ಬುಧವಾರ, ಏಪ್ರಿಲ್ 22, 2026

ವಿಷನ್ ಟು ಇಂಡಿಯಾ ಎಂಬ ಧ್ಯೇಯದ ಲೆನ್ಸ್ ಕಾರ್ಟ್ ( ಬ್ಯುಸಿನೆಸ್ ಡೈರಿ ಪುಟ - 03)


ಮೊದಲೆಲ್ಲಾ ಕನ್ನಡಕ ಹಾಕಿದ್ದಾರೆ ಎಂದರೆ ಏನೋ ಕಣ್ಣಿನ ಸಮಸ್ಯೆ   ಇರಬಹುದು ಎಂದು ತಿಳಿಯುತ್ತಿದ್ದರು. ಅಲ್ಲದೇ, ಕನ್ನಡಕದ ಗ್ಲಾಸ್ ಹಾಗೂ ಫ್ರೇಮ್ ನ ಬೆಲೆ ದುಬಾರಿ ಎನ್ನಿಸುತ್ತಿತ್ತು. ಈಗ ಕನ್ನಡಕ ಧರಿಸುವವರ ಸಂಖ್ಯೆ ಹೆಚ್ಚಿದೆ..ಹಾಗೆಂದು, ಕೇವಲ ಕಣ್ಣಿನ ಸಮಸ್ಯೆ ಇದೆ ಎಂದಲ್ಲ. ಬದಲಾಗಿ, ತಲೆನೋವಿಗೆ ಅಥವಾ ಮುನ್ನೆಚ್ಚರಿಕಾ ಕ್ರಮವಾಗಿ ರೀಡಿಂಗ್ ಗ್ಲಾಸ್ ಬಳಸುವವರು, ಸಾಫ್ಟ್ವೇರ್ ಉದ್ಯೋಗ ಅಥವಾ ಹೆಚ್ಚು ಕಂಪ್ಯೂಟರ್ ಬಳಸುವವರು ಡ್ರೈ ಐ ಸಮಸ್ಯೆಯಿಂದ ದೂರ ಉಳಿಯಲು ಕೂಡಾ ಕನ್ನಡಕಗಳನ್ನು ಬಳಸುತ್ತಾರೆ. ಇಲ್ಲವೇ, ಕೂಲಿಂಗ್ ಗ್ಲಾಸ್, ಗಾಗಲ್ಸ್ ಹೆಸರಿನಲ್ಲಿ , ಅಥವಾ ಸ್ಟೈಲ್ ಗಾಗಿ ಕೂಡಾ ಇಂದು ಕನ್ನಡಕ ಬಳಸುತ್ತಾರೆ. ಕಾರಣ ಏನೇ ಇದ್ದರೂ.. ಇಂದು ಹೆಚ್ಚಿನವರ ಬಳಿ ಗಾಗಲ್ಸ್, ಕನ್ನಡಕ ಇರುತ್ತವೆ. ಕನ್ನಡಕ ಧರಿಸುವ ಅವಶ್ಯಕತೆ ಇದ್ದೂ ತಮಗೆ ಅದರಿಂದ ಕಿರಿಕಿರಿ ಉಂಟಾಗುತ್ತಿದ್ದರೆ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಆದರೆ, ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಇವುಗಳು ಕೈಗೆಟುಕುವ, ಕಡಿಮೆ ಖರ್ಚಿನಲ್ಲಿ ದೊರೆಯುತ್ತವೆ.


'ಬಳಕೆದಾರರು ಹೆಚ್ಚಾದಾಗ ಉತ್ಪನ್ನಗಳ ಬೆಲೆ ಇಳಿಕೆಯಾಗುತ್ತದೆ' ಎಂಬ ಮಾತು ಈಗ ಹೆಚ್ಚಿನವುಗಳಿಗೆ ಅಪ್ಪ್ಲೈ ಆಗುವುದಿಲ್ಲ. ಆದರೆ, ಇಂತಹಾ ಉತ್ಪನ್ನಗಳು ಸಾಮಾನ್ಯರ ಕೈಗೆಟುಕುವಂತೆ ಮಾಡುವುದು ಇಂತಹಾ ಕಷ್ಟಗಳನ್ನು ಅರಿತ ಯಾವುದಾದರೂ ಕಂಪೆನಿ. ಅಮೆಜಾನ್, ಪ್ಲಿಪ್ ಕಾರ್ಟ್ ಹಾಗೂ ಇನ್ನಿತರ ಆನ್ಲೈನ್ ಉದ್ಯಮಗಳು ನಿರ್ಲಕ್ಷ್ಯ ಮಾಡಿದ್ದ ಕನ್ನಡಕದ ಉದ್ಯಮವನ್ನು ಆನ್ಲೈನ್ ನಲ್ಲಿ ಇಂದು ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿರುವ , ಕನ್ನಡಕ ಉದ್ಯಮದಲ್ಲಿಯೇ ರೆವಲ್ಯೂಷನ್ ಅನ್ನು ಸೃಷ್ಟಿಸಿದ ಇಂತಹಾ ಕಂಪೆನಿ ಲೆನ್ಸ್ ಕಾರ್ಟ್. ಇಂದು ಲೆನ್ಸ್ ಕಾರ್ಟ್ ಗೆ ಜಿ.ಕೆ.ಬಿ ಆಪ್ಟಿಕಲ್ಸ್, ಕೂಲ್‌ ವಿಂಕ್ಸ್, ಸ್ಪೆಕ್ಸ್‌ ಮೇಕರ್ಸ್, ಡೀಲ್ಸ್ ಫಾರ್ ಆಪ್ಟಿಕಲ್ಸ್, ಲೆನ್ಸ್‌ ಬಜಾರ್, ವಿಷನ್ ಎಕ್ಸ್‌ಪ್ರೆಸ್ ಮತ್ತು ಟೈಟಾನ್ ಐಪ್ಲಸ್ ಹೀಗೆ ಹತ್ತು ಹಲವಾರು ಪ್ರಬಲ ಸ್ಪರ್ಧಿಗಳು ಹುಟ್ಟಿಕೊಂಡಿದ್ದರೂ.. ಅದರ ವರ್ಚಸ್ಸು ಕಡಿಮೆಯಾಗಿಲ್ಲ.


  ಕನ್ನಡಕದ ಆಯ್ಕೆ ಏನೂ ಸುಲಭವಾಗಿರುವುದಿಲ್ಲ. ಅದರಲ್ಲೂ ಯಾವುದೋ ಒಂದು ಕೊಂಡರಾಯಿತು ಎಂಬ ಮನಸ್ಥಿತಿ ಈಗಿಲ್ಲ. ಅದರಲ್ಲಿಯೂ ಭಾರತದಲ್ಲಿ ಕೈಯಲ್ಲಿ ಮುಟ್ಟಿ ನೋಡಿ ಕ್ವಾಲಿಟಿ ಪರೀಕ್ಷಿಸಿ ಅದನ್ನು ಹಾಕಿ ನಂತರ ಅದು ತನ್ನ ಮುಖ ಚಹರೆಗೆ ಸೂಟ್ ಆಗುತ್ತದೆಯೇ ಇಲ್ಲವೇ ಎಂದು ಪರೀಕ್ಷಿಸಿ, ಕನ್ನಡಕ ಅರ್ಧ ಮುಖವನ್ನು ಮುಚ್ಚುವಂತಿದೆಯಾ ಎಂದು ಪರೀಕ್ಷಿಸಿ, ಕನ್ನಡಕ ಧರಿಸಿ ಅತ್ತಿತ್ತ ನೋಡಿ ಲೂಸ್ ಇದೆಯಾ ಅಥವಾ ಸರಿಯಾಗಿ ಕೂರುತ್ತಿದೆಯಾ ಅಥವಾ ಮೂಗಿನ ಬಳಿ ಒತ್ತುತ್ತಿದೆಯಾ ಎಂದು ಪರಿಶೀಲಿಸಿಯೇ ಕೊಳ್ಳುವ ಜನರೇ ಹೆಚ್ಚು ಇದ್ದಾಗ ಕನ್ನಡಕಕ್ಕೆ ಆನ್ಲೈನ್ ಬ್ಯುಸಿನೆಸ್ ತರುವುದು ಅಂತಹಾ ಸಂಧರ್ಭದಲ್ಲಿ ಕೈಯ್ಯಲ್ಲಿ ಮುಟ್ಟಿ ನೋಡದೆ, ಮುಖಕ್ಕೆ ಧರಿಸದೇ ಕನ್ನಡಕ ಕೊಳ್ಳುವುದು ಎಂದರೆ ಅದನ್ನು ಜನ ಒಪ್ಪುವುದು ಎಂದರೆ ಸುಲಭದ ಮಾತಾಗಿರಲಿಲ್ಲ. ಅಷ್ಟಕ್ಕೂ ಈ ಬ್ಯುಸಿನೆಸ್ ಐಡಿಯಾ ಹುಟ್ಟಿದ್ದು , ಬೆಳೆದದ್ದು ಹೇಗೆ ಗೊತ್ತಾ..?? 


ಇಂದು ವಿಶ್ವದಲ್ಲಿಯೇ 50% ಜನರು ಕನ್ನಡಕವನ್ನು ಬಳಸುತ್ತಾರೆ. ಭಾರತದಲ್ಲಿ 3 ರಲ್ಲಿ ಒಬ್ಬರಿಗೆ ಕನ್ನಡಕದ ಅಗತ್ಯವಿದೆ. ಅಗತ್ಯವಿದೆ ಎಂದರೆ.. ಕಣ್ಣಿನ ತೊಂದರೆ, ದೋಷದಿಂದ ಅವರು ಕನ್ನಡಕವನ್ನು ಧರಿಸಲೇ ಬೇಕಾಗಿರುತ್ತದೆ. ಆದರೆ, ಇವರಲ್ಲಿ ಕಾಲು ಭಾಗದಷ್ಟು ಜನರು ಮಾತ್ರವೇ ಕನ್ನಡಕ ಬಳಸುತ್ತಾರೆ. ಕೆಲವರು ಲೆನ್ಸ್ ಬಳಸುತ್ತಾರಾದರೂ.. ಉಳಿದವರೂ ಕನ್ನಡಕ ಬಳಸುವುದು ಫ್ಯಾಷನ್ ಗಾಗಿ. ಹೆಚ್ಚಿನವರ ಬಳಿ ಒಂದಕ್ಕಿಂತ ಹೆಚ್ಚಿನ ಕನ್ನಡಕಗಳಿವೆ. ಈಗ ಭಾರತದಲ್ಲಿ ದಿನವೊಂದಕ್ಕೆ 15 ಲಕ್ಷ ಕನ್ನಡಕದ ಮಾರಾಟವಾಗುತ್ತದೆ. ಲೆನ್ಸ್ ಕಾರ್ಟ್ ಶುರುವಾದ ಮೂಲ ಉದ್ದೇಶವೇ ಭಾರತದಲ್ಲಿ ದೃಷ್ಟಿ ಸಮಸ್ಯೆ ಇರುವವರಿಗೆ ಕಣ್ಣಾಗಬೇಕೆಂದು. ಇಂತಹದ್ದೊಂದು ಐಡಿಯಾ ಬಂದದ್ದು ಪೆಯೂಶ್ ಬನ್ಸಾಲ್ ಗೆ. 


ಪೆಯೂಶ್ ಬನ್ಸಾಲ್, ಸುಮೀತ್ ಕಪಾಹಿ ಮತ್ತು ಅಮಿತ್ ಚೌಧರಿ ಇವರು ಮೂವರ ಐಡಿಯಾ, ಬಂಡವಾಳ , ಕನಸು ಸೇರಿ ಶುರುವಾದದ್ದೇ ಫಾರಿದಾಬಾದ್ ಮೂಲದ ಕನ್ನಡಕದ ಮಾರಾಟದ ಈ- ಕಾಮರ್ಸ್ ಸಂಸ್ಥೆ 'ಲೆನ್ಸ್ ಕಾರ್ಟ್'.


ಪೆಯೂಶ್ ಬನ್ಸಾಲ್ 1985 ಏಪ್ರಿಲ್ 26 ರಲ್ಲಿ ನವದೆಹಲಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿ ದೆಹಲಿಯಲ್ಲಿರುವ ಡಾನ್ ಬಾಸ್ಕೋ ಶಾಲೆಯಲ್ಲಿ ಅವರು ತಮ್ಮ ಶಿಕ್ಷಣವನ್ನು ಮುಗಿಸಿದರು. ಅವರಿಗೆ ಐಐಟಿಗೆ ಪ್ರವೇಶಿಸುವ ಗುರಿಯಿತ್ತು. ಆದರೆ, ಅದು ಅವರ ದುರದೃಷ್ಟವೋ ಅಥವಾ ಅದೃಷ್ಟವೋ ಗೊತ್ತಿಲ್ಲ. ಆದರೆ, ಆ ಗುರಿ ತಲುಪಲು ಸಾಧ್ಯವಾಗದೇ ಇದ್ದಾಗ ಬೇರೆ ದಾರಿಯನ್ನಾಯ್ದುಕೊಂಡರು. 


ಅವರು ತಮ್ಮ ಡಿಪ್ಲೊಮಾವನ್ನು ಪಡೆಯಲು ಕೆನಡಾಕ್ಕೆ ಪ್ರಯಾಣಿಸಿದರು. ಅವರು 2006 ರಲ್ಲಿ,  ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ - ಐಟಿ, ಕಂಟ್ರೋಲ್ ಮತ್ತು ಆಟೊಮೇಷನ್‌ನಲ್ಲಿ ಬ್ಯಾಚುಲರ್ ಪದವಿ ಪಡೆದರು. ನಂತರದಲ್ಲಿ, ಯುಎಸ್ ಸಾಫ್ಟ್‌ವೇರ್ ದೈತ್ಯ ಎನ್ನಿಸಿದ್ದ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗವನ್ನೂ ಪಡೆದರು. ಪೆಯೂಶ್ ಒಂದು ವರ್ಷ ಮೈಕ್ರೋಸಾಫ್ಟ್‌ನಲ್ಲಿ ಪ್ರೋಗ್ರಾಮ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು . ಅದೇ ಸಂಧರ್ಭದಲ್ಲಿ ಸಿಯಾಟಲ್‌ನ  ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಅವರು ಒಮ್ಮೆ ಬಿಲ್ ಗೇಟ್ಸ್‌ರನ್ನು ಭೇಟಿಯಗುವ ಸಂಧರ್ಭ ಬರುತ್ತದೆ. ಬಿಲ್ ಗೇಟ್ಸ್ ತನ್ನ ಕಂಪನಿಯ ಉದ್ಯೋಗಿಗಳನ್ನು ಕಡಲತೀರದ ತನ್ನ ಮನೆಗೆ ಆಹ್ವಾನಿಸುತ್ತಿದ್ದರು. ಈ ಸಭೆ ಪೆಯೂಶ್ ಬದುಕಿನ ಟರ್ನಿಂಗ್ ಪಾಯಿಂಟ್ ಎಂದರೂ ತಪ್ಪಾಗಲಾರದು. ಬಿಲ್ ಗೇಟ್ಸ್ ಬದುಕನ್ನು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಂದದ್ದೆಂದರೆ.. ಅವರು ತಮ್ಮ ಕಂಪೆನಿಯ 50,000 ಉದ್ಯೋಗಿಗಳಿಗಿಂತ ವಿಭಿನ್ನ. ಅಲ್ಲದೇ, ಈಗಾಗಲೇ ಉತ್ತಮ ಸ್ಥಿತಿಯಲ್ಲಿದ್ದ ಜನರ ಜೀವನವನ್ನು ಇನ್ನಷ್ಟು ಸುಧಾರಿಸುತ್ತಿದ್ದಾರೆಂದು ಅವರು ಕಂಡುಕೊಂಡರು. ತನ್ನ ಕನಸು, ಗುರಿ ನೆನಪಾಗಿ ತಾನು ಇಲ್ಲಿಯ 50,000 ಉದ್ಯೋಗಿಗಳಲ್ಲಿ ಒಬ್ಬನಾಗಿರಲಾರೆ ಎಂದು ತೀರ್ಮಾನಿಸಿ ತಮ್ಮ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಲು ಭಾರತಕ್ಕೆ ಮರಳಿದರು. ಬೆಂಗಳೂರಿನ ಐ.ಐ.ಎಂ ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು.


ಪದವಿಯ ನಂತರ 2007 ರಲ್ಲಿ ಅವರು ಐ.ಐ.ಎಂ ನಲ್ಲಿದ್ದಾಗ ವಿಶ್ವವಿದ್ಯಾನಿಲಯದ ವರ್ಗೀಕೃತ ಸೇವೆಗಾಗಿ ಸರ್ಚ್ ಮೈ ಕ್ಯಾಂಪಸ್ ಎನ್ನುವ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದರು. ವಿವಿಧ ಶಾಲೆಗಳು ಮತ್ತು ಸಂಸ್ಥೆಗಳ ವಿದ್ಯಾರ್ಥಿಗಳು ಈ ಪೋರ್ಟಲ್ ಮೂಲಕ ಇಂಟರ್ನ್‌ಶಿಪ್, ಪುಸ್ತಕಗಳು, ಸಾರಿಗೆ, ಪಾರ್ಟ್ ಟೈಮ್ ಉದ್ಯೋಗಗಳು ಮತ್ತು ವಸತಿ ಸೇರಿದಂತೆ ವಿವಿಧ ಸೇವಾ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಬಹುದಾಗಿತ್ತು. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾದರೂ ಅವರಿಗೆ ಸಹಾಯ ಮಾಡುವುದು ಅವರ ಧ್ಯೇಯವಾಗಿತ್ತು. ಸೇವಾ ಹಾಗೂ ವ್ಯಾಪಾರದ ಮನೋಭಾವದಿಂದ ಶುರು ಮಾಡಿದ ಪೆಯೂಶ್ ತಮ್ಮದೇ ಕಂಪೆನಿ ಶುರು ಮಾಡಿದರು. ಅದೇ ವ್ಯಾಲಿಯೂ ಟೆಕ್ನಾಲಜೀಸ್‌. ಈ - ಕಾಮರ್ಸ್ ನಲ್ಲಿ ಸರ್ಚ್‌ಮೈಕ್ಯಾಂಪಸ್ ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಕಂಡಿತು. ನಂತರ , ಅವರ ದೃಷ್ಟಿ ಹರಿದದ್ದು ಅಮೆಜಾನ್ ಮತ್ತು ಇಬೇಯಂತಹ ಪ್ರಮುಖ ಇ-ಕಾಮರ್ಸ್ ನವರು ನಿರ್ಲಕ್ಷಿಸಿದ್ದ ಕನ್ನಡಕದ ಉದ್ಯಮಕ್ಕೆ. ಅವರು ಈಗಾಗಲೇ ಅಮೆರಿಕನ್ ಕನ್ನಡಕ ಉದ್ಯಮಕ್ಕೆ ಮೀಸಲಾದ ಫ್ಲೈರ್.ಕಾಮ್ ವೆಬ್‌ಸೈಟ್ ಅನ್ನು ರಚಿಸಿದರು. 


ಫ್ಲೈರ್ ನ ಯಶಸ್ಸು ಕಂಡು ಭಾರತದಲ್ಲಿ ಯಾಕೆ ಈ ರೀತಿಯ ಪ್ರಯತ್ನ ನಡೆಯಬಾರದು ಎಂದು ಸಮಾನ ಮನಸ್ಕರಾದ ಸುಮೀತ್ ಕಪಾಟಿ ಮತ್ತು ಅಮಿತ್ ಚೌಧರಿ ಜೊತೆ ಸೇರಿ ನವೆಂಬರ್ 2010 ರಲ್ಲಿ ಲೆನ್ಸ್‌ಕಾರ್ಟ್ ಅನ್ನು ಪ್ರಾರಂಭಿಸಿದರು. ಮೊದಲಿಗೆ ಇದು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಮಾತ್ರ ಮಾರಾಟ ಮಾಡುವ ಮೂಲಕ ಪ್ರಾರಂಭವಾಯಿತು, ಆದರೆ ಕೆಲವು ತಿಂಗಳುಗಳ ನಂತರ ಅದು ಕನ್ನಡಕವನ್ನು ಸೇರಿಸಲು ಪ್ರಾರಂಭಿಸಿತು. ಅಂತಿಮವಾಗಿ, ಮಾರ್ಚ್ 2011 ರಲ್ಲಿ, ಕಂಪನಿಯು ಸನ್ಗ್ಲಾಸ್ ಅನ್ನು ಸೇರಿಸಲು ತನ್ನ ಬಂಡವಾಳವನ್ನು ವಿಸ್ತರಿಸಲು ನಿರ್ವಹಿಸುತ್ತಿತ್ತು, ಅವುಗಳನ್ನು ಫ್ಯಾಷನ್ ಪರಿಕರಗಳ ವರ್ಗಕ್ಕೆ ಸೇರಿಸಿತು. ಮೊದಲಿಗೆ ದಿನಕ್ಕೆ 30 ಜನರಿಗೆ ಮಾತ್ರ ಸಪ್ಲೈ ಮಾಡುವಷ್ಟಿದ್ದ ಕಂಪೆನಿ ಈಗ ದಿನಕ್ಕೆ 3000 ಗ್ರಾಹಕರಿಗೆ ಕನ್ನಡಕ ಒದಗಿಸುವಷ್ಟಾಗಿದೆ. ಲೆನ್ಸ್ ಕಾರ್ಟ್ ನ ದೆಹಲಿಯ ಉತ್ಪಾದನಾ ಘಟಕವೊಂದರಲ್ಲಿಯೇ ದಿನವೊಂದಕ್ಕೆ 3 ಲಕ್ಷಕ್ಕೂ ಅಧಿಕ ಕನ್ನಡಕಗಳ ಉತ್ಪಾದನೆಯಾಗುತ್ತಿದೆ. 


ಆನ್ಲೈನ್ ಮಾತ್ರವೇ ಎಂದು ಮೂಗು ಮುರಿದವರಿಗೆ ಆಫ್ಲೈನ್ ಮೂಲಕ ಎಂದರೆ ತನ್ನ ಅಂಗಡಿಗಳನ್ನು ಸ್ಥಾಪಿಸುವುದರ ಮೂಲಕ ಉತ್ತರಿಸಿತು. ಭಾರತದಲ್ಲಿ ಲೆನ್ಸ್ ಕಾರ್ಟ್ ನ 550 ಕ್ಕೂ ಹೆಚ್ಚಿನ ಶಾಪ್ ಗಳಿದ್ದರೂ . ಕ್ಲಾಸಿಕ್ ಹಾಗೂ ಟ್ರೆಂಡಿ ಆಗಿರುವ ಕನ್ನಡಕಗಳು, 5000ಕ್ಕೂ ಹೆಚ್ಚು ಕನ್ನಡಕದ ಫ್ರೆಮ್ ಗಳು 345 ರೂಪಾಯಿಯಿಂದ ಶುರುವಾಗಿ 30,000 ರೂಪಾಯಿಯವರೆಗೂ ಗ್ರಾಹಕರು ಅಭಿರುಚಿ, ಆಯ್ಕೆಯ ಮೇಲೆ ಆಯ್ದುಕೊಳ್ಳಬಹುದು. ಇವತ್ತು ಲೆನ್ಸ್ ಕಾರ್ಟ್ ನ 20% ಲಾಭ ಕೇವಲ ಕನ್ನಡಕದ ಫ್ರೇಮ್ ನಿಂದಲೇ ಬರುತ್ತಿದೆ. 


ಇಷ್ಟು ಮಾಡುವಾಗ ಬೇರೆಯ ಕನ್ನಡಕದ ಉದ್ಯಮಿಗಳು ಪೈಪೋಟಿ ನೀಡುವಾಗ ಬೇರೆ ಬೇರೆಯ ಅಪ್ಡೇಟೆಡ್ ಮಾರ್ಕೆಟಿಂಗ್ ತಂತ್ರಗಳನ್ನು ಅನುಸರಿಸುತ್ತಿದೆ. ಮೊದಲ ಬಾರಿಗೆ 'ಹೋಮ್ ಐ ಚೆಕ್ ಆಪ್' ಎಂಬ ಮನೆಗೇ ಹೋಗಿ ಕಣ್ಣು ಪರೀಕ್ಷಿಸುವ ಸೌಲಭ್ಯ ನೀಡಿತು. ಉತ್ಪಾದನಾ ಕೇಂದ್ರದಲ್ಲಿ ಬಳಸುತ್ತಿದ್ದ ರೋಬೋಟ್ ಗಳನ್ನು ಇನ್ನಷ್ಟು ಸ್ಪೆಷಲೈಸ್ ಮಾಡಿ ಗ್ರಾಹಕರಿಗೆ ಇವುಗಳೇ ಕನ್ನಡಕ ತಲುಪಿಸುವಂತೆ ಮಾಡಿತು.


ಇಷ್ಟೇ ಅಲ್ಲ.. ಗ್ರಾಹಕರು ಆನ್ಲೈನ್ ನಲ್ಲಿಯೇ ಕನ್ನಡಕ ತೊಟ್ಟು ಅವರಿಗೆ ಸೆಟ್ ಆಗುತ್ತದೋ ಇಲ್ಲವೋ ಎಂದು ಪರೀಕ್ಷಿಸುವ ಹಾಗೆ 3- ಡಿ ತಂತ್ರಜ್ಞಾನದ ಸೌಲಭ್ಯ ನೀಡಿತು. ಗ್ರಾಹಕರು ಆಪ್ ನಲ್ಲಿ ತಮ್ಮ ಸೆಲ್ಫಿ ತೆಗೆದರೆ ಆಯಿತು. ರೌಂಡ್, ಸ್ಕ್ವೇರ್ ಅಥವಾ ಅವರ ಆಯ್ಕೆಯ ಫ್ರೇಮ್ ಅನ್ನು ಹೊಂದಿಸಿ ನೋಡಿ ಕೊಳ್ಳುವ ಆಯ್ಕೆ ನೀಡಿತು. ಒಂದು ಕನ್ನಡಕ ಕೊಂಡರೆ ಮತ್ತೊಂದು ಉಚಿತ ಎಂಬ ಆಫರ್ ನೀಡಿತು. ಹೀಗೆ ಗ್ರಾಹಕ ಸ್ನೇಹಿಯಾಗಿರುವ ಲೆನ್ಸ್ ಕಾರ್ಟ್ ನ ಗುರಿ ಇಲ್ಲಿಗೇ ನಿಲ್ಲುವುದಿಲ್ಲ.


ಲೆನ್ಸ್ ಕಾರ್ಟ್ ನ ಲೋಗೋ ಸೂಚಿಸುವುದೂ ಇದನ್ನೇ.. ರೌಂಡ್, ಸ್ಕ್ವೇರ್, ಟ್ರೈಯಾಂಗಲ್ ಎಲ್ಲದರ ಮಿಶ್ರ ಮಾಡಿ ಹೊಸ ಹೊಸ ಫ್ರೇಮ್ ಅನ್ನು ತಯಾರಿಸುತ್ತೇವೆ ಎಂದು.. ಅದು ಕ್ರಿಯಾಶೀಲತೆಯ ಇನ್ಪಿನಿಟಿಯನ್ನೂ ಸೂಚಿಸುತ್ತದೆ. ಕತ್ರಿನಾ ಕೈಫ್ ಅಕ್ಟೋಬರ್ 2017 ರಲ್ಲಿ ಲೆನ್ಸ್‌ಕಾರ್ಟ್‌ನ ಮೊದಲ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆ ಸಲ್ಲಿಸಿದರು. ಮಾರ್ಚ್ 2019 ರಲ್ಲಿ ಭುವನ್ ಬಾಮ್ ಅವರನ್ನು ತಮ್ಮ ಮೊದಲ ಪುರುಷ ಬ್ರಾಂಡ್ ಅಂಬಾಸಿಡರ್ ಆಗಿ ಸಂಸ್ಥೆಯು ಆಯ್ಕೆ ಮಾಡಿದೆ.


2019 ರ ಡಿಸೆಂಬರ್ ನಲ್ಲಿ ಲೆನ್ಸ್ ಕಾರ್ಟ್ ಭಾರತೀಯ ಯುನಿಕಾರ್ನ್ ಗಳ ಆಸ್ಕರ್ ಕ್ಲಬ್ ಅನ್ನೂ ಪ್ರವೇಶಿಸಿದೆ. "ವಿಷನ್ ಟು ಇಂಡಿಯಾ" ಎನ್ನುವ ಧ್ಯೇಯ ಹೊತ್ತು ಬಂದ ಪೆಯೂಶ್, ಲೆನ್ಸ್ ಕಾರ್ಟ್ ಭಾರತೀಯ ಕನ್ನಡಕದ ಉದ್ಯಮದ ಮಾರುತಿ (ಭಾರತದ ಅತಿ ದೊಡ್ಡ ಆಟೋಮೊಬೈಲ್ ಉತ್ಪಾದನಾ ಸಂಸ್ಥೆ) ಆಗಬೇಕು ಎನ್ನುವ ಕನಸು ಹೊಂದಿದ್ದಾರೆ. ಬ್ಯುಸಿನೆಸ್ ನಲ್ಲಿ ಒಂದು ಬ್ರ್ಯಾಂಡ್ ಇನ್ನೊಂದು ಬ್ರ್ಯಾಂಡ್ ಗೆ ಕೇವಲ ಪೈಪೋಟಿಯಲ್ಲ.. ಮಾದರಿಯೂ ಆಗಬಲ್ಲದು ಎನ್ನುವ ಸಾಕ್ಷಿ ಇದು.


ಲೆನ್ಸ್ ಕಾರ್ಟ್ ನ ಬ್ಯುಸಿನೆಸ್ ಮೂಲ ಮಂತ್ರವೆಂದರೆ ಬೆಲೆಗೆ ತಕ್ಕ ಉತ್ಪನ್ನದ ಗುಣಮಟ್ಟ, ವಿತರಣಾ ಸಮಯ, ಮಾರಾಟದ ಬೆಂಬಲ. ಉತ್ತಮ-ಗುಣಮಟ್ಟದ ಉತ್ಪನ್ನವನ್ನು ಸಮಂಜಸವಾದ ಬೆಲೆಗೆ, ಬೇಗ ತಲುಪಿಸುವುದರ ಜೊತೆಗೆ 14 ದಿನಗಳವರೆಗೆ ಬದಲಿ ಆಯ್ಕೆಯನ್ನೂ ನೀಡುತ್ತದೆ. 


ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೆಳೆಯುವ ಬ್ಯುಸಿನೆಸ್ ಗಿಂತ.. ತನ್ನ ಹೊಸ ಬ್ಯುಸಿನೆಸ್ ಮಾರಾಟಕ್ಕೆ ಅನುಗುಣವಾಗಿ ಗ್ರಾಹಕರನ್ನು ಸೆಳೆಯುವ ಬ್ಯುಸಿನೆಸ್ ಬೇರೆಯದ್ದೇ ಸಾಲಿನಲ್ಲಿ ನಿಲ್ಲುತ್ತದೆ. ಅಂತಹಾ ಸಾಲಿನಲ್ಲಿ ನಿಲ್ಲುವುದೇ ಲೆನ್ಸ್ ಕಾರ್ಟ್. ಭಾರತದ ಪರಿಸರಕ್ಕೆ ಒಗ್ಗುವುದೋ ಇಲ್ಲವೋ ಎಂದು ಅಂಜಿ ಕುಳಿತಿದ್ದರೆ ಈ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಗೆಲುವು, ಸೋಲಿನಿಂದಾಚೆಗೂ..ಬ್ಯುಸಿನೆಸ್ ನಲ್ಲಿ ಪ್ರಯತ್ನವೇ ಗೆಲುವಿನ ಮೊದಲ ಮೆಟ್ಟಿಲು ಎಂಬುದನ್ನು ಅರಿಯಬೇಕಿದೆ.


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ