ಸೋಮವಾರ, ಏಪ್ರಿಲ್ 20, 2026

ವಿವಾಹ ಬಂಧನ (ಪುಸ್ತಕ ಯಾನ - 279)


ಪುಸ್ತಕದ ಶೀರ್ಷಿಕೆ : ವಿವಾಹ ಬಂಧನ

ಲೇಖಕರು : ಸಾಯಿಸುತೆ

ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್

ಪ್ರಥಮ ಮುದ್ರಣ : 1994

ದ್ವಿತೀಯ ಮುದ್ರಣ : 2005 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 187

ಬೆಲೆ : 95 ರೂ.


ಸೂರ್ಯನಾರಾಯಣ ಹಾಗೂ ಲಲಿತಮ್ಮನವರ ಇಬ್ಬರು ಮಕ್ಕಳಲ್ಲಿ ರಘು ಮೊದಲನೆಯವನು. ಅವನ ಮುದ್ದಿನ ತಂಗಿ ಅನುರಾಧ. ಆಕೆ ಮನೆಯವರೆಲ್ಲರ ಕಣ್ಮಣಿ. ಈಗ ಅವಳ ವಧುಪರೀಕ್ಷೆಯ ಸಮಯ. ವಧುಪರೀಕ್ಷೆಗೆ ಬಂದದ್ದು ಡಾ|| ಶಶಿಧರ್. ಅವನು ರಾವ್ ಬಹದ್ದೂರ್ ರಂಗರಾಯರು ಹಾಗೂ ಕಮಲಮ್ಮನವರ ಏಕೈಕ ಪುತ್ರ.


ರಘು ಸ್ನೇಹಮಯಿ. ತಂಗಿಗೆ ತೊಂದರೆಯೆಂದರೆ ಆತ ಸಹಿಸುವವನಲ್ಲ. ಸ್ನೇಹಜೀವಿಯವನಾದ ರಘುವಿಗೆ ಶಶಿಧರ ಹಿಡಿಸಲಿಲ್ಲ. ಈತನ ನಾಲ್ಕು ಮಾತುಗಳಿಗೂ ಒಂದೇ ಮಾತಿನಲ್ಲಿ ಚುಟುಕಾಗಿ ಉತ್ತರಿಸಿ ಸುಮ್ಮನಾಗುತ್ತಿದ್ದ ಹಾಗೂ ಅವನ ಗಂಭೀರ ಪ್ರವೃತ್ತಿ ನೋಡಿ ಬೇಸರವಾಗಿತ್ತು. ಆತ ದುರಹಂಕಾರಿ ಎಂದೇ ಭಾವಿಸಿ ಆತನಿಗೆ ಅನುವನ್ನು ಕೊಡುವುದು ಬೇಡವೆಂದು ಹೇಳಿದನು. ಆದರೆ, ಸೂರ್ಯನಾರಾಯಣ, ಕಮಲಮ್ಮನವರು ಅದಕ್ಕೆ ಒಪ್ಪಲಿಲ್ಲ. ನಿನಗೆ ಅಷ್ಟು ಅನುಭವವಿಲ್ಲ. ಶ್ರೀಮಂತಿಕೆ, ರೂಪ, ವಿದ್ಯೆ ಇರುವಾಗ ಅಂತಹಾ ಹುಡುಗ ಗತ್ತಿನಲ್ಲಿರುವುದು ಸಹಜವೇ.. ಅದನ್ನೆಲ್ಲ ದೊಡ್ಡದು ಮಾಡಬಾರದೆಂದಿದ್ದರು.


ಆದರೆ, ಅನುರಾಧಾಳಿಗೆ ಕಣ್ಣು ಮುಚ್ಚಿದರೂ ಶಶಿಧರನ ಸುಂದರ ಚಿತ್ರ ಕಣ್ಮುಂದೆ ಸುಳಿಯುತ್ತಿತ್ತು . ಅವನ ಗಾಂಭೀರ್ಯ ಜೊತೆಗೆ ಉದಾಸೀನ ಭಾವ ಅಧೀರಳನ್ನಾಗಿಯೂ ಮಾಡುತ್ತಿತ್ತು. ಇತ್ತ ಅಪ್ಪ-ಅಮ್ಮನ ಮಾತು, ಅತ್ತ ಅಣ್ಣನ ಮಾತುನ್ನೂ ಕೇಳಿಸಿಕೊಂಡವಳಿಗೆ ಯಾವುದನ್ನೂ ನಿರ್ಧರಿಸಲಾಗಲಿಲ್ಲ.


ಶಶಿಧರನ ಮನೆಯಲ್ಲಿ ಆತನ ತಂದೆ-ತಾಯಿಯರಿಗೆ ಅನುರಾಧ ಸಂಪೂರ್ಣವಾಗಿ ಒಪ್ಪಿಗೆಯಾಗಿದ್ದಳು. ಅಲ್ಲದೆ, ಅವಳ ವೀಣಾವಾದನ, ಗಾಯನವೂ ಸೆಳೆದಿತ್ತು. ಯಾವ ಬೇಡಿಕೆಯೂ ಇಲ್ಲದೆ ಸಂತೋಷದಿಂದ ಹೆಣ್ಣನ್ನು ಧಾರೆ ಎರೆದು ಕೊಟ್ಟರೆ ಸಾಕು ಎಂದಿದ್ದರು. ಎಷ್ಟೆಲ್ಲಾ ಏರ್ಪಾಡು ಮಾಡಿದ್ದರೂ ಮಗನ ಒಪ್ಪಿಗೆಯ ವಿಷಯದಲ್ಲಿ ಸಮಾಧಾನವಿರಲಿಲ್ಲ. ಶಶಿಧರ ನಿಮಗೆ ಬೇಕಾಗಿರುವ ಸೊಸೆಯನ್ನು ಆರಿಸಿಕೊಳ್ಳಿ ನನ್ನದೇನು ಅಭ್ಯಂತರವಿಲ್ಲ ಎಂದು ಹೇಳಿದ್ದನಾದರೂ.. ಆತನ ವಿಚಾರ ಬೇರೆಯೇ ಇತ್ತು. 


ಆತ ತನ್ನ ಸ್ನೇಹಿತ ಸುಧೀರನ ತಂಗಿ ಶುಭಳನ್ನು ಪ್ರೀತಿಸುತ್ತಿದ್ದ. ಸುಧೀರನ ಸ್ನೇಹ ಮಾಡಿ ಕೆಟ್ಟನೆಂದು ತಂದೆ-ತಾಯಿ ಅಂದುಕೊಂಡಿದ್ದರು. ಅವರ ತಂದೆ-ತಾಯಿ ಬೆಳಗ್ಗೆಯಿಂದ ಸಾಯಂಕಾಲದವರೆಗೂ ಕುಡಿದು ಕ್ಲಬ್ ನಲ್ಲಿ ಬಿದ್ದಿರುತ್ತಾರೆ. ಅಂತಹಾ ತಂದೆ-ತಾಯಿಯರ ಮಗಳ ಅವತಾರವೂ ನೋಡಲಿಕ್ಕಾಗುವುದಿಲ್ಲ. ಆದರೆ, ಹುಡುಗುತನಕ್ಕೆ ಲೆಕ್ಕವಿಲ್ಲವೇನೋ ಎಂದು ತಂದೆ-ತಾಯಿಯರೇ ಅದೆಲ್ಲವನ್ನು ಗಮನಿಸಿ ವಿವಾಹ ಎನ್ನುವ ಬಂಧನ ಬಿದ್ದರೆ ಅವನೇ ಸರಿ ಹೋಗುತ್ತಾನೆಂದು ಒಮ್ಮೆ ಸಮಾಧಾನದಿಂದ ಇದ್ದರೂ.. ಅವರ ಮನಸ್ಸಿನ ಭೀತಿಯೇನೂ ಕಡಿಮೆಯಿರಲಿಲ್ಲ. 


ಶಶಿಧರ ತನಗೆ ವಿವಾಹ ನಿಶ್ಚಯವಾಗಿರುವುದನ್ನು ಹೇಳಿದರೂ ಶುಭ ಅದನ್ನು ಲೆಕ್ಕಿಸದೆ, ನಗುತ್ತಾ ಸಮಾಧಾನದಿಂದಿದ್ದಳು. ಅವನು ಶುಭಳನ್ನು ಮನಸ್ಪೂರ್ತಿಯಾಗಿ ಪ್ರೀತಿಸುತ್ತಿದ್ದನಾದರೂ.. ತಂದೆ-ತಾಯಿಗೆ ವಿರುದ್ಧವಾಗಿ ನಿಂತು ಪ್ರತಿಭಟಿಸಿ ಅವಳನ್ನು ವಿವಾಹವಾಗಲು ಸಿದ್ಧವಿರಲಿಲ್ಲ. ತಾಯಿ ತಾನು ಹುಟ್ಟುವುದಕ್ಕಾಗಿ ಮಾಡಿದ ವ್ರತ,ಉಪವಾಸಗಳನ್ನು ಕೇಳಿ ತಿಳಿದಿದ್ದವನು ತಾಯಿಯನ್ನು ನೋಯಿಸಲಾರ. ದ್ವಂದ್ವದಲ್ಲಿದ್ದವನು ರೋಗಿಗಳ ನಡುವೆ ಹೆಚ್ಚಾಗಿರಲು ಬಯಸುತ್ತಿದ್ದ.


ವಿವಾಹಕ್ಕೂ ಮುಂಚಿನಿಂದಲೂ ಅನುರಾಧಳ ಗುಣಗಳನ್ನು ಹಾಡಿ ಹೊಗಳುತ್ತಿದ್ದರೂ, ಆಕೆಯ ಒಡವೆ ವಸ್ತ್ರಗಳನ್ನು ತಂದೆ-ತಾಯಿ ತೋರಿಸುತ್ತಿದ್ದರೂ ಎಲ್ಲದಕ್ಕೂ ಮೌನವಾಗಿದ್ದನು ಶಶಿಧರ. ಮದುವೆಯಲ್ಲಿಯೂ ಆತನ ನಗುಮುಖವಿರಲಿಲ್ಲ. ಅಲ್ಲದೆ, ರಘುವಿಗೆ ಇದೆಲ್ಲವೂ ಅಸಮಧಾನ ತಂದಿತ್ತು. 


ಮನೆಯಲ್ಲಿ ಎಲ್ಲರ ಕಣ್ಮಣಿಯಾಗಿ ಬೆಳೆದಿದ್ದ ಅನುರಾಧಾಳಿಗೆ ಗಂಡನ ಮನೆಯಲ್ಲಿ ಆತನ ಮೌನ, ನಿರ್ಲಿಪ್ತತೆ ಚುಚ್ಚುವಂತಿದ್ದರೂ ಎಲ್ಲವೂ ಸರಿಯಾಗುತ್ತದೆನ್ನುವ ಭಾವದಲ್ಲಿಯೇ ದಿನ ಕಳೆಯುತ್ತಿದ್ದಳು. ಅಲ್ಲದೆ, ಅತ್ತೆ-ಮಾವನ ಎದುರಲ್ಲಿ ನಗುಮುಖದಲ್ಲಿಯೇ ಓಡಾಡುತ್ತಿದ್ದಳು. ಅತ್ತೆ-ಮಾವನೂ ಆಕೆಯ ಹಿರಿಮೆಯನ್ನು ಮೆಚ್ಚಿದ್ದರು.


ಶಶಿಧರನ ಮನಸ್ಸನ್ನು ಬದಲಿಸಲು ಆಕೆ ಯಾವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ಬದಲಾಗಿ ಆಕೆಯ ದೃಢಚಿತ್ತ, ಮೌನ, ಅಚ್ಚುಕಟ್ಟುತನ ಇವೆಲ್ಲವೂ ಶಶಿಧರನನ್ನು ಬೇಡವೆಂದರೂ ಸೆಳೆಯುತ್ತಿದ್ದವು.


ತವರಿಗೆ ಹೋದಾಗ ರಘು ವಿಚಾರಿಸಿದಾಗಲೂ ತನ್ನ ಗಂಡನ ಯಾವುದೇ ವಿಚಾರವನ್ನು ಅವಳು ಅಲ್ಲಿ ಬಿಚ್ಚಿಡಲಿಲ್ಲ. ತಾನು ನೊಂದರೆ ಮನೆಯವರೆಲ್ಲರೂ ನೋಯುತ್ತಾರೆಂಬ ಭಾವ ಅವಳದ್ದು. ಅದರಲ್ಲೂ ರಘುವಿನ ಸಂದೇಹಕ್ಕೆ ಸಾಂತ್ವನ ಹೇಳಿದ್ದಳು.


ಅವಳು ತವರಿಗೆ ಹೋದಾಗ ಶಶಿಧರನ ಮನಸ್ಸು ಅವಳ ಅನುಪಸ್ಥಿತಿಯಲ್ಲಿ ಆಕೆಯನ್ನು ಬಯಸುತ್ತಿತ್ತು. ಯಾರ ಮಾತನ್ನೂ ಕೇಳದ ಶಶಿಧರನ ತಂದೆ ಸೊಸೆಯ ಮೃದು ಮಾತಿಗೆ ಗೆಲುವಾಗುತ್ತಿದ್ದರು. ಆಕೆ ಹೇಳಿದಂತೆ ಕೇಳುತ್ತಿದ್ದರು. ಮನೆಯವರೆಲ್ಲರ ಮೇಲೆ ಮೋಡಿ ಹಾಕಿದಂತೆ ನಿಧಾನವಾಗಿ ಎಲ್ಲರ ಮನಸೆಳೆಯುತ್ತಿದ್ದಳು. ಶಶಿಧರ್ ಆಕೆಗೆ ಸೋಲುತ್ತಿದ್ದರೂ ಅದನ್ನು ಅವಳ ಧೀಮಂತ ವ್ಯಕ್ತಿತ್ವದೆದುರು ಧೈರ್ಯವಾಗಿ ಪ್ರಕಟಿಸಿರಲಿಲ್ಲ. 


ಶುಭ ಹಾಗೂ ಸುಧೀರ್ ಶಶಿಧರ್ ನನ್ನು ಮನೆಗೆ ಕರೆತಂದಾಗ ಶುಭ ಆತನಿಗೆ ಪ್ರೀತಿಯ ನಾಟಕವಾಗಿ ಮಾಡಿ, ಹೆಂಡತಿಯನ್ನು ವಿಚ್ಛೇದನ ಮಾಡಿಕೊಳ್ಳಲು ಹೇಳಿದ್ದಕ್ಕೆ ಅವನಿಗೆ ಕೋಪ ಬಂದಿತ್ತು. 


ರಂಗರಾಯರ ಸ್ನೇಹಿತರಾದ ಅಚ್ಯುತರಾಯರ ಸೊಸೆಗೆ ಸೀಮಂತವೆಂದು ಅಲ್ಲಿಗೆ ಹೋದವಳಿಗೆ ಮಗುವಿನ ವಿಚಾರಕ್ಕೆ ಚುಚ್ಚುಮಾತು ಕೇಳಿತ್ತು. ಅವರ ಮಗ ರವಿ, ಶಶಿಧರ ಇಬ್ಬರು ಒಂದೇ ಓರಗೆಯವರು. ರವಿಯ ಹೆಂಡತಿ ಸರಳಳನ್ನು ಸ್ನೇಹ ಮಾಡಿಕೊಂಡು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಕೆಯ ವೀಣಾವಾದನದಿಂದ ಅಚ್ಯುತರಾಯರ ಮನಸ್ಸನ್ನು ಸೆಳೆದಳು. ಶಶಿಧರ ಕದ್ದು ಮುಚ್ಚಿ ನೋಡುತ್ತಿದ್ದ ನೋಟ, ಒಲವು ಅವಳನ್ನು ಗೊಂದಲಕ್ಕೆ ದೂಡಿತ್ತು. 


ಇತ್ತ ಶುಭ ಸಮಯಕ್ಕಾಗಿ ಕಾಯುತ್ತಿದ್ದಳು. ಅನುರಾಧಾಳೊಟ್ಟಿಗೆ ಶಶಿಧರ ಅವಳ ಹುಟ್ಟುಹಬ್ಬದ ಸಮಾರಂಭಕ್ಕೆ ಹೋದಾಗ ನಡೆದ ಘಟನೆ ಶುಭ ಹಾಗೂ ಅನುರಾಧಳನ್ನು ಅಚ್ಚರಿಗೊಳಿಸಿತ್ತು. ಹೀಗೆ ಸಮಯ ಸಾಗುತ್ತಲಿತ್ತು.


ಈ ನಡುವೆ ರಂಗರಾಯರ ತಮ್ಮ ಕುಮಾರ್ ರವರು ಮಿಲಿಟರಿಯಿಂದ ಮನೆಗೆ ಬಂದಿದ್ದರು. ಅವರು ಅವಿವಾಹಿತರಾದರೂ.. ಅವರ ಸೂಕ್ಷ್ಮದೃಷ್ಟಿಗೆ ಅನುರಾಧ ಹಾಗೂ ಶಶಿಧರನ ದಾಂಪತ್ಯ ಕಂಡಿತ್ತು. ಅದರಿಂದ ಅವರು ಅರಿತದ್ದೇನು.. ಅವರು ಆ ಸಮಸ್ಯೆಗೆ ಅವರು ತೆಗೆದುಕೊಂಡ ನಿರ್ಧಾರವೇನು ನೀವೇ ಓದಿ ತಿಳಿಯಿರಿ.


ಅನುರಾಧಾಳ ಒಳ್ಳೆತನ ಎಲ್ಲರಿಗೂ ಅರಿವಾಗುವ ಮತ್ತೊಂದು ಪ್ರಸಂಗ ನಡೆಯಿತು  ತನ್ನ ಗೆಳತಿ ರಮಳ ಕಷ್ಟಕ್ಕೆ ಮರುಗಿ ತನ್ನ ಅಣ್ಣನಿಗೆ ಆಕೆಯನ್ನು ವಿವಾಹ ಮಾಡಲು ನಿರ್ಧರಿಸಿದಳಾದರೂ.. ಆಕೆಯ ತಾಯಿಗೆ ಇದು ಇಷ್ಟವಾಗಲಿಲ್ಲ. "ಅನುರಾಧಳ ಮನೆಯಲ್ಲಿ ಎಲ್ಲರಿಗೂ ಅವಳ ಮಾತು ವೇದವಾಕ್ಯ. ಏನು ಹೇಳಿದರೂ ತಥಾಸ್ತು ಎನ್ನುತ್ತಾರೆ. ಆದರೆ, ಅಂತಹಾ ಸೊಸೆಯನ್ನು ತಂದುಕೊಳ್ಳಲಾರೆ" ಎಂದು ಹಠ ಹಿಡಿದ ಅವರ ನಿಲುವು ಏನಾಯ್ತು..? ರಘು ಈ ವಿವಾಹಕ್ಕೆ ಒಪ್ಪಿದನೇ..?


ಅವರ ಮನೆಯ ಕೆಲಸ ಮಾಡುತ್ತಿದ್ದ ನಾಣಿ ವಿವಾಹವಾಗಿ ಸರೋಜಳನ್ನು ಅಲ್ಲಿಗೆ ಕರೆತಂದಿದ್ದ. ಅವರ ವಿಚಾರದಲ್ಲಿಯೂ ಅನುರಾಧ ಬಹಳಷ್ಟು ಸಹೃದಯತೆಯಿಂದ ನಡೆದುಕೊಂಡಳು.


ಗರ್ಭಿಣಿ ಸರಳ ಹಾಗೂ ರವಿಯ ಮನೆಯವರನ್ನು ಅನುರಾಧಾ ಕಂಡ ಬಗೆ ಹೇಗೆ..?


ಶಶಿಧರ ರೋಗಿಗಳ ಪಾಲಿಕೆ ದೇವರಂತಿದ್ದವನು ಎಲ್ಲರನ್ನೂ ಉಳಿಸಿ ತನ್ನ ಸಹೃದಯತೆ ಮರೆಯುತ್ತಿದ್ದನು ಆದರೆ ತನ್ನ ಹೆಂಡತಿಯ ಪಾಲಿಗೆ ಕಟುವಾಗಿದ್ದೇಕೆ..? ಶುಭ ಆತನಿಗೆ ಹೇಳಿದ ವಿಚಾರ ಆತನ ಮೇಲೆ ಅಷ್ಟು ಪರಿಣಾಮಕಾರಿಯಾಗಿ ಮನಸ್ಸಲ್ಲಿ ನಿಂತಿದ್ದೇಕೆ..ಅದಕ್ಕೆ ಅನುರಾಧ ಪ್ರತಿಕ್ರಿಯಿಸಿದ್ದು ಹೇಗೆ ?


ಎಷ್ಟೆಲ್ಲಾ ಸಹೃದಯತೆ ಇದ್ದರೂ.. ಶಶಿಧರ ತನ್ನ ನಿಲುವನ್ನು ಹೇಳಲಾರ. ಅದಕ್ಕಿದ್ದ ಕಾರಣವೇನು..


ವಿವಾಹ ಬಂಧನವಾಯಿತೇ ಅಥವಾ ವಿವಾಹ ಬಂಧನದಿಂದ ಬಾಳು ನಂದನವಾಯಿತೇ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ "ವಿವಾಹ ಬಂಧನ" ಕಾದಂಬರಿಯನ್ನು.


ಸಾಯಿಸುತೆಯವರ ಈ ಕಾದಂಬರಿಯಲ್ಲಿ ಹೆಚ್ಚಿನ ಪಾತ್ರಗಳು ಸಹೃದಯರು. ವೀಣಾವಾದನದ ಪ್ರಸಂಗಗಳು ಮನಸ್ಸಿಗೆ ತಂಪೆಯುವಂತೆ ಚಿತ್ರಿತವಾಗಿವೆ. ರಘು ಹಾಗೂ ಅನುರಾಧರ ಅಣ್ಣ-ತಂಗಿಯ ಅನುಬಂಧ ಹಾಗೂ ಶುಭ ಹಾಗೂ ಸುಧೀರನ ಅಣ್ಣ-ತಂಗಿಯ ಅನುಬಂಧ ಎಷ್ಟು ವ್ಯತಿರಿಕ್ತವಾಗಿದೆ. ರಘು-ಅನುರಾಧ ಇಷ್ಟವಾಗುವಾಗಲೇ ಅವರ ಪ್ರಭಾವದ ಕುರಿತು ತಿಳಿಯುತ್ತದೆ. ನವಿರಾದ ಭಾವ ಆವರಿಸುವ ಚಂದದ ಕಾದಂಬರಿಯ ಸುಲಲಿತ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ