"ಸಾಮಾನ್ಯವಾಗಿ ಯಾರ ಹೃದಯವನ್ನಾದರೂ ಗೆಲ್ಲಬೇಕಾದರೆ ಅದಕ್ಕೆ ಹೊಟ್ಟೆಯ ಮೂಲಕ ಪ್ರಯತ್ನಿಸಿ" ಎನ್ನುವ ಧ್ಯೇಯವನ್ನಿಟ್ಟುಕೊಂಡು ತಮ್ಮ ಬ್ಯುಸಿನೆಸ್ ನ ಮೂಲಕ ಜನರ ಹೊಟ್ಟೆಯನ್ನು ತುಂಬಿಸುತ್ತಾ.. ಬ್ಯುಸಿನೆಸ್ ನಿಂದ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾ ಮುಂದೆ ಸಾಗುತ್ತಿದೆ ಭಾರತದ ಅತಿ ದೊಡ್ಡ ಸ್ನಾಕ್ಸ್ ಕಂಪನಿ ಎಂದೇ ಹೆಸರಾಗಿರುವ ಹಲ್ದಿರಾಮ್ಸ್. ಯಾರಾದರೂ ಮಕ್ಕಳನ್ನು ಸೆಳೆಯಬೇಕಾದರೆ ಅವರಿಷ್ಟದ ಚಾಕಲೇಟ್ ನೀಡುವುದು, ಕೋಪದಲ್ಲಿದ್ದವರ ಮನಸನ್ನು ಶಾಂತಗೊಳಿಸಲು ಅವರಿಷ್ಟದ ತಿಂಡಿಯನ್ನು ಮುಂದಿಟ್ಟರೆ ಅದು ಎಷ್ಟು ಪರಿಣಾಮಕಾರಿಯಾಗಿ ಮುಂದಿರುವವರ ಹೃದಯವನ್ನು ಗೆಲ್ಲುತ್ತದೋ.. ಹಾಗೆಯೇ ಇಲ್ಲಿಯೂ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ವಿದೇಶಿ ಸಂಸ್ಥೆಗಳಾದ ಮ್ಯಾಕ್ಡೊನಾಲ್ಡ್, ಡೋಮಿನೊಸ್, ಕೆ.ಎಫ್.ಸಿ ಯಂತಹಾ ಬೃಹತ್ ವಿದೇಶಿ ಸಂಸ್ಥೆಗಳಿಗಿಂತಲೂ ಬ್ಯುಸಿನೆಸ್ ನಲ್ಲಿ ಹೆಚ್ಚಿನ ಲಾಭ ಗಳಿಸುವ ಸಂಸ್ಥೆಯಾಗಿದೆ ಹಲ್ದಿರಾಮ್ಸ್.
'ಹಲ್ದಿರಾಮ್ಸ್' ಎಂದಾಕ್ಷಣ ಮನಸ್ಸಿನಲ್ಲಿ ಹಲವಾರು ಹೆಸರುಗಳು ಮೂಡಬಹುದು. ಹಲ್ದಿರಾಮ್ಸ್, ಹಲ್ದಿರಾಮ್ಸ್ ಪ್ರಭುಜೀ, ಹಲ್ದಿರಾಮ್ಸ್ & ಸನ್ಸ್, ಹಲ್ದಿರಾಮ್ಸ್ ನಾಗ್ಪುರ್, ಹಲ್ದಿರಾಮ್ಸ್ ಭುಜಿಯಾವಾಲಾ ಹೀಗೆ ಹಲವಾರು ಬ್ರ್ಯಾಂಡ್ ನೇಮ್ ಗಳು ನೆನಪಾದರೂ.. ಇದೆಲ್ಲವೂ ಒಂದೇ ಕುಟುಂಬಕ್ಕೆ ಸೇರಿದ್ದು. ಆದರೂ.. ಕುಟುಂಬ ವಿಭಜನೆಯಾದ ನಂತರ ಆ ಬ್ರ್ಯಾಂಡ್ ನೇಮ್ ಗಾಗಿ ಇಂದಿಗೂ ಕುಟುಂಬದಲ್ಲಿ ಪೈಪೋಟಿ ನಡೆಯುತ್ತಲೇ ಇದೆ.
1908ರಲ್ಲಿ ಹುಟ್ಟಿದ ಗಂಗಾ ಬಿಷನ್ ಅಗರ್ವಾಲ್ ರಾಜಸ್ಥಾನದ ಬಿಕಾನೇರ್ ನವರು. ಅಲ್ಲಿನ ಪ್ರಮುಖ ಕುರುಕು ತಿಂಡಿಯಾದ ಭುಜಿಯಾ ಅಂದರೆ ಒಂದು ರೀತಿಯ ಸೇವ್ ನಂತಹದ್ದು. ಅವರ ತಂದೆ ರಸ್ತೆ ಬದಿಯಲ್ಲಿದ್ದ ಸಣ್ಣ ಅಂಗಡಿಯೊಂದರಲ್ಲಿ ಅದನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಅಲ್ಲಿನ ರಸ್ತೆಗಳಲ್ಲಿ ಹಾಗೂ ಸಂತೆಯಲ್ಲಿ ಸರ್ವೇಸಾಮಾನ್ಯವಾದ ದೃಶ್ಯವಾಗಿತ್ತು. ಅಲ್ಲಿನ ಹೆಚ್ಚಿನವರು ಭುಜಿಯಾವನ್ನು ಮಾರಾಟ ಮಾಡಿಯೇ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಗಂಗಾ ಬಿಷನ್ ಗೆ ಮನೆಯಲ್ಲಿ ಪ್ರೀತಿಯಿಂದ 'ಹಲ್ದಿರಾಮ್' ಎಂದೇ ಕರೆಯುತ್ತಿದ್ದರು. ತನ್ನ ತಂದೆಗೆ ಸಹಾಯ ಮಾಡಲೆಂದು ಬರುತ್ತಿದ್ದ 11 ವರ್ಷದ ಹುಡುಗ ನಿಧಾನವಾಗಿ ತನ್ನ ಕುಟುಂಬ ವೃತ್ತಿಯತ್ತ ತನ್ನ ಆಸಕ್ತಿ ತೋರಿ ಭುಜಿಯಾವನ್ನು ಮಾಡಲು ಕಲಿತುಕೊಳ್ಳುತ್ತಿದ್ದ. ಸಾಮಾನ್ಯವಾಗಿ ಈ ಭುಜಿಯಾವನ್ನು ಕಡಲೆಹಿಟ್ಟಿನಿಂದ ಮಾಡುತ್ತಿದ್ದರು. ಇದನ್ನು ಎರಡು ಪೈಸೆಗೆ ಒಂದು ಕೆ.ಜಿಯಂತೆ ಮಾರಾಟ ಮಾಡುತ್ತಿದ್ದರು.
ಆದರೆ, ಹಲ್ದಿರಾಮ್ ಗೆ ಇದರ ಕುರಿತು ಸಮಾಧಾನವಿರಲಿಲ್ಲ. ಏಕೆಂದರೆ,ಆತನಿಗೆ ಇದರ ರುಚಿ ಹಾಗೂ ಗುಣಮಟ್ಟದ ಕುರಿತು ಅಸಮಾಧಾನವಿತ್ತು. ಹಾಗಾಗಿ ತನ್ನದೇ ಹಲವಾರು ಪ್ರಯೋಗಗಳನ್ನು ಮಾಡುತ್ತಾ.. ಅದರಲ್ಲಿ ಯಶಸ್ವಿಯೂ ಆದ. ಗಾತ್ರದಲ್ಲಿ ದಪ್ಪದಪ್ಪದಾಗಿದ್ದ ಭುಜಿಯಾಗಳನ್ನು ಸಣ್ಣದಾಗಿ ಮಾಡುವುದು ಹಾಗೂ ಕಡಲೆ ಹಿಟ್ಟಿನ ಬದಲಾಗಿ ಬೇರೆ ಕಾಳಿನಿಂದ ಮಾಡುವುದು ಹಾಗೂ ಆ ಭುಜಿಯಾ ಜೊತೆಗೆ ಬೇರೆ-ಬೇರೆ ರೀತಿಯ ಕರೆದ ಕಾಳುಗಳನ್ನು ಸೇರಿಸುವುದು.. ಹೀಗೆ ಹಲವಾರು ಪ್ರಯೋಗಗಳನ್ನು ಮಾಡುತ್ತಾ ತನ್ನದೇ ರುಚಿ ಕಂಡುಕೊಂಡ. ಕೆಲವರು ಇದನ್ನು ಆತನ ಅತ್ತೆ ಸೋದರತ್ತೆಯಿಂದ ಕಲಿತು ನಂತರ ಅಭಿವೃದ್ಧಿಪಡಿಸಿದ ಎಂದೂ ಹೇಳುತ್ತಾರೆ.
ರುಚಿಯಿಂದ ಮಾತ್ರವಲ್ಲದೆ ಬ್ಯುಸಿನೆಸ್ ದೃಷ್ಟಿಯಿಂದಲೂ ಯೋಚಿಸುತ್ತಾನೆ. 2 ಪೈಸೆ ಕೆ.ಜಿ ಇದ್ದ ಭುಜಿಯಾವನ್ನು ಆತ ಕೆ.ಜಿಗೆ 5 ಪೈಸೆಯಂತೆ ಮಾರಾಟ ಮಾಡಲು ಶುರುಮಾಡುತ್ತಾನೆ. ಎಲ್ಲಾ ಅಂಗಡಿಗಳಲ್ಲೂ ಹೆಚ್ಚುಕಡಿಮೆ ಒಂದೇ ರೀತಿಯ ಭುಜಿಯಾ ಸಿಗುವಾಗ ಜನ ಕಡಿಮೆ ಬೆಲೆಯಲ್ಲಿ ಕೊಡುವ ಅಂಗಡಿಗೆ ಹೋಗುತ್ತಾರೆ. ಆದರೆ, ಹೆಚ್ಚಿನ ಬೆಲೆಯಿದ್ದ ಈತನ ಅಂಗಡಿಗೆ ಜನ ಮುಗಿಬೀಳುತ್ತಿದ್ದರು ಎಂದರೆ ಅಚ್ಚರಿಯಲ್ಲವೇ..?? ಇದಕ್ಕೆ ಕಾರಣ ಈತ ನೀಡುತ್ತಿದ್ದ ಗರಿಗರಿಯಾದ ಹಾಗೂ ವಿವಿಧ ರೀತಿಯ ಭುಜಿಯಾವೇ. ಹೆಚ್ಚು ಬೆಲೆಯಿದ್ದ ಇದನ್ನು ಪ್ರೀಮಿಯಂ ಪ್ರಾಡಕ್ಟ್ ಎಂದು ಜನ ಗುರುತಿಸತೊಡಗಿದರು.
ಸಾಮಾನ್ಯವಾಗಿ ಇದಕ್ಕೆ ಭುಜಿಯಾ ಅಥವಾ ಸೇವ್ ಎಂದೇ ಕರೆಯುತ್ತಿದ್ದರು. ಆದರೆ, ಹಲ್ದಿರಾಮ್ ಮಾತ್ರ ತನ್ನ ರೆಸಿಪಿಗೆ 'ದೊಂಗರ್ ಸೇವ್' ಎಂದು ಹೆಸರಿಟ್ಟ. ದೊಂಗರ್ ಸಿಂಗ್ ಎಂಬುದು ಬಿಕಾನೇರಿನ ರಾಜನ ಹೆಸರಾಗಿತ್ತು. ಅವರಿಗೂ.. ಈತನ ತಿಂಡಿಗೂ ಯಾವುದೇ ಸಂಬಂಧವಿಲ್ಲದಿದ್ದರೂ.. ಆತನ ಹೆಸರೇ ಒಂದು ಬ್ರ್ಯಾಂಡ್ ಅಂಬಾಸಿಡರ್ ನಂತಾಯಿತು. ಒಂದು ರೀತಿಯ ರಾಯಲ್ ತಿಂಡಿಯಂತೆ ಬಿಂಬಿತವಾಯಿತು.
1937ರಲ್ಲಿ ಬಿಕಾನೇರ್ ಅನ್ನೇ ಕೇಂದ್ರಕಛೇರಿಯನ್ನಾಗಿಸಿಕೊಂಡು ಶುರುವಾದ ಬ್ಯುಸಿನೆಸ್ ನಲ್ಲಿ ಹಲ್ದಿರಾಂಗೆ ಚಿಕ್ಕ ತಡೆಯುಂಟಾಗಿತ್ತು. ಮದುವೆಯಾದ ನಂತರ 1941 ರಲ್ಲಿ ತನ್ನ ಕುಟುಂಬದಿಂದ ಬೇರೆಯಾಗುವ ಸಂದರ್ಭ ಬಂದಿತು. ಆಗ ಈತ ತನ್ನ ಮೂವರು ಗಂಡು ಮಕ್ಕಳು ಹಾಗೂ ಪತ್ನಿಯೊಂದಿಗೆ ಕುಟುಂಬದಿಂದ ಬೇರೆಯಾಗಿ ತನ್ನದೇ ಬ್ಯುಸಿನೆಸ್ ಆರಂಭಿಸಿದ. ಸ್ನೇಹಿತನಿಗೆಂದು ಕೊಟ್ಟಿದ್ದ 200 ರೂಪಾಯಿಯಲ್ಲಿ 100 ರೂಪಾಯಿ ಮಾತ್ರ ಕೈಗೆ ಬಂದಿತ್ತು. ಅದೇ ಆತನ ಬಂಡವಾಳವಾಯಿತು. ಪತ್ನಿ ತಯಾರಿಸಿದ ಕರಿದ ಹೆಸರುಬೇಳೆಯ ಹೊಸ ರೆಸಿಪಿಯನ್ನೂ ಭುಜಿಯಾದೊಂದಿಗೆ ಮಾರಿದರು. ಒಳ್ಳೆಯ ಲಾಭವನ್ನೇ ತಂದುಕೊಡುತ್ತಿದ್ದ ಈ ವ್ಯಾಪಾರ ಎಷ್ಟರಮಟ್ಟಿಗೆ ಬೆಳೆಯಿತೆಂದರೆ ಜನ ಇದನ್ನು ಮೊದಲೇ ಬುಕ್ಕಿಂಗ್ ಮಾಡುತ್ತಿದ್ದರು. ಬ್ಯುಸಿನೆಸ್ ಬೆಳೆಯುತ್ತಿದ್ದಂತೆ ಮಕ್ಕಳೂ ಅದರಲ್ಲಿ ಸೇರಿದರು.
ಆತನ ಮಕ್ಕಳು ಯಾರೂ ಎಂಟನೇ ತರಗತಿಗಿಂತ ಹೆಚ್ಚು ಓದಿರಲಿಲ್ಲವಾದರೂ.. ಅವರ ಬುದ್ಧಿಶಕ್ತಿಯೇನೂ ಕಡಿಮೆಯಿರಲಿಲ್ಲ. ತನ್ನ ಮಕ್ಕಳಿಗೆ ಪಾಕೆಟ್ ಮನಿಯನ್ನು ನೀಡುವ ಅಭ್ಯಾಸವನ್ನು ಬೆಳೆಸದೆ.. ಕೆಲಸ ಮಾಡಿದಾಗ ಅದಕ್ಕೆ ತಕ್ಕ ಹಣವನ್ನು ಸಂಬಳದಂತೆ ನೀಡುತ್ತಿದ್ದ. ಮಕ್ಕಳಿಗೂ ದುಡಿಯುವ ಅಭ್ಯಾಸ ಚಿಕ್ಕಂದಿನಿಂದಲೇ ರೂಢಿಯಾಯಿತು.
1950ರಲ್ಲಿ ತನ್ನ ಆತ್ಮೀಯರೊಬ್ಬರ ಮನೆಯ ಸಮಾರಂಭಕ್ಕೆ ಕೋಲ್ಕತ್ತಾಗೆ ಹೋಗುವ ಸಂದರ್ಭ ಬಂದಾಗ ಅಲ್ಲಿಯೂ ತನ್ನ ಭುಜಿಯಾದ ಕೈಚಳಕವನ್ನು ತೋರಿದ್ದ. ಕೊಲ್ಕತ್ತಾದವರಿಗೆ ಇದು ಬಹಳ ಇಷ್ಟವಾಗಿ ಅಲ್ಲಿಯೂ ಹಲ್ದಿರಾಮ್ಸ್ ಅಂಗಡಿ ಶುರುವಾದವು. ಮಕ್ಕಳಾದ ರಾಮೇಶ್ವರಲಾಲ್ ಹಾಗೂ ಸತ್ಯನಾರಾಯಣ ಇಬ್ಬರೂ ಕೊಲ್ಕತ್ತಾದ ಅಂಗಡಿಗಳನ್ನು ನೋಡಿಕೊಳ್ಳತೊಡಗಿದರು. ಮತ್ತೊಬ್ಬ ಮಗನಾದ ಮೂಲಚಂದ್ ಬಿಕಾನೇರ್ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ. ಹಲ್ದಿರಾಂ ಮತ್ತೆ ಬಿಕಾನೇರಿಗೆ ವಾಪಸ್ಸಾದರು. ಅವರ ಬ್ಯುಸಿನೆಸ್ ಬೆಳೆಸುವ ಕನಸಿಗೆ ಹಿರಿಯ ಮೊಮ್ಮಗ ಶಿವ್ ಕಿಶನ್ ಅಗರ್ವಾಲ್ ಬಂದದ್ದು ಮತ್ತಷ್ಟು ಶಕ್ತಿ ತಂದಿತ್ತು.
1960 ರಿಂದ 1990ರ ಸಮಯದಲ್ಲಿ ಈ ಸಾಮ್ರಾಜ್ಯ ಮತ್ತಷ್ಟು ದೊಡ್ಡದಾಯಿತು. ಕ್ರಮೇಣ ಸತ್ಯನಾರಾಯಣ್ ಬೇರೆಯಾಗಿ ಹಲ್ದಿರಾಂ ಅಂಡ್ ಸನ್ಸ್ ಎನ್ನುವ ಹೆಸರಿನಡಿ ತನ್ನ ತಿಂಡಿಗಳನ್ನು ಮಾರಾಟ ಮಾಡತೊಡಗಿದ. ಆದರೆ, ತಂದೆಯ ಭುಜಿಯಾದಷ್ಟು ರುಚಿಯಿಲ್ಲದ ಕಾರಣದಿಂದ ಈತ ಅಷ್ಟು ಸಫಲನಾಗಲಿಲ್ಲ.
ಶಿವ್ ಕಿಶನ್ ಅಗರ್ವಾಲ್ ಬಂದ ನಂತರ ಮಹಾರಾಷ್ಟ್ರದ ನಾಗಪುರದಲ್ಲಿಯೂ ಹೊಸದೊಂದು ಬ್ರ್ಯಾಂಚ್ ಶುರುವಾಯಿತು. ಆದರೆ, ಬಿಕಾನೇರ್ ಹಾಗೂ ಕೋಲ್ಕತ್ತಾದಲ್ಲಿರುವಂತೆ ವ್ಯಾಪಾರ ಸುಗಮವಾಗಿರಲಿಲ್ಲ. ಅಷ್ಟಕ್ಕೂ.. ಇಲ್ಲಿ ಮಾತ್ರವಲ್ಲದೆ, ಮಹಾರಾಷ್ಟ್ರದಲ್ಲಿ ಎಲ್ಲಿಯೂ ಈ ಭುಜಿಯಾಗೆ ಬೇಡಿಕೆಯಿರಲಿಲ್ಲ. ಆದರೆ, ಶಿವ ಕಿಶನ್ ಇದಕ್ಕೆ ಜಗ್ಗದೆ.. ಇದರ ಕುರಿತು ಒಂದಷ್ಟು ಸಮೀಕ್ಷೆ ನಡೆಸಿದಾಗ ಆತನಿಗೆ ಸಮಸ್ಯೆಯ ಮೂಲ ತಿಳಿಯಿತು. ಅದನ್ನೇ ಬ್ಯುಸಿನೆಸ್ ಗೆ ಬೇಕಾದಂತೆ ತಿರುಗಿಸಿಕೊಂಡ. ಇದು ಬ್ಯುಸಿನೆಸ್ ಅನ್ನು ಬೇರೆ ಸ್ಥಳಗಳಲ್ಲಿ ಮಾತ್ರವಲ್ಲದೇ.. ಬೇರೆ ರೀತಿಯಲ್ಲಿಯೂ ಮುಂದಕ್ಕೆ ಕೊಂಡೊಯ್ಯಲು ಸಹಾಯಕವಾಯಿತು.
ಮಹಾರಾಷ್ಟ್ರದ ಜನರಿಗೆ ಕೆಲವೇ ರೀತಿಯ ಸ್ನಾಕ್ಸ್ ಗಳ ಪರಿಚಯ ಮಾತ್ರವಿದ್ದಿತು. ಹಾಗಾಗಿ, ಈತ ಹೊಸ ಸ್ನಾಕ್ಸ್ ಗಳನ್ನು ಅವರ ಮುಂದಿಡಲು ತಯಾರಿ ಮಾಡಿಕೊಂಡ. ಅದರ ಜೊತೆಗೆ ಸ್ವೀಟ್ ಮಾರ್ಕೆಟ್ ನಲ್ಲಿಯೂ ಕೆಲವೇ ಸ್ವೀಟುಗಳು ಮಾತ್ರ ಸಿಗುತ್ತಿದ್ದದ್ದು. ಹಾಗಾಗಿ, ಹೊಸ ಸ್ವೀಟುಗಳನ್ನು ಇಲ್ಲಿಗೆ ಪರಿಚಯಿಸಬೇಕೆಂದುಕೊಂಡ. ಆದರೆ ಯಾರೋ ಅಪರಿಚಿತನೊಬ್ಬ ಬಂದು ನೀಡಿದ ಹೊಸ ರೆಸಿಪಿಗಳನ್ನು ಜನ ಅಷ್ಟುವ ಸುಲಭವಾಗಿ ಸ್ವೀಕರಿಸುತ್ತಿದ್ದರೇ..?? ಖಂಡಿತವಾಗಿಯೂ ಇಲ್ಲ.
ಮೊದಲಿಗೆ ಆತ ತನ್ನಿಷ್ಟದ ಸಿಹಿತಿಂಡಿಯಾದ 'ಕಾಜು ಕಟ್ಲಿ'ಯನ್ನು ಜನರಿಗೆ ಪರಿಚಯಿಸಿದ. ಅದರ ರುಚಿಯನ್ನು ಅವರಿಗೆ ತಿಳಿಸಲು ಮಾರಾಟ ಮಾಡುವ ಸ್ಥಳದಲ್ಲಿ ಉಚಿತವಾಗಿ ರುಚಿ ನೋಡಲು ಕೊಡುತ್ತಿದ್ದರಿಂದ ಜನ ಕ್ರಮೇಣ ಆ ರುಚಿಗೆ ಮನಸೋತು ಕೊಂಡುಕೊಂಡರು. ಬ್ರ್ಯಾಂಡ್ ಕುರಿತು ನಂಬಿಕೆ ಬೆಳೆಸಿಕೊಂಡರು. ನಂತರ ಗುಲಾಬ್ ಜಾಮೂನ್, ರಸಗುಲ್ಲ ಹೀಗೆ ಹಲವಾರು ಸಿಹಿತಿಂಡಿಗಳನ್ನು ತನ್ನ ಬ್ರ್ಯಾಂಡ್ ನಿಂದ ಹೊರತಂದಿದ್ದು.. ಹಲ್ದಿರಾಮ್ ಈ ಮಹತ್ತರ ಬದಲಾವಣೆಯಿಂದ ಕೇವಲ ಮೂರೇ ವರ್ಷದಲ್ಲಿ ಅವರ ಸೇಲ್ಸ್ ಅನ್ನು 400% ಅಧಿಕವಾಗಿಸಿಕೊಂಡಿತು.
ಇದರ ಜೊತೆಗೆ ನಾಗಪುರದ ಜನರಿಗೆ ದಕ್ಷಿಣ ಭಾರತದ ತಿಂಡಿಗಳೆಂದರೆ ಅಚ್ಚುಮೆಚ್ಚು ಎಂದು ತಿಳಿಯಿತು. ಹಾಗಾಗಿ, ಅಲ್ಲಿ ದಕ್ಷಿಣ ಭಾರತದ ರೆಸ್ಟೋರೆಂಟ್ ಗಳನ್ನು ತೆರೆದರು. ಇಡ್ಲಿ, ದೋಸೆ ಇಂದ ಶುರುವಾದ ರೆಸ್ಟೋರೆಂಟ್ ಮುಂದೆ ಊಟ, ರಸಂ, ಹೊಸ-ಹೊಸ ಸ್ನಾಕ್ಸ್ ಗಳು, ಸಮೋಸ, ಕಚೋರಿ, ಚೋಲೆ ಭಟೋರೆ.. ಹೀಗೆ ಹಲವಾರು ತಿಂಡಿಗಳಿಂದ ಅಲ್ಲಿ ಜನಪ್ರಿಯವಾಯಿತು.
ಹಲ್ದಿರಾಮ್ಸ್ ನಲ್ಲಿ ಮಹತ್ತರ ಬದಲಾವಣೆಗಳಾಗಲು ಕಾರಣವಾದ ಮತ್ತೊಬ್ಬರು ಈಗಿರುವ ಹಲ್ದಿರಾಮ್ಸ್ ಚೇರ್ಮನ್ ಮೋಹನ್ ಲಾಲ್ ಅಗರ್ವಾಲ್. 1973ರಲ್ಲಿ ಅವರು ಈ ಬ್ಯುಸಿನೆಸ್ ಗೆ ಸೇರಿಕೊಂಡಾಗ ನಾಗಪುರ, ಬಿಕಾನೇರ್ ಹಾಗೂ ಕೊಲ್ಕತ್ತಾಗಳಲ್ಲಿ ಮಾತ್ರ ಹಲ್ದಿರಾಮ್ಸ್ ಇತ್ತು. ಇದನ್ನು ದೆಹಲಿಯ ಚಾಂದಿನಿ ಚೌಕ್ ನಂತಹಾ ಜನನಿಬಿಡ ಸ್ಥಳದಲ್ಲಿ ಸ್ಥಾಪಿಸಿ ಹೆಚ್ಚು ಜನರಿಗೆ ತಲುಪಲು ಕಾರಣರಾದರು. ಇಲ್ಲಿಂದ ಶುರುವಾದ ಇವರ ಬ್ಯುಸಿನೆಸ್ ನ ವಿಸ್ತರಣೆ ಇಡೀ ಭಾರತದಲ್ಲಿಯೇ ಮುಂದುವರಿದು.. ಇಂದು 80ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿದೆ. ಇವರು ಮೊದಮೊದಲು ದೊಡ್ಡ-ದೊಡ್ಡ ಪಟ್ಟಣಗಳಿಗೆ ತಮ್ಮ ಬ್ಯುಸಿನೆಸ್ ಅನ್ನು ವಿಸ್ತರಿಸಿ, ನಂತರ ಸಣ್ಣ-ಸಣ್ಣ ಪಟ್ಟಣಗಳಿಗೂ ಇವರ ಬ್ಯುಸಿನೆಸ್ ಅನ್ನು ವಿಸ್ತರಿಸಿದರು.
ಸ್ನಾಕ್ಸ್ ಗಳನ್ನು ಪ್ಯಾಕೆಟ್ ಮಾಡಿ ಅದರ ಶೆಲ್ಫ್ ಲೈಫ್ ಹೆಚ್ಚಿಸುವುದು ಹಾಗೂ ಜನರಿಗೆ ಅತ್ಯಾಕರ್ಷಕ ರೀತಿಯಲ್ಲಿ ನೀಡುವುದು ಸಹಾ ಇವರದ್ದೇ ಉಪಾಯ. ಭಾರತದಲ್ಲಿ ಪ್ಯಾಕೇಜಿಂಗಿಗೆ ಹೆಚ್ಚಿನ ಆದ್ಯತೆ ನೀಡಿ.. ಅದನ್ನು ಚೆಂದವಾಗಿ ಪ್ಯಾಕೇಜ್ ಮಾಡಿ ಮಾರಾಟ ಮಾಡಿದ ಮೊದಲ ಭಾರತೀಯ ಸ್ನಾಕ್ಸ್ ಕಂಪನಿ ಹಲ್ದಿರಾಮ್ಸ್. ಮೋಹನ್ ಲಾಲ್ ಅವರ ತಮ್ಮ ಮಧುಸೂದನ್ ಅಗರ್ವಾಲ್ ಪ್ಯಾಕೆಜಿಂಗ್ ನ ರ್ಯಾಪರ್ಗಳ ಆಕರ್ಷಕ ಡಿಸೈನ್ ತಯಾರಿಸಿದವರು.
ಪ್ಯಾಕೇಜಿಂಗ್ ನಲ್ಲಿಯೂ ವಿವಿಧ ರೀತಿಯ ಬದಲಾವಣೆ ತಂದರು. ಪೌಚ್ ಗಳು ಹಾಗೂ ಜಿಪ್ ಲಾಕ್ ಪ್ಯಾಕೆಟ್ ಗಳು, ಉಡುಗೊರೆ ನೀಡುವಂತಹಾ ಪ್ಯಾಕೇಜ್ ಗಳನ್ನು ಟಿನ್ ಹಾಗೂ ಬಾಕ್ಸ್ ಮಾದರಿಯಲ್ಲಿ, ದೊಡ್ಡದೊಡ್ಡ ಹೋಟಲುಗಳಿಗಾಗಿ ಬಲ್ಕ್ ಪ್ಯಾಕೇಜಿಂಗ್, ಜಾಮೂನು ಹಾಗೂ ರಸಗುಲ್ಲಾದಂತಹ ಸಿಹಿತಿಂಡಿಗಳಿಗೆ ಕ್ಯಾನ್ ಗಳು ಹಾಗೂ ಜಾರುಗಳು, ಭುಜಿಯಾಗಳಿಗಾಗಿ ವ್ಯಾಕ್ಯೂಮ್ ಸೀಲಿಂಗ್ ಪ್ಯಾಕೇಜ್.. ಹೀಗೆ ಹಲವಾರು ರೀತಿಯ ಪ್ಯಾಕೇಜಿಂಗ್ ಅನ್ನು ಡಿಸೈನ್ ಮಾಡಿಸಿದರು. ಇದರಿಂದಾಗಿ ಬ್ರ್ಯಾಂಡ್ ಮತ್ತಷ್ಟು ನಂಬಿಕೆಗೆ ಅರ್ಹವಾಯಿತು ಹಾಗೂ ಜನರಲ್ಲಿಯೂ ಈ ಕುರಿತು ಮಾಹಿತಿ ವ್ಯಾಪಕವಾಯಿತು. ಐ.ಆರ್.ಸಿ.ಟಿ.ಸಿ ಜೊತೆ ಒಪ್ಪಂದ ಮಾಡಿಕೊಂಡು ರೈಲ್ವೆ ನಿಲ್ದಾಣಗಳಲ್ಲಿಯೂ ಮಾರಾಟ ಮಾಡಿಸಿದರು. ಹೆಚ್ಚು ದಿನ ಶೇಖರಿಸಬಹುದಾದ್ದರಿಂದ ಎಲ್ಲೆಡೆಯೂ ಮಾರಾಟ ವ್ಯಾಪಕವಾಯಿತು.
ಕೇವಲ 100 ರೂಪಾಯಿ ಬಂಡವಾಳದಿಂದ ಶುರುವಾದ ಈ ಕಂಪನಿ ಈಗ ಮೂರು ಬಿಲಿಯನ್ ಡಾಲರ್ ನಷ್ಟು ಬೆಲೆಬಾಳುತ್ತದೆ. 2014ರಲ್ಲಿ ಭಾರತದ ನಂಬಿಕೆಯ ಬ್ರ್ಯಾಂಡ್ ಗಳಲ್ಲಿ 55ನೇ ಸ್ಥಾನದಲ್ಲಿದ್ದ ಇದು 2018ರಷ್ಟರಲ್ಲಿ ಭಾರತದ ಅತಿ ದೊಡ್ಡ ಸ್ನಾಕ್ಸ್ ಕಂಪನಿ ಎಂಬ ಬಿರುದಿಗೆ ಪಾತ್ರವಾಯಿತು. ಹಾಗೆಂದು, ಇವರ ಬ್ಯುಸಿನೆಸ್ ಹಾದಿ ಸುಗಮವಾಗಿರಲಿಲ್ಲ. ಪೆಪ್ಸಿಕೊ, ಡಾಬರ್ ಇಂಡಿಯಾ, ಬಿಕಾನೋ. ಬೀಕಾಜಿಗಳಂತಹಾ ದೈತ್ಯ ಸಂಸ್ಥೆಗಳು ಹಾಗೂ ಸಣ್ಣಪುಟ್ಟ ಹೋಟೆಲು ಹಾಗೂ ಸಿಹಿ ತಿಂಡಿಗಳ ಮಾಲೀಕರಿಂದಲೂ ಇವರಿಗೆ ಪೈಪೋಟಿಯಿತ್ತು.
2018ರ ಸಂದರ್ಭದಲ್ಲಿ ಮ್ಯಾಗಿ ನಿಷೇಧವಾದ ಸಂದರ್ಭ ನಿಮಗೆ ನೆನಪಿರಬಹುದು. ಅದೇ ಸಂದರ್ಭದಲ್ಲಿ ಹಲ್ದಿರಾಮ್ಸ್ ನ ಕೆಲವು ಪ್ರಾಡಕ್ಟ್ ಗಳು ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅವರಿಂದ ಬ್ಯಾನ್ ಆಗಿತ್ತು. ಇದಕ್ಕೆ ಕಾರಣ ಪ್ಯಾಕೇಜಿಂಗ್ ಮಾಡಲು ಅವರು ಉಪಯೋಗಿಸುತ್ತಿದ್ದ ಕೆಲವು ಕೆಮಿಕಲ್ ಗಳು ಆಹಾರದ ಮೇಲೆ ಪರಿಣಾಮ ಬೀರುತ್ತಿವೆ ಎಂದು. ಆದರೆ, ಭಾರತದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಈ ಆರೋಪವನ್ನು ತಳ್ಳಿ ಹಾಕಿತ್ತು. ಹಾಗಾಗಿ ಹಲ್ದಿರಾಮ್ಸ್ ಈ ಆರೋಪದಿಂದ ಮುಕ್ತವಾಯಿತು. ಈಗ ಅಮೆರಿಕಾದ ಭಾರತೀಯ ಸ್ಟೋರ್ ಗಳಲ್ಲಿ ಲಭ್ಯವಿದೆ.
2022ರ ನವರಾತ್ರಿಯ ಸಂದರ್ಭದಲ್ಲಿ ಇವರ ಪ್ಯಾಕೇಜಿಂಗ್ ಮೇಲೆ ಇದ್ದ ಅರೇಬಿಕ್ ಅಕ್ಷರಗಳನ್ನು ಉರ್ದುವೆಂದು ಭಾವಿಸಿ ಮಹಿಳೆ ಒಬ್ಬರು ತಮ್ಮ ಧಾರ್ಮಿಕ ಭಾವನೆಗಳಿಗೆ ನವರಾತ್ರಿಯ ಸಮಯದಲ್ಲಿ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದರು. ಆದರೆ, ಅಲ್ಲಿದ್ದದ್ದು ಅರೇಬಿಕ್ ಅಕ್ಷರಗಳು ಎಂದು ತಿಳಿದ ನಂತರ ಆ ಪ್ರಕರಣ ಅಲ್ಲಿಗೆ ಕೊನೆಯಾಯಿತು.
ಇಷ್ಟೇ ಅಲ್ಲದೇ ಹಂಚಿಹೋಗಿರುವ ಹಲ್ದಿರಾಮ್ ಕುಟುಂಬದವರು ಬ್ರ್ಯಾಂಡ್ ನೇಮ್ ಗಾಗಿ ಇಂದಿಗೂ ಅವರವರಲ್ಲಿಯೇ ವಿವಾದ ಮಾಡಿಕೊಳ್ಳುತ್ತಿದ್ದಾರೆ. ಆ ಹೆಸರಿನ ರೀತಿಯಲ್ಲಿಯೇ ಬೇರೆ-ಬೇರೆ ಹೆಸರುಗಳನ್ನಿಟ್ಟುಕೊಂಡು ಹಲ್ದಿರಾಮ್ಸ್ ಗ್ರೂಪ್ ನಿಂದ ಎಂದು ಮಾರಾಟ ಮಾಡುವ ನಕಲಿ ಮಾರಾಟಗಾರರೂ ಇದ್ದಾರೆ.
2023 ಸೆಪ್ಟಂಬರ್ 6ರಂದು ಟಾಟಾ ಗ್ರೂಪ್ ನವರು ಹಲ್ದಿರಾಮ್ಸ್ ನ 51%ಕ್ಕೂ ಹೆಚ್ಚಿನ ಸ್ಟೇಕ್ ಗಳನ್ನು ಕೊಂಡುಕೊಳ್ಳಲು ನೋಡಿದರು ಇದು ರಿಲಯನ್ಸ್ ನವರ ಮೇಲೆ ನೇರವಾಗಿ ಪರಿಣಾಮ ಬೀರುತ್ತಿತ್ತು. ಆದರೆ, ಟಾಟಾ ಗ್ರೂಪ್ ನವರು ಆಫರ್ ಮಾಡಿದ್ದ ಹಣ ತಮ್ಮ ಕಂಪನಿಯ ವ್ಯಾಲ್ಯೂ ಗಿಂತ ಕಡಿಮೆ ಇದೆ ಎಂಬ ಕಾರಣಕ್ಕೆ ಈ ಒಪ್ಪಂದ ಅಲ್ಲಿಗೆ ನಿಂತಿತು.
2024ರ ಜನವರಿಯ ಬೆಳವಣಿಗೆ ನೋಡಿದರೆ.. ಹಲ್ದಿರಾಮ್ಸ್ ನವರು ತಮ್ಮಂತೆಯೇ ಮತ್ತೊಂದು ಸ್ನಾಕ್ಸ್ ಕಂಪನಿ, ಅದರಲ್ಲೂ.. ಚಿಪ್ಸ್ ಮಾರಾಟಕ್ಕೆ ಹೆಸರುವಾಸಿಯಾದ 350 ಮಿಲಿಯನ್ ಡಾಲರ್ ಬೆಲೆಬಾಳುವ ಪ್ರತಾಪ್ ಸ್ನಾಕ್ಸ್ ನ್ನು ತಮ್ಮದಾಗಿಸಿಕೊಂಡು ತಮ್ಮ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಯೋಚನೆಯಲ್ಲಿದ್ದಾರೆ
ಪಿತ್ರಾರ್ಜಿತ ಆಸ್ತಿಯೊಂದೇ ಸುಲಭವಾಗಿ ದಕ್ಕುವುದು. ಇದಕ್ಕೂ ಕೆಲವು ಅಪವಾದಗಳಿರಬಹುದು. ಮನೆಯಿಂದ ಒಂದು ಬಿಡಿಗಾಸನ್ನೂ ತೆಗೆದುಕೊಳ್ಳದೆ ಬರಿಗೈಯಲ್ಲಿ ಹೊರಬಂದು ಬಿಲಿಯನ್ ಡಾಲರ್ ಬೆಲೆಬಾಳುವ ಬ್ಯುಸಿನೆಸ್ ಅನ್ನು ಭಾರತದಾದ್ಯಂತ ನಡೆಸುತ್ತಾ.. ವಿದೇಶಗಳಲ್ಲಿಯೂ ಭಾರತೀಯ ಕಂಪನಿಯೊಂದರ ಛಾಪು ಮೂಡಿಸುವುದು ಸುಲಭವೇನಲ್ಲ. ಅದಕ್ಕೆ ಬೇಕಾಗಿರುವುದು ಪರಿಶ್ರಮ, ಜನರ ನಂಬಿಕೆ, ದಿನೇದಿನೇ ಅಪ್ಡೇಟ್ ಆಗುತ್ತಾ ಜನರಿಗೆ ಬೇಕಾದ ಸೌಲಭ್ಯವನ್ನು ಒದಗಿಸುವುದು, ಜನರನ್ನು ಆಕರ್ಷಿಸುವುದು, ಗುಣಮಟ್ಟ ಕಾಪಾಡಿಕೊಳ್ಳುವುದು, ಸವಾಲುಗಳಿಗೆ ಕುಗ್ಗದೆ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ರೀತಿ ಇವೆಲ್ಲದರಿಂದ ಬ್ಯುಸಿನೆಸ್ ಲೋಕದಲ್ಲಿ ಗಟ್ಟಿಯಾಗಿ ನಿಲ್ಲಬಹುದು ಎನ್ನುತ್ತಾ ಬ್ಯುಸಿನೆಸ್ ನ ಪಾಠ ಹೇಳುತ್ತಿದೆ ಹಲ್ದಿರಾಮ್ಸ್.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ