ಸೋಮವಾರ, ಏಪ್ರಿಲ್ 20, 2026

ಅಭೀಷ್ಟ (ಪುಸ್ತಕ ಯಾನ - 276)



ಪುಸ್ತಕದ ಶೀರ್ಷಿಕೆ : ಅಭೀಷ್ಟ

ಲೇಖಕರು : ಕುಮುದ

ಪ್ರಕಾಶಕರು : ಲಹರಿ ಪ್ರಕಾಶನ

ಪ್ರಥಮ ಮುದ್ರಣ : 2009


ಶಿವಮ್ಮ ಕೆಲಸದ ಹೆಂಗಸಾದರೂ.. ನಾಲ್ಕನೇ ತರಗತಿವರೆಗೂ ಓದಿದ್ದಳು. ಆಕೆ ಮನೆ ಕೆಲಸ ಮಾಡಿ ತನ್ನ ಸಂಸಾರ ಸಾಗಿಸಬೇಕಾಗಿತ್ತು. ಗಂಡ ನಿಂಗ ಕುಡು. ಗಾರೆ ಕೆಲಸಕ್ಕೆ ಹೋಗುತ್ತಿದ್ದನಾದರೂ ಬಂದ ಹಣ ಆತನ ಕುಡಿತಕ್ಕೇ ಸಾಲುತ್ತಿರಲಿಲ್ಲ. ತನಗೆ ಹಣವಿಲ್ಲದಾಗ ಹೆಂಡತಿಯನ್ನು ಕಾಡಿಸಿ,ಪೀಡಿಸಿ, ಹೊಡೆದು-ಬಡಿದು ಹಣ ಕಿತ್ತುಕೊಳ್ಳುತ್ತಿದ್ದ. 


ಶಿವಮ್ಮ ಕೆಲಸ ಮಾಡುತ್ತಿದ್ದದ್ದು ಶ್ರೀಮಂತರ ಮನೆಯಲ್ಲಿ. ಹಾಗಾಗಿ ಅವರಿಗೆ ತಕ್ಕಂತೆ.. ಕೆಲಸದವಳಾಗಿದ್ದರೂ ಸ್ವಚ್ಛವಾಗಿ ಶಿಸ್ತಿನಿಂದ ಇರುತ್ತಿದ್ದಳು. ದಿನಾ ಸ್ನಾನ ಮಾಡಿ, ಒಗೆದ ಬಟ್ಟೆ ಧರಿಸುತ್ತಿದ್ದಳು. ಅವರು ಕೊಟ್ಟ ಹಳೆಯ ಬಟ್ಟೆಗಳನ್ನು ಸ್ವಚ್ಛ ಮಾಡಿ ಹಾಕಿಕೊಳ್ಳುತ್ತಿದ್ದಳು. ಮಾತುಕತೆಯಲ್ಲಿಯೂ ಎಲ್ಲಿಯೂ ಆಕೆ ಕೆಲಸದವಳೆಂಬ ಸಂದೇಹ ಬರುವಂತಿರಲಿಲ್ಲ. ಇಂತಹಾ ಅಮ್ಮನಿಗೆ ತಕ್ಕ ಮಗಳು ಸುಮತಿ. ಮಗ ಮಾರುತಿ.


ಈ ಕಾದಂಬರಿಯ ನಾಯಕಿ ಸುಮತಿ. ಸುಮತಿ ಓದುತ್ತಿದ್ದದ್ದು ಸರ್ಕಾರಿ ಶಾಲೆಯಲ್ಲಿ. ಮನೆಯಲ್ಲಿ ಯಾರೂ ಹೇಳಿಕೊಡದಿದ್ದರೂ, ಶಾಲೆಯಲ್ಲಿ ಹೇಳಿಕೊಟ್ಟಿದ್ದನ್ನೇ ಗಮನವಿಟ್ಟು ಓದಿ ತನ್ನ ಚುರುಕುತನದಿಂದ ಶಾಲೆಗೆ ಪ್ರಥಮಳಾಗಿ ಬರುತ್ತಿದ್ದಳು. ಶಾಲೆಯವರೇ ಬಟ್ಟೆ ಹಾಗೂ ಪುಸ್ತಕ ಕೊಡುತ್ತಿದ್ದುದರಿಂದ ಸುಮತಿಯ ಓದಿಗೆ ಯಾವ ಅಡ್ಡಿಯೂ ಬಂದಿರಲಿಲ್ಲ. ಅಮ್ಮನ ಕಷ್ಟಗಳನ್ನು ನೋಡಿ ಬೆಳೆದವಳಿಗೆ ತಾನು ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಅಮ್ಮನನ್ನು ಸುಖವಾಗಿಟ್ಟುಕೊಳ್ಳಬೇಕು, ಒಳ್ಳೆಯ ಬಟ್ಟೆ ತೊಡಬೇಕು ತಮ್ಮನನ್ನು ಓದಿಸಬೇಕು.. ಎಲ್ಲರಂತೆ ನಾವು ನೆಮ್ಮದಿಯಿಂದ ವಾಸ ಮಾಡಬೇಕು ಎಂಬ ಕನಸುಗಳು. ಅದರ ಜೊತೆಗೆ ತಾವು ಕೆಲಸ ಮಾಡುತ್ತಿದ್ದ ಬಂಗಲೆಯ ಮನೆಯವರಂತಿರಬೇಕು ಎಂಬ ಆಸೆ. 


ಶಿವಮ್ಮ ಮಾತ್ರವಲ್ಲದೇ ಸುಮತಿಯೂ ಬಂಗಲೆಗೆ ಹೋಗಿ, ಶಾಲೆಗೆ ಹೋಗುವವರೆಗೂ ತನ್ನ ಕೈಲಾದಷ್ಟು ಕೆಲಸ ಮಾಡಿಕೊಟ್ಟು ಬರುತ್ತಿದ್ದಳು. ಆ ಮನೆಯ ಯಜಮಾನಿ ಮೀನಾಕ್ಷಮ್ಮ. ಅವರ ಪತಿ ಪುರುಷೋತ್ತಮ. ಇದ್ದದ್ದು ಒಬ್ಬಳೇ ಮಗಳು ಶಾಲಿನಿ. ಶಾಲಿನಿ ಶ್ರೀಮಂತರ ಮನೆಯಲ್ಲಿ ಬೆಳೆದರೂ ಚುರುಕಿರಲಿಲ್ಲ. ಅಲ್ಲದೇ ದೇಹದ ಚಟುವಟಿಕೆಯೂ ಕಡಿಮೆ. ಸುಮತಿಗೆ ಹೋಲಿಸಿದರೆ ಎಲ್ಲದರಲ್ಲಿಯೂ ಕಡಿಮೆಯೇ.. ಟ್ಯೂಷನ್ ಗೆ ಸೇರಿಸಿ ಓದಿಸಿದರೂ ಓದು ತಲೆಗೆ ಹತ್ತುತ್ತಿರಲಿಲ್ಲ. ಅದಕ್ಕಾಗಿ ಮೀನಾಕ್ಷಮ್ಮ ಆಗಾಗ ಅವಳ ಉದಾಹರಣೆ ಕೊಡುವುದಿತ್ತು. ಸುಮತಿಯ ಮೇಲೆ ದರ್ಪ ತೋರುತ್ತಿದ್ದರು. ತಮ್ಮ ಮಗಳಿಗಿಂತ ಆಕೆ ಮುಂದುವರೆಯಬಾರದು ಎಂಬ ದುರ್ಬುದ್ಧಿಯಿಂದ ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ಹೆಚ್ಚಿನ ಕೆಲಸ ಹೇಳುವುದು, ಚಿಕ್ಕವಳು ಎಂಬ ಉದಾರತೆಯನ್ನೂ ತೋರದೆ ನಿಷ್ಠುರವಾಗಿ ಕೆಲಸ ಮಾಡಿಸಿಕೊಳ್ಳುವುದು, ಅಲ್ಲದೆ.. ಸಾಕಷ್ಟು ಬೈಯುವುದು ಇತ್ತು.


ಸುಮತಿ ಅದೆಲ್ಲವನ್ನೂ ಪ್ರಶ್ನಿಸಬೇಕೆಂದುಕೊಂಡರೂ ಅವಳ ಬಾಯಿ ಕಟ್ಟಿ ಹಾಕುತ್ತಿದ್ದದ್ದು ಅವರ ಮನೆಯ ಋಣ ಹಾಗೂ ಅಮ್ಮ ಹೇಳುತ್ತಿದ್ದ ಮಾತುಗಳು. ಅವರ ಮನೆಯ ಅನ್ನದ ಋಣ ಇವರ ಮೇಲಿದ್ದುದರಿಂದ ಆಕೆ ಸುಮ್ಮನಾಗುತ್ತಿದ್ದಳು. ಆದರೆ ಇದೇ ಎಷ್ಟು ದಿನ ನಡೆಯಲು ಸಾಧ್ಯ..!?


ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಆಕೆಯನ್ನು ಶಾಲೆಯಿಂದ ಬಿಡಿಸಲು ಹೇಳಿ ತನ್ನ ಮನೆ ಕೆಲಸಕ್ಕೆ ಆಕೆಯನ್ನು ತೊಡಗಿಸಿಕೊಳ್ಳಲು ಉಪಾಯ ಮಾಡಿದ್ದರು ಮೀನಾಕ್ಷಮ್ಮ. ಆದರೆ, ಅದಕ್ಕೆ ಎಡೆ ಮಾಡಿಕೊಡದಂತೆ.. ಸುಮತಿ ತಾನು ಓದುವನೆಂದು ಹಠ ಹಿಡಿದು, ಊಟ ಬಿಟ್ಟು ಕೊನೆಗೂ ತನ್ನ ಹಠ ಸಾಧಿಸಿದ್ದಳು. ಅದನ್ನು ತಡೆಯಲಾಗದ ಮೀನಾಕ್ಷಿ ಮಾತಿಗೆ ಮಾತು ಬೆಳೆದು ಆಕೆಗೆ ಹೊಡೆದು ಕಳಿಸಿದ್ದರು. ಅಂದಿನಿಂದ ತಾನು ಅವರ ಮನೆಯಲ್ಲಿ ಕೆಲಸಕ್ಕೆ ಹೋಗದಿರಲು ನಿರ್ಧರಿಸಿದಳು. ಅದಕ್ಕಾಗಿ ಮೀನಾಕ್ಷಮ್ಮ ಸೇಡು ತೀರಿಸಿಕೊಳ್ಳಲು.. ಆಕೆ ತಮ್ಮ ಮನೆಯಲ್ಲಿ ಚಿನ್ನದ ಬಳೆ ಕದ್ದಳೆಂಬ ಆರೋಪ ಮಾಡಿದರು. ಅಲ್ಲದೇ, ಶಿವಮ್ಮ ಕೆಲಸ ಮಾಡುತ್ತಿದ್ದ ಇತರ ಮನೆಗಳಲ್ಲಿಯೂ ಇದನ್ನೇ ಹೇಳಿ ಅವಳ ಕೆಲಸಕ್ಕೂ ಕಲ್ಲು ಹಾಕಿದರು. 


ಪುರುಷೋತ್ತಮರಾವ್ ಅವರು ಇದನ್ನು ಖಂಡಿಸಿದರಾದರೂ.. ಮೀನಾಕ್ಷಮ್ಮನವರ ದೆಸೆಯಿಂದ ಎಲ್ಲೆಡೆ ಇದು ಹರಡಿಯಾಗಿತ್ತು. ಎಲ್ಲಾ ಕಡೆ ಕೆಲಸ ಕಳೆದುಕೊಂಡ ಶಿವಮ್ಮ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾಗ ಸುಮತಿಯ ದೆಸೆಯಿಂದಲೇ ಆಕೆಗೆ ಒಳ್ಳೆಯ ನೆಲೆ ಹಾಗೂ ಕೆಲಸ ಸಿಕ್ಕಿತು. 


ಸುಮತಿಯ ಶಾಲಾ ಶಿಕ್ಷಕಿಯಾಗಿದ್ದ ಸುಶೀಲಮ್ಮನವ ಅತ್ತೆ ರುಕ್ಮಿಣಿಬಾಯಿಯವರು ಪ್ಯಾರಲಿಸಿಸ್ ಆಗಿ ಹಾಸಿಗೆ ಹಿಡಿದಿದ್ದರಿಂದ ಅವರನ್ನು ನೋಡಿಕೊಳ್ಳಲು ಒಬ್ಬರು ಬೇಕಾಗಿತ್ತು. ಆ ಕೆಲಸವನ್ನು ಶಿವಮ್ಮ ವಹಿಸಿಕೊಂಡರು. ಸುಮತಿ ಶಿವಮ್ಮ ಇಬ್ಬರೂ ಸೇರಿ ಮನೆ ಕೆಲಸವನ್ನು ಮಾಡಿಕೊಡುತ್ತಿದ್ದರು. ಅವರ ಮನೆ ಆವರಣದಲ್ಲಿಯೇ ಇರಲು ಜಾಗ ಸಿಕ್ಕಿತ್ತು. ಶಿವಮ್ಮನ ಗಂಡ ಅವರನ್ನು ಬಿಟ್ಟು ಹೋಗಿದ್ದ.


ಕಾಲಾನಂತರ ರುಕ್ಮಿಣಿಬಾಯಿಯವರು ನಿಧನರಾದರು. ಸುಶೀಲಮ್ಮನವರು ಫಾರಿನ್ ನಲ್ಲಿದ್ದ ತಮ್ಮ ಮಗನ ಮನೆ ಸೇರಿದರು. ಸುಮತಿ ಎಂ.ಬಿ.ಎ ಮಾಡಿ ಒಳ್ಳೆಯ ಕೆಲಸದಲ್ಲಿದ್ದಳು. ದೊಡ್ಡ ಮನೆ ಮಾಡಿದ್ದಳು. ಮಾರುತಿ ಈಗ ಇಂಜಿನಿಯರಿಂಗ್ ಮಾಡುತ್ತಿದ್ದ. ಸಂಸಾರ ಸುಧಾರಿಸಿತು. ಕೆಲಸದ ಮೇಲೆ ಸುಮತಿ ಫಾರಿನ್ ಗೆ ಹೋಗಿ ಬಂದಳು. ಸುಶೀಲ ಮೇಡಂ ಮನೆಯ ವಾತಾವರಣದಿಂದ ಶಿವಮ್ಮ ಓದುವ ಹವ್ಯಾಸವನ್ನು ಬೆಳಸಿಕೊಂಡು ಇನ್ನಷ್ಟು ಸುಧಾರಿಸಿದ್ದರು. 


ಸುಮತಿ ಆಫೀಸಿನ ಕೆಲಸದ ಮೇಲೆ ಚೆನ್ನೈಗೆ ಹೋದಾಗ.. ಅಲ್ಲಿ ಮೈಮರೆತು ಸಮುದ್ರ ನೋಡುತ್ತಾ ಕುಳಿತು ತನ್ನ ಪರ್ಸ್ ಅನ್ನು ಕಳ್ಳ ಹೊತ್ತೊಯ್ದದ್ದೂ ಗೊತ್ತಾಗದಿದ್ದಾಗ ಅವಳ ಸಹಾಯಕ್ಕೆ ಬಂದವನು ದೀಪಕ್. ಆತನೂ ಬೆಂಗಳೂರಿನವನೇ.. ಹೀಗೆ ಅವರಿಬ್ಬರ ಪರಿಚಯ ಪ್ರೇಮಕ್ಕೆ ಮದುವೆಯವರೆಗೂ ಸಾಗಿತು. 


ರೇವತಿ ಹಾಗೂ ಚೇತನ್ ರಾಮ್ ಇಬ್ಬರ ಎರಡನೇ ಮಗ ದೀಪಕ್. ಮೊದಲನೆಯವನು ಪ್ರದೀಪ್. ಆತನಿಗಾಗಲೇ ಮದುವೆಯಾಗಿತ್ತು. ದೀಪಕ್ ತಂಗಿ ಪೂರ್ಣಿಮಾ. ಶ್ರೀಮಂತರಾಗಿದ್ದರೂ ಸರಳರು. ಸಮಾಜಸೇವೆಯಲ್ಲಿಯೂ ತೊಡಗಿಕೊಂಡವರು. ಅವರು ಸಹಾ ತಮ್ಮದೇ ಬಿಸಿನೆಸ್ ಮಾಡುತ್ತಿದ್ದರು.


ಸುಮತಿ ಮುಚ್ಚು ಮರೆ ಇಲ್ಲದೆ ಎಲ್ಲವನ್ನೂ ಹೇಳಿಕೊಂಡಿದ್ದಳು. ಅವಳ ನೇರವಂತಿಕೆ, ಚುರುಕುತನ, ಸತ್ಯವಂತಿಕೆ ಹಾಗೂ ಕೆಲಸದವಳ ಮಗಳು ಎಂದು ಹೆಮ್ಮೆಯಿಂದ ಹೇಳಿರುವ ಹೇಳಿಕೊಳ್ಳುವ ಗುಣ ಎಲ್ಲರಿಗೂ ಬಹಳ ಮೆಚ್ಚುಗೆಯಾಗಿತ್ತು. ಎಲ್ಲವನ್ನು ತಿಳಿದೂ ಈ ಮದುವೆಗೆ ಮುಂದುವರೆಯುವ ಸೂಚನೆ ಸಿಕ್ಕಿತು. ಎಲ್ಲರ ಮೆಚ್ಚಿನವಳಾಗಿದ್ದಳು ಸುಮತಿ. 


ಮೊದಲನೇ ಸೊಸೆ ಇದಕ್ಕೆ ವ್ಯತಿರಿಕ್ತವಾಗಿದ್ದವಳು. ಸದಾ ತನ್ನ ಪಾಡಿಗೆ ತಾನು ಸೋಮಾರಿತನದಿಂದ ಇದ್ದವಳು. ಅಲ್ಲದೆ ಮನೆಯವರೊಡನೆ ಹೊಂದಿಕೊಳ್ಳದೇ ಇದ್ದವಳು. ಓದಿನಲ್ಲಿಯೂ ಹಿಂದೆ. ಆದರೆ, ಶ್ರೀಮಂತಿಕೆಯಿತ್ತು. ಅವಳನ್ನು ಸಹಿಸಿಕೊಂಡು, ಸುಧಾರಿಸಿಕೊಂಡು ಹೋಗುತ್ತಿದ್ದರು ಮನೆಯವರು. ಮೊದಲ ಸೊಸೆಗಿಂತ ಎರಡನೇ ಸೊಸೆ ಎಲ್ಲರ ಮನ ತುಂಬಿದಳು.


ಪ್ರದೀಪನ ಹೆಂಡತಿ ಅಂದರೆ ಮನೆಯ ಮೊದಲ ಸೊಸೆಯ ಹೆಸರು ಶಾಲಿನಿ.


ಈ ಶಾಲಿನಿ ಹಾಗೂ ಮೀನಾಕ್ಷಮ್ಮನವರ ಮಗಳು ಶಾಲಿನಿ ಇಬ್ಬರೂ ಒಬ್ಬರೇ..?? ಮುಂದೆ ಸುಮತಿಗೆ ಮೀನಾಕ್ಷಮ್ಮನ ಭೇಟಿಯಾದಾಗ ಆಕೆಯ ಪ್ರತಿಕ್ರಿಯೆ ಹೇಗಿರಬಹುದು.. ತನ್ನ ಅಭೀಷ್ಟದಂತೆ ತನ್ನ ಓದು, ಉದ್ಯೋಗವನ್ನು ಪಡೆದ ಸುಮತಿಯ ವಿವಾಹ ಹೇಗಾಯಿತು..?  ಎಲ್ಲವನ್ನೂ ತಿಳಿಯಲು ಓದಿ ಅಭೀಷ್ಟ ಕಾದಂಬರಿಯನ್ನು.


ದೀಪಕ್ ಮನೆಯವರ ನಿಲುವು ಬಹಳ ಸೆಳೆಯುತ್ತದೆ. ಅಲ್ಲದೆ, ಸುಮತಿ ಹಾಗೂ ಶಿವಮ್ಮನವರ ಧೀಮಂತಿಕೆ ಬಹಳವೇ ಇಷ್ಟವಾಗುತ್ತದೆ. ಯಾವ ವೃತ್ತಿಯೂ ಕೀಳಲ್ಲ, ಕಡಿಮೆಯದ್ದಲ್ಲ ಎಂದು ತೋರುವ ಭಾವನೆ ಬಹಳ ಇಷ್ಟವಾಯಿತು. ಅಲ್ಲದೇ, ಹೆಣ್ಣುಮಕ್ಕಳ ಓದು, ವಿದ್ಯೆಯ ಮಹತ್ವ ಹಾಗೂ ದುಡಿಯುವ ಛಾತಿಯ ಕುರಿತ ನಿಲುವು ಇಷ್ಟವಾಯಿತು. ಪಾಸಿಟಿವಿಟಿ ತುಂಬುವ ಚೆಂದದ ಕಾದಂಬರಿಯ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ