"ಮಾವಳ್ಳಿ ಟಿಫನ್ ರೂಮ್ಸ್" ಎಂದಾಗ ಯಾರಿಗೂ ತಕ್ಷಣಕ್ಕೆ ಇದು ಪರಿಚಿತವಾದ ಹೆಸರು ಎಂದೆನಿಸದಿದ್ದರೂ.. ಎಂ.ಟಿ.ಆರ್ ಎಂದಾಕ್ಷಣ "ಅರೆ ..!ಇದು ನನಗೆ ಪರಿಚಿತವಾದ ಹೆಸರು" ಎಂದೆನಿಸದಿರದು. ಏಕೆಂದರೆ ,ಇದರುವ ಬ್ರ್ಯಾಂಡ್ ನೇಮ್ ಅಂತಹದ್ದು. ಬ್ಯುಸಿನೆಸ್ ನಲ್ಲಿ ಬ್ರ್ಯಾಂಡ್ ನೇಮ್ ಸಂಪಾದಿಸಿ, ಅದೇ ಶುಚಿ-ರುಚಿಯಿಂದ ಜನಮಾನಸದಲ್ಲಿ ಉಳಿಯುವ ಪ್ರಯತ್ನ ನಿರಂತರವಾಗಿರಬೇಕು. 100 ವರ್ಷಕ್ಕೆ ಕಾಲಿಡುತ್ತಿರುವ ಎಂ.ಟಿ.ಆರ್ ಕುಟುಂಬದ ಮೂರನೇ ತಲೆಮಾರು ಈಗ ಇದನ್ನು ಮುನ್ನಡೆಸುತ್ತಿದೆ. ಬದಲಾವಣೆಗೆ ತನನ್ನು ಒಡ್ಡಿಕೊಂಡಿರುವ ಇದರ ಗೆಲುವಿನ ಗುಟ್ಟುಗಳೇನು..?? ಎನ್ನುವುದರ ಜೊತೆಗೆ ಅದು ನಡೆದು ಬಂದ ಹಾದಿಯಲ್ಲಿ ಹೆಜ್ಜೆ ಹಾಕೋಣ.
1920 ರಲ್ಲಿ ಮೈಯ್ಯ ಕುಟುಂಬದಿಂದ 4 ಜನ ಸಹೋದರರು ದಕ್ಷಿಣ ಕನ್ನಡ ಜಿಲ್ಲೆಯ ಕೋಟದಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾರೆ. ಅವರಿಗೆ ಗೊತ್ತಿದ್ದ ಕೆಲಸವೆಂದರೆ ಅಡುಗೆ ಮಾಡುವುದು. ಹಾಗಾಗಿ, ಶ್ರೀಮಂತ ಕುಟುಂಬದ ಒಂದೊಂದು ಮನೆಯಲ್ಲಿ ಅಡುಗೆ ಮಾಡುತ್ತಾ ಉಳಿದುಬಿಡುತ್ತಾರೆ. ಆದರೆ ,ಇದಕ್ಕಿಂತ ಬೇರೇನಾದರೂ ಮಾಡಬೇಕಲ್ಲಾ ಎಂದು ಯೋಚಿಸಿ 1924ರಲ್ಲಿ "ಬ್ರಾಹ್ಮಿನ್ ಕಾಫಿ ಕ್ಲಬ್" ಎನ್ನುವ ಹೆಸರಿನಲ್ಲಿ ಲಾಲ್ ಬಾಗ್ ಫೋರ್ಟ್ ರೋಡ್ ನಲ್ಲಿ ಕಾಫಿ ಹಾಗೂ ಇಡ್ಲಿಗಳನ್ನು ಮಾರಲು ಶುರುವಿಟ್ಟರು. ಆಗ ಸಕ್ರಿಯವಾಗಿದ್ದದ್ದು ಮೂವರು ಸಹೋದರರು. ಹಿರಿಯವರಾದ ರಾಮ ಮೈಯ್ಯ, ಪರಮೇಶ್ವರ ಮೈಯ್ಯ ಹಾಗೂ ಗಣಪಯ್ಯಮೈಯ್ಯ. ಇದಾದ ಎರಡು ವರ್ಷಗಳ ನಂತರ.. 1926ರಲ್ಲಿ ಹಿರಿಯವರಾದ ರಾ ಮೈಯ್ಯ ತಮ್ಮ ಕುಟುಂಬದ ಮೇಲ್ವಿಚಾರಣೆ ನೋಡಿಕೊಳ್ಳಲು ಊರಿಗೆ ಮರಳುತ್ತಾರೆ. ಪರಮೇಶ್ವರ ಮೈಯ್ಯ ಅವರು ತೀರಿಕೊಂಡ ನಂತರ ಮತ್ತೊಬ್ಬ ಸಹೋದರ ಯಜ್ಞನಾರಾಯಣ ಮೈಯ್ಯ ಹೋಟೆಲ್ ಬ್ಯುಸಿನೆಸ್ ನಲ್ಲಿ ಸೇರಿಕೊಳ್ಳುತ್ತಾರೆ. ಯಜ್ಞನಾರಾಯಣ ಅವರನ್ನು ಎಲ್ಲರೂ ಪ್ರೀತಿಯಿಂದ ಯಜ್ಞಪ್ಪ ಎಂದೇ ಕರೆಯುತ್ತಿದ್ದರು.
ಯಜ್ಞಪ್ಪ ಬಂದ ನಂತರ ಬ್ಯುಸಿನೆಸ್ ನ ದಿಕ್ಕು ಬದಲಾಯಿತು ಎಂದರೆ ಅತಿಶಯೋಕ್ತಿಯಾಗಲಾರದು. 1951 ರಲ್ಲಿ ಯಜ್ಞಪ್ಪ ಬೇರೆ ದೇಶಗಳಲ್ಲೆಲ್ಲ ಹೋಟೆಲ್ ಬ್ಯುಸಿನೆಸ್ ಹೇಗಿರುತ್ತದೆ ಎಂದು ತಿಳಿಯುವುದಕ್ಕೆ ಯುರೋಪ್ ಗೆ ಹೋಗುತ್ತಾರೆ. ಅಲ್ಲಿನ ರೆಸ್ಟೋರೆಂಟ್ ಗಳಲ್ಲಿ ಶುಚಿತ್ವ ಹಾಗೂ ಅಡುಗೆ ಮನೆಯನ್ನು ಕಂಡು ಪ್ರಭಾವಿತರಾಗುತ್ತಾರೆ. ಅಲ್ಲಿಂದ ಬಂದ ನಂತರ ತಮ್ಮ ಹೋಟೆಲ್ ನಲ್ಲಿಯೂ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ. ಅದಾದ ನಂತರ ಹೋಟೆಲ್ ನ ಅಡುಗೆಮನೆಯಲ್ಲಿಯೂ ಬದಲಾವಣೆ ಮಾಡುತ್ತಾರೆ. ಫ್ಯಾಷನೆಬಲ್ ಆದ ಓಪನ್ ಕಿಚನ್ ಆಗಿ ಪರಿವರ್ಚಿಸುತ್ತಾರೆ. ಗ್ರಾಹಕರು ಕಿಚನ್ ಅನ್ನು ದಾಟಿ ತಾವು ಕುಳಿತುಕೊಳ್ಳಲು ಹೋಗಬಹುದಿತ್ತು. ಕಿಚನ್ ನಲ್ಲಿ ಅಡುಗೆ ಮಾಡುವ ರೀತಿ-ನೀತಿಗಳನ್ನೂ ಗಮನಿಸಬಹುದಾಗಿತ್ತು. ಇದರಿಂದ ಪಾರದರ್ಶಕತೆ ಹಾಗೂ ಸ್ವಚ್ಛತೆಯ ಕುರಿತು ಗ್ರಾಹಕರಿಗೆ ಅರಿವಾಗುತ್ತದೆ ಎಂಬುದು ಅವರ ಆಶಯ. ಅಲ್ಲದೇ.. ಆರೋಗ್ಯಕ್ಕೆ ಸಂಬಂಧಿಸಿದ ,ಸರಿಯಾದ ಆಹಾರ ಕ್ರಮಕ್ಕೆ ಸಂಬಂಧಿಸಿದ, ಕೆಲವು ರೆಸಿಪಿಗಳು ಇದ ಚಿಕ್ಕ-ಚಿಕ್ಕ ಬುಕ್ಲೆಟ್ ಗಳನ್ನೂ ವಿತರಿಸಲು ಶುರುಮಾಡುತ್ತಾರೆ.
ಹೋಟೆಲ್ ನ ಮೆನುವಿನಲ್ಲಿಯೂ ಬದಲಾವಣೆ ತರುತ್ತಾರೆ. ಫ್ರೆಂಚ್ ಸ್ವೀಟ್ ಆಗಿದ್ದ ಫ್ರೆಂಚ್ ಪಫ್ ಪೇಸ್ಟ್ರಿಯನ್ನು ತಮ್ಮದೇ ರೀತಿಯಲ್ಲಿ ತಯಾರಿಸಲು ಶುರು ಮಾಡುತ್ತಾರೆ. ಫ್ರೈ ಆಗಿರುವ ಬಿಸ್ಕೆಟ್ ಅನ್ನು ಮಿಲ್ಕ್-ಕೋವಾ ಹಾಗೂ ಬಾದಾಮಿ-ಖೀರಿನಲ್ಲಿ ಮುಳುಗಿಸಿ, ಅದನ್ನು ಫ್ರೆಂಚ್ ಸ್ವೀಟ್ ಎಂದು ಹೆಸರಿಸುತ್ತಾರೆ. ರುಚಿ ಚೆನ್ನಾಗಿದ್ದರೂ.. ಹೆಸರಿನ ಕಾರಣದಿಂದ ಆ ಸ್ವೀಟ್ ಅಷ್ಟಾಗಿ ಗ್ರಾಹಕರನ್ನು ಸೆಳೆಯುವುದಿಲ್ಲ. ಅದೇ ಸಮಯದಲ್ಲಿ ಹತ್ತಿರದ ಥಿಯೇಟರ್ ನಲ್ಲಿದ್ದ, ಹಿಟ್ ಆಗುತ್ತಿದ್ದ ಚಲನಚಿತ್ರದ ಹೆಸರನ್ನು ಆ ಸ್ವೀಟ್ ಗೆ ನೀಡುತ್ತಾರೆ. ಆ ಸ್ವೀಟ್ ಹೆಸರೇ "ಚಂದ್ರಹಾರ".
ಹೀಗೆ ಮನುವಿನ ಶೆಡ್ಯೂಲ್ ನಲ್ಲಿಯೂ ಬಹಳಷ್ಟು ಬದಲಾವಣೆ ಮಾಡುತ್ತಾರೆ. ಉದಾಹರಣೆಗೆ: ಕೆಲವು ವಿಶೇಷ ತಿಂಡಿಗಳನ್ನು ವಾರದ ಆಯಾ ದಿನಗಳಲ್ಲಿ ಮಾತ್ರ ದೊರೆಯುವಂತೆ ಮಾಡುತ್ತಾರೆ. ಬುಧವಾರ ಹನಿ ಹಲ್ವಾ, ಗುರುವಾರ ಬಾಳೆಹಣ್ಣಿನ ಕೇಸರಿಬಾತ್, ಶುಕ್ರವಾರ ಬಾದಾಮ್ ಹಲ್ವಾ ಹೀಗೆ.. ಇದರ ಜೊತೆಗೆ ಯಾವ ಹೋಟೆಲ್ ನಲ್ಲಿಯೂ ತಿಂಡಿ ಜೊತೆಗೆ ಎಕ್ಸ್ಟ್ರಾ ತುಪ್ಪವನ್ನು ನೀಡುತ್ತಿರಲಿಲ್ಲ. ಆದರೆ, ರವೆ ಇಡ್ಲಿ, ದೋಸೆ, ಬಿಸಿಬೇಳೆ ಬಾತ್ ಜೊತೆಗೆ ಒಂದು ಕಪ್ ನಲ್ಲಿ ತುಪ್ಪವನ್ನು ನೀಡಲು ಪ್ರಾರಂಭಿಸುತ್ತಾರೆ.
ಶ್ರೀಮಂತ ಗ್ರಾಹಕರು ಹಾಗೂ ಸಾಮಾನ್ಯ ಗ್ರಾಹಕರ ನಡುವಿನ ವ್ಯತ್ಯಾಸ ಅವರಿಗೆ ಗೊತ್ತಿರುತ್ತದೆ. ಹಾಗಾಗಿ, ಶ್ರೀಮಂತ ಗ್ರಾಹಕರ ಸೇವೆಗಾಗಿ ಇರುವ ರೂಮ್ ಗಳಲ್ಲಿ ಚಿನ್ನದ ತಟ್ಟೆಗಳು, ಲೋಟಗಳನ್ನು ಬಳಸುತ್ತಾರೆ. ಆಯ್ದ ಗ್ರಾಹಕರಿಗೆ ಬೆಳ್ಳಿ ತಟ್ಟೆ, ಲೋಟದ ರೂಢಿಯೂ ಇದ್ದಿತು. ಹಾಗೆಂದು, ಸಾಮಾನ್ಯ ಜನರನ್ನು ಕಡೆಗಣಿಸಿರಲಿಲ್ಲ. ಅವರಿಗಾಗಿ, ಕೈಗೆಟುಕುವ ದರದಲ್ಲಿ.. ಉತ್ತಮ ಗುಣಮಟ್ಟದ ಕಾಫಿ-ತಿಂಡಿಗಳನ್ನು ನೀಡುತ್ತಿದ್ದರು. ಕೇವಲ ಕಾಫಿ ಕುಡಿಯುವವರಿಗಾಗಿ ಕಾಫಿ ರೂಮುಗಳು ಎನ್ನುವ ಪರಿಕಲ್ಪನೆಯನ್ನು ತಂದಿದ್ದರು. ಇದರಿಂದ ಜನರು ದೊಂಬಿಯಾಗದೆ, ಸರ್ವೀಸ್ ಕೂಡಾ ಬೇಗ ಸಿಗುವಂತಾಗುತ್ತಿತ್ತು. 1996ರಲ್ಲಿ ಅನ್ಲಿಮಿಟೆಡ್ ಥಾಲಿ ಅಥವಾ ಮದುವೆ ಊಟ ಎನ್ನುವ ಪರಿಕಲ್ಪನೆಯಲ್ಲಿ 50 ರೂಪಾಯಿಗೆ ಊಟ ನೀಡಲು ಶುರು ಮಾಡಿದರು. ಇಂದು ಅದು 270ರೂ ಹತ್ತಿರ-ಹತ್ತಿರ ಬೆಲೆ ಇದೆ.
1960 ರಲ್ಲಿ ಆ ಪುಟ್ಟ ಜಾಗ ಸಾಕಾಗದೆ, ಅದಕ್ಕಿಂತ ದೊಡ್ಡದಾಗಿರುವ ಜಾಗಕ್ಕೆ ತಮ್ಮ ಹೋಟೆಲ್ ಅನ್ನು ಬದಲಿಸುತ್ತಾರೆ. ಇದು ಎಲ್ಲರಿಗೂ ಲಭ್ಯವಾಗುವ ಹೋಟೆಲ್ ಎನ್ನುತ್ತಾ ಅದರ ಹೆಸರನ್ನೂ ಬದಲಾಯಿಸುತ್ತಾರೆ. ಆ ಜಾಗದ ಹೆಸರು ಮಾವಳ್ಳಿ ಆಗಿದ್ದರಿಂದ "ಮಾವಳ್ಳಿ ಟಿಫಿನ್ ರೂಮ್ಸ್" ಕರೆಯುತ್ತಾರೆ.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅಕ್ಕಿಯ ಬೆಲೆ ಏರಿದ್ದಲ್ಲದೆ, ಅಕ್ಕಿಗೆ ಅಭಾವ ಉಂಟಾಗಿತ್ತು. ಆ ಸಂದರ್ಭದಲ್ಲಿ ಯಜ್ಞಪ್ಪನವರು ಇದಕ್ಕೆ ಪರಿಹಾರ ಹುಡುಕುತ್ತಾರೆ. ಅಕ್ಕಿಯ ಬದಲಿಗೆ ಇಡ್ಲಿ ತಯಾರಿಕೆಯಲ್ಲಿ ರವೆಯನ್ನು ಬಳಸುತ್ತಾರೆ. ಅದಾದ ನಂತರ, ರವೆ ಇಡ್ಲಿ ಇಡೀ ದಕ್ಷಿಣ ಭಾರತದಲ್ಲಿಯೇ ಬಹಳಷ್ಟು ಪ್ರಸಿದ್ಧಿ ಹೊಂದಿತು. ಹಾಗೆಯೇ, ಎಲ್ಲಾ ದಕ್ಷಿಣ ಭಾರತದ ಹೋಟೆಲ್ ಗಳಲ್ಲಿ ಬೇಡಿಕೆಯ ತಿಂಡಿಯೆನಿಸಿಕೊಂಡಿತು.
ಎಂ.ಟಿ.ಆರ್ ನಲ್ಲಿ ಹೀಗೆ ಬಹಳಷ್ಟು ಬದಲಾವಣೆ ಮಾಡಿದ ಯಜ್ಞಪ್ಪನವರು 1968ರಲ್ಲಿ ತೀರಿಕೊಳ್ಳುತ್ತಾರೆ. ನಂತರ, ಅವರ ಜಾಗಕ್ಕೆ ಬರುವುದು ಅವರ ಸೋದರಳಿಯ ಹರಿಶ್ಚಂದ್ರ ಮೈಯ್ಯ.
ಸರಾಗವಾಗಿ ನಡೆಯುತ್ತಿದ್ದ ಹೋಟೆಲ್ ಬ್ಯುಸಿನೆಸ್ ಗೆ ಮೊದಲ ಅತಿ ದೊಡ್ಡ ಸಮಸ್ಯೆ ಉಂಟಾಗಿದ್ದು 1976ರ ಸಮಯದಲ್ಲಿ. ಈ ಸಮಯದಲ್ಲಿ ಎಮರ್ಜೆನ್ಸಿ ಘೋಷಣೆಯಾಗಿ ಹಣದುಬ್ಬರ ಹೆಚ್ಚಾಗಿತ್ತು. ಆಗ, ಫುಡ್ ಕಂಟ್ರೋಲ್ ಆಕ್ಟ್ ನ ಪ್ರಕಾರ ಎಲ್ಲಾ ಹೋಟೆಲ್ ಗಳಳೂ ತಾವು ಮಾರುವ ತಿಂಡಿಗಳ ನಿಗದಿತ ದರವನ್ನು ಕಡಿಮೆ ಮಾಡಬೇಕಿತ್ತು. ಉದಾಹರಣೆಗೆ: ಒಂದು ರೂಪಾಯಿ ಇದ್ದ ತಿಂಡಿಗೆ 25 ಪೈಸೆ ತೆಗೆದುಕೊಳ್ಳಬೇಕೆಂಬ ಆದೇಶ ಹೊರಡಿಸಿತು. ಈ ಸಂದರ್ಭದಲ್ಲಿ ಎಷ್ಟೋ ಹೋಟೆಲ್ ಗಳು ಮುಚ್ಚಿ ಹೋದವು. ಇನ್ನಷ್ಟು ಹೋಟೆಲ್ ಗಳು ಕಡಿಮೆ ಗುಣಮಟ್ಟದ ಆಹಾರವನ್ನು ನೀಡತೊಡಗಿದವು. ಇಲ್ಲವೇ, ತಮ್ಮ ಕೆಲಸಗಾರರನ್ನು ತೆಗೆದು ಹಾಕತೊಡಗಿದರು. ಆದರೆ, ಎಂ.ಟಿ.ಆರ್ ಅದಾವುದನ್ನೂ ಮಾಡಲಿಲ್ಲ. ನಷ್ಟವಾದರೂ ಪರವಾಗಿಲ್ಲ ಎನ್ನುತ್ತಾ ... ಕೆಲಸಗಾರರನ್ನು ತೆಗೆಯದ, ಕಡಿಮೆ ದರವಿದ್ದರೂ ಗುಣಮಟ್ಟದಲ್ಲಿ ರಾಜಿಯಾಗದೆ, ಗುಣಮಟ್ಟದ ತಿಂಡಿಯನ್ನು ಕೊಡತೊಡಗಿತು. ಅದಕ್ಕೆ ಬದಲಾಗಿ ಕಡಿಮೆ ಖರ್ಚಿನ ತಿಂಡಿಗಳನ್ನು ತಯಾರಿಸಬಹುದಾ ಎಂದು ಯೋಚಿಸಿತು. ಆದರೆ, ಯಾವುದೂ ಫಲ ಕೊಡದೆ, ನಷ್ಟದ ಕಾರಣದಿಂದಾಗಿ.. 16 ದಿನಗಳ ನಂತರ ಎಂ.ಟಿ.ಆರ್ ತಾತ್ಕಾಲಿಕವಾಗಿ ತನ್ನ ಹೋಟೆಲ್ ಬಾಗಿಲನ್ನು ಮುಚ್ಚಿತು. ಹಾಗೆಂದು, ಅಷ್ಟಕ್ಕೇ ಸುಮ್ಮನಾಗಲಿಲ್ಲ.
ಎಂ.ಟಿ.ಆರ್ ವತಿಯಿಂದ ಸಾಂಬಾರ್ ಪೌಡರ್, ರಸಂ ಪೌಡರ್, ಇಡ್ಲಿ ದೋಸೆಯ ಹಿಟ್ಟು, ರವೆ ಇಡ್ಲಿಯ ಪ್ರಿಮಿಕ್ಸ್ , ಬಿಸಿಬೇಳೆ ಬಾತ್ ಮಸಾಲ, ಹೀಗೆ ರೆಡಿ ಟು ಈಟ್ ಫುಡ್ ಮಿಕ್ಸ್ ಪ್ಯಾಕೇಜ್ ಗಳನ್ನು ತಯಾರಿಸಿ ತನ್ನದೇ ಸ್ಟೋರ್ ಶುರು ಮಾಡಿತು. 1976ರ ಸಮಯದಲ್ಲಿ ಬಾಗಿಲು ಹಾಕಿದ್ದ ಎಂ.ಟಿ.ಆರ್ ತಿರುಗಿ ತನ್ನ ಹೋಟೆಲ್ ಶುರು ಮಾಡಿದ್ದು 1981 ರಲ್ಲಿ .ಇದು ಕೇವಲ ಎಂ.ಟಿ.ಆರ್ ಒಂದರ ಕಥೆಯಾಗಿರಲಿಲ್ಲ. ಹೆಚ್ಚು-ಕಡಿಮೆ ಎಲ್ಲಾ ಹೋಟೆಲ್ ಗಳೂ ಇದೇ ಸಮಸ್ಯೆಯನ್ನು ಹೊಂದಿದ್ದವು. ಎಲ್ಲರಿಗೂ ಸಮಸ್ಯೆಯಾದಾಗ ಅಲ್ಲಿಂದ ಹೆದರಿ ಪಲಾಯನ ಮಾಡುವುದೇ ಪರಿಹಾರವಲ್ಲ. ಅಥವಾ.. ಎಲ್ಲರಿಗೂ ಆದದ್ದೇ ತನಗೆ ಆಗುತ್ತದೆ ಎಂದು ಕೈಕಟ್ಟಿಕೊಳ್ಳುವುದು ತರವಲ್ಲ. ಇನ್ನೊಬ್ಬರು ಪರಿಹಾರ ಹುಡುಕುತ್ತಾರೆಂದು ನಿರೀಕ್ಷಿಸಿ, ಯಾರನ್ನೋ ದೂಷಿಸುವ ಬದಲಾಗಿ ನಮ್ಮದೇ ಆದ ಇನ್ನೋವೇಟಿವ್ ಮಾರ್ಗವನ್ನು ಹುಡುಕಬಹುದು ಎಂದು ತೋರಿಸಿದ್ದು ಎಂ.ಟಿ.ಆರ್.
ಹೀಗೆ, ಬೆಳೆಯುತ್ತಿದ್ದ ಬ್ಯುಸಿನೆಸ್ ನಲ್ಲಿ 1983 ರಲ್ಲಿ ಎರಡು ವಿಭಾಗಗಳಾದವು. ಒಂದು ರೆಸ್ಟೋರೆಂಟ್, ಮತ್ತೊಂದು ಪ್ಯಾಕೇಜ್ ಫುಡ್ ಬಿಸಿನೆಸ್. ಇದನ್ನು ಎಂ.ಟಿ.ಆರ್ ಫುಡ್ ಲಿಮಿಟೆಡ್ ಎಂದು ಹೆಸರಿಸಲಾಯಿತು. ಪ್ಯಾಕೆಟ್ ಫುಡ್ ಗಳನ್ನು ಮಾರಾಟ ಮಾಡುವುದು ಆಗ ಸುಲಭವೇನಿರಲಿಲ್ಲ.. ವಿದೇಶಗಳಂತೆ ಭಾರತದಲ್ಲಿ ಅದು ಪ್ರಚಲಿತವಾಗಿರಲಿಲ್ಲ. ಜೊತೆಗೆ, ಹಿಂದುಸ್ತಾನ್ ಲೆವರ್ ಲಿಮಿಟೆಡ್ ಹಾಗೂ ನೆಸ್ಲೆಗಳು ಎದುರಾಳಿ ಕಂಪನಿಗಳಾಗಿದ್ದವು. ಆದರೆ, ದೇಶೀಯ ಆಹಾರ ಹಾಗೂ ಗುಣಮಟ್ಟದ ಕಾರಣದಿಂದ ಹೆಚ್ಚಾಗಿ ಎಂ.ಟಿ.ಆರ್ ಕಡೆಗೆ ಎಲ್ಲರೂ ಒಲವು ತೋರಿಸತೊಡಗಿದರು ಪ್ಯಾಕೇಜ್ಡ್ ಫುಡ್ ಬ್ಯುಸಿನೆಸ್ ಅನ್ನು ಯಜ್ಞಪ್ಪನವರ ಮಗ ಸದಾನಂದ ಮೈಯ್ಯ ಮುಂದುವರಿಸಿದರೆ, ರೆಸ್ಟೋರೆಂಟ್ ಬಿಸಿನೆಸ್ ಅನ್ನು ಹರಿಶ್ಚಂದ್ರ ಅವರ ಮಕ್ಕಳಾದ ಹೇಮಮಾಲಿನಿ ಮೈಯ್ಯ, ವಿಕ್ರಂ ಮೈಯ್ಯ ಹಾಗೂ ಅರವಿಂದ್ ಮೈಯ್ಯ ಮುಂದುವರಿಸುತ್ತಿದ್ದರು.
ಎಂ.ಟಿ.ಆರ್ ಅಷ್ಟು ಹೆಸರುವಾಸಿಯಾಗಿದ್ದರೂ ಅದು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 80 ವರ್ಷಗಳ ನಂತರ ಅಂದರೆ 2014ರ ಸಮಯದಲ್ಲಿ ರಾಜಾಜಿನಗರದಲ್ಲಿ ಅದರ ಮತ್ತೊಂದು ಶಾಖೆಯನ್ನು.. ಎಂ.ಟಿ.ಆರ್ 1924 ಎಂಬ ಹೆಸರಿನಲ್ಲಿ ತೆರೆಯಿತು. ಇದಾದ ನಂತರ ಬೆಂಗಳೂರಿನಲ್ಲಿ ಎಂಟು ಶಾಖೆಗಳಾದವು. 2013ರಲ್ಲಿ ಸಿಂಗಾಪುರ್, 2014ರಲ್ಲಿ ದುಬೈ ,ನಂತರ ಕೋಲಾಲಂಪುರ್ ಹೀಗೆ ಹಲವಾರು ದೇಶಗಳಲ್ಲಿ ತನ್ನ ಹೋಟೆಲ್ ಶುರು ಮಾಡಿತು. ಈಗ 32 ದೇಶಗಳಲ್ಲಿ ಎಂ.ಟಿ.ಆರ್ ನ ಹೋಟೆಲ್ ಗಳಿವೆ.
ಕಾರ್ಗಿಲ್ ಯುದ್ಧದ ನಂತರ ಬಹಳಷ್ಟು ಬದಲಾವಣೆಗಳಾದವು. ಪ್ಯಾಕೇಜ್ ಫುಡ್ ನಲ್ಲಿಯೂ ಸಹ ಕೆಲವಷ್ಟು ಮಾನದಂಡಗಳನ್ನು ಅನುಸರಿಸಬೇಕಿತ್ತು. ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೋರೇಟರಿ ಪ್ರಕಾರ ಯಾವುದೇ ಫುಡ್ ಪ್ರಿಸರ್ವೇಟಿವ್ ಗಳನ್ನು ಆ ಪ್ಯಾಕೆಜಿಂಗ್ ಫುಡ್ ಗೆ ಸೇರಿಸುವಂತಿರಲಿಲ್ಲ. ಅದು ಕೊಡುತ್ತಿದ್ದ ಹಜಾರ್ಡ್ ಅನಾಲಿಸಿಸ್ ಹಾಗೂ ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ ಗಳಿಂದ ಸರ್ಟಿಫೈ ಆಗಬೇಕಿತ್ತು. ಹಾಗೆ ಸರ್ಟಿಫೈ ಆದ ಭಾರತದ ಮೊದಲ ಕಂಪನಿ ಎಂ.ಟಿ.ಆರ್. ಇದು ತನ್ನ ಪ್ಯಾಕಿಂಗ್ ಫುಡ್ ಗಳಲ್ಲಿ ಯಾವುದೇ ಪ್ರಿಸರ್ವೇಟಿವ್ ಗಳನ್ನು ಬಳಸುತ್ತಿರಲಿಲ್ಲ.
ಹೀಗೆ, ಬ್ರ್ಯಾಂಡೆಡ್ ಆಗುವ ರೆಡಿ-ಟು-ಈಟ್, 3-ಮಿನಿಟ್ಸ್ ಫುಡ್ ಗಳನ್ನು ತಯಾರಿಸಲು ಅವರು ಬಹಳಷ್ಟು ಸಮಯ ತೆಗೆದುಕೊಂಡು ನಂತರ ಮಾರ್ಕೆಟಿಂಗ್ ಗೆ ಬಿಡುತ್ತಿದ್ದರು. ತಮಿಳುನಾಡಿನ ಸಾಂಬಾರ್ ಪೌಡರ್ ಅನ್ನು ತಯಾರಿಸಲು ಅವರು ತೆಗೆದುಕೊಂಡದ್ದು ಬರೋಬ್ಬರಿ ನಾಲ್ಕು ವರ್ಷ. ಎಲ್ಲರಿಗೂ ಒಪ್ಪಿಗೆಯಾಗುವ ರುಚಿ ಸಿಗಲು ಅವರು ಹಲವಾರು ಮನೆಗಳಿಗೆ ಭೇಟಿ ನೀಡಿದರಲ್ಲದೆ, ಹಲವರಿಂದ ರೆಸಿಪಿ ತಿಳಿದುಕೊಂಡರು ಹೆಚ್ಚು ಕಡಿಮೆ 3500 ಜನರಿಂದ ಈ ರೆಸಿಪಿಯನ್ನು ಕಂಡುಕೊಂಡು ಬೇರೆ-ಬೇರೆ ವಿಧಾನದಲ್ಲಿ ತಯಾರಿಸಿದರು ಎನ್ನಲಾಗಿದೆ. ತೆಲುಗಿನ ಮಹಿಳೆಯರಿಂದಲೂ ಹೀಗೆ ತಿಳಿದು ತಯಾರಿಸಿದ 'ಮಸಾಲಾ ಕಾರಂ' ಪ್ರಖ್ಯಾತಿಯಾಗಿದೆ. ಗ್ರಾಹಕರಿಗೆ ಫರ್ಫೆಕ್ಟ್ ಆದ ಪ್ರಾಡಕ್ಟ್ ನೀಡಲು ಇಷ್ಟೆಲ್ಲಾ ತಯಾರಿ.
ಪ್ಯಾಕೇಜ್ ಫುಡ್ ಬಿಜಿನೆಸ್ ಹಾದಿ ಸುಗಮವಾಗಿ ಏನು ಇರಲಿಲ್ಲ ಇದಕ್ಕೆ ಎವರೆಸ್ಟ್, ಆಚಿ, ಶಕ್ತಿ, ಈಸ್ಟರ್ನ್ ಹೀಗೆ ಹಲವಾರು ಕಂಪನಿಗಳಿಂದ ಪೈಪೋಟಿಯಿತ್ತು. ಆದರೆ, ಎಂ.ಟಿ.ಆರ್ ಗೆ ಒಂದು ಅನುಕೂಲವಿತ್ತು. ಅದೆಂದರೆ, ಆ ಕಂಪನಿಗಳೆಲ್ಲಾ ಪ್ಯಾಕೇಜ್ ಫುಡ್ ಅನ್ನು ಅಥವಾ ಸ್ನಾಕ್ಸ್ ಅನ್ನು ಮಾತ್ರ ಮಾರಾಟ ಮಾಡುತ್ತಿದ್ದರೆ.. ಎಂ.ಟಿ.ಆರ್ ಇದರ ಜೊತೆಗೆ ಹೋಟೆಲ್ ಬ್ಯುಸಿನೆಸ್ ಅನ್ನೂ ನಡೆಸುತ್ತಿದ್ದುದರಿಂದ ಗ್ರಾಹಕರು ಹೆಚ್ಚಿದ್ದರು. ಅಲ್ಲದೇ, ಹಲವಾರು ನಾಟಕಗಳನ್ನು ಹಾಗೂ ಮ್ಯಾಜಿಕ್ ಶೋ ಗಳನ್ನು ಏರ್ಪಡಿಸಿ ಅಲ್ಲಿ ತನ್ನ ಪ್ರಾಡಕ್ಟ್ ಗಳ ಫ್ರೀ ಸ್ಯಾಂಪಲ್ ಗಳನ್ನು ನೀಡುತ್ತಿತ್ತು. ಇದರಿಂದ ಗ್ರಾಹಕರು ಅದರ ರುಚಿ ನೋಡಿ ನಂತರ ಅದನ್ನು ಬಳಸಲು ಶುರು ಮಾಡುತ್ತಿದ್ದರು.
ಪ್ಯಾಕೇಜ್ ಫುಡ್ ಬಿಜಿನೆಸ್ ನಲ್ಲಿಯೂ ಎರಡು ವಿಭಾಗಗಳಾದವು. ಒಂದರಲ್ಲಿ ಪುಡಿಗಳು, ಹಿಟ್ಟು ಈ ರೀತಿಯ ತಯಾರಿಕಾ ಸಾಮಗ್ರಿಗಳು ಸಿಗುತ್ತಿದ್ದರೆ.. ಮತ್ತೊಂದರಲ್ಲಿ ಸ್ನಾಕ್ಸ್ ಗಳು, ಐಸ್ ಕ್ರೀಮ್ ಗಳು, ಕೆಲ್ಲಾಗ್ಗ್ಸ್ ಮಿಕ್ಸ್ ಗಳು ಹೀಗೆ ಹಲವಾರು ರೀತಿಯ ಸ್ನಾಕ್ಸ್ ಗಳು ಸಿಗುತ್ತಿದ್ದವು. ಭಾರತದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಮಾರ್ಕೆಟಿಂಗ್ ಆಗಲಿ ಎಂಬ ಕಾರಣಕ್ಕೆ ನಾರ್ವೆಯ ಫುಡ್ ಬ್ರಾಂಡ್ ಆದ ಓರ್ಕ್ಲಾ ಜೊತೆಗೆ 1992 ರಲ್ಲಿ ಟೈ ಅಪ್ ಆದರು. 2007 ರಲ್ಲಿ ಪ್ಯಾಕೇಜ್ ಫುಡ್ ಬಿಸಿನೆಸ್ ನನ್ನು ಅವರಿಗೇ ಮಾರಿದರು. ಇಂದು ಈ ಪ್ಯಾಕೇಜ್ ಫುಡ್ ಬ್ಯುಸಿನೆಸ್ 21ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದೆ. 130 ಕ್ಕೂ ಅಧಿಕ ಪ್ರಾಡಕ್ಟ್ ಗಳಿವೆ.
"ಓಲ್ಡ್ ಇಸ್ ಗೋಲ್ಡ್" ಎನ್ನುವ ಗಾದೆ ಮಾತೊಂದಿದೆ. ಹಾಗೆ ಎಂ.ಟಿ.ಆರ್ ನಲ್ಲಿ ರುಚಿ ಬದಲಾದರೆ ಮಾತ್ರವಲ್ಲ ಅಲ್ಲಿನ ಪರಿಸರ ಬದಲಾದರೂ ಗ್ರಾಹಕರು ಅದನ್ನು ಇಷ್ಟಪಡುವುದಿಲ್ಲ ಇದಕ್ಕೆ ಪುಟ್ಟ ಉದಾಹರಣೆಯಾಗಿ ಹೋಟೆಲ್ ನಲ್ಲಿ ಹಳೆಯ ಕೆಂಪು ಕುರ್ಚಿಗಳಿದ್ದ ಕುರ್ಚಿಗಳನ್ನು ಒಡೆದಿವೆ ಎಂದು ಬದಲಾಯಿಸಿದಾಗ, ಗೋಡೆ ಹಾಗೂ ನೆಲಕ್ಕೆ ಬೇರೆ ಟೈಲ್ಸ್ ಬದಲಾಯಿಸಲು ಹೊರಟಾಗ ಎಷ್ಟೋ ಗ್ರಾಹಕರು ಇದನ್ನು ಇಷ್ಟಪಡಲಿಲ್ಲವಂತೆ. ಹೋಟೆಲ್ ನ ಪರಿಸರ ಬದಲಾವಣೆಯನ್ನೇ ಇಷ್ಟಪಡದ ಗ್ರಾಹಕರು, ಇನ್ನು ರುಚಿ ಬದಲಾದರೆ ಇಷ್ಟ ಪಡುತ್ತಾರೆಯೇ..?? ಎಂ.ಟಿ.ಆರ್ ಪ್ರಕಾರ ಅವರಿಗೆ ಹಣಕ್ಕಿಂತ ಹೆಚ್ಚು ಮುಖ್ಯವೆನಿಸುವುದು ಅವರ ಖ್ಯಾತಿ. ಅದನ್ನು ಅವರು ಅವರ ಶುಚಿ-ರುಚಿಯಿಂದ ಉಳಿಸಿಕೊಂಡು ಬರುತ್ತೇವೆ ಎನ್ನುವ ಭರವಸೆ ನೀಡುತ್ತಾರೆ.
ಕೋವಿಡ್ ಸಮಯದಲ್ಲಿ ಎಷ್ಟೋ ಹೋಟೆಲ್ ಗಳು ಮುಚ್ಚಿ ಹೋದವು. ಆದರೆ, ಆ ಸಮಯದಲ್ಲಿ ಹೋಟೆಲ್ ಗಳಿಂದ ಆಹಾರ ತೆಗೆದುಕೊಂಡು ಹೋಗಬಹುದಿತ್ತು. ಆನ್ಲೈನ್ ಡೆಲಿವರಿಯನ್ನು ಪಡೆಯಬಹುದಾಗಿತ್ತು. ಆದರೆ, ಇದಕ್ಕಿಂತ ಕಷ್ಟ ಕಾಲವಾದ ಸಂದರ್ಭದಲ್ಲಿ.. ಎಮರ್ಜೆನ್ಸಿಯ ಸಂದರ್ಭದಲ್ಲಿ ಹಾಗೂ ಎರಡನೇ ವಿಶ್ವ ಯುದ್ಧದ ಸಂಧರ್ಭದಲ್ಲಿ, ಅಕ್ಕಿ ಸಿಗದಾದಾಗ ಎಂ.ಟಿ.ಆರ್ ಅನುಭವಿಸಿದ ಕಷ್ಟಗಳನ್ನು ಹೋಲಿಸಿದರೆ.. ಇದು ಅಂತಹ ದೊಡ್ಡ ಪೆಟ್ಟೇನೂ ಆಗಿರಲಿಲ್ಲ. ಯಾವುದೇ ಬ್ಯುಸಿನೆಸ್ ನಲ್ಲಿಯೂ ಮುಖ್ಯವಾಗಿ ಕಲಿಯಬೇಕಾಗಿದ್ದು ಇದನ್ನೇ.. ಕಷ್ಟ ಬಂದಾಗ ಎಲ್ಲಾ ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಿ ಹೋಗಿರುವುದಿಲ್ಲ. ಯಾವುದಾದರೂ ಒಂದು ಬಾಗಿಲು ತೆರೆದೇ ಇರುತ್ತದೆ. ಅದನ್ನು ಹುಡುಕಿಕೊಳ್ಳುವ ಪ್ರಯತ್ನವನ್ನು ನಾವು ಮಾಡಬೇಕಾಗಿರುತ್ತದೆ ಅಷ್ಟೇ. ಕಾಲದ ಜೊತೆ ಬದಲಾವಣೆ ಮಾಡಿಕೊಳ್ಳುವುದು, ಹೊಸ-ಹೊಸ ಆವಿಷ್ಕಾರಗಳನ್ನು ಮಾಡಿಕೊಳ್ಳುವುದು ಹಾಗೂ ಗ್ರಾಹಕರಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆ ಇವುಗಳು ಬಹಳ ಮುಖ್ಯವಾದ ಅಂಶಗಳು ಎನ್ನುವ ಬ್ಯುಸಿನೆಸ್ ಪಾಠ ಹೇಳುತ್ತದೆ ಎಂ.ಟಿ.ಆರ್.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ