ಬುಧವಾರ, ಏಪ್ರಿಲ್ 22, 2026

ಎರಡು ಶತಮಾನಗಳ ಹಳೆಯ ರಿಫ್ರೆಶಿಂಗ್ ಬ್ರ್ಯಾಂಡ್ ಕೋಲ್ಗೇಟ್ ( ಬ್ಯುಸಿನೆಸ್ ಡೈರಿ -04)


ಕೋಲ್ಗೇಟ್ ಎಂದರೆ ಟೂಥ್ ಪೇಸ್ಟ್ ಎನ್ನುವಷ್ಟು ಬ್ರಾಂಡ್ ನೇಮ್ ಪಡೆದಿರುವ ಈ ಕೋಲ್ಗೇಟ್ ನ ಇತಿಹಾಸ ನಿನ್ನೆ - ಮೊನ್ನೆಯದ್ದಲ್ಲ. ಈ ಕಂಪೆನಿಗೆ ಶುರುವಾಗಿದ್ದು 217 ವರ್ಷಗಳ ಹಿಂದೆ. ಹೌದು, ಎರಡು ಶತಮಾನಗಳೇ ಕಳೆದು ಹೋದರೂ ಸಹಾ ಇಂದಿಗೂ ತನ್ನ ಗುಣಮಟ್ಟ, ಬೆಲೆ ಹಾಗೂ ಮಾರ್ಕೆಂಟಿಂಗ್ ತಂತ್ರಗಳಿಂದ ಅದೇ ಬೆಲೆಯನ್ನು ಹಾಗೂ ಹೆಸರನ್ನು ಉಳಿಸಿಕೊಂಡು ಬಂದಿದೆ. ಹಾಗೆಂದು, ಕೋಲ್ಗೇಟ್ ಟೂಥ್ ಪೇಸ್ಟ್ ಗೆ ಇರುವ ಪ್ರತಿಸ್ಪರ್ಧಿಗಳೂ ಕಡಿಮೆಯೇನಿಲ್ಲ. ಪೆಪ್ಸೋಡೆಂಟ್, ಕ್ಲೋಸ್ - ಅಪ್, ಪತಂಜಲಿ, ಇಮಾಮಿ, ಸೆನ್ಸೋಡೈನ್, ಡಾಬರ್, ಮೆಸ್ವಾಕ್ , ಹಿಮಾಲಯ ಹೀಗೆ ಇವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಾಗೆಂದು, ಕೋಲ್ಗೇಟ್ ಕೇವಲ ಟೂಥ್ ಪೇಸ್ಟ್ ಅಥವಾ ಬಾಯಿಯ ನೈರ್ಮಲ್ಯದ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡಿಲ್ಲ.


ಕೋಲ್ಗೇಟ್ ನ ಮೊದಲ ಪ್ರಾಡಕ್ಟ್ ನಾವೆಂದುಕೊಳ್ಳುವಂತೆ ಟೂಥ್ ಪೇಸ್ಟ್ ಅಲ್ಲವೇ ಅಲ್ಲ.. ಹೌದು, ಬ್ಯುಸಿನೆಸ್ ನಲ್ಲಿ ಮೊದಲ ಬಾರಿಗೇ ಗೆಲುವಿನ ಹೆಜ್ಜೆ ಇಟ್ಟವರು ಕಡಿಮೆಯೇ.. ದೊಡ್ಡ ಸೋಲಿನ ಹೆಜ್ಜೆಗಳ ಮೇಲೆ ಗೆಲುವಿನ ಹೆಜ್ಜೆ ಊರಿ ನಿಂತವರೇ ಹೆಚ್ಚು. ಕೋಲ್ಗೇಟ್ ಎಂದಲ್ಲ.. ಎಷ್ಟೋ ಬ್ಯುಸಿನೆಸ್ ಗಳು ಹೀಗೆಯೇ.. ಇಂದು ಬ್ರ್ಯಾಂಡ್ ನೇಮ್ ಪಡೆದಿರುವ ನೋಕಿಯಾದ ಮೊದಲ ಪ್ರಾಡಕ್ಟ್ ಟಾಯ್ಲೆಟ್ ಪೇಪರ್, ಸೋನಿ ಮೊದಲು ಬ್ಯುಸಿನೆಸ್ ಶುರು ಮಾಡಿದ್ದು ಎಲೆಕ್ಟ್ರಿಕ್ ರೈಸ್ ಕುಕ್ಕರ್ ಗಳಿಂದ, ಸ್ಯಾಮ್ ಸಂಗ್ ಮೊದಲಿಗೆ ಹೆಜ್ಜೆ ಇಟ್ಟದ್ದು ಹಣ್ಣು ಹಾಗೂ ಮೀನು ಮಾರಾಟದಿಂದ.. ಹೀಗೆ ಹೇಳುತ್ತಾ ಹೋದರೆ ಉದ್ದದ ಪಟ್ಟಿಯೇ ಸಿಗಬಹುದು. ಕೋಲ್ಗೇಟ್ ನ ಮೊದಲ ಪ್ರಾಡಕ್ಟ್ ಕ್ಯಾಂಡಲ್. ಆದರೆ, ಅದು ಅವರ ಬ್ಯುಸಿನೆಸ್ ನ ಮೊದಲ ದೊಡ್ಡ ನಷ್ಟವೂ ಹೌದು. ಬ್ಯುಸಿನೆಸ್ ಶುರುವಾಗುವುದು ಎಂದು ಪ್ರಾಡಕ್ಟ್ ನಿಂದ ಆದರೂ.. ಕೈ ಹಿಡಿಯುವುದು ಮತ್ತೊಂದು. ಒಂದೇ ಪ್ರಾಡಕ್ಟ್ ಗೆ ಆಂಟಿ ಕೂತು ಛಲದಂಕ ಮಲ್ಲನಂತೆ ಸಾಧಿಸುವವರು ಒಂದೆಡೆಯಾದರೆ.. ಸೋಲಿನಿಂದ ವಿಭಿನ್ನವಾಗಿ ಯೋಚಿಸಿ, ತಮ್ಮಿಂದ ಮತ್ತೇನು ಮಾಡಲು ಸಾಧ್ಯ ಎಂದು ಕ್ರಿಯಾಶೀಲವಾಗಿ ಯೋಚಿಸಿ, ಕ್ರಿಯಾತ್ಮಕವಾದ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡುವವರು ಕೆಲವರು. ಜೀವಶಾಸ್ತ್ರದ ವಿಕಾಸವಾದದಷ್ಟೇ ಪರಿಣಾಮಕಾರಿ ಬ್ಯುಸಿನೆಸ್ ನ ವಿಕಾಸವಾದವೂ..


ಕೋಲ್ಗೇಟ್ ನ ಈ ಕ್ರಿಯಾಶೀಲವಾದ ತಯಾರಿಗೆ ಕಾರಣ ಹಾಗೂ ಕೋಲ್ಗೇಟ್ ಕಂಪೆನಿಯ ಸಂಸ್ಥಾಪಕ ವಿಲಿಯಂ ಕೋಲ್ಗೇಟ್. ವಿಲಿಯಂ ಕೋಲ್ಗೇಟ್ ಅವರು ಹುಟ್ಟಿದ್ದು ಜನವರಿ 25, 1783 ರಲ್ಲಿ. ಇಂಗ್ಲೆಂಡ್‌ನ ಕೆಂಟ್‌ನ ಹಾಲಿಂಗ್‌ಬೋರ್ನ್‌ನಲ್ಲಿ ನೆಲೆಸಿದ್ದ ರಾಬರ್ಟ್ ಕೋಲ್ಗೇಟ್ ಮತ್ತು ಅವರ ಪತ್ನಿ ಸಾರಾ ಅವರ ಮಗನೇ ವಿಲಿಯಂ. ವಿಲಿಯಂ ಆರು ವರ್ಷದವನಿದ್ದಾಗ ಅವರ ಕುಟುಂಬವು ಶೋರ್ಹ್ಯಾಮ್ ಬಳಿಯ ಜಮೀನಿಗೆ ಸ್ಥಳಾಂತರಗೊಂಡಿತು. ಇದಕ್ಕೆ ಕಾರಣ ಅವರ ತಂದೆ.


ರಾಬರ್ಟ್ ಕೋಲ್ಗೇಟ್ ರೈತರಾಗಿದ್ದರೂ ಸಹಾ ಅವರ ಗಣರಾಜ್ಯವಾದಿ ಆದರ್ಶಗಳು ಅವರನ್ನು 1978 ಮಾರ್ಚ್ ನಲ್ಲಿ ಕೆಂಟ್‌ನ ಶೋರ್‌ಹ್ಯಾಮ್‌ನಲ್ಲಿರುವ ತಮ್ಮ ಜಮೀನನ್ನು ತೊರೆದು ಬಾಲ್ಟಿಮೋರ್‌ಗೆ ವಲಸೆ ಹೋಗುವಂತೆ ಮಾಡಿದವು . ನಂತರ ಅಮೆರಿಕಾದ ಮೇರಿಲ್ಯಾಂಡ್ , ನಂತರ ಕುಟುಂಬವು ಮೇರಿಲ್ಯಾಂಡ್‌ನ ಹಾರ್ಫೋರ್ಡ್ ಕೌಂಟಿಯ ಜಮೀನಿನಲ್ಲಿ ನೆಲೆಸಿತು. ಹೀಗೆ ಮೇಲಿಂದ ಮೇಲೆ ಸ್ಥಳ ಬದಲಾವಣೆಯಾಗುತ್ತಿದ್ದ ಕಾರಣ ಉದ್ಯೋಗಗಳಲ್ಲಿಯೂ ಬದಲಾವಣೆಯಾಗುತ್ತಿದ್ದವು. ಹೀಗೆ ಸ್ಥಳ ಹಾಗೂ ಉದ್ಯೋಗದ ಬದಲಾವಣೆ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸಹಾ ತಗ್ಗಿಸಿತ್ತು. ತನ್ನದೇ ಒಂದು ಸ್ವಂತ ಬ್ಯುಸಿನೆಸ್ ಶುರು ಮಾಡಲು ಯೋಚಿಸಿದ್ದರು ರಾಬರ್ಟ್. ತನ್ನ ಸ್ನೇಹಿತ ರಾಲ್ಫ್ ಮಹರ್ ಜೊತೆ ಸೇರಿ ಸಾಬೂನು ಮತ್ತು ಮೇಣದಬತ್ತಿಗಳನ್ನು ತಯಾರಿಸಲು ಶುರು ಮಾಡಿದರು. ಆಗ, ವಿಲಿಯಂ ಕುತೂಹಲದಿಂದ ಎಲ್ಲವನ್ನೂ ಕೇಳುತ್ತಾ ತನ್ನ ತಂದೆಯಿಂದ ಇದೆಲ್ಲವನ್ನೂ ಕಳಿತುಕೊಂಡರು. ಮೊದಮೊದಲು ಚೆನ್ನಾಗಿಯೇ ನಡೆಯುತ್ತಿದ್ದ ವ್ಯಾಪಾರ ಎರಡು ವರ್ಷಗಳ ನಂತರ ನಷ್ಟ ಅನುಭವಿಸಿತು. ಸ್ನೇಹಿತನ ಜೊತೆ ಸೇರಿ ನಡೆಸುತ್ತಿದ್ದ ಪಾಲುದಾರಿಕೆಯೂ ಕೊನೆಯಾಗಿ ಕುಟುಂಬವು ನಂತರ ನ್ಯೂಯಾರ್ಕ್‌ನ ಡೆಲವೇರ್ ಕೌಂಟಿಯಲ್ಲಿ ನೆಲೆಸಿತು. 


ವಿಲಿಯಂ ಕೋಲ್ಗೇಟ್ 1804 ರಲ್ಲಿ ನ್ಯೂಯಾರ್ಕ್ ನಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಅವರು ಅಲ್ಲಿನ ಸೋಪ್-ಬಾಯ್ಲರ್ನಲ್ಲಿ ಅಪ್ರೆಂಟಿಸ್ ಆಗಿ ಉದ್ಯೋಗವನ್ನು ಪಡೆದರು. ತಂದೆಯಿಂದ ಕಲಿತಿದ್ದ ವಿಷಯಗಳ ಜೊತೆಗೆ ಇಲ್ಲಿ ಕೆಲಸ ಮಾಡುವಾಗ ಇನ್ನಷ್ಟು ವಿಚಾರಗಳನ್ನು ಕುತೂಹಲದಿಂದ ಕಂಡುಕೊಂಡರು. ಅವರಿಗೆ ತಪ್ಪುಗಳನ್ನು ಗಮನಿಸಿದರು. ಎಲ್ಲವನ್ನೂ ಸರಿಪಡಿಸಿ ನಿರ್ವಹಿಸುವುದನ್ನು ಗಮನಿಸುತ್ತಲೇ ಸ್ವಂತದ ಬ್ಯುಸಿನೆಸ್ ಉಪಯೋಗಕ್ಕಾಗಿ ಅವಶ್ಯಕವೆನಿಸಿದ ಪಾಠಗಳನ್ನು ಕಲಿತರು. ತಾತ್ಕಾಲಿಕ ಅಪ್ರೆಂಟಿಸ್ ಕೆಲಸ ಮುಗಿಯುವಷ್ಟರಲ್ಲಿ ಇತರ ನಗರಗಳಲ್ಲಿನ ವಿತರಕರೊಂದಿಗೆ ಪತ್ರವ್ಯವಹಾರದ ಮೂಲಕ ವ್ಯವಹಾರದಲ್ಲಿ ಭಾಗಿಯಾಗಿ ಒಂದು ಸ್ಟ್ರಾಂಗ್ ಬೇಸ್ ಅನ್ನು ನಿರ್ಮಾಣ ಮಾಡಿಕೊಂಡು 1806 ರಲ್ಲಿ ವಿಲಿಯಂ ಡಚ್ ಸ್ಟ್ರೀಟ್‌ನಲ್ಲಿರುವ ಮ್ಯಾನ್‌ ಹ್ಯಾಟನ್‌ನಲ್ಲಿ ಮೇಣದಬತ್ತಿ & ಸಾಬೂನು ತಯಾರಿಕೆಯನ್ನು ಶುರು ಮಾಡಿದರು. ಆದರೆ, ಮೇಣದಬತ್ತಿ ತಯಾರಿಕೆ ಹಾಗೂ ಮಾರಾಟ ಅವರು ಅಂದುಕೊಂಡ ಮಟ್ಟಿಗೆ ಫಲ ಕೊಡದಾದಾಗ ತಯಾರಿಕೆಯನ್ನು ಬದಿಗಿರಿಸಿ ಸಾಬೂನು ತಯಾರಿಕೆ ಮತ್ತು ಮಾರಾಟವನ್ನು ಮಾತ್ರ ಮುಂದುವರಿಸಿದರು. ಈ ಮಾರಾಟಕ್ಕಾಗಿ 1817 ರಲ್ಲಿ ಮೊದಲ ಕೋಲ್ಗೇಟ್ ಜಾಹೀರಾತು ನ್ಯೂಯಾರ್ಕ್ ಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ.


1820 ರಲ್ಲಿ ಚಿಕ್ಕ ಸ್ಥಳ ತನ್ನ ಕಾರ್ಖಾನೆಗೆ ಸಾಕಾಗದು ಎನ್ನಿಸಿ, ಜರ್ಸಿ ನಗರದಲ್ಲಿ ಹಡ್ಸನ್  ಕಾರ್ಖಾನೆಯನ್ನು ಪ್ರಾರಂಭಿಸಿದರು. ಇದಕ್ಕೆ ಯಾವ ಹೆಸರಿಡಲಿ ಎಂದು ಯೋಚಿಸುತ್ತಿದ್ದಾಗ ಸ್ನೇಹಿತರ ಸಲಹೆಯ ಮೇರೆಗೆ ತನ್ನ ಹೆಸರನ್ನೇ ಇರಿಸಿಕೊಂಡರು. ವಿಲಿಯಂ ಕೋಲ್ಗೇಟ್ ಕಂಪೆನಿ ಎಂದು. 1857 ರಲ್ಲಿ ವಿಲಿಯಂ ಕೋಲ್ಗೇಟ್ ಅವರ ನಿಧನದ ಬಳಿಕ ಅವರ ಮಗ ಸ್ಯಾಮ್ಯುಯೆಲ್ ಕೋಲ್ಗೇಟ್ ಕಂಪೆನಿಯ ವ್ಯವಹಾರವನ್ನು ವಹಿಸಿಕೊಂಡಾಗ, ಕಂಪನಿಯನ್ನು ಕೋಲ್ಗೇಟ್ ಮತ್ತು ಕಂಪನಿ ಎಂದು ಮರುನಾಮಕರಣ ಮಾಡಲಾಯಿತು. ಬದಲಾದದ್ದು ಕೇವಲ ಕಂಪೆನಿಯ ಹೆಸರು ಮಾತ್ರವಲ್ಲ.. ಕಂಪೆನಿಯ ನಿರ್ವಹಣೆ ಕೂಡಾ. ಸಾಬೂನಿನ ತಯಾರಿಕೆಯಲ್ಲಿ ಕೊಂಚ ಬದಲಾವಣೆಯೊಂದಿಗೆ  1864 ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಸಾಬೂನು ಕಾರ್ಖಾನೆಯನ್ನು ತೆರೆಯುತ್ತಾನೆ, ಅದು ನಂತರ ಪಾಮೋಲಿವ್ ಕಂಪನಿಯಾಯಿತು.

1866 ರಲ್ಲಿ ಕೋಲ್ಗೇಟ್ ವತಿಯಿಂದ ಸುಗಂಧಿತ ಸೋಪ್ ಮತ್ತು ಸುಗಂಧ ದ್ರವ್ಯಗಳನ್ನು ಪರಿಚಯಿಸಿದರು. 1872 ರಲ್ಲಿ ಕಾನ್ಸಾಸ್ ನಗರದಲ್ಲಿ ಕ್ರಿಸ್ಟಲ್ ವೈಟ್ ಸೋಪ್ ಅನ್ನು ತಯಾರಿಸಿ ಅದಕ್ಕಾಗಿಯೇ ಒಂದು ತಯಾರಿಕಾ ಘಟಕವನ್ನು ಶುರು ಮಾಡಿದರು. ಕ್ಯಾಶ್ಮೀರ್ ಬೊಕೆ ಎನ್ನುವ ಮೊದಲ ಸುಗಂಧಯುಕ್ತ ಟಾಯ್ಲೆಟ್ ಸೋಪ್ ಅನ್ನು ಕೋಲ್ಗೇಟ್ ಟ್ರೇಡ್ಮಾರ್ಕ್ ಆಗಿ ಗುರುತಿಸಲಾಗುತ್ತದೆ. 


ಕೋಲ್ಗೇಟ್ ನಲ್ಲಿ ಬರೀ ಸೋಪಿನ ಸಾಮ್ರಾಜ್ಯವೇ ಇದ್ದಾಗ ಟೂಥ್ ಪೇಸ್ಟ್ ಶುರು ಆಗಿದ್ದು ಯಾವಾಗ ಗೊತ್ತೇ ? 


ನಮ್ಮ ಹಲ್ಲುಗಳು ನಮ್ಮ ದೇಹದ ಪ್ರಮುಖ ಅಂಗವಾಗದ್ದು, ಸೋಪು ಹಾಗೂ ಸುಗಂಧ ದ್ರವ್ಯಗಳು ದೇಹದ ಭಾಗಗಳ ನೈರ್ಮಲ್ಯಕ್ಕೆ ಬಳಕೆಯಾಗುವಾಗ ಹಲ್ಲಿನ ಕುರಿತು ಆಲೋಚನೆ ಬರುತ್ತದೆ. ಪ್ರಪಂಚದ ಮೊದಲ ಟೂತ್‌ಪೇಸ್ಟ್ ಅನ್ನು ಕ್ರಿಸ್ತ ಶಕ 4ರಲ್ಲಿಯೇ ತಯಾರಿಸಲಾಗಿದ್ದರೂ ಹೆಚ್ಚಿನ ಜನರು ಬಳಸುತ್ತಿದ್ದದ್ದು ಪುಡಿಯನ್ನು. ಇದೇ ಆಲೋಚನೆಯಲ್ಲಿ 1873 ರಲ್ಲಿ, ಮೊದಲ ಬಾರಿಗೆ ಕೋಲ್ಗೇಟ್ ನಿಂದ ಉತ್ಪಾದಿಸಲಾದ ಟೂತ್‌ಪೇಸ್ಟ್ ಅನ್ನು ಬಿಡುಗಡೆ ಮಾಡಿತು. ಆದರೆ, ಕೋಲ್ಗೇಟ್ ಟೂಥ್ ಪೇಸ್ಟ್ ಬಿಡುಗಡೆಯಾಗಿದ್ದು ಜಾರ್ ಎಂದರೆ ಜಾಡಿಗಳಲ್ಲಿ. ಸುಗಂಧವಿದ್ದ ಈ ಟೂತ್‌ಪೇಸ್ಟ್ ಅನ್ನು ನಂತರ ಜಾಡಿಗಳಲ್ಲಿ ಮಾರಾಟ ಮಾಡಲು ಶುರು ಮಾಡಿದಾಗ.. ಕೋಲ್ಗೇಟ್ ಟೂತ್‌ಪೇಸ್ಟ್ ಕಂಪನಿಯ ಹೆಚ್ಚು ಮಾರಾಟವಾಗುವ ಉತ್ಪನ್ನಗಳಲ್ಲಿ ಒಂದಾಯಿತು. ಆದರೆ, ಕೆಲವರು ಇದರ ಅನಾನುಕೂಲತೆಯೊಂದನ್ನು ಬೆಳಕಿಗೆ ತಂದರು. ಅದೇನೆಂದರೆ, ಜಾಡಿಯಿಂದ ಇದನ್ನು ಸ್ಪಲ್ಪ ಸ್ವಲ್ಪವೇ ಸುರಿದುಕೊಳ್ಳುವುದು ಕಷ್ಟವೆಂದು.  ಇದರ ಫಲವಾಗಿ.. 1896 ರಲ್ಲಿ, ಕೋಲ್ಗೇಟ್ ಕೋಲ್ಗೇಟ್ ರಿಬ್ಬನ್ ಡೆಂಟಲ್ ಕ್ರೀಮ್ ಅನ್ನು ಬಿಡುಗಡೆ ಮಾಡಿತು, ಇದು ಟ್ಯೂಬ್ ನಲ್ಲಿ ಲಭ್ಯವಾಗುವ ಮೊದಲ ಟೂತ್ಪೇಸ್ಟ್ ಆಗಿತ್ತು. ಇದನ್ನೇ ನಾವು ಈಗಲೂ ಬಳಸುತ್ತಿರುವುದು. ಆದರೆ, ಕೋಲ್ಗೇಟ್ ನ ಮಾರ್ಕೆಟಿಂಗ್ ತಂತ್ರ ಇದನ್ನು ಜನರಿಗೆ ಯಾವ ರೀತಿ ಪರಿಚಯಿಸಿತು ಎಂದರೆ "ನಾವು ನಮ್ಮ ಪ್ರಾಡಕ್ಟ್ ಅನ್ನು ಇನ್ನಷ್ಟು ಉತ್ತಮಗೊಳಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದೇ ಉತ್ತಮ ಪೇಸ್ಟ್. ಹಾಗಾಗಿ, ಡಿಸೈನ್ ಅನ್ನು ಬದಲಾಯಿಸುತ್ತಿದ್ದೇವೆ" ಎಂಬ ಹೇಳಿಕೆ ನೀಡಿದರು. 


ತಲೆಮಾರುಗಳು ಬದಲಾಗುತ್ತಿದ್ದ ಹಾಗೆ ಕಂಪೆನಿಯ ಸ್ವರೂಪವೂ ಬದಲಾಯಿತು. 

ಪಾಮೋಲಿವ್-ಪೀಟ್ ಎನ್ನುವುದು ಪಾಮೋಲಿವ್ ಮತ್ತು ಪೀಟ್ ಸಹೋದರರ ಕಂಪೆನಿ. 20 ನೇ ಶತಮಾನದ ಆರಂಭದಲ್ಲಿ ಪಾಮೋಲಿವ್ ವಿಶ್ವದ ಹೆಚ್ಚು ಮಾರಾಟವಾದ ಸಾಬೂನಿನ ತಯಾರಕರಾಗಿದ್ದರು. 1928 ರಲ್ಲಿ ಪಾಮೋಲಿವ್-ಪೀಟ್ ಕಂಪನಿ ಕೋಲ್ಗೇಟ್ ಅನ್ನು ಕೊಂಡುಕೊಂಡ ನಂತರ ಕೋಲ್ಗೇಟ್ ಮತ್ತು ಕಂಪನಿಯು ಕೋಲ್ಗೇಟ್-ಪಾಮೋಲಿವ್-ಪೀಟ್ ಕಂಪನಿ ಎಂದು ಕರೆಯಲ್ಪಟ್ಟಿತು. 1953 ರಲ್ಲಿ ಕೋಲ್ಗೇಟ್-ಪಾಮೋಲಿವ್-ಪೀಟ್ ಅನ್ನು ಕೋಲ್ಗೇಟ್-ಪಾಮೋಲಿವ್ ಎಂದು ಮರುನಾಮಕರಣ ಮಾಡಲಾಯಿತು, ಇದೇ ಪ್ರಸ್ತುತ ಕೋಲ್ಗೇಟ್‌ನ ಪೇರೆಂಟ್ ಕಂಪನಿ. 


ಕೋಲ್ಗೇಟ್-ಪಾಮೋಲಿವ್ ಕಂಪೆನಿ ಮತ್ತಷ್ಟು ಯಶಸ್ವಿಯಾಗಿ ಇಂದಿನವರೆಗೂ ತನ್ನ ಬ್ಯುಸಿನೆಸ್ ಅನ್ನು ಗುಣಮಟ್ಟದಿಂದ ಕಾಪಾಡಿಕೊಂಡು ಬಂದಿದೆ. ಇಂದು ಪ್ರಪಂಚದಾದ್ಯಂತ ಮಾರಾಟವಾಗುವ ನೈರ್ಮಲ್ಯ ಮತ್ತು ಆರೈಕೆ ಉತ್ಪನ್ನಗಳು, ವಿವಿಧ ಕ್ಲೆನ್ಸರ್‌ಗಳು ಮತ್ತು ಸಾಕುಪ್ರಾಣಿಗಳ ಆಹಾರ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಹೊಂದಿದೆ.


ಓರಲ್ ಕೇರ್ ಟೂಥ್ ಪೇಸ್ಟ್, ಮೌತ್ ವಾಷ್, ಟೂತ್ ಬ್ರಷ್‌ಗಳು, ಟೂತ್ ವೈಟ್‌ನರ್, ಡೆಂಟಲ್ ಫ್ಲೋಸ್, ಮನೆ ಒರೆಸುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಲಿಕ್ವಿಡ್ ಗಳು, ಪಾಮೋಲಿವ್ ಮತ್ತು ಹೋಮ್ ಕ್ಲೆನ್ಸರ್‌ಗಳು, ಸಾಕುಪ್ರಾಣಿಗಳ ಪೋಷಣೆ ಆಹಾರ,  ಪೆಟ್ ಕೇರ್ ಉತ್ಪನ್ನಗಳು, ಶವರ್ ಜೆಲ್‌ಗಳು, ಬಾಡಿ ಸ್ಪ್ರೇಗಳು, ಶ್ಯಾಂಪೂಗಳು, ಕಂಡೀಷನರ್‌ಗಳು, ಶೇವಿಂಗ್ ಉತ್ಪನ್ನಗಳು, ಹ್ಯಾಂಡ್ ವಾಷ್ ಹಾಗೂ ಸೋಪ್‌ಗಳು ಹೀಗೆ ಎಲ್ಲೆಡೆ ತನ್ನ ಬಾಹುಗಳನ್ನು ಹರಡಿಕೊಂಡಿದೆ. ಹಾಗೆಂದು ಕೋಲ್ಗೇಟ್ ತಯಾರಿಸಿದ್ದೆಲ್ಲವೂ ಇಂದು ಮಾರುಕಟ್ಟೆಯಲ್ಲಿದೆಯಾ..?? 

 ಕೋಲ್ಗೇಟ್ ಕಾಲಾನಂತರದಲ್ಲಿ ಆಗಿನ ಬಳಕೆ ಹಾಗೂ ಗ್ರಾಹಕರ ಅಗತ್ಯತೆಯನ್ನು ಮನಗೊಂಡು ಕೆಲವು ಜನಪ್ರಿಯ ಉತ್ಪನ್ನಗಳನ್ನು ಸ್ಥಗಿತಗೊಳಿಸಿತು. ಅವೇ.. ಫ್ಯಾಬ್ ಒನ್-ಶಾಟ್ ಡಿಟರ್ಜೆಂಟ್, ಕೋಲಿಯೊ ಸೋಪ್, ಕ್ಯಾಶ್ಮೀರ್ ಬೊಕೆ ಸೋಪ್ ಮತ್ತು ಕ್ಲೋರೊಫಿಲ್ ಹೊಂದಿರುವ ಪೀಟರ್ ಪ್ಯಾನ್ ಬ್ಯೂಟಿ ಬಾರ್, ಇತ್ಯಾದಿ. ಬದಲಾಗುತ್ತಿರುವ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಕಂಪನಿಯು ಕಾಲಕಾಲಕ್ಕೆ ಹೊಸ ಉತ್ಪನ್ನಗಳನ್ನು ಸೇರಿಸುತ್ತದೆ ಮತ್ತು ಹಳೆಯ ಉತ್ಪನ್ನಗಳನ್ನು ಹೊರಹಾಕುತ್ತದೆ.


ಕೋಲ್ಗೇಟ್‌ನ ಮೊದಲ ಅಡಿಬರಹವೆಂದರೆ 'ಕೋಲ್ಗೇಟ್ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ ಹಾಗೆಯೇ ನಿಮ್ಮ ಉಸಿರನ್ನು ಸಹಾ ಸ್ವಚ್ಛಗೊಳಿಸುತ್ತದೆ. ನಂತರದ ದಿನಗಳಲ್ಲಿ ಅಡಿಬರಹಗಳು ಬದಲಾದವು. 


ಮೊದಲು ಮೌಖಿಕವಾಗಿ ಅಂದರೆ ಜನರ ಬಾಯಿಯಿಂದ ಬಾಯಿಗೆ ಹರಡಿದ ಕೋಲ್ಗೇಟ್ ತನ್ನ ಜನಪ್ರಿಯತೆ ಉಳಿಸಿಕೊಳ್ಳಲು ಜಾಹೀರಾತಿಗೂ ಚೆನ್ನಾಗಿಯೇ ಹಣವನ್ನು ಖರ್ಚು ಮಾಡುತ್ತದೆ. 2021 ರ ಒಂದು ವರ್ಷಕ್ಕೆ ವಿಶ್ವಾದ್ಯಂತ ಜಾಹೀರಾತಿಗೆ ಖರ್ಚು ಮಾಡಿರುವ ಹಣ 2 ಬಿಲಿಯನ್ ಅಮೆರಿಕನ್ ಡಾಲರ್.


ಅರೆ, ಇದು ಅಮೆರಿಕಾದ ಕಂಪೆನಿಯಾದರೂ ಭಾರತದಲ್ಲಿಯೂ ಇಷ್ಟು ಜನಪ್ರಿಯತೆ ಗಳಿಸಿತಾ..? ಎಂಬ ಅಚ್ಚರಿಯಾಗುತ್ತಿದೆಯಾ ? 


1937 ರ ಹೊತ್ತಿಗೆ , ಕೋಲ್ಗೇಟ್ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದಾಗ , ಅದಕ್ಕೆ ಆಗಲೇ ಒಂದು ಶತಮಾನದಷ್ಟು ಹೆಸರಿತ್ತು. ಆದರೂ, ಕೋಲ್ಗೇಟ್ ಡಾಬರ್‌ನಿಂದ ತೀವ್ರ ಸ್ಪರ್ಧೆಯನ್ನು ಎದುರಿಸಿತು. ಡಾಬರ್, ಭಾರತದಲ್ಲಿ ಚೆನ್ನಾಗಿ ಹರಡಿಕೊಂಡಿತ್ತು ಮತ್ತು ಇದು ಆಯುರ್ವೇದದ ಪ್ರಾಡಕ್ಟ್ ಆದ್ದರಿಂದ ಮೊದಲು ಕೋಲ್ಗೇಟ್ ಅನ್ನು ಬಳಸಲು ಹಿಂದೆ ಮುಂದೆ ನೋಡಿದರೂ.. ನಂತರದಲ್ಲಿ ಕ್ಲಿಕ್ ಆಯಿತು. ಕಾರಣ, ಅದರ ರುಚಿ. ಡಾಬರ್ ಗೆ ಹೋಲಿಸಿದಾಗ ಎಲ್ಲಾ ರೀತಿಯಲ್ಲಿಯೂ ಒಗ್ಗುವಂತಹಾ ಮತ್ತೆ ಮತ್ತೆ ಬಯಸುವಂತಹಾ ರುಚಿಗೆ ಮಕ್ಕಳು ಬೇಗ ಹೊಂದಿಕೊಂಡರು. ಮಕ್ಕಳೇ ಬೆಳೆದು ಮುಂದಿನ ಗ್ರಾಹಕರಾದಂತೆ ಬೇಡಿಕೆ ಹೆಚ್ಚುತ್ತಾ ಹೋಯಿತು. ಅಲ್ಲದೇ, ಜಾಹೀರಾತುಗಳ ಪರಿಣಾಮ, ಜೊತೆಗೆ ಬಳಸಿದ ಪೇಸ್ಟ್ ಗಳನ್ನು ಎಸೆದ ಟ್ಯೂಬ್ ಗಳನ್ನು ಕಂಡು ಕೋಲ್ಗೇಟ್ ಗೆ ಜನ ಮಾರು ಹೋಗತೊಡಗಿದರು. ಜೊತೆಗೆ, ಈ ಟೂಥ್ ಪೇಸ್ಟ್ ಕೇವಲ ಪ್ರಾವಿಜನ್ ಸ್ಟೋರ್ ಅಥವಾ ಮೆಡಿಕಲ್ ನಲ್ಲಿ ಮಾತ್ರ ಲಭ್ಯವಿರದೇ ಎರಡರಲ್ಲೂ ಲಭ್ಯವಾಗುವಂತೆ ಮಾಡಿದ್ದು ಇದರ ಪ್ಲಸ್ ಪಾಯಿಂಟ್ ಕೂಡಾ ಹೌದು.


ನಿಮ್ಮ ಟೂಥ್ ಪೇಸ್ಟ್ ನಲ್ಲಿ ಉಪ್ಪು ಇದೆಯೇ.. ಇದ್ದಿಲು ಇದೆಯೇ, ಲವಂಗ ಇದೆಯೇ.. ಬೇವು ಇದೆಯೇ.. ಎಂದು ಕೇಳುವಾಗ ನಾವು ಟ್ರೋಲ್ ಮಾಡಿರಬಹುದು. ಆದರೆ, ಬೇವು, ಇದ್ದಿಲು, ಕಲ್ಲುಪ್ಪಿನಿಂದ ಹಲ್ಲು ಉಜ್ಜುತ್ತಿದ್ದವರನ್ನೂ ತನ್ನೆಡೆಗೆ ಸೆಳೆದದ್ದು ಟೂಥ್ ಪೇಸ್ಟ್. 2025 ರ ಹೊತ್ತಿಗೆ ಇದು ಇಡೀ ವಿಶ್ವಕ್ಕೆ ತಲುಪಲಿದೆ. 200 ಕ್ಕೂ ಅಧಿಕ ವರ್ಷಗಳ ಕಂಪೆನಿ ಇವತ್ತಿಗೂ ಹೆಸರಾಗಿರುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ.. ರಿಫ್ರೆಶಿಂಗ್ ಐಡಿಯಾಗಳು ಹಾಗೂ ಬ್ಯುಸಿನೆಸ್ ನ ವಿಕಾಸವಾದ (ಎವಲ್ಯೂಷನ್) ವನ್ನು ಅಳವಡಿಸಿಕೊಂಡರೆ 200 ರಲ್ಲ.. 500 ವರ್ಷವಾದರೂ ಮಾರ್ಕೆಟ್ ನಲ್ಲಿ ತನ್ನ ಸ್ಥಾನ ಭದ್ರ ಎಂಬುದನ್ನು ಹೇಳುವಂತಿದೆ ಕೋಲ್ಗೇಟ್


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್ ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹಿರಾತು ಅಥವಾ ರೆಕಮೆಂಡೇಶನ್ ಅಲ್ಲ )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ