ನಾನಿಂದು ಹೇಳಲು ಹೊರಟಿರುವುದು ಆರ್ಕಿಮಿಡಿಸ್ ನ ಯುರೇಕಾ ಅಲ್ಲವಾದರೂ.. ಯುರೇಕಾ ಹಾಗೂ ಯುರೇಕಾ ಫೋರ್ಬ್ಸ್ ಎಂಬ ಬ್ಯುಸಿನೆಸ್ ಬ್ರ್ಯಾಂಡ್ ಕುರಿತಾದರೂ.. ಆರ್ಕಿಮಿಡಿಸ್ ನ ಯುರೇಕಾ ಕುರಿತು ಕೂಡ ಕೊಂಚ ಹೇಳಿಬಿಡುತ್ತೇನೆ. ಏಕೆಂದರೆ, ಬ್ಯುಸಿನೆಸ್ ನಲ್ಲಿ "ಯುರೇಕಾ ಮೊಮೆಂಟ್ಸ್" ಎಂಬ ಪದ ಬಹಳ ಮೌಲ್ಯಯುತವಾದದ್ದು.
ಕೆಲವರಿಗೆ ಕೆಲವು ಪದಗಳು ಅನ್ವರ್ಥ ನಾಮದಂತೆ ಅಂಟಿಕೊಂಡಿರುತ್ತದೆ. ಹಾಗೆಯೇ.. ಯುರೇಕಾ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಆರ್ಕಿಮಿಡಿಸ್. ಈತ ಇಂದಿನ ಇಟಲಿ ಹಾಗೂ ಅಂದಿನ ಗ್ರೀಕ್ ಗೆ ಸೇರಿದ ಸಿಸಿಲಿ ಎಂಬ ದ್ವೀಪದ ಗ್ರೀಕ್ ಕಾಲೋನಿಯೊಂದರಲ್ಲಿ ಹುಟ್ಟಿದವ. ಆ ಕಾಲದ ಖ್ಯಾತ ಗಣಿತಜ್ಞ ಹಾಗೂ ವಿಜ್ಞಾನಿ. 2250 ವರ್ಷಗಳ ಹಿಂದೆ ನಡೆದ ಘಟನೆ ಕಥೆಯೋ.. ವಾಸ್ತವವೋ ಎಂಬ ಸಂದೇಹಗಳ ನಡುವೆಯೇ.. ಸ್ಪೂರ್ತಿದಾಯಕವಾಗಿಯೂ, ನೆನಪಿಟ್ಟುಕೊಳ್ಳುವಂತೆಯೂ ಎಲ್ಲರಿಗೂ ತಲುಪುತ್ತಿದೆ.
ಅಂದಿನ ಗ್ರೀಕ್ ರಾಜನಾಗಿದ್ದ ಎರೋನ್-2 ತನ್ನ ಬಳಿ ಇದ್ದ ಶುದ್ಧ ಚಿನ್ನವನ್ನು ಅಕ್ಕಸಾಲಿಕನಿಗೆ ಕೊಟ್ಟು ಅದನ್ನು ಅದರಿಂದ ತನಗೆ ಕಿರೀಟವನ್ನು ಮಾಡಿಕೊಡಲು ಹೇಳುತ್ತಾನೆ. ಅಕ್ಕಸಾಲಿಗ ಕಿರೀಟವನ್ನು ಮಾಡಿ ತಂದುಕೊಟ್ಟ ನಂತರ ರಾಜನಿಗೆ ಸಂದೇಹ ಶುರುವಾಗುತ್ತದೆ. ತಾನು ಕೊಟ್ಟ ಅಷ್ಟು ಚಿನ್ನವನ್ನೂ ಕಿರೀಟದಲ್ಲಿ ಬಳಸಿಲ್ಲ ಬದಲಾಗಿ ಆತ ಉಳಿಸಿಕೊಂಡಿದ್ದಾನೆಂದು ಸಂದೇಹಿಸಿದರೂ.. ಅದು ಕೇವಲ ಸಂದೇಹವಷ್ಟೇ.. ಅದನ್ನು ಸಾಬೀತು ಮಾಡಲು ಸಾಧ್ಯವಾಗದೆ ಆರ್ಕಿಮಿಡಿಸ್ ಎದುರಿಗೆ ಈ ಸಮಸ್ಯೆಯನ್ನು ಇಡುತ್ತಾನೆ. ಹೀಗೆ ಆರ್ಕಿಮಿಡಿಸ್ ಆ ಸಮಸ್ಯೆಯ ಪರಿಹಾರಕ್ಕಾಗಿ ಕೆಲ ದಿನ ಸಮಯ ಪಡೆಯುತ್ತಾನೆ. ಆ ಸಮಸ್ಯೆಯನ್ನೇ ಆಲೋಚಿಸುತ್ತಾ ಸಾರ್ವಜನಿಕ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಆತನಿಗೆ ಅದಕ್ಕೆ ಉತ್ತರ ಹೊಳೆದೇ ಬಿಡುತ್ತದೆ. ಆಗ ಆತ ತಾನು ಸ್ನಾನ ಮಾಡುತ್ತಿರುವುದನ್ನೂ ಮರೆತು 'ಯುರೇಕಾ' ಅರ್ಥಾತ್ "ನನಗೆ ಸಿಕ್ಕಿತು" ಎಂದು ಕೂಗಿಕೊಂಡು ಹೊರಬರುತ್ತಾನೆ. ಈ ದೃಶ್ಯಗಳನ್ನು ನೀವು ಗಮಣಿಸಿರಬಹುದು.
ಆತನಿಗೆ ಸಿಕ್ಕ ಉತ್ತರವೇನು ಗೊತ್ತೇ..?? ಆಗಿನ ಸ್ನಾನಗೃಹಗಳಲ್ಲಿ ಇದ್ದದ್ದು ಈಗಿನ ಬಾತ್ ಟಬ್ ರೀತಿಯ ಸ್ನಾನದ ವ್ಯವಸ್ಥೆ. ಆತ ಬಾತ್ ಟಬ್ ನೊಳಗೆ ಮುಳುಗಿದಾಗ ಅದರಿಂದ ನೀರು ಹೊರ ಚೆಲ್ಲುತ್ತದೆ. ಆ ನೀರು ಎಷ್ಟು ಪ್ರಮಾಣದಲ್ಲಿತ್ತೆಂದರೆ.. ಆತನ ದೇಹದ ತೂಕದಷ್ಟು.. ಬೇರೆ ಬೇರೆ ಪ್ರಯೋಗಗಳನ್ನು ನಡೆಸಿ, ತನ್ನ ಪ್ರಯೋಗ ಫಲಿಸಿದ ನಂತರ.. ಅನುಮಾನವಿದ್ದ ಕಿರೀಟವನ್ನು ಹಾಗೂ ಶುದ್ಧ ಚಿನ್ನವನ್ನೂ ನೀರಿಗೆ ಹಾಕಿ ಪರೀಕ್ಷಿಸುತ್ತಾನೆ. ಅವೆರಡಕ್ಕೂ ವ್ಯತ್ಯಾಸ ಕಂಡು ಬರುತ್ತದೆ. ಮುಂದೆ ಈತನ ಶಿಷ್ಯನಾದ ಗೆಲಿಲಿಯೋ ಸಹಾ ಇದೇ ಥಿಯರಿಯನ್ನು ಆಧರಿಸಿ ಬೇರೆ ಬೇರೆ ಸಂಶೋಧನೆಗಳನ್ನು ನಡೆಸುತ್ತಾನೆ.
ಒಂದು ಸಮಸ್ಯೆಗೆ ಯಾವುದೋ ಒಂದು ಸಂದರ್ಭದಲ್ಲಿ 'ಥಟ್' ಎಂದು ಪರಿಹಾರ ಸಿಕ್ಕಿದಾಗ 'ಯುರೇಕಾ' ಎಂದು ಹೇಳುವುದು ಅನ್ವರ್ಥವಾದಂತೆ.. ತಮಗೆ ಉತ್ತರ ಸಿಗದ ಎಷ್ಟೋ ಸಮಸ್ಯೆಗಳಿಗೆ ಥಟ್ ಎಂದು ಹೊಳೆದ ಪರಿಹಾರವನ್ನು.. ಆ ಕ್ಷಣವನ್ನು.. "ಯುರೇಕಾ ಮೊಮೆಂಟ್ಸ್" ಎಂದೇ ಕರೆಯುತ್ತಾರೆ. ಬ್ಯುಸಿನೆಸ್ ನಲ್ಲಿ ಇದು ಹೆಚ್ಚು. ಬ್ಯುಸಿನೆಸ್ ನ ಯುರೇಕಾ ಮೊಮೆಂಟ್ಸ್ ಗಳ ಕುರಿತು ಮುಂದೆ ಬರೆಯುವೆ.
ಭಾರತದಲ್ಲಿ ಇಂದು ನಾವು ಬಳಸುವ ಎಷ್ಟೋ ವಾಟರ್ ಪ್ಯೂರಿಫೈಯರ್ ಗಳಿಗೆ 'ಅಕ್ವಾಗಾರ್ಡ್' ಎಂದೇ ಕರೆಯುತ್ತೇವೆ. ಅಕ್ವಾಗಾರ್ಡ್ ಎನ್ನುವುದು ಸಹ ಯುರೇಕಾ ಕಂಪನಿಯ ಪ್ರಾಡಕ್ಟ್ ನ ಹೆಸರು. ಇಷ್ಟೇ ಅಲ್ಲದೆ, ವಾಕ್ಯೂಮ್ ಕ್ಲೀನರ್ ಗಳನ್ನು, ಏರ್ ಪ್ಯೂರಿಫೈರನ್ನು ಬಳಸುತ್ತೇವಲ್ಲಾ.. ಅವೆಲ್ಲವೂ ಯಾವ ಕಂಪೆನಿಯದ್ದು ಹೇಳಿ..?? ಹೆಚ್ಚಿನವು ಯುರೇಕಾ ಫೋರ್ಬ್ಸ್ ಕಂಪನಿಯದ್ದು. ಯುರೇಖಾ ಫೋರ್ಬ್ಸ್ ಭಾರತಕ್ಕೆ ಕಾಲಿಟ್ಟಿದ್ದು 1982ರಲ್ಲಿ. ಆದರೆ, ಯುರೇಕಾ ಕಂಪನಿ ಶುರುವಾಗಿದ್ದು 1909ರಲ್ಲಿ. ಉತ್ತರ ಅಮೆರಿಕಾದ ಫ್ರೆಡ್ ವಾರ್ಡೆಲ್ ಈ ಕಂಪನಿಯ ಸ್ಥಾಪಕ.
ಕೆನಡಾದಲ್ಲಿ ಹುಟ್ಟಿದ ಫ್ರೆಡ್ ವಾರ್ಡೆಲ್.. ತನ್ನ ತಂದೆ ಕೆಲಸದ ನಿಮಿತ್ತ ಅಮೆರಿಕಾಗೆ ಸ್ಥಳಾಂತರಗೊಂಡಾಗ ಅಮೆರಿಕಾದಲ್ಲಿಯೇ ನೆಲೆಸಬೇಕಾಗುತ್ತದೆ. ತನ್ನ 20ನೇ ವರ್ಷದಿಂದ ಬೇರೆ-ಬೇರೆ ಕಂಪನಿಯ ವ್ಯಾಕ್ಯೂಮ್ ಕ್ಲೀನರ್ ಗಳನ್ನು ಮಾರಾಟ ಮಾಡುತ್ತಿರುತ್ತಾನೆ. ಈತನ ಮತ್ತೊಂದು ಆಸಕ್ತಿಯ ಕ್ಷೇತ್ರ ರಿಯಲ್ ಎಸ್ಟೇಟ್. ಎರಡನ್ನೂ ಜೊತೆ ಜೊತೆಗೆ ಮುಂದುವರಿಸುತ್ತಾ.. ಬಂದ ಹಣದಿಂದ 1913 ರಲ್ಲಿ ಅಮೆರಿಕಾದ ಡೆಟ್ರಾಟ್ ನ ಮಿಚಿಗನ್ ನಲ್ಲಿ ತನ್ನದೇ ಆದ ವ್ಯಾಕ್ಯೂಮ್ ಕ್ಲೀನರ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಾನೆ.
ಮುಂದೇನು ಎಂಬ ಯೋಚನೆಯಲ್ಲಿದ್ದವನಿಗೆ ತಕ್ಷಣಕ್ಕೆ ಇದೇ ಸರಿ ಎಂದೆನಿಸಿ 'ಯುರೇಕಾ' ಎಂದೇ ಹೆಸರಿಸುತ್ತಾನೆ. ಯೂರೇಕಾ ಮಾಡೆಲ್-9 ಎಂಬ ಹೆಸರಿನಲ್ಲಿ 1922 ರಲ್ಲಿ ವ್ಯಾಕ್ಯೂಮ್ ಕ್ಲೀನರ್ ಬಿಡುಗಡೆಯಾಗುತ್ತದೆ. ಈಗಾಗಲೇ ಪ್ರಸಿದ್ಧಿಯಾಗಿದ್ದ ಹೋವರ್ ಕಂಪನಿ ಈತನ ದೊಡ್ಡ ಪ್ರತಿಸ್ಪರ್ಧಿ. ಯುರೇಕಾದ ವ್ಯಾಕ್ಯೂಮ್ ಕ್ಲೀನರ್ ಹೋವರ್ ಕಂಪನಿಯ ಮೋಟರಿನಷ್ಟೇ ಶಕ್ತಿಯುತವಾಗಿದ್ದು ..ಮುಂದೆ ಅದಕ್ಕೆ ಜೋಡಿಸಿರುವ ಬ್ಯಾಗ್ ಕೂಡ ಅದರಂತೆಯೇ ಇದ್ದು.. ಅದಕ್ಕಿಂತ ಅರ್ಧದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರೂ.. ಗ್ರಾಹಕರು ತಮಗೆ ಹೋವರ್ ಕಂಪನಿಯ ವ್ಯಾಕ್ಯೂಮ್ ಕ್ಲೀನರ್ ಬೇಕು ಎಂದು ಕೇಳುತ್ತಿದ್ದರು.
ಬ್ರ್ಯಾಂಡ್ ಎನ್ನುವುದು ಗ್ರಾಹಕರ ಮನಸ್ಸಿನಲ್ಲಿ ಅಷ್ಟು ಅಚ್ಚೊತ್ತಿರುವಾಗ ಅದನ್ನು ಬದಲಿಸಿ, ಹೊಸದೊಂದು ಬ್ರ್ಯಾಂಡ್ ನೇಮ್ ಅನ್ನು ಸ್ಥಾಪಿಸುವುದು ಸುಲಭವಾಗಿರಲಿಲ್ಲ. ಆಗ ಯುರೇಕಾ ಅವರಿಗೊಂದು ಆಫರ್ ನೀಡುತ್ತದೆ. "ಯುರೇಖಾದ ವ್ಯಾಕ್ಯೂಮ್ ಕ್ಲೀನರ್ ಅನ್ನು 10 ದಿನ ಉಚಿತವಾಗಿ ಮನೆಯಲ್ಲಿ ಟ್ರೈಯಲ್ ಮಾಡಬಹುದು. ಆದಾಗಿಯೂ ಇಷ್ಟವಾಗದಿದ್ದರೆ ಅದನ್ನು ಹಿಂತಿರುಗಿಸಬಹುದೆಂದು". ಈ ಆಫರ್ ನೀಡಿದ 3 ವರ್ಷಗಳಲ್ಲಿ ಯುರೇಕಾದ 10 ಲಕ್ಷ ವಾಕ್ಯೂಮ್ ಕ್ಲೀನರ್ ಮಾರಾಟವಾದವು. 1927ರ ಹೊತ್ತಿಗೆ ಇದು 20 ಲಕ್ಷಕ್ಕೇರಿತ್ತು. ಹಲವಾರು ಪ್ರತಿಸ್ಪರ್ಧಿಗಳನ್ನು ಮೀರಿಸಿ ಹೋವರ್ ನಂತರ ಅಂದರೆ, ಎರಡನೇ ಸ್ಥಾನಕ್ಕೇರಿತ್ತು ಯುರೇಕಾ.
ಬ್ಯುಸಿನೆಸ್ ಎನ್ನುವುದು ನಿಂತ ನೀರಲ್ಲ. ಮಹತ್ವಾಕಾಂಕ್ಷೆಗಳಂತೂ ಇದ್ದೇ ಇರುತ್ತವೆ. ತನ್ನ ಬ್ಯುಸಿನೆಸ್ ವಿಸ್ತರಿಸಲು ಯುರೇಕಾ ಕಂಡುಕೊಂಡಿದ್ದು ಮಾರ್ಕೆಟಿಂಗ್ ತಂತ್ರ. ಪ್ರತಿ ಮನೆಗೂ ಹೋಗಿ ಮಾರಾಟ ಮಾಡುತ್ತಿದ್ದುದರಿಂದ.. ಮಧ್ಯವರ್ತಿಗಳಿಗೆ ನೀಡಬೇಕಾದ ಹಣ ಮಿಕ್ಕುತಿತ್ತಾದರೂ.. ಆ ಸಂದರ್ಭದಲ್ಲಿ ಬಂದ ವಿಶ್ವಯುದ್ಧದ ಪರಿಣಾಮದಿಂದ ಹಾಗೂ ಮನೆಮನೆಗೂ ಹೋಗಿ ಮಾರಾಟ ಮಾಡಲು ಉಂಟಾಗುವ ಖರ್ಚಿನಿಂದ ಕಂಪನಿ ನಷ್ಟದ ಹಾದಿ ಹಿಡಿಯಿತು. 1945ರವರಿಗೂ ಇದೇ ಸ್ಥಿತಿ ಮುಂದುವರೆಯಿತು. 10-15 ವರ್ಷಗಳು ಇದೇ ಸ್ಥಿತಿ ಮುಂದುವರಿದರೆ ಬ್ಯುಸಿನೆಸ್ ಗತಿ ಏನಾಗಬೇಕು..??
ಯುದ್ಧದ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾದರೂ.. ಬ್ಯುಸಿನೆಸ್ ಅನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯಿಂದ 1945ರಲ್ಲಿ ವಿಲಿಯಂಸ್ ಆಯಿಲ್-ಓ-ಮ್ಯಾಟಿಕ್ ಎನ್ನುವ ಹೀಟರ್ ಹಾಗೂ ರೆಫ್ರಿಜರೇಟರ್ ನ ಕಂಪನಿ ಜೊತೆಗೆ ವಿಲೀನವಾಯಿತು. ಈಗ ಯುರೇಕಾದ ಹೆಸರು 'ಯುರೇಕಾ-ವಿಲಿಯಂಸ್ ಕಾರ್ಪೊರೇಷನ್' ಎಂದು ಬದಲಾಯಿತು.
1953 ರಲ್ಲಿ 'ಹೆನ್ನಿ ಮೋಟಾರ್' ಕಂಪನಿಯವರು ಇದನ್ನು ಕೊಂಡುಕೊಂಡರು. ಮತ್ತೊಮ್ಮೆ ಕೈ ಬದಲಾಯಿತು. 1959ರಲ್ಲಿ ಅಮೆರಿಕಾದ ಮೊದಲ ಎಲೆಕ್ಟ್ರಿಕ್ ಕಾರ್ ಹೆಮ್ಮಿ ಕಿಲೋವ್ಯಾಟ್ ಅನ್ನು ತಯಾರಿಸಿದ ಕಂಪನಿ.. ಅದು ಫ್ಲಾಪ್ ಆದಾಗ ಆರ್ಥಿಕವಾಗಿ ಬಹಳಷ್ಟು ನಷ್ಟ ಹೊಂದಿತು. ಈಗ ಅದು ನ್ಯಾಷನಲ್ ಯೂನಿಯನ್ ಎಲೆಕ್ಟ್ರಿಕ್ ಕಾರ್ಪೊರೇಷನ್ ಪಾಲಾಯಿತು. 1974ರಲ್ಲಿ ಎ.ಬಿ ಎಲೆಕ್ಟ್ರೋಲಕ್ಸ್ ಎಂಬ ಸ್ವೀಡನ್ ಕಂಪನಿ ಅದನ್ನು ಖರೀದಿಸಿ.. ಮತ್ತೆ ಮೊದಲ ಹೆಸರನ್ನೇ ನೀಡಿತು. 'ಯುರೇಕಾ' ಎಂಬ ಹೆಸರು ಇಲ್ಲಿಂದ ಸ್ಥಿರವಾಯಿತು. 2004ರಲ್ಲಿ ಯುರೇಕಾ ಎಂಬ ಹೆಸರಿನ ಜೊತೆಗೆ ಯುರೇಕಾ ಎಲೆಕ್ಟ್ರೋಲಕ್ಸ್ ಹೋಂ-ಪ್ರಾಡಕ್ಟ್ಸ್ ಎಂದು ಬದಲಾವಣೆ ತಂದರಾದರೂ.. 'ಯುರೇಕಾ' ಎಂಬ ಬ್ರ್ಯಾಂಡ್ ನೇಮ್ ಬದಲಾಗಲಿಲ್ಲ. 2016ರಲ್ಲಿ ಎಲೆಕ್ಟ್ರೋಲಕ್ಸ್ ಯುರೇಕಾವನ್ನು ಚೀನಾದ ಕಂಪನಿಯಾದ ಮೈಡಿಯಾ ಗ್ರೂಪ್ ಗೆ ಮಾರಾಟ ಮಾಡಿತು. ಈಗ ಸದ್ಯಕ್ಕೆ ಯುರೇಕಾ ಎಂಬ ಹೆಸರಿನಲ್ಲಿಯೇ ಮೈಡಿಯ ಒಡೆತನದಲ್ಲಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುರೇಕಾ ಫೋರ್ಬ್ಸ್ ಗೂ ಇದಕ್ಕೂ ಹಿಂದಿನ ಸಂಬಂಧವಿದೆ. ಯುರೇಕಾ ಕಂಪನಿ ಸ್ವೀಡನ್ ನ ಎಲೆಕ್ಟ್ರೋಲಕ್ಸ್ ನ ಒಡೆತನದಲ್ಲಿದ್ದಾಗ 40% ಹಾಗೂ ಕ್ಯಾಂಪ್ಲೆಸ್ ಎನ್ನುವ ಟಾಟಾ ಗ್ರೂಪ್ಸ್ ನ ಫೋರ್ಬ್ಸ್ ಕಂಪನಿಯ 60% ಜಾಯಿಂಟ್ ವೆಂಚರ್ ನಿಂದ ಶುರುವಾದದ್ದೇ ಯುರೇಕಾ-ಫೋರ್ಬ್ಸ್. 2001ರಲ್ಲಿ ಟಾಟಾದವರು ತಮ್ಮ ಫೋರ್ಬ್ಸ್ ಕಂಪನಿಯನ್ನು ಶಪೂರ್ಜೀ-ಪಲ್ಲೊಂಜಿ ಗ್ರೂಪ್ ಗೆ ಮಾರಾಟ ಮಾಡಿದರು. 2005ರಲ್ಲಿ ತನ್ನ ಬಳಿ ಇದ್ದ ಸಂಪೂರ್ಣ 40% ಶೇರನ್ನು ಎಲೆಕ್ಟ್ರೋಲಕ್ಸ್ ಫೋರ್ಬ್ಸ್ ಕಂಪನಿ ಗೆ ಮಾರಿತು. ಈಗ ಯುರೇಕಾ ಸಂಪೂರ್ಣವಾಗಿ ಶಪೂರ್ಜೀ-ಪಲ್ಲೊಂಜಿ ಗ್ರೂಪ್ ಗೆ ಸೇರಿತು.
2010ರಲ್ಲಿ ಯುರೇಕಾ ಲಾಭದ ಹಾದಿಯಲ್ಲಿತ್ತು. ಅದು ಲಕ್ಸ್ ಇಂಟರ್ನ್ಯಾಷನಲ್ ಕಂಪನಿಯ 25% ಶೇರ್ ಅನ್ನು ಕೊಂಡುಕೊಂಡಿತು. 2013ರಷ್ಟರಲ್ಲಿ ಲಕ್ಸ್ ಇಂಟರ್ನ್ಯಾಷನಲ್ ನ ಕಂಟ್ರೋಲಿಂಗ್ ಶೇರ್ ಹೋಲ್ಡರ್ ಆಗಿಯೂ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತು. 2022 ರಲ್ಲಿ ಶಪೂರ್ಜೀ-ಪಲ್ಲೊಂಜಿ ಗ್ರೂಪ್ಸ್ ಅಡಿಯಲ್ಲಿದ್ದ ಯುರೇಕಾವನ್ನು 'ಅಡ್ವೆಂಟ್ ಇಂಟರ್ನ್ಯಾಷನಲ್' ಸಂಪೂರ್ಣವಾಗಿ ಕೊಂಡುಕೊಂಡಿತು. ಈಗ ಯುರೇಕಾ-ಫೋರ್ಬ್ಸ್ ಕೇವಲ ಯುರೇಕಾ ಆಗಿದೆ.
ಭಾರತದಲ್ಲಿ ಯುರೇಕಾ-ಫೋರ್ಬ್ಸ್ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಲು ಪಟ್ಟಪಾಡು ಪುಟ್ಟದೇನಲ್ಲ. 1982ರ ಸಂದರ್ಭದಲ್ಲಿ ವ್ಯಾಕ್ಯೂಮ್ ಕ್ಲೀನರ್ ಅನ್ನು ಮಾರಾಟ ಮಾಡಲು ಮಾರ್ಕೆಟಿಂಗ್ ಗೆಂದು ಹೋದಾಗ "ಇದಕ್ಕಿಂತ ಕಡಿಮೆ ಹಣದಲ್ಲಿ ಇಲ್ಲಿ ಕೆಲಸದವರು ಸಿಗುತ್ತಾರೆ. ಇದರ ಅವಶ್ಯಕತೆ ಇಲ್ಲ" ಎಂಬ ಹೇಳಿಕೆ ಪಟ್ಟಣದವರಿಂದ ಬಂದರೆ, "ಇದರ ಬಳಕೆಗೆ ಬೇಕಾದ ವಿದ್ಯುಚ್ಚಕ್ತಿ ಹಳ್ಳಿಗಳಲ್ಲಿ ಸಿಗುವುದಿಲ್ಲ" ಎಂದು ಬಂದ ಉತ್ತರ ಎಲ್ಲೆಡೆಯಲ್ಲಿಯೂ ನಿರಾಶೆಯನ್ನೇ ಹೊತ್ತು ತಂದಿತ್ತು.
ವ್ಯಾಕ್ಯೂಮ್ ಕ್ಲೀನರ್ ಗಳದ್ದು ಈ ಕಥೆಯಾದರೆ.. ವಾಟರ್ ಪ್ಯೂರಿಫೈಯರ್ ಮತ್ತೊಂದು ಕತೆ. ಆಗಿನ್ನೂ.. ವಾಟರ್ ಫಿಲ್ಟರ್ ಗಳು ಬಳಕೆಯಲ್ಲಿದ್ದರೆ ಹೆಚ್ಚು ಎಂಬ ಕಾಲ. ಇನ್ನು ವಾಟರ್ ಪ್ಯೂರಿಫೈಯರ್ ಗಳಂತೂ ದೂರದ ಮಾತು. ಯುರೇಕಾ ಇಡೀ ದೇಶದಲ್ಲಿ ನೀರಿನ ಕುರಿತಾಗಿ ಸಂಶೋಧನೆ ನಡೆಸಿ, ನೀರಿನ ಕಲುಷಿತತೆಯ ಕುರಿತು ರಿಪೋರ್ಟ್ ತಯಾರಿಸಿತ್ತು. ಕಲುಷಿತ ನೀರು ಹೆಚ್ಚಿದ್ದ ಪಂಜಾಬ್, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ ಹಾಗೂ ತಮಿಳುನಾಡುಗಳಲ್ಲಿ ಇದರ ಅವಶ್ಯಕತೆ ಹೆಚ್ಚಿದೆ ಎಂದು ಮನವರಿಕೆ ಮಾಡಿಸಿತ್ತು.
ಮೊದಮೊದಲು ಆಫೀಸುಗಳಲ್ಲಿ ಕಾರ್ಪೊರೇಟ್ ಕಂಪನಿಗಳಲ್ಲಿ ಇವುಗಳ ಬಳಕೆ ಶುರುವಾಯಿತು. ನಂತರ ಪ್ರತಿ ಮನೆಮನೆಗೂ ಯೂರೇಕಾದ ವಾಟರ್ ಪ್ಯೂರಿಫಯರ್, ಏರ್ ಪ್ಯೂರಿಫೈಯರ್ ಗಳು ಕಾಲಿಟ್ಟವು. ಈ ವಾಟರ್ ಪ್ಯೂರಿಫೈಯರ್ಗಳಲ್ಲಿಯೂ ವಿವಿಧ ರೀತಿಯ ಬದಲಾವಣೆಗಳನ್ನು ಮಾಡಲಾಯಿತು. ತಮ್ಮ ಪ್ರಬಲ ಪ್ರತಿಸ್ಪರ್ಧಿಗಳಾದ ಡ್ರ್ಯಾಕ್ಯೂಗಾರ್ಡ್, ಕೆಂಟ್, ರಿಲಯನ್ಸ್, ಎಲ್.ಜಿ ಗಳಿಗಿಂತ ಮುಂಚೂಣಿ ಸಾಧಿಸಿ.. ಇಂದು ವಾಟರ್ ಪ್ಯೂರಿಫಿಕೇಷನ್ ಮಾರ್ಕೆಟಿಂಗ್ ಮಾರ್ಕೆಟ್ನಲ್ಲಿ 52%, ವ್ಯಾಕ್ಯೂಮ್ ಕ್ಲೀನರ್ ಗಳ ಮಾರಾಟದಲ್ಲಿ 80% ದಾಖಲೆಯ ಮಾರಾಟವನ್ನು ತನ್ನದಾಗಿಸಿಕೊಂಡಿದೆ. ಯುರೋ-ಕ್ಲೀನ್ ಎಂಬ ವ್ಯಾಕ್ಯೂಮ್ ಕ್ಲೀನರ್ ಇದರ ಟಾಪ್ ಮಾಡೆಲ್ ಎಂಬ ಪ್ರಖ್ಯಾತಿ ಹೊಂದಿದೆ. ಇದರ ಮಾರಾಟವೇ ಅತ್ಯಧಿಕ
ಯುರೇಖಾ ಕೇವಲ ಇಷ್ಟಕ್ಕೇ ನಿಲ್ಲಿಸದೆ, ತನ್ನ ಸಂಶೋಧನೆಗಳನ್ನು ಮುಂದುವರಿಸುತ್ತಾ.. ಬೇರೇನಾದರೂ ಹೊಸತನ್ನು ಅಳವಡಿಸಿಕೊಂಡು ಬರಬಹುದಾ..?? ಎಂದು ಪ್ರಯೋಗಗಳನ್ನು ಮಾಡುತ್ತಲೇ ಇದೆ. ಮೊದಲಿಗೆ ವಾಟರ್ ಪ್ಯೂರಿಫೈಯರ್ ಗಳಲ್ಲಿ ಕೇವಲ ರಿವರ್ಸ್ ಆಸ್ಮಾಸಿಸ್ ಎಂದರೆ ಆರ್.ವಿ ಮಾತ್ರ ಇದ್ದ ಸೌಲಭ್ಯ.. ಮುಂದುವರೆದು ಈಗ ವಾಟರ್ ಪ್ಯೂರಿಫೈಯರ್ ನಲ್ಲಿ ಆರ್.ಓ ಮತ್ತು ಯುವಿ ಸೌಲಭ್ಯ ನೀಡಿತು. 2008ರಲ್ಲಿ ಆಕ್ವಾ-ಸೆನ್ಸಾ ಎನ್ನುವ ವಾಟರ್ ಪ್ಯೂರಿಫೈಯರ್ ನಲ್ಲಿ ಬಳಸಲಾದ ತಂತ್ರಜ್ಞಾನ ಮತ್ತಷ್ಟು ಮುಂದುವರಿಯಿತು. ನೀರಿನಲ್ಲಿ ಕಲುಷಿತತೆಯ ಅಂಶ ಎಷ್ಟಿದೆ ಎಂದು ಹಾಗೂ ಅದಕ್ಕೆ ತಕ್ಕಂತೆ ಪ್ರತಿ ನಿಮಿಷವು ಪ್ಯೂರಿಫೈ ಮಾಡುವ ಗುಣಮಟ್ಟ ಬಡಲಾಗುತ್ತಿತ್ತು. ಮುಂಬೈನಲ್ಲಿ ಇತ್ತೀಚೆಗೆ ಮಾಡಿದ ಒಂದು ಸಂಶೋಧನೆಯಲ್ಲಿ ಗಾಳಿಯನ್ನು ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ರೆಫ್ರಿಜರೇಷನ್ ಟೆಕ್ನಿಕ್ ನಿಂದ 120 ಲೀಟರ್ ಅಂದರೆ 500 ಗ್ಲಾಸ್ ಕುಡಿಯುವ ನೀರನ್ನು ಗಾಳಿಯಿಂದ ಪರಿವರ್ತಿಸಿದೆ.
ಯುರೇಕಾ ಕೇವಲ ಬ್ಯುಸಿನೆಸ್ ಮಾತ್ರವಲ್ಲದೆ.. ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. 2000ದಿಂದ "ಯುರೇಕಾ ಫೋರ್ಬ್ಸ್ ಇನ್ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟ್" ಎನ್ನುವ ವಿದ್ಯಾಲಯವನ್ನು ಸ್ಥಾಪಿಸಿದೆ. 'ನಾನಾ-ನಾನಿ ಪಾರ್ಕ್' ಎನ್ನುತ್ತಾ ಮುಂಬೈನಲ್ಲಿ ಸೀನಿಯರ್ ಸಿಟಿಜನ್ ಗಳಿಗೆಂದೇ.. ಅವರಿಗೆ ಬೇಕಾದ ಸೌಲಭ್ಯವಿರುವ ಪಾರ್ಕ್ ಗಳನ್ನು ನಿರ್ಮಿಸಿದೆ. ಸೀನಿಯರ್ ಸಿಟಿಜನ್ ಗಳಿಗೆ ಬೇಕಾದ ಶಾಂತ ವಾತಾವರಣ, ವ್ಯಾಯಾಮ ಸ್ಥಳಗಳು ಇನ್ನಿತರ ಸೌಲಭ್ಯಗಳನ್ನು ಮಾಡಿಕೊಟ್ಟಿದೆ.
ಮಾಮೂಲು ಜನರಂತೆಯೇ ಅಂಗವಿಕಲರು ಕೂಡ ದುಡಿಯಬೇಕು ಎನ್ನುವ ಆಶಯವನ್ನಿಟ್ಟುಕೊಂಡು 'ನ್ಯಾಷನಲ್ ಸೊಸೈಟಿ ಫಾರ್ ಇಕ್ವಲ್ ಆಪರ್ಚುನಿಟಿಸ್' ಜೊತೆಗೂಡಿ 'ಯುರೋ-ಏಬಲ್' ಎಂದು ಕರೆಯುತ್ತಾ ತನ್ನ ಕಸ್ಟಮರ್-ಕೇರ್ ಸೆಂಟರ್ ಗಳಲ್ಲಿ ಹಾಗೂ ತನ್ನ ಕಂಪನಿಯಲ್ಲಿ ಅವರು ಮಾಡಬಲ್ಲಂತಹಾ ಉದ್ಯೋಗಗಳನ್ನು ನೀಡುತ್ತಾ.. ತನ್ನ ಕಂಪನಿಯಲ್ಲಿ 50% ಈ ರೀತಿಯ ಉದ್ಯೋಗಿಗಳನ್ನು ಹೊಂದಿದೆ. ಭಾರತದಾದ್ಯಂತ 21000 ಡೀಲರ್ ಗಳು, 10,000ಕ್ಕೂ ಹೆಚ್ಚು ಪಟ್ಟಣಗಳಲ್ಲಿ ವ್ಯಾಪಿಸಿರುವ ಯುರೇಕಾ ಇಂದಿಗೂ ಡೋರ್-ಟು-ಡೋರ್ ಮಾರ್ಕೆಟಿಂಗ್ ಅನ್ನು ಬಿಟ್ಟಿಲ್ಲ. ಇದಕ್ಕಾಗಿ ದುಡಿಯುವ ಉದ್ಯೋಗಿಗಳಿಗೆ 'ಯೂರೋ-ಚಾಂಪ್ಸ್' ಎಂದು ಕರೆಯುತ್ತಾರೆ. ಯುರೇಕಾದ 80% ಗ್ರಾಹಕರಿಗೆ ಯುರೇಕಾದ ಸರ್ವಿಸ್ ಸೆಂಟರ್ ತಾವು ವಾಸವಿರುವ 5 ಕಿಲೋಮೀಟರ್ ಒಳಗಿದೆ.
ಯುರೇಕಾ ಕಂಪನಿ ಭಾರತದಲ್ಲಿ ಉದ್ಯೋಗಿಗಳು ದುಡಿಯಲು ಅತ್ಯುತ್ತಮ ವರ್ಕ್ ಪ್ಲೇಸ್ ಎಂದೇ ಹೆಸರಾಗಿದೆ. ಏಷ್ಯಾದ ಮತ್ತು ಭಾರತದ ಮೊದಲ ಐದು ಬೆಸ್ಟ್ ಉದ್ಯೋಗಿಗಳಿರುವುದು ಯುರೇಕಾ ಕಂಪನಿಯಲ್ಲಿ. ಪ್ರತಿಷ್ಠಿತ ಪ್ರಶಸ್ತಿಗಳಾದ ಪ್ಲಾಟಿನಮ್ ಬ್ರ್ಯಾಂಡ್ ಏಷ್ಯಾ' ಹಾಗೂ 'ಗೋಲ್ಡನ್ ಪಿಕಾಕ್ ಅವಾರ್ಡ್' ಹೀಗೆ ಮುಂತಾದ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ಯುರೇಕಾದ ಕುರಿತು ತಿಳಿದುಕೊಳ್ಳುತ್ತಾ ಹೋದಂತೆ ಹಲವಾರು ಕೈ ಬದಲಾಯಿಸಿರುವ ಮಾಲೀಕತ್ವವನ್ನು ನೋಡಬಹುದು. ಅದು ಬ್ಯುಸಿನೆಸ್ ದೃಷ್ಟಿಯಿಂದ ಅವರಿಗೆ ಸಮರ್ಪಕವಾಗಿರಬಹುದು. ಆದರೆ, ಅಂದಿನಿಂದ ಇಂದಿನವರೆಗೂ.. ಯುರೇಕಾದ ಬ್ರ್ಯಾಂಡ್ ನೇಮ್ ಹಾಗೂ ಗುಣಮಟ್ಟ ಹಾಗೆಯೇ ಇದೆ. ಇದಕ್ಕೆ ಮೊದಲ ಕಾರಣ ಮಧ್ಯವರ್ತಿಗಳನ್ನು ನೆಚ್ಚಿಕೊಳ್ಳದಿರುವುದು ಮತ್ತೊಂದು ಉದ್ಯೋಗಿಗಳನ್ನು ತಮ್ಮ ಸ್ವಂತದವರಂತೆ ಕಾಪಾಡುವುದು. ಬ್ಯುಸಿನೆಸ್ ನಲ್ಲಿ ಎಂದಿಗೂ ಡೈರೆಕ್ಟ್ ಸೆಲ್ಲಿಂಗ್ ಉತ್ತಮ. ಅದಷ್ಟೇ ಅಲ್ಲದೆ, ಪ್ರಾಡಕ್ಟ್ ಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತಾ.. ಅಪ್ಡೇಟ್ ಮಾಡುವುದೂ ಅಷ್ಟೇ ಮುಖ್ಯ. ಕೇವಲ ಅಪ್ಡೇಟ್ ಮಾಡಿದರೆ ಮಾತ್ರವಲ್ಲ.. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿಯೂ ಅದನ್ನು ನೀಡುವುದು ಅತ್ಯಂತ ಮುಖ್ಯ ಎನ್ನುತ್ತದೆ ಯುರೇಕಾ. ಹೋಂ ಅಪ್ಲೈಯನ್ಸೆಸ್ ಗಳಿಗೆಂದೇ ಹೆಸರಾದರೂ.. ಬಹಳಷ್ಟು ಕಂಪನಿಗಳ ಮಾಲೀಕತ್ವ ಬದಲಾದರೂ ಅದೆಲ್ಲವನ್ನು ಸರಿದೂಗಿಸಿಕೊಂಡು, ಬ್ಯುಸಿನೆಸ್ ಅನ್ನು ತನ್ನ ಪ್ಲಾನ್ ನಂತೆಯೇ ನಡೆಸುತ್ತಾ.. ಯುರೇಕಾ ತನ್ನ ಕ್ವಾಲಿಟಿ ಪ್ರಾಡಕ್ಟ್ ಗಳಿಂದ ಟ್ರೆಂಡ್ ಸೆಟ್ಟರ್ ಆಗಿಯೂ.. ಚೇಂಜ್ ಮೇಕರ್ ಆಗಿಯೂ ಬ್ಯುಸಿನಸ್ ನಲ್ಲಿ ಛಾಪು ಮೂಡಿಸುವ ಪಾಠ ಹೇಳುತ್ತಿದೆ ಯುರೇಕಾ.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ