ಬುಧವಾರ, ಏಪ್ರಿಲ್ 22, 2026

ಸ್ಯಾಮ್ಸಂಗ್ ನ ವಿಸ್ತಾರತೆ ( ಬ್ಯುಸಿನೆಸ್ ಡೈರಿ ಪುಟ - 28)


ನೀವು ಬಳಸುತ್ತಿರುವ ಸ್ಮಾರ್ಟ್ ಫೋನ್, ನಿಮ್ಮ ಮನೆಯಲ್ಲಿ, ಸ್ನೇಹಿತರು, ಅಕ್ಕ-ಪಕ್ಕದವರು ಬಳಸುವ ಸ್ಮಾರ್ಟ್ ಫೋನ್, ನಿಮ್ಮ ಮನೆಯಲ್ಲಿರುವ ಟಿ.ವಿ, ನಿಮ್ಮ ಮನೆಯಲ್ಲಿರುವ ಫ್ರಿಡ್ಜ್, ವಾಷಿಂಗ್ ಮೆಷಿನ್ ಯಾವ ಬ್ರ್ಯಾಂಡ್ ಎಂಬುದನ್ನೊಮ್ಮೆ ನೆನಪಿಸಿಕೊಳ್ಳಿ. ಇತ್ತೀಚೆಗೆ ತಾವು ಬಳಸುವ ವಸ್ತುಗಳ ಬ್ರ್ಯಾಂಡ್ ಬಗ್ಗೆ ಜನರು ಅತಿ ಹೆಚ್ಚಿನ ಗಮನಹರಿಸುತ್ತಾರೆ. ಹಾಗೆಯೇ ಅತಿ ಹೆಚ್ಚು ಜನರು ಬಳಸುವ ಬ್ರ್ಯಾಂಡ್ ಸ್ಯಾಮ್ಸಂಗ್ ಆಗಿದೆ. ಜಗತ್ತಲ್ಲಿ ಇಬ್ಬರಲ್ಲಿ ಒಬ್ಬರು ಸ್ಯಾಮ್ಸಂಗ್ ಬಳಕೆದಾರರಾಗಿದ್ದಾರೆ ಎನ್ನುತ್ತದೆ ಇತ್ತೀಚಿನ ಸರ್ವೆ.


ಇದರ ಜೊತೆಗೆ, 2018ರ ಸರ್ವೆಯ ಪ್ರಕಾರ ಜಗತ್ತಿನ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನದ ಕಂಪನಿ ಸ್ಯಾಮ್ಸಂಗ್. ಜಗತ್ತಿನ ಎರಡನೆಯ ದೊಡ್ಡ ಹಡಗು ತಯಾರಿಕಾ ಕಂಪನಿ ಸ್ಯಾಮ್ಸಂಗ್. ಜಗತ್ತಿನ 13ನೇ ದೊಡ್ಡ ಕನ್ಸ್ಟ್ರಕ್ಷನ್ ಕಂಪನಿ ಸ್ಯಾಮ್ಸಂಗ್ ಇಂಜಿನಿಯರಿಂಗ್ ಹಾಗೂ 36ನೇ ದೊಡ್ಡ ಕನ್ಸ್ಟ್ರಕ್ಷನ್ ಕಂಪನಿ ಸ್ಯಾಮ್ಸಂಗ್ ಸಿ & ಟಿ ಕಾರ್ಪೊರೇಷನ್. ಜಗತ್ತಿನ ಅತಿ ಎತ್ತರದ ಕಟ್ಟಡವೆಂದೇ ಖ್ಯಾತಿಯಾದ 'ಬುರ್ಜ್ ಖಲೀಫಾ'ವನ್ನು ನಿರ್ಮಿಸಿದ್ದು ಕೂಡಾ ಸ್ಯಾಮ್ಸಂಗ್ ಸಿ & ಟಿ ಕಾರ್ಪೊರೇಷನ್. ಜಗತ್ತಿನ 14ನೇ ದೊಡ್ಡ ಲೈಫ್ ಇನ್ಶೂರೆನ್ಸ್ ಕಂಪನಿಯೂ ಹೌದು. ಜಗತ್ತಿನ ಅತಿ ಪ್ರಾಚೀನ ಥೀಮ್ ಪಾರ್ಕ್ ಇರುವುದು ಸೌತ್ ಕೊರಿಯಾದಲ್ಲಿ. ಅದೇ ಸ್ಯಾಮ್ಸಂಗ್ ಎವರ್ಲ್ಯಾಂಡ್. ಸ್ಯಾಮ್ಸಂಗ್ ಇಂದು ಕೇವಲ ಎಲೆಕ್ಟ್ರಾನಿಕ್ಸ್ ಕಂಪನಿಯ ಹೆಸರಾಗಿ ಮಾತ್ರ ನಮಗೆಲ್ಲರಿಗೂ ಚಿರಪರಿಚಿತವಾಗಿದ್ದರೂ ಸ್ಯಾಮ್ಸಂಗ್ ನ ವಿಸ್ತಾರತೆ ಮೇಲ್ನೋಟಕ್ಕೆ ಕಾಣುವಷ್ಟು ಪರಿಚಿತವಲ್ಲ. ವಿಸ್ತಾರವಾದ ಸಾಮ್ಸಂಗ್ ಕುರಿತು ಕೊಂಚ ತಿಳಿದು ಬರೋಣ ಬನ್ನಿ. 


ಕೊರಿಯಾದಲ್ಲಿನ ಲೀ ಬ್ಯುಂಗ್-ಚುಲ್ಲ್ ಸ್ಯಾಮ್ಸಂಗ್ ನ ಸಂಸ್ಥಾಪಕ. ಚುಲ್ಲ್ ಜಮೀನುದಾರರ ಕುಟುಂಬದಲ್ಲಿ ಹುಟ್ಟಿದ್ದರೂ.. ಕಾಲೇಜು ಶಿಕ್ಷಣ ಹಿಡಿಸದೆ, ಕಾಲೇಜನ್ನು ಅರ್ಧಕ್ಕೆ ಬಿಟ್ಟು ತನ್ನದೇ ಏನಾದರೂ ವ್ಯಾಪಾರವನ್ನು ಸ್ಥಾಪಿಸುತ್ತೇನೆ ಎಂದು ಹೊರಟವನು. ಆಗ ಆತ ಮೊದಲಿಗೆ ಶುರು ಮಾಡಿದ್ದೇ ಸ್ಯಾಮ್ಸಂಗ್ ಟ್ರೇಡಿಂಗ್ & ಕೋ. ವಸ್ತುಗಳ ಸಾಗಾಣಿಕೆಗಾಗಿ ತನ್ನ ಟ್ರೇಡಿಂಗ್ ಕಂಪನಿಯನ್ನು ಕೇವಲ 43 ಡಾಲರ್  ಬಂಡವಾಳ ಹೂಡಿ ಶುರು ಮಾಡಿದ. 


ಅದರ ಜೊತೆಯಲ್ಲೇ.. 1938 ಮಾರ್ಚ್ 1 ರಂದು ದಿನಸಿ ಅಂಗಡಿಯನ್ನು ಶುರು ಮಾಡುತ್ತಾನೆ. ಕೊರಿಯಾದ 'ಟೈಗೂ'ನಲ್ಲಿ ಶುರುವಾದ ಈ ಅಂಗಡಿಯಲ್ಲಿ.. ಮೊದಲಿಗೆ ಒಣ ಮೀನು, ನೂಡಲ್ಸ್ ಹಾಗೂ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತಿರುತ್ತದೆ. ಮೊದಲು ಕೊರಿಯಾ ಪಟ್ಟಣದೊಳಗೆ ಮಾತ್ರವಿದ್ದ ವ್ಯಾಪಾರ ನಂತರ ಆ ಪಟ್ಟಣದಿಂದಾಚೆಗೆ ವಿಸ್ತರಿಸುತ್ತದೆ. ದಿನಸಿ ಅಂಗಡಿಯಲ್ಲಿ ಆಗ 43 ಜನ ಕೆಲಸಗಾರರು ಕೆಲಸ ಮಾಡುತ್ತಿರುತ್ತಾರೆ. 


ಚುಲ್ಲ್ ತನ್ನ ಕಂಪನಿಯನ್ನು ಶುರು ಮಾಡುವಾಗ ಆ ಕಂಪನಿಯ ಟ್ರೇಡ್ ಮಾರ್ಕ್ ಆಗಿ ಮೂರು ನಕ್ಷತ್ರಗಳನ್ನು ಬಳಸುತ್ತಾನೆ. ಅದೇ ಮುಂದೆ ಇದರ ಲೋಗೋ ಕೂಡ ಆಗುತ್ತದೆ. ಆಗ ಕೊರಿಯಾದಲ್ಲಿ ಈ ಮೂರು ನಕ್ಷತ್ರಗಳನ್ನು ಅದೃಷ್ಟವೆಂದೇ ಭಾವಿಸುತ್ತಿರುತ್ತಾರೆ. ದೀರ್ಘಕಾಲದ ಯಶಸ್ಸು ನೀಡುವ ಸಂಕೇತವನ್ನು ಕೊರಿಯನ್ ಭಾಷೆಯಲ್ಲಿ 'ಸ್ಯಾಮ್ಸಂಗ್' ಎಂದು ಕರೆಯುತ್ತಾರೆ. 


ಲೀ ಬಹಳ ಮಹತ್ವಾಕಾಂಕ್ಷಿ. ಆತ ತನ್ನ ವ್ಯಾಪಾರವನ್ನು ವಿಸ್ತರಿಸೋಣ ಎಂಬ ಸಂದರ್ಭದಲ್ಲಿಯೇ 1950-53 ರವರೆಗೆ ಕೊರಿಯನ್ ಯುದ್ಧ ನಡೆಯುತ್ತದೆ. ಅದಾದ ನಂತರ ಸರ್ಕಾರ ಸ್ವದೇಶಿ ಕಂಪನಿಗಳನ್ನು ಪ್ರೋತ್ಸಾಹಿಸಲು ಹಲವಾರು ನಿಯಮಗಳನ್ನು ರೂಪಿಸುತ್ತದೆ. ಆ ನಿಯಮಗಳಿಂದ ಲಾಭ ಪಡೆದುಕೊಂಡವರಲ್ಲಿ ಚುಲ್ಲ್ ಕೂಡ ಒಬ್ಬ. ಸರ್ಕಾರದಿಂದ ವ್ಯಾಪಾರಕ್ಕಾಗಿ ಸುಲಭವಾಗಿ ಹಣಕಾಸಿನ ಸಹಾಯ ಸಿಗುತ್ತಿರುತ್ತದೆ. ಇದೆಲ್ಲದರ ಫಲವಾಗಿ ಹಾಗೂ ತನ್ನ ದೇಶದ ಕುರಿತ ದೇಶಭಕ್ತಿಯಿಂದಾಗಿ.. ತನ್ನ ದೇಶದ ಪ್ರಗತಿಗಾಗಿ, ಕೈಗಾರೀಕರಣದ ಕುರಿತಾಗಿ ಹೆಚ್ಚಿನ ಗಮನ ಕೊಡುತ್ತಾನೆ. ಈಗ ಚುಲ್ಲ್ ಸ್ಯಾಮ್ಸಂಗ್ ಬ್ಯುಸಿನೆಸ್ ಅನ್ನು ಟೆಕ್ಸ್ಟೈಲ್ ಇಂಡಸ್ಟ್ರಿಗೆ ವಿಸ್ತರಿಸುತ್ತಾನೆ. ಜೊತೆಗೆ ಕೊರಿಯಾದಲ್ಲಿಯೇ ಅತಿ ದೊಡ್ಡ ಉಲ್ಲನ್ ಮಿಲ್ ಒಂದನ್ನು ಪ್ರಾರಂಭಿಸುತ್ತಾನೆ.


ವ್ಯಾಪಾರದಿಂದ ಬಂದ ಲಾಭದಿಂದ ಕೊರಿಯಾದ ಅತಿ ದೊಡ್ಡ ಕಮರ್ಷಿಯಲ್ ಬ್ಯಾಂಕ್ ಹಾಗೂ ಇನ್ಸೂರೆನ್ಸ್ ಕಂಪನಿಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಜೊತೆಗೆ ಸಿಮೆಂಟ್ ಹಾಗೂ ಫರ್ಟಿಲೈಜರ್ ವ್ಯಾಪಾರಕ್ಕಿಲಿಯುತ್ತಾನೆ. 1960ರ ಹೊತ್ತಿಗೆ ಇನ್ನಷ್ಟು ಇನ್ಸೂರೆನ್ಸ್ ಕಂಪನಿಗಳನ್ನು ತನ್ನದಾಗಿಸಿಕೊಂಡು.. ಆಯಿಲ್ ರಿಫೈನರಿ ಹಾಗೂ ನೈಲಾನ್ ಕಂಪನಿಗಳನ್ನು ಶುರು ಮಾಡುತ್ತಾನೆ. 1970ರ ಹೊತ್ತಿಗೆ ದಿನಸಿ ಅಂಗಡಿ ಹಾಗೂ ಟೆಕ್ಸ್ಟೈಲ್ ಉತ್ಪಾದನೆಯನ್ನು ಇನ್ನಷ್ಟು ವಿಸ್ತರಿಸಿ.. ಟೆಕ್ಸ್ಟೈಲ್ ಕಾರ್ಖಾನೆಗೆ ಬೇಕಾದ ಕಚ್ಚಾ ವಸ್ತುಗಳಿಂದ ಹಿಡಿದು ಕೊನೆಯ ಪ್ರಾಡಕ್ಟ್ ವರೆಗೂ ಬೇರೆಲ್ಲಿಯೂ ಮೊರೆ ಹೋಗದಂತೆ, ತನ್ನದೇ ಕಾರ್ಖಾನೆಗಳನ್ನು, ಘಟಕಗಳನ್ನು ಸ್ಥಾಪಿಸುತ್ತಾನೆ. ಇದರ ಜೊತೆಜೊತೆಗೆ ಹೆವಿ ಕೆಮಿಕಲ್ ಹಾಗೂ ಪೆಟ್ರೋಕೆಮಿಕಲ್ ಕಂಪನಿಗಳನ್ನು ಸಹಾ ತೆರೆಯುತ್ತಾನೆ. 


ಸ್ಯಾಮ್ಸಂಗ್, ಎಲೆಕ್ಟ್ರಾನಿಕ್ಸ್ ಇಂಡಸ್ಟ್ರಿಯ ಬ್ಯುಸಿನೆಸ್ ಗೆ ಇಳಿದದ್ದು 1969ರಲ್ಲಿ. ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ಮೊದಲ ಪ್ರಾಡಕ್ಟ್ ಕಪ್ಪು-ಬಿಳುಪು ಟಿ.ವಿ. 1970ರ ಹೊತ್ತಿಗೆ ಸ್ಯಾಮ್ಸಂಗ್ ತನ್ನ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ ಗಳನ್ನು ಸಮುದ್ರದ ಆಚೆಯ ದೇಶಗಳಿಗೂ ರಫ್ತು ಮಾಡಲು ಶುರು ಮಾಡುತ್ತದೆ. ಕೊರಿಯಾದ ಅತಿ ಪ್ರಬಲ ಹಾಗೂ ಅತಿ ಪ್ರಮುಖ ಬ್ಯುಸಿನೆಸ್ ಆಗಿ ಹೆಸರುವಾಸಿಯಾಗಿ ಗಟ್ಟಿಯಾಗಿ ನೆಲೆಯೂರುತ್ತದೆ ಸ್ಯಾಮ್ಸಂಗ್. 


ಕೊರಿಯಾ ದೇಶಕ್ಕೆ ಬೇಕಾದ ಸೆಮಿಕಂಡಕ್ಟರ್ ತಯಾರಿಕೆಯಲ್ಲಿ 50% ಅನ್ನು ಉತ್ಪಾದಿಸುತ್ತಿದ್ದದ್ದೇ ಸ್ಯಾಮ್ಸಂಗ್. ಈ ರಂಗದಲ್ಲಿ ಇಷ್ಟು ವೇಗದ ಪ್ರಗತಿಯನ್ನು ಕಂಡು 'ಸ್ಯಾಮ್ಸಂಗ್ ಟೆಕ್ನಾಲಜಿ ಬ್ಯುಸಿನೆಸ್' ಎಂಬ ಹೆಸರಿನಲ್ಲಿ ಸೆಮಿ ಕಂಡಕ್ಟರ್ ತಯಾರಿಕೆಗೆ ಹೊಸದಾದ ವಿಭಾಗವೊಂದನ್ನೇ ಶುರು ಮಾಡಲಾಗುತ್ತದೆ. 1978ರ ಹೊತ್ತಿಗೆ ಸ್ಯಾಮ್ಸಂಗ್ ನ ಏರೋಸ್ಪೇಸ್ ವಿಭಾಗವೂ ಶುರುವಾಗುತ್ತದೆ. ಕಂಪನಿಯ ಪ್ರಗತಿಗಾಗಿ ಎರಡು ರಿಸರ್ಚ್ & ಡೆವಲಪ್ಮೆಂಟ್ ಘಟಕಗಳು ಶುರುವಾಗುತ್ತವೆ. 1985ರಲ್ಲಿ ಶುರುವಾದ ಇವುಗಳನ್ನು 'ಸ್ಯಾಮ್ಸಂಗ್ ಡೇಟಾ ಸಿಸ್ಟಮ್' ಎಂದು ಕರೆಯಲಾಗುತ್ತದೆ. ಇದರ ಜೊತೆಜೊತೆಗೆ ಹೈ-ಪಾಲಿಮರ್ ಕೆಮಿಕಲ್ಸ್, ಜೆನೆಟಿಕ್ ಇಂಜಿನಿಯರಿಂಗ್ ಟೆಲಿ ಕಮ್ಯುನಿಕೇಷನ್, ನ್ಯಾನೋ ಟೆಕ್ನಾಲಜಿ ಎಲ್ಲದರಲ್ಲಿಯೂ ಸ್ಯಾಮ್ಸಂಗ್ ಕಾಲಿರಿಸಿರುತ್ತದೆ.


ಇಷ್ಟು ಪ್ರಗತಿಯಲ್ಲಿದ್ದ ಸ್ಯಾಮ್ಸಂಗ್ ಕಂಪನಿಯ ಸಂಸ್ಥಾಪಕ ಚುಲ್ಲ್ 1987ರಲ್ಲಿ ಮರಣ ಹೊಂದುತ್ತಾನೆ. ಚುಲ್ಲ್ ನಂತರ ಸ್ಯಾಮ್ಸಂಗ್ ಐದು ವಿಭಾಗಗಳಾಗಿ ಬೇರ್ಪಡುತ್ತದೆ. ಚುಲ್ಲ್ ಮೂರನೇ ಮಗನಾದ ಲೀ ಕುನ್-ಹೀ ಸ್ಯಾಮ್ಸಂಗ್ ಗ್ರೂಪ್ ಎಂಬ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಕಂಪನಿಯನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಉಳಿದ 4 ವಿಭಾಗಗಳನ್ನು ಇತರ ಮಕ್ಕಳು ವಹಿಸಿಕೊಳ್ಳುತ್ತಾರೆ. ಶಿನ್ಸೇಗ್ ಗ್ರೂಪ, ಸಿ.ಜೆ ಗ್ರೂಪ್, ಹನ್ಸಾಲ್ ಗ್ರೂಪ್, ಜೂನ್ಗ್ಹ್ಯಾಂಗ್ ಗ್ರೂಪ್ ಎಂಬ ಹೆಸರಿನಲ್ಲಿ ವಿಭಾಗಿಸಿಕೊಳ್ಳುತ್ತಾರೆ.


ಚುಲ್ಲ್ ಗಿಂತಲೂ ಮಹತ್ವಕಾಂಕ್ಷಿಯಾಗಿದ್ದದ್ದು ಆತನ ಮಗ ಕುನ್-ಹೀ. ಸ್ಯಾಮ್ಸಂಗ್ ಅದುವರೆಗೂ ಜಪಾನಿನ ಕಂಪನಿಗಳ ಕಾರ್ಯತಂತ್ರವನ್ನು ಅನುಸರಿಸುತ್ತಿರುತ್ತದೆ. ಅದುವರೆಗೂ ಇದ್ದ ಮ್ಯಾನೇಜ್ಮೆಂಟ್ ಹೇಗಿತ್ತೆಂದರೆ.. ಮೇಲಧಿಕಾರಿ ಹೇಳಿದ್ದಕ್ಕೆ ಅವರ ಕೈ ಕೆಳಗೆ ಕೆಲಸ ಮಾಡುತ್ತಿರುವವರು ಎದುರುತ್ತರ ನೀಡದೆ, ಸರಿ-ತಪ್ಪು ವಿಮರ್ಶಿಸದೆ ಒಪ್ಪಿಕೊಂಡು.. ಕಾರ್ಯರೂಪಕ್ಕೆ ತರಬೇಕಾಗಿತ್ತು. ಆದರೆ ಕುನ್-ಹೀ ಬಂದ ನಂತರ ಉದ್ಯೋಗಿಗಳಿಗೆ ಹೇಳಿದ ಮಾತು "ಸ್ಯಾಮ್ಸಂಗ್ ಅನ್ನು ಜಾಗತಿಕವಾಗಿ ಬೆಳೆಸಬೇಕೆಂದರೆ.. ಸ್ಯಾಮ್ಸಂಗ್ ಬದಲಾಗಬೇಕು. ಅದಕ್ಕಾಗಿ ಎಲ್ಲವೂ ಬದಲಾಗಬೇಕು. ನಿಮ್ಮ ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ಎಲ್ಲವನ್ನೂ ಬದಲಾಯಿಸಿ" ಎಂಬುದಾಗಿ.


ಸ್ಯಾಮ್ಸಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ತಮ್ಮ ಪ್ರಾಡಕ್ಟ್ ಗಳು ಎಷ್ಟು ತಯಾರಾಗುತ್ತಿವೆ ಎಂಬುದಕ್ಕಿಂತ ಎಷ್ಟು ಗುಣಮಟ್ಟವುಳ್ಳದ್ದು ಎಂಬುದರ ಕಡೆಗೆ ಗಮನವಿಡಲು ನಿರ್ದೇಶಿಸುತ್ತಾನೆ. ತಮ್ಮ ಕೈ ಕೆಳಗಿನವರು ಅಥವಾ ಸಹೋದ್ಯೋಗಿಗಳು.. ತಮ್ಮ ಮೇಲಧಿಕಾರಿಗಳು ತಪ್ಪು ಮಾಡಿದರೆ ತೋರಿಸುವಂತೆ, ತಿದ್ದುವಂತೆ ಒತ್ತಾಯಿಸುತ್ತಾನೆ. ಕಂಪನಿಯಲ್ಲಿದ್ದ ಮಹಿಳಾ ಉದ್ಯೋಗಿಗಳನ್ನು ಸೀನಿಯರ್ ಎಕ್ಸಿಕ್ಯೂಟಿವ್ ಗಳಾಗಿ ಪ್ರಮೋಷನ್ ನೀಡಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಾನೆ.


2000 ಇಸವಿಯಲ್ಲಿ ಸ್ಯಾಮ್ಸಂಗ್ ತನ್ನ ಮೊದಲ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಸೀರೀಸ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಸ್ಯಾಮ್ಸಂಗ್ ಕಂಪನಿಯ ಅತಿ ಹೆಚ್ಚು ಜನಪ್ರಿಯವಾದ ಫೋನ್ ಸೀರೀಸ್ ಎಂದೇ ಹೆಸರುವಾಸಿ. ಆ ಸಮಯದಲ್ಲಿ ಜಗತ್ತಿನಲ್ಲಿಯೇ ಅತಿ ವೇಗವಾಗಿ ಮಾರಾಟವಾದ ಸ್ಮಾರ್ಟ್ ಫೋನ್ ಎಂಬ ಹೆಗ್ಗಳಿಕೆಗೂ ಈ ಸೀರೀಸ್ ಫೋನ್ ಗಳು ಪಾತ್ರವಾಗುತ್ತವೆ. 2010ರ ಹೊತ್ತಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಸೀರೀಸ್ ಮೊಬೈಲ್ ಗಳಲ್ಲಿ ಮಾತ್ರವಲ್ಲದೆ ಟ್ಯಾಬ್ ಗಳಿಗೂ ವಿಸ್ತರಿಸುತ್ತದೆ. 2013ರ ಹೊತ್ತಿಗೆ ಗ್ಯಾಲಕ್ಸಿ ಸೀರೀಸ್ ನ ಸ್ಮಾರ್ಟ್ ವಾಚುಗಳು ಬಿಡುಗಡೆಯಾಗುತ್ತವೆ. 2019ರಲ್ಲಿ ಗ್ಯಾಲಕ್ಸಿ ಸೀರೀಸ್ ನಲ್ಲಿ ಮಡಚುವಂತಹ ಮೊದಲ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದೇ 'ಗ್ಯಾಲಕ್ಸಿ ಫೋಲ್ಡ್'. 2006ರಿಂದ ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾಗುವ ದೂರದರ್ಶನ ತಯಾರಕರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಸ್ಯಾಮ್ಸಂಗ್.


ಸ್ಯಾಮ್ಸಂಗ್ ಹಾಗೂ ಆ್ಯಪಲ್ ಬ್ರ್ಯಾಂಡ್ ಎರಡಕ್ಕೂ ನಿಕಟ ಸಂಬಂಧವಿದೆ. ಇವುಗಳನ್ನು ಬ್ಯುಸಿನೆಸ್‌ನಲ್ಲಿ 'ಫ್ರೆನಿಮೀಸ್' ಎಂದೇ ಕರೆಯುತ್ತಾರೆ. ಫ್ರೆನಿಮೀಸ್ ಎಂಬುದರ ಅರ್ಥ ಮತ್ತೇನಲ್ಲ.. ಮೊದಲು ವ್ಯಾಪಾರದಲ್ಲಿ ಗೆಳೆಯರಾಗಿದ್ದವರು ನಂತರ ಬದ್ಧ ವೈರಿಗಳಾದರು.  ಇದು ಹೇಗಾಯಿತೆಂದರೆ.. 1984ರ ಸಮಯದಲ್ಲಿ ಸ್ಟೀವ್ ಜಾಬ್ಸ್ ಸಾಮ್ಸಂಗ್ ನ ಮೈಕ್ರೋ ಪ್ರೊಸೆಸರ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದಾಗ ಸ್ಯಾಮ್ಸಂಗ್ ಜೊತೆಗೆ ಒಂದು ಒಪ್ಪಂದ ಮಾಡಿಕೊಳ್ಳುತ್ತಾರೆ. ಅಂದಿನಿಂದ ಆ್ಯಪಲ್ ಐ-ಫೋನ್ ಗಳಲ್ಲಿ ಬಳಸಲಾಗುತ್ತಿದ್ದ ಮೈಕ್ರೋ ಪ್ರೊಸೆಸರ್ ಕೊರಿಯಾದ ಅತಿ ದೊಡ್ಡ ಮೈಕ್ರೋ ಪ್ರೊಸೆಸರ್ ಉತ್ಪಾದಕರಾದ ಸ್ಯಾಮ್ಸಂಗ್ ತಯಾರಿಕಾ ಘಟಕದ್ದು. ಹೀಗಿರುವಾಗ, 2011ರ ಸಮಯದಲ್ಲಿ ಗ್ಯಾಲಕ್ಸಿ ಸೀರೀಸ್ ನ ಟ್ಯಾಬ್ ಬಿಡುಗಡೆ ಮಾಡಿದ ನಂತರ ಆ್ಯಪಲ್ ಹಾಗೂ ಸ್ಯಾಮ್ಸಂಗ್ ಎರಡಕ್ಕೂ ಪೇಟೆಂಟ್ ಯುದ್ಧ ಶುರುವಾಗುತ್ತದೆ. ತಾನು ತಯಾರಿಸಿದ ಐ-ಫೋನ್, ಐ-ಪ್ಯಾಡ್ ಅನ್ನು ನಕಲನ್ನು ಮಾಡಿ, ಸ್ಯಾಮ್ಸಂಗ್ ತನ್ನ ಪ್ರಾಡಕ್ಟ್ ಗಳನ್ನು ಬಿಡುಗಡೆಗೊಳಿಸುತ್ತದೆ ಎಂಬ ಆರೋಪ ಮಾಡುತ್ತದೆ. 2018ರವರೆಗೆ ಅಂದರೆ, 7 ವರ್ಷಗಳ ಕಾಲ ಕಾನೂನು ಸಮರ ನಡೆದು ಈ ವ್ಯಾಜ್ಯ ತೀರ್ಮಾನವಾಗುತ್ತದೆ. ಆ್ಯಪಲ್ ಗೆ 539 ಮಿಲಿಯನ್ ಡಾಲರ್ ಗಳಷ್ಟು ಹಣವನ್ನು ನೀಡಬೇಕಾಗಿ ಬರುತ್ತದೆ ಸ್ಯಾಮ್ಸಂಗ್. ಅಂದಿನಿಂದ ಇವರಿಬ್ಬರು 'ಫ್ರೆನಿಮೀಸ್' ಎಂದು ಕರೆಸಿಕೊಳ್ಳುತ್ತಾರೆ.


ಚುಲ್ಲ್ ಕಾಲದಲ್ಲಿ ಯಾವ ರೀತಿಯ ಗಾಸಿಪ್ ಗಳಿಗೂ ಒಳಗಾಗದ ಸ್ಯಾಮ್ಸಂಗ್ ಮೇಲೆ ಕುನ್-ಹೀ ಕಾಲದಲ್ಲಿ ಹಲವಾರು ಆರೋಪಗಳು ಕೇಳಿ ಬರುತ್ತವೆ. ಹಲವಾರು ಕಾರ್ಪೊರೇಟ್ ಹಗರಣಗಳಿಗೆ ಸಿಲುಕುತ್ತದೆ ಸ್ಯಾಮ್ಸಂಗ್. ಸ್ಯಾಮ್ಸಂಗ್ ನ ಕಾರ್ಯದರ್ಶಿಯಾಗಿದ್ದ ಪಾರ್ಕ್ ಜೆನ್ ಹೈ 1996ರ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿರುವ ಪ್ರಕರಣದಲ್ಲಿ ಸಿಕ್ಕಿ ಬೀಳುತ್ತಾರೆ. 2008ರ ಸಮಯದಲ್ಲಿ ಕುನ್-ಹೀ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಾಗುತ್ತದೆ. 80 ಮಿಲಿಯನ್ ಡಾಲರ್ ಗಳಷ್ಟು ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ಎಂಬ ತೀರ್ಪು ಬರುತ್ತದೆ. ಆದರೆ, ರಾಜಕೀಯ ನಾಯಕರ ಪ್ರಭಾವ ಬಹಳಷ್ಟಿದ್ದದಕ್ಕೂ.. ಕುನ್-ಹೀ ಯನ್ನು 2009ರಲ್ಲಿ ಕ್ಷಮೆಯಾಚಿಸಿದ ಎಂದು ಬಿಡುಗಡೆ ಮಾಡಲಾಗುತ್ತದೆ. 2010ರಲ್ಲಿ ಮತ್ತೆ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ಮುಖ್ಯಸ್ಥರಾಗುತ್ತಾರೆ ಕುನ್-ಹೀ. 2014ರಲ್ಲಿ ಉಂಟಾದ ಹೃದಯಘಾತದಿಂದ ಚೇತರಿಸಿಕೊಳ್ಳದೆ ನಂತರ ಕೋಮಾಗೆ ಜಾರುತ್ತಾರೆ. ನಿಧನರಾಗಿದ್ದು 2020ರಲ್ಲಿ. 


ಆದರೆ, ಕುನ್-ಹೀ ಹಾಸಿಗೆ ಹಿಡಿದಾಗಿನಿಂದ ಅನಧಿಕೃತವಾಗಿ ಅಧಿಕಾರವನ್ನೆಲ್ಲಾ ನೋಡಿಕೊಳ್ಳುತ್ತಿದ್ದದ್ದು ಅವರ ಮಗ ಲೀ ಜೇಯ್ ಯಾಂಗ್. ಇವರ ಸಂದರ್ಭದಲ್ಲಿಯೂ ಕೆಲವು ಹಗರಣಗಳಾಗುತ್ತವೆ. 2018ರ ಸಮಯದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್- 7 ಬ್ಯಾಟರಿ ಸಮಸ್ಯೆಯಿಂದಾಗಿ, ಚಾರ್ಜ್ ಮಾಡುವಾಗ ಬೆಂಕಿ ಹೊತ್ತಿಕೊಂಡು, ಆ ಸೀರೀಸ್ ನ ಎಲ್ಲಾ ಫೋನುಗಳನ್ನು ವಾಪಸ್ ಪಡೆಯಲಾಗುತ್ತದೆ. ಅದೇ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದರ ಆರೋಪದ ಮೇಲೆ ಯಾಂಗ್ ಬಂಧನವೂ ಆಗುತ್ತದೆ. ಸ್ಯಾಮ್ಸಂಗ್ ಕಂಪನಿಯ ಉದ್ಯೋಗಿಗಳನ್ನು ಅತಿ ಕಡಿಮೆ ಸಂಬಳಕ್ಕೆ ಅತಿ ಹೆಚ್ಚು ಸಮಯ ದುಡಿಸಿಕೊಳ್ಳುತ್ತಾರೆ ಎಂಬ ಆರೋಪವೂ ಇದೆ. ಆರೋಪದಾಚೆಗೂ ಸ್ಯಾಮ್ಸಂಗ್ ನಲ್ಲಿ 3,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಂಪನಿಯ ಮುಖ್ಯಸ್ಥರ ಹಗರಣಗಳಾಚೆಗೂ ಕಂಪನಿ ಲಾಭದ ಹಾದಿಯಲ್ಲಿದೆ. ಅವರ ಅನುಪಸ್ಥಿತಿಯಲ್ಲಿಯೂ.. ಸಮರ್ಥರ ಕೈಯಲ್ಲಿ ಆಡಳಿತವಿರುವುದರಿಂದ ಕಂಪನಿ ಲಾಭದ ಹಾದಿಯಲ್ಲಿಯೇ ನಡೆಯುತ್ತಿದೆ. 


ತನ್ನ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವುದರಲ್ಲಿ ಎಂದಿಗೂ ಹಿಂದುಳಿದಿಲ್ಲ ಸ್ಯಾಮ್ಸಂಗ್. 2014ರಲ್ಲಿಯೇ ಇಂಟರ್ನೆಟ್ ಆಫ್ ಥಿಂಗ್ಸ್ ಎಂದರೆ ಐ.ಓ.ಟಿಯನ್ನು ಬಳಸಲು ಸ್ಮಾರ್ಟ್ ಥಿಂಗ್ ಎಂಬ ಕಂಪನಿಯನ್ನು ಕೊಂಡುಕೊಂಡಿತು 2018ರಲ್ಲಿ ಆ್ಯಪಲ್-ಪೇ ಎಂಬ ಆ್ಯಪಲ್ ನ ಪೇಮೆಂಟ್ ಆ್ಯಪ್ ಗೆ ಸ್ಪರ್ಧೆ ನೀಡಲು ಲೂಪ್-ಪೇ ಎಂಬ ಕಂಪನಿಯನ್ನು ತನ್ನದಾಗಿಸಿಕೊಂಡಿತು. ಕ್ಲೌಡ್ ಕಂಪ್ಯೂಟಿಂಗ್ ನಲ್ಲಿ ಮುಂಚೂಣಿಯಲ್ಲಿದ್ದ ಜೊಯೆಂಟ್ ಎಂಬ ಕಂಪನಿಯನ್ನು 2016ರಲ್ಲಿ ಕೊಂಡುಕೊಂಡರೆ.. ಕಾರ್ ಮಾರ್ಕೆಟ್ ನ ಆಡಿಯೋ ಹಾಗೂ ಇನ್ಫೋಟೈನ್ಮೆಂಟ್ ಸಿಸ್ಟಮ್ ಗಳಲ್ಲಿಯೂ ಮುಂಚೂಣಿಯಲ್ಲಿರಬೇಕು ಎಂಬ ಉದ್ದೇಶದಿಂದ 2017ರಲ್ಲಿ ಹರ್ಮನ್ ಇಂಟರ್ನ್ಯಾಷನಲ್ ಅನ್ನು ತನ್ನದಾಗಿಸಿಕೊಂಡಿತು. ಬ್ಯುಸಿನೆಸ್ ನಲ್ಲಿ ಎಂದಿಗೂ ಕಚ್ಚಾ ವಸ್ತುಗಳನ್ನು ಬೇರೆಯವರಿಂದ ಅಪೇಕ್ಷಿಸದೆ, ತನ್ನ ಪ್ರಾಡಕ್ಟ್ ಗೆ ಬೇಕಾದ ಪ್ರತಿಯೊಂದನ್ನೂ ತಾನೇ ತಯಾರಿಸುತ್ತಾ ತಂತ್ರಜ್ಞಾನಕ್ಕೆ ಬೇಕಾಗಿರುವ ಎಲ್ಲವನ್ನು ತನ್ನದಾಗಿಸಿಕೊಳ್ಳುತ್ತಾ ದಿನೇ-ದಿನೇ ಮುನ್ನುಗುತ್ತಲೇ ಇದೆ ಸ್ಯಾಮ್ಸಂಗ್.


ಬ್ಯುಸಿನೆಸ್ ನಲ್ಲಿ ವೈಯಕ್ತಿಕಗಳೆಲ್ಲವನ್ನೂ ಮೀರಿ ಬೆಳೆಯಬೇಕು. ರಾಜಕೀಯ ಹಗರಣ, ಬೇರೆಯಾದ ವ್ಯವಹಾರ, ತಾಂತ್ರಿಕ ವಿಫಲತೆ ಇದೆಲ್ಲವನ್ನೂ ಮೀರಿತು ಸ್ಯಾಮ್ಸಂಗ್. ತಾಂತ್ರಿಕ ವಿಫಲತೆಯನ್ನು ಒಪ್ಪಿಕೊಂಡು ಗ್ರಾಹಕರಿಗೆ ಮತ್ತಷ್ಟು ಒಳ್ಳೆಯ ಸೇವೆಯನ್ನು ನೀಡುವ ಉದ್ದೇಶದಿಂದ ಗುಣಮಟ್ಟದ ಕಡೆಗೆ ಗಮನಹರಿಸುತ್ತಾ.. ಪ್ರತಿದಿನ ಪ್ರತಿ ನಿಮಿಷವೂ ಬದಲಾಗುತ್ತಾ.. ಅಪ್ಡೇಟ್ ಆಗುತ್ತಾ, ಬ್ಯುಸಿನೆಸ್ ನಲ್ಲಿ ಬದಲಾವಣೆ ಹಾಗೂ ತಂತ್ರಜ್ಞಾನ ಎಷ್ಟು ಮುಖ್ಯವೆಂದು ತೋರಿಸುತ್ತಾ.. ಕೊರಿಯಾದ ಒಂದು ಪುಟ್ಟ ಪ್ರದೇಶದಿಂದ ಶುರುವಾದ ಸ್ಯಾಮ್ಸಂಗ್ ಇಂದು ಜಾಗತಿಕವಾಗಿ ತನ್ನ ವಿಸ್ತಾರತೆಯನ್ನು ತೋರಿಸುತ್ತಾ.. ಹೀಗೆಯೇ ಬೆಳೆಯಬೇಕು ಎಂಬ ಆಸೆ ಹುಟ್ಟಿಸುತ್ತಾ ಹಾಗೂ ತನ್ನ ಬೆಳವಣಿಗೆಯಿಂದಲೇ ಪಾಠ ಹೇಳುತ್ತಾ.. ಬ್ಯುಸಿನೆಸ್ ನಲ್ಲಿ ಎಂದಿಗೂ ಮಹತ್ವಕಾಂಕ್ಷೆಯ ಕನಸುಗಳಿರಬೇಕು. ಅಂತೆಯೇ ಆ ಕನಸುಗಳನ್ನು ನನಸು ಮಾಡಿಕೊಳ್ಳುವ ದಾರಿಯೂ ಗೊತ್ತಿರಬೇಕು ಎನ್ನುತ್ತ.. ತಾನು ನಡೆದು ಬಂದ ಹಾದಿಯಿಂದಲೇ ವಿಸ್ತಾರವಾದ ಬ್ಯುಸಿನೆಸ್ ಪಾಠ ಹೇಳುತ್ತಿದೆ ಸ್ಯಾಮ್ಸಂಗ್. 


ಸ್ಯಾಮ್ಸಂಗ್ ಕುರಿತ ವಿಸ್ತಾರವಾದ.. ಮತ್ತಷ್ಟು, ಮಗದಷ್ಟು ಮಾಹಿತಿಗಾಗಿ ಹಾಗೂ ಸ್ಯಾಮ್ಸಂಗ್ ಆಡಳಿತ ವರ್ಗ, ಉದ್ಯೋಗಿಗಳು ಹಾಗೂ ನಿವೃತ್ತರಾದವರನ್ನು ಸಂದರ್ಶಿಸಿ 'ಜಿಯೋಫ್ರೈ ಕೆಯ್ನ್' ಎಂಬುವವರು ಸ್ಯಾಮ್ಸಂಗ್ ಕುರಿತಾಗಿಯೇ ಒಂದು ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು 'ಸ್ಯಾಮ್ಸಂಗ್ ರೈಸಿಂಗ್'. ಆಸಕ್ತರು ಈ ಪುಸ್ತಕವನ್ನು ಓದಬಹುದು. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ