ಬುಧವಾರ, ಏಪ್ರಿಲ್ 22, 2026

ವ್ಯತಿರಿಕ್ತ (ಪುಸ್ತಕ ಯಾನ - 304)


ಪುಸ್ತಕದ ಶೀರ್ಷಿಕೆ : ವ್ಯತಿರಿಕ್ತ

ಲೇಖಕರು : ವಿವೇಕಾನಂದ ಕಾಮತ್ 

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2024

ಪುಟಗಳು : 240

ಬೆಲೆ : 285 ರೂ.


ಈ ಕಾದಂಬರಿಯನ್ನು ನಾನು ಸಸ್ಪೆನ್ಸ್ ಕಾದಂಬರಿ ಮಾತ್ರ ಎನ್ನಲಾರೆ. ಏಕೆಂದರೆ, ಸಸ್ಪೆನ್ಸ್ ಮೇಲೆ ಸಸ್ಪೆನ್ಸ್. ನಿಜಕ್ಕೂ ಕೆಲ ಕಾದಂಬರಿಗಳನ್ನು ಓದುವಾಗ ಕಥೆಯ ಮುಂದಿನ ಭಾಗ ಅಥವಾ ಅಂತ್ಯವನ್ನು ಊಹಿಸಬಹುದು. ಆದರೆ, ಇದು ಊಹೆಗೆ ಮೀರಿದ ಕಥಾಹಂದರ. ಅರೆ..! ಇದು ಹೀಗೂ ಆಗಬಹುದಾ ಎಂದೆನಿಸುವಂತೆ ಮಾಡುವಂತಹಾ ರೋಚಕ ತಿರುವುಗಳು. ಹಾಗೆಂದು, ಇದರಲ್ಲಿ ಕೇವಲ ರೋಚಕತೆ ಮಾತ್ರವಾ ಎಂದರೆ ಖಂಡಿತ ಇಲ್ಲ. ಬದಲಾಗಿ ಇದರಲ್ಲಿ ಬದುಕಿನ ದೊಡ್ಡ ಪಾಠವನ್ನೇ ಹೇಳಿದ್ದಾರೆ ಲೇಖಕರು. ಅದರಲ್ಲಿ ಪ್ರೀತಿಯ ಕುರಿತಾದ, ಅದರಲ್ಲಿಯೂ ಜೀವಂತಿಕೆಯ ಹಾಗೂ ನಿಷ್ಕಲ್ಮಶ ಪ್ರೀತಿಯ ಮಜಲನ್ನು ತೆರೆದಿಟ್ಟಿದ್ದಾರೆ. ಒಂದೊಳ್ಳೆ ರೋಚಕ ಕಾದಂಬರಿಯ ಓದನ್ನು ಅರಸುತ್ತಿರುವವರಿಗೆ ಇದು ಹೇಳಿ ಮಾಡಿಸಿದ ಪುಸ್ತಕ. ಏಕೆಂದರೆ ತಿರುವನ್ನು ಊಹಿಸುವುದು ಖಂಡಿತವಾಗಿಯೂ ಅಸಾಧ್ಯ.


'ವ್ಯತಿರಿಕ್ತ' ಎನ್ನುವ ಶೀರ್ಷಿಕೆಗೆ ಬದ್ಧವಾದ ಕಥಾಹಂದರ. ಎಲ್ಲರೂ ಸಾವನ್ನು ದೂರ ತಳ್ಳುವ ಪ್ರಯತ್ನದಲ್ಲಿದ್ದರೆ ಹಾಗೂ ಸಾವಿನಿಂದ ಪಾರಾಗುವ ಯೋಚನೆಯಲ್ಲಿ ಬದುಕನ್ನು ವಿಸ್ತರಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದರೆ.. ಇಲ್ಲಿ ತನ್ನ ಸಾವಿಗೆ ತಾನೇ ಆಹ್ವಾನ ಕೊಟ್ಟುಕೊಳ್ಳುವ ವ್ಯಕ್ತಿ ಕಾಣಿಸುತ್ತಾನೆ. ಹಾಗೆಂದು, ಆತ ಆಯ್ಕೆ ಮಾಡಿಕೊಳ್ಳುವುದು ಆತ್ಮಹತ್ಯೆಯನ್ನಲ್ಲ. 


ಎಷ್ಟೋ ಬಾರಿ ಸಾವಿಗಿಂತ ಬದುಕಲು ಹೆಚ್ಚು ಧೈರ್ಯಬೇಕೆಂನಿಸಿದರೆ, ಕೆಲವೊಮ್ಮೆ ಬದುಕಿಗಿಂತ ಸಾವನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚು ಧೈರ್ಯ ಬೇಕು ಎಂದು ಅನ್ನಿಸುವುದೂ ಇದೆ. ಆದರೆ, ಯಾರಾದರೂ ತಮಗೆ ತಾವೇ ಸಾವನ್ನು ಆಹ್ವಾನಿಸಿಕೊಳ್ಳುವುದಾದರೆ.. ಅದು ಕೇವಲ ಒಂದು ದಿನದ ಅಥವಾ ಆ ಕ್ಷಣದ ಕ್ಷಣಿಕ ನಿರ್ಧಾರ ಮಾತ್ರವಾಗಿರುವುದಿಲ್ಲ. ಏಕೆಂದರೆ, ಅವರ ಬದುಕಿನ ಸಂಗತಿಗಳು ಹಾಗೂ ಘಟನೆಗಳು ಅವರ ಆ ತೀರ್ಮಾನದ ಮೇಲೆ ಪರಿಣಾಮ ಬೀರಿರುತ್ತವೆ. ಹಾಗೆ ಸಾವನ್ನು ಬಯಸುವವರ ಜೊತೆ ಒಂದು ಆಪ್ತಸಮಾಲೋಚನೆ ಅಥವಾ ಆತ್ಮೀಯವಾದ ಜೀವವಿದ್ದರೆ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಾ.. ನೋವು-ನಲಿವನ್ನು ತೆರೆದುಕೊಳ್ಳುತ್ತಾ.. ಆ ಆಲೋಚನೆಯಿಂದ ಅವರು ಪಾರಾಗಬಲ್ಲರು. ಆದರೆ ಈ ಕಾದಂಬರಿಯಲ್ಲಿ ಆಪ್ತ ಸಮಾಲೋಚನೆಯ ನಂತರವೂ ನಾಯಕ ಸಾವನ್ನು ಆಹ್ವಾನ ಮಾಡುತ್ತಾನೆ. ಅದಕ್ಕೆ ಕಾರಣವೇನೆಂದು ನೀವೇ ಓದಿ ತಿಳಿಯಿರಿ.


ಈ ಕಾದಂಬರಿಯ ನಾಯಕ ಸಂತೋಷ. ಸಂತೋಷವೆಂಬುದು ಕೇವಲ ಆತನ ಹೆಸರಿನಲ್ಲಿತ್ತು. ಅಲ್ಲದೇ, ಆತನ ಬದುಕಿನಲ್ಲಿರಲಿಲ್ಲ. ಕಛೇರಿಯ ಕೆಲಸ ಹಾಗೂ ಯಾಂತ್ರಿಕ ಜೀವನದಂತೆ ಆತನ ಬದುಕು ಸಾಗುತ್ತಲೇ ಹೋಗುತ್ತಿತ್ತು. ಆತನ ಸಹೋದ್ಯೋಗಿಗಳು ವಾರಾಂತ್ಯದಲ್ಲಿ ಬದಲಾವಣೆಗೆಂದು ಕಂಡುಕೊಂಡ ಮಾರ್ಗಗಳು ಆತನಿಗೆ ತಾತ್ಕಾಲಿಕ ಮಾರ್ಗಗಳೆಂದೇ ಭಾಸವಾಗುತ್ತಿತ್ತು. ಬದುಕಿನ ಆನಂದಕ್ಕೆ ಯಾವುದಾದರೂ ಶಾಶ್ವತವಾದ ದಾರಿ ಬೇಕೆಂದು ಆತನ ಮನಸ್ಸು ಚಡಪಡಿಸುತ್ತಿದ್ದ ಸಂದರ್ಭದಲ್ಲಿಯೇ ಹಿರಿಯ ಅಧಿಕಾರಿಗಳ ಜೊತೆಗೆ ಸಣ್ಣ ಘರ್ಷಣೆಯಾಗಿದ್ದೊಂದೇ ಕಾರಣವಾಗಿ ಮೊದಲೇ ಬೇಸತ್ತಿದ್ದವನು ರಾಜೀನಾಮೆ ನೀಡಿ ಅಲ್ಲಿಂದ ಹೊರಬಂದಿದ್ದ. ಈ ರೀತಿಯ ನಿರ್ಧಾರವನ್ನು ಮಾಡುವಾಗ ಸಾಮಾನ್ಯವಾಗಿ ಅವರ ಸಾಂಸಾರಿಕ ಬಂಧನಗಳು ಅಥವಾ ಅವರನ್ನು ನಂಬಿಕೊಂಡಿರುವವರ ವಿಚಾರವನ್ನು ಯೋಚಿಸಬೇಕಾಗುತ್ತದೆ. ಆದರೆ, ಸಂತೋಷನ ಬದುಕಿನಲ್ಲಿ ಹಾಗೆ ಯಾರೂ ಇರಲಿಲ್ಲ. 


ಹೆತ್ತವರನ್ನು ಅದಾಗಲೇ ಕಳೆದುಕೊಂಡಿದ್ದ. ಬೆಳೆದದ್ದು ಹಾಸ್ಟೆಲ್ ನಲ್ಲಿ. ಹಿರಿಯಣ್ಣ ಹಿರಿಯರು ಬದುಕಿದ್ದ ಮನೆಯಲ್ಲಿ ವಾಸವಾಗಿದ್ದರೆ.. ಎರಡನೇ ಅಣ್ಣ ಉತ್ತರ ಕರ್ನಾಟಕದ ಸಾಗರದಲ್ಲಿ ತನ್ನ ಪತ್ನಿಯ ಜೊತೆಗೆ ವಾಸವಾಗಿದ್ದ. ಮೊದಮೊದಲು ಮದುವೆಯಾಗೆಂದು ಸೋದರರು, ಅತ್ತಿಗೆಯರು ಹೇಳುತ್ತಿದ್ದರಾದರೂ.. ಸಂತೋಷನೇ ನಿರ್ಲಕ್ಷಿಸಿದ ಮೇಲೆ ಅವರೂ ಸುಮ್ಮನಾಗಿದ್ದರು. ಸಂತೋಷ ಮದುವೆಯ ಕುರಿತು ಒಲವು ತೋರದಿರುವುದಕ್ಕೆ ಕಾರಣವೂ ಇಲ್ಲದಿಲ್ಲ.


ಮದುವೆಯ ಬಂಧನಕ್ಕೆ ಸಿಲುಕಲು ಆತನಿಗೆ ಇಷ್ಟವಿಲ್ಲದಿದ್ದರೂ ಪರಿಚಯವಾದ ಹುಡುಗಿಯ ಜೊತೆ ಒಂದು ವರ್ಷ ಲಿವ್ ಇನ್ ಸಂಬಂಧದಲ್ಲಿದ್ದ. ಒಂದು ವರ್ಷದಲ್ಲಿಯೇ ಆ ಸಂಬಂಧದ ಕರಾರು ಮುಗಿದು, ತಾತ್ಕಾಲಿಕ ಬಂಧನದಿಂದಲೂ ಬಿಡುಗಡೆಯಾಗಿತ್ತು

ಹಾಗಿದ್ದರೆ ಆತನಿಗೆ ಸಂತೋಷ ನೀಡುತ್ತಿದ್ದಾದರೂ ಏನು..? ಎನ್ನುವ ಕುತೂಹಲದ ಜೊತೆಗೆ ನಮ್ಮ ಬದುಕಿನಲ್ಲಿ ನಮ್ಮ ಸಂತೋಷ ತಾತ್ಕಾಲಿಕವೋ.. ಕ್ಷಣಿಕವೋ.. ಎಂಬ ಆಲೋಚನೆಯನ್ನು ಮೂಡಿಸುತ್ತದೆ ಕಾದಂಬರಿಯ ಆರಂಭ. 


ಕೆಲವರಿಗೆ ಏಕಾಂತದಲ್ಲಿಯೇ ಸಂತಸ ಸಿಗುತ್ತದೆ. ಆದರೆ, ಸಂತೋಷನಿಗೆ ನಾಲ್ಕೇ ದಿನಕ್ಕೆ ಏಕಾಂತವೂ ಏಕತಾನತೆಯಾಗಿತ್ತು. ಆದರೆ ಮತ್ತೆ ಯಾಂತ್ರಿಕ ಬದುಕಿಗೆ ಹೋಗುವುದು ಬೇಡವಿತ್ತು.


"ಮನಸ್ಸು ತುಂಬಾ ಸಂಕೀರ್ಣವಾದರೂ ಅದು ಶಾಪವೇ. ಏಕೆಂದರೆ ಆತನ ಮುಗ್ಧತೆಯನೆಲ್ಲಾ ಕಬಳಿಸಿ ಮಾನಸಿಕವಾಗಿ ಬಲು ಬೇಗ ಮುಪ್ಪಾಗುತ್ತಾನೆ. ಕೆಲವು ಸಲ ಈ ರೀತಿಯ ಅತಿಯಾದ ಆಲೋಚನೆಯಿಂದ ಅವನ ಕ್ರಿಯಾಶೀಲತೆಯ ಮೇಲೂ ಅದು ಮಾರಕವಾಗುತ್ತದೆ...! ಕೈಲಿದ್ದ ಸಂತೋಷದ ಕ್ಷಣಗಳ ಬೆಲೆ ಅರಿವಾಗುವುದೇ ಇಲ್ಲ."


ಸಂತೋಷನ ಬದುಕಿನ ಪರಿಸ್ಥಿತಿ ಹಾಗೂ ಮನಸ್ಥಿತಿ ಇದ್ದದ್ದೇ ಹಾಗೆ. ಸಂತೋಷನೇ ಆಯ್ಕೆ ಮಾಡಿಕೊಂಡ ಆಪ್ತ ಸಮಾಲೋಚಕಿ ನಮಿತಾ ಶಿವಪ್ರಸಾದ್ ಜೊತೆಗಿನ ಭೇಟಿಯಲ್ಲಿ ಅವರು ಮಾತನಾಡಿದ್ದು ಅವನಿಗೆ ಗೊತ್ತಿಲ್ಲದ್ದೇನೂ ಇರಲಿಲ್ಲ. ಅದೆಲ್ಲವೂ ಅವನಿಗೆ ಗೂಗಲ್ ನಲ್ಲಿಯೇ ಸಿಕ್ಕಿತ್ತಾದರೂ.. ಅಂತಹಾ ಸಂದರ್ಶನದಲ್ಲಿ ಭಾಗವಹಿಸಬೇಕೆನ್ನುವ ಅವನ ಅನುಭವಕ್ಕೆ ಅವನ ಆಯ್ಕೆ ಆದಾಗಿತ್ತು. ಅಂತರಂಗದಲ್ಲಿ ಬಹಳಷ್ಟಿದ್ದರೂ ಆಕೆಯ ಮುಂದೆ ಹೇಳಿಕೊಳ್ಳಬೇಕೆನಿಸಲಿಲ್ಲ. ಸಂತೋಷನಿಗೆ ಆ ಭೇಟಿ ಅಷ್ಟು ಸಮಾಧಾನಕರವಾಗಿರಲಿಲ್ಲ.


ಮುಂದೆ ಆತನ ಆಯ್ಕೆ ಸುಮ್ಮನೆ ಮಾಲ್ ಗೆ ಹೋಗಿ ಅಲೆದಾಡುವುದಾಗಿತ್ತು. ಆಗ ಬಂದ ಆಲೋಚನೆ ಸಿನಿಮಾ ನೋಡುವುದು. ಕೆಲವೊಮ್ಮೆ ಹೀಗೆ ಸುಮ್ಮನೆ ಮಾಡಿಕೊಂಡ ಆಯ್ಕೆಗಳು ಬದುಕಿನ ದಿಕ್ಕನ್ನೇ ಬದಲಾಯಿಸಬಹುದು. ಪೂರ್ವನಿರ್ಧರಿತವಾಗಿ ತೆಗೆದುಕೊಂಡ ನಿರ್ಧಾರಗಳು ಅಥವಾ ಮಾಡಿಕೊಂಡ ಆಯ್ಕೆಗಳು ಬದುಕಲ್ಲಿ ಏನನ್ನೂ ಬದಲಿಸದೆಯೂ ಇರಬಹುದು. ಹೊತ್ತು ಕಳೆಯಲೆಂದು ಆತ ನೋಡಿದ ಆಂಗ್ಲ ಸಿನಿಮಾದಲ್ಲಿ ಇಷ್ಟವಾದ ರೋಚಕತೆ ಆತನ ಮನಸ್ಸನ್ನು ಕೆಲವು ಗಂಟೆಗಳಿಗೆ ಸಂತೃಪ್ತಗೊಳಿಸುವಲ್ಲಿ ಸಾರ್ಥಕವಾಯಿತು. ಮನೆಗೆ ಬಂದ ನಂತರವೂ ಅಂತಹಾ ರೋಚಕತೆಯ ಛಾಯೆ ಇರುವ ಥ್ರಿಲ್ಲರ್ ಸಿನಿಮಾಗಳನ್ನು ನೋಡತೊಡಗಿದ. ವಾಸ್ತವಕ್ಕೆ ದೂರ ಎನ್ನಿಸಿದರೂ ಅವುಗಳು ಕಟ್ಟಿಕೊಟ್ಟ ಲೋಕ ಅವನಲ್ಲಿ ಹೊಸ ಆಲೋಚನೆಯನ್ನು ಮೂಡಿಸುತ್ತದೆ. ಅದರಲ್ಲಿ ಆತನಿಗೆ ತೀರಾ ಕುತೂಹಲ ಮೂಡಿಸಿದ ಒಂದು ಅಂಶ 'ಕಿಲ್ಲರ್ ಕಾಂಟ್ರಾಕ್ಟ್'.


ಸಂತೋಷನಿಗೆ ಕುತೂಹಲ ಜೊತೆಗೆ ಐ.ಟಿ ಉದ್ಯೋಗಿಯಾಗಿದ್ದವನು. ಆ ಕುರಿತು ಹುಡುಕಾಟ ಶುರು ಮಾಡಿಯೇ ಬಿಟ್ಟ. ಆದರೆ, ಹುಡುಕಾಟದ ನಂತರ ಬರುತ್ತಿದ್ದ ಪದೇಪದೇ ಕಾಣುತ್ತಿದ್ದ ಜಾಹೀರಾತು ಹಾಗೂ ತೀವ್ರ ಕುತೂಹಲ ಸಂತೋಷನ ಮನಸ್ಸಿನ ಮೇಲೆ ಪರಿಣಾಮ ಬೀರಿಯೇ ಬಿಟ್ಟಿತು. ಆನ್ಲೈನ್ ವ್ಯವಹಾರ ನಡೆಸುತ್ತಿದ್ದವನಿಗೆ ಬಿಟ್ ಕಾಯಿನ್ ಖರೀದಿಸುವುದೇನು ಕಷ್ಟವಾಗಲಿಲ್ಲ. ಬೇಡದ ಸಾಹಸಕ್ಕೆ ತಾನಾಗಿಯೇ ಕೈ ಹಾಕಿದ್ದ. ತನ್ನ ಕಿಲ್ಲರ್ ಕಾಂಟ್ರಾಕ್ಟ್ ಅನ್ನು ತಾನೇ ನೀಡಿಯಾಗಿತ್ತು.


ತನ್ನ ಸಾವಿನ ಆಹ್ವಾನವನ್ನು ನೀಡಿದವನು ಎಲ್ಲಾ ದಾಖಲೆಗಳನ್ನು ಒದಗಿಸಿದ್ದ. ಸ್ವೀಕರಿಸಿದ ಖಾತೆ ಅದಾಗಲೇ ನಿಷ್ಕ್ರಿಯವಾಗಿತ್ತು ಅದು ಇತ್ತು ಎನ್ನುವ ಯಾವ ಕೊಂಡಿ ಅಥವಾ ಮೇಲ್ ದಾಖಲೆಯೂ ಉಳಿಯಲಿಲ್ಲ. ವಾಲೆಟ್ ನಿಂದ ಬಿಟ್ ಕಾಯಿನ್ಗಳ ವರ್ಗಾವಣೆಯಾಗಿತ್ತು. ಇನ್ನು ಕೆಲಸ ಮುಗಿದ ನಂತರವಷ್ಟೇ ಮೇಲೆ ಮೂಲಕ ಆತನಿಗೆ ಒಂದು ಕನ್ಫಮೇಷನ್ ಬಂದು ತಲುಪಲಿತ್ತು.


ನಿಜಕ್ಕೂ ಸಂತೋಷ ಕೊಟ್ಟ ಈ ಕಿಲ್ಲರ್ ಕಾಂಟ್ರಾಕ್ಟ್ ನಿಂದ ತನ್ನದೇ ಸಾವಿಗೆ ಆಹ್ವಾನ ನೀಡಿದ್ದನೇ ಅಥವಾ ಈ ರೀತಿಯ ಆಲೋಚನೆ ಮಾಡುವವರ ಹಣ ದೋಚುವ ಹೊಸ ವಿಧಾನವಾಗಿತ್ತೇ ಇದು..? ಹೀಗೆ ಹುಚ್ಚುಸಾಹಸಕ್ಕಿಳಿದು ಅವರಿಗೆ ಮಾಡುವ ಮೋಸವೇ ಅಥವಾ ನಿಜವೇ..?


ಈ ರೀತಿ ಆಲೋಚಿಸುತ್ತಿದ್ದವನಿಗೆ ಆದ ಅನುಭವಗಳು ಸಾಯುವ ಭಯ ಹುಟ್ಟಿಸಿದ್ದರಿಂದ ಮತ್ತೆ ತಾನು ಬದುಕಬೇಕೆಂಬ ಆಲೋಚನೆ ಮೂಡಿ ಸಾವಿನಿಂದ ದೂರ ಉಳಿಯಲು ತನ್ನದೇ ಆಲೋಚನೆಯ ವ್ಯತಿರಿಕ್ತವಾಗಿ ಮತ್ತೆ ಯೋಚಿಸಲು ಶುರುವಿಟ್ಟ. ಹಾಗೆ ಹೊರಟವನು ತನ್ನ ಅಣ್ಣಂದಿರನ್ನು ಭೇಟಿ ಮಾಡಿದ. ನಂತರ ನಡೆದ ಘಟನೆಯೊಂದು ಸಂತೋಷ ಸತ್ತನೆಂದೇ ದೃಢೀಕರಿಸಿತು. ಆಗ ಮನೆಯವರಿಗೆ ಅದು ಹುಟ್ಟಿಸಿದ ಭಾವಗಳೇನು..? ಕಳೆದುಕೊಂಡ ಬಂಧಗಳು ಮತ್ತೆ ಚಿಗುರಿದವೇ..?


ತಮಿಳುನಾಡಿನಲ್ಲಿ ಈತನನ್ನೇ ಹೋಲುವಂತಿದ್ದ ವ್ಯಕ್ತಿಯೊಬ್ಬನ ಪತ್ತೆಯಾಗಿತ್ತು. ಅದನ್ನು ಪತ್ತೆ ಮಾಡಿದ್ದು ಮತ್ತಾರೂ ಅಲ್ಲ. ಆತನ ಜೊತೆ ಲಿವ್ ಇನ್ ನಲ್ಲಿದ್ದ ಪ್ರಿಯಂವದಾ. ಆದರೆ ಆ ವ್ಯಕ್ತಿ ತಾನು ಆನಂದನೆಂದೂ.. ಸಂತೋಷ ಅಲ್ಲವೆಂದು ತಿಳಿಸಿದರೂ ಆಕೆ ನಂಬುವ ಸ್ಥಿತಿಯಲ್ಲಿರಲಿಲ್ಲ. 


ಅದು ನಿಜಕ್ಕೂ ಆನಂದನೇ ಅಥವಾ ಸಂತೋಷನೇ..? ಕಿಲ್ಲರ್ ಕಾಂಟ್ರಾಕ್ಟ್ ನಲ್ಲಿದ್ದಂತೆ ಆತನ ಸಾವಿನ ನಂತರ ಕನ್ಫರ್ಮೇಶನ್ ಬಂದಿತೇ..? ತಾತ್ಕಾಲಿಕ ಸಂಬಂಧವನ್ನು ಮತ್ತೆ ಚಿಗುರಿಸಿಕೊಳ್ಳುವ ಹವಣಿಕೆಯಲ್ಲಿದ್ದ ಪ್ರಿಯಾಂವದಾಳ ಮುಂದಿನ ನಡೆ ಏನಿತ್ತು..? ಸಂತೋಷ ಹಾಗೂ ಆನಂದರ ನಡುವಿನಲ್ಲಿ ಕಂಡ ವ್ಯತ್ಯಾಸಗಳೇನು..? ಇದೆಲ್ಲದರ ಜೊತೆಗೆ ಊಹಿಸಲಾಗದ ತಿರುವುಗಳು ಸೇರಿ ಕಾದಂಬರಿಯನ್ನು ಬೇರೆಯದ್ದೇ ಕಥಾಲೋಕಕ್ಕೆ ಕೊಂಡೊಯ್ಯುತ್ತವೆ. 


ಈ ಕಥಾಂದರದ ಪರಿಚಯ ಕಾದಂಬರಿಯ ಆರಂಭಿಕ ಭಾಗದ ಪರಿಚಯವಷ್ಟೇ.. ಕಥೆ ಇನ್ನೂ ಬಾಕಿಯಿದೆ. ಆ ರೋಚಕ ಕಥೆಯನ್ನು ನೀವೇ ಓದಿ ನೋಡಿ. ಸರಳ ಸುಂದರ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಘನವಾದ ಕಥಾವಸ್ತು ಬಹಳಷ್ಟು ಆಲೋಚನೆಗೆ ಹಚ್ಚಿದ್ದಂತೂ ನಿಜ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ