ಬುಧವಾರ, ಏಪ್ರಿಲ್ 22, 2026

ಅರಮನೆ ಗುಡ್ಡದ ಕರಾಳ ರಾತ್ರಿಗಳು (ಪುಸ್ತಕ ಯಾನ - 309)


ಪುಸ್ತಕದ ಶೀರ್ಷಿಕೆ : ಅರಮನೆ ಗುಡ್ಡದ ಕರಾಳ ರಾತ್ರಿಗಳು

ಲೇಖಕರು : ಗಿರಿಮನೆ ಶ್ಯಾಮರಾವ್ 

ಪ್ರಕಾಶಕರು : ಗಿರಿಮನೆ ಪ್ರಕಾಶನ

ಪ್ರಥಮ ಮುದ್ರಣ : 2016

ನಾನು ಓದಿಗೆ ಸಿಕ್ಕಿದ್ದು : 2021 ರ ಮುದ್ರಣ

ಪುಟಗಳು : 184

ಬೆಲೆ : 160 ರೂ. 


ಮಲೆನಾಡು ಎಂದರೆ ನೋಡಿದಷ್ಟೂ ಹಾಗೂ ಕೇಳಿದಷ್ಟೂ ಅದರ ಬಗೆಗೆ ಕುತೂಹಲ. ನಾವು ಮಲೆನಾಡಿನಲ್ಲಿ ವಾಸಿಸಬೇಕು ಎಂಬ ಆಸೆಯಂತೂ ಮೂಡದೆ ಹೋಗುವುದಿಲ್ಲ. ಆದರೆ, ಅಲ್ಲಿರುವವರಿಗೆ ಮಾತ್ರ ಪ್ರಕೃತಿಯ ರಹಸ್ಯಗಳು, ಪ್ರಕೃತಿಯ ಅಗಾಧತೆ ಅರಿವಾಗಿರುತ್ತದೆ. ಆದರೆ, ಅಲ್ಲಿ ಬದುಕುವುದು ನಾವು ಮೇಲ್ನೋಟಕ್ಕೆ ಕಂಡಷ್ಟು ಸುಲಭವಲ್ಲ. ಅದರಲ್ಲಿಯೂ ಪಶ್ಚಿಮಘಟ್ಟದ ಒಳನೋಟಗಳನ್ನು ತೆರೆದಿಡುವ ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕಥೆಗಳು ಸೀರೀಸ್ ನ ಒಂದೊಂದು ಪುಸ್ತಕಗಳೂ ವಿಭಿನ್ನವಾದ ನೋಟವನ್ನೇ ತೋರುತ್ತವೆ. ಇದು ಮಲೆನಾಡಿನ ರೋಚಕ ಕಥೆಗಳು ಸರಣಿಯ ಎರಡನೇ ಕೃತಿ. ಕರ್ಮವೀರ ವಾರಪತ್ರಿಕೆಯಲ್ಲಿಯೂ ಧಾರಾವಾಹಿಯಾಗಿ ಮೂಡಿಬಂದಿತ್ತು.


ಸಕಲೇಶಪುರದ ಕಡೆಗೆ ಅಲ್ಲಿನ ನೋಟ ದಕ್ಕಿಸಿಕೊಳ್ಳಲು ಹೊರಟವರಲ್ಲಿ ಕಾಡುಮನೆ ಎಂಬ ಹೆಸರು ಕೇಳಿದರೆ ಅಲ್ಲಿನ ಸೊಬಗು ಸೆಳೆಯುತ್ತದೆ. ನಾನು ಸಹ ಇಂಡಸ್ಟ್ರಿಯಲ್ ವಿಸಿಟ್ ನೆಪದಲ್ಲಿ ಅಲ್ಲಿನ ಟೀ ಎಸ್ಟೇಟ್, ಫ್ಯಾಕ್ಟರಿ ಹಾಗೂ ಗುಡ್ಡಕ್ಕೆ ಭೇಟಿ ನೀಡಿದ ಹಾಗೂ ಅಲ್ಲಿನ ಪ್ರಕೃತಿಯೊಡನೆ ಒಡನಾಡಿದ ನೆನಪುಗಳು ಇನ್ನೂ ಹಚ್ಚಹಸಿರು. ಆದರೆ, ಆ ರೋಮಾಂಚನವನ್ನು ದಾಟಿ ಪ್ರಕೃತಿಯ ಕರಾಳತೆಯನ್ನು ತೆರೆದಿಡುವ ಅರಮನೆ ಗುಡ್ದಕ್ಕೆ ಚಾರಣದ ನೆಪದಲ್ಲಿ, ಅದರ ಕರಾಳತೆಯ ಅರಿವಿಲ್ಲದೇ, ಪ್ರಕೃತಿಯ ನಿಗೂಢತೆಯ ಪರಿಚಯವೂ ಇಲ್ಲದೆ, ಅಲ್ಲಿ ಸ್ಥಳೀಯರ ಸಹಾಯವೂ ಇಲ್ಲದೆ, ತಾವೇ ಒಂದು ಕೈ ನೋಡಿಯೇ ಬರುತ್ತೇವೆ ಎಂದು ಹೊರಟವರಿಗೆ ಪ್ರಕೃತಿಯೇ ಪಾಠ ಹೇಳಿದ ಕಥೆ ಇಲ್ಲಿದೆ.


ಹೊಸದಾಗಿ ಮದುವೆಯಾದ ನವದಂಪತಿಗಳ ಎರಡು ಜೋಡಿ ಟ್ರಕಿಂಗ್ ನೆಪದಲ್ಲಿ ಇಲ್ಲಿಗೆ ಬಂದಿದ್ದರು. ಅಷ್ಟಕ್ಕೂ ಅರಮನೆಗುಡ್ಡಕ್ಕೆ ಭೇಟಿ ನೀಡುವುದು ಮೊದಲಿಗೆ ಅವರ ಪ್ಲಾನ್ ನಲ್ಲಿಯೇ ಇರಲಿಲ್ಲ. ಹಾಗೆಂದು.. ಇವರು ಸಣ್ಣ ಮಕ್ಕಳೇನಲ್ಲ. ಎರಡೆರಡು ಡಿಗ್ರಿ ಮಾಡಿಕೊಂಡಿದ್ದು ಜವಾಬ್ದಾರಿ ಇರುವವರು. ಕೀರ್ತಿ ಹಾಗೂ ಮಾಯ ದಂಪತಿಗಳಾದರೆ, ಶ್ರೀಕರ ಹಾಗೂ ದೀಪ್ತಿ ಮತ್ತೊಂದು ಜೋಡಿ. ಕೀರ್ತಿ ಒಂದು ಸಂಸ್ಥೆ ನಡೆಸುವ ಇಂಜಿನಿಯರ್, ಶ್ರೀಕರ 80000 ಸಂಬಳ ಪಡೆಯುತ್ತಿದ್ದ ಸ್ಥಿತಿವಂತ. ಮಾಯ ಸೈಕಾಲಜಿ ಎಂ.ಎಸ್ಸಿ ಓದಿದ್ದರೆ, ದೀಪ್ತಿಯದ್ದು ಎಂ.ಬಿ.ಎ ಆಗಿತ್ತು.


ಇವರ್ಯಾರಿಗೂ ಟ್ರಕ್ಕಿಂಗ್ ಹೊಸದಲ್ಲ. ಆದರೆ, ವಿವಾಹದ ಬಿಸಿಯಲ್ಲಿಯೇ ಮತ್ತೆ ಟ್ರಕ್ಕಿಂಗ್ ಹೊರಟಾಗ ಮೊದಲಿಗೆ ಅಪಸ್ವರವೆದ್ದಿದ್ದು ಮಾಯಾಳ ತಾಯಿ ಸುದೇವಿಯವರದ್ದು. ಮದುವೆಯಾದ ಮೇಲೆ ಇದನ್ನೆಲ್ಲಾ ನಿಲ್ಲಿಸಿ ಬಿಡಬೇಕೆಂದು ನಾಲ್ವರಿಗೂ ಅನ್ನಿಸಿತ್ತಾದರೂ.. ಸಾಹಸ ಪ್ರವೃತ್ತಿಗೆ ಒಗ್ಗಿದ್ದ ಮನಸ್ಸು ಅದೆಲ್ಲವನ್ನೂ ನಿಲ್ಲಿಸಲು ಸಿದ್ಧವಿರಲಿಲ್ಲ. ಮಕ್ಕಳಾದ ನಂತರ ಮತ್ತೆ ಹೋಗಲು ಕಷ್ಟವೆಂದೂ.. ಈಗಲೇ ಒಮ್ಮೆ ಹೋಗಿ ಬಂದುಬಿಡೋಣವೆಂದು.. ಯಾವಾಗಲೂ ಹತ್ತುವ ಬಯಲುಸೀಮೆಯ ಬೋಳು ಬೆಟ್ಟಗಳಿಗಿಂತ, ಮಲೆನಾಡಿನ ಬೆಟ್ಟ ಹತ್ತಿ ಅಲ್ಲಿನ ಮಳೆಯ ಅನುಭವ ಪಡೆಯೋಣವೆಂಬ ಆಲೋಚನೆಯಲ್ಲಿ ಎಲ್ಲರೂ ಜೊತೆಯಾಗಿದ್ದವರು. 


ಮಾಯಾಳ ತಂದೆ ಇದೆಕ್ಕೆಲ್ಲಾ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಮಾಯಾಳ ತಾಯಿ ಸುಧೇವಿಯವರಿಗೆ ಆತಂಕ. 

ವಿದ್ಯಾವಂತೆ, ರೂಪವತಿಯಾದ ಮಾಯ ಹಾಗೂ ಕೀರ್ತಿಯ ಪರಿಚಯ ಮಾಡಿಕೊಂಡದ್ದು ಹೀಗೆ ಟ್ರಕ್ಕಿಂಗ್ ನ ಹವ್ಯಾಸದಿಂದಲೇ.. ಅವರ ಮನೆಯಲ್ಲಿ ಏನಾದರೂ ತಿಳಿಯುತ್ತಾರೆನೋ ಎಂಬ ಆತಂಕ ಸುದೇವಿಯವರದ್ದು. ಆದರೆ, ಅಲ್ಲಿ ಹಾಗೇನಿಲ್ಲ. ಇದೇ ರೀತಿಯಲ್ಲಿ ದೀಪ್ತಿ ಹಾಗೂ ಶ್ರೀಕರರ ಮದುವೆಯೂ ನಡೆದಿತ್ತು. ಶ್ರೀಕರ ಕೀರ್ತಿಗೆ ಬಹಳ ಒಳ್ಳೆಯ ಸ್ನೇಹಿತ. ಆದರೆ, ಕೀರ್ತಿಯಷ್ಟು ತಾಳ್ಮೆಯಿರಲಿಲ್ಲ. ಆದರೆ, ಸ್ನೇಹಪರ. ಜೊತೆಗೆ ಮಾತಿನ ಕಲೆಯೂ ಸಿದ್ಧಿಸಿತ್ತು. ಅಷ್ಟಕ್ಕೂ, ಶಿರಾಡಿ ಘಾಟಿಯ ಭಾಗವನ್ನು ಆಯ್ಕೆ ಮಾಡಿಕೊಂಡದ್ದು ಕೀರ್ತಿಯಾದರೂ ಯೋಜನೆಯ ರೂವಾರಿ ಶ್ರೀಕರನೇ ಆಗಿದ್ದ. 


ಜೂನ್ ತಿಂಗಳ ಕೊನೆಯಲ್ಲಿ ಹೊರಟಾಗ ಬೆಂಗಳೂರಿನಲ್ಲಿ ಮಳೆಯ ಕುರುಹು ಇರಲಿಲ್ಲವಾದರೂ.. ಹಾಸನ ದಾಟುತ್ತಿದ್ದಂತೆಯೇ ಮಳೆಹನಿಗಳು ಮಲೆನಾಡಿಗೆ ಸ್ವಾಗತ ಕೋರಿದವು. ಹಾಸನ ಹಾಗೂ ಸಕಲೇಶಪುರ ಮಾರ್ಗದ ಚಿತ್ರಣವನ್ನು ಸವಿಯುತ್ತಾ ಹೋಗಬಹುದು. 


ಬೆಟ್ಟಗಳ ಸಾಲೇ ಕಂಡುಬಂದಾಗ ಯಾವ ಬೆಟ್ಟ ಹತ್ತುವುದೆಂದು ಎಲ್ಲರಿಗೂ ಆಯ್ಕೆ ಕಷ್ಟವಾಗಿತ್ತು. ಹೋಟೆಲ್ ಮ್ಯಾನೇಜರ್ ಬಳಿಯೇ ಶ್ರೀಕರ ಈ ವಿಷಯ ಪ್ರಸ್ತಾಪಿಸಿದಾಗ "ಈ ಮಳೆಗಾಲದಲ್ಲಿ ಟ್ರಕ್ಕಿಂಗ್ ಹೋಗುವುದು ಸರಿಯಲ್ಲ. ಅಲ್ಲದೇ ಅಂತಹಾ ಗುಡ್ಡಕ್ಕೆ ಕಾಡಿನ ಒಳಗೆಲ್ಲಾ ಹೋಗಬೇಕು. ಜೊತೆಯಲ್ಲಿ ಹುಡುಗಿಯರು" ಎಂದು ಆತಂಕ ಪಡಿಸಿದರಾದರೂ.. ಅವರ ಮನಸ್ಸು ಅರಿತಂತೆ ತೀರಾ ದೊಡ್ಡ ಅಥವಾ ಕ್ಲಿಷ್ಟವಾದ ಜಾಗವನ್ನು ಹೇಳದೆ ಕೊನೆಗೆ ಕಾಡುಮನೆ ಟೀ ಎಸ್ಟೇಟ್ ಹಾಗೂ ಅಲ್ಲೇ ಪಕ್ಕದಲ್ಲಿರುವ ದೊಡ್ಡ ಗುಡ್ಡವನ್ನು ಸೂಚಿಸಿದರು.


ಮಳೆ ಇದ್ದರೂ ಕಾಡುಮನೆ ಎಸ್ಟೇಟ್ ಗೆ ಬಂದವರು ಅಲ್ಲಿ ಗುಡ್ಡದ ಮೇಲೆ ಹತ್ತಿ ಪರಿಸರದಿಂದ ಆಕರ್ಷಿತರಾಗಿ ಅಲ್ಲೇ ನೇರದಲ್ಲಿ ಕಾಣುತ್ತಿದ್ದ ಮತ್ತೊಂದು ಬೆಟ್ಟಕ್ಕೆ ಹೋಗಲು ಅಣಿಯಾದರು. ಆದರೆ, ಅವರಿಗೆ ತಿಳಿದಿರದ ವಿಷಯ ಮಲೆನಾಡಿನಲ್ಲಿ ಕಾಣುವ ಬೆಟ್ಟಗಳು ಅಷ್ಟು ನೇರವೂ ಇರುವುದಿಲ್ಲ, ಹತ್ತಿರವೂ ಇರುವುದಿಲ್ಲ. ಅನುಭವಸ್ಥರಾದ ಚಾರಣಿಗರನ್ನೇ ಅರಣ್ಯ ದಾರಿ ತಪ್ಪಿಸುವಾಗ.. ಸಿದ್ಧತೆಯೇ ಇಲ್ಲದೆ ಇವರು ಹೊರಟಿದ್ದು ಅರಮನೆ ಗುಡ್ಡ ಎಂಬ ಮೃತ್ಯುದೇವತೆಯ ಮಡಿಲೊಳಗೆ. ಆ ಕುರಿತು ಮೊದಲೇ ಪೇಪರ್ ನಲ್ಲಿ ಬಂದಿದ್ದ ವಿಷಯವನ್ನು ಓದಿದ್ದರಾದರೂ.. ಅದು ಅರಮನೆ ಗುಡ್ಡವೇ ಎಂಬ ಚಿಕ್ಕ ಯೋಚನೆಯೂ ಇಲ್ಲದೆ ಕಬ್ಬಿನಾಲೆ ಅರಣ್ಯದೊಳಗೆ ಕಾಲಿಟ್ಟಿದ್ದರು.


ಕಾಡುಮನೆಯ ಗುಡ್ಡದ ಮೇಲೆ ಮಾಯಳೇನೋ ಸಿಗ್ನಲ್ ಸಿಗುತ್ತಿದ್ದಂತೆ ತನ್ನ ತಾಯಿಗೆ ಕರೆ ಮಾಡಿದ್ದಳು. ದೀಪ್ತಿ ಆ ಗುಡ್ಡಕ್ಕೆ ಹೋದ ನಂತರ ಮಾಡೋಣ ಎಂದು ನಿರ್ಲಕ್ಷಿಸಿದ್ದಳು. ಆದರೆ, ದೀಪ್ತಿಯ ತಾಯಿ ಭವತಾರಿಣಿಯವರಿಗೆ ಮಗಳು ಕರೆ ಮಾಡದೆ ಹೋದದ್ದು ಆತಂಕ ತಂದಿತ್ತು. ಶ್ರೀಕರನ ತಾಯಿಗೆ ಕರೆ ಮಾಡಿದರೂ ಅವರು ಗತ್ತಿನಲ್ಲಿ ಅದನ್ನು ದೊಡ್ಡ ವಿಷಯವೆಂಬಂತೆ ತೆಗೆದುಕೊಳ್ಳಲೇ ಇಲ್ಲ. ಅಷ್ಟಕ್ಕೂ... ಅವರಿದ್ದದ್ದೇ ಹಾಗೆ. ಆದರೆ, ಆ ಸಮಯಾದಲ್ಲಿ ಈ ಸಮಸ್ಯೆ ಭವತಾರಿಣಿಯವರು ಅಂದುಕೊಂಡಷ್ಟು ದೊಡ್ಡದಾಗಿರಲಿಲ್ಲವೆಂಬುದು ಮಾಯಾಳ ತಾಯಿ ಸುದೇವಿಯವರಿಗೆ ಮಾಡಿದ ಕರೆಯಿಂದ ಅವರಿಗೆ ಅನ್ನಿಸಿದರೂ.. ನಂತರ ಅವರ ಆತಂಕವೇ ನಿಜವಾದದ್ದು ವಿಪರ್ಯಾಸ. 


ಮಧ್ಯಾಹ್ನದೊಳಗೆಲ್ಲಾ ಆ ಗುಡ್ಡವನ್ನು ಮುಟ್ಟಿ ಹೊರಡೋಣವೆಂದು ಹೊರಟವರಿಗೆ ಪ್ರಕೃತಿ ಸವಾಲಾಗತೊಡಗಿತ್ತು. ಶ್ರೀಕರ ಹೊಳೆಯಲ್ಲಿ ಆಳ ನೋಡಿ ದಾಟಲು ಇಳಿದವನು ದಿಕ್ಸೂಚಿಯನ್ನು ಕಳೆದುಕೊಂಡಿದ್ದ. ಮೊಬೈಲ್ ನೆಟ್ವರ್ಕ್ ಅಂತೂ ಅಲ್ಲಿ ಕನಸಿನ ಮಾತಾಗಿತ್ತು ಇನ್ನು ಹೋಗುವ ಹಾದಿಯ ಪರಿಚಯವಿಲ್ಲದೆ, ಬರುವ ಹಾದಿಯನ್ನು ಗುರುತಿಸಿಕೊಳ್ಳದೆ, ಮತ್ತಷ್ಟು ಸಮಸ್ಯೆಯನ್ನು ಮೈಮೇಲೆಳೆದುಕೊಂಡಿದ್ದರು. ರಾತ್ರಿ ಉಳಿಯಲು ಜಾಗದ ಸಮಸ್ಯೆ. ಊಟವಿಲ್ಲದೆ, ಶೀತಕ್ಕೆ ಮಳೆಗೆ ಅದಾಗಲೇ ಒದ್ದಾಡುತ್ತಿದ್ದರು. ಹಿಂದಿರುಗಿ ಬರಲು ಸಹಾ ಯಾರೂ ನೆರವಿಗಿಲ್ಲದೆ ಮತ್ತಷ್ಟು ಸಾಹಸ ಮಾಡುತ್ತಾ ದಾರಿ ತಪ್ಪಿದ್ದರು. ಕಾಡುಪ್ರಾಣಿಗಳ ಹಾಗೂ ನಿಸರ್ಗದ ಸವಾಲುಗಳನ್ನು ನೀವೇ ಓದಿ ಅರಿಯಿರಿ. ಹಾಗೆ ಅವರು ಹೋಗಿ ಸೇರಿದ್ದು ಅರಮನೆ ಗುಡ್ಡದ ತಪ್ಪಲಿನ ಮಣಿ ಬೀಗತಿ ದೇವಾಲಯವನ್ನು. 


ಶ್ರೀಕರನ ತಂದೆ ಚಂದ್ರಶೇಖರ್ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದವರು. ಮಕ್ಕಳಿಂದ ಎರಡನೇ ದಿನಕ್ಕೂ ಕರೆ ಬಾರದಾಗ ಗಾಬರಿಗೊಂಡ ಮಾಯ ಹಾಗೂ ದೀಪ್ತಿಯ ತಂದೆ ಶ್ರೀಕರನ ತಂದೆಯನ್ನು ಸಂಪರ್ಕಿಸಿದರು. ಅತ್ತಲಿನಿಂದ ಬಂದ ತಣ್ಣಗಿನ ಪ್ರತಿಕ್ರಿಯೆ ನಂತರ ಅವರನ್ನೇ ಪರಿತಪಿಸುವಂತೆ ಮಾಡಿತ್ತು. ಆದರೆ, ಅವರಿಗಿದ್ದ ಸಂಪರ್ಕದಿಂದ ಸಕಲೇಶಪುರದ ರೇಂಜರ್ ಕರಿಯಪ್ಪನವರ ಸಂಪರ್ಕ ಹಾಗೂ ಸಹಾಯ ದೊರೆತಿತ್ತು. 


ಶ್ರೀಕರ, ದೀಪ್ತಿ, ಕೀರ್ತಿ ಹಾಗೂ ಮಾಯರ ಪರಿಸ್ಥಿತಿ ಹೇಗಿತ್ತು..? ಮನೆಯವರನ್ನು ತಲುಪಲು ಅವರು ಮಾಡಿದ ಪ್ರಯತ್ನಗಳೇನು..? ಕಾಡಿನಲ್ಲಿ ದಾರಿ ಹುಡುಕಲು ಅವರು ಮಾಡುತ್ತಿದ್ದ ಪ್ರಯತ್ನಗಳು ಹೇಗಿದ್ದವು..? ಕರಿಯಪ್ಪನವರ ಮೂರು ತಂಡಗಳಲ್ಲಿ ಯಾವ ಯಾವ ತಂಡದ ಕಾರ್ಯಾಚರಣೆ ಯಾವ ಯಾವ ಬಗೆಯದ್ದಾಗಿತ್ತು..? ಸ್ಥಳೀಯರ ಸಹಾಯ ಒದಗಿ ಬಂದದ್ದು ಹೇಗೆ..? ಅರಮನೆ ಗುಡ್ಡದ ಪರಿಸರದಿಂದ ಅವರೆಲ್ಲರೂ ಪಾರಾಗಿ ಬಂದರೇ ಅಥವಾ ಅಪಾಯಕ್ಕೆ ಒಳಗಾದರೇ..? ಹೆಣ್ಣುಮಕ್ಕಳ ಮನೆಯಲ್ಲಿ ಅವರು ಒಬ್ಬೊಬ್ಬರೇ ಮಕ್ಕಳು. ಅವರ ತಾಯಂದಿರ ತಲ್ಲಣಗಳು ಹೇಗಿದ್ದವು..? ಬೇಡವೆಂದರೂ ಎಲ್ಲರನ್ನೂ ಕರೆತಂದು ಮುಂದಾಳುವಾದ ಶ್ರೀಕರನ ಮನಸ್ಸಿನ ಭಾವಗಳು ಹೇಗಿದ್ದವು.. ಕೀರ್ತಿಯದ್ದೇನೂ ತೀರಾ ವಿಭಿನ್ನವಾಗಿರಲಿಲ್ಲವಾದರೂ.. ಇದ್ದುದರಲ್ಲಿ ಕಾಯ್ದುಕೊಂಡ ತಾಳ್ಮೆ ಹಾಗೂ ತೆಗೆದುಕೊಳ್ಳುವ ನಿರ್ಧಾರಗಳು ಸಮಯೋಚಿತ ಎನಿಸುತ್ತವೆ. ಮಾಯಾಳ ಮನಶಾಸ್ತ್ರ ಇಲ್ಲಿ ಯಾವ ಉಪಯೋಗವಾಯಿತು..? ಎಲ್ಲವನ್ನೂ ತಿಳಿಯಲು ಓದಿ ಗಿರಿಮನೆ ಶ್ಯಾಮರಾವ್ ಅವರ "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಕೃತಿಯನ್ನು. 


ಈ ಕಥೆ ಪ್ರಕೃತಿಯ ಪಾಠವನ್ನು ತೆರೆದಿಡುತ್ತದೆ. ವಿವಿಧ ಪ್ರಾಣಿಗಳನ್ನೇ ಭಯಂಕರವೆಂದುಕೊಂಡಿರುವ ನಮಗೆ ಸೀಳು ನಾಯಿಗಳ ವಿವರವ ಮೈನಡುಕ ಹುಟ್ಟಿಸುತ್ತದೆ. ಬೆಟ್ಟ-ಗುಡ್ಡಗಳ ಪ್ರಕೃತಿ ಚಿತ್ರಣ, ಊರು, ಪರಿಸರ ಎಲ್ಲವೂ ನೈಜವಾಗಿದೆ.  


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ