ಚಾಕಲೇಟ್ ಎಂದರೆ ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ..! ಅದರಲ್ಲೂ.. ಇಂದಿನ ಚಾಕಲೇಟ್ ಜಾಹೀರಾತುಗಳನ್ನು ಗಮನಿಸಿದರೆ ಬಾಯಿಗೆ ಮೆತ್ತಿಕೊಂಡ ಚಾಕಲೇಟ್ ಅನ್ನು ಸವಿಯುತ್ತಾ ಇರುವ ದೃಶ್ಯ ಕಂಡು ಚಾಕಲೇಟ್ ಪ್ರಿಯರೆಲ್ಲದವರೂ ಸಹಾ ಅದಕ್ಕೆ ಮರುಳಾಗುತ್ತಾರೆ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಈ ಚಾಕಲೇಟ್ ಗಳು ಪ್ರಿಯವೇ. ಯಾರಿಗಾದರೂ ಧನ್ಯವಾದಗಳನ್ನು ತಿಳಿಸಲು ಅಥವಾ ಯಾವುದಾದರೂ ಸಮಯಕ್ಕೆ ಅಥವಾ ತಮ್ಮ ಖುಷಿಯನ್ನು ಹಂಚಿಕೊಳ್ಳಲು ಸಹ ಚಾಕಲೇಟ್ ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇಂತಹಾ ಚಾಕಲೇಟ್ ಗಳು ಕೊಂಚ ದುಬಾರಿಯೇ ಇರಬೇಕಲ್ಲ..! ದುಬಾರಿ ಎನಿಸಿದರೂ ಖುಷಿಯ ಮುಂದೆ ಅವುಗಳ ಬೆಲೆ ಲೆಕ್ಕಕ್ಕೆ ಬರುವುದಿಲ್ಲ. ಅದರಲ್ಲೂ ಇಂದು ಈ ಎಲ್ಲಾ ಸಂದರ್ಭಗಳಿಗೂ ಚಾಕಲೇಟ್ ನ ಬ್ರ್ಯಾಂಡ್ ಮಾರ್ಕ್ ನಂತೆ ನಿಂತಿರುವುದು ಡೈರಿ ಮಿಲ್ಕ್ ಎನ್ನುವ ಜಗತ್ಪ್ರಸಿದ್ಧ ಚಾಕಲೇಟ್. ಈಗೇನೋ ನಾವು ಇದರ ಬೆಲೆ ಲೆಕ್ಕ ಹಾಕಬಹುದು. ಆದರೆ, ಇದು ಮೊಟ್ಟಮೊದಲು ತಯಾರಾದಾಗ ಬೇರೆ ಎಲ್ಲಾ ಕಂಪೆನಿಯ ಚಾಕಲೇಟ್ ಗಳಿಗಿಂತ ಅತ್ಯಂತ ಕಡಿಮೆ ಬೆಲೆಯ ಚಾಕಲೇಟ್ ಇದಾಗಿತ್ತು.
ಕೋಕೋ ಬಳಸಿ ತಯಾರಿಸುವ ಚಾಕಲೇಟ್ ಗಳಲ್ಲಿ ಎರಡು ವಿಧಗಳಿವೆ. ಹಾಲು ಬಳಸದೇ ಮಾಡುವ ಡಾರ್ಕ್ ಚಾಕಲೇಟ್ ಗಳು ಹಾಗೂ ಇಂತಿಷ್ಟು ಪ್ರಮಾಣದ ಹಾಲು ಬಳಸಿ ತಯಾರಿಸುವ ಮಿಲ್ಕ್ ಚಾಕಲೇಟ್ ಗಳು. ನಮ್ಮ ದೇಶದಲ್ಲಿ ಡಾರ್ಕ್ ಚಾಕಲೇಟ್ ಗಳಿಗಿಂತ ಮಿಲ್ಕ್ ಚಾಕಲೇಟ್ ಗಳು ಹೆಚ್ಚು ಜನಪ್ರಿಯವಾಗಿವೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಡೈರಿ ಮಿಲ್ಕ್. ವಿದೇಶಗಳಲ್ಲಿ ಡಾರ್ಕ್ ಚಾಕಲೇಟ್ ಗಳು ಹೆಚ್ಚು ಇಷ್ಟಪಡುವ ಚಾಕೊಲೇಟ್ ಗಳು. ಆದರೆ ಡೈರಿ ಮಿಲ್ಕ್ ನ ಮ್ಯಾಜಿಕ್ ಹೇಗಿದೆ ಎಂದರೆ ಇದು ವಿಶ್ವದಾದ್ಯಂತ ಎಲ್ಲರೂ ಇಷ್ಟಪಡುವ ಚಾಕಲೇಟ್ ಗಳಲ್ಲಿ ಪ್ರಥಮ ಸ್ಥಾನದಲ್ಲಿದೆ.
ಇಂದು ಜಗತ್ತಿನ ಲೀಡಿಂಗ್ ಚಾಕಲೇಟ್ ಕಂಪನಿ ಯಾಗಿ ನಿಂತಿದೆ ಕ್ಯಾಡ್ಬರಿ. ಮೂಲತಃ ಬ್ರಿಟಿಷ್ ಮಲ್ಟಿನ್ಯಾಷನಲ್ ಕಂಪನಿ ಆಗಿದ್ದರೂ ಸಹ ಈ ಕ್ಯಾಡ್ಬರಿ ಈಗ ಇರುವುದು ಮಂಡೇಲಾಸ್ ಇಂಟರ್ನ್ಯಾಷನಲ್ ಎನ್ನುವ ಕಂಪನಿಯ ಒಡೆತನದಲ್ಲಿ. ಆದರೆ, ಇದಕ್ಕೂ ಮುನ್ನ ಸವೆಸಿದಂತಹಾ ದಾರಿ ಚಾಕಲೇಟಿನಷ್ಟೇನೂ ಸಿಹಿಯಾಗಿರಲಿಲ್ಲ. ಹಾಗೆಂದು ಎಲ್ಲಾ ಚಾಕಲೇಟ್ ಗಳೂ ಸಿಹಿಯೂ ಅಲ್ಲ.
ಕ್ಯಾಡ್ಬರಿ ಎನ್ನುವ ಕಂಪನಿಯ ಸಂಸ್ಥಾಪಕ ಜಾನ್ ಕ್ಯಾಡ್ಬರಿ. 1801 ಆಗಸ್ಟ್ 12ರಂದು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ರಿಚರ್ಡ್ ತ್ಯಾಪ್ಪರ್ ಕ್ಯಾಡ್ಬರಿ ಹಾಗೂ ಹೆಲಿಜಬೆತ್ ಹೆಡ್ ಕ್ಯಾಡ್ಬರಿಯ ಮಗನಾಗಿ ಜನಿಸಿದ ಇವರು ವ್ಯಾಪಾರಿ ಕುಟುಂಬದಂತೆ ಮಾಮೂಲು ದಿನಸಿ ಅಂಗಡಿಯನ್ನು ಇಟ್ಟುಕೊಂಡರು. 1818ರ ನಂತರದಲ್ಲಿ ಅವರಿಗೆ ದುಡಿಯುವ ಹುಮ್ಮಸ್ಸು ಹೆಚ್ಚಾಯಿತು. ಆಗ ತಮ್ಮ ಅಂಗಡಿಯ ಮುಂಭಾಗದಲ್ಲಿಯೇ ಕಾಫಿ, ಟೀ, ಜೊತೆಗೆ ಡ್ರಿಂಕಿಂಗ್ ಚಾಕಲೇಟನ್ನು ತಯಾರಿಸಿ ಮಾರಲು ಶುರು ಮಾಡುತ್ತಾರೆ. ಹೀಗೆ ಅವರು ಕೋಕೋದಿಂದ ತಯಾರಿಸಿದ ಪೇಯವನ್ನು ಮಾರಾಟ ಮಾಡುತ್ತಾ ತಮ್ಮದೇ ಆದ ಹೊಸ-ಹೊಸ ರೆಸಿಪಿಗಳನ್ನು ಕಂಡುಹಿಡಿಯುತ್ತಾರೆ. 1824ರ ಹೊತ್ತಿಗೆ ಅವರು ಕೋಕೋದಿಂದ ತಯಾರಿಸಿದ ಸುಮಾರು 11 ರೀತಿಯ ಪೇಯಗಳು ಹಾಗೂ 16 ರೀತಿಯ ಡ್ರಿಂಕಿಂಗ್ ಚಾಕಲೇಟ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಇದಾದ ಏಳು ವರ್ಷಗಳ ನಂತರ ಇದು ಮೂವತ್ತಕ್ಕೂ ಹೆಚ್ಚು ವಿಧವನ್ನು ತಲುಪುತ್ತದೆ. ವ್ಯಾಪಾರ ಹೆಚ್ಚುತ್ತಿದ್ದಂತೆ ಲಾಭವೂ ಹೆಚ್ಚುತ್ತಿತ್ತು. ಆ ಸಂದರ್ಭದಲ್ಲಿ ಜಾನ್ ಅವರ ಜೊತೆಗೂಡಿದ್ದು ಅವರ ಸಹೋದರ ಬೆಂಜಮಿನ್ ಕ್ಯಾಡ್ಬರಿ.
ಆ ಸಮಯದಲ್ಲಿ ಅಲ್ಲಿ ಸಾರಾಯಿಯ ಅಂಗಡಿಗಳೇ ಹೆಚ್ಚಿದವು. ಸಾರಾಯಿಯ ಕಾರಣದಿಂದ ಬಡತನದ ಹೆಚ್ಚುತ್ತಿದೆ ಎಂದು ಜನರು ಭಾವಿಸುತ್ತಿದ್ದರು. ಆದರೆ, ಅದಕ್ಕೆ ಪರ್ಯಾಯವಾಗಿ ಬೇರೆ ಯಾವ ಪೇಯಗಳನ್ನೂ ಜನ ಆಯ್ಕೆ ಮಾಡಿಕೊಳ್ಳುತ್ತಿರಲಿಲ್ಲ. ಆಲ್ಕೋಹಾಲ್ ನ ಬದಲಾಗಿ ಜನರು ಈಗ ಡ್ರಿಂಕಿಂಗ್ ಚಾಕಲೇಟ್ ಹಾಗೂ ಕೋಕೋ ಪೇಯಗಳ ಕಡೆಗೆ ಗಮನ ಹರಿಸಿದರು. ಇದು ಆಲ್ಕೋಹಾಲ್ ಗಿಂತ ಆರೋಗ್ಯಕರವಾಗಿತ್ತು ಎಂಬುದು ಜನರಿಗೂ ಮನದಟ್ಟಾಗಿತ್ತು.
ಈ ಇಬ್ಬರು ಕ್ಯಾಡ್ಬರಿ ಸಹೋದರರು ಇದಕ್ಕಾಗಿ ಒಂದು ಹೊಸ ಫ್ಯಾಕ್ಟರಿಯನ್ನು ತೆರೆಯಲು ನಿರ್ಧರಿಸಿ, 1847ರಲ್ಲಿ ಕ್ಯಾಡ್ಬರಿ ಬ್ರದರ್ಸ್ ಎಂಬ ಹೆಸರಿನಲ್ಲಿಯೇ ಕಂಪನಿಯನ್ನು ತೆರೆಯುತ್ತಾರೆ. ಇಲ್ಲಿ ಕೇವಲ ಚಾಕೊಲೇಟ್ ಗಳನ್ನು ತಯಾರಿಸುವುದು ಮಾತ್ರವಲ್ಲದೆ.. ಪಶು ಹಿಂಸೆಯ ವಿರುದ್ಧ ಧ್ವನಿ ಎತ್ತುತ್ತಾ.. ಪರಿಸರ ಪ್ರಾಣಿಗಳ ಸ್ನೇಹಮಯಿ ಸೊಸೈಟಿಯನ್ನಾಗಿಯೂ ಮಾಡಲು ನಿರ್ಧರಿಸಿ.. ಹಲವು ಕ್ಯಾಂಪೇನ್ ಗಳನ್ನು ಸಹ ಹಮ್ಮಿಕೊಳ್ಳುತ್ತಾರೆ.
1849ರಲ್ಲಿ ಚಾಕಲೇಟ್ ನಲ್ಲಿ ಒಂದು ಮಹತ್ತರ ಬದಲಾವಣೆ ಮಾಡುತ್ತಾರೆ. ಅದೆಂದರೆ, ತಿನ್ನುವ ಚಾಕಲೇಟ್. ಹೌದು.. ಅದುವರೆಗೂ ಇಡೀ ಬ್ರಿಟನ್ ನಲ್ಲಿ ಎಲ್ಲಿಯೂ ತಿನ್ನುವ ರೀತಿಯ ಚಾಕೊಲೇಟ್ ಇರಲಿಲ್ಲ. ಬದಲಾಗಿ ಅದುವರೆಗೂ ಇದ್ದದ್ದು ಕೇವಲ ಕುಡಿಯುವ ಡ್ರಿಂಕಿಂಗ್ ಚಾಕಲೇಟ್ ಮಾತ್ರವೇ..
ಕ್ಯಾಡ್ಬರಿ ಸಹೋದರರ ಪೇಯಗಳ ಹಾಗೂ ಡ್ರಿಂಕಿಂಗ್ ಚಾಕಲೇಟ್ ಗಳ ಜನಪ್ರಿಯತೆ ಎಷ್ಟು ಬೆಳೆಯಿತು ಎಂದರೆ.. 1854 ರಲ್ಲಿ ಅಲ್ಲಿನ ರಾಣಿ ವಿಕ್ಟೋರಿಯಾ ಕಡೆಯಿಂದ ರಾಯಲ್ ವಾರೆಂಟ್ ಬರುತ್ತದೆ. ರಾಯಲ್ ವಾರೆಂಟ್ ಎಂದರೆ ಮತ್ತೇನಲ್ಲ.. ತಮ್ಮ ಅರಮನೆಗೆ ಅಧಿಕೃತವಾಗಿ ನಿರಂತರವಾಗಿ ಡ್ರಿಂಕಿಂಗ್ ಚಾಕಲೇಟ್ ಹಾಗೂ ಕೋಕೋ ಪೇಯಗಳನ್ನು, ಚಾಕಲೇಟ್ ಗಳನ್ನು ತಯಾರಿಸಿ, ಪೂರೈಸಲು ಹೇಳುವ ರಾಜ ಮರ್ಯಾದೆಯ ಕರೆಯದು. ಇವರು ಅದನ್ನು ಒಪ್ಪಿಕೊಳ್ಳುತ್ತಾರೆ ಸಹಾ. ಅಂದಿನಿಂದ ಅವರು ರಾಣಿ ವಿಕ್ಟೋರಿಯಾ ಗೆ ಅಫಿಶಿಯಲ್ ಆಗಿ ಕೋಕೋ ಪೇಯ ಹಾಗೂ ಚಾಕಲೇಟ್ ಗಳನ್ನು ಮಾಡಿಕೊಡುತ್ತಿರುತ್ತಾರೆ. ಇವರ ಜನಪ್ರಿಯತೆಯೂ ಬೆಳೆಯುತ್ತದೆ.
1861ರ ಹೊತ್ತಿಗೆ ಆರೋಗ್ಯದ ಸಮಸ್ಯೆಯಿಂದ ಜಾನ್ ನಿವೃತ್ತಿ ಹೊಂದಿದಾಗ ಆ ಸ್ಥಾನಕ್ಕೆ ಬಂದದ್ದು ಆತನ ಮಕ್ಕಳಾದ ರಿಚಾರ್ಜ್ ಹಾಗೂ ಜಾರ್ಜ್ ಕ್ಯಾಡ್ಬರಿ.
ಮಕ್ಕಳಿಬ್ಬರು ಕಂಪನಿಯನ್ನು ವಹಿಸಿಕೊಂಡಾಗ ಅದಾಗಲೇ ಕಂಪನಿ ನಷ್ಟದ ಹಾದಿಯಲ್ಲಿತ್ತು. ಕೇವಲ ಹಣಕಾಸಿನ ನಷ್ಟವಲ್ಲದೆ.. ಉದ್ಯೋಗಿಗಳು ಕಂಪನಿಯನ್ನು ತೊರೆದು ಹೋಗುವ ಪರಿಸ್ಥಿತಿಯಲ್ಲಿದ್ದರು. ಆದರೆ, ಜಾರ್ಜ್ ಹೆಚ್ಚಿನ ಹೊಣೆಗಾರಿಕೆ ಹೊತ್ತು ಈ ಎಲ್ಲವನ್ನು ನಿಭಾಯಿಸಿ.. ಐದೇ ವರ್ಷದಲ್ಲಿ ಅಂದರೆ, 1866ರ ಹೊತ್ತಿಗೆ ಮತ್ತೆ ಕಂಪನಿಯನ್ನು ಲಾಭದತ್ತ ನಡೆಸುತ್ತಾರೆ. ನಷ್ಟದಲ್ಲಿದ್ದ ಬ್ಯುಸಿನೆಸ್ ಅನ್ನು ಮತ್ತೆ ಲಾಭದ ಕಡೆಗೆ ಕೊಂಡೊಯ್ಯುವುದೇನೂ ಸುಲಭವಾಗಿರಲಿಲ್ಲ. ಅದಕ್ಕಾಗಿ ಅವರು ಹಲವಾರು ಬದಲಾವಣೆಗಳನ್ನು ಮಾಡಬೇಕಾಗಿ ಬಂದಿತು.
ಕೇವಲ ಒಂದೇ ಪ್ರಾಡಕ್ಟ್ ಮಾತ್ರವಾದರೆ.. ಅದರ ಕಡೆಗೆ ಹೆಚ್ಚಿನ ಗಮನ ಕೊಡಬಹುದು ಎನ್ನುತ್ತಾ ಕೇವಲ ಚಾಕಲೇಟ್ ಅನ್ನು ಮಾತ್ರ ಮಾರುವ ತೀರ್ಮಾನ ತೆಗೆದುಕೊಂಡರು. ಅಷ್ಟೇ ಅಲ್ಲದೆ ಆ ಚಾಕಲೇಟ್ ಗಳ ಗುಣಮಟ್ಟವನ್ನು ಹೆಚ್ಚು ಮಾಡಿದರು.
ತಮ್ಮ ಕೆಲಸಗಾರರಿಗೆ ಬ್ಯಾಂಕ್ ಹಾಗೂ ಸರ್ಕಾರಿ ರಜೆಗಳು ಇದ್ದ ದಿನ ಸರ್ಕಾರಿ ಕೆಲಸದಂತೆಯೇ ರಜೆ ನೀಡುತ್ತಾರೆ. ಹೀಗೆ ಕೆಲಸಗಾರರಿಗೆ ವಾರದಲ್ಲಿ ರಜೆ ನೀಡುವ ಅಭ್ಯಾಸವನ್ನು ಮೊದಲು ಶುರುವಿಟ್ಟದ್ದು ಕ್ಯಾಡ್ಬರಿ. ಕೆಲಸಗಾರರಿಗೆಂದೆ ಅವರು ಒಂದು ಎಸ್ಟೇಟ್ ಅನ್ನು ಶುರು ಮಾಡುತ್ತಾರೆ. ಅದೇ ಇಂದಿಗೂ ಖ್ಯಾತಿ ಪಡೆದಿರುವ "ಬೋರ್ನ್ ವಿಲ್ಲೆ ಎಸ್ಟೇಟ್". ಕೆಲಸಗಾರರಿಗೆ ವಾಸ ಮಾಡಲು ಒಂದು ಸುರಕ್ಷಿತವಾದ ಹಾಗೂ ಆರೋಗ್ಯಕರವಾದ ವಾತಾವರಣವನ್ನು ನಿರ್ಮಿಸಿ ಅಲ್ಲಿಯೇ ತನ್ನ ಸ್ವಂತ ಫ್ಯಾಕ್ಟರಿಯನ್ನು ಸಹ ನಿರ್ಮಿಸುತ್ತಾರೆ. ಆದರೆ, ಕ್ಯಾಡ್ಬರಿಯ ಹೆಡ್ ಕ್ವಾರ್ಟರ್ ಇರುವುದು ಪಶ್ಚಿಮ ಭಾಗದ ಲಂಡನ್ ನಲ್ಲಿ.
ತಾವು ಮಾರಾಟ ಮಾಡುವ ಪ್ರಾಡಕ್ಟ್ ನಲ್ಲಿಯೂ ಹೊಸತನವನ್ನೇನಾದರೂ ತಂದರೆ ಗ್ರಾಹಕರು ಅದಕ್ಕೆ ಆಕರ್ಷಿತರಾಗುತ್ತಾರೆ.. ಎನ್ನುತ್ತಾ ಚಾಕಲೇಟ್ ಗಳನ್ನು ವಿವಿಧ ರೀತಿಯ ಬಾಕ್ಸ್ ಗಳಲ್ಲಿ ನೀಡಲು ತೀರ್ಮಾನಿಸಿ ಮೊದಲ ಬಾರಿಗೆ ವ್ಯಾಲೆಂಟೈನ್ಸ್ ಡೇ ಗಾಗಿ ಹಾರ್ಟ್ ಶೇಪ್ ನಲ್ಲಿ ಚಾಕ್ಲೆಟ್ ಬಾಕ್ಸ್ ಅನ್ನು ತನ್ನ ಗ್ರಾಹಕರಿಗೆ ನೀಡಿತು. ಹೀಗೆ ಚಾಕಲೇಟ್ ಬಾಕ್ಸ್ ಹಾಗೂ ಚಾಕಲೇಟ್ ಡಿಸೈನ್ ಮಾಡಿದ ಮೊಟ್ಟ ಮೊದಲ ಕಂಪನಿ ಎನ್ನುವ ಖ್ಯಾತಿ ಸಹ ಇದರದ್ದೇ. ಈಸ್ಟರ್ ಎಗ್ ರೀತಿಯ ಚಾಕಲೇಟುಗಳಿಗಾಗಿ ಒಳಗೆ ಶುಗರ್ ಲೇಪಿತ ಬಾದಾಮಿಗಳನ್ನು ಸೇರಿಸಿ ಅದರ ಮೇಲೆ ಚಾಕಲೇಟ್ ಕೋಟಿಂಗ್ ಮಾಡಿ ಮೊಟ್ಟೆಯ ರೀತಿಯ ಕಾಣುವ ಚಾಕಲೇಟ್ ಗಳನ್ನು ಗ್ರಾಹಕರಿಗೆ ನೀಡಿತು.
ಕ್ಯಾಡ್ವರಿಗೆ ಹೊಸದೊಂದು ಬ್ರೇಕ್ ಥ್ರೂ ಸಿಕ್ಕಿದ್ದು 1897ರಲ್ಲಿ. ಅದುವರೆಗೂ ಸ್ವಿಸ್ ಚಾಕಲೇಟ್ ಗಳು ಮಾತ್ರವೇ ಅಲ್ಲಿ ಮಿಲ್ಕ್ ಚಾಕಲೇಟ್ ಗಳಾಗಿ ಲಭ್ಯವಿದ್ದದ್ದು. ಕ್ಯಾಡ್ಬರಿ ಇದರ ಪ್ರತಿಸ್ಪರ್ಧಿಯಾಗಿ ತನ್ನದೇ ಆದ ಮಿಲ್ಕ್ ಚಾಕಲೇಟ್ ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿ ಮಿಲ್ಕ್ ಚಾಕಲೇಟ್ ಬಾರ್ ಗಳನ್ನು ನಿರ್ಮಿಸಿತು. ಮೊದಮೊದಲಿಗೆ ಇವುಗಳ ಮೇಲೆ ಯಾವುದೇ ರ್‍ಯಾಪರ್ ಇಲ್ಲದೆ.. ಇದನ್ನು ಕವರ್ ಮಾಡದೆ.. ಗ್ರಾಹಕರು ರುಚಿ ನೋಡುವಂತೆ ಹಾಗೂ ಅದಕ್ಕೆ ಆಕರ್ಷಿತರಾಗುವಂತೆ ಕೇವಲ ಚಾಕಲೇಟ್ ಬಾರ್ ಗಳನ್ನು ಮಾತ್ರ ಮಾರಾಟಕ್ಕಿಟ್ಟಿತು. ಈ ಚಾಕಲೇಟ್ ನಲ್ಲಿ ಅದರ ಹಿಂದಿನ ಚಾಕಲೇಟ್ ಗಳು ಹಾಗೂ ಅಂದು ಮಾರ್ಕೆಟ್ನಲ್ಲಿದ್ದ ಎಲ್ಲ ಚಾಕಲೇಟ್ ಗಳಿಗಿಂತ ಅತಿ ಹೆಚ್ಚು ಹಾಲಿನ ಬಳಕೆ ಮಾಡಿಕೊಂಡಿತ್ತು. 1914ರ ಹೊತ್ತಿಗೆ ಕ್ಯಾಡ್ಬರಿಯ "ಬೆಸ್ಟ್ ಸ್ಪೆಲ್ಲಿಂಗ್ ಪ್ರಾಡಕ್ಟ್" ಎಂದು ಹೆಸರಾದದ್ದು ಈ ಡೈರಿ ಮಿಲ್ಕ್. ಈ ಹಾಲಿನ ಚಾಕ್ಲೆಟ್ ಗೆ ಏನೆಂದು ಹೆಸರಿಡುವುದು ಎಂದು ಬಹಳಷ್ಟು ಹೆಸರುಗಳನ್ನು ಹುಡುಕಿದರಂತೆ. ಹೈಲ್ಯಾಂಡ್ ಮಿಲ್ಕ್, ಜರ್ಸಿ ಅಂಡ್ ಡೈರಿ ಮೆಯ್ಡ್.. ಇನ್ನು ಹಲವಾರು. ಆದರೆ, ತನ್ನ ಗ್ರಾಹಕರ ಪುಟ್ಟ ಮಗಳೊಬ್ಬಳ ಸಲಹೆ ಮೇರೆಗೆ ಇದಕ್ಕೆ ಡೈರಿ ಮಿಲ್ಕ್ ಎಂದೇ ಹೆಸರಿಟ್ಟರು.
ಇದರ ನಂತರ ಇದರ ರುಚಿಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡುತ್ತಾ ಕ್ರಂಚಿ, ಬೂಸ್ಟ್, ಕ್ಯಾರಮೆಲ್, ವಿಸ್ಪಾ, ಪಿಕ್-ನಿಕ್, ಪ್ಲೇಕ್, ಫಡ್ಜ್, ಕರ್ಲಿ-ವರ್ಲಿ ಹೀಗೆ ಹಲವಾರು ಹೆಸರುಗಳಿಂದ ಗ್ರಾಹಕರನ್ನು ಸೆಳೆದರು.
1918ರ ಹೊತ್ತಿಗೆ ತಸ್ಮನಿಯಾದಲ್ಲಿ ತನ್ನ ಮೊದಲ ಅಂತರಾಷ್ಟ್ರೀಯ ಫ್ಯಾಕ್ಟರಿಯನ್ನು ಶುರು ಮಾಡಿದರು. ವಿಶ್ವ ಯುದ್ಧ- 1 ಹಾಗೂ 2 ಸಮಯದಲ್ಲಿ ಕ್ಯಾಡ್ಬರಿಯ ಕೆಲವು ಚಾಕಲೇಟ್ ಫ್ಯಾಕ್ಟರಿಗಳನ್ನು ವಿಶ್ವಯುದ್ಧದ ಆಯುಧಗಳ ತಯಾರಿಗಾಗಿ ಬಳಸಿಕೊಂಡಿದ್ದರು. ಅದರ ನಂತರವೂ ಇದರ ಖ್ಯಾತಿಯೇನೂ ಕಡಿಮೆಯಾಗಿರಲಿಲ್ಲ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸೈನ್ಯಕ್ಕೆ ಅಫಿಶಿಯಲ್ ಚಾಕಲೇಟ್ ಸಪ್ಲೇಯರ್ ಆಗಿ ಈ ಕ್ಯಾಡ್ಬರಿ ತನ್ನ ಚಾಕ್ಲೇಟ್ ಗಳನ್ನು ಸಪ್ಲೈ ಮಾಡಿತ್ತು.
ಕ್ಯಾಡ್ಬರಿ ಈಗ ಇರುವುದು ಮಂಡೇಲಾಸ್ ಇಂಟರ್ನ್ಯಾಷನಲ್ ಎನ್ನುವ ಕಂಪನಿಯ ಅಡಿಯಲ್ಲಾದರೂ.. ತನ್ನ ಮೊದಲ ಮರ್ಜ್ ಅನ್ನು ಮಾಡಿಕೊಂಡದ್ದು ಸ್ಕ್ವೇಪಸ್ ಎನ್ನುವ ಡ್ರಿಂಕ್ಸ್ ಕಂಪನಿಯ ಜೊತೆಗೆ. ಈ ಒಪ್ಪಂದದ ಪ್ರಕಾರ ಅಂದಿನ ಸ್ಕ್ವೇಪಸ್ ಕಂಪನಿಯ ಚೇರ್ಮನ್ ಆಗಿದ್ದವರು ಈ ಎರಡೂ ಕಂಪನಿಗಳ ಮಾಲೀಕರಾದರು ಹಾಗೂ ಅಂದು ಕ್ಯಾಡ್ಬರಿಯ ಮಾಲೀಕನಾಗಿದ್ದ ಅಡ್ರಿಯನ್ ಕ್ಯಾಡ್ಬರಿ ಡೆಪ್ಯುಟಿ ಛೇರ್ಮೆನ್ ಹಾಗೂ ಎಂ.ಡಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಂಪನಿ ಕ್ಯಾಡ್ಬರಿ ಸ್ಕ್ವೇಪಸ್ ಎನ್ನುವ ಹೆಸರಿಗೆ ಬದಲಾಯಿತು. ಎಲ್ಲವೂ ಸರಿ ಇದ್ದಾಗ ಈ ಕ್ಯಾಡ್ಬರಿ ಈ ಕಂಪನಿಯ ಜೊತೆಗೆ ಮರ್ಜ್ ಆದದ್ದೇಕೆ..?? ಎನ್ನುವ ಪ್ರಶ್ನೆ ಕಾಡುತ್ತದೆ.
ಜಗತ್ತಿನಾದ್ಯಂತ ತನ್ನ ಬ್ಯುಸಿನೆಸ್ ಅನ್ನು ವಿಸ್ತರಿಸಿಕೊಳ್ಳಲು ಕೆಲವು ಕಂಪನಿಗಳು ತಮ್ಮ ಬಿಸಿನೆಸ್ ಡೀಲಿಂಗ್ ಅನ್ನು ಈ ರೀತಿಯಲ್ಲಿ ಮಾಡಿಕೊಳ್ಳುತ್ತವೆ. ಹೀಗೆ.. 1978 ರಲ್ಲಿ ತನ್ನ 10% ಶೇರನ್ನು ಅಮೆರಿಕಾದ ಅತಿ ದೊಡ್ಡ ಮ್ಯಾನುಫ್ಯಾಕ್ಚರರ್ ಆಗಿದ್ದ ಪೀಟರ್ ಪೌಲ್ ನೊಂದಿಗೆ 58 ಮಿಲಿಯನ್ ಡಾಲರ್ ಗಳಿಗೆ ಮಾರಿದರು. ಈಗ ಈ ಒಪ್ಪಂದದ ಪ್ರಕಾರ ಕ್ಯಾಡ್ಬರಿ ವಿಶ್ವದಲ್ಲೆಡೆ ತನ್ನ ಮಾರಾಟದ ಹಸ್ತವನ್ನು ಚಾಚಿತು. 1980 ರಲ್ಲಿ ಸ್ಕ್ವೇಪಸ್ ಕೋಕೋ-ಕೋಲಾದೊಂದಿಗೆ ಡೀಲಿಂಗ್ ಮಾಡಿಕೊಂಡಿತು. ಈ ಒಪ್ಪಂದದ ಪ್ರಕಾರ ಕೋಕೋ- ಕೋಲಾ ಸ್ಕ್ವೇಪಸ್ ಎಂದಾಯಿತು. ಈಗ ಕ್ಯಾಡ್ಬರಿ ಸ್ಕ್ವೇಪಸ್ ವಿಶ್ವದ ಮೂರನೇ ಅತಿ ದೊಡ್ಡ ಸಾಫ್ಟ್ ಡ್ರಿಂಕ್ ಮ್ಯಾನುಫ್ಯಾಕ್ಚರರ್ ಆಗಿ ಹೊರಹೊಮ್ಮಿತ್ತು.
ಈ ಬ್ಯುಸಿನೆಸ್ ಡೀಲಿಂಗ್ ಗಳು ಇಷ್ಟಕ್ಕೇ ಮುಗಿಯಲಿಲ್ಲ. 1988 ರಲ್ಲಿ ಹರ್ಷಿಸ್ ಜೊತೆಗೆ ಒಪ್ಪಂದ ಮಾಡಿಕೊಂಡು ತನ್ನ ಷೇರುಗಳನ್ನು ಮಾರಾಟ ಮಾಡಿ 284.5 ಮಿಲಿಯನ್ ಹಣವನ್ನು ಪಡೆಯಿತು. ಸನ್ ಕಿಸ್ಟ್, ಕೆನಡಾ ಡ್ರೈ ಹಾಗೂ ಟೈಫೋನ್ ಟೀ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು. ಹೆಚ್ಚು ಬೀವರೇಜ್ ಕಂಪನಿಗಳು/ ಪೇಯಗಳ ಕಂಪನಿಗಳ ಜೊತೆಗೇ ಒಪ್ಪಂದ ಮಾಡಿಕೊಳ್ಳುತ್ತಿದ್ದಾಗ ಕ್ಯಾಡ್ಬರಿ ತನ್ನ ಮರ್ಜ್ ನಿಂದ ಹೊರಬರಲು ತೀರ್ಮಾನಿಸಿತು.
ಮಾರ್ಚ್ 2007ರಲ್ಲಿ ಕ್ಯಾಡ್ಬರಿ ಎರಡು ವಿಭಾಗಗಳಾಗಿ ಬೇರೆಯಾಗಲು ನಿರ್ಧರಿಸಿತು. ಒಂದು ಚಾಕಲೇಟ್ ಬ್ಯುಸಿನೆಸ್ ಹಾಗೂ ಮತ್ತೊಂದು ಡ್ರಿಂಕ್ಸ್ ಬ್ಯುಸಿನೆಸ್. 2008 ಮೇ 2 ರಂದು ಡ್ರಿಂಕ್ಸ್ ಬಿಸಿನೆಸ್ ಪೆಪ್ಪರ್ ಸ್ನೇಪ್ಲ ಗ್ರೂಪ್ ನವರ ಜೊತೆ ಮರ್ಜ್ ಆದರೆ.. ಕ್ಯಾಡ್ಬರಿ ಸ್ಕ್ವೇಪಸ್ ಇದ್ದದ್ದು ಕೇವಲ ಕ್ಯಾಡ್ಬರಿ ಆಯಿತು. ಸದ್ಯಕ್ಕೆ ಕ್ಯಾಡ್ಬರಿ ಮಂಡೇಲಾಸ್ ಇಂಟರ್ನ್ಯಾಷನಲ್ ಅವರ ಒಡೆತನದ ಅಡಿಯಲ್ಲಿ ಲಾಭದಾಯಕ ಹೆಜ್ಜೆ ಇಡುತ್ತಿದೆ. ಇಂದಿಗೂ ವರ್ಷವೊಂದಕ್ಕೆ 350 ಮಿಲಿಯನ್ ಗಳಿಗಿಂತಲೂ ಹೆಚ್ಚು ಡೈರಿ ಮಿಲ್ಕ್ ಬಾರ್ ಚಾಕಲೇಟ್ ಗಳು ಮಾರಾಟವಾಗುತ್ತಿವೆ. ಅಂದರೆ ಸರಿಸುಮಾರು ಒಂದು ದಿನಕ್ಕೆ ಒಂದು ಮಿಲಿಯನ್ ಚಾಕಲೇಟ್ ಗಳು.
ಕ್ಯಾಡ್ಬರಿ ಇಂದಿಗೂ ಲಾಭದಲ್ಲಿರುವುದಕ್ಕೆ ಕಾರಣ ಅವರು ಎಚ್ಚರಿಕೆಯಿಂದ ಇಡುತ್ತಿರುವ ಹೆಜ್ಜೆಗಳು. ಅವರ ಲೋಗೋ ಕ್ಯಾಡ್ಬರಿ ಕುಟುಂಬಸ್ಥರ ಸಹಿಯಿಂದ ಪ್ರೇರಿತಗೊಂಡು ಕರ್ಸಿವ್ ಲೆಟರ್ ಗಳಿಂದ ರೂಪಿತವಾಗಿದೆ. ಕಾಲಕಾಲಕ್ಕೆ ತಕ್ಕಂತೆ ಜಾಹೀರಾತುಗಳು ಹಾಗೂ ಚಾಕೊಲೇಟ್ ಗಳ ರೂಪಗಳು ಸಹ ಬದಲಾಗುತ್ತಿರುತ್ತವೆ.
ಜಾನ್ ಕ್ಯಾಡ್ಬರಿಯ ನಿವೃತ್ತಿಯ ಸಮಯದಲ್ಲಿ ನಷ್ಟದ ಹಾದಿಯಲ್ಲಿದ್ದ ಬ್ಯುಸಿನೆಸ್ ಮುಳುಗಿಯೇ ಹೋಗಬಹುದಾಗಿತ್ತಾದರೂ.. ಸಮಯೋಚಿತ ತೀರ್ಮಾನ ಹಾಗೂ ಬದಲಾವಣೆಗಳು ಒಂದು ಬ್ಯುಸಿನೆಸ್ ಅನ್ನು ಹೇಗೆ ಲಾಭದತ್ತ ಕೊಂಡಯ್ಯಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ ಕ್ಯಾಡ್ಬರಿ. ಯಾವುದೇ ಬ್ಯುಸಿನೆಸ್ ನಲ್ಲಿಯೂ ತನ್ನ ಉದ್ಯೋಗಿಗಳಿಗೆ ನೀಡುವ ಸೌಲಭ್ಯಗಳು ಉದ್ಯೋಗಿಗಳಿಂದಲೇ ಬ್ಯುಸಿನೆಸ್ ಅನ್ನು ಲಾಭದತ್ತ ಕೊಂಡೊಯ್ಯುತ್ತವೆ. ಅಷ್ಟೇ ಅಲ್ಲ.. ಯಾವುದಾದರೂ ಒಂದು ಪ್ರಾಡಕ್ಟ್ ನತ್ತ ಗಮನಹರಿಸಿ ಆಗಾಗ ಅವುಗಳ ಬದಲಾವಣೆಗಳನ್ನು ಮಾಡುತ್ತಾ ಗ್ರಾಹಕರಿಗೆ ತಕ್ಕಂತೆ ಅವರು ಇಷ್ಟಪಡುವ ರೀತಿಯಲ್ಲಿ ಅವರಿಗೆ ನೀಡುತ್ತಾ ಹೋದರೆ.. ಬ್ಯುಸಿನೆಸ್ ನಲ್ಲಿ ಲಾಭ ಗಳಿಸಬಹುದು. ಪ್ರಾಡಕ್ಟ್ ನ ಗುಣಮಟ್ಟ ಸಹ ಮಹತ್ವದ ಪಾತ್ರ ವಹಿಸುತ್ತದೆ. ಜಾಹೀರಾತುಗಳು, ಆನ್ಲೈನ್ ಜಾಹೀರಾತುಗಳು ಹಾಗೂ ಕ್ಯಾಂಪೇನ್ ಗಳು ಹೀಗೆ ಎಲ್ಲದರಲ್ಲಿಯೂ ಅಪ್ಡೇಟ್ ಆಗುತ್ತಾ.. ಬ್ಯುಸಿನೆಸ್ ಅನ್ನು ಮುನ್ನಡೆಸಿದರೆ ನಷ್ಟದಲ್ಲಿರುವ ಬ್ಯುಸಿನೆಸ್ ಕೂಡಾ ಲಾಭದತ್ತ ಮುನ್ನಡೆಯುತ್ತದೆ ಎನ್ನುತ್ತಾ ತನ್ನ ನಡೆಯ ಮೂಲಕವೇ ಬ್ಯುಸಿನೆಸ್ ಪಾಠ ಹೇಳುತ್ತಿದೆ ಕ್ಯಾಡ್ಬರಿ.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ