ಸೋಮವಾರ, ಏಪ್ರಿಲ್ 20, 2026

ಕೊಳೆತ ಮಾವಿನ ಹಣ್ಣು (ಪುಸ್ತಕ ಯಾನ - 272)


ಪುಸ್ತಕದ ಶೀರ್ಷಿಕೆ : ಕೊಳೆತ ಮಾವಿನ ಹಣ್ಣು

ಲೇಖಕರು : ಎಂ. ಮನೋಹರ ಪೈ 

ಪ್ರಕಾಶಕರು : ಶೋಭಾ ಎಂಟರ್ಪ್ರೈಸಸ್

ಪ್ರಥಮ ಮುದ್ರಣ : 2023

ಪುಟಗಳು : 148

ಬೆಲೆ : 165 ರೂ.


ಎಲ್ಲರೂ ಕಳಿತ ಮಾವಿನ ಹಣ್ಣನ್ನು ಅರಸುವಾಗ ಇಲ್ಲಿ ಕೊಳೆತ ಮಾವಿನ ಹಣ್ಣು ಎಂಬ ಶೀರ್ಷಿಕೆ ವಿಭಿನ್ನವಾಗಿ ಸೆಳೆದರೆ, ಅದಕ್ಕೆ ತಕ್ಕಂತಹಾ ಮುಖಪುಟವೂ ಸೆಳೆಯುತ್ತದೆ. ಬುಟ್ಟಿಯಲ್ಲಿ ಒಂದು ಕೊಳೆತ ಹಣ್ಣು ಸಿಕ್ಕರೆ ಅದು ಇಡೀ ಬುಟ್ಟಿಯ ಹಣ್ಣನ್ನೇ ಹಾಳು ಮಾಡಿಬಿಡುತ್ತದೆ. ಅದೇ ನೀತಿ ಹೊತ್ತ ಕಥೆ ಇರಬಹುದು ಎಂಬ ಆಲೋಚನೆ ಇತ್ತಾದರೂ.. ಈ ಕಾಲಕ್ಕೆ ಕಥೆಗಳು ಕೂಡ ಆಲೋಚನೆಗಳಂತೆ ಅಪ್ಡೇಟ್ ಆಗಿವೆ. ಹಾಗಾಗಿ, ನನ್ನ ಆಲೋಚನೆಗಳಿಗಿಂತ ವಿಭಿನ್ನವಾಗಿ ದಕಿದ ಕಥೆಗಳು ಇಲ್ಲಿವೆ. ಸಾಮಾಜಿಕ ಸಮಸ್ಯೆಗಳನ್ನು ತೆರೆದಿಟ್ಟು ಕಣ್ತೆರೆಸುವ ಸಣ್ಣ ಕಥೆಗಳ ಬುಟ್ಟಿಯಿದು. ಇದು 15 ಕಥೆಗಳ ಸಂಕಲನ.


ಪಾಯ : ಹೊಸ ಸೈಟು ಆರಂಭವಾಗುವಾಗ ಅಲ್ಲಿ ವಾಚ್ ಮೆನ್ ಗೆಂದೇ ಮೊದಲು ಒಂದು ಪುಟ್ಟ ಕೋಣೆಯಾಗುತ್ತದೆ. ಆದರೆ, ಆ ಕಟ್ಟಡ ಮುಗಿಯುವ ಹೊತ್ತಲ್ಲಿ ಆ ತಾತ್ಕಾಲಿಕ ಮನೆಯಿಂದ ಹೊರ ಹೋಗುವ ಅನಿವಾರ್ಯವೂ ಆತನದ್ದು. ಇಲ್ಲಿ ಈ ಸಮಸ್ಯೆಯ ಜೊತೆಗೆ ಅಂತಸ್ತುಗಳು ಹಾಗೂ ಅವರ ಅನಿವಾರ್ಯತೆಗಳು ತಳಕು ಹಾಕಿಕೊಂಡಿದೆ. ಇದು ಒಬ್ಬರ ಅಸಹಾಯಕತೆ ಮತ್ತೊಬ್ಬರಿಗೆ ದಾಳವಾಗುವ.. ಅವರ ಆಸೆಗೆ ಪಾಯವಾಗುವ ಕಥೆ ಇದೆ.


ಕೊಳೆತ ಮಾವಿನ ಹಣ್ಣು : ಕಥಾಸಂಕಲನದ ಶೀರ್ಷಿಕೆಯಾಗಿ ಕುತೂಹಲ ಹುಟ್ಟಿಸಿದ ಕಥೆ. ಮಾವಿನ ಹಣ್ಣನ್ನು ಮಾರಲು ಬಂದವನು ಹಣ್ಣುಕೊಳ್ಳಲು ಬಂದವರಿಗೆ.. ಇನ್ನು ವ್ಯಾಪಾರವೇ ಆರಂಭವಾಗಿಲ್ಲ ಹಣ್ಣು ಕೊಳೆಯಬೇಕು ಎಂದು ವಾಪಾಸ್ ಕಳುಹಿಸುತ್ತಾನೆ. ಕೊಳೆತ ಹಣ್ಣು ಕಸವಾದಾಗಲೇ ಅಲ್ಲವೇ ಸಮಸ್ಯೆ..! ಕೊಳೆತ ಹಣ್ಣು ಎಷ್ಟರಮಟ್ಟಿನ ಬದಲಾವಣೆ ತರಬಲ್ಲದು ಎಂದು ಯೋಚಿಸುತ್ತಿದ್ದೀರಾ..?! ಹಾಗಾದರೆ ನೀವು ಖಂಡಿತ ಈ ಕಥೆ ಓದಲೇಬೇಕು.


ಕೆಂಪು ದೀಪದ ಕೆಳಗೆ : ಕೆಂಪು ದೀಪದ ಕೆಳಗೆ ನಿಲ್ಲುವವರ ಗಲ್ಲಿಗೆ ಹೋದವನು ಪ್ರತಿ ಬಾರಿಯೂ ಹುಡುಕುತ್ತಿದ್ದದ್ದು ಆತನನ್ನು ತಿರಸ್ಕರಿಸುವವರನ್ನು. ಅಂತೂ ಅವನಿಗೆ ನಿರೀಕ್ಷೆಗೆ ತಕ್ಕಂತೆ ಆಕೆ ಸಿಕ್ಕಳು. ಅವನ ಆ ಹುಡುಕಾಟಕ್ಕೆ ಕಾರಣವೇನು..? ಈ ಕಥೆಯಲ್ಲಿ ಆ ವೃತ್ತಿಯಲ್ಲಿರುವವರು ಹಾಗೂ ಅವರ ಬಳಿಗೆ ಹೋಗುವವರು ತಮ್ಮ ನಿಜ ಹೆಸರನ್ನು ಮರೆಮಾಚುವ/ಬದಲಾಯಿಸಿ ಹೇಳುವ ಸೂಕ್ಷ್ಮತೆಯನ್ನು ನವಿರಾಗಿ ಅಳವಡಿಸಿದ್ದಾರೆ. 


ಪ್ರೀತಿ ಮಾಡಬಾರದು : ಹೆತ್ತವರು ಹಾಗೂ ಮಕ್ಕಳ ನಡುವೆ ಹದಿಹರೆಯಕ್ಕೆ ಬಂದಾಗ ಇಬ್ಬರ ಮನದಲ್ಲಿಯೂ ಹೇಳದ ಭಾವ ಹುಟ್ಟಬಹುದು ಅಥವಾ ತಳಮಳ ಇರಬಹುದು. ತಾನು ಪ್ರೀತಿಸಿ ಮದುವೆಯಾದಂತೆ ತನ್ನ ಮಗಳು ವಂಶಿಕ ಕೂಡ ಪ್ರೇಮ ಗೀಮಾ ಎಂದು ಹೊರಟರೆ ಎಂದು ಅನುಮಾನಿಸುವ ತಂದೆಯ ಅನುಮಾನ ನಿಜವಾಯಿತೇ.. 


ಅಲ್ಲಿದೆ ನಮ್ಮನೆ : ಅಣ್ಣುವಿನ ಹದಿನಾಲ್ಕು ವರ್ಷಗಳ ಕಾರಾಗೃಹ ವಾಸ ಮುಗಿದಿತ್ತು. ಜೈಲಿನಿಂದ ಹೊರಬಂದವನು ಮತ್ತೆ ಮನೆ ಕುಟುಂಬ ಎಂದು ಆಸೆ ಹುಟ್ಟಿಸಿಕೊಂಡಿದ್ದನಾದರೂ.. ಸಮಾಜ ಹಾಗೂ ಮನೆಯವರು ಆತನನ್ನು ಹೇಗೆ ಸ್ವೀಕರಿಸಿದರು..? ಕೊಲೆ ಮಾಡಿದವನ ಮನಸ್ಥಿತಿ ಹಾಗೂ ಅವರ ಮನೆಯವರು ಆತನನ್ನು ಸ್ವೀಕರಿಸಿದ ಪರಿ ಹೇಗಿತ್ತು, ಅಷ್ಟಕ್ಕೂ ಆತ ಜೈಲಿಗೆ ಹೋದದ್ದೇಕೆ..? ಆತನ ನಿಜವಾದ ಮನೆ ಎಲ್ಲಿತ್ತು..?


ಅಪ್ಪಾ ಭಟ್ಟರ ಜಾಗ :ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬ ಗಾದೆ ಮಾತನ್ನು ಪುಷ್ಟೀರಿಸುವ ಕಥೆ ಇದು. ಅಪ್ಪಾ ಭಟ್ಟರ ಜಾಗವನ್ನು ಹಿಡಿಯಲು ಉಗ್ಗಪ್ಪ ಶೆಟ್ಟರು ಅನುಸರಿಸಿದ ಮಾರ್ಗವೇನು.. ಅವರ ಉಪಾಯ ಫಲಿಸಿದರೂ.. ದಕ್ಕದ್ದು ಏಕೆ..?


ತೇಲ್ ಮಾಲೀಶ್ : ಕಾಶಿಯಲ್ಲಿ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಬೋಲೆನಾಥ ಅದೇ ಕೆಲಸಕ್ಕಾಗಿ ಗೋವೆಯ ಸಮುದ್ರ ತೀರವನ್ನು ಸೇರಿದ. ಅದೂ ಒಬ್ಬನಲ್ಲ.. ಹೆಂಡತಿ ಹಾಗೂ ಇಬ್ಬರು ಹುಡುಗಿಯರೊಂದಿಗೆ. ಭಾಷೆ, ನಡೆ, ನುಡಿ ಏನು ತಿಳಿದಿಲ್ಲದ ಊರಲ್ಲಿ ಮಾಲೀಶ್ ಮಾಡಬೇಕು, ಸಂಪಾದಿಸಬೇಕು ಎಂಬುದಷ್ಟೇ ಅವನ ಉದ್ದೇಶ. ಆದರೆ, ಕಾಶಿಗೂ ಗೋವಾಗೂ ಇರುವ ವ್ಯತ್ಯಾಸವೇ ಬೇರೆ. ಇಲ್ಲಿನ ವಾತಾವರಣ ಆತನ ತೇಲ್ ಮಾಲೀಶ್, ಕುಟುಂಬ, ಸಂಪಾದನೆ ಮೇಲೆ ಪರಿಣಾಮ ಬೀರಿದ್ದು ಹೇಗೆ..?


ತಪ್ಪಿಗೊಂದು ಮರ : ಯಾರಾದರೂ ತಪ್ಪು ಮಾಡಿದರೆ ಅದನ್ನು ನೆನಪಿಸಿಕೊಳ್ಳುವಂತೆ ಹಾಗೂ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡು ಆ ತಪ್ಪನ್ನು ಮತ್ತೆ ಮಾಡದಂತೆ.. ಊರ ಹೊರಗಿನ ಗುಡ್ಡದ ತಪ್ಪಲಿಗೆ ಹೋಗಿ ಒಂದು ಗಿಡ ನೆಡಿ. ಆ ಗಿಡಕ್ಕೆ ನೀರೆರದು ಪೋಷಿಸುವ ಜವಾಬ್ದಾರಿ ನನ್ನದೆಂದು ಬರೆದಿದ್ದ ಭಿತ್ತಿಪತ್ರ ಊರಲ್ಲೇ ಸಂಚಲನ ಉಂಟುಮಾಡಿತ್ತು. ಆದರೆ, ಭಿತ್ತಿಪತ್ರ ಅಂಟಿಸಿದವರು ಯಾರು ಎಂಬುದು ನಿಗೂಢ. ಅಷ್ಟರಲ್ಲಾಗಲೇ ಮೊದಲ ಐದು ಗಿಡಗಳು ಅಲ್ಲಿ ನೆಟ್ಟಾಗಿತ್ತು. ಆ ಐದು ಗಿಡಗಳನ್ನು ನೆಟ್ಟವರು ಯಾರು? ಆ ಭಿತ್ತಿಪತ್ರವನ್ನು ಅಂಟಿಸಿ ಹುಚ್ಚನೆಂಬ ಹಣೆಪಟ್ಟಿಸಿಕೊಂಡಿದ್ದಾರು.. ಸಮಾಜವನ್ನು ಹೀಗೂ ತಿದ್ದುವ ಪರಿ ಹೀಗೂ ಇರಬಹುದು ಎಂದೆನಿಸುವಂತೆ ಮಾಡುವ ಕಥೆ. 


ಪುನರ್ವಸು : ಪುನರ್ವಸು ಮಳೆಯ ದಿನಗಳ ಚಿತ್ರಣದೊಂದಿಗೆ, ಮುತ್ತವ್ವ ತನ್ನ ಮಕ್ಕಳನ್ನು ನೆನಪಿಸಿಕೊಂಡಳು. ಮಕ್ಕಳು ಶಾಲೆಯಿಂದ ಬರಲು ಸಂಕದ ದಾಟಿ ಬರಬೇಕಿತ್ತು. ಅಚ್ಚು ಶಾಲೆಯಿಂದ ಬಂದನಾದರೂ ಗುಬ್ಬಿ ಬರಲಿಲ್ಲ.. ಗುಬ್ಬಿ ಸಿಕ್ಕಿದಳೇ..?


ರೀಟಾ : ನಗರದಲ್ಲಿಯೇ ಹುಟ್ಟಿ ಬೆಳೆದ ಪ್ರಿಯಾಳಿಗೆ ತನ್ನ ಗಂಡ ಅಭಿ ಹೇಳಿದಂತೆ ಮಲೆನಾಡಿನ ಹಳ್ಳಿಯೊಂದರ ಎಸ್ಟೇಟ್ ನಲ್ಲಿ ವಾಸಿಸುವುದು ಇಷ್ಟವಿರಲಿಲ್ಲ. ಮಕ್ಕಳಿಲ್ಲದ ಪ್ರಿಯಾಳನ್ನು ವೈದ್ಯರ ಸಲಹೆಯ ಮೇರೆಗೆ ಅಲ್ಲಿಗೆ ಕರೆತಂದಿದ್ದ ಅಭಿ. ಪ್ರಿಯಾಳಿಗೆ ಜೊತೆಯಾದ ಪುಟ್ಟ ಮಗು ಯಾರು ? ರೀಟಾ ಯಾರು ?


ಪ್ರಸ್ಥಾನ : ಹೆಣ ಕಂಡರೆ ಭಯಪಡುವ ಸುಬ್ಬಣ್ಣನಿಗೆ ಮನೆ ಸಿಕ್ಕಿದ್ದು ಸ್ಮಶಾನದ ದಾರಿಯಲ್ಲಿ ಕೊನೆಯ ಮನೆ ಎಂಬುದು ವಿಪರ್ಯಾಸ. ಜೀವನದುದ್ದಕ್ಕೂ ಹೀಗೆಯೇ ಸಾವಿನ ಬಗ್ಗೆಯೇ ಭಯಪಟ್ಟವನು ಪ್ರಸ್ಥಾನಗೈದದ್ದು ಹೇಗೆ ಎಂಬುದನ್ನು ಓದಿ ನೋಡಿ. ಸಾವಿನ ತಣ್ಣನೆಯ ಭಾವ ತಾಕದೇ ಇರದು.


ಉಸಿರು ನಿಂತ ಮ್ಯಾಗೂ : ತಂದೆ ತೀರಿಕೊಂಡ ನಂತರ ಪಾಚುವಿಗೆ ಅಮ್ಮನ ನಡವಳಿಕೆ ಸಂದೇಹ ಹುಟ್ಟಿಸುವಂತಿತ್ತು. ಅದನ್ನು ಗೆಳತಿ ದಮಯಂತಿಯ ಬಳಿಯೂ ಹಂಚಿಕೊಂಡಿದ್ದಳು. ಆದರೆ, ಆ ಸಂದೇಹಕ್ಕೆ ಹುರುಳಿಲ್ಲವೆಂಬುದು ಅರಿವಾಗಿತ್ತು ಸಹಾ. ಹಾಗಾದರೆ, ಆ ನಡವಳಿಕೆಗೆ ಕಾರಣವೇನು..? ಈ ಕತೆಯಲ್ಲಿ ಉಸಿರು ನಿಂತ ಮ್ಯಾಗೂ ಬದುಕುವ ಬಗೆಯ ಚಿತ್ರಣ ಆದರ್ಶಪ್ರಾಯವಾಗಿದೆ.


ನಾಯಕರ ಬಯಲಿನ ಕಲ್ಲು : ಇದು ಕಾಲ್ಪನಿಕ ಐತಿಹಾಸಿಕ ಕತೆ. ಸತಿ ಪದ್ದತಿ ಜೀವಂತವಿದ್ದ ಕಾಲಘಟ್ಟದಲ್ಲಿ ನಡೆದಿರುವ ಘಟನೆ. ಭೈರವಪುರದ ಅರಮನೆಯ ಯುವರಾಣಿಯನ್ನು ಭೇಟಿಯಾಗಲು ಬಂದದ್ದು ಸೇನಾಪತಿಯ ಪತ್ನಿ ಗೆಳತಿ ಚಂದ್ರಸೇನೆ. ಅವಳ ಗಂಭೀರ ಆಲೋಚನೆ ಹಾಗೂ ಮಾತುಕತೆಗೆ ಕಾರಣ ಆಕೆಯ ಪತಿಯ ಕುಟುಂಬದಲ್ಲಿ ಸಹಗಮನ ಜಾರಿಯಲ್ಲಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಪತಿಯ ಕುರಿತ ಸುದ್ದಿ ಕೇಳಿ ಆತಂಕದಲ್ಲಿದ್ದ ಚಂದ್ರಸೇನೆಯ ಭಯ ನಿಜವಾಗಿತ್ತು. ಯುವರಾಣಿ ಚಿತ್ರಾಂಗದ ತನ್ನ ಪ್ರಾಣಸ್ನೇಹಿತೆಯ ಕಷ್ಟಕ್ಕೆ ಜೊತೆಯಾಗಲು ಬಯಸಿದಳಾದರೂ.. ಅದರ ಪರಿಣಾಮ ಏನಾಗಿತ್ತು..?


ರಂಗಸ್ಥಳ..... ನವರಸಗಳ ಕಥೆ : ದಕ್ಷಿಣ ಕನ್ನಡದ ಕಟ್ಟೆ ಸಂಜೀವಯ್ಯ ಮತ್ತು ಉತ್ತರ ಕನ್ನಡದ ಬೈಲುಮನೆ ಗೋಪಾಲಯ್ಯನವರ ಜೀವನದಲ್ಲಿ ನಡೆದ ಘಟನೆಗಳು ನವರಸದಲ್ಲಿಯೂ ವ್ಯಕ್ತವಾಗಿದೆ. 


ಮದುವೆಯ ಆ ಬಂಧ : ಮುಂದುವರಿದ ತಂತ್ರಜ್ಞಾನದ ದಿನಗಳು ಎಂದರೆ 2136ರಲ್ಲಿ ಮದುವೆಯ ಪರಿಕಲ್ಪನೆಯ ಕತೆ ಇಲ್ಲಿದೆ. ಇಲ್ಲಿ ಮದುವೆಯ ಪ್ರಸ್ತಾಪ, ವಿಚಾರ ಇದೆಯಾದರೂ ಬದಲಾದ ಜೀವನಶೈಲಿ, ನಡವಳಿಕೆ, ತಂತ್ರಜ್ಞಾನದ ಅತಿ ಅವಲಂಬನೆ ಎಲ್ಲವನ್ನೂ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ.


ಈ ಸಣ್ಣ ಕಥೆಗಳ ಬುಟ್ಟಿಯಲ್ಲಿ ಚೆಂದದ, ತರಾವರಿಯ ಹಣ್ಣುಗಳು (ಕತೆಗಳು) ಆಕರ್ಷಕವಾಗಿ ಸೆಳೆಯುತ್ತವೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ