ನೆಸ್ಲೆ ಎಂಬ ಹೆಸರನ್ನು ಮೊದಲ ಕೇಳಿದಾಗ ಈ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಇವರ ಯಾವ ಪ್ರಾಡಕ್ಟ್ ಅನ್ನು ಬಳಸಿದ್ದೇನೆ ಎಂಬ ಆಲೋಚನೆ ಮೂಡುತ್ತಿದೆಯೇ..?? ನಾವೆಲ್ಲರೂ ನೆಸ್ಲೆಯವರ ಒಂದಲ್ಲಾ ಒಂದು ಪ್ರಾಡಕ್ಟ್ ಗಳನ್ನು ಬಳಸಿಯೇ ಇರುತ್ತೇವೆ. ಏಕೆಂದರೆ, ನೆಸ್ಲೆಯ ಮಾರ್ಕೆಟಿಂಗ್ ಅಂತಹದ್ದು. ಅಪಾರ ಪ್ರಾಡಕ್ಟ್ ಗಳು, ವಿಸ್ತಾರವಾದ ಮಾರ್ಕೆಟ್ ನಿಂದ ಇಂದು ಮಾರ್ಕೆಟ್ ದೈತ್ಯ ಎಂದೇ ಹೆಸರು ಪಡೆದಿದೆ ನೆಸ್ಲೆ. ಇಂತಹಾ ನೆಸ್ಲೆಗೆ ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 150 ವರ್ಷದ ಇತಿಹಾಸವಿದೆ. ಹಾಗಾದರೆ, ಬಹಳ ಚಿರಪರಿಚಿತವಾದ ನೆಸ್ಲೆ ಪ್ರಾಡಕ್ಟ್ ಗಳ ಕೆಲವೇ ಕೆಲವು ಹೆಸರುಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಸೆರಿಲಾಕ್ ಅಥವಾ ಸೆರಿಗ್ರೋ, ನೆಸ್ಕೆಫೆ ಕಾಫಿ, ಮ್ಯಾಗಿ, ಕಿಟ್-ಕ್ಯಾಟ್, ಮಂಚ್, ಮಿಲ್ಕ್ ಮೇಡ್ ಇನ್ನೂ ಹಲವು. ಈ ಎಲ್ಲಾ ಪ್ರಾಡಕ್ಟ್ ಗಳ ಮೂಲಕ "ಗುಡ್ ಫುಡ್, ಗುಡ್ ಲೈಫ್" ಎಂದರೆ "ಉತ್ತಮ ಆಹಾರ ಹಾಗೂ ಉತ್ತಮ ಆರೋಗ್ಯ" ಎಂಬ ಧ್ಯೇಯವನ್ನು ಇಟ್ಟುಕೊಂಡು ಶುರುವಾದ ನೆಸ್ಲೆ ಕುರಿತು ತಿಳಿದು ಬರೋಣ ಬನ್ನಿ.
ನೆಸ್ಲೆ ನಮ್ಮ ದೇಶದಲ್ಲಿ ಮೊದಲು ಸೇಲ್ಸ್ ಅನ್ನು ಶುರು ಮಾಡಿದ್ದು 1912ರಿಂದ, ಚೆನ್ನೈ ಹಾಗೂ ಕೊಲ್ಕತ್ತಾದಲ್ಲಿಯಾದರೂ.. ನೆಸ್ಲೆ ಶುರುವಾದದ್ದು 1866 ರಲ್ಲಿ. ಸ್ವಿಜರ್ಲೆಂಡ್ ನ ವೇವೀ ಎನ್ನುವ ಸ್ಥಳದಲ್ಲಿ ಹೆನ್ರಿ ನೆಸ್ಲೆ ಎನ್ನುವವರು ಮೊಟ್ಟಮೊದಲಿಗೆ ಈ ಕಂಪನಿಯನ್ನು ಶುರು ಮಾಡುತ್ತಾರೆ. ಅವರ ಕುಟುಂಬದ ಹೆಸರಾದ ನೆಸ್ಲೆ ಎಂಬ ಹೆಸರನ್ನೇ ಕಂಪೆನಿಗೂ ಇಡುತ್ತಾರೆ. ನೆಸ್ಲೆ ಎಂದರೆ ಇಂಗ್ಲಿಷ್ ನ ನೆಸ್ಟ್. ನೆಸ್ಲೆಯ ಲೋಗೋ ಕೂಡಾ ಹಕ್ಕಿ ಗೂಡನ್ನೇ ಪ್ರತಿನಿಧಿಸುವಂತಿದೆ. ಈ ಕಂಪನಿಯ ಮುಖ್ಯ ಉದ್ದೇಶವಿದ್ದದ್ದು ತಾಯಿಯ ಎದೆ ಹಾಲು ಸಿಗದ ಮಕ್ಕಳಿಗೂ.. ಆರೋಗ್ಯಯುತವಾದ ಆಹಾರಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸಬೇಕೆಂಬುದು. ಹಾಗೆ ಇವರು ಮೊದಲು ಶುರು ಮಾಡಿದ ಪ್ರಾಡಕ್ಟ್ ನ ಹೆಸರು 'ಫರೈನ್ ಲ್ಯಾಕ್ಟೆ ಹೆನ್ರಿ ನೆಸ್ಲೆ'. ಸ್ವಿಜರ್ಲ್ಯಾಂಡ್ ನ ಈ ಹೆಸರು ನಮಗೆ ಅಪರಿಚಿತವಾದರೂ.. ಈ ಪ್ರಾಡಕ್ಟ್ ಮತ್ತೇನಲ್ಲ..! ಜೋಳ, ಹಾಲು ಹಾಗೂ ಸಕ್ಕರೆಯ ಮಿಶ್ರಣದ ಮಕ್ಕಳ ಪೌಷ್ಟಿಕ ಆಹಾರ. ಹೀಗೆ ಶುರುವಾದ ಕಂಪನಿಯೊಂದು ಕೆಲವೇ ವರ್ಷಗಳಲ್ಲಿ ಯುರೋಪ್ ಖಂಡದ ಎಲ್ಲೆಡೆ ತನ್ನ ಮಾರ್ಕೆಟ್ ಅನ್ನು ಸ್ಥಾಪಿಸಿ ಜನಜನಿತವಾಯಿತು.
ಹೀಗಿದ್ದ ನೆಸ್ಲೆ ತನ್ನ ವ್ಯಾಪಾರವನ್ನು ವೃದ್ಧಿ ಮಾಡಬೇಕೆಂಬ ಆಲೋಚನೆಯಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದ ಕಂಪನಿ ಜಾರ್ಜ್ ಮತ್ತು ಚಾರ್ಲ್ಸ್ ಪೇಜ್ ಎಂಬಿಬ್ಬರು ಸಹೋದರರು 1866 ರಲ್ಲಿ ಸ್ಥಾಪಿಸಿದ್ದ ಆಂಗ್ಲೋ ಸ್ವಿಸ್ ನ ಹಾಲು ಕಂಡೆನ್ಸ್ ಮಾಡುವಂತಹಾ ಕಂಪನಿ. ಈ ಎರಡೂ ಕಂಪೆನಿಗಳ ಒಪ್ಪಂದ ನಡೆದು, ಎರಡು ಕಂಪನಿಗಳೂ ಒಟ್ಟುಗೂಡಿದ್ದಕ್ಕೆ 1905 ರಿಂದ ಇವುಗಳನ್ನು 'ನೆಸ್ಲೆ ಗ್ರೂಪ್ಸ್' ಎಂದು ಕರೆಯಲಾಯಿತು.
ಲಾಭದಲ್ಲಿಯೇ ನಡೆಯುತ್ತಿದ್ದ ಈ ಕಂಪನಿಗಳಿಗೆ ಸಂಕಷ್ಟ ಎದುರಾದದ್ದು 1914-18ರವರೆಗೆ ನಡೆದ ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ. ಸ್ವಿಜರ್ಲ್ಯಾಂಡ್ ಈ ಯುದ್ಧದಲ್ಲಿ ಪಾಲ್ಗೊಂಡಿರಲಿಲ್ಲವಾದರೂ.. ಯುದ್ಧದ ದೆಸೆಯಿಂದ ನೆಸ್ಲೆ ಕಂಪನಿಗೆ, ಅದರ ಪ್ರಾಡಕ್ಟ್ ಗಳ ತಯಾರಿಕೆಗೆ ಬೇಕಾದ ಕಚ್ಛಾ ವಸ್ತುಗಳ ಪೂರೈಕೆ ಗಣನೀಯವಾಗಿ ಕಡಿಮೆಯಾಯಿತು. ಅಷ್ಟೇ ಅಲ್ಲದೆ, ಮಾರಾಟದ ಮೇಲೆಯೂ ಪರಿಣಾಮವಾಗಿ ತೊಂದರೆಯಾಯಿತು. ನೆಸ್ಲೆಯ ಹೆಚ್ಚಿನ ಪ್ರಾಡಕ್ಟ್ ಗಳಿಗೆ ಬೇಕಾದ ತಾಜಾ ಹಾಲು ಸಿಗದೇ, ಕಂಪೆನಿ ಸಂಕಷ್ಟಕ್ಕೊಳಗಾಯಿತು. ಇದು ಅವರ ಅತ್ಯಂತ ಕಷ್ಟದ ಕಾಲವೆಂದೇ ಹೇಳಬಹುದು. ಈ ಸಂದರ್ಭದಲ್ಲಿ ಅವರ ಕೈ ಹಿಡಿದು ಮೇಲೆತ್ತಿದ್ದು ಸರ್ಕಾರದ ಕೆಲವು ಕಾಂಟ್ರಾಕ್ಟ್ ಗಳು. ಆಗ ಈ ಕಾಂಟ್ರಾಕ್ಟ್ ಗಳಿಗೆ ಬೇಕಾದ ಪ್ರಾಡಕ್ಟ್ ಗಳನ್ನು ಇಲ್ಲಿಯೇ ತಯಾರಿಸಿ ಎಲ್ಲೆಡೆ ಸಾಗಿಸಿ ಮಾರಾಟ ಮಾಡಲು ಕಷ್ಟವಾಗುತ್ತಿದ್ದರಿಂದ.. ಆಸ್ಟ್ರೇಲಿಯಾ ಹಾಗೂ ಅಮೆರಿಕಾದಲ್ಲಿದ್ದ 40 ಫ್ಯಾಕ್ಟರಿಗಳನ್ನು ಖರೀದಿಸಿದರು. ನಿಧಾನವಾಗಿ ಲಾಭದತ್ತ ಸಾಗತೊಡಗಿತ್ತು ನೆಸ್ಲೆ.
ಆದರೆ, ಲಾಭದ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಬೇಕಾದ ಕಚ್ಛಾ ಸಾಮಗ್ರಿಗಳನ್ನು ಬೇರೆಡೆಯಿಂದ ತರಿಸಿಕೊಳ್ಳುತ್ತಿದ್ದಾಗಲೇ ಬೆಲೆ ಏರತೊಡಗಿತ್ತು. ಒಪ್ಪಿಕೊಂಡ ಕಾಂಟ್ರಾಕ್ಟ್ ಗಳನ್ನು ಅರ್ಧದಲ್ಲಿ ಕೈಬಿಡುವಂತಿರಲಿಲ್ಲ. ಇದರಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಕಂಪನಿ ದೊಡ್ಡಮಟ್ಟದಲ್ಲಿ ಸಾಲ ಮಾಡುವಂತಾಯಿತು. ಕಾಂಟ್ರಾಕ್ಟ್ ಗಳ ಕಾಲಾವಧಿ ಮುಗಿದ ನಂತರ ನಿಧಾನವಾಗಿ ತನ್ನ ಆರ್ಥಿಕ ಸಂಕಷ್ಟವನ್ನೆಲ್ಲಾ ಕಳೆದುಕೊಂಡು ನಿಧಾನವಾಗಿ ಚೇತರಿಸಿಕೊಂಡಿತು ನೆಸ್ಲೆ.
1920ರ ಹೊತ್ತಿಗೆ ಸ್ವಿಜರ್ಲ್ಯಾಂಡ್ ನ ಕೆಲವು ಚಾಕಲೇಟ್ ಕಂಪನಿಗಳಾದ ಕಾಲಿಯೆಟ್, ಪೀಟರ್ ಹಾಗೂ ಕೋಹ್ಲೇರ್ ಗಳನ್ನು ಕೊಂಡುಕೊಂಡು ಚಾಕಲೇಟ್ ಬ್ಯುಸಿನೆಸ್ ಮೇಲೆ ಹೆಚ್ಚಿನ ಗಮನಹರಿಸಿತು. 1938 ರಲ್ಲಿ ನೆಸ್ಲೆ ತನ್ನ ಮೊದಲ ಕಾಫಿ ಪ್ರಾಡಕ್ಟ್ ಅನ್ನು ಬಿಡುಗಡೆಗೊಳಿಸಿತು. ಅದೇ ನೆಸ್-ಕೆಫೆ. ಅಂದಿನಿಂದಲೂ.. ಇಂದಿನವರೆಗೂ ಲಾಭ ಮಾಡಿಕೊಡುತ್ತಿರುವ ಪ್ರಾಡಕ್ಟ್ ಇದು. ಇದರ ನಂತರ ಬಿಡುಗಡೆಯಾಗಿದ್ದು ನೆಸ್-ಟೀ.
1938-45ರವರೆಗೂ ನಡೆದ ವಿಶ್ವಯುದ್ಧದಲ್ಲಿ ಯುರೋಪ್ ಮತ್ತು ಏಷ್ಯಾ ಖಂಡಗಳು ಭಾಗವಹಿಸಿದ್ದರೂ.. ಲ್ಯಾಟಿನ್ ಅಮೆರಿಕಾ ಆರಂಭದಲ್ಲಿನ್ನೂ ಭಾಗವಹಿಸಿರಲಿಲ್ಲ. ಆಗ ನೆಸ್ಲೆಯ ಹೆಚ್ಚಿನ ಫ್ಯಾಕ್ಟರಿಗಳು ಲ್ಯಾಟೆನ್ ಅಮೆರಿಕಾದಲ್ಲಿದ್ದವು. ಅಮೆರಿಕಾ ವಿಶ್ವಯುದ್ಧಕ್ಕೆ ಕಾಲಿಡುತ್ತಿದ್ದಂತೆ ನೆಸ್-ಕೆಫೆಯ ವ್ಯಾಪಾರ ಏರತೊಡಗಿತ್ತು. ಅಮೆರಿಕಾದ ಯೋಧರಿಗೆ ಬೇಕಾಗಿದ್ದ ಕಾಫಿ ಹಾಗೂ ಟೀ ಸರಬರಾಜು ಮಾಡುತ್ತಿದ್ದದ್ದೇ ನೆಸ್ಲೆ. ಈ ಸಂದರ್ಭದಲ್ಲಿ ಕಂಪೆನಿಯ ಲಾಭ ಸುಮಾರು 125 ಮಿಲಿಯನ್ ಡಾಲರ್ ಗಳಷ್ಟು ಏರಿಕೆಯಾಯಿತು. ಯುದ್ಧವೆಂಬ ದುರಿತಕಾಲದಲ್ಲಿಯೂ ಲಾಭ ಮಾಡಿಕೊಂಡ ಕೆಲವು ಕಂಪನಿಗಳಲ್ಲಿ ನೆಸ್ಲೆಯೂ ಒಂದಾಯಿತು.
ಈ ದೊಡ್ಡ ಲಾಭದ ನಂತರ ನೆಸ್ಲೆ ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಯೋಚಿಸಿ ಮ್ಯಾಗಿ, ಕ್ರಾಸ್ ಅಂಡ್ ಬ್ಲಾಕ್ ವೆಲ್, ಫಿನ್ಡಸ್ ಫ್ರೋಜನ್ ಫುಡ್ಸ್, ಲಿಬ್ಬಿಸ್ ಫ್ರೂಟ್ ಜ್ಯೂಸ್ ಎಲ್ಲವನ್ನೂ ಕೊಂಡುಕೊಂಡಿತು. ಜೊತೆಗೆ ಇನ್ಸ್ಟ್ಯಾಂಟ್ ಫುಡ್ ಗಳಾದ ನೆಸ್-ಕ್ವಿಕ್ ಮತ್ತು ಮ್ಯಾಗಿ ರೆಡಿಮೇಡ್ ಗಳನ್ನೂ ಶುರು ಮಾಡಿ ರೆಡಿ-ಟು-ಈಟ್ ಆಹಾರದ ವ್ಯಾಪಾರಕ್ಕೆ ಹೆಚ್ಚಿನ ಒತ್ತು ನೀಡಿತು. 1960-74ರ ಸಮಯದಲ್ಲಂತೂ ನೆಸ್-ಕೆಫೆ ಇನ್ಸ್ಟೆಂಟ್ ಕಾಫಿಯಿಂದ ಉಂಟಾಗುತ್ತಿದ್ದ ಲಾಭ ನಾಲ್ಕರಷ್ಟು ಹೆಚ್ಚಾಯಿತು.
1974ರಲ್ಲಿ ಲೋರಲ್ ಕಾಸ್ಮೆಟಿಕ್ಸ್ ನ ಅತಿ ದೊಡ್ಡ ಶೇರ್ ಹೋಲ್ಡರ್ ಆಗಿ ನೆಸ್ಲೆ ಜೊತೆಗೂಡಿತು. ಹೀಗೆ ಒಂದು ಕಂಪನಿಯ ಜೊತೆಗಿನ ಒಪ್ಪಂದ ಅಥವಾ ಆ ಕಂಪನಿಯನ್ನು ಕೊಂಡುಕೊಳ್ಳುವುದರ ಮೂಲಕ ಮತ್ತಷ್ಟು ವಿಸ್ತಾರವಾಗತೊಡಗಿತ್ತು ನೆಸ್ಲೆ. ನೀರು, ಐಸ್ ಕ್ರೀಮ್, ಪ್ರಾಣಿಗಳ ಆಹಾರ, ಫ್ರೋಜನ್ ಫುಡ್ ಗಳನ್ನು ಮಾರಾಟ ಮಾಡಲು ಶುರು ಮಾಡಿತು. ಎದೆಹಾಲು ಹಾಗೂ ಮಕ್ಕಳಿಗೆ ಬೇಕಾದ ಇನ್ನಿತರ ಆಹಾರ ವಸ್ತುಗಳೂ ಇದರಲ್ಲಿ ಸೇರ್ಪಡೆಯಾದವೋ.. ಅದೇ ಸಂದರ್ಭದಲ್ಲಿ ಕೆಲವು ಹೋರಾಟಗಾರರು ಇದನ್ನು ವಿರೋಧಿಸತೊಡಗಿದರು. ಚಿಕ್ಕಮಕ್ಕಳ ಆಹಾರವನ್ನು ಮಾರ್ಕೆಟ್ ಮಾಡುವುದು ಎಥಿಕಲ್ ಅಲ್ಲ ಎಂಬ ಹೋರಾಟಕ್ಕಿಳಿದರು. ಈ ಹೋರಾಟದ ಫಲವಾಗಿ ನೆಸ್ಲೆ ಎದೆಹಾಲಿನ ಬದಲಾಗಿ ನೀಡುವಂತಹಾ.. ಮಕ್ಕಳ ಆರೋಗ್ಯ ವಸ್ತುಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಕೋಡ್ ಅನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಕೇಳಿಕೊಂಡಿತು.
ಈ ರೀತಿ ನೆಸ್ಲೆಯ ಮತ್ತೊಂದು ಆಹಾರವೂ ನಿಷೇಧಕ್ಕೊಳಗಾಗಿದ್ದನ್ನು ನೆನಪಿಸಿಕೊಳ್ಳಬಹುದು. ಈ ಕುರಿತು ದಾವೆ ಹೂಡಿದ್ದನ್ನು ನೀವು ಕೇಳಿರಬಹುದು. 2015ರಲ್ಲಿ ನೆಸ್ಲೆ ಮ್ಯಾಗಿಯ ಮೇಲೆ ನಿಷೇಧ ಹೇರಲಾಗಿತ್ತು. ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು ಮ್ಯಾಗಿಯಲ್ಲಿ ಸೀಸದ ಅಂಶ ಹೆಚ್ಚಾಗಿದ್ದು.. ಮೋನೋಸೋಡಿಯಂ ಗ್ಲುಟೊಮೆಟ್ ಕಂಟೆಂಟ್ ಕೂಡಾ ಹೆಚ್ಚಾಗಿದೆ. ಇದು ಆರೋಗ್ಯಕ್ಕೆ ಬಹಳ ಹಾನಿಕರ ಎಂದು ಇದರ ಮೇಲೆ ನಿಷೇಧ ಹೇರಿತು. ಇದರ ಫಲವಾಗಿ, ಆ ಸಮಯದಲ್ಲಿ ಭಾರತದ ನ್ಯೂಡಲ್ಸ್ ಮಾರ್ಕೆಟ್ ನಲ್ಲಿ 80% ಆವರಿಸಿದ್ದ ಮ್ಯಾಗಿ, ಕೇವಲ ಒಂದೇ ತಿಂಗಳಲ್ಲಿ ಜೀರೋ ಪರ್ಸೆಂಟ್ ಗೆ ತಲುಪಿತ್ತು. 2018ರಲ್ಲಿ ನೆಸ್ಲೆ ಈ ತನ್ನ ನಷ್ಟವನ್ನು ಭರಿಸಿಕೊಳ್ಳಲು.. ಮ್ಯಾಗಿಯನ್ನು ಮತ್ತೆ ವಾಪಸ್ ಮಾರ್ಕೆಟ್ ಗೆ ತರಲು ಆಲೋಚಿಸಿತು. ಅದರ ಫಲವಾಗಿ ಮತ್ತೆ 2016ರಲ್ಲಿ ಮ್ಯಾಗಿ ಪುನಃ ಮಾರ್ಕೆಟ್ ಗೆ ಲಗ್ಗೆಯಿಟ್ಟಿತು. ಮೊದಲಿನಷ್ಟಲ್ಲದಿದ್ದರೂ.. 57% ಮಾರ್ಕೆಟ್ ನ್ನು ಮ್ಯಾಗಿ ಆಳಲು ಶುರು ಮಾಡಿತು. 2019-20ರ ಸಮಯದಲ್ಲಿ ತನ್ನ ಮಾರ್ಕೆಟನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು.. 60 ಹೊಸ ಪ್ರಾಡಕ್ಟ್ಗಳನ್ನು ನೆಸ್ಲೆ ಬಿಡುಗಡೆ ಮಾಡಿತು. ಇದರ ಫಲವಾಗಿ ನೆಸ್ಲೆಯ ಮಾರ್ಕೆಟ್ 70% ಹೆಚ್ಚಿತು. ಇಷ್ಟಕ್ಕೇ ತೃಪ್ತಿಯಾಗದೆ, ಛಲ ಬಿಡದೆ ಮತ್ತೆ ಮೊದಲಿಗಿಂತಲೂ ಹೆಚ್ಚು ಮೇಲೇರುತ್ತಾ.. ಹೊಸ-ಹೊಸ ಪ್ರಾಡಕ್ಟ್ ಗಳನ್ನು ಪರಿಚಯಿಸುತ್ತಾ ಮುಂದೆ ಸಾಗುತ್ತಿದೆ ನೆಸ್ಲೆ.
ಭಾರತದಲ್ಲಿ.. ಹರಿಯಾಣದ ಗುರುಗ್ರಾಮ್ ನಲ್ಲಿ ತನ್ನ ಕೇಂದ್ರ ಕಛೇರಿಯನ್ನು ಸ್ಥಾಪಿಸಿಕೊಂಡಿರುವ ನೆಸ್ಲೆ 6000ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿ, ಮೂರೂವರೆ ಲಕ್ಷಕ್ಕಿಂತಲೂ ಹೆಚ್ಚು ಅಂಗಡಿಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಇನ್ನಷ್ಟು-ಮತ್ತಷ್ಟು ಲಾಭ ಗಳಿಸುತ್ತಾ ಅಭಿವೃದ್ಧಿಯ ಪಥದಲ್ಲಿದೆ.ಈಗ ಗುಜರಾತ್ ನ ಸನದ್ ನಲ್ಲಿ ನೆಸ್ಲೆಯ ಹೊಸದೊಂದು ತಯಾರಿಕಾ ಘಟಕ ಶುರುವಾಗಿದ್ದು.. ಡಿಜಿಟಲ್ ಆಗಿ ಮುಂದುವರಿದ, ಪೇಪರ್ ಲೆಸ್ ಆದ ಪರಿಸರ ಸ್ನೇಹಿಯಾದ ತಯಾರಿಕಾ ಘಟಕ ಇದಾಗಿದೆ. ಇದರಲ್ಲಿರುವ ಉದ್ಯೋಗಿಗಳಲ್ಲಿ 50% ಮಹಿಳೆಯರಿಗೆ ಮೀಸಲಾಗಿದೆ.
ಬ್ಯುಸಿನೆಸ್ ಅನ್ನು ಮುಂದುವರಿಸಲು ಹಲವಾರು ಮಾರ್ಗಗಳಿವೆ ಎಂಬುದು ಹೌದಾದರೂ.. ನೆಸ್ಲೆ ತಾನು ಮಾರ್ಕೆಟ್ ಮಹಾರಾಜನಾಗಲು ಹಾಗೂ ಬ್ಯುಸಿನೆಸ್ ನಲ್ಲಿ ತನ್ನ ಛಾಪು ಮೂಡಿಸಲು ತೆಗೆದುಕೊಂಡಿರುವ ಶ್ರಮ ಅಷ್ಟೇ ಇದೆ. ಏಕೆಂದರೆ, 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕಂಪನಿಯೊಂದು ಇಂದಿಗೂ ಅಷ್ಟೇ ಮುಂಚೂಣಿಯಲ್ಲಿರುವುದೆಂದರೆ ಸುಲಭದ ಮಾತಲ್ಲ. ಇದಕ್ಕಾಗಿ ನೆಸ್ಲೆ ನಂಬಿರುವುದು ಯಾವಾಗಲೂ ಗ್ರಾಹಕರನ್ನು ತೃಪ್ತಿಪಡಿಸಬೇಕು ಎಂಬ ಮೂಲ ಮಂತ್ರವನ್ನು. ಜೊತೆಗೆ, ಇದಕ್ಕಾಗಿ... ಗ್ರಾಹಕರ ಅಪೇಕ್ಷೆಯ ಮೇರೆಗೆ ಹಾಗೂ ಗ್ರಾಹಕರಿಗೆ ಇಷ್ಟವಾಗುವಂತೆ ತನ್ನ ಪ್ರಾಡಕ್ಟ್ ಗಳಲ್ಲಿ ಹಲವಾರು ಹೊಸತನ್ನು ತರುತ್ತಿರಲೇಬೇಕೆಂಬುದನ್ನು.
ನೆಸ್ಲೆ ತನ್ನ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅದರದ್ದೇ ವಿಶೇಷ ಯೂನಿಕ್ ಪ್ರಾಯೋಗಿಕ ಅಡುಗೆ ಮನೆಯೊಂದರಲ್ಲಿ ಪ್ರಯೋಗ ನಡೆಸುತ್ತದೆ. ಅಲ್ಲದೆ, ಎರಡು ಸೆನ್ಸರಿ ಲ್ಯಾಬೋರೇಟರಿಗಳಲ್ಲಿ ಗ್ರಾಹಕರ ನಿರೀಕ್ಷೆಗೆ ತಕ್ಕಂತಹಾ ರುಚಿ, ಗುಣಮಟ್ಟವಿರುವ ಪ್ರಾಡಕ್ಟ್ ಎಲ್ಲಾ ರೀತಿಯಲ್ಲೂ ಯೋಗ್ಯವೇ ಎಂದು ಪರಿಶೀಲಿಸುತ್ತದೆ. ಅಷ್ಟೇ ಅಲ್ಲದೆ, ಪ್ರತಿಬಾರಿಯೂ ಗ್ರಾಹಕರಿಗೆ ಪ್ರಾಡಕ್ಟ್ ನೀಡುವಾಗ.. ಆದಷ್ಟು ಫ್ರೆಶ್ ಆದ ಸ್ಟಾಕ್ ಗಳನ್ನೇ ನೀಡಲು ಬಯಸುತ್ತಾರೆ. ಈ ತಾಜಾತನ ಹಾಗೂ ರುಚಿ ಗ್ರಾಹಕರನ್ನು ಹೆಚ್ಚು ಸೆಳೆಯುವುದರಲ್ಲಿ ಗೆದ್ದಿದೆ.
ಪ್ರಾಡಕ್ಟ್ ಗಳನ್ನು ತಯಾರಿಸುವುದು ಮಾತ್ರವಲ್ಲ.. ಅದನ್ನು ಎಲ್ಲೆಲ್ಲಿ ಹೇಗೆ ಮಾರಾಟ ಮಾಡಬೇಕು ಎಂಬುದರಲ್ಲಿ ಕೂಡಾ ಬ್ಯುಸಿನೆಸ್ ನ ಜಾಣ್ಮೆಯಿದೆ. ನೆಸ್-ಕೆಫೆ ಕಾಫಿಯನ್ನು ಮಾರಾಟ ಮಾಡುವುದರಲ್ಲಿ ಇದರ ಜಾಣ್ಮೆಯನ್ನು ಗಮನಿಸಬಹುದು. ರೈಲ್ವೆ ಪ್ಲಾಟ್ಫಾರ್ಮ್, ಕಾಲೇಜ್ ಕ್ಯಾಂಟೀನ್, ಬಸ್ ಸ್ಟ್ಯಾಂಡ್, ಮೆಟ್ರೋ ಎಲ್ಲೆಡೆಯಲ್ಲಿಯೂ.. ಕಾಫಿ ಕಾರ್ನರ್ ಅಥವಾ ಕೆಫೆ-ನೆಸ್-ಕೆಫೆ ಎಂಬ ಹೆಸರಿನಲ್ಲಿ ತನ್ನದೇ ಕಾಫಿ ಸಿಗುವ ಜಾಗಗಳನ್ನು ತೆರೆದಿದೆ. ಅಷ್ಟೇ ಅಲ್ಲದೆ, ಹಣ ಹಾಕಿದರೆ ಕಾಫಿ ಬರುವ ವೆಂಡಿಂಗ್ ಮಷೀನ್ ಗಳಲ್ಲಿಯೂ ನೆಸ್-ಕೆಫೆ ದೊರೆಯುತ್ತದೆ.
ಬ್ಯುಸಿನೆಸ್ ನಲ್ಲಿ ಪ್ರಾಡಕ್ಟ್ ಗಳು ಫೇಲ್ಯೂರ್ ಆಗದಂತೆ ನೋಡಿಕೊಳ್ಳಬೇಕು. ಇದು ಬಹಳವೇ ಮುಖ್ಯ. ಒಂದು ವೇಳೆ ಯಾವುದಾದರೂ ಪ್ರಾಡಕ್ಟ್ ಗಳು ಹೆಸರು ಕೆಡಿಸಿಕೊಂಡರೂ.. ಅದನ್ನು ಮತ್ತೆ ಗೆಲ್ಲಿಸುವಂತೆ ಮಾಡುವ ಚಾಕಚಕ್ಯತೆ ತಂತ್ರಗಳೆರಡೂ ಗೊತ್ತಿದ್ದರೆ ಬ್ಯುಸಿನೆಸ್‌ನಲ್ಲಿ ಮೇಲೆ ಬರುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ನೆಸ್ಲೆಯ ಮ್ಯಾಗಿ ಒಂದು ಅತ್ಯುತ್ತಮ ಉದಾಹರಣೆಯಾಗಿ ಕಣ್ಮುಂದಿದೆ.
ಎಲ್ಲಾ ಬ್ಯುಸಿನೆಸ್ ಗಳೂ.. ಎಲ್ಲ ರೀತಿಯಲ್ಲಿಯೂ ಅಪ್ಡೇಟ್ ಆಗಲೇಬೇಕು. ಕಳೆದ ಲಾಕ್ ಡೌನ್ ನಲ್ಲಂತೂ ಎಲ್ಲಾ ಬ್ಯುಸಿನೆಸ್ ಗಳೂ ಡಿಜಿಟಲ್ ಆದವು. ತಾನಾಗಿಯೇ ಇಂತಹಾ ಬದಲಾವಣೆಗಳನ್ನು ಬ್ಯುಸಿನೆಸ್ ಮಾಡಿಕೊಳ್ಳದಿದ್ದರೂ.. ಲಾಕ್ ಡೌನ್ ಒತ್ತಾಯದಿಂದ ಇಂತಹಾ ಬದಲಾವಣೆಯನ್ನು ಬೇಡಿತು ಎಂದರೂ ತಪ್ಪಾಗಲಾರದು. ಹೀಗೆ ಬದಲಾದ.. ಡಿಜಿಟಲೈಸ್ ಆದ ಬ್ಯುಸಿನೆಸ್ ಗಳಲ್ಲಿ ನೆಸ್ಲೆ ಕೂಡಾ ಒಂದು. ಟ್ರೆಡಿಶನಲ್ ಆಗಿ ತಾವು ನೀಡುತ್ತಿದ್ದ ಜಾಹೀರಾತಿಗೆ ಬದಲಾಗಿ ಡಿಜಿಟಲ್ ಪ್ಲಾಟ್ಫಾರ್ಮ್ ಗಳಲ್ಲಿ ಹೆಚ್ಚೆಚ್ಚು ಜಾಹೀರಾತುಗಳನ್ನು ನೀಡತೊಡಗಿದರು. ಇದಕ್ಕಾಗಿ, ಟ್ರೆಡಿಶನಲ್ ಜಾಹೀರಾತಿಗೆ ಮೀಸಲಿಟ್ಟಿದ್ದ ಹಣವನ್ನು ಡಿಜಿಟಲ್ ಜಾಹೀರಾತಿಗೆ ತೊಡಗಿಸಿಕೊಂಡರು. ಮ್ಯಾಗಿ.ಇನ್ ಆಸ್ಕ್-ನೆಸ್ಲೆ.ಕಾಮ್ ಎಂಬ ವೆಬ್ಸೈಟುಗಳಲ್ಲಿ ಆಹಾರದ ರೆಸಿಪಿಗಳನ್ನು ಹಾಗೂ ಆಹಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಾ.. ಗ್ರಾಹಕರನ್ನು ಸೆಳೆದರು.
ಕಿರಾಣಿ ಅಂಗಡಿಯ ಮಾಲೀಕರು ನೇರವಾಗಿ ತಮ್ಮಿಂದ ಹೆಚ್ಚಿನ ಪ್ರಾಡಕ್ಟ್ ಗಳನ್ನು ತರಿಸಿಕೊಳ್ಳಲು.. ಅವರಿಗೆಂದೇ ಒಂದು ಮೊಬೈಲ್ ಆಪ್ಲಿಕೇಶನ್ ತಯಾರಿಸುವುದಾಗಿಯೂ ಹೇಳಿದ್ದಾರೆ.
ಕೆಲವು ಬ್ಯುಸಿನೆಸ್ ಗಳು ಸುತ್ತಮುತ್ತಲಿನ ಕೆಲಸಗಳಿಗೂ ಪ್ರೋತ್ಸಾಹ ನೀಡಿ ಅವರನ್ನೂ ತಮ್ಮೊಡನೆ ಬೆಳವಣಿಗೆಯ ಹಾದಿಯಲ್ಲಿ ಕರೆದೊಯ್ಯುತ್ತವೆ. ನೆಸ್ಲೆ ಕೂಡಾ ಇಂತಹಾ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆ ನೀಡುವುದಾದರೆ.. 1961ರಲ್ಲಿ ಭಾರತದಲ್ಲಿ ನೆಸ್ಲೆಯ ಮೊದಲ ಫ್ಯಾಕ್ಟರಿ ಶುರುವಾಗಿದ್ದು ಮೊಗಾದಲ್ಲಿ. ಇದರಿಂದ ಆ ಹಳ್ಳಿಯ ಸುತ್ತಮುತ್ತಲೂ ಇದ್ದ ಹಾಲಿನ ಉತ್ಪಾದನೆ ಹೆಚ್ಚಾಯಿತು. ಅಂತಹಾ ಹಾಲನ್ನು ಫ್ಯಾಕ್ಟರಿಗೆ ಕಚ್ಚಾ ವಸ್ತುವಾಗಿ ಬಳಸಿಕೊಳ್ಳಲಾಗುತ್ತಿತ್ತು. ಇಷ್ಟೇ ಅಲ್ಲದೆ, ನೆಸ್ಲೆ ವತಿಯಿಂದ ರೈತರಿಗೆ ಬೇಕಾದ ತಾಂತ್ರಿಕ ನೆರವು ನೀಡಿ, ನೀರಿನ ನಿರ್ವಹಣೆಯನ್ನು ಮಾಡಿಸುತ್ತಾ.. ಇರಿಗೇಶನ್, ಮಳೆ ನೀರಿನ ಕೊಯ್ಲು ಮುಂತಾದವುಗಳ ಮೂಲಕ ಅವರಿಗೆ ಅರಿವು ಮೂಡಿಸಿ, ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಯಿತು. ಕೃಷಿ, ವ್ಯಾಪಾರ ಎರಡೂ ಅಭಿವೃದ್ಧಿಯಾಗುತ್ತಿದ್ದಂತೆಯೇ.. ಆ ಊರು ಸಹ ಅಭಿವೃದ್ಧಿಯ ಹಾದಿಯತ್ತ ಸಾಗಿತು. ಬ್ಯುಸಿನೆಸ್ ಎಂದರೆ ಕೇವಲ ತಾನು ಮಾತ್ರ ಅಭಿವೃದ್ಧಿಯಾಗುವುದಲ್ಲ. ಸುತ್ತಲಿನವರನ್ನೂ ಅಭಿವೃದ್ಧಿಯಾಗುವಂತೆ ಮಾಡುವುದು.
ಬ್ಯುಸಿನೆಸ್ ಎಂಬ ಕಲ್ಲು ಮುಳ್ಳಿನ ಹಾದಿಯಲ್ಲಿ 150ಕ್ಕೂ ಹೆಚ್ಚು ವರ್ಷದಿಂದ ಸಾಗುತ್ತಲೇ ಇದೆ ನೆಸ್ಲೆ. ಗುಣಮಟ್ಟದ ಪ್ರಾಡಕ್ಟ್ ಗಳು, ಬ್ಯುಸಿನೆಸ್ ತಂತ್ರಗಳು, ಗ್ರಾಹಕರ ಬೇಡಿಕೆಗೆ ತಕ್ಕ ಪೂರೈಕೆ, ಸೋಲನ್ನು ಸೋಲಿಸುವ ಪರಿ, ಆತ್ಮವಿಶ್ವಾಸ ತನ್ನನ್ನು ತಾನು ನವೀಕರಿಸಿಕೊಳ್ಳುವ ಬಗೆ, ಮಾರ್ಕೆಟಿಂಗ್ ತಂತ್ರ, ಬೆಳವಣಿಗೆ ಇದೆಲ್ಲದರ ಮೂಲಕ ಬ್ಯುಸಿನೆಸ್ ನ ಪಾಠ ಹೇಳುತ್ತಿದೆ ನೆಸ್ಲೆ.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ