ದ್ವಿಚಕ್ರ ವಾಹನ ಸಾಮ್ರಾಜ್ಯದ ಅಧಿಪತಿಯಾಗಿದ್ದ ಹೀರೋ - ಹೋಂಡಾ. ಅಧಿಪತಿಯಾಗಿದ್ದ ಎಂಬ ಪದವನ್ನು ನಾವು ಇಲ್ಲಿ ವಿಶೇಷವಾಗಿ ಗಮನಿಸಬೇಕಾಗುತ್ತದೆ. ಏಕೆಂದರೆ, ಈಗ ಈ ಅಧಿಪತ್ಯ ಇಲ್ಲ. ಅರೆ ! ಇದೇನಿದು ? ಎಂದು ಯೋಚಿಸುತ್ತಿದ್ದೀರಾ.. ಹೀರೋ ಕೂಡಾ ಇದೆ ಹೋಂಡಾ ಕೂಡಾ ಇದೆ. ಆದರೆ, ಹೀರೋ ಹೋಂಡಾ ಕಂಪನಿ ಈಗಿಲ್ಲ. ಅಯ್ಯೋ.. ಕನ್ಪ್ಯೂಸ್ ಆಗ್ತಾ ಇದೆಯಾ ? ಹೌದು, ಇವೆರಡು ಬೇರೆ ಬೇರೆ ಕಂಪೆನಿಗಳು. ಹೀರೋ ಕಂಪೆನಿ ಭಾರತ ಮೂಲದ್ದಾದರೆ, ಹೋಂಡಾ ಕಂಪೆನಿ ಜಪಾನ್ ಮೂಲದ್ದು. ಇವೆರಡು ಬೇರಾದದ್ದು ಏಕೆ ? ಹೇಗೆ ? ಎನ್ನುವ ಮೊದಲು ಒಂದಾದ ಕುರಿತು ತಿಳಿಯೋಣ.
ಜಪಾನ್ ನಲ್ಲಿದ್ದ ಒಬ್ಬ ಮೆಕ್ಯಾನಿಕ್ ನ ಮಗನಿಗೆ ವಾಹನಗಳ ಕುರಿತು ಓದಿ ಕಲಿಯುವುದರಲ್ಲಿ ಆಸಕ್ತಿ ಇರಲಿಲ್ಲ. ಟ್ರೆಡಿಷನಲ್ ಓದಿನ ಬದಲಾಗಿ ಆತ ಪ್ರಯೋಗಗಳನ್ನು ಮಾಡಿ , ಕೈಯಲ್ಲಿ ವಾಹನಗಳ ಬಿಡಿ ಭಾಗಗಳನ್ನು ಹಿಡಿದು ಕಲಿಯುವುದರಲ್ಲಿ ಆಸಕ್ತಿ ತೋರಿದ್ದ. ಆ ಆಸಕ್ತಿ ಯಾವ ಮಟ್ಟಕ್ಕಿತ್ತೆಂದರೆ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಒಂದು ವಾಹನವನ್ನು ಬಿಚ್ಚಿ ಜೋಡಿಸುವ ಕಲೆ ನೀರು ಕುಡಿದಷ್ಟೇ ಸುಲಭವಾಗಿತ್ತು. ಆದರೆ, ಅವನಿಗಿದ್ದ ಕನಸು ಆ ಕಾಲದ ಖ್ಯಾತ ಕಂಪೆನಿ ಟೊಯೋಟಾದಲ್ಲಿ ಕೆಲಸ ಮಾಡುವುದು. ಅದಕ್ಕಾಗಿ ಅವನು ಮೊದಲಿಗೆ ಬೈಕ್ ಇಂಜಿನ್ ಗೆ ಬೇಕಾದ ರಿಂಗ್, ಕಾರುಗಳ ಪಿಸ್ಟನ್ ರಿಂಗ್ ಅನ್ನು ತಯಾರಿಸಲು ತೊಡಗುತ್ತಾನೆ. ಅದನ್ನು ತೆಗೆದುಕೊಂಡು ಹೋಗಿ ಟೊಯೋಟಾ ಕಂಪೆನಿಯ ಉನ್ನತ ಅಧಿಕಾರಿಗಳಿಗೆ ತೋರಿಸಿದಾಗ.. ಅವರು ಆತನ ಪಿಸ್ಟನ್ ರಿಂಗ್ ತಯಾರಿಕೆಯ ಗುಣಮಟ್ಟದ ಬಗ್ಗೆ ನಂಬಿಕೆ ಇಡದೆ, ನೀನು ಯಾವ ಆಟೋಮೊಬೈಲ್ ಕುರಿತ ಓದನ್ನೂ ಓದಿಲ್ಲ ಎಂದು ಅವನ ಜ್ಞಾನದ ಬಗ್ಗೆ ಬೆರಳು ಮಾಡಿ ತೋರಿಸುತ್ತಾರೆ.
ಅದೇ ಹಠದಲ್ಲಿ ಆಟೋಮೊಬೈಲ್ ಡಿಪ್ಲೊಮಾ ಮಾಡಿ ಆ ಪಿಸ್ಟನ್ ರಿಂಗ್ ಅನ್ನು ಉನ್ನತೀಕರಣಗೊಳಿಸಿ ಮತ್ತೆ ಟೊಯೋಟಾ ಕಂಪೆನಿಗೆ ಹೋಗುತ್ತಾರೆ. ಗುಣಮಟ್ಟದಲ್ಲಿ ಉತ್ಕೃಷ್ಟವಾಗಿದ್ದ ಅದನ್ನು ನಿರಾಕರಿಸಲು ಕಾರಣವಿರಲಿಲ್ಲ. ಆದರೆ, ಅಷ್ಟು ಪಿಸ್ಟನ್ ರಿಂಗ್ ಆರ್ಡರ್ ಕೊಡಲು ಹಿಂದೇಟು ಹಾಕುತ್ತಾರೆ. ಆದರೆ, ಛಲ ಬಿಡದೆ ಆರ್ಡರ್ ಪಡೆದುಕೊಂಡು, ಅದೇ ಆರ್ಡರ್ ಕಾಪಿ ತೋರಿಸಿ ಬ್ಯಾಂಕ್ ನಿಂದ ಸಾಲ ಪಡೆದು ಫ್ಯಾಕ್ಟರಿ ನಿರ್ಮಿಸುತ್ತಾರೆ. ದೂರದೃಷ್ಟವೆಂದರೆ, ಅಲ್ಪ ಸಮಯದಲ್ಲಿಯೇ ಆ ಫ್ಯಾಕ್ಟರಿ ಮೇಲೆ ಬಾಂಬು ಬಿದ್ದು ನಾಶವಾಗುತ್ತದೆ. ಕಾರಣ, ಅದು ಎರಡನೇ ಮಹಾಯುದ್ಧದ ಸಮಯ. ಈ ನಷ್ಟವನ್ನು ತುಂಬಿಸಲು ಬ್ಯಾಂಕ್ ಬಳಿ ಹೋಗಿ ಪರಿಸ್ಥಿತಿಯನ್ನು ವಿವರಿಸಿದರೂ.. ಬ್ಯಾಂಕ್ ಸಾಲ ನೀಡಲು ಒಪ್ಪುವುದಿಲ್ಲ. ಸ್ನೇಹಿತರು, ಸಂಬಂಧಿಕರ ಬಳಿ ಹಣ ಪಡೆದು ಫ್ಯಾಕ್ಟರಿ ನಿರ್ಮಿಸಲು ಹೊರಡುತ್ತಾರೆ.
ಕಷ್ಟದ ಮೇಲೆ ಕಷ್ಟ ಎಂಬಂತೆ.. ಆ ಫ್ಯಾಕ್ಟರಿ 95% ನಿರ್ಮಾಣವಾದಾಗ ಭೂಕಂಪದಿಂದ ನೆಲ ಕಚ್ಚುತ್ತದೆ. ಈ ಎಲ್ಲಾ ಸಾಲಗಳ ಹೊರೆ ಹೊತ್ತು ಗತ್ಯಂತರವಿಲ್ಲದೆ.. ಟೋಕಿಯೋದಲ್ಲಿ ಮೆಕ್ಯಾನಿಕ್ ಬಳಿ ಕೆಲಸಕ್ಕೆ ಸೇರುತ್ತಾರೆ. ಆದರೆ, ಆ ನಗರದಲ್ಲಿ ಖರ್ಚು ಹೆಚ್ಚಾಗಿದ್ದರಿಂದ 10 ಕಿಲೋಮೀಟರ್ ದೂರದ ಹಳ್ಳಿಯೊಂದಕ್ಕೆ ವಾಸ್ತವ್ಯ ಬದಲಾಯಿಸುತ್ತಾರೆ. ದಿನಾ ಅಲ್ಲಿಂದ ಸೈಕಲ್ ತುಳಿಯುವುದು ಕಷ್ಟವಾದ್ದರಿಂದ ತಾನೇ ತಯಾರಿಸಿದ ಮೋಟಾರ್ ಸೈಕಲ್ ತಯಾರಿಸಿ ಪ್ರಯಾಣಿಸುತ್ತಿರುತ್ತಾರೆ. ಕಂಫರ್ಟಬಲ್ ಇರುವ ಆ ಮಾದರಿಯ ವಾಹನ ಇಷ್ಟವಾಗಿ ಬೇಡಿಕೆಯೂ ಹೆಚ್ಚಾದಾಗ 1946 ರಲ್ಲಿ ತನ್ನದೇ ಮೋಟಾರ್ ಸೈಕಲ್ ಕಂಪನಿ ಶುರುಮಾಡುತ್ತಾನೆ. ಆ ಕಂಪೆನಿಯೇ ಹೋಂಡಾ. ಕೊರಿಯನ್ ಭಾಷೆಯಲ್ಲಿ ಹೋಂಡಾ ಎಂದರೆ ತಾಜಾ ಕಲ್ಪನೆ ಎಂದು. ಎಷ್ಟೆಲ್ಲಾ ಏಳು - ಬೀಳುಗಳ ನಡುವೆ ಕಂಪೆನಿ ಸ್ಥಾಪಿಸಿದ ಸಾಹಸಿಯೇ ಸೊಯಿಚಿರೋ ಹೋಂಡಾ.
ಮುಂದೆ, ಈ ಕಂಪೆನಿ ಬೈಕ್ ಹಾಗೂ ಕಾರು ತಯಾರಿಕೆಗೆ ಜಪಾನ್ ನಲ್ಲಿಯೇ ಪ್ರಸಿದ್ಧವಾಯಿತು. ಈತನ ಕಾರ್ಯ ವೈಖರಿ ಹೇಗಿತ್ತೆಂದರೆ, ತನ್ನ ಕಂಪೆನಿಯ ಪ್ರತಿಯೊಂದು ಕಾರನ್ನೂ ತಾನೂ ಟೆಸ್ಟ್ ಮಾಡುತ್ತಿದ್ದ. ಅಲ್ಲದೆ, ಈ ಕಂಪೆನಿಯನ್ನು ತನ್ನ ವಂಶ, ವಾರಸುದಾರರು ಮಾತ್ರ ಮುನ್ನಡೆಸಿಕೊಂಡು ಹೋಗಲೆನ್ನುವ ಸ್ವಾರ್ಥ ತೊರೆದು ಆ ಕಂಪೆನಿಯ ಪ್ರಾಮಾಣಿಕ ಅಧಿಕಾರಿಗಳಿಗೆ ಸ್ಥಾನ ನೀಡಿದ್ದ. ಇಂತಹಾ ಕಂಪೆನಿ ಭಾರತದಲ್ಲಿಯೂ ತನ್ನ ಬ್ರ್ಯಾಂಡ್ ಸ್ಥಾಪಿಸಲು ಯೋಚಿಸುತ್ತಿತ್ತು. ಇಂತಹಾ ಮತ್ತೊಂದು ಪ್ರಾಮಾಣಿಕ ಕನಸು ಕಾಣುತ್ತಿದ್ದದ್ದು ಭಾರತದ 'ಹೀರೋ' ಕಂಪೆನಿ.
ಹೀರೋ ಕಂಪೆನಿ ಬ್ರಿಜ್ ಮೋಹನ್ ಲಾಲ್ ಮುಂಜಾಲ್ ಹಾಗೂ ಆತನ ಇಬ್ಬರು ಸಹೋದರರ ಕನಸಿನ ಕೂಸು. ಮೊದಲಿಗೆ ಸೈಕಲ್ ನ ಬಿಡಿಭಾಗಗಳನ್ನು ಮಾತ್ರ ತಯಾರಿಸುತ್ತಿತ್ತು. ನಂತರದಲ್ಲಿ ಸೈಕಲ್ ತಯಾರಿಕೆಗೆ ಮುಂದಡಿ ಇಟ್ಟಿತು. ಜನರಿಗೆ ಈ ಸೈಕಲ್ ಗಳು ಕಂಫರ್ಟಬಲ್ ಎನ್ನಿಸಿ ಬೇಡಿಕೆ ಇಟ್ಟಿತು. 1975 ರಲ್ಲಿ ಸರ್ಕಾರದಿಂದ ಅಧಿಕೃತವಾಗಿ ಲೈಸೆನ್ಸ್ ಪಡೆದು ಚಿಕ್ಕದಾಗಿ ಶುರುವಾದ ಈ ಕಂಪೆನಿ 1986 ರ ಹೊತ್ತಿಗೆ ವಿಶ್ವದ ಅತಿ ದೊಡ್ಡ ಸೈಕಲ್ ತಯಾರಿಕಾ ಕಂಪೆನಿ ಎನ್ನುವ ಗಿನ್ನಿಸ್ ದಾಖಲೆ ಬರೆಯಿತು. 20 ವರ್ಷಗಳಲ್ಲಿ 50 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಬ್ಯುಸಿನೆಸ್ ಸಾಮ್ರಾಜ್ಯವನ್ನು ಹರಡಿಕೊಂಡಿತು. 1995 ರ ಹೊತ್ತಿಗೆ ಈ ಕಂಪೆನಿಯಲ್ಲಿ ದಿನವೊಂದಕ್ಕೆ 13000 ಕ್ಕೂ ಹೆಚ್ಚು ಸೈಕಲ್ ತಯಾರಾಗುತ್ತಿದ್ದವು. ಅತ್ಯಂತ ಬ್ಯುಸಿ ಹಾಗೂ ಯಶಸ್ವಿ ಸಂಸ್ಥೆ ಎಂಬ ಹೆಗ್ಗಳಿಕೆ ಇದರದ್ದು.
ಬ್ಯುಸಿನೆಸ್ ನಲ್ಲಿ ಸದಾ ಹೊಸ ಆಲೋಚನೆಗಳು ಹುಟ್ಟಿ ಕಾರ್ಯರೂಪಕ್ಕೆ ಬರುತ್ತಿರಬೇಕು. 1983 ರ ಸಮಯದಲ್ಲಿ ಹೀರೋ ಕಂಪೆನಿಯಲ್ಲಿ ಬೈಕ್ ತಯಾರಿಕೆಯ ಆಲೋಚನೆ ಉದ್ಭವಿಸಿತ್ತು. ಆದರೆ, ಟೆಕ್ನಾಲಜಿ ಕೊರತೆ ಇತ್ತು. ಆಗ ಟೆಕ್ನಾಲಜಿಯ ಅರಿವಿದ್ದ ಹೋಂಡಾ ಹಾಗೂ ಭಾರತದ ಮಾರ್ಕೆಟಿಂಗ್ ನ ಅಧಿಪತಿ ಹೀರೋ ಜಾಯಿಂಟ್ ವೆಂಚರ್ ಗೆ ಮುಂದಾದವು. ಈ ಆಲೋಚನೆಯ ಫಲವಾಗಿ 1984 ರ ಹೊತ್ತಿಗೆ ಹರಿಯಾಣದ ಧರುಹೇರಾದಲ್ಲಿ 'ಹೀರೋ ಹೋಂಡಾ' ಶುರುವಾಯಿತು. ಈ ರೀತಿಯ ಜಾಯಿಂಟ್ ವೆಂಚರ್ ನಲ್ಲಿ ಇದು ಮೊದಲನೆಯದ್ದೂ ಅಲ್ಲ.. ಕೊನೆಯದ್ದೂ ಅಲ್ಲ.. ಸುಜುಕಿ ಹಾಗೂ ಮಾರುತಿ, ಸುಜುಕಿ ಹಾಗೂ ಟಿ.ವಿ.ಎಸ್ , ಯಮಹಾ ಹಾಗೂ ಎಸ್ಕಾರ್ಟ್ಸ್ ಟ್ರಾಕ್ಟರ್ , ಬಜಾಜ್ ಹಾಗೂ ಕವಾಸಾಕಿ.. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ತಲಾ 26 % ಸ್ಟೇಕ್ಸ್ ಹೊಂದಿದ ಹೀರೋ ಹಾಗೂ ಹೋಂಡಾ 1985 ರಲ್ಲಿ ತಮ್ಮ ಮೊದಲ ಬೈಕ್ ಅನ್ನು ಬಿಡುಗಡೆ ಮಾಡಿದರು. ಅದೇ ಹೀರೋ ಹೋಂಡಾ ಸಿ.ಡಿ 100. 80 ಕಿಲೋ ಮೀಟರ್ ಮೈಲೇಜ್ ಕೊಡುವ 97 ಸಿ.ಸಿ ಬೈಕ್ ಕ್ಲಿಕ್ ಆಯಿತು. ಗಂಟೆಗೆ 90 ಕಿಲೋಮೀಟರ್ ಓಡುವ ಟಾಪ್ ಬೈಕ್. ಈ ಬೈಕ್ ಇಂಧನ ನಿರ್ವಹಣೆ ಹಾಗೂ ಕಡಿಮೆ ದರವೆಂದು ಪ್ರಸಿದ್ದಿಗೆ ಬಂದಿತ್ತು. ಫಿಲ್ ಇಟ್ - ಶಟ್ ಇಟ್ - ಕ್ಲೋಸ್ ಇಟ್. ಎಂದರೆ ಇಂಧನ ತುಂಬಿಸಿ, ಮುಚ್ಚಿ ಹಾಗೂ ಆ ಕುರಿತು ಮರೆತುಬಿಡಿ ಎಂಬುದನ್ನು ಸ್ಲೋಗನ್ ಮಾಡಿಕೊಂಡಿದ್ದರು.
1989 ರಲ್ಲಿ ಅವರು ಹೊಸ ಮೋಟಾರ್ ಸೈಕಲ್ ಮಾದರಿ ಸ್ಲೀಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. 1991 ರಲ್ಲಿ ಅವರು ಹೊಸ ಮತ್ತು ನವೀಕರಿಸಿದ ಮೋಟಾರ್ ಸೈಕಲ್ ಸಿ.ಡಿ 100 ಎಸ್.ಎಸ್ ಬಂದಿತು. ಅದೇ ವರ್ಷ, ಕಂಪನಿಯು 5 ಲಕ್ಷ ಮೋಟಾರ್ ಸೈಕಲ್‌ಗಳನ್ನು ಉತ್ಪಾದಿಸಿ ಮೈಲಿಗಲ್ಲನ್ನು ಸ್ಥಾಪಿಸಿತು.
ನಂತರ 1994-95 ರಲ್ಲಿ , ಭಾರತೀಯ ಮಾರುಕಟ್ಟೆಯಲ್ಲಿ ಐಕಾನಿಕ್ ಮೋಟಾರ್‌ಸೈಕಲ್ ಬಂದಿತು, ಇದೇ ಹೀರೋ ಹೋಂಡಾ ಸ್ಪ್ಲೆಂಡರ್. ಅತಿ ಹೆಚ್ಚು ಮಾರಾಟವಾಗಿರುವ ದಾಖಲೆಯ ಹೆಗ್ಗಳಿಗೆ ಇದರದ್ದು.1997 ರಲ್ಲಿ ಹರಿಯಾಣದ ಗುರ್‌ಗಾಂವ್‌ನಲ್ಲಿ ಎರಡನೇ ಉತ್ಪಾದನಾ ಘಟಕ ಶುರುವಾಯಿತು. 1999 ರಲ್ಲಿ ಬಂದ ಹೀರೋ ಹೋಂಡಾ ಸಿ.ಬಿ.ಜಡ್. 100 ಕಿ.ಮೀ/ಗಂಟೆಯನ್ನು ದಾಟಿದ ಕಂಪನಿಯ ಮೊದಲ ಮೋಟಾರ್ ಸೈಕಲ್.
2001ರಲ್ಲಿ ಹೀರೋ ಹೋಂಡಾ ಎರಡು ಮೋಟಾರ್ ಸೈಕಲ್ ಬಿಡುಗಡೆ ಮಾಡಿತು. ಪ್ರೀಮಿಯಂ ಖರೀದಿದಾರರನ್ನು ಗುರಿಯಾಗಿಸಿಕೊಂಡು ಹೀರೋ ಹೋಂಡಾ ಪ್ಯಾಶನ್ ಮತ್ತು ಹೀರೋ ಹೋಂಡಾ ಜಾಯ್. 2003 ರಲ್ಲಿ ಬಂದ ಹೀರೋ ಹೋಂಡಾ ಕರಿಜ್ಮಾ, 130 ಕಿ.ಮೀ/ಗಂಟೆಗಿಂತ ಹೆಚ್ಚಿನ ವೇಗವನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿತ್ತು, ಆದ್ದರಿಂದ ಇದನ್ನು ದಶಕದ ಹೆಚ್ಚಿನ ವೇಗದ ಪ್ರವಾಸದ ವಾಹನ ಎಂದು ಪರಿಗಣಿಸಲಾಗಿದೆ.
ಹೀರೋ ಹೋಂಡಾ ತಯಾರಿಸಿದ ಬೈಕ್‌ಗಳ ಸಂಖ್ಯೆಗೆ ಸಂಬಂಧಿಸಿದಂತೆ ವಿಶ್ವದ #1 ಮೋಟಾರ್‌ಸೈಕಲ್ ತಯಾರಕರ ಟ್ಯಾಗ್ ಅನ್ನು ಪಡೆದುಕೊಂಡಿದೆ. 2006 ರ ಫೋರ್ಬ್ಸ್ ಲಿಸ್ಟ್ ನ ಟಾಪ್ 200 ಗೌರವಯುತ ಕಂಪೆನಿಯ 108 ನೇ ಸ್ಥಾನದಲ್ಲಿದೆ. ಟ್ರಸ್ಟ್ ರಿಸರ್ಚ್ ಅಡ್ವೈಸರಿಯ ಬ್ರ್ಯಾಂಡ್ ಟ್ರಸ್ಟ್ ರಿಪೋರ್ಟ್ ನಲ್ಲಿ 7 ನೇ ಸ್ಥಾನದಲ್ಲಿದೆ.
ಇಷ್ಟೆಲ್ಲಾ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಹೀರೋ ಹೋಂಡಾ ಕಂಪೆನಿ ಡಿ-ಮರ್ಜ್ ಆಯಿತು. 2010 ಡಿಸೆಂಬರ್ ನಲ್ಲಿ 26 ವರ್ಷದ ಒಪ್ಪಂದ ಕೊನೆಯಾಯಿತು. ಹೀರೋ ಕಂಪೆನಿಯವರೇ ಹೋಂಡಾದ 26 % ಸ್ಟೇಕ್ಸ್ ಗೆ 6400 ಕೋಟಿ ಕೊಟ್ಟು ಕೊಂಡುಕೊಂಡರು. ಆದರೆ, ಟೈ ಅಪ್ ಸಂಪೂರ್ಣವಾಗಿ ಮುರಿದು ಬಿದ್ದಿರಲಿಲ್ಲ. ಹತ್ತು ವರ್ಷಗಳಿಗೆ ನವೀಕರಿಸಿದ್ದ 2014 ರ ವರೆಗೂ ಟೆಕ್ನಾಲಜಿ ಟೈ ಅಪ್ ಇದ್ದಿತು. ಹೀರೋ ಅದಕ್ಕೆ ರಾಯಲ್ಟಿ ಹಣವನ್ನೂ ಕೊಟ್ಟಿತು. ಹೋಂಡಾ ಈಗ ಹೋಂಡಾ ಮೋಟಾರ್ ಸೈಕಲ್ & ಸ್ಕೂಟರ್ ಇಂಡಿಯಾ (ಹೆಚ್. ಎಂ.ಎಸ್.ಐ) ಎಂಬ ಹೆಸರಿನಲ್ಲಿ ಹರಿಯಾಣದ ಕೇಂದ್ರ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದೆ.
29 ಜುಲೈ 2011 ರಿಂದ ಹೀರೋ, ಹೀರೋ ಮೋಟೋಕಾರ್ಪ್ ಎಂಬ ಹೆಸರಿನಿಂದ ಬ್ರಿಟಿಷ್ ಸಂಸ್ಥೆ ವೋಲ್ಫ್ ಒಲಿನ್ಸ್ ಕಂಪನಿಯ ಹೊಸ ಲೋಗೋ ಉಪಯೋಗಿಸಿಕೊಂಡು ಹೊಸ ರೂಪದಿಂದ ದೇಹಲಿಯನ್ನು ಕೇಂದ್ರ ಕಛೇರಿಯನ್ನಾಗಿಸಿಕೊಂಡು 6 ಘಟಕಗಳಿಂದ ತನ್ನದೇ ಟೆಕ್ನಾಲಜಿ ಬಳಸಿ ಹೊಸ ಹೊಸ ಐಡಿಯಾಗಳೊಂದಿಗೆ ಉತ್ಪಾದನೆಯಲ್ಲಿದೆ.ಹೀರೋ ಇಂಪಲ್ಸ್ ಎಂಬುದು ಹೀರೋ ಮೋಟೋಕಾರ್ಪ್‌ನಿಂದ ಮಾತ್ರ ಬಿಡುಗಡೆಯಾದ ಮೊದಲ ಮೋಟಾರ್‌ಸೈಕಲ್. ವಿಶ್ವದ ಅತ್ಯಂತ ಹೆಚ್ಚು ಇಂಧನ-ಸಮರ್ಥ ಮೋಟಾರ್‌ಸೈಕಲ್ ಪ್ರಶಸ್ತಿ ಪಡೆದುಕೊಂಡ ಹೀರೋ ಇಸ್ಮಾರ್ಟ್ ಭಾರತದಲ್ಲಿ 110 ಕಿಮೀ/ಲೀಟರ್‌ನ ಅತ್ಯಧಿಕ ಇಂಧನ ಆರ್ಥಿಕತೆಯನ್ನು ಹಾಗೂ ಹೊಸ ಐ3ಎಸ್ ತಂತ್ರಜ್ಞಾನವನ್ನು ಹೊಂದಿದ ಮೊದಲ ಮೋಟಾರ್‌ಸೈಕಲ್. ಹೀರೋ ಮೋಟೋಕಾರ್ಪ್ ಈಗ ದಿನವೊಂದಕ್ಕೆ ಸುಮಾರು 9,500 ದ್ವಿಚಕ್ರ ವಾಹನಗಳನ್ನು ಉತ್ಪಾದಿಸುತ್ತದೆಇಂದಿಗೂ ಭಾರತದ ದ್ವಿಚಕ್ರ ವಾಹನದ ಮಾರ್ಕೆಂಟಿಂಗ್ ಶೇರ್ ನಲ್ಲಿ ಹೀರೋಗೆ 37% ಹಾಗೂ ಹೋಂಡಾಗೆ 26% ಷೇರ್ಸ್ ಇವೆ.
ಎರಡೂ ಕಂಪೆನಿಗಳು ಡಿ- ಮರ್ಜ್ ಆಗಿರುವುದಕ್ಕೆ ಏನೆಲ್ಲಾ ಕಾರಣಗಳಿದ್ದರೂ.. ಅಧಿಕೃತವಾಗಿ ನೀಡಿರುವ ಕಾರಣವೆಂದರೆ ಹೀರೋಹೋಂಡಾದಿಂದ ಕೇವಲ ಭಾರತ, ನೇಪಾಳ,ಬಾಂಗ್ಲಾ ದೇಶ ಹಾಗೂ ಶ್ರೀಲಂಕಾಕ್ಕೆ ಮಾತ್ರ ವಹಿವಾಟು ನಡೆಸಬಹುದಿತ್ತು. ಆದರೆ, ಹೀರೋ ಕಂಪೆನಿಯು ಇನ್ನೂ ಹೆಚ್ಚಿನ ದೇಶಗಳಲ್ಲಿ ತಮ್ಮ ಬ್ಯುಸಿನೆಸ್ ಸಾಮ್ರಾಜ್ಯ ವಿಸ್ತರಿಸಲು ಬಯಸಿದ್ದರು. ಅದಕ್ಕೆ ಹೋಂಡಾ ಒಪ್ಪಲಿಲ್ಲ. ಕಾರಣ, ಆ ದೇಶಗಳಲ್ಲಿ ಹೋಂಡಾದ ಬ್ರ್ಯಾಂಡ್ ವ್ಯಾಲ್ಯೂ ಹಾಗೂ ಲಾಭ ಕಡಿಮೆಯಾದರೆ ಎಂದು. ಡಿ- ಮರ್ಜ್ ಆದ ಬಳಿಕ ಹೀರೋ ಮೋಟೋಕಾರ್ಪ್ ಲ್ಯಾಟಿನ್ ಅಮೇರಿಕಾ, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾಕ್ಕೆ ಅನೇಕ ಮೋಟಾರ್‌ಸೈಕಲ್‌ಗಳನ್ನು ರಫ್ತು ಮಾಡುತ್ತಿದೆ.
ಹೀರೋ ಹೋಂಡಾ, ಹೀರೋ, ಹೋಂಡಾಗಳ ಮೋಟಾರ್ ಸೈಕಲ್ ಗಳು ಬಹಳಷ್ಟು ಮಾಡೆಲ್ ನಲ್ಲಿ ಬಂದಿವೆ, ಬರುತ್ತಿವೆ. ಮೇಲೆ ಉಲ್ಲೇಖಿಸಿರುವುದು ಬಹಳ ಪ್ರಸಿದ್ದಿಯಾದ ಕೆಲವು ಬ್ರ್ಯಾಂಡ್ ಗಳನ್ನು ಮಾತ್ರ.
ಎಷ್ಟೇ ವಿಫಲವಾದರೂ ಬೂದಿಯಿಂದಲೂ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಬಹುದೆಂದು ತೋರಿಸಿದ ಹೋಂಡಾ ಹಾಗೂ ಪ್ರತಿದಿನ ಹೊಸ ಆವಿಷ್ಕಾರ, ಐಡಿಯಾಗಳೊಂದಿಗೆ ಸೇಲ್ಸ್, ಕ್ವಾಲಿಟಿ ಜೊತೆಗೆ ಗ್ರಾಹಕರ ಸಂತೃಪ್ತಿ ಎಂಬ ಮಾನದಂಡಗಳಿಂದ ಬ್ಯುಸಿನೆಸ್ ಮುನ್ನಡೆಸುತ್ತಿರುವ ಹೀರೋ ಎರಡೂ ದ್ವಿಚಕ್ರ ವಾಹನದ ಬ್ಯುಸಿನೆಸ್ ನಲ್ಲಿ ಅಳಿಸಲಾರದ ಹೆಸರುಗಳು. ಎರಡೂ ಒಟ್ಟಾಗಿ ಜಾಯಿಂಟ್ ವೆಂಚರ್ ನಿಂದ ಮುನ್ನಡೆದದ್ದು ಹಾಗೂ ಬೇರೆಯಾಗಿದ್ದೂ ಸಹಾ ಬ್ಯುಸಿನೆಸ್ ನಲ್ಲಿ ಕಾಲಕ್ಕೆ ತಕ್ಕಂತೆ ಬದುಕುವ, ಬದಲಾಗುವ, ಮುನ್ನಡೆಯುವ ಪಾಠಕ್ಕೆ ಪ್ರೇರಣೆಯಂತಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ