ಬುಧವಾರ, ಏಪ್ರಿಲ್ 22, 2026

ಮಗಳಂತೆಯೇ ಬೆಳೆಸಿದ ಬ್ಯುಸಿನೆಸ್ : ಎಲ್ಲರ ಮೆಚ್ಚಿನ ನಿರ್ಮಾ ( ಬ್ಯುಸಿನೆಸ್ ಡೈರಿ ಪುಟ - 23)


"ವಾಷಿಂಗ್ ಪೌಡರ್ ನಿರ್ಮಾ.. ಹಾಲಿನಂತ ಬಿಳುಪು.. ನಿರ್ಮಾದಿಂದ ಬಂತು......... ಎಲ್ಲರ ಮೆಚ್ಚಿನ ನಿರ್ಮಾ" ಎನ್ನುತ್ತಾ ಅಚ್ಚ ಬಿಳಿ ಬಣ್ಣದ ಫ್ರಾಕ್ ಧರಿಸಿದ ಹುಡುಗಿಯ ಜಾಹೀರಾತು ಈಗಲೂ ಮರೆಯದೇ  ಗುನುಗುನಿಸುವಂತೆ ಮಾಡುತ್ತದೆ. ಅಲ್ಲವೇ..?? ಇಷ್ಟು ಆಕರ್ಷಕವಾಗಿ, ಪರಿಣಾಮಕಾರಿಯಾದ ಜಾಹೀರಾತು ಹೆಸರೇ ಸೂಚಿಸುವಂತೆ ನಿರ್ಮಾ ಎಂಬ ಪ್ರತಿಷ್ಠಿತ ಕಂಪನಿಯೊಂದರ ಜಾಹೀರಾತು. ಎಲ್ಲಾ ಬ್ಯುಸಿನೆಸ್ ಗಳೂ ದೊಡ್ಡ-ದೊಡ್ಡ ಕಛೇರಿ ಅಥವಾ ಬಿಲ್ಡಿಂಗ್ ನಿಂದಲೇ ಶುರುವಾದವುಗಳಲ್ಲ. ಆದರೆ, ಚಿಕ್ಕ ಕನಸೊಂದರ ಬೆನ್ನು ಹತ್ತಿ ಮನೆಯಿಂದಲೇ ಶುರು ಮಾಡಿ ದೊಡ್ಡ ಯಶಸ್ಸನ್ನು ಕಂಡುಕೊಂಡ ಕರ್ಸನ್ ಬಾಯಿ ಪಟೇಲ್ ಅವರ ಬ್ಯುಸಿನೆಸ್ 'ನಿರ್ಮಾ'. ಇಲ್ಲಿ ನಮಗೆ ಕೇವಲ ಬ್ಯುಸಿನೆಸ್ ಮಾತ್ರ ಕಾಣುವುದಿಲ್ಲ. ಮಗಳ ಹೆಸರನ್ನು ಜೀವಂತವಿಡಲು.. ಮಗಳಂತೆಯೇ ಬ್ಯುಸಿನೆಸ್ ಅನ್ನು ಬೆಳೆಸಿದ ತಂದೆ ಕರ್ಸನ್ ಬಾಯಿ  ಪಟೇಲ್ ಕಾಣುತ್ತಾರೆ


ಕರ್ಸನ್ ಬಾಯಿ ಪಟೇಲ್ ಹುಟ್ಟುವಾಗಲೇ ಬಾಯಿಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವರೇನಲ್ಲ. 1945 ರಂದು ಗುಜರಾತಿನ ಮೆಹಸಾನ ಜಿಲ್ಲೆಯ ಋಪ್ಪಾರ್ ಎನ್ನುವ ಪುಟ್ಟ ಹಳ್ಳಿಯೊಂದರಲ್ಲಿ, ಮಧ್ಯಮ ವರ್ಗದ ಒಂದು ರೈತಾಪಿ ಕುಟುಂಬದಲ್ಲಿ ಜನಿಸಿದರು. ಅವರಿಗೆ ಓದುವುದರ ಕುರಿತಾಗಿ ಹೆಚ್ಚಿನ ಆಸಕ್ತಿ. ಅದರಲ್ಲೂ ರಸಾಯನ ಶಾಸ್ತ್ರ ಅಂದರೆ ಕೆಮಿಸ್ಟ್ರಿಯಲ್ಲಂತೂ ಅಪಾರ ಆಸಕ್ತಿ.  21ನೇ ವಯಸ್ಸಿನಲ್ಲಿ ಬಿ.ಎಸ್ಸಿ ಕೆಮಿಸ್ಟ್ರಿ ಪದವಿ ಪಡೆದ ನಂತರ ತಮ್ಮ ಜೀವನೋಪಾಯಕ್ಕಾಗಿ ಒಂದು ಉದ್ಯೋಗಕ್ಕೆ ಸೇರುತ್ತಾರೆ. ಗುಜರಾತಿನ ಪ್ರಖ್ಯಾತ ಕಾಟನ್ ಮಿಲ್ ಎಂದೇ ಹೆಸರಾಗಿದ್ದ ಲಾಲ್ ಬಾಯಿ ಗ್ರೂಪ್ ನವರು ನಡೆಸುತ್ತಿದ್ದ ನ್ಯೂ ಕಾಟನ್ ಮಿಲ್ ನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ತಮ್ಮ ಮೊದಲ ಉದ್ಯೋಗವನ್ನು ಶುರು ಮಾಡುತ್ತಾರೆ. ಅಲ್ಲಿ ಉದ್ಯೋಗ ಮಾಡುತ್ತಿರುವಾಗಲೇ ತಮಗೆ ಇನ್ನೂ ಹೆಚ್ಚಿನ ಸಾಮರ್ಥ್ಯ ತೋರುವಂತಹಾ ಕೆಲಸ ಬೇಕು. ಚಾಲೆಂಜಿಂಗ್ ಆಗಿ ಇರುವಂತಹಾ ಬೇರೆ ಕೆಲಸ ಸಿಕ್ಕಿದರೆ ಚೆನ್ನಾಗಿರುತ್ತಿತ್ತು ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅವರ ಉದ್ಯೋಗದ ಬೇಟೆ ಅಲ್ಲಿಗೇ ನಿಲ್ಲದೆ, ಓದಿ, ಪರೀಕ್ಷೆ ಬರೆದು ಗುಜರಾತ್ ಸರ್ಕಾರದ ಜಿಯಾಲಜಿ ಮತ್ತು ಮೈನಿಂಗ್ ಡಿಪಾರ್ಟ್ಮೆಂಟ್ ನ ಸರ್ಕಾರಿ ಕೆಲಸಕ್ಕೆ ಸೇರುತ್ತಾರೆ.


ಇಷ್ಟಾದರೂ.. ಅವರ ಜ್ಞಾನದ ದಾಹ ಕಡಿಮೆಯಾಗಿರಲೇ ಇಲ್ಲ. ಕೆಮಿಸ್ಟ್ರಿಯಲ್ಲಿ ತಾವು ಹೆಚ್ಚಿನದೇನನ್ನಾದರೂ ಕಂಡು ಹಿಡಿಯಲೇ ಬೇಕು, ಸಾಧಿಸಲೇಬೇಕು.. ಹೊಸತನ್ನೇನಾದರೂ ಸಂಶೋಧಿಸಬೇಕು ಎನ್ನುತ್ತಾ ಮನೆಯ ಹಿಂಭಾಗದ 100 ಸ್ಕ್ವೇರ್ ಫೀಟ್ ನಷ್ಟಿದ್ದ ಪುಟ್ಟ ಜಾಗವನ್ನೇ ತಮ್ಮ ಪ್ರಯೋಗ ಶಾಲೆಯನ್ನಾಗಿಸಿಕೊಂಡಿದ್ದರು. ಹಾಗೆ ತಮ್ಮ ಪ್ರಯೋಗಶಾಲೆಯಲ್ಲಿ.. ಬಹಳಷ್ಟು ವಿಫಲ ಪ್ರಯತ್ನಗಳ ನಂತರ.. ಸೋಡಾ ಆಷ್ ಜೊತೆಗೆ ಇನ್ನೂ ಹಲವು ಬೇರೆ-ಬೇರೆಯ ರಾಸಾಯನಿಕ ವಸ್ತುಗಳನ್ನು ಸೇರಿಸಿ ಒಂದು ಡಿಟರ್ಜೆಂಟ್ ಪೌಡರ್ ಅನ್ನು ಕಂಡುಹಿಡಿದರು. ಹಾಗೆ ಕಂಡುಹಿಡಿದ ಡಿಟರ್ಜೆಂಟ್ ಅನ್ನು ಮೊದಲಿಗೆ ತಮ್ಮ ಮನೆಯ ಸುತ್ತಮುತ್ತಲಿನವರಿಗೆ ಮಾರಾಟ ಮಾಡಲು ತೊಡಗುತ್ತಾರೆ.


ಅವರು, ಪ್ರತಿ ದಿನ ಕೆಲಸಕ್ಕಾಗಿ ತಮ್ಮ ಮನೆಯಿಂದ 17 ಕಿಲೋಮೀಟರ್ ಗಳನ್ನು ಸೈಕಲ್ ನಲ್ಲಿಯೇ ಕ್ರಮಿಸುತ್ತಿದ್ದರು. ಆ ಸಂದರ್ಭದಲ್ಲಿ ತಮ್ಮ ಉದ್ಯೋಗದ ಜೊತೆ ಜೊತೆಗೆ, ಸೈಕಲ್ ಮೇಲೆ ತಾವು ಕಂಡುಹಿಡಿದ ಡಿಟರ್ಜೆಂಟ್ ಪೌಡರ್ ಅನ್ನೂ ಹೇರಿಕೊಂಡು ಹೋಗುವಾಗ, ಬರುವಾಗ ಮಾರಾಟ ಮಾಡುತ್ತಿದ್ದರು. 


ಆಗಿನ ಕಾಲದಲ್ಲಿ ಕೇಕ್ ಮಾರಾಟ ಹಾಗೂ ಸರ್ಫ್ ಮಾರಾಟ ಮಾಡುವುದೆಂದರೆ ಅದು ಕೇವಲ ಹಣವಂತರ ಕೆಲಸ ಎಂಬ ನಂಬಿಕೆಯಿತ್ತು. ಅವುಗಳು ಪ್ರೀಮಿಯಂ ಪ್ರಾಡಕ್ಟ್ ಗಳು ಎಂದೇ ಖ್ಯಾತವಾಗಿದ್ದವು. ಅಲ್ಲದೆ, ಮಲ್ಟಿ ನ್ಯಾಷನಲ್ ಕಂಪನಿಗಳಾದ ಹಿಂದುಸ್ತಾನ್ ಲಿವರ್ ಹಾಗೂ ಪ್ರೊಕ್ಟರ್ & ಗ್ಯಾಂಬಲ್ ತಮ್ಮದೇ ಬ್ರ್ಯಾಂಡ್ ನ ಡಿಟರ್ಜೆಂಟ್ ಗಳನ್ನು ಮಾರಾಟ ಮಾಡುತ್ತಿದ್ದವು. ತಮ್ಮ ತಮ್ಮಲ್ಲೇ ಡಿಟರ್ಜೆಂಟ್ ಮಾರ್ಕೆಟ್ ಸ್ಥಾಪಿಸುವ ಸನ್ನಾಹದಲ್ಲಿ ಪೈಪೋಟಿಗಿಳಿದಿದ್ದವು. ಆಗ ಆ ಬ್ರ್ಯಾಂಡ್ ನ ಒಂದು ಕೆ.ಜಿ ಡಿಟರ್ಜೆಂಟ್ ಪೌಡರ್ ಬೆಲೆ 13 ರೂಪಾಯಿಗಳಾಗಿತ್ತು. ಆದರೆ, ಕರ್ಸನ್ ಬಾಯಿ ಪಟೇಲ್ ಕೊಡುತ್ತಿದ್ದ ಡಿಟರ್ಜೆಂಟ್ ನ ಬೆಲೆ 3 ರೂಪಾಯಿಯಿಂದ 3. 50 ರೂಪಾಯಿಯಷ್ಟಿತ್ತು. ಅಂದರೆ, ಅವುಗಳ ಕಾಲುಭಾಗದಷ್ಟು ಬೆಲೆಯಷ್ಟೇ.. 


ಮೊದಮೊದಲಿಗೆ ಈ ಕಮ್ಮಿ ಬೆಲೆಯ ಸರ್ಫ್ ಅನ್ನು ಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಏಕೆಂದರೆ, ಬೆಲೆ ಕಡಿಮೆ ಎಂದಾಗ ಮೊದಲಿಗೆ ಎಲ್ಲರ ಗಮನ ಹರಿಯುವುದು ಗುಣಮಟ್ಟದ ಮೇಲೆ. ಕಡಿಮೆ ಹಣ ಎಂದರೆ ಕಡಿಮೆ ಗುಣಮಟ್ಟವಿರಬಹುದು ಎಂಬ ಭಾವನೆಯಿಂದ ಹಿಂದೇಟು ಹಾಕುತ್ತಿದ್ದರು. "

ನೀವು ಈ ಸರ್ಫ್ ಬಳಸಿ. ಇದು ನಿಮಗೆ ಇಷ್ಟವಾಗದಿದ್ದರೆ ಅಥವಾ ಗುಣಮಟ್ಟ ಕಡಿಮೆ ಇದ್ದರೆ.. ನೀವು ಇದನ್ನು ವಾಪಸ್ ಕೊಟ್ಟು, ನಿಮ್ಮ ಹಣ ಪಡೆಯಬಹುದು" ಎಂಬ ಭರವಸೆಯ ಆಮಿಷದಿಂದ ತಮ್ಮ ವ್ಯಾಪಾರದ ಬುನಾದಿ ಹಾಕಿದರು. ಆಗ ಕೆಳಮಧ್ಯಮ ವರ್ಗದ ಕೆಲ ಮಹಿಳೆಯರು ತಮ್ಮ ಕೈಕೆಗೆಟುಕುವ ದರದಲ್ಲಿದ್ದ ಈ ಸರ್ಫ್ ಅನ್ನು ಕೊಂಡು ಉಪಯೋಗಿಸಲು ಶುರುವಿಟ್ಟರು. ಬಾಯಿಂದ ಬಾಯಿಗೆ ಪ್ರಚಾರ ಪಡೆದ ಈ ಸರ್ಫ್.. ನಂತರ, ಎಲ್ಲರ ಮನೆಯಲ್ಲೂ ಬಳಸಲ್ಪಡುವ ಹಾಗೂ ಎಲ್ಲರೂ ನಂಬುವ ಹೆಚ್ಚು ಗುಣಮಟ್ಟದ ಸರ್ಫ್ ಎಂದೇ ಖ್ಯಾತವಾಯಿತು.


ಇದಾದ ಮೂರು ವರ್ಷಗಳ ನಂತರ ಎಂದರೆ 1972 ರಲ್ಲಿ ತಮ್ಮ ಉದ್ಯೋಗವನ್ನು ಸಂಪೂರ್ಣವಾಗಿ ತೊರೆದು ಈ ಡಿಟರ್ಜೆಂಟ್ ಪೌಡರ್ ಮಾರಾಟಕ್ಕಾಗಿ ಅಹಮದಾಬಾದ್ ನಲ್ಲಿ ಒಂದು ಅಂಗಡಿಯನ್ನು ಶುರುಮಾಡಿದರು.


ಅಷ್ಟೊತ್ತಿಗಾಗಲೇ ಅವರ ಮನೆಯಲ್ಲಿ ನಡೆದಿದ್ದ ಒಂದು ದುರ್ಘಟನೆ ಸಂಪೂರ್ಣವಾಗಿ ಅವರ ಯೋಚನಾ ಲಹರಿಯನ್ನು ಬದಲಿಸಿತ್ತು. ಅದೆಲ್ಲದಕ್ಕೂ ಕಾರಣವಾಗಿದ್ದು ಅವರ ಮಗಳು. ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣುಮಗಳಿದ್ದ ಕರ್ಸನ್ ಬಾಯಿಯವರಿಗೆ, ಮಗಳೆಂದರೆ ಅತ್ಯಂತ ಪ್ರೀತಿ. ಆದರೆ, ಆಕೆ ಒಂದು ಕಾರು ಅಪಘಾತದಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದಾಗ.. ಅವರು ಮೊದಲಿಗೆ ದುಃಖಪಟ್ಟರು. ಆ ದುಃಖವನ್ನೆಲ್ಲ ಮರೆಸುವಂತೆ ಕೆಲಸದಲ್ಲಿ ತೊಡಗಿಕೊಂಡರು ಹಾಗೂ ತನ್ನ ಮಗಳನ್ನು ಅವಳ ಹೆಸರಿನಿಂದ ಬದುಕಿಸಿಕೊಳ್ಳುವ ಆಲೋಚನೆಯಿಂದ ತಮ್ಮನ್ನು ತಾವು ಬ್ಯುಸಿಯಾಗಿಸಿಕೊಂಡರು. ಆಕೆಯ ಹೆಸರನ್ನೇ ತಮ್ಮ ಡಿಟರ್ಜೆಂಟ್ ಪ್ರಾಡಕ್ಟ್ ಗೆ ಇಟ್ಟರು. ನಿರುಪಮಾ ಎಂಬ ಹೆಸರಿನ ಆಕೆಯನ್ನು ಪ್ರೀತಿಯಿಂದ 'ನಿರ್ಮಾ' ಎಂದೇ ಕರೆಯುತ್ತಿದ್ದರು. ಆ ಹೆಸರಿನೊಂದಿಗೆ.. ಅವರ ಮಗಳನ್ನು ಹೋಲುವಂತೆ, ಬಿಳಿ ಫ್ರಾಕ್ ಹಾಕಿದ ಹುಡುಗಿಯ ರೇಖಾಚಿತ್ರವನ್ನು ತಯಾರಿಸಿ, ಅದನ್ನೇ ತಮ್ಮ ಬ್ಯುಸಿನೆಸ್ ಲೇಬಲ್ ಮಾಡಿಕೊಂಡರು. ಬದುಕಿದ್ದಾಗ ಕೆಲವೇ ಮಂದಿಗೆ ಮಾತ್ರ ಪರಿಚಯವಿದ್ದ ಅವರ ಮಗಳು ನಿರ್ಮಾ.. ಬ್ಯುಸಿನೆಸ್ ನ ಹೆಸರಾಗಿ ದೇಶದೆಲ್ಲೆಡೆ ನೆನಪಿಟ್ಟುಕೊಳ್ಳುವಂತೆ ಜೀವಂತವಾಗಿ ಉಳಿದಳು.


ಪಟ್ಟಣದಲ್ಲಿ ಶುರುವಾದ ಅಂಗಡಿಗೆ ಜನಸಾಗರವೇನೂ ಹರಿದು ಬರಲಿಲ್ಲ. ಬದಲಾಗಿ ಅವರಿಗೆ ಬಹಳಷ್ಟು ಸವಾಲುಗಳು ಎದುರಾದವು. ತಮ್ಮದೇ ಅಂಗಡಿಯ ಬದಲಾಗಿ ಇರುವ ಅಂಗಡಿಗಳಲ್ಲಿಯೇ ನಿರ್ಮಾವನ್ನಿಟ್ಟು ಮಾರಾಟ ಮಾಡಲು ವ್ಯಾಪಾರಿಗಳಲ್ಲಿ ಕೇಳಿಕೊಂಡಾಗ.. ಅವರು ಮೊದಮೊದಲಿಗೆ ಒಪ್ಪಲಿಲ್ಲ. ಬ್ರ್ಯಾಂಡ್ ನೇಮ್ ಆಗಿರದ ಇದನ್ನು ಯಾವುದೋ ಒಂದು ಮೂಲೆಯಲ್ಲಿ ಕಾಣದಂತೆ ಇಟ್ಟರು. ಜೊತೆಗೆ, ಮಾರಾಟವಾದರೂ.. ಮಾರಾಟವಾಗಲಿಲ್ಲ ಎಂಬ ನೆಪ ಹೇಳಿ ನಿರ್ಮಾವನ್ನು ಕೊಳ್ಳುವುದನ್ನು ಕಡಿಮೆ ಮಾಡಿದ್ದಲ್ಲದೆ.. ಮಾರಾಟವಾಗದ ಪ್ರಾಡಕ್ಟ್ ಗಳನ್ನು ಹಿಂತಿರುಗಿಸಲೂ ಒಪ್ಪಲಿಲ್ಲ. ಇನ್ನೂ ಕೆಲವರು, ಮಾರಾಟವಾದವುಗಳಿಗೆ ಹಣ ಕೊಡುವಾಗ ಸಾಕಷ್ಟು ನಿಧಾನ ಮಾಡಿದರು. ಇದೆಲ್ಲದರ ಫಲವಾಗಿ ಬ್ಯುಸಿನೆಸ್ ಗೆ ನಷ್ಟವಾಗತೊಡಗಿತ್ತು. ಈ ನಷ್ಟದಿಂದ ಮೇಲೇಳಲು ಅವರು ಕಂಡುಕೊಂಡ ಉಪಾಯವೇ ಜಾಹೀರಾತು. ಹೆಚ್ಚಿನ ಜನರು ವೀಕ್ಷಿಸುತ್ತಿದ್ದ ದೂರದರ್ಶನದಲ್ಲಿ ಮೊತ್ತ ಮೊದಲ ನಿರ್ಮಾ ಜಾಹೀರಾತು ಪ್ರಸಾರವಾಯಿತು. ನಂತರ ರೇಡಿಯೋಗಳಲ್ಲಿ, ಪೋಸ್ಟರ್.. ಹೀಗೆ ಎಲ್ಲೆಡೆ ನಿರ್ಮಾ ತನ್ನ ಪ್ರಸಿದ್ಧಿಯನ್ನು ಪಡೆಯುತ್ತಾ.. ಮನೆಮನೆಗಳಲ್ಲಿಯೂ ತನ್ನ ಸ್ಥಾನವನ್ನು ಆಕ್ರಮಿಸಿ, ಜಾಹೀರಾತಿನ ಹಾಡನ್ನು ಎಲ್ಲರೂ ಗುನುಗುವಂತೆ ಮಾಡತೊಡಗಿತ್ತು. 


ಬ್ಯುಸಿನೆಸ್ ಎಂದಾಗ ಎಷ್ಟೋ ಜನ ಉದ್ಯೋಗಿಗಳಿಂದ ಶುರುವಾಗುತ್ತದೆ ಎನ್ನುವ ಮಾತನ್ನು ಸುಳ್ಳು ಮಾಡಿದ್ದ ಕರ್ಸನ್ ಬಾಯಿ ಏಕವ್ಯಕ್ತಿಯಾಗಿ ಕಂಪನಿ ಶುರು ಮಾಡಿದವರು. ಇಂದು ನಿರ್ಮಾ ಕಂಪನಿಯಲ್ಲಿ 14000 ಉದ್ಯೋಗಿಗಳಿದ್ದಾರೆ. ಡಿಟರ್ಜೆಂಟ್ ಪೌಡರ್ ಮಾತ್ರವಲ್ಲದೆ, ಡಿಟರ್ಜೆಂಟ್ ಸೋಪ್, ಬ್ಯೂಟಿ ಸೋಪ್, ಶಾಂಪೂ, ಟಾಯ್ಲೆಟ್ ಸೋಪ್, ಟೂತ್ ಪೇಸ್ಟ್, ಪ್ರೀಮಿಯಂ ಬಾತ್ ಸೋಪ್.. ಹೀಗೆ ಹಲವಾರು ರೀತಿಯ ಪ್ರಾಡಕ್ಟ್ ಗಳನ್ನು ತಯಾರಿಸಿದರು. ಇದರಲ್ಲಿ ಟೂಥ್ ಪೇಸ್ಟ್ ಹಾಗೂ ಶಾಂಪೂ ಜನರನ್ನು ಸೆಳೆಯುವಲ್ಲಿ ವಿಫಲಗೊಂಡದ್ದರಿಂದ.. ಅವುಗಳ ಉತ್ಪಾದನೆಯನ್ನು ನಿಲ್ಲಿಸಿ, ಉಳಿದ ಪ್ರಾಡಕ್ಟ್ ಗಳ ಮೇಲೆ ಗಮನ ಹರಿಸಿದರು. ಇಂದಿಗೂ ಮಾರ್ಕೆಟ್ ನಲ್ಲಿ 35% ಡಿಟರ್ಜೆಂಟ್ ನಲ್ಲಿ ಹಾಗೂ 20% ಸೋಪ್ ಗಳಲ್ಲಿ ನಿರ್ಮಾದ ಪಾಲಿದೆ. 


ಕರ್ಸನ್ ಬಾಯಿಯವರಿಗೆ 1990ರಲ್ಲಿ ಉದ್ಯೋಗ ರತ್ನ ಪ್ರಶಸ್ತಿ, 2006ರಲ್ಲಿ ಅರ್ನಿಸ್ಟ್ & ಯಂಗ್ ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿ, 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಪೋರ್ಬ್ಸ್ ಪ್ರಕಾರ ಜಗತ್ತಿನ 39ನೇ ಅತಿ ಶ್ರೀಮಂತ ವ್ಯಕ್ತಿ ಕೂಡಾ. 


ಇಷ್ಟೇ ಅಲ್ಲದೆ.. 2007ರಲ್ಲಿ ನಿರ್ಮಾ ಅಮೆರಿಕಾದ ಕಚ್ಚಾ ವಸ್ತುಗಳನ್ನು ಉತ್ಪಾದಿಸುವ ಕಂಪನಿಯಾದ ಸೆರ್ಲಸ್ ವ್ಯಾಲಿ ಮಿನರಲ್ಸ್ ಅನ್ನು ಕೊಂಡುಕೊಂಡು ಇಂದಿಗೂ ವಿಶ್ವದಲ್ಲಿ ಸೋಡಾ ಆಶ್ ಉತ್ಪಾದಕರಲ್ಲಿ ಮೊತ್ತಮೊದಲ ಸ್ಥಾನದಲ್ಲಿದೆ. ಸೋಡಾ ಆಶ್ ಎಂಬುದನ್ನು ಸೋಡಿಯಂ ಕಾರ್ಬೋನೇಟ್ ಎಂದೂ ಕರೆಯುತ್ತಾರೆ. ಇದು ಡಿಟರ್ಜೆಂಟ್ ಪೌಡರ್ ಗಳ ಹಾಗೂ ಸೋಪುಗಳ ತಯಾರಿಕೆಯ ಕಚ್ಚಾ ವಸ್ತುವಾಗಿ ಮಾತ್ರವಲ್ಲದೆ, ಗಾಜುಗಳ ತಯಾರಿಕೆಯಲ್ಲಿ ಹಾಗೂ ರಿಚಾರ್ಜೆಬಲ್ ಬ್ಯಾಟರಿಗಳ ತಯಾರಿಕೆಯಲ್ಲಿಯೂ ಕಚ್ಚಾ ವಸ್ತುವಾಗಿ ಬಳಕೆಯಾಗುತ್ತದೆ. 


2014ರಲ್ಲಿ ನಿಂಬಾಲ್ ಎಂಬಲ್ಲಿ ತಮ್ಮದೇ ಆದ ಸಿಮೆಂಟ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿದರು. 2018ರಲ್ಲಿ ಲಾಫರ್ಜ್ ಎನ್ನುವ ಎನ್ನುವ ಕಂಪನಿಯನ್ನೂ.. ಫೆಬ್ರವರಿ 2020ರಲ್ಲಿ ಎಮ್ಮಿ ಸಿಮೆಂಟ್ ಅನ್ನೂ ಕೊಂಡುಕೊಂಡರು. 


1995ರಲ್ಲಿ, ನಿರ್ಮಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬ ಹೆಸರಿನಲ್ಲಿ ಇಂಜಿನಿಯರಿಂಗ್ ಕಾಲೇಜನ್ನು, ನಿರ್ಮಾ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ ಎಂಬ ಹೆಸರಿನಲ್ಲಿ ಫಾರ್ಮಸಿ ಕಾಲೇಜ್ ಜೊತೆಗೆ ನಿರ್ಮಾ ಫೌಂಡೇಶನ್ ಅಂಡ್ ರಿಸರ್ಚ್ ಅನ್ನು ಸ್ಥಾಪಿಸಿದರು. ಇವೆಲ್ಲವನ್ನೂ ಒಟ್ಟು ಸೇರಿಸಿ 2013ರಲ್ಲಿ ನಿರ್ಮಾ ಯುನಿವರ್ಸಿಟಿ ಸೈನ್ಸ್ ಅಂಡ್ ಟೆಕ್ನಾಲಜಿ ಎಂಬ ವಿಶ್ವವಿದ್ಯಾನಿಲಯವೇ ನಿರ್ಮಾಣವಾಗಿದೆ.


ಹೀಗೆ 1969 ರಲ್ಲಿ ಶುರುವಾದ ಕಂಪನಿ ಯನ್ನು ಸ್ಥಾಪಿಸಿದ ಕರ್ಸನ್ ಬಾಯಿ ಪಟೇಲ್ ಅವರು 2010ರಿಂದ ತಮ್ಮ ನಿವೃತ್ತಿ ಪಡೆದಿದ್ದಾರೆ. ಸದ್ಯಕ್ಕೆ ಇವರ ಇಡೀ ಬ್ಯುಸಿನೆಸ್ ಅನ್ನು ಇವರ ಇಬ್ಬರು ಮಕ್ಕಳಾದ ರಾಕೇಶ್ ಪಟೇಲ್ ಹಾಗೂ ಹಿರಣ್ ಬಾಯಿ ಪಟೇಲ್ ನಿರ್ವಹಿಸುತ್ತಿದ್ದಾರೆ. 2012ರಿಂದ ನಿರ್ಮಾ ಕಂಪನಿ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಬದಲಾಗಿದೆ.


ನಿರ್ಮಾದಿಂದ ಕಲಿಯಬೇಕಾದ ಬ್ಯುಸಿನೆಸ್ ಪಾಠಗಳು ಸಾಕಷ್ಟಿವೆ. ಯಾವುದೇ ಸಾಧನೆ ಮಾಡಲು ಹೊರಡುವಾಗ.. ನನಗೆ ಆ ರೀತಿಯ ವ್ಯವಸ್ಥೆ ಇರಲಿಲ್ಲ, ಹಣವಿರಲಿಲ್ಲ ಎಂದೆಲ್ಲ ಸಬೂಬು ಹೇಳುವವರಿಗೆ.. ತಮಗಿದ್ದ ಕಡಿಮೆ ಅವಕಾಶ, ಮಧ್ಯಮ ವರ್ಗದ ರೈತರ ಕುಟುಂಬದಲ್ಲಿ ಬೆಳೆದು ಕೇವಲ ಸಮಯ, ಸಂಶೋಧನೆ ಹಾಗೂ ಪರಿಶ್ರಮದಿಂದಲೇ ನಾವು ಯಾವ ಬ್ಯುಸಿನೆಸ್ ಗೆ ಬೇಕಾದರೂ ಬುನಾದಿ ಹಾಕಬಹುದು. ಆದರೆ, ಇದೆಲ್ಲಕ್ಕೂ ಮುಖ್ಯವಾದದ್ದು ರಿಸರ್ಚ್ ಹಾಗೂ ಡೆವಲಪ್ಮೆಂಟ್. ನಮ್ಮ ಬ್ಯುಸಿನೆಸ್ ಹಾಗೂ ಪ್ರಾಡಕ್ಟ್ ಗಾಗಿ ಮಾಡುವ ಸಂಶೋಧನೆ, ಅಷ್ಟೇ ಪರಿಣಾಮಕಾರಿಯಾಗಿ.. ಹಂತ-ಹಂತವಾಗಿ ಅದನ್ನು ನವೀಕರಿಸುವುದು ಬ್ಯುಸಿನೆಸ್ ನ ಯಾವುದೇ ಪ್ರಾಡಕ್ಟ್ ನ ಬುನಾದಿ.


ಯಾವ ಕೆಲಸವೂ ದೊಡ್ಡದಲ್ಲ ಅಥವಾ ಯಾವ ಕೆಲಸವೂ ಚಿಕ್ಕದಲ್ಲ. ಯಾವುದೇ ಕಂಪನಿಯ ಸಿ.ಈ.ಓ ಆಗಬೇಕು ಎಂದ ಮಾತ್ರಕ್ಕೆ.. ಕೇವಲ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯವಿದ್ದರೆ ಸಾಲದು ಅದಕ್ಕಾಗಿ ಬೀದಿಗಿಳಿಯಲೂ ಸಿದ್ದರಿರಬೇಕು. ಆಳಾಗಿ ದುಡಿಯುವವ, ಅರಸನಾಗಿ ಉಣ್ಣಬಲ್ಲ ಎಂಬ ಮಾತನ್ನು.. ಯಾವ ಕೀಳಿರಿಮೆಯೂ ಇಲ್ಲದೆ, ತಾವು ಬೈಸಿಕಲ್ ಮೇಲೆಯೇ ಡಿಟರ್ಜೆಂಟ್ ಪೌಡರ್ ಮಾರುತ್ತಾ ತೋರಿಸಿಕೊಟ್ಟಿದ್ದಾರೆ ಕರ್ಸನ್ ಬಾಯ್ ಪಟೇಲ್.


ಯಾವುದೇ ಬ್ಯುಸಿನೆಸ್ ನಲ್ಲಿ ಮೊದಲಿಗೆ ಬೇಕಾದದ್ದು ಗ್ರಾಹಕರ ನಂಬಿಕೆ. ಅದನ್ನು ಗಳಿಸಲು, ಅವರು ಕೊಟ್ಟ ಹಣಕ್ಕೆ ಮೋಸ ಮಾಡದಂತಹಾ ಗುಣಮಟ್ಟದ ಪ್ರಾಡಕ್ಟ್ ನೀಡಬೇಕು. ಬ್ಯುಸಿನೆಸ್ ಹೆಚ್ಚಾಗಲು ಮೂಲ ಕಾರಣ ಇದೇ ಎಂದರೆ ಅತಿಶಯೋಕ್ತಿಯಲ್ಲ.


ಹೆಚ್ಚಿನ ಕಂಪನಿಗಳು ಬಳಸುವ ಬ್ಯುಸಿನೆಸ್ ತಂತ್ರವೆಂದರೆ ಟಾಪ್-ಡೌನ್ ಅಪ್ರೋಚ್. ಎಂದರೆ, ದೊಡ್ಡ-ದೊಡ್ಡ ಪಟ್ಟಣಗಳಿಂದ ಶುರು ಮಾಡಿ ಸಣ್ಣ-ಸಣ್ಣ ಹಳ್ಳಿಗಳಿಗೆ ಮಾರಾಟಕ್ಕಾಗಿ ತಮ್ಮ ಪ್ರಾಡಕ್ಟ್ ಗಳನ್ನು ತರುತ್ತಾರೆ. ಆದರೆ, ಕರ್ಸನ್ ಬಾಯಿ ಇಲ್ಲಿ ಅದೆಲ್ಲದಕ್ಕೂ ವಿರುದ್ಧವಿರುವಂತೆ.. ಅಂದರೆ, ಪುಟ್ಟ-ಪುಟ್ಟ ಹಳ್ಳಿಗಳಿಂದ ಅದರಲ್ಲೂ ಕೆಳಮಧ್ಯಮ ವರ್ಗದವರಿಂದ ಶುರು ಮಾಡಿ ಮೇಲ್ವರ್ಗದವರೆಗೂ ತಲುಪಿಸಿದರು. ಯಾವ ಪ್ರಾಡಕ್ಟ್ ಮಾರಾಟಕ್ಕೆ ಯಾವ ಸ್ಥಳ ಹಾಗೂ ಯಾವ ವರ್ಗದ ಜನ ಸೂಕ್ತ ಎಂಬುದನ್ನು ಅರಿಯುವುದೂ ಅಷ್ಟೇ ಮುಖ್ಯ. 


ಜೀವನದಲ್ಲಿ ಒಂದೇ ಗುರಿ ಇಟ್ಟುಕೊಂಡು ಅದರಂತೆ ಮುನ್ನಡೆಯಬೇಕು. ಎರಡು ದೋಣಿಯ ಮೇಲೆ ಕಾಲಿಡಬಾರದು ಎನ್ನುವ ಮಾತನ್ನು ಕೇಳಿರುತ್ತೇವೆ. ಆದರೆ ಬ್ಯುಸಿನೆಸ್ ನಲ್ಲಿ ಈ ತಂತ್ರ ಕೆಲವೊಮ್ಮೆ ಉಪಯುಕ್ತವಾಗಲಾರದು. ಏಕೆಂದರೆ, ಬ್ಯುಸಿನೆಸ್ ನಲ್ಲಿ ಕೇವಲ ಒಂದೇ ಪ್ರಾಡಕ್ಟ್ ಅನ್ನು ಸೇಲ್ ಮಾಡುತ್ತಿದ್ದರೆ.. ಅದಕ್ಕೆ ವಿರೋಧಿಗಳು ಹುಟ್ಟಿಕೊಂಡರೆ, ಮುಂದಿನ ದಿನಗಳಲ್ಲಿ ಬೇಡಿಕೆ ಕಡಿಮೆಯಾದರೆ ಅಥವಾ ತಂತ್ರಜ್ಞಾನದಿಂದ ಅದರ ಮಾರಾಟದ ಮೇಲೆ ಪರಿಣಾಮ ಬೀರಿದರೆ.. ಬ್ಯುಸಿನೆಸ್ ನಷ್ಟದ ಹಾದಿ ಹಿಡಿಯಬಹುದು. ಹಾಗಾಗಿ, ಕೇವಲ ಒಂದೇ ಪ್ರಾಡಕ್ಟ್ ಗೆ ಸೀಮಿತವಾಗದೆ ವಿವಿಧ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡುತ್ತಾ.. ಹಂತ-ಹಂತವಾಗಿ ತಮ್ಮ ಬ್ಯುಸಿನೆಸ್ ಅನ್ನು ವಿಸ್ತಾರಗೊಳಿಸಿಕೊಂಡು ಲಾಭದ ಮಾರ್ಗದಲ್ಲಿ ನಡೆಯುತ್ತಾರೆ ಕರ್ಸನ್ ಬಾಯಿ. ಹಾಗೆ ನಷ್ಟವಾದ ಪ್ರಾಡಕ್ಟ್ ಗಳ ತಯಾರಿಕೆಯಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ, ಅದನ್ನು ಬಿಟ್ಟು ಸಂಶೋಧನೆಯ ಮೂಲಕ ಗ್ರಾಹಕರಿಗೆ ಉಪಯುಕ್ತವಾದ ಪ್ರಾಡಕ್ಟ್ ಅನ್ನು ನೀಡುವುದರಲ್ಲಿ ಮುಂದಿರಬೇಕು. ನಿರ್ಮಾ ಮಾಡಿದ್ದೂ ಅದನ್ನೇ.


ಕರ್ಸನ್ ಬಾಯಿ ಹಣದ ಹಿಂದೆ ಹೋಗಲಿಲ್ಲ. ಬದಲಾಗಿ, ಅವರ ಗುರಿಯ ಹಿಂದೆ ಹೊರಟರು. ಹಣ ತಾನಾಗಿಯೇ ಅವರನ್ನು ಹಿಂಬಾಲಿಸಿಕೊಂಡು ಬಂದಿತು. ತಮ್ಮ ಐಡಿಯಾಗಳ ಮೂಲಕ ಮಾಡಿದ ಸಂಶೋಧನೆಯಲ್ಲಿ.. ಸರಿಯಾದ ನಿರ್ಣಯವನ್ನು ತೆಗೆದುಕೊಂಡರೆ ಯಾವುದೇ ಗುರಿಯೂ ಅಸಾಧ್ಯವೇನಲ್ಲ ಎನ್ನುತ್ತಾ ಬ್ಯುಸಿನೆಸ್ ಪಾಠ ಹೇಳುತ್ತಿದೆ ನಿರ್ಮಾ. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ