ಬುಧವಾರ, ಏಪ್ರಿಲ್ 22, 2026

ಶುಭಮಿಲನ (ಪುಸ್ತಕ ಯಾನ - 302)


ಪುಸ್ತಕದ ಶೀರ್ಷಿಕೆ : ಶುಭಮಿಲನ

ಲೇಖಕರು : ಸಾಯಿಸುತೆ

ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್

ಪ್ರಥಮ ಮುದ್ರಣ : 1978

ಏಳನೇ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 167

ಬೆಲೆ : 100 ರೂ.


ಸಾಯಿಸುತೆಯವರ ಶುಭಮಿಲನ ಕಾದಂಬರಿಯಲ್ಲಿ ವಿವಾಹವಾದ ಮಾತ್ರಕ್ಕೆ ಗಂಡು-ಹೆಣ್ಣಿನ ಶುಭ ಮಿಲನವಲ್ಲ.. ಬದಲಾಗಿ, ಅವರಿಬ್ಬರ ಮನಸ್ಸು ಬೆಸೆಯಬೇಕು ಎಂಬ ಸಂದೇಶವನ್ನು ಕಾಣಬಹುದು. ಅಲ್ಲದೆ, ಇದರಲ್ಲಿ ಹೆಣ್ಣಿನ ತಾಳ್ಮೆ, ಸಹಿಷ್ಣುತೆ ಹಾಗೂ ಸಹನೆಯಿಂದ ಅವಳು ಬದುಕುವ ಬಗೆ ಹೆಣ್ಣುಮಕ್ಕಳು ಎಷ್ಟು ತಾಳ್ಮೆ ತಳೆಯಬಲ್ಲಳು ಎಂಬುದನ್ನು ತೋರುತ್ತದೆ. ದೈಹಿಕ ಹಿಂಸೆಗಳು ಮಾತ್ರ ಕೌಟುಂಬಿಕ ಹಿಂಸೆಗಳಲ್ಲ.. ಬದಲಾಗಿ ಹೆಣ್ಣಿಗೆ ಮಾನಸಿಕ ಹಿಂಸೆ ಎಂಬುದು ಅವಳನ್ನು ಯಾವ ರೀತಿಯ ಪರಿಸ್ಥಿತಿಗೆ ದೂಡಬಲ್ಲದು ಎಂಬುದನ್ನು ಕಾಣಬಹುದು. ಸಾಯಿಸುತೆಯವರ ನಾನು ಇದುವರೆಗೂ ಓದಿರುವ ಕಾದಂಬರಿಗಳಲ್ಲಿ.. ಈ ಕಾದಂಬರಿಯಲ್ಲಿ ಮಾನಸಿಕವಾಗಿ ಹೆಣ್ಣು ಅನುಭವಿಸುವ ತುಮುಲ ಹಾಗೂ ಅವಳ ಮೇಲೆ ಅದು ಬೀರುವ ಪರಿಣಾಮವನ್ನು ಸಶಕ್ತವಾಗಿ ಹಿಡಿದಿಟ್ಟಿದ್ದಾರೆ ಎನ್ನಿಸಿತು.


ಭೀಮಸೇನರಾಯರ ಒಬ್ಬಳೇ ತಂಗಿ ರುಕ್ಮಿಣಮ್ಮ. ಕೇಶವನ ರೂಪ, ಐಶ್ವರ್ಯಕ್ಕೆ ಮೆಚ್ಚಿ ತಂಗಿಯನ್ನು ಕೊಟ್ಟು ಮದುವೆ ಮಾಡಿದ್ದರಾದರೂ.. ಮದುವೆಯಾದ ಮೇಲೆ ತಿಳಿದದ್ದು ಕೇಶವನಿಗೆ ಹತ್ತಾರು ಚಟಗಳಿದ್ದು, ಆತ ಹೆಣ್ಣುಮಕ್ಕಳ ಬದುಕನ್ನು ಸಹಾ ಹಾಳು ಮಾಡಿದ್ದನು. ಇದಕ್ಕಾಗಿ ಆತ ಆಸ್ತಿಯನ್ನು ಸಹಾ ಹಾಳು ಮಾಡಿದ್ದ. ಭೀಮಸೇನರಾಯರು ಗರ್ಭಿಣಿಯಾಗಿದ್ದ ತಂಗಿಯನ್ನು ಮನೆಗೆ ಕರೆತಂದವರು ಮತ್ತೆ ಕಳುಹಿಸಲು ಒಪ್ಪಲಿಲ್ಲ. ಮಗ ಅರವಿಂದ ಹುಟ್ಟಿದ್ದ. ಆತನಿಗೆ ಮೂರು ವರ್ಷವಿರುವಾಗ ಕೇಶವ ಕಾಯಿಲೆಯಿಂದ ಸತ್ತ. ಅಲ್ಪಸ್ವಲ್ಪ ಆಸ್ಟಿ ಉಳಿದಿದ್ದರಿಂದ ರುಕ್ಮಿಣಮ್ಮ ಹಾಗೂ ಅರವಿಂದನ ಜೀವನಕ್ಕೇನೂ ತೊಂದರೆಯಿರಲಿಲ್ಲ. ತಂಗಿಯ ಮೇಲೆ ಅಪಾರ ಪ್ರೀತಿಯಿದ್ದ ಭೀಮಸೇನರಾಯರು ಅವರ ಸಂಸಾರವನ್ನು ತಾವೇ ನೋಡಿಕೊಳ್ಳುವುದಾಗಿಯೂ.. ಜೊತೆಯಲ್ಲಿಯೇ ಇರಲು ನಿಸ್ವಾರ್ಥ ಮನಸ್ಸಿನಿಂದ ಕೇಳಿಕೊಂಡರು. ಅವರ ಪತ್ನಿ ಸೀತಮ್ಮನವರು ಸಹಾ ನಾದಿನಿಯನ್ನು ಬೇರೆ ಎಂದು ನೋಡದೆ, ತಮ್ಮ ಜೊತೆಯೇ ಇರುವಂತೆ ಕೇಳಿಕೊಂಡರು. ಸ್ವಾಭಿಮಾನಿಯಾದ ರುಕ್ಮಿಣಮ್ಮ ಒಪ್ಪದೆ, ಅಲ್ಲೇ ಹತ್ತಿರದಲ್ಲಿಯೇ ಮನೆ ಮಾಡಿಕೊಂಡು ತನ್ನ ಮಗನೊಡನೆ ಬದುಕು ಕಟ್ಟಿಕೊಂಡರು.


ಭೀಮಸೇನರಾಯರು ಹಾಗೂ ಸೀತಮ್ಮನವರಿಗೆ ಒಬ್ಬಳೇ ಮಗಳು ಇಂದಿರಾ. ಅರವಿಂದ ಹಾಗೂ ಇಂದಿರಾ ಚಿಕ್ಕನಿಂದ ಒಟ್ಟಿಗೆ ಬೆಳೆದಿದ್ದವರು. ಅರವಿಂದನನ್ನು ತಂಗಿಯ ಮಗನೆಂದು ಭಾವಿಸದೇ, ತಮ್ಮ ಮಗನೆಂದೇ ಬೆಳೆಸಿದರೂ ಸಹಾ ಭೀಮಸೇನರಾಯರಿಗೆ ಆತ ಕೇಶವನ ಮಗನಾದ್ದರಿಂದ ಅವನಂತೆಯೇ ದುಶ್ಚಟಗಳು ಬಂದಿರುತ್ತವೆ ಎಂಬ ಭಾವನೆ ಹಾಗೂ ಪೂರ್ವಗ್ರಹ ಮನಸ್ಸು. ಹಾಗಾಗಿ ದೃಢನಿರ್ಧಾರದಿಂದ ಆತನಿಗಂತೂ ತಮ್ಮ ಮಗಳನ್ನು ಕೊಡಲು ಮನಸ್ಸು ಮಾಡಿರಲಿಲ್ಲ. ಬಿ.ಇ ಮುಗಿಸಿ ಎಚ್.ಎಂ.ಟಿ ಯಲ್ಲಿ ಇಂಜಿನಿಯರ್ ಆಗಿದ್ದವನಿಗೆ ಹೆಣ್ಣು ಕೊಡುವವರ ದೊಡ್ಡ ಸಾಲೇ ಇತ್ತು. ಆದರೆ, ಆತನಿಗೆ ಇಂದಿರಾಳ ಮೇಲೆ ಮನಸ್ಸು. ಸೀತಮ್ಮನವರು ಸಹಾ ಆತನನ್ನೇ ಒಪ್ಪಿದರು. ಭೀಮಸೇನರಾಯರು ಮಾತ್ರ ಯಾರ ಮಾತಿಗೂ ಒಪ್ಪದೇ ಇಂದಿರಾಳನ್ನು ಜನಾರ್ಧನರಾಯರ ಮಗ ಜಗದೀಶನಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಿದರು.


ಮಗನಂತೆ ಸಾಕಿದವರ ಮನಸ್ಸನ್ನು ನೋಯಿಸಲು ಸಿದ್ದವಿರದ ಅರವಿಂದ ತಾನೇ ನೋಯುತ್ತಾ.. ಕೊರಗುತ್ತಾ ಹೋದ. ಹಾಗೆಂದು, ಆತ ಬೇರೆ ಯಾವ ರೀತಿಯ ಕೆಟ್ಟ ಯೋಚನೆಯನ್ನೂ ಮಾಡದೆ, ಇಂದಿರಾಳ ಬದುಕು ಚೆನ್ನಾಗಿರಲೆಂದು ಹಾರೈಸಿ, ನಾಗರಾಜನಿಗೆ ಮಾತ್ರ ಇಂದಿರಾಳನ್ನು ನಿಶ್ಚಯಿಸಬೇಡಿ ಎಂದು ಹೇಳಿದನಾದರೂ.. ಭೀಮಸೇನರಾಯರ ಕಾಮಾಲೆ ಕಣ್ಣಿಗೆ ಆಗ ಅದನ್ನು ಒಪ್ಪುವ ಮನಸ್ಸಿರಲಿಲ್ಲ. ಅಂತೂ ಇಂದಿರಾಳ ಮದುವೆ ಮನಸ್ಸಿಲ್ಲದ ಮನಸ್ಸಲ್ಲಿ ನಾಗರಾಜನೊಂದಿಗೆ ನಡೆದೇ ಹೋಯಿತು. ರುಕ್ಮಿಣಮ್ಮ ಬಹಳ ಹಿಂದೆಯೇ ತಮ್ಮ ಮಗನಿಗೆ ಇರುವ ವಿಚಾರವನ್ನು ತಿಳಿಸಿದರೂ.. ವಿಧಿ ಅರವಿಂದ, ಇಂದಿರಾ ಮನಸ್ಸನ್ನು ಅನುರಾಗದಿಂದ ಬೆಸೆದಾಗಿತ್ತು. ಇಂದಿರಾಳು ತಂದೆಗೆ ಎದುರಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಅರವಿಂದ ಇಂದಿರಾಳ ಮದುವೆಗೆ ಮಾತ್ರ ಬರದೇ ಕಾರಣ ಹೇಳಿ ಅದರಿಂದ ದೂರವೇ ಉಳಿದ.


ನಾಗರಾಜನನ್ನು ಗಂಭೀರಸ್ಥ ಎಂದುಕೊಂಡಿದ್ದವರಿಗೆ ನಿಜದ ಅರಿವಾಗಿದ್ದು ವಿವಾಹದ ನಂತರವೇ.. ನಾಗರಾಜನ ಮಲತಾಯಿಯ ಕಡೆಯವರೇ ಅವರ ಮದುವೆಯ ನೆಂಟರು. ಬಂಗಾರದಂತಹಾ ಹುಡುಗಿಯನ್ನು ಅದಾಗಲೇ ಅವರ ಮನೆಗೆ ವರದಕ್ಷಿಣೆಯೊಂದಿಗೆ ಕಳಿಸಿಯಾಗಿತ್ತು. ಸೊಸೆಗೆ ಒಡವೆ, ಬಟ್ಟೆಯಿರಲಿ ಆರತಿಯನ್ನೂ ಮಾಡುವ ಇಚ್ಛೆ ವ್ಯಕ್ತಪಡಿಸದ ಮನೆಯನ್ನು ಕಂಡ ಸೀತಮ್ಮನವರಿಗೆ ಬೇಸರದ ಜೊತೆ ಕೋಪವೂ..


ಜನಾರ್ಧನರಾಯರಿಗೆ ಎರಡನೇ ಹೆಂಡತಿ ಸುಬ್ಬಮ್ಮನಿಂದ ಎಂಟು ಜನ ಮಕ್ಕಳು. ಅದರಲ್ಲಿ ಏಳು ಹೆಣ್ಣು, ಒಬ್ಬ ಗಂಡುಮಗು. ನಾಗರಿಕತೆಯ ಸೋಂಕನ್ನೇ ಅರಿಯದ ಸುಬ್ಬಮ್ಮನಂತೆಯೇ ಮಕ್ಕಳು ಸಹಾ ಬೆಳೆದಿದ್ದರು. ಇಂದಿರಳಿಗಂತೂ ನರಕಸದೃಶವಾದ ಆ ಮನೆಯಲ್ಲಿ ಪ್ರತಿಕ್ಷಣ ಕಳೆಯುವುದೂ ಕೂಡಾ ಸವಾಲಾಗುತ್ತಿತ್ತು. ದೈಹಿಕವಾಗಿ ಕೆಲಸದ ಹೊರೆ, ಅಷ್ಟೂ ಜನರಿಗೆ ಊಟ, ತಿಂಡಿ ಎಲ್ಲದರ ಭಾರವೂ ಅವಳ ಮೇಲೆಯೇ ಇದ್ದರೂ.. ಅವಾಚ್ಯ ಶಬ್ದಗಳಿಂದ ಬೈಗುಳಗಳು ಬೇಕಾದಷ್ಟು ಸಿಗುತ್ತಿತ್ತು. ಉಸಿರು ಕಟ್ಟುವಂತಹಾ ವಾತಾವರಣದಲ್ಲಿ ಗಂಡನ ಪ್ರೀತಿಯೂ ಅವಳ ಪಾಲಿಗೆ ಸಿಗಲಿಲ್ಲ. ಬದುಕು ಯಾಂತ್ರಿಕವಾಗಿ ಸಾಗುತ್ತಿತ್ತು. ಪ್ರೀತಿಯಿಂದ ಒಬ್ಬಳೇ ಮಗಳಾಗಿ ಬೆಳೆದಿದ್ದವಳಿಗೆ ಇಲ್ಲಿನ ಬದುಕಂತೂ ಅಸಹನೀಯವೇ.. ಆದರೂ, ಒಂದು ದಿನವೂ ದೂರದೇ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಳಾದರೂ.. ಗಂಡನ ಒಲವಿನ ನೋಟವೂ ಸಿಕ್ಕದೇ ಹೋದಾಗ ಮನಸ್ಸು ನಿರ್ಲಿಪ್ತತೆಯತ್ತ ಸಾಗುತ್ತಿತ್ತು. 


ಸುಬ್ಬಮ್ಮ ಹಾಗೂ ಅವರ ಮಗಳು ಮಂಗಳಾರಂತೂ ಇವರ ಅಸಹಾಯಕತೆ, ಒಳ್ಳೆಯತನವನ್ನು ಚೆನ್ನಾಗಿಯೇ ದುರುಪಯೋಗಪಡಿಸಿಕೊಂಡು ಇಂದಿರಾಳ ಒಡವೆ, ಬಟ್ಟೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಮುಂದೆ ಇಂದಿರಾ ಕೆಲಸಕ್ಕೆ ಹೋಗಿ ಸಂಬಳ ತಂದು ಗಂಡ ಅತ್ತೆಯ ಕೈಗಿಡುವ ಯಂತ್ರದಂತೆಯೇ ಆಗಿ ಹೋದಳು. ಆಗ ಅಲ್ಲಿ ಅವಳು ಸಿಕ್ಕವಳೇ ಅಕ್ಕನಂತಹ ವಾಣಿ. ನಿಷ್ಕಲ್ಮಶ ಮನಸ್ಸಿನಿಂದ ಎಷ್ಟೋ ಬಾರಿ ತನ್ನದೇ ಹಣದಿಂದ ಆಕೆಯ ಬಸ್ ಚಾರ್ಜು, ತಿಂಡಿ ಖರ್ಚನ್ನು ಬರಿಸುತ್ತಿದ್ದವಳು. ಇಂದಿರಾಳ ಮನಸ್ಸಿನ ಆಲೋಚನೆಗೆ ಸ್ವಲ್ಪವಾದರೂ ತಂಪೆರೆದವಳು. ಮನೆಯ ಪಕ್ಕದಲ್ಲಿಯೇ ಇದ್ದ ಕಾಲು ಊನವಾಗಿದ್ದ ವತ್ಸಲಾ ಹಾಗೂ ಮನೆಯವರು ಕೂಡ ಇಂದಿರಾಳ ಪಾಲಿಗೆ ಭರವಸೆಯೇ.. 


ಅರವಿಂದ ಇದೆಲ್ಲವನ್ನೂ ನೋಡಿ ಕೊರಗುವಂತಾಗಿತ್ತು. ಭೀಮಸೇನರಾಯರಿಗಂತೂ ಕ್ಷಣಕ್ಷಣವೂ ತಮ್ಮ ತಪ್ಪಿನ ಅರಿವಾಗುತ್ತಿತ್ತು. ಅದರ ಜೊತೆಗೆ ಪತ್ನಿ ಸೀತಮ್ಮನವರ ಕೋಪವನ್ನೂ ತಾಳಿಕೊಳ್ಳಬೇಕಾಗಿತ್ತು. ಅರವಿಂದನೇ ಆಗಾಗ ವಾತಾವರಣ ತಿಳಿಗೊಳಿಸುತ್ತಿದ್ದ. ಇದ್ದುದರಲ್ಲಿ ರುಕ್ಮಿಣಮ್ಮ ಮಗಳಂತೆ ನೋಡಿಕೊಂಡಿದ್ದ ಸೊಸೆಯನ್ನು ವಾರಕ್ಕೊಮ್ಮೆ ಹೋಗಿ ನೋಡಿ ಬರುತ್ತಿದ್ದರಾದರೂ.. ಅಲ್ಲಿ ಚುಚ್ಚುಮಾತುಗಳನ್ನು ಕೇಳಬೇಕಿತ್ತು. ಅರವಿಂದನ ಸ್ನೇಹಿತೆ ಲತಾಳಿಗೆ ಆತನ ಮೇಲೆ ಮನಸ್ಸಾಗಿ ಆತನ ಜೊತೆಗೆ ವಿವಾಹ ನಿಷ್ಕರ್ಶೆಯವರೆಗೂ ಹೋಗಿದ್ದನಾದರೂ.. ಅರವಿಂದ ಸ್ಪಷ್ಟವಾಗಿಯೇ ಇಂದಿರಾ ಹಾಗೂ ತನ್ನ ವಿಚಾರವನ್ನು ಬಿಚ್ಚಿಟ್ಟಿದ್ದ. 


ತನ್ನ ಸ್ವಾಭಿಮಾನವನ್ನು ಬದಿಗೊತ್ತಿ ನಾಗರಾಜನನ್ನು ಸರಿ ಮಾಡುವ ಅರವಿಂದನ ಪ್ರಯತ್ನವಂತೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿತ್ತು. ಸುಬ್ಬಮ್ಮನವರ ಒಂಬತ್ತನೇ ಹೆರಿಗೆಯ ಸಂದರ್ಭ ಹಾಗೂ ಮಂಗಳ ನಡೆದುಕೊಳ್ಳುತ್ತಿದ್ದ ರೀತಿ, ಒಣಗಿ ಕಡ್ಡಿಯಂತಾಗಿ ಎಲ್ಲವನ್ನು ಮೌನವಾಗಿ ಬರಿಸುತ್ತಿದ್ದ ಇಂದಿರಾ, ಮಲತಾಯಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ನಾಗರಾಜ, ಬಾಯಿದ್ದೂ ಮೂಕನಾಗಿದ್ದ ಜನಾರ್ಧನರಾಯರು, ಹೆಣ್ಣಾಗಿಯೂ ಇಷ್ಟೆಲ್ಲ ದರ್ಪ ತೋರುವ ಸುಬ್ಬಮ್ಮ ಹಾಗೂ ಸಂಸಾರದ ಮೇಲೆ ಓದುಗರಿಗೇ ಅಷ್ಟು ಕೋಪ ಬರುತ್ತದೆ.


ಭೀಮಸೇನರಾಯರ ಅನಾರೋಗ್ಯದ ಪರಿಸ್ಥಿತಿಯಲ್ಲಿ ಅರವಿಂದ ತನ್ನ ವಿವಾಹಕ್ಕೆ ಒಪ್ಪಿಗೆ ಕೊಡುತ್ತಾನೆ. ಇಂದಿರಾ ಕೂಡಾ ಆತನನ್ನು ಮದುವೆಗೆ ಒಪ್ಪಿಸುವ ಪ್ರಯತ್ನದಲ್ಲಿ ಭಾಗಿಯಾಗುತ್ತಾಳೆ. ಆದರೆ, ಮುಂದೆ ಅವಳ ಪರಿಸ್ಥಿತಿ ಏನಾಗುತ್ತದೆ..? ಎಲ್ಲವನ್ನು ತಿಳಿದ ಲತಾ ಅರವಿಂದನ ಬದುಕಲ್ಲಿ ವಹಿಸುವ ಪಾತ್ರವೇನು..? ವಾಣಿಯ ಬದುಕಿನ ಕಥೆ ಏನು..? ಸಹನೆಯಿಂದ ಗಂಡನ ಒಲವಿಗಾಗಿ ಕಾದ ಇಂದಿರಾಳಿಗೆ ಸಿಗುವುದಾದರೂ ಏನು..? ಇಲ್ಲಿ ಶುಭ ಮಿಲನವಾಗಿತ್ತು ಯಾರದ್ದು ಎಲ್ಲವನ್ನು ತಿಳಿಯಲು ಓದಿ ಸಾಯಿಸುತೆಯವರ ಶುಭಮಿಲನ ಕಾದಂಬರಿಯನ್ನು. 


ಪೂರ್ವಗ್ರಹ ಪೀಡಿತ ಮನಸ್ಸಿನಿಂದ ಮಗಳ ಬದುಕನ್ನು ತಾವಾಗಿಯೇ ಕಷ್ಟಕ್ಕೆ ನೂಕಿದ ತಂದೆಯ ಮನಸ್ಸಿನ ತುಮುಲಗಳು, ಒದ್ದಾಟ ಹಾಗೂ ಅರವಿಂದ ಒಳಗೊಳಗೆ ಕೊರಗುತ್ತಾ.. ನರಳುವ ಪಾತ್ರಗಳು, ಗಂಡು ಕೂಡ ಹೆಣ್ಣಿನಷ್ಟೇ ಭಾವನಾಮಯಿ ಎಂಬುದರ ಚಿತ್ರಣವಾಗಿ ಕಾಣುತ್ತವೆ. ರುಕ್ಮಿಣಮ್ಮ, ಸೀತಮ್ಮನವರು ಒಳ್ಳೆಯತನದ ಪ್ರತಿರೂಪವಾಗಿದ್ದರೆ.. ಸುಬ್ಬಮ್ಮನ ಪಾತ್ರವಂತೂ ರೇಜಿಗೆ ಹುಟ್ಟಿಸುತ್ತದೆ. ಇಂದಿರಾಳ ಪಾತ್ರ ಇನ್ನಷ್ಟು ಗಟ್ಟಿಯಾಗಿದ್ದರೆ ಅವಳು ಅಷ್ಟು ಸಹನಾಮಯಿಯಾಗದಿದ್ದರೆ..! ಎನ್ನುವ ಆಲೋಚನೆಯೊಂದು ಮೂಡದೇ ಹೋಗಲಿಲ್ಲ. ಸರಾಗ, ಸುಂದರ ಓದಿಗೆ ದಕ್ಕಿದ ಕಾದಂಬರಿಯಿದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ