ಪುಸ್ತಕದ ಶೀರ್ಷಿಕೆ : ಕರ್ನಾಟಕದ ಕಸ್ತೂರ್ ಬಾ ಯಶೋಧರಮ್ಮ ದಾಸಪ್ಪ
ಲೇಖಕರು : ಲೀಲ ವಾಸುದೇವ್
ಪ್ರಕಾಶಕರು : ಕರ್ನಾಟಕ ಗಾಂಧೀ ಸ್ಮಾರಕ ನಿಧಿ
ಪ್ರಥಮ ಮುದ್ರಣ : 2018
ಪುಟಗಳು : 60
ಬೆಲೆ : 38 ರೂ.
ಕರ್ನಾಟಕದಲ್ಲಿ ಗಾಂಧೀಜಿಯವರ ಚಿತಾಭಸ್ಮ ಇರುವ ಸ್ಥಳ ಅರಸೀಕೆರೆಯ ಕಸ್ತೂರಬಾ ಆಶ್ರಮ. ಆಶ್ರಮದ ಸಂಸ್ಥಾಪಕಿ ಕರ್ನಾಟಕದ ಕಸ್ತೂರ್ ಬಾ ಎಂದೇ ಖ್ಯಾತರಾದ ಯಶೋಧರಮ್ಮ ದಾಸಪ್ಪ. ಇವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕದಲ್ಲಿ ಯಶೋಧರಮ್ಮ ಅವರು ಹಲವು ಪ್ರಥಮಗಳಿಗೂ ಹೆಸರುವಾಸಿ. ಮೈಸೂರು ಪುರಸಭೆಗೆ ಬಹುಮತದಿಂದ ಆಯ್ಕೆಯಾದ ಪ್ರಥಮ ಮಹಿಳಾ ಪ್ರತಿನಿಧಿ. ಮೈಸೂರು ನ್ಯಾಯ ವಿಧಾಯಕ ಸಭೆಗೆ ಪ್ರಥಮ ಮಹಿಳಾ ಪ್ರತಿನಿಧಿ. ಮೈಸೂರು ಸಂಸ್ಥಾನದ ಕಾಂಗ್ರೆಸ್ಸಿಗೆ ಪ್ರಥಮ ಮಹಿಳಾ ಅಧ್ಯಕ್ಷರು. ಹಾಗೂ ಅರಸೀಕೆರೆಯಲ್ಲಿ ವಾರ್ಧಾ ಆಶ್ರಮದಂತೆ.. ಆಶ್ರಮವನ್ನು ಸ್ಥಾಪಿಸಿ ಗ್ರಾಮೀಣ ಹಾಗೂ ಮಹಿಳಾ ಅಭಿವೃದ್ಧಿಗೆ ಶ್ರಮಿಸಿದ ಪ್ರಥಮ ಮಹಿಳೆ. ಕಸ್ತೂರ್ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಯಶೋಧರಮ್ಮ ಅವರನ್ನು ಗಾಂಧೀಜಿಯವರೇ ನಾಮನಿರ್ದೇಶನ ಮಾಡಿರುವುದು ಗಾಂಧೀಜಿಯವರು ಅವರಲ್ಲಿಟ್ಟಿದ್ದ ಅಚಲ ವಿಶ್ವಾಸದ ಕುರುಹಾಗಿದೆ.
ಯಶೋಧರಮ್ಮ ದಾಸಪ್ಪ ಅವರು ಶ್ರೀ ಕೆ. ಎಚ್ ರಾಮಯ್ಯ ಅವರ ಐವರು ಪುತ್ರಿಯರು ಹಾಗೂ ಆರು ಜನ ಗಂಡು ಮಕ್ಕಳಲ್ಲಿ ಹಿರಿಯ ಮಗಳು. ಮಗಳನ್ನು ಮಗನಂತೆ ಬೆಳೆಸಿ ವಿದ್ಯೆ ನೀಡಿ ಧೈರ್ಯ ತುಂಬಿದ ಶ್ರೇಯಸ್ಸು ಪ್ರಮುಖವಾಗಿ ಅವರ ತಂದೆಗೆ ಸೇರುತ್ತದೆ.
ಕೆ. ಎಚ್. ರಾಮಯ್ಯನವರು ಹನುಮಯ್ಯನವರ ಇಬ್ಬರು ಮಕ್ಕಳಲ್ಲಿ ಹಿರಿಯವರು. ಕಲಿಯುವುದರಲ್ಲಿ ಬಹಳವೇ ಆಸಕ್ತಿ. ತಂದೆ ತೀರಿಕೊಂಡ ನಂತರ ಅನಕ್ಷರಸ್ಥೆಯಾದ ತಾಯಿ ನಂಜಮ್ಮನ ಸಹಾಯದಿಂದ ಮದ್ರಾಸ್ ನಲ್ಲಿ ಬಿ.ಎ, ಬಿ. ಎಲ್ ಪದವಿ ಪಡೆದರು. ಸ್ವಾಮಿ ವಿವೇಕಾನಂದರ ಉಪನ್ಯಾಸವನ್ನು ಕೇಳಿಸಿಕೊಂಡವರು ಹೆಚ್ಚು ಪ್ರಭಾವಿತರಾಗಿ ಸ್ವಾಮಿ ವಿವೇಕಾನಂದರ ಅನುಯಾಯಿಯಾಗಿ ರಾಮಕೃಷ್ಣ ಆಶ್ರಮದ ಸೇವಾಶ್ರಮಕ್ಕೆ ನೆರವಾದರು. ನಂತರ ಇವರಿಗೆ ತಹಸೀಲ್ದಾರರ ಮಗಳು ಶ್ರೀಮತಿ ರೇವಮ್ಮನೊಂದಿಗೆ ವಿವಾಹವಾಯಿತು. ರಾಮಯ್ಯನವರ ದಕ್ಷತೆ ಹಾಗೂ ಕೆಲಸವನ್ನು ಕಂಡು ಮೈಸೂರು ಮಹಾರಾಜರು ಆಕರ್ಷಿತರಾಗಿ ಅವರನ್ನು ಹಿಂದುಳಿದ ಸಮಾಜದ ಸಂಸ್ಥೆಗೆ ವಿಶೇಷ ಅಧಿಕಾರಿಯಾಗಿ ನೇಮಿಸಿದರು. ನಂತರ ಬ್ಯಾರಿಸ್ಟರ್ ಪದವಿ ಪಡೆಯಲು ಮಹಾರಾಜರ ವತಿಯಿಂದ ಇಂಗ್ಲೆಂಡ್ ಗೆ ಹೋದರು. ಅಲ್ಲಿ ಬಾಪೂಜಿಯವರ ಭೇಟಿಯೂ ಆಯಿತು.
ರಾಮಯ್ಯನವರು ತಮ್ಮ ಹಿರಿಯ ಮಗಳಾದ ಯಶೋಧರ ತಮ್ಮಂತೆ ಎಲ್ಲವನ್ನು ತ್ಯಾಗ ಮಾಡಿ ಜನಸೇವೆ ಮಾಡಬೇಕೆಂಬ ಕನಸು ಕಂಡವರು. ಹಾಗಾಗಿ ಬುದ್ಧನ ಪತ್ನಿಯ ನೆನಪಿಗಾಗಿ ಯಶೋಧರ ಎಂದು ನಾಮಕರಣ ಮಾಡಿದರು. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಸುಲಭದ ಮಾತಾಗಿರಲಿಲ್ಲ. ಆದರೆ, ಯಾವುದಕ್ಕೂ ಹಿಂಜರಿಯದೆ ಸಮಾಜ ಸುಧಾರಕರಾಗಿದ್ದ ರಾಮಯ್ಯನವರು ಚಾಮರಾಜಪೇಟೆಯಲ್ಲಿನ ಪ್ರಾಥಮಿಕ ಶಾಲೆಗೆ ಕಳುಹಿಸುತ್ತಾರೆ. ರೇವಮ್ಮನವರಿಗೆ ಇದು ಇಷ್ಟವಿಲ್ಲದಿದ್ದರೂ ಸುಮ್ಮನಾಗುತ್ತಾರೆ. ಮದರಾಸಿನ ಕ್ವೀನ್ ಮೇರಿಸ್ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ಓದಲು ಅನುವು ಮಾಡಿಕೊಡುತ್ತಾರೆ. ಆದರೆ, ಹವಾಮಾನ ಒಗ್ಗದೇ ಯಶೋಧರಮ್ಮನವರ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಚೆನ್ನಯ್ಯ ಅವರ ಮೂರನೇ ಮಗ ವಕೀಲರಾಗಿದ್ದ ಹೆಚ್. ಸಿ ದಾಸಪ್ಪನವರೊಂದಿಗೆ ಲಗ್ನವಾಗುತ್ತದೆ. ಒಂದೇ ಅಭಿರುಚಿ ಉಳ್ಳ ಕುಟುಂಬಗಳು ರಾಜಕೀಯ ರಂಗಕ್ಕೆ ಧುಮುಕಲು ನಾಂದಿಯಾಗುತ್ತದೆ ಈ ವಿವಾಹ.
ದಾಸಪ್ಪನವರು ಮೈಸೂರಿಗೆ ಬಂದು ವಕೀಲ ವೃತ್ತಿ ಆರಂಭಿಸಿದ ಸ್ವಲ್ಪ ಅವಧಿಯಲ್ಲಿಯೇ ಹೆಸರಾಂತ ವಕೀಲರಾದರು. ಗಾಂಧೀಜಿಯವರ ಆಹ್ವಾನಕ್ಕೆ ಮಣಿದು ಯಶೋದರಮ್ಮ ಮತ್ತು ದಾಸಪ್ಪ ತಮ್ಮ ಎರಡು ಗಂಡು ಮಕ್ಕಳ ಜೊತೆಗೆ ವಾರ್ಧಾ ಸೇವಾಗ್ರಾಮಕ್ಕೆ ತೆರಳಿದರು. ಅಲ್ಲಿ ಕಟ್ಟುನಿಟ್ಟಿನ ಆಶ್ರಮದ ನಿಯಮಗಳಿಗೆ ಹೊಂದಿ ನಡೆದರು. ಅಲ್ಲಿ ಅವರ ಜೀವನಶೈಲಿಯೇ ಸಂಪೂರ್ಣ ಬದಲಾಯಿತು. ದಂಪತಿಗಳಿಬ್ಬರೂ ರೇಷ್ಮೆ ವಸ್ತ್ರ, ಒಡವೆ ತ್ಯಜಿಸಿ ಖಾದಿ ವಸ್ತ್ರಧಾರಿಗಳಾದರು. ಚರಕದಿಂದ ನೂಲು ತೆಗೆಯಲು ಆರಂಭಿಸಿದರು. ಮೈಸೂರಿನ ಯಶೋಧರಮ್ಮ ಅವರ ಮನೆ 'ಯಶೋವಿಲಾಸ' ಗ್ರಾಮೀಣ ಭಾಗದಿಂದ ಬರುತ್ತಿದ್ದ ಬಡ ವಿದ್ಯಾರ್ಥಿನಿಯರಿಗೆ ಆಶ್ರಯವಾಗಿತ್ತು.
ಯಶೋಧರಮ್ಮ ಪುರಸಭೆಯ ಚುನಾವಣೆಯಲ್ಲಿ ಬಹುಮತ ಗಳಿಸಿ ಗೆದ್ದ ಪ್ರಥಮ ಮಹಿಳೆಯಾದರು. ಜನರಲ್ಲಿರುವ ಮೂಢನಂಬಿಕೆಗಳನ್ನು ಕಡಿಮೆ ಮಾಡಿ ಎಲ್ಲರಲ್ಲಿಯೂ ಜಾಗೃತಿ ಮೂಡಿಸಲು ವಿದ್ಯಾಭ್ಯಾಸ ಅತ್ಯವಶ್ಯಕ ಎಂದು ತಿಳಿ ಹೇಳಿದರು. ಮಹಿಳೆಯರನ್ನು ಹೋರಾಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು.
ಶಿವಪುರದ ರಾಷ್ಟ್ರಕೂಟದ ಅಧಿವೇಶನದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ದಿನಾಂಕ 10-4-1938 ರಂದು ಎಲ್ಲಾ ಸಿದ್ದತೆಯೊಂದಿಗೆ ಮೈದಾನ, ಬಹಿರಂಗ ಅಧಿವೇಶನ, ಸಭಾಂಗಣ ಎಲ್ಲವೂ ಸಿದ್ಧವಾಗಿ ಊರೂರಿನಿಂದ ಜನ ಬರಲಾರಂಬಿಸಿದ್ದರು. ಜನಸಂಖ್ಯೆ ಹೆಚ್ಚುತ್ತಲೇ ಇತ್ತು. ಇದನ್ನು ಕಂಡ ಸರ್ಕಾರ ಧ್ವಜಾರೋಹಣ ಮಾಡಬಾರದೆಂದು ಆಜ್ಞೆ ವಿಧಿಸಿತು. ಧ್ವಜಾರೋಹಣವನ್ನು ಮಾರನೇ ದಿನಕ್ಕೆ ಮುಂದೂಡಿ ಅಂದು ಧ್ವಜಾರೋಹಣ ಮಾಡಲೇಬೇಕು ಎಂದು ನಿರ್ಧರಿಸಿದರು ಸತ್ಯಾಗ್ರಹಿಗಳು. 11 ರ ಅಧಿವೇಶನದ ಮಧ್ಯರಾತ್ರಿಯ ಹೊತ್ತಿಗೆ 600 ರಿಸರ್ವ್ ಪೊಲೀಸ್ ಹಾಗೂ ಸಾವಿರ ಜನ ಲಾಠಿ ಹಿಡಿದ ಪೊಲೀಸರು ಜಮಾ ಆಗಿದ್ದರು. ಬೆಳಿಗ್ಗೆ ಟಿ. ಸಿದ್ದಲಿಂಗಯ್ಯನವರು ವೇದಿಕೆ ಹತ್ತಿದ್ದೇ ತಡ ಪೊಲೀಸ ಅಧಿಕಾರಿಗಳೆಲ್ಲ ಧ್ವಜಸ್ತಂಭದ ಬಳಿಗೆ ಬಂದರು. ತಕ್ಷಣವೇ ಸಮಯ ಪ್ರಜ್ಞೆಯಿಂದ ಯಶೋಧರಮ್ಮ ದಾಸಪ್ಪ ಅವರು ಪೊಲೀಸರು ಧ್ವಜದ ಹಗ್ಗವನ್ನು ಬಿಟ್ಟು ವೇದಿಕೆಯಿಂದ ಇಳಿದು ದೂರ ಸರಿದರೆ.. ಜನರ ಉದ್ರೇಕ ಕಡಿಮೆಯಾಗುತ್ತದೆ. ಎಲ್ಲರೂ ಅವರವರ ಕಾರ್ಯನಿರ್ವಹಿಸಲು ಪೊಲೀಸರು ಸಹಕರಿಸಬೇಕು ಎಂದು ಹೇಳಿ ಕೇಳಿಕೊಂಡರು. ಆದರೆ, ಅಂದಿನ ಭಾಷಣ ಹಾಗೂ ಧ್ವಜಗೀತೆ ಹಾಡಿದವರನ್ನು ಪೊಲೀಸರು ಬಂಧಿಸಿದರು. ಆದರೆ, ಅಂದು ಸಂಜೆಯವರೆಗೂ ಪೊಲೀಸರು ಧ್ವಜದ ಹತ್ತಿರಕ್ಕೂ ಸುಳಿಯದಂತೆ ಸುತ್ತಲೂ ಕಾಪಾಡಿದವರಲ್ಲಿ ಯಶೋಧರಮ್ಮ ದಾಸಪ್ಪ, ಟಿ. ಸುನಂದಮ್ಮ, ಬಳ್ಳಾರಿ ಸಿದ್ದಮ್ಮ ಮುಂತಾದವರು ಪ್ರಮುಖರು.
ಇದರ ಮುಂದಿನ ವರ್ಷ ವಿದುರಾಶ್ವತದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಹೆಚ್. ಸಿ ದಾಸಪ್ಪನವರೇ ಅಧ್ಯಕ್ಷರು. ಆ ಅಧಿವೇಶನದಲ್ಲಿ ಹಿಂಸಾತ್ಮಕ ಘಟನೆಗಳು ನಡೆದು ಗೋಲಿಬಾರ್ ಕೂಡಾ ನಡೆಯಿತು. ಯಶೋಧರಮ್ಮ ಅವರ ಭಾಷಣ ರಾಜದ್ರೋಹವೆಂದು, ದಾಸಪ್ಪನವರು ಸರ್ಕಾರದ ವಿರುದ್ಧ ಧ್ವಜಾರೋಹಣ ಮಾಡಿದರೆಂದು, ಇಬ್ಬರನ್ನೂ ದಸ್ತಗಿರಿ ಮಾಡಿ ಜೈಲಿಗೊಯ್ದರು.
ಸ್ವಾತಂತ್ರ್ಯಾ ನಂತರ ಹೆಚ್. ಸಿ ದಾಸಪ್ಪನವರು ಕೆ.ಸಿ ರೆಡ್ಡಿ ಅವರ ಮಂತ್ರಿಮಂಡಲದಲ್ಲಿ ಅರ್ಥ ಸಚಿವರಾದ,ರೆ ಯಶೋಧರಮ್ಮ ಅವರು ಹಾಸನದಿಂದ ಚುನಾವಣೆಯಲ್ಲಿ ಗೆದ್ದು ಎಸ್, ನಿಜಲಿಂಗಪ್ಪ ಅವರ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವೆಯಾದರು. ಮೂರು ದಿನದ ದಲಿತರ ಹೆಣ್ಣು ಮಗುವನ್ನು ದತ್ತು ಸ್ವೀಕರಿಸಿ ಮಗಳಾಗಿ ಸಾಕಿ, ವೈದ್ಯರೊಬ್ಬರ ಜೊತೆ ವಿವಾಹವನ್ನು ಮಾಡಿದರು. ಪಾನ ನಿಷೇಧ ಮಸೂದೆಯನ್ನು ರದ್ದುಗೊಳಿಸಬೇಕೆಂದು ಸಂಪುಟದಲ್ಲಿ ಚರ್ಚೆಯಾದಾಗ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಯಶೋಧರಮ್ಮನವರು ತಮ್ಮ ತತ್ವ ಪಾಲನೆಯ ಸಲುವಾಗಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಸ್ವಗೃಹಕ್ಕೆ ಮರಳಿದರು.
ದಾಸಪ್ಪ ಹಾಗೂ ಯಶೋಧರಮ್ಮನವರ ಜೀವನ ಚರಿತ್ರೆ ಈ ಪುಸ್ತಕದಲ್ಲಿದೆ. ಇಲ್ಲಿ ಉಲ್ಲೇಖಿಸಿರುವುದು ಕೆಲವು ಘಟನೆಗಳನ್ನಷ್ಟೇ.. ಸಂಪೂರ್ಣ ಮಾಹಿತಿಗಾಗಿ ಪುಸ್ತಕ ಓದಿ.
ಅರಸೀಕೆರೆಯಲ್ಲಿರುವ ಕಸ್ತೂರ್ ಬಾ ಗಾಂಧಿ ಆಶ್ರಮದಲ್ಲಿ ಗಾಂಧೀಜಿಯವರ ಚಿತಾಭಸ್ಮದ ಜೊತೆಗೆ ಒಂದು ಬಾಟಲಿಯ ಮುಚ್ಚಳವನ್ನು ಇಟ್ಟು ಸ್ಮಾರಕ ನಿರ್ಮಾಣ ಮಾಡಲಾಯಿತಂತೆ. ಇದಕ್ಕೆ ಕಾರಣವೇನೆಂದು ತಿಳಿಯಲು ಪುಸ್ತಕ ಓದಿ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯಶೋಧರಮ್ಮನವರು 1980ರ ಜೂನ್ 20ರಂದು ನಿಧನರಾದರು. ಅರಸೀಕೆರೆಯ ಆಶ್ರಮದಲ್ಲಿಯೇ ಅವರ ಸಮಾಧಿ ಮಾಡಲಾಗಿದೆ.
~ವಿಭಾ ವಿಶ್ವನಾಥ್
(ಅರಸೀಕೆರೆಯ ಕಸ್ತೂರ್ ಬಾ ಆಶ್ರಮದ ಆವರಣದ ಕೆಲ ಭಾವಚಿತ್ರಗಳು ಇಲ್ಲಿವೆ. 4-5 ವರ್ಷ ಹಿಂದೆ ಅಲ್ಲಿಗೆ ಭೇಟಿ ನೋಡಿದ್ದಾಗ ತೆಗೆದಂತಹವು )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ