ಪುಸ್ತಕದ ಶೀರ್ಷಿಕೆ : ಮೂರು ನೀಳ್ಗತೆ
ಲೇಖಕರು : ಉದಯ್ ಜಾದೂಗಾರ್, ಗಾಯತ್ರಿ ರಾಜ್, ಉಷಾ ನರಸಿಂಹನ್
ಪ್ರಕಾಶಕರು : ರಾಜ್ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2020
ಪುಟಗಳು : 104
ಬೆಲೆ : 100 ರೂ.
ಮೂರು ನೀಳ್ಗತೆ ಕಥಾ ಸಂಕಲನವು ಮೂವರು ವಿವಿಧ ಲೇಖಕರು ಬರೆದಿರುವ ಮೂರು ನೀಳ್ಗತೆಗಳ ಸಂಕಲನ. ಈ ಕಥಾ ಸಂಕಲನದ ಶೀರ್ಷಿಕೆ ಬೇರೆಯದಿದ್ದರೆ ಇನ್ನೂ ಆಕರ್ಷಕವಾಗಿರುತ್ತಿತ್ತು ಎಂದೆನಿಸಿತು.
ಕಥೆಯ ಶೀರ್ಷಿಕೆ : ದಗಲ್ಬಾಜಿ
ಲೇಖಕರು : ಉದಯ್ ಜಾದುಗಾರ್
ಅಮೆರಿಕಾದಲ್ಲಿಯೇ ಕುಟುಂಬ ಸಮೇತ ನೆಲೆಸಿದ್ದ ಶಾಮು ಅಲ್ಲಿಯೇ ಇದ್ದ ಕಂಪನಿಯೊಂದರ ಮುಖ್ಯ ಅಧಿಕಾರಿಯಾಗಿದ್ದು.. ಈಗ ಅವನ ಬಳಿ ಹಣ ದಂಡಿಯಾಗಿತ್ತು. ಅರಮನೆಯಂತಹಾ ಮನೆ. 10 ತಲೆಮಾರು ಕೂತು ತಿಂದರೂ ಕರಗದಂತಹಾ ಸಂಪತ್ತು. ಆದರೂ.. ಅವನ ಮನಸ್ಸಲ್ಲೊಂದು ಚಿಂತೆ ಕಾಡುತ್ತಲೇ ಇತ್ತು. ಅದು ಸದಾನಂದನದ್ದು..
ಇತ್ತೀಚೆಗಂತೂ ಆತ ಕನಸಲ್ಲಿ ಬಂದು ನೆನಪಾಗುತ್ತಿದ್ದ. ಸದಾನಂದ ಆತನಿಗಿಂತ ವಯಸ್ಸಲ್ಲಿ ಮೂರು ವರ್ಷ ದೊಡ್ಡವನಾದರೂ.. ಸ್ನೇಹ ಹಾಗೂ ಸಲುಗೆಯಿಂದ ಜೊತೆಗಾರನಾಗಿದ್ದ. ಅಕ್ಕಂದಿರು, ತಾಯಿ- ತಂದೆಯನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡಿದ್ದ ಶಾಮುವನ್ನು ಸದಾನಂದನ ತಾಯಿ ಗಿರಿಜಮ್ಮನವರೇ ತಾಯಿಯಂತೆ ನೋಡಿಕೊಂಡಿದ್ದರು.
ಗಿರಿಜಮ್ಮನವರ ಗಂಡ.. ಹೆಂಡತಿ, ಮಗನನ್ನು ಬಿಟ್ಟು ಬೇರೆಯವರ ಜೊತೆ ಓಡಿ ಹೋಗಿದ್ದ. ಕೂಲಿ ಮಾಡಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರೂ.. ತಬ್ಬಲಿಯಾದವನನ್ನು ತಂದು ಮನೆಯಲ್ಲಿ ಸಾಕಿಕೊಂಡಿದ್ದರು. ಸದಾ ಆಗಿನಿಂದಲೂ ಸ್ವಲ್ಪ ಪೋಕರಿ. ಆದರೆ, ಶಾಮುವಿನ ವಿಚಾರಕ್ಕೆ ಬಂದರೆ ಥೇಟ್ ಅಣ್ಣನಂತೆಯೇ ರಕ್ಷಣೆಗೆ ನಿಲ್ಲುತ್ತಿದ್ದ. ಚೆನ್ನಾಗಿ ಓದುತ್ತಿದ್ದ ಶಾಮು ಸ್ಕಾಲರ್ಶಿಪ್ ಸಹಾಯದಿಂದ ಮುಂದುವರಿದು ಕನಸುಗಳ ಬೆನ್ನೇರಿ, ಸವಾಲುಗಳನ್ನು ಸ್ವೆಕರಿಸಿ ಅಮೆರಿಕಕ್ಕೆ ಹಾರಿದ. ಹೈಸ್ಕೂಲು ಬಿಟ್ಟವನ್ನು ಇದುವರೆಗೂ ಹಳ್ಳಿಗೆ ಹೋಗಿರಲೇ ಇಲ್ಲ. ಸದಾನ ಕುರಿತು ಗಿರಿಜಮ್ಮನವರ ಕುರಿತು ಯಾವ ಮಾಹಿತಿಯೂ ಆತನ ಬಳಿ ಇರಲಿಲ್ಲ. ಈಗ ತನ್ನ ಬೇರನ್ನು ಹುಡುಕಿಕೊಂಡು.. ಹೆಂಡತಿಯೊಡನೆ, ಕೈತುಂಬಾ ಉಡುಗೊರೆಗಳನ್ನು ತೆಗೆದುಕೊಂಡು ಮತ್ತೆ ತನ್ನ ಊರಿಗೆ ಧಾವಿಸಿದವನಿಗೆ ತಿಳಿದದ್ದು ಈಗ ಸದಾ ಅಲ್ಲಿರಲಿಲ್ಲ. ಗಿರಿಜಮ್ಮ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಮೊದಲೇ ಅಂದಾಜಾಗಿದ್ದಾದರೂ.. ಸದಾನಂದನನ್ನು ನೋಡಿ ಆತನಿಗೆ ಬದುಕಿಗೆ ದಾರಿ ಮಾಡಿಕೊಡಬೇಕಿದ್ದರೆ ಅದನ್ನು ಮಾಡೋಣವೆಂದು ಹೋದವನಿಗೆ ಸಿಕ್ಕದ್ದು ಒಂದರಿಂದ ಮತ್ತೊಂದೆಡೆಗೆ ಬೇರು ಕಿತ್ತಿದ್ದ ಸದಾನಂದನ ಜಾಡುಗಳಷ್ಟೇ..
ಈಗಾಗಲೇ ದಗಲ್ಬಾಜಿ ಎಂದು ಎಲ್ಲೆಡೆ ಮೋಸ ಮಾಡುತ್ತಾ.. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುತ್ತಿದ್ದವನ ಜಾಡು ವಹಾಲೆ ಎಂಬಲ್ಲಿ ಸಿಕ್ಕಿ, ಅಲ್ಲಿನ ಕಾಲುದಾರಿಯಲ್ಲಿಯೂ ಹೋಗುವ ಸಾಹಸ ಮಾಡಿದ್ದ ಶಾಮು. ಆದರೆ, ಸಂಧರ್ಭವಶಾತ್, ಶಾಮು ಹಾಗೂ ಸದಾನಂದ ಇಬ್ಬರೂ ಎದುರು-ಬದುರಾದ ನಂತರ ಶಾಮುವಿನ ಮನಸ್ಸಿನ ಭಾವನೆಗಳು ಬದಲಾಗಿದ್ದವು. ಅದಕ್ಕೆ ಕಾರಣವಾದರೂ ಏನು .? ಸದಾನಂದನಿಗೆ ಶಾಮುವಿನ ಗುರುತು ಸಿಕ್ಕಿತೇ..? ಶಾಮು ಕೇವಲ ಸ್ನೇಹದ ಕಾರಣಕ್ಕಾಗಿ ಮಾತ್ರ ಸದಾನಂದನನ್ನು ಹುಡುಕಿಕೊಂಡು ಹೊರಟಿದ್ದನೇ ಅಥವಾ ಅದರ ಹಿಂದೆ ಬೇರೆ ಏನಾದರೂ ಹುನ್ನಾರವಿತ್ತೇ..? ಕಥೆ ಓದಿ ನೋಡಿ.
ಕತೆಯ ಶೀರ್ಷಿಕೆ : ಸೆಕೆಂಡ್ ಚಾನ್ಸ್
ಲೇಖಕರು : ಗಾಯತ್ರಿ ರಾಜ್
ಮಡಿಕೇರಿಗೆ ವರ್ಗವಾಗಿ ಬಂದಿದ್ದ ರಾಜ್ ಗೆ ಅಂದು ಆಕಸ್ಮಿಕವಾಗಿ ಚಂದ್ರು ಸಿಗದೆ ಹೋಗಿದ್ದರೆ.. ಮತ್ತೆ ಆಶಾ ಎದುರಾಗುವ ಪ್ರಮೇಯವೇ ಇರುತ್ತಿರಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಚಂದ್ರು ನೋಡಿದರೂ ನೋಡದಂತೆ ಓಡುತ್ತಿದ್ದ. ಆದರೆ, ರಾಜ್ ಆತನನ್ನು ಮಾತನಾಡಿಸಿ ಆಶಾ ಬಗ್ಗೆ ವಿಚಾರಿಸಿದ. ಮನಸ್ಸು ತಡೆಯದೆ, ದುಂಬಾಲು ಬಿದ್ದು ಮನೆಗೆ ಕರೆದುಕೊಂಡು ಹೋಗುವಂತೆ ಕೇಳಿದ್ದ. ಕಾಕತಾಳೀಯವೆಂದರೆ ಅಲ್ಲಿಂದ 5 ನಿಮಿಷದ ಹಾದಿಯಲ್ಲಿ ರಾಜ್ ನ ಮನೆ. ರಾಜ್ ಗೆ ಚಂದ್ರು ಕಾಲೇಜಿನಲ್ಲಿ ಆತನಿಗಿಂತ ಮೂರು ವರ್ಷ ಸೀನಿಯರ್ ಆಗಿದ್ದವನು. ಆಶಾಳನ್ನು ಭೇಟಿ ಮಾಡಿದರೂ.. ಅವಳ ಸತ್ಕಾರದಲ್ಲಿ ಮೊದಲಿನ ಉತ್ಸಾಹವಿರಲಿಲ್ಲ. ಅಲ್ಲದೆ, ನಡವಳಿಕೆಯಲ್ಲಿಯೂ ಬೇರೇನೋ ಗೋಚರಿಸಿತ್ತು ರಾಜ್ ಗೆ.
ಚಂದ್ರು ಬೇಕೆಂದೇ ಅವರಿಬ್ಬರ ಮುಖಾಮುಖಿಯನ್ನು ತಪ್ಪಿಸಿ ಮನೆಯನ್ನೆಲ್ಲಾ ತೋರಿಸಿ ಹೊರಗೆ ಕರೆದೊಯ್ದಿದ್ದ. ಆದರೆ, ಆಶಾಳೇ ರಾಜ್ ಮನೆಗೆ ಬಂದು ಮನಬಿಚ್ಚಿ ಮಾತನಾಡಿದಾಗಲೇ ಅವಳ ನಿಜ ಪರಿಸ್ಥಿತಿಯ ಅರಿವಾಗಿತ್ತು.
ಓದಿನಲ್ಲೂ ಮುಂದಿದ್ದ, ಗಂಭೀರಸ್ಥ ಹಾಗೂ ಮೌನಿಯೂ ಆಗಿದ್ದ ರಾಜ್ ನಿಗೆ ಸೋತಿದ್ದಳು ಆಶಾ. ಇಬ್ಬರ ನಡುವೆ ಸ್ನೇಹ ಪ್ರೇಮವಾಗಿತ್ತು. ಆದರೆ, ಆಕೆ ರಾಜ್ ನನ್ನು ತಿರಸ್ಕರಿಸಿ ಚಂದ್ರು ವನ್ನು ವಿವಾಹವಾದಳು. ಅದಕ್ಕೆ ಕಾರಣವೇನು..?
ಹಿಂದಿನ ಕಹಿಯೇ ಅವಳ ಈ ನಡವಳಿಕೆಗೆ ಕಾರಣವೇ ಅಥವಾ ಚಂದ್ರುವಿನ ನಡವಳಿಕೆ ಬೇರೆಯೇ ಕಥೆ ಹೇಳುತ್ತಿತ್ತೇ..? ಇಲ್ಲಿ ಬದುಕಿನ ಸೆಕೆಂಡ್ ಚಾನ್ಸ್ ಸಿಕ್ಕದ್ದು ಯಾರಿಗೆ..? ಜೀವನದ ಹಲವು ಮಜಲುಗಳು ಬಿಚ್ಚಿಟ್ಟ ಕಥೆಯೇ ಬೇರೆ. ಕಣ್ಣಿಗೆ ಕಂಡ ವ್ಯಥೆಯೇ ಬೇರೆ. ಬದುಕು ಹಲವು ರೂಪದಲ್ಲಿ ಹಲವರಿಗೆ ಸೆಕೆಂಡ್ ಚಾನ್ಸ್ ಕೊಡುತ್ತದೆ. ಆದರೆ, ಅದನ್ನು ಯಾರು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ಬದುಕಿನ ಸುಖ-ದುಃಖದ ತೀರ್ಮಾನವಾಗುತ್ತದೆ.
ಕತೆಯ ಶೀರ್ಷಿಕೆ : ಪ್ರೇಮ ಪರಿಣಯ
ಲೇಖಕರು : ಉಷಾ ನರಸಿಂಹನ್
ಈ ನೀಳ್ಗತೆ ತರಂಗ ಪತ್ರಿಕೆಯಲ್ಲಿ ಪ್ರಕಟಿತವಾಗಿತ್ತು. ಸುಜಾತ ದುದ್ದ ಜ್ಞಾನಸುರಭಿ ವಿಶ್ವವಿದ್ಯಾಲಯದ ಒಂದು ವಿಭಾಗದ ಮುಖ್ಯಸ್ಥೆಯಾಗಿದ್ದವರು. ಒಂದು ಅಪಘಾತದ ನಂತರ ತನ್ನದೆಲ್ಲವನ್ನೂ ಕಳೆದುಕೊಂಡು ಎಲ್ಲದರಿಂದ ದೂರ ಉಳಿದಿದ್ದವರು. ಶಂಕರೇಗೌಡನ ಪ್ರೀತಿಪೂರ್ವಕ ಒತ್ತಾಯಕ್ಕೆ ಮಣಿದು ಮತ್ತೆ ಆ ಕಾಲೇಜಿಗೆ ಮುಖ್ಯ ಭಾಷಣಕಾರರಾಗಿ ಬಂದಿದ್ದರು.
ಈಗ ಸುಜಾತ ಮತ್ತೊಬ್ಬರ ಮೇಲೆ ಅವಲಂಬಿತವಾಗಬೇಕಾದ ಸಂದರ್ಭದಲ್ಲಿ ಅಕ್ಕ ಗೀತಾ ಜೊತೆಯಾಗಿದ್ದರು. ಜೊತೆಗೆ ಮನೆಕೆಲಸಕ್ಕೆಂದು ರತ್ನ ಜೊತೆಗಿದ್ದುದರಿಂದ ತ್ರಾಸದಾಯಕವಾಗಿರಲಿಲ್ಲವಾದರೂ.. ಬದುಕಿನಲ್ಲಿ ಅವರು ಹಿಂದೆ ಬಯಸಿದ್ದೆಲ್ಲವೂ ದಕ್ಕಿರಲಿಲ್ಲ.
ಹಿಂದೆಸ್ಯಾಮ್ಯುಯಲ್ ಪೀಟರ್ ಆಕ್ಸ್ಫಡ್ ನಿಂದ ಬಂದಿದ್ದವರು ಸುಜಾತರನ್ನು ಭೇಟಿಯಾಗಿ.. ಇಬ್ಬರೂ ಸಮ್ಮತದಿಂದ ಸಹಬಾಳ್ವೆ ನಡೆಸುತ್ತಿದ್ದರು. ಸುಜಾತಾರಿಗೆ ಸಂಗಾತಿಗಳಾದಾಗ ಗಂಡು-ಹೆಣ್ಣು ಇಬ್ಬರ ಸಮಾನತೆಯ ಮೇಲೆ ಬಹಳಷ್ಟು ನಂಬಿಕೆ. ತಮ್ಮ ಸಂಗಾತಿಯಾಗುವವರು ಹಾಗೆಯೇ ಇರಬೇಕೆಂದು ಭಾವಿಸುತ್ತಿದ್ದರು. ಎಲ್ಲರೂ ವಿರೋಧಿಸಿದರೂ.. ಜೊತೆಗೆ ಸಹಬಾಳ್ವೆ ನಡೆಸುತ್ತಲೇ ಮಗಳು ಸೋಫಿಯಾಗೂ ಜನ್ಮವಿತ್ತಿದ್ದರು.
ಆದರೆ, ಆದ ಒಂದು ಅಪಘಾತ ಅವರ ಇಡೀ ಬದುಕಿನ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿತು. ಪತಿಯಾಗಿದ್ದರೆ ಜೊತೆಯಲ್ಲಿಯೇ ಇದ್ದು ನೋಡಿಕೊಳ್ಳುತ್ತಿದ್ದನೇನೋ.. ಆದರೆ, ಯಾವ ಬಂಧನವೂ ಇರಲಿಲ್ಲವಾದ ಪೀಟರ್ ಮಗಳೊಂದಿಗೆ ವಿದೇಶಕ್ಕೆ ಹಾರಿದ್ದ.
ಮಗಳ ಜೊತೆಗಿನ ಭೇಟಿ ಮಾತ್ರವಲ್ಲ.. ಮಾತುಕತೆಯೂ ಸುಜಾತರ ಪಾಲಿಗೆ ದಕ್ಕಿರಲಿಲ್ಲ. ಆದರೆ, ಅದು ಬಂದೊದಗುವ ಸುಯೋಗ ಬಂದದ್ದು ಶಂಕರೇಗೌಡರಿಂದ. ಅಷ್ಟಕ್ಕೂ ಶಂಕರೇಗೌಡ ಸುಜಾತಾರಿಗೆ ಏನಾಗಬೇಕು..? ತಂದೆಯನ್ನೂ ಎದುರಿಸಿ ಬಂದ ಸೋಫಿಯಾ ತಾಯಿಯನ್ನು ನೋಡಿಕೊಂಡು ಹೋಗುವಾಗ ಮಾಡಿದ್ದ ತೀರ್ಮಾನವೇನು..? ಗೀತಾ ಹಾಗೂ ರತ್ನರ ಬದುಕು ಏನಾಯ್ತು..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಥಾಸಂಕಲನವನ್ನು .
ಮೂರು ಕಥೆಗಳೂ ಮನುಷ್ಯ ಸಂದರ್ಭನುಸಾರ ನಡೆದುಕೊಳ್ಳುವ ರೀತಿ, ತೆಗೆದುಕೊಳ್ಳುವ ತೀರ್ಮಾನ, ಅವುಗಳಿಗೆ ದೊರಕುವ ಪರಿಹಾರ ಹಾಗೂ ಸ್ವೀಕರಿಸುವ ರೀತಿಯನ್ನು ವಿಭಿನ್ನವಾಗಿ ತೆರೆದಿಡುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ