾಯಕದಲ್ಲಿ ತೊಡಗಿ ಕೊಳ್ಳುತ್ತಾಳೆ. ಕ್ರಮೇಣ ಎಲ್ಲವೂ ತಹಬದಿಗೆ ಬರುವಂತಾಗುತ್ತದೆ.
ಮೀನಾಕ್ಷಿಗೆ ನಿಜವಾದ ನೆಮ್ಮದಿ ದೊರೆತದ್ದು ಈಗಲೇ.. ಜನರ ಸೇವೆಯಲ್ಲಿ, ಅವರ ಸ್ನೇಹಪೂರ್ವಕ ಪರಿಸರದಲ್ಲಿ, ತನ್ನ ನೆಮ್ಮದಿಯನ್ನು ಕಂಡುಕೊಳ್ಳುತ್ತಾಳೆ. ಆದರೆ, ಆ ಸೇವೆಯ ಕೆಲಸ, ಒತ್ತಡ ಹಾಗೂ ಆಕೆ ಗರ್ಭಿಣಿಯಾದ್ದರಿಂದ ಎಲ್ಲವೂ ಅವಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅವಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೂರ್ತಿಯ ಸಲಹೆ ಮೇರೆಗೆ ರಂಗನೂರಿಗೂ ಕಳುಹಿಸದೆ.. ಮನೆಯಲ್ಲಿಯೇ ನರ್ಸ್ ಅನ್ನು ನೇಮಕ ಮಾಡಿ ಚಿಕಿತ್ಸೆ ಕೊಡಿಸು ಕೊಡಿಸುತ್ತಿರುತ್ತಾನೆ ರಾಮಚಂದ್ರ. ಆಕೆಗೆ ಗಂಡು ಮಗುವಾಗುತ್ತದೆ.
ಅವಳಿಗಾಗಿ ಶಾಸ್ತ್ರಿಗಳು ಹಾಗೂ ಅಮ್ಮಯ್ಯ ತಾವು ಅಲ್ಲಿಗೆ ಬರುತ್ತೇವೆಂದು ಕಾಗದ ಬರೆಯುತ್ತಾರೆ. ಜೊತೆಗೆ, ಇಂದಿರೆಯ ವಿವಾಹದ ಕುರಿತೂ ಅಲ್ಲಿ ಉಲ್ಲೇಖಿಸಿರುತ್ತಾರೆ. ಮೀನಾಕ್ಷಿಗೆ ಇಂದಿರೆಯನ್ನು ಮೂರ್ತಿಗೆ ವಿವಾಹ ಮಾಡಿಸುವ ಆಸೆ.. ಇದಕ್ಕೆ ಪುಷ್ಟಿ ಕೊಟ್ಟಂತೆ ಮೂರ್ತಿ ಹಾಗೂ ಇಂದಿರೆಯೂ ದಿನೇ ದಿನೇ ಹತ್ತಿರವಾಗಿರುತ್ತಾರೆ.
ಆದರೆ, ರಾಮಚಂದ್ರನ ಆಸೆಯೇ ಬೇರೆ ಇರುತ್ತದೆ. ಆತನಿಗೆ ಇಂದಿರೆಯನ್ನು ಕ್ಯಾಪ್ಟನ್ ವಿಶ್ವನಾಥನಿಗೆ ಕೊಡಲು ಮನಸ್ಸಿರುತ್ತದೆ. ಅದಕ್ಕೊಂದು ಕಾರಣವೂ ಇಲ್ಲದ್ದಿಲ್ಲ... ತನ್ನ ಸ್ನೇಹಿತನಾದ ವಿಶ್ವನಾಥನನ್ನು ತಾನು ಇರುವಲ್ಲಿಗೆ ಕರೆಸಿಕೊಳ್ಳುತ್ತಾನೆ. ಆದರೆ, ಬಂದಾಗ ವಿಶ್ವನಾಥನ ಆರೋಗ್ಯವೂ ಅಷ್ಟು ಸರಿ ಇರುವುದಿಲ್ಲ.
ವಿಶ್ವನಾಥನಿಗೆ ಈ ಕಾರಣದಿಂದಾಗಿಯೇ ಅಷ್ಟು ಆಪ್ತರಾಗಿದ್ದ ಮಣಿಯ ತಾಯಿ ಅವಳನ್ನು ವಿವಾಹವಾಗಲು ಕೇಳಿದಾಗ ನಯವಾಗಿಯೇ ತಿರಸ್ಕರಿಸಿ, ಅವಳನ್ನು ತನಗಿಂತ ಯಾರಾದರೂ ಯೋಗ್ಯವರನಿಗೆ ಕೊಟ್ಟು ಮದುವೆ ಮಾಡುವಂತೆ ಕೇಳಿಕೊಳ್ಳುತ್ತಾನೆ.
ರಾಮಚಂದ್ರ ಇಂದಿರೆಯನ್ನು ವಿಶ್ವನಾಥನಿಗೆ ಕೊಟ್ಟು ಮದುವೆ ಮಾಡಬೇಕು ಎನ್ನುವುದಕ್ಕೆ ಕಾರಣವೇನು..?? ವಿಶ್ವನಾಥನು ತಾನು ಮಣಿಯನ್ನು ಇಷ್ಟಪಡುತ್ತಿದ್ದರೂ.. ನಿರಾಕರಿಸಲು ಕಾರಣವೇನು..?? ಇಂದಿರೆಯ ಆಯ್ಕೆ ಕ್ಯಾಪ್ಟನ್ ವಿಶ್ವನಾಥನೋ ಅಥವಾ ಡಾಕ್ಟರ್ ಮೂರ್ತಿಯೋ..??
ಇಲ್ಲಿ ಯಾರು ಯಾರಿಂದ ಬಿಡುಗಡೆ ಪಡೆಯುತ್ತಾರೆ ಹಾಗೂ ಯಾವುದರಿಂದ ಬಿಡುಗಡೆ ಪಡೆಯುತ್ತಾರೆ..?? ಬಿಡುಗಡೆ ಪಡೆಯುವ ಆಲೋಚನೆ ಮಾಡಿದವರಿಗೆ ಬಿಡುಗಡೆ ಸಿಕ್ಕಿತೇ..??
ಇಲ್ಲಿ ಪಡೆಯುವ ಬಿಡುಗಡೆಗೆ ಋಣಮುಕ್ತವಾಗಿಸುವ ಅವಕಾಶವಿದೆ.. ಈ ಕಾದಂಬರಿಯ ಶೀರ್ಷಿಕೆ ಮಾರ್ಮಿಕವಾಗಿದೆ ಎಂದೆನಿಸಿತು. ಪ್ರವಾಹದ ಸಂಧರ್ಭದ ನೋವಿನ ಚಿತ್ರಣ ಹೆಚ್ಚಿಲ್ಲವಾದರೂ . ಆತ್ಮ ವಿಶ್ವಾಸ ತುಂಬುವ ಪಾಸಿಟಿವಿಟಿ ಇದೆ. ನೆಮ್ಮದಿಯ ದಿನಗಳನ್ನು ಬಯಸುವ ಹಾಗೂ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎನ್ನುವುದನ್ನು ಕೂಡ ಅಷ್ಟೇ ಚಂದವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕಿ.
1. ಈ ಕಾದಂಬರಿ ವಾಸ್ತವಕ್ಕೆ ಭಾವಪೂರ್ಣವಾಗಿ, ಮನುಷ್ಯನ ವರ್ತನೆಗಳಿಂದ ಪ್ರಸ್ತುತವಾದರೂ.. ಆಚರಣೆ (ವಿವಾಹದ ಕುರಿತು) ಹಾಗೂ ಪರಿಸರ ಅಂದಿನ ಸಾಮಾಜಿಕ ಜೀವನಕ್ಕೆ ಕನ್ನಡಿ ಹಿಡಿಯುವಂತಿದೆ
2. ಸಾಮಾಜಿಕ ಕಾದಂಬರಿ ಎಂದಾಕ್ಷಣ ಅದು ಕೌಟುಂಬಿಕ ಕಾದಂಬರಿಯಂತೆ ಮಾತ್ರ ಚಿತ್ರಿತವಾಗಿರದೆ, ಸಮಾಜದ ಸ್ಥಿತಿಗತಿ ಹಾಗೂ ತಲ್ಲಣಗಳಿಗೆ ಸ್ಪಂದಿಸಬೇಕಾದ ರೀತಿಯನ್ನು ಕಟ್ಟಿಕೊಟ್ಟಿದೆ.
3. ಬಡತನದಿಂದ ಮೇಲೆ ಬಂದವರು ಕೆಲವೊಮ್ಮೆ ಹತ್ತಿದ ಏಣಿಯನ್ನು ಮರೆತು ಮೇಲ್ವರ್ಗದ ಬದುಕಿಗೆ ಮಾರುಹೋಗುತ್ತಾರೆ. ಆದರೆ, ಹುಟ್ಟಿನಿಂದ ಬಂದ ಸಂಸ್ಕಾರವಿದ್ದಾಗ ಮಾತ್ರವೇ ಅದನ್ನು ಸಮಚಿತ್ತತೆಯಿಂದ ನಿಭಾಯಿಸಲು ಸಾಧ್ಯ ಎನ್ನುವುದನ್ನು ಮೀನಾಕ್ಷಿಯ ಪಾತ್ರ ಮನಗಾಣಿಸುತ್ತದೆ.
4. ಹೆಣ್ಣಿಗೆ ತಾಯ್ತನವೆಂಬುದು ಮಗುವನ್ನು ಹೆತ್ತು, ಪೋಷಿಸಿಯೇ ಅನುಭವಿಸುವ ಪಟ್ಟವಲ್ಲ. ಸ್ವಂತ ತಂಗಿಯನ್ನು ಮಗಳಂತೆ, ನಾದಿನಿಯಂತೆ ಪೋಷಿಸುವವರು ಹೆಣ್ಣಿನ ಸಹಜ ಸ್ವಭಾವವಾದ ತಾಯ್ತನಕ್ಕೆ ರೂಪಕದಂತಿವೆ. ಹೆರದೆಯೂ ತಾಯಿಯಾದ ಪರಿ ಕಾಣುತ್ತದೆ.
5. ಸೇವಾಶಿಬಿರ ಬಡವ-ಶ್ರೀಮಂತಿಕೆಯ ಭೇದವಳಿದ ಮಾನವೀಯತೆಯ ಮಂದಿರವಾಗಿದೆ. ಹಠಾತ್ತನೆ ಎದುರಾದ ಕಷ್ಟದ ದಿನಗಳು ಇಲ್ಲಿ ಮನುಷ್ಯನ ಅಹಂಕಾರಕ್ಕೆ ಪರಿಸರ ಒಡ್ಡಿದ ತಡೆಯಂತೆ ಕಾಣುತ್ತದೆ.
6. ಸೈನ್ಯಕ್ಕೆ ಸೇರುವ ಪ್ರಕರಣ ಅಂದಿನ ದಿನದಲ್ಲಿ ಇದ್ದ ದೇಶಭಕ್ತಿ ಹಾಗೂ ಅದರ ಅಗತ್ಯತೆಯನ್ನು ಬಿಡಿಸಿಟ್ಟಿದೆ.
7. ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೆಂಬುದರ ಅರಿವಾಗುತ್ತದೆ. ಅನಾರೋಗ್ಯ ಹಾಗೂ ಮಾನಸಿಕ ಆರೋಗ್ಯ ಎರಡರ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ತೋರಿದ್ದಾರೆ ಲೇಖಕಿ.
8. ಈ ಕಾದಂಬರಿಯಲ್ಲಿ ಎಲ್ಲಿಯೂ ಕೌಟುಂಬಿಕ ಕಲಹದ ಪ್ರಸಂಗವಿಲ್ಲ. ಬದಲಾಗಿ, ಹೊಂದಿ ಬಾಳುವ, ತಾಳ್ಮೆಯ, ಸ್ನೇಹಪೂರ್ವಕ ಗುಣಗಳಿವೆ. ಹಾಗೆಂದು, ಆ ಕಾಲಘಟ್ಟದಲ್ಲಿ ಎಲ್ಲರೂ ಹಾಗೆಯೇ ಇದ್ದಿರಬಹುದು ಎಂದಲ್ಲ.. ಬದಲಾಗಿ, ಓದುಗರಿಗೆ ತೋರಬೇಕಾದ ಕುಟುಂಬ ಹಾಗೂ ಅವರ ಮನಸ್ಸಿನಲ್ಲಿ ಮೂಡಿಸಬೇಕಾದ ಕುಟುಂಬವಿದೆ.
9. ಚಿಕಿತ್ಸೆ ಮಾಡುವವರಲ್ಲಿ ಕೈಗುಣದ ಜೊತೆಗೆ ಸ್ನೇಹಪರತೆ ಇದ್ದಾಗ ರೋಗಿಯ ಅರ್ಧ ರೋಗ ವಾಸಿಯಾದಂತೆ ಎನ್ನುವುದು ಇಲ್ಲಿನ ಚಿಕಿತ್ಸಕರ ಕೃತಿಯಲ್ಲಿ ಕಂಡುಬರುತ್ತದೆ.
10. ಆತಂಕದ ವಾತಾವರಣವನ್ನು ಮೀರಿ ನಿಲ್ಲುವ ಧೈರ್ಯ ಹಾಗೂ ಪಾಸಿಟಿವಿಟಿ ಕೇವಲ ಅಂದಿನ ಪರಿಸ್ಥಿತಿಗೆ ಮಾತ್ರವಲ್ಲದೆ ಜೀವನದುದ್ದಕ್ಕೂ ಇದ್ದಾಗ ಕಷ್ಟಗಳಿಂದ ಬಿಡುಗಡೆ ಹೊಂದಬಹುದು. ಅದಕ್ಕೆ ಮತ್ತೊಬ್ಬರು ಪ್ರೇರಕರಾದರೂ ಅಂತಃಶಕ್ತಿಯ ಪ್ರಾಮುಖ್ಯತೆಯನ್ನು ಹೇಳಿದ್ದಾರೆ.
ಈ ಕಾದಂಬರಿಯನ್ನು ಓದಿದ ನಂತರ ಇದರ ಗುಂಗಿನಿಂದ 'ಬಿಡುಗಡೆ' ಪಡೆಯುವುದು ಅಷ್ಟೇನೂ ಸುಲಭವಾಗಿಲ್ಲ ಎನ್ನಿಸಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ