ಬುಧವಾರ, ಏಪ್ರಿಲ್ 22, 2026

ಸದ್ದಿಲ್ಲದ ಸಾಧಕ : ನೊಬೆಲ್ ಪ್ರಶಸ್ತಿ ಪಡೆದ ಶತಾಯುಷಿ ಜಾನ್ ಬ್ಯಾನಿಸ್ಟರ್ ಗುಡ್‌ಎನಫ್‌


ಸದ್ದಿಲ್ಲದೆ ಎಷ್ಟೋ ಸಾಧಕರು ತಮ್ಮ ಛಾಪನ್ನು ಮೂಡಿಸಿರುತ್ತಾರೆ. ಆದರೆ, ಅವರ ಸಾಧನೆಗಳ ಫಲವಾಗಿ ಸಿಕ್ಕ ಎಷ್ಟೋ ಆವಿಷ್ಕಾರಗಳನ್ನು ನಾವು ಬಳಸುತ್ತಿದ್ದರೂ.. ನಮಗೆ ಅದರ ಅರಿವೇ ಇರುವುದಿಲ್ಲ. ಇದೇ ಅಲ್ಲವೇ ನಿಜವಾದ ಸಾಧನೆ ಎಂದರೆ.. ಅವರು ಯಾರು, ಎಲ್ಲಿಯವರು ಎಂದು ತಿಳಿದಿಲ್ಲದಿದ್ದರೂ.. ಅವರ ಪ್ರತಿಫಲದ ಸಾಧನೆಯನ್ನು ಮಾತ್ರ ಬಳಸಿಕೊಳ್ಳುತ್ತಾ ಅವರು ಅವರನ್ನು ನೆನೆಸಿಕೊಳ್ಳುವುದು.


ಇಂದು ನಾನು ಹೇಳಲು ಹೊರಟಿರುವ ಆ ಸಾಧಕರ ಆವಿಷ್ಕಾರ ಇಲ್ಲದ್ದಿದ್ದಿದ್ದರೆ.. ಇಂದು ಸ್ಮಾರ್ಟ್ ಫೋನ್ ಇರುತ್ತಿರಲಿಲ್ಲ, ಲ್ಯಾಪ್ಟಾಪ್ಗಳೂ ಇರುತ್ತಿರಲಿಲ್ಲ, ಎಲೆಕ್ಟ್ರಿಕ್ ವಾಹನಗಳು ಸಹಾ ಇರುತ್ತಿರಲಿಲ್ಲ. ಯಾಕಿರುತ್ತಿರಲಿಲ್ಲ ಗೊತ್ತೇ..?? ಇಂದು ನಾವು ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ, ಲ್ಯಾಪ್ಟಾಪ್ ಗಳಲ್ಲಿ, ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿ ಇದೆಯಲ್ಲ.. ಅದೇ ಲಿಥಿಯಂ-ಅಯಾನ್ ಬ್ಯಾಟರಿ. ನಾವು ಚಾರ್ಜ್ ಮಾಡಿದಾಗ ಆ ಪವರ್ ಅನ್ನು ಹಿಡಿದಿಟ್ಟುಕೊಂಡು ನಮಗೆ ನಂತರ ಬಳಕೆಗೆ ಸಿಗುವಂತೆ ಮಾಡುವ ಲಿಥಿಯಂ-ಅಯಾನ್ ಬ್ಯಾಟರಿಯನ್ನು ನಮಗೆ ನೀಡಿದ ಸಾಧಕರು ಇವರು. ಇವರೇ "ಜಾನ್ ಬ್ಯಾನಿಸ್ಟರ್ ಗುಡ್‌ಎನಫ್‌.


ಇವರ ಹೆಸರನ್ನು ಎಲ್ಲೋ ಕೇಳಿದಂತಿದೆಯಲ್ಲ ಎಂದು ಯೋಚಿಸುತ್ತಿದ್ದೀರಾ? ಹೌದು, ಅಪರೂಪಕೊಮ್ಮೆಯಾದರೂ ಕೇಳಿರುತ್ತೀರಿ. ಏಕೆಂದರೆ, ಇವರಿಗೆ 2019ರಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಬಂದಿದೆ. ಕೇವಲ ಇದಷ್ಟೇ ವಿಶೇಷವಲ್ಲ ಇವರು ಈ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದಾಗ ಇವರಿಗೆ ಆಗಿದ್ದು 97 ವರ್ಷ. ಇದುವರೆಗಿನ ನೊಬೆಲ್ ಪ್ರಶಸ್ತಿ ಪಡೆದವರ ಇತಿಹಾಸದಲ್ಲಿ ಇವರು ಅತ್ಯಂತ ಹಿರಿಯ ವ್ಯಕ್ತಿ ಎಂದು ದಾಖಲಾಗಿದ್ದಾರೆ. ಸಾಧನೆಗೆ ಎಲ್ಲಿದೆ ವಯಸ್ಸಿನ ಮಿತಿ..? ಕೆಲವರು 20ನೇ ವಯಸ್ಸಿನಲ್ಲಿ ಸಾಧನೆ ಮಾಡಿ ಹೆಸರು ಗಳಿಸಿರುತ್ತಾರೆ. ಆದರೆ 97 ರಲ್ಲಿಯೂ ಸಾಧನೆ ಮಾಡಿ ಅದೇ ಹುರುಪು, ಉತ್ಸಾಹದೊಂದಿಗೆ ತಮ್ಮ ಸಂಶೋಧನೆಯನ್ನು ಮತ್ತಷ್ಟು ಮುಂದುವರಿಸುವ ಭರವಸೆ ನೀಡಿ ಎಲ್ಲರಿಗೂ ಜೀವನ್ಮುಖಿಯಂತೆ ಭಾಸವಾಗಿದ್ದ ಈ ವ್ಯಕ್ತಿಯೇ "ಜಾನ್ ಬಿ ಗುಡ್‌ಎನಫ್‌".


ಇವರು ಮತ್ತೊಮ್ಮೆ ಸುದ್ದಿಯಾಗಿದ್ದರು. ಅದು 2022 ಜುಲೈ 25ರಂದು. ಏಕೆಂದರೆ, ಇವರು ಶತಾಯುಷಿಯಾಗಿದ್ದರು. ಸಂಶೋಧನೆಗಳಲ್ಲಿ ರಾಸಾಯನಿಕ ಪರೀಕ್ಷೆಗಳಿಗೆ, ವಿಕಿರಣಗಳಿಗೆ ಒಡ್ಡಿಕೊಳ್ಳುವ ಎಷ್ಟೋ ವಿಜ್ಞಾನಿಗಳು ಅಲ್ಪಾಯುಷಿಗಳು ಎನ್ನುವ ತಪ್ಪು ಕಲ್ಪನೆಯನ್ನು ತೊಡೆದು ಹಾಕಿ ತಮ್ಮ 100ನೇ ವರ್ಷದ ಗಡಿ ದಾಟಿದ್ದರು. ಇದೇ ವರ್ಷ ಜುಲೈ 25ಕ್ಕೆ ಇವರಿದ್ದಿದ್ದರೆ 101 ವರ್ಷ ತುಂಬುತ್ತಿತ್ತು. ಆದರೆ, ತಮ್ಮ ಅನಾರೋಗ್ಯದ ಕಾರಣದಿಂದ ಇವರು ಮೊನ್ನೆ ಅಂದರೆ 2023 ಜೂನ್ 25ರಂದು ನಿಧನ ಹೊಂದಿದರು. ಇವರು ಕೇವಲ ತಮ್ಮ ಸಾಧನೆಯಿಂದ ಮಾತ್ರವಲ್ಲ.. ತಮ್ಮ ಜೀವನದಲ್ಲಿ ಉಂಟಾದ ಸವಾಲುಗಳನ್ನು ಮೆಟ್ಟಿನಿಂತು ಮಾಡಿರುವ ಸಾಧನೆಯಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇವರ ಜೀವನದ ಹಿನ್ನೋಟವನ್ನೊಮ್ಮೆ ನೋಡಿ ಬರೋಣ ಬನ್ನಿ. 


ಇವರು ಹುಟ್ಟಿದ್ದು ಜೇನ್ ಎನ್ನುವ ಜರ್ಮನಿಯ ಪಟ್ಟಣದಲ್ಲಿ. ಇವರ ತಂದೆ-ತಾಯಿ ಇಬ್ಬರು ಅಮೆರಿಕನ್ನರು. ತಂದೆಯ ಹೆಸರು ಎರ್ವಿನ್  ರಾಮ್ಸ್ಡೆಲ್ ಗುಡ್‌ಎನಫ್‌. ತಾಯಿ ಹೆಲೆನ್ ಮಿರಿಯಂ ಗುಡ್‌ಎನಫ್‌. ಆದರೆ, ನಂತರದ ದಿನಗಳಲ್ಲಿ ಇವರಿಬ್ಬರ ವಿಚ್ಛೇದನವಾಗುತ್ತದೆ. ಜಾನ್ ಹಾಗೂ ಅವರ ತಮ್ಮ 12 ವರ್ಷದ ನಂತರ ಬೆಳೆದದ್ದಲ್ಲವೂ ಬೋರ್ಡಿಂಗ್ ಸ್ಕೂಲಿನಲ್ಲಿ. ಜಾನ್ ಅವರ ತಂದೆ ಹಾರ್ವರ್ಡ್ ಡಿವೈನಿಟಿ ಸ್ಕೂಲ್ ನಲ್ಲಿ ಪಿ.ಎಚ್.ಡಿ ಮಾಡಿದ್ದರು. ನಂತರ ಯೇಲ್ ಯೂನಿವರ್ಸಿಟಿಯಲ್ಲಿ ಹಿಸ್ಟರಿ ಆಫ್ ರಿಲಿಜಿಯನ್ ಎನ್ನುವ ಸಬ್ಜೆಕ್ಟ್ ನ ಪ್ರೊಫೆಸರ್ ಆಗಿದ್ದರು. ಇವರು ಎರಡನೇ ವಿವಾಹವನ್ನು ಸಹಾ ಆಗಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಜಾನ್ ರಿಗೆ ತಮ್ಮ ತಾಯಿ ದೂರವೇ.. ತಂದೆಯ ಒಡನಾಟವೇ ಹೆಚ್ಚು. ಅವರು ಬೋರ್ಡಿಂಗ್ ಸ್ಕೂಲಿನಲ್ಲಿದ್ದಾಗ ತಂದೆ ಮೂರು ತಿಂಗಳಿಗೊಮ್ಮೆ ಪತ್ರ ಬರೆಯುತ್ತಿದ್ದರು. ಆದರೆ, ತಾಯಿ ಪತ್ರ ಬರೆದದ್ದು ಒಮ್ಮೆ ಮಾತ್ರ.


ಜಾನ್ ರಿಗೆ ಬಾಲ್ಯದಲ್ಲಿ ಒಂದು ಕಾಯಿಲೆ ಇತ್ತು. ಅದೇ ಡಿಸ್ಲೆಕ್ಸಿಕ್. ಹಾಗೆಂದರೆ, ಅವರಿಗೆ ಕಾಣುತ್ತಿದ್ದ ಪದಗಳಿಗೂ ಹಾಗೂ ಉಚ್ಚಾರಣೆಯಾಗುತ್ತಿದ್ದ ಪದಗಳಿಗೂ ಸಾಕಷ್ಟು ಬದಲಾವಣೆಗಳಿತ್ತು.  ಡಿಸ್ಲೆಕ್ಸಿಕ್ ನಿಂದ ಬಳಲುತ್ತಿರುವ ಎಷ್ಟೋ ಮಕ್ಕಳಿಗೆ ಈ ರೀತಿಯ ಸಮಸ್ಯೆಗಳಾಗುತ್ತವೆ. ಅವರು ಕಾಣುವ ಪದಗಳಿಗೂ ಉಚ್ಚರಿಸುವ ಪದಗಳಿಗೆ ಅಥವಾ ಸಂಖ್ಯೆಗಳಿಗೆ ವ್ಯತ್ಯಾಸವಿರುತ್ತದೆ. ಅಲ್ಲದೆ, ಎಷ್ಟೋ ಜನರಿಗೆ ಇದು ಬಣ್ಣದ ಗುರುತಿಸುವಿಕೆ ಹಾಗೂ ಅದನ್ನು ಹೇಳುವುದಕ್ಕೂ ಭಿನ್ನತೆ ಇರುತ್ತದೆ. ಇದರಿಂದಾಗಿ, ಕಲಿಕೆಯಲ್ಲಿ ಹಿನ್ನಡೆಯಾಗಲೂಬಹುದು. ಇದನ್ನು ಜಾನ್ ರವರ ಶಾಲೆಯಲ್ಲಿಯೇ ಗುರುತಿಸಿದ್ದರು. ನಿಯಮಿತವಾದ ವೈದ್ಯಕೀಯ ಚಿಕಿತ್ಸೆಯಿಂದ ಇದನ್ನು ಹಂತ ಹಂತವಾಗಿ ಗುಣಪಡಿಸಿಕೊಳ್ಳಬಹುದು. 


ಜಾನ್ ರವರು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಅವರು ಬಾಲ್ಯದಲ್ಲಿ ಹೆಚ್ಚಾಗಿ ಇಷ್ಟ ಪಟ್ಟದ್ದು ಸಂಖ್ಯೆಗಳನ್ನು ಎಂದರೆ ಗಣಿತವನ್ನು. ಹಾಗಾಗಿ, ಅವರು ಮೊದಲು ಬಿ.ಎಸ್ ಪದವಿ ಪಡೆದದ್ದು ಯೇಲ್ ಯೂನಿವರ್ಸಿಟಿಯಿಂದ. 1944 ರಲ್ಲಿ ಈ ಪದವಿ ಮುಗಿಸಿದ ಅವರಿಗೆ ಸುಮ್ಮ ಕಮ್ ಲಾಉಡ್ ಎಂದು ಲ್ಯಾಟಿನ್ ನಲ್ಲಿ ಕರೆಯಲಾಗುವ ಒಂದು ಪ್ರಶಸ್ತಿ ಕೂಡ ಕೊಡಲಾಗಿತ್ತು. ಇದು ಆ ತರಗತಿಯಲ್ಲಿ ಕೇವಲ 20% ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಲಾಗುವ ಪ್ರಶಸ್ತಿ. 


ಅವರು ಯೇಲ್ ಯುನಿವರ್ಸಿಟಿಯಲ್ಲಿ ಪದವಿ ಪಡೆದುಕೊಳ್ಳುವ ಸಮಯದಲ್ಲಿ ಹಾಗೂ ಪದವಿ ಪಡೆದುಕೊಂಡ ನಂತರ.. ಯು.ಎಸ್ ನ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದರು. ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಮಿಲಿಟರಿಯ ಮೆಟಿರಿಯಾಲಜಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು. ಅದಾದ ನಂತರ, ಅವರು ಚಿಕಾಗೋ ಯೂನಿವರ್ಸಿಟಿಯಿಂದ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದರು. ನಂತರ, 1952 ರಲ್ಲಿ ತಮ್ಮ ಯುನಿವರ್ಸಿಟಿ ಆಫ್ ಚಿಕಾಗೋಗೆ ಹೋಗಿ ಅಲ್ಲಿ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಮಾಡುತ್ತಾರೆ.


ಆಗಿನಕಾಲದಲ್ಲಿ ಭೌತಶಾಸ್ತ್ರವೇನಿದ್ದರೂ ಮೊದಲ 20-30 ವರ್ಶಗಳಲ್ಲಿ ಓದಿ ಅರ್ಥೈಸಿಕೊಳ್ಳುವುದು ಎನ್ನುವಂತಹಾ ಅಭಿಪ್ರಾಯ ಗಟ್ಟಿಯಾಗಿತ್ತು. ಅಲ್ಲದೆ, ತಮ್ಮ ಸಹಪಾಠಿಗಳಿಗೆ ಹೋಲಿಸಿದರೆ, ಜಾನ್ ಹಿರಿಯರಾದ ಕಾರಣ ಭೌತಶಾಸ್ತ್ರ ಹೇಳಿಕೊಡುವ ಪ್ರೊಫೆಸರ್ ಅವರ ಕುರಿತು ತಮಾಷೆಯನ್ನೂ ಮಾಡುತ್ತಿರುತ್ತಾರೆ. “ ಈ ವಯಸ್ಸಿನಲ್ಲಿ ಭೌತಶಾಸ್ತ್ರ ಕಲಿಯುವುದೆಂದರೆ ಹೇಗೆ? ನಿಮ್ಮ ವಯಸ್ಸಿನವರು ಈಗಾಗಲೇ.. ಭೌತಶಾಸ್ತ್ರದಲ್ಲಿ ಸಾಧನೆ ಮಾಡಿಯಾಗಿರುತ್ತದಲ್ಲವೇ?” ಎಂದು ಹಾಸ್ಯ ಮಾಡುತ್ತಿದ್ದರಂತೆ. ಈ ಮಾತಿಗಳಿಗೂ ಎದೆಗುಂದದೆ, ಜಾನ್ ಸಂಶೋಧನೆ ಮುಗಿಸಿ ಪಿಎಚ್.ಡಿ ಪದವಿ ಪಡೆದರು. ಸಣ್ಣ-ಪುಟ್ಟ ಕುಹಕ-ಟೀಕೆಗಳಿಗೆ ಮನಸ್ಸು ಕುಗ್ಗಿಸಿಕೊಳ್ಳುವವರಿಗೆ ಜಾನ್ ದಾರಿದೀಪದಂತಿದ್ದಾರೆ.


ಅವರು ಚಿಕಾಗೋದಲ್ಲಿ ಓದುತ್ತಿದ್ದ ಈ ಸಂದರ್ಭದಲ್ಲಿಯೇ.. ತಮ್ಮ ಸಂಗಾತಿಯನ್ನು ಭೇಟಿಯಾಗಿದ್ದು. ಇವರ ಪತ್ನಿ ಐರಿನ್ ವೈಸ್ಮನ್ ಕೆನಡಾದ ಇತಿಹಾಸ ಶಾಸ್ತ್ರಜ್ಞೆಯಾಗಿದ್ದವರು. 1951 ರಲ್ಲಿ ಇವರ ಮದುವೆಯೂ ಆಗುತ್ತದೆ. ಐರಿನ್ ವೈಸ್ಮನ್ ಅವರು 2016ರಲ್ಲಿ ತೀರಿಕೊಳ್ಳುತ್ತಾರೆ. ಇದಾದ ನಂತರ ಇವರಿಗೆ ಮಕ್ಕಳಿಲ್ಲದ ಕಾರಣ.. ಟೆಕ್ಸಾಸ್ ವಿಶ್ವವಿದ್ಯಾಲಯವೇ ಸಹಾಯಕರನ್ನು ನೇಮಿಸಿ ಜಾನ್ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ. 


ಭೌತಶಾಸ್ತ್ರದಲ್ಲಿ ಪಡೆದ ಪಿ.ಎಚ್.ಡಿ ಅವರಿಗೆ ಸಾಕಾಗಲಿಲ್ಲ. ನಂತರ, ಅವರು ರಿಸರ್ಚರ್ ಆಗಿ ಸೇವೆ ಸಲ್ಲಿಸಿದ್ದು ಎಂ.ಐ.ಟಿ ಯ ಲಿಂಕನ್ ಲ್ಯಾಬ್ ನಲ್ಲಿ. ಸುಮಾರು 24 ವರ್ಷ ಇಲ್ಲಿ ಸೇವೆ ಸಲ್ಲಿಸಿದರು. 


ಇವರು ಲಿಂಕನ್ ಲ್ಯಾಬ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ತಮ್ಮ ಶಾಖೆಯಿಂದ ಬೇರೆ ಶಾಖೆಯ ಜೊತೆಗೆ ಹೊಂದಿಕೆಯಾಗುವಂತಹಾ ಮತ್ತೊಂದು ರಿಸರ್ಚ್ ನ ಪಾಲುದಾರರಾಗಿದ್ದರು. ಅದು ಇಂದಿನ ಕಂಪ್ಯೂಟರ್ ಗಳಲ್ಲಿ ಹಾಗೂ ಲ್ಯಾಪ್ಟಾಪ್ ಗಳಲ್ಲಿ ಉಪಯೋಗವಾಗುವ ರ‍್ಯಾಮ್ ಬಳಕೆ. ಎಂ-ರ‍್ಯಾಮ್ ಎಂದರೆ ರ‍್ಯಾಂಡಮ್ ಅಕ್ಸೆಸ್ ಮ್ಯಾಗ್ನೆಟಿಕಲ್ ಮೆಮೊರಿ. ರಾಂಡಮ್ ಆಕ್ಸಸ್ ಮೆಮೊರಿ ಎಂದರೆ ಅದು ತಾತ್ಕಾಲಿಕವಾದ ಮೆಮೊರಿ ಸ್ಟೋರೇಜ್. ಇಂದಿನ ಮೊಬೈಲ್ ಫೋನ್ಗಳಲ್ಲಿ, ಕಂಪ್ಯೂಟರ್ ಗಳಲ್ಲಿ, ಎಷ್ಟೋ ಮಿಲಿಟರಿ ಸೇವೆಗಳಲ್ಲಿ, ವಿಮಾನದ ಬ್ಲ್ಯಾಕ್ ಬಾಕ್ಸ್ ಗಳಲ್ಲಿ ಇದು ಉಪಯುಕ್ತವಾಗಿದೆ. ಈ ಎಂ -ರ‍್ಯಾಮ್ ನ ಆವಿಷ್ಕಾರದಲ್ಲಿಯೂ ಬಹಳ ಮಹತ್ವದ ಪಾತ್ರ ವಹಿಸಿದ್ದರು ಜಾನ್. ಅವರ ಭೌತಶಾಸ್ತ್ರದ ಆಯಸ್ಕಾಂತೀಯ ಶಕ್ತಿಯ ಜ್ಞಾನ ಇಲ್ಲಿ ಬಹಳ ಉಪಯುಕ್ತವಾಗಿತ್ತು. 


ನಂತರ, 1970-80 ರಲ್ಲಿ ಆಕ್ಸ್ಫರ್ಡ್ ಯುನಿವರ್ಸಿಟಿಯ ಇನ್-ಆರ್ಗಾನಿಕ್ ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಕಾರ್ಯನಿರ್ವಹಿಸಿದ್ದರು. 1986 ರಿಂದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ಮೆಕ್ಯಾನಿಕಲ್, ಮೆಟೀರಿಯಲ್ ಸೈನ್ಸ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಇದೆಲ್ಲದರಲ್ಲೂ ಪರಿಣಿತರಾಗಿದ್ದ ಇವರು ತಮ್ಮ ಸಂಶೋಧನೆಯನ್ನು ಕೂಡಾ ಮುಂದುವರಿಸುತ್ತಿದ್ದರು. 


ಇವರಿಗೆ ನ್ಯಾಷನಲ್ ಮೆಡಲ್ ಆಫ್ ಸೈನ್ಸ್, ಕೊಪ್ಲಿ ಮೆಡಲ್, ಫರ್ಮಿ ಅವಾರ್ಡ್, ಡ್ರೇಫರ್ ಪ್ರಶಸ್ತಿ, ಜಪಾನ್ ಪ್ರಶಸ್ತಿ, ನೊಬೆಲ್ ಪ್ರಶಸ್ತಿ, ಐ.ಇ.ಇ.ಇ ಪ್ರಶಸ್ತಿಗಳು ಬಂದಿವೆ. ಅಷ್ಟೇ ಅಲ್ಲದೆ.. ಮೆಟೀರಿಯಲ್ ಸೈನ್ಸ್ ವಿಭಾಗದಲ್ಲಿ ಇವರ ಹೆಸರಿನಲ್ಲಿ "ಗುಡ್‌ಎನಫ್‌" ಎನ್ನುವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.


ಲಿಥಿಯಂ-ಅಯಾನ್ ಬ್ಯಾಟರಿಗಳು ಇವರ ಪ್ರಮುಖ ಆವಿಷ್ಕಾರ. ಆದರೆ, ಈ ಲಿಥಿಯಂ-ಅಯಾನ್ ಬ್ಯಾಟರಿಗಳಿಗಿಂತ ಮುಂಚೆ ಇದಕ್ಕೆ ಪ್ರಯತ್ನ ನಡೆದಿತ್ತೇ..?? ಅಥವಾ ಇದಕ್ಕಿಂತ ಮುಂಚೆ ಇದ್ದ ಬ್ಯಾಟರಿಯ ಕಾರ್ಯ ನಿರ್ವಹಣೆ ಹೇಗಿತ್ತು..?? ಎನ್ನುವುದನ್ನು ನೋಡುವುದಾದರೆ 1965 ರಲ್ಲಿ ನಾಸಾದವರು ಈ ಪ್ರಯತ್ನ ಮಾಡಿದ್ದರು. 1974ರಲ್ಲಿ ಎಂ. ಸ್ಟ್ಯಾನ್ಲಿ ವಿಟ್ಟಿಂಗ್ ಹ್ಯಾಮ್ ಎನ್ನುವವರೂ ಈ ಕುರಿತ ಪ್ರಯತ್ನ ಮಾಡಿದ್ದರು ಆದರೆ ಇವೆರಡೂ ಸಂಪೂರ್ಣವಾಗಿ ಸಫಲವಾಗಿರಲಿಲ್ಲ.


1980 ರಲ್ಲಿ ಜಾನ್ ಲಿಥಿಯಂ-ಅಯಾನ್ ಬ್ಯಾಟರಿಗಳ ಕುರಿತ ಆವಿಷ್ಕಾರಕ್ಕೆ ಕೈಜೋಡಿಸುತ್ತಾರೆ. ಹಾಗೆಂದು, ಇದು ಸುಲಭದ ಆವಿಷ್ಕಾರವೇನೂ ಆಗಿರಲಿಲ್ಲ. ಇದರ ಎಲೆಕ್ಟ್ರೋಡ್ ಗಳು ಹೊಂದಾಣಿಕೆಯಾಗಬೇಕಿತ್ತು. ಕೊಂಚ ಏರುಪೇರಾದರೂ ಸಹಾ ಸ್ಪೋಟಗೊಳ್ಳುವಂತಹ ವಸ್ತುವೇ ಆಗಿಬಿಡುತ್ತಿತ್ತು. ಇದಲ್ಲದೆ.. ಇಂತಿಷ್ಟೇ ತಾಪಮಾನದಲ್ಲಿ ಈ ಕಣಗಳ ಒಳಗೊಳ್ಳುವಿಕೆ ಸಾಧ್ಯವಾಗಬೇಕಿತ್ತು. ಜಾನ್ ರ ಪ್ರಯತ್ನಕ್ಕೆ ಫಲ ಸಿಕ್ಕಿತ್ತು.


ಇದಾದ ನಂತರ 1987 ರಲ್ಲಿ ಅಕಿರಾ ಯೋಶಿನೋ ಎನ್ನುವ ವಿಜ್ಞಾನಿಯೊಬ್ಬರು ಯೋಶಿನೋಸ್ ಡಿಸೈನ್ ಎನ್ನುತ್ತಾ ಜಾನ್ ಕಂಡುಹಿಡಿದಿದ್ದ ಲಿಥಿಯಂ-ಅಯಾನ್ ಬ್ಯಾಟರಿಯನ್ನು ಕೊಂಚ ಮಾರ್ಪಡಿಸುತ್ತಾರೆ. ಏಕೆಂದರೆ, ಆ ಬ್ಯಾಟರಿ ಬೆಲೆ ಜನಸಾಮಾನ್ಯರಿಗೆ ಕೈಗೆಟುಕುವಂತಿರಲಿಲ್ಲ. 1980ರ ದಶಕದಲ್ಲಿ ಎಕ್ಸಾನ್ ಕಂಪೆನಿಯವರು ಇದನ್ನು ಕಮರ್ಷಿಯಲ್ ಆಗಿ ಮಾರ್ಪಡಿಸುವ ಯೋಚನೆಯನ್ನು ಹೊಂದಿದ್ದರು. ದರ ಹೆಚ್ಚಾಗಿದ್ದರಿಂದ ಸುಮ್ಮನಾಗಿದ್ದರು. 1991ರಲ್ಲಿ ಸೋನಿ ಕಂಪನಿಯವರು ಜಗತ್ತಿನ ಮೊದಲ ರಿಚಾರ್ಜೆಬಲ್ ಲಿಥಿಯಂ-ಅಯಾನ್ ಬ್ಯಾಟರಿಯನ್ನು ಬಳಸಿದರು. ಇದಾದ ನಂತರ ಈಗ ಎಲ್ಲೆಡೆ ಬಳಕೆಯಾಗುತ್ತಿದೆ. 


ಇದೇ ಕಾರಣಕ್ಕಾಗಿ 2012ರಲ್ಲಿ ಐ.ಇ.ಇ.ಇ ಮೆಡಲ್ ಹಾಗೂ 2019ರಲ್ಲಿ ಎಂ ಸ್ಟ್ಯಾನ್ಲಿ ವಿಟ್ಟಿಂಗ್ ಹ್ಯಾಮ್, ಅಕಿರಾ ಯೋಶಿನೋ ಹಾಗೂ ಜಾನ್ ಗುಡ್‌ಎನಫ್ ಮೂವರೂ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಂಡರು. ಸತತ ಏಳು ವರ್ಷಗಳ ಕಾಲ ಜಾನ್ ಗುಡ್ಎನಫ್ ಇವರ ಹೆಸರು ನೊಬೆಲ್ ಪ್ರಶಸ್ತಿಗಾಗಿ ಉಲ್ಲೇಖವಾಗುತ್ತಿತ್ತು. ಆದರೆ, ಈ ಪ್ರಶಸ್ತಿ ಇವರಿಗೆ ಒಲಿದು ಬಂದಾಗ ಅವರಿಗೆ 97 ವರ್ಷ. ಅವರದು ಎಂದಿಗೂ ದಣಿವರಿಯದ ಉತ್ಸಾಹ. 97ರ ವಯೋಮಾನದಲ್ಲೂ ಗಾಲಿ ಕುರ್ಚಿಯಲ್ಲಿ ಕುಳಿತೇ ನೊಬೆಲ್‌ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದು ಪ್ರಶಸ್ತಿ ಸ್ವೀಕರಿಸಿದ್ದರು.


“ಯುವಕರ ಆಸೆ ಎಂದಿಗೂ ಸಾಮಾನ್ಯವಾಗಿ ಪ್ರಸಿದ್ಧಿಯಾಗುವುದು ಅಥವಾ ಗ್ಲಾಮರಸ್‌ ಆಗಿರುವುದು ಅಥವಾ ಶಕ್ತಿಶಾಲಿಯಾಗಬೇಕೆಂದೇ ಇರುತ್ತದೆ. ಹಾಗೆಂದು ಎಲ್ಲರೂ.. ಸ್ವಲ್ಪ ಸಮಯಕ್ಕಾದರೂ ಸಹಾ “ಪರ್ವತದ ರಾಜ” (ಕಿಂಗ್ ಆಫ್ ಮೌಂಟೇನ್) ಆಗಲು ಸಾಧ್ಯವಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ಆದ್ದರಿಂದ, ರಾಜನಾದರೇನು., ಜೀವನಕ್ಕೆ ಏನು ಅರ್ಥವಿದೆ? ಜೀವನದ ನಿಜವಾದ ಅರ್ಥವು ಯಾವುದೋ ಕೋಟೆಯ ರಾಜನಾಗುವುದಲ್ಲ, ಬದಲಾಗಿ ನಾವು ಸಲ್ಲಿಸುವ ಸೇವೆಯ ಮಹತ್ವ ಮತ್ತು ಶಾಶ್ವತತೆಯಲ್ಲಿದೆ ಎಂದು ನಾನು ತಿಳಿಯಲು ಪ್ರಾರಂಭಿಸಿದೆ”. 


ನೊಬೆಲ್ ಪ್ರಶಸ್ತಿ ಪಡೆದುಕೊಂಡಾಗ ಹೀಗೆ ಹೇಳಿರುವವರು 97 ವರ್ಷದ ಯುವಕ ಪ್ರೊ. ಜಾನ್‌ ಗುಡ್‌ಎನಫ್. ‌


ಲಿಥಿಯಂ-ಅಯಾನ್ ಬ್ಯಾಟರಿಯ ಮೂಲ ಫಾರ್ಮುಲಾ ಗೆ ಇವರು ಪೇಟೆಂಟ್ ಪಡೆದುಕೊಳ್ಳಲು ನಿರಾಕರಿಸಿದ್ದರು. ಏಕೆಂದರೆ, ಅವರಿಗೆ ಇದು ಇಷ್ಟು ಬೆಲೆಯುಳ್ಳದ್ದು ಎನ್ನುವ ಅರಿವಿರಲಿಲ್ಲ. ಆದರೆ, ಅದಾದ ನಂತರವೂ ಸಹಾ ಆ ಪೇಟೆಂಟನ್ನು ತಮ್ಮ ಹೆಸರಿಗೆ ಪಡೆದುಕೊಳ್ಳಲಿಲ್ಲ. ಇದಕ್ಕಾಗಿ ಅವರು ಯಾವ ರಾಯಧನವನ್ನೂ ಸ್ವೀಕರಿಸಲಿಲ್ಲ. ಬದಲಾಗಿ, ರಾಯಲ್ಟಿ ಹಣವನ್ನು ಯು.ಕೆಯ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ ಹೋಗುವಂತೆ ಮಾಡುತ್ತಾರೆ. 


ಇವರು ಶತಾಯುಷಿಯಾದ ಸಂದರ್ಭದಲ್ಲಿಯೂ ಸಹಾ ಇವರು ಟೆಕ್ಸಾಸ್ ಯುನಿವರ್ಸಿಟಿಯಲ್ಲಿ, ತಮ್ಮ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ತಾವು ಕಂಡುಹಿಡಿದಿದ್ದ ಬ್ಯಾಟರಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ, ಎಲೆಕ್ಟ್ರಿಕ್ ವಾಹನಗಳಲ್ಲಿ ಮತ್ತಷ್ಟು ಶಕ್ತಿ ತುಂಬುವ ಕೆಲಸದಲ್ಲಿ ನಿರತರಾಗಿದ್ದರು. ಪೆಟ್ರೋಲ್, ಡೀಸೆಲ್ ಹೀಗೆ ಮುಂತಾದ ಬೇಗನೆ ಮುಗಿದು ಹೋಗಬಹುದಾದ ಫಾಸಿಲ್ ಇಂಧನಗಳ ಮೇಲೆ ಇರುವ ಮನುಷ್ಯನ ಅವಲಂಬನೆಯನ್ನು ಕಡಿಮೆ ಮಾಡಿ, ಬೇರೆ ಹಾದಿಯನ್ನು ತೋರುವ ಯತ್ನದಲ್ಲಿದ್ದರು. 


ಇವರು 2008ರಲ್ಲಿ ತಮ್ಮ ಆತ್ಮ ಚರಿತ್ರೆಯನ್ನು ಬರೆದಿದ್ದಾರೆ.ಅದರ ಹೆಸರು "ವಿಟ್ನೆಸ್ ಟು ಗ್ರೇಸ್" ಎಂಬುದಾಗಿ. ಇದು ವಿಜ್ಞಾನ ಹಾಗೂ ಆಧ್ಯಾತ್ಮಿಕ ನಂಬಿಕೆಗಳನ್ನು ಒಳಗೊಂಡಿರುವ ಪುಸ್ತಕ. ಇದರಲ್ಲಿ ತಮ್ಮ ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ, ತಮ್ಮ ವೈಜ್ಞಾನಿಕ ಸಾಧನೆಗಳು ಹಾಗೂ ಆಧ್ಯಾತ್ಮಕ್ಕೂ ಇರುವ ಇಂಟರ್ಸೆಕ್ಷನ್ ಕುರಿತಾಗಿ ಹೇಳಿದ್ದಾರೆ. 85 ಪುಟಗಳ ಪುಸ್ತಕವನ್ನು ಆಸಕ್ತರು ಓದಬಹುದಾಗಿದೆ. 


ಸಾಧಕರು ಹೀಗೆಯೇ ನಮ್ಮ ಮಧ್ಯದಲ್ಲಿಯೇ ಇರುತ್ತಾರೆ. ಆದರೆ, ಅವರ ಸಾಧನೆ ಸದ್ದು ಮಾಡಿದ್ದರೂ.. ಬಹುಶಃ ಅವರ ಮರಣದವರೆಗೂ ನಮಗೆ ಆ ಕುರಿತು ಹೆಚ್ಚಾಗಿ ತಿಳಿಯದೇ ಹೋಗಬಹುದು. ಅವರ ಸಾಧನೆಗಳಂತೂ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುತ್ತವೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ