ಮಂಗಳವಾರ, ಏಪ್ರಿಲ್ 21, 2026

ರಚನಾ (ಪುಸ್ತಕ ಯಾನ - 293)


ಪುಸ್ತಕದ ಶೀರ್ಷಿಕೆ : ರಚನಾ

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸಾಹಿತ್ಯ ಸುಗ್ಗಿ ಪ್ರಕಾಶನ

ಪ್ರಥಮ ಮುದ್ರಣ : 1986

ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 180

ಬೆಲೆ : 200 ರೂ. 


ಈ ಕಾದಂಬರಿ ಸಿನಿಮಾ ತಾರೆ ಒಬ್ಬಳ ಕಥೆಯಾದರೂ ಕೊಂಚ ವಿಭಿನ್ನವಾಗಿದೆ. ಇದು ಕಾಲ್ಪನಿಕ ಕಥೆ ಎಂದು ಲೇಖಕಿ ಉಲ್ಲೇಖಿಸಿದ್ದಾರೆ. "ಆ ದಿನಗಳಲ್ಲಿ ಅನೇಕ ವಿವಾಹಿತ, ಅವಿವಾಹಿತ ತರುಣಿಯರು ನನ್ನನ್ನು ಅರಸಿ ಬರುತ್ತಿದ್ದರು. ತಮ್ಮ ಸಮಸ್ಯೆಗೆ ಸಮಾಧಾನ ಮತ್ತು ಪರಿಹಾರಕ್ಕಾಗಿ ಹುಡುಕಿ ಬರುತ್ತಿದ್ದರು. ಹೀಗೆ ಬರುತ್ತಿದ್ದವರು ಅವರ ಬಾಳಿಗೆ ಮಾತ್ರ ನಾಯಕಿಯರಾಗಿರದೆ, ನನ್ನ ಕಥೆ ಕಾದಂಬರಿಗಳಲ್ಲಿಯೂ ನಾಯಕರಾಗಿ ಮಿಂಚುತ್ತಿದ್ದರು. ಆದರೆ, ನನ್ನ ಕಲ್ಪನಾ ಪಾತ್ರವಾಗಿ ರಚನಾ ಸಹ ಅಂತಹ ಓರ್ವ ಸತ್ಯ. ಆದರೆ, ಕಲ್ಪಿತ ಕಥಾ ಪಾತ್ರ" ಎಂದು ಹೇಳಿದ್ದಾರೆ. 


ಈ ಕಾದಂಬರಿಯಲ್ಲಿ ಕೇವಲ ಸಿನಿಮಾ ತಾರೆಯ ಬದುಕಿನ ಕಥೆ ಮಾತ್ರವಲ್ಲದೆ, ಬದಲಾಗುವ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳು ಹಾಗೂ ಅದನ್ನು ಕಾಣುವ ಪರಿಯೂ ವ್ಯಕ್ತವಾಗಿದೆ. 


ಪ್ರಕಾಶ್ ಹಾಗೂ ವಿನುತಾರಿಗೆ ಮೂವರು ಮಕ್ಕಳು. ಕ್ರಮವಾಗಿ ರಚನಾ ಅರ್ಚನಾ ಹಾಗೂ ದೀಪಕ್. ಆದರೆ, ಮನೆಯಲ್ಲಿ ಪಿಂಕು, ಗುಡ್ಡಿ, ಡಿಂಪುಗಳೆಂದು ಅವರ ಹೆಸರು. ವಿನುತಾಳ ತವರಿನವರು ಉತ್ತರದ ಕಡೆಯವರು. ಹಾಗಾಗಿ, ಕನ್ನಡ ಮಾತೃಭಾಷೆಯಾದರೂ ಹಿಂದಿ ವ್ಯಾಮೋಹ ಅವರಲ್ಲಿ ಹೆಚ್ಚಾಗಿಯೇ ಇತ್ತು. ಮನೆಯಲ್ಲಿ ಎಲ್ಲರ ಮುದ್ದಿನ ಕೂಸಾಗಿ ಬೆಳೆಯುತ್ತಿದ್ದ ರಚನಾ ಮಾತನಾಡಲು ಮುನ್ನುಗ್ಗಿ ಹೋಗುತ್ತಿರಲಿಲ್ಲ. ಸ್ವಭಾವತಃ ವಾಚಾಳಿಯಾದವಳಲ್ಲ. ಯಾವುದೇ ವಿಚಾರಕ್ಕೂ ತಾನೇ ಮುಂದು ಎಂದು ಹೋಗುತ್ತಿರಲಿಲ್ಲ. ಆದರೆ, ಎಲ್ಲರ ಸಹಕಾರದಿಂದ ವುಮೆನ್ಸ್ ಕಾಲೇಜಿನಲ್ಲಿ ವರ್ಷದ ವೈಸ್ ಪ್ರೆಸಿಡೆಂಟ್ ಆಗಿ ಆಯ್ಕೆಯಾದವಳು. ಸ್ಟೇಜಿನ ಮೇಲೆ ಅತಿಥಿಗಳ ಜೊತೆ ಕೂರುವುದಷ್ಟೇ ಆಕೆಯ ಪಾಲಿಗೆ ಹೆಮ್ಮೆಯಾಗಿತ್ತು. ಗೆಳತಿಯರೆಲ್ಲರೂ ಆಕೆಗೆ ಶ್ರಮ ಕೊಡದಂತೆ ಯೂನಿಯನ್ ಕೆಲಸಗಳನ್ನು ತಾವೇ ನಿರ್ವಹಿಸುತ್ತಿದ್ದರು. ಕಾಲೇಜ್ ಡೇ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಚನಾ ಅಂದಿನ ಮುಖ್ಯ ಅತಿಥಿಯಾಗಿದ್ದ ಸುಪ್ರಸಿದ್ಧ ನಿರ್ಮಾಪಕ ಹಾಗೂ ನಿರ್ದೇಶಕರಾದ ಮೋಹನ್ ರಾಮ್ ಅವರ ಕಣ್ಣಿಗೆ ಬೀಳುತ್ತಾಳೆ. 


ಅದಾದ ನಂತರ ಮೋಹನ್ ರಾಮ್ ಅವರು ಕಾಲೇಜಿನ ಪ್ರಿನ್ಸಿಪಲ್ ಬೇಗಂ ಅವರ ಮೂಲಕ ಆಕೆಯನ್ನು ತನ್ನ ಚಿತ್ರದ ನಾಯಕಿಯನ್ನಾಗಿಸಿಕೊಳ್ಳುವ ಪ್ರಸ್ತಾಪವನ್ನು ಆಕೆಯ ಮನೆಯಲ್ಲಿ ಆಕೆಯ ತಂದೆ-ತಾಯಿಯ ಎದುರಿಗಿರುತ್ತಾರೆ. ನಾಟಕ, ನೃತ್ಯ, ಹಾಡು, ಅಭಿನಯ ಯಾವುದರ ಗಂಧಗಾಳಿಯೂ ಇಲ್ಲದ ಅವಳನ್ನು ನಾಯಕಿಯನ್ನಾಗಿಸಿಕೊಳ್ಳುವ ಪ್ರಸ್ತಾಪಕ್ಕೆ ತಂದೆಯಿಂದಲೇ ಮೊದಲಿಗೆ ಇದು ಸಾಧ್ಯವೇ..? ಎನ್ನುವ ಪ್ರಶ್ನೆ ಬರುತ್ತದೆ. ಆದರೆ, ರಚನಾಳ ತಾಯಿಗೆ ಮಾತ್ರ ತನ್ನ ಮಗಳು ಸಿನಿಮಾರಂಗಕ್ಕೆ ಸೇರುವುದೆಂದರೆ ಬಹಳ ಆಸಕ್ತಿ. ವಿನುತಾರ ಕನಸಿನಗೋಪುರ ಎತ್ತರಕ್ಕೆ ಬೆಳೆಯುತ್ತಿದ್ದಂತೆ.. ಪ್ರಕಾಶ್ ಅವರು ಮೌನವಾಗಿ ಕೇಳಿಸಿಕೊಳ್ಳುತ್ತಿರುತ್ತಾರೆ. ಅಷ್ಟೇ.. ಕೊನೆಗೆ ಎಲ್ಲರ ಒಪ್ಪಿಗೆ ಸಿಕ್ಕಿ ರಚನಾ ಸಿನಿಮಾ ನಟಿಯಾದಳು. 


'ಅರಳು ಮಲ್ಲಿಗೆ' ಚಿತ್ರದ ನಾಯಕಿ ರಚನಾ ಆದರೆ, ಖ್ಯಾತ ನಟ ಸಂದೀಪ್ ಆ ಚಿತ್ರದ ನಾಯಕ. ಎಲ್ಲರಿಗೂ ಈ ವಿಷಯ ತಿಳಿದು ಹುಬ್ಬೇರುತ್ತದೆ. ಅಂತಹಾ ಖ್ಯಾತ ನಟನೊಂದಿಗೆ ರಚನಾ ನಾಯಕಿಯಾಗುತ್ತಾಳೆ ಎಂದು ನಂಬಲೇ ಸಿದ್ಧರಿರಲಿಲ್ಲ ಕೆಲವರು. ರಚನಾಳ ಗೆಳತಿಯರಿಗಂತೂ ಆತನೆಂದರೆ ಎಲ್ಲಿಲ್ಲದ ಹುರುಪು. ಸಂದೀಪ್ ಸ್ನೇಹಮಯಿಯಾಗಿ ರಚನಾಳಿಗೆ ಅಭಿನಯದ ಕೆಲವು ಟಿಪ್ಸ್ ಗಳನ್ನು ನೀಡಿ ನೆರವಾಗುತ್ತಿದ್ದ. ಆಕೆಯ ಅಭಿನಯವನ್ನು ದಾರಿಗೆ ತರಲು ಮುಖ್ಯವಾಗಿ ಶ್ರಮಿಸಿದ್ದು ಮೋಹನ್ ರಾಮ್. ಯಾವಾಗಲೂ ರಚನಾ ತಾಯಿ ಅವಳೊಡನೆ ಇದ್ದೇ ಇರುತ್ತಿದ್ದರು. 


ರಚನಾಳ ಮುಗ್ಧತೆ ಹೇಗಿತ್ತೆಂದರೆ.. ಆಕೆ ತನ್ನ ಮುಂದಿನ ಭವಿಷ್ಯವನ್ನು ಹಾಗೂ ಸಿನಿಮಾದ ಯಶಸ್ಸನ್ನು ಸಹಾ ನಿರೀಕ್ಷಿಸಿರಲಿಲ್ಲ. ಮುಂದೇನು ಎಂಬ ಆಲೋಚನೆಯೂ ಅವಳಲ್ಲಿರಲಿಲ್ಲ. ಆದರೆ, ಅಚಾನಕ್ಕಾಗಿ ಒಂದು ದಿನ ಕಾಲೇಜಿನಿಂದ ಸಂದೀಪ್ ಕರೆ ಕಳುಹಿಸಿದ್ದನೆಂದು... ಡ್ರೈವರ್ ಜೊತೆ ಆತನನ್ನು ಭೇಟಿಯಾಗಲು ಹೊರಟಳು. ತನಗೆ ಆತನಿಂದ ಮತ್ತೊಂದು ಸಿನಿಮಾ ಚಾನ್ಸ್ ಸಿಗಬಹುದೇ..? ಅದಕ್ಕಾಗಿ ಕರೆಸಿರಬಹುದು ಎಂಬ ಆಸೆ ಅವಳಲ್ಲಿತ್ತು. ಮತ್ತೆ ಗೆಳತಿಯರ ಅಪೇಕ್ಷೆಯಂತೆ ಆತನನ್ನು ಭೇಟಿಯಾಗಲು ಅವನ ಅನುಮತಿ ಪಡೆದು ಗೆಳತಿಯರೊಂದಿಗೆ ಹೋಗಿದ್ದಳು. 


ಸಂದೀಪ್ ಬಂಗಲೆಯ ಹೆಸರು 'ಕರುಣ'. ಆತನ ಮಡಿದ ಪತ್ನಿಯ ಹೆಸರು. ಆತನಿಗೆ ಇಬ್ಬರು ಮಕ್ಕಳಿದ್ದರು. ಎಂಟು ವರ್ಷದ ಪೃಥ್ವಿ ಹಾಗೂ ನಾಲ್ಕು ವರ್ಷದ ಧರಣಿ. ಆದರೆ, ಆತನ ವೈಯಕ್ತಿಕ ಜೀವನ ಹೊರಗಡೆ ಎಲ್ಲಿಯೂ ಹೆಚ್ಚು ಜನರಿಗೆ ತಿಳಿದಿರಲಿಲ್ಲ. ಆತನ ವಯಸ್ಸು ಕಾಣುವಂತಿರಲಿಲ್ಲ. ಜೊತೆಗೆ ಆತ ಎಲ್ಲರೊಡನೆ ವರ್ತಿಸುವ ರೀತಿ ಸ್ನೇಹಮಯವಾಗಿದ್ದರಿಂದ.. ಸ್ಟಾರ್ಡಂ ಪ್ರಶ್ನೆಯೇ ಇರಲಿಲ್ಲ. ಹಾಗಾಗಿ, ಸಂದೀಪ್ ಎಲ್ಲರಿಗೂ ಅಚ್ಚುಮೆಚ್ಚು. ಗಾಸಿಪ್ ಗಳಿರಲಿಲ್ಲ. 


ರಚನಾ ಮುಂದೆ ನಟಿಯಾದರೆ ಆಕೆ ವೃತ್ತಿ ಬದುಕಿನಲ್ಲಿ ಸೋಲುತ್ತಾಳೆ ಎಂಬ ಆಲೋಚನೆಯನ್ನು ಮಾತಿನಲ್ಲಿ ಸಂದೀಪ್ ಪ್ರಕಟಿಸಿದ್ದೇಕೆ..? ತಂದೆ-ತಾಯಿಯ ವಿರೋಧವನ್ನು ಮೀರಿ ಸಂದೀಪ್ ನನ್ನು ರಚನಾ ವಿವಾಹವಾಗಲು ಕಾರಣವಾದರೂ ಏನು..?


ವಿವಾಹದ ನಂತರ ರಚನಾ ಕಂಡ ಸಂದೀಪ್ ಬೇರೆಯೇ.. ಹಾಗೆಂದು ಆತನೇನೂ ಖಳನಾಯಕನಲ್ಲ. ಆದರೆ, ಮಧ್ಯಮ ವರ್ಗದಿಂದ ಬಂದಿದ್ದ ರಚನಾಳಿಗೂ ಆತನ ಬದುಕಿನ ರೀತಿ-ನೀತಿಗೂ ಅಜಗಜಾಂತರ ವ್ಯತ್ಯಾಸ. ಅದಕ್ಕೆ ಹೊಂದಿಕೊಳ್ಳುವ ಮನಸ್ಸು ಮಾಡಿದಳಾದರೂ ಅದಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಕಾರಣಳಾದವಳು ಅರುಣ. 


ಮಕ್ಕಳ ಹಾಗೂ ಮನೆಯ ನಿರ್ವಹಣೆ ಮಾಡುತ್ತಾ ಸಂದೀಪ್ ಗೆ ಪ್ರತಿಯೊಂದರಲ್ಲಿಯೂ ತನ್ನ ಛಾಯೆ ಮೂಡಿಸುತ್ತಿದ್ದವಳು ಅರುಣ. ಅವಳು ಸಂದೀಪ್ ನ ಮೊದಲ ಮಡದಿ ಕರುಣಾಳ ತಂಗಿ. 


ಕರುಣಾಳ ನೆನಪಿನಿಂದ ತನ್ನ ವೈವಾಹಿಕ ಜೀವನಕ್ಕೆ ಕೊಂಚ ತೊಂದರೆ ಆಗಬಹುದೆಂದು ರಚನಾ ಊಹಿಸಿದ್ದರೂ.. ಅವಳೆಂದುಕೊಂಡಂತೆ ಆಗಲಿಲ್ಲ. ಅವಳ ಪಾಲಿಗೆ ಮುಳ್ಳಾಗಿದ್ದು ಅರುಣ. 


ಎಲ್ಲದರಲ್ಲಿಯೂ ಡಾಮಿನೇಟ್ ಆಗಿ ಪ್ರತಿಯೊಂದಕ್ಕೂ ಸಂದೀಪ್ ಗೆ ಹತ್ತಿರವಾಗಿದ್ದ ಅರುಣಳನ್ನು ಬಿಟ್ಟು ಸಂದೀಪ್, ರಚನಾಳನ್ನು ಮದುವೆಯಾಗಿದ್ದರೂ ಏಕೆ..?


ರಚನಾಳ ಮುಂದಿನ ಬದುಕು ಹೇಗಿತ್ತು ಹಾಗೂ ಅವಳ ಸಿನಿಮಾ ಭವಿಷ್ಯ ಏನಾಯ್ತು..?


ಅತ್ತ ತಂದೆ-ತಾಯಿಯರ ರಕ್ಷಣಾಕವಚವಿಲ್ಲದೆ, ಇತ್ತ ಗಂಡನ ಸಂಪೂರ್ಣ ಭದ್ರತೆಯೂ ಇಲ್ಲದೆ ಬಂಗಾರದ ಪಂಜರದಲ್ಲಿ ಸಿಲುಕಿದ ರಚನಾಳ ಪಾಡು ಏನಾಯಿತು..? 


ಲೇಖಕಿ ಈ ಕಾದಂಬರಿಯನ್ನು ಕೊಂಡೊಯ್ದಿರುವ ಬಗೆ ಬಹಳ ಇಷ್ಟವಾಯಿತು. ರಚನಾ ಹೇಡಿಯಂತೆ ಹೆದರಿ ಓಡಲಿಲ್ಲ ಅಥವಾ ತನ್ನ ಬದುಕಿನ ನಿರ್ಧಾರಕ್ಕಾಗಿ ಪರಿತಪಿಸಲಿಲ್ಲ. ಆಕೆಯ ನೋವು ಮನದಾಳದಲ್ಲಿದ್ದರೂ.. ಆಕೆ ಮತ್ತೆ ತನ್ನ ಜೀವನದಲ್ಲಿ ತೆಗೆದುಕೊಂಡ ನಿರ್ಧಾರ ಹೆಣ್ಣುಮಕ್ಕಳಿಗೆ ಮಾದರಿಯಾಗುವಂತಿದೆ. ಸಿನಿಮಾ ನೋಡಿ ಅದರ ವಿಮರ್ಶೆಯನ್ನೇ ಮಾಡಲು ಹಿಂಜರಿಯುತ್ತಿದ್ದ ರಚನಾ ಮುಂದೆ ತನ್ನ ಬದುಕಿನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವಷ್ಟು ಗಟ್ಟಿಯಾಗುತ್ತಾಳೆ. ಪ್ರಬುದ್ಧವಾಗುತ್ತಾಳೆ. ಇದೆಲ್ಲದಕ್ಕೂ ಸಮಯ-ಸಂದರ್ಭ ಕಾರಣವಾದರೂ ಇದು ಒಂದು ದಿನದ ಅಥವಾ ಯಾರೋ ಕೊಟ್ಟ ಧೈರ್ಯದ ಕಾರಣದಿಂದಲ್ಲ. ಬದಲಾಗಿ, ಆಂತರಿಕ ಶಕ್ತಿಯಿಂದ. ಪ್ರತಿ ಹೆಣ್ಣಿನಲ್ಲಿಯೂ ಇಂತಹಾ ಶಕ್ತಿಯಿರುತ್ತದೆ. ಅವರ ಬದುಕಿನ ಹಾಗೂ ಭವಿಷ್ಯದ ರಕ್ಷಣೆಯನ್ನು ಅವರೇ ಮಾಡಿಕೊಳ್ಳಬೇಕು. ಅಂತಹಾ ಗಟ್ಟಿತನದ ಪಾತ್ರದ ಮೂಲಕ ಸ್ಪೂರ್ತಿ ತುಂಬುತ್ತಾರೆ ಲೇಖಕಿ. 


ಇದು ಮುಖ್ಯವಾಗಿ ಸಿನಿಮಾ ತಾರೆಯೊಬ್ಬಳ ಕಥೆಯಾದರೂ.. ಉದ್ಯೋಗಕ್ಕೆ ಹೋಗುವ ಪ್ರತಿಯೊಂದು ಹೆಣ್ಣು ಸಹಾ ಇಂತಹ ಸಂದರ್ಭವನ್ನು ಅನುಭವಿಸಿರಬಹುದು ಅಥವಾ ಅವಳ ಮುಂದೆ ಎರಡು ಆಯ್ಕೆಗಳಿರಬಹುದು. ಆಗ ಅವಳು ಆಯ್ದುಕೊಳ್ಳುವ ದಾರಿ ಹೇಗಿರಬೇಕು ಎಂಬುದರ ದಾರಿದೀಪದಂತೆಯೂ ಇರುವ ಕಾದಂಬರಿ ಇಷ್ಟವಾಯಿತು. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ