ಮಂಗಳವಾರ, ಏಪ್ರಿಲ್ 21, 2026

ಹೇಮಂತದ ಸೊಗಸು (ಪುಸ್ತಕ ಯಾನ - 291)

ಪುಸ್ತಕದ ಶೀರ್ಷಿಕೆ : ಹೇಮಂತದ ಸೊಗಸು

ಲೇಖಕರು : ಸಾಯಿಸುತೆ

ಪ್ರಕಾಶಕರು : ಕರ್ನಾಟಕ ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ : 1992

ಪುಟಗಳು : 161


ಹೇಮಂತದ ಸೊಗಸು ಕಾದಂಬರಿಯನ್ನು ಓದಿದಾಗ ಇಲ್ಲಿ ವಾಸ್ತವತೆಗೆ ಹೆಚ್ಚಿನ ಒತ್ತು ಕೊಟ್ಟಿರುವ ಲೇಖಕಿಯವರ ನಿಲುವನ್ನು ನಾನು ಸಮರ್ಥಿಸುತ್ತೇನೆ. 


ಪ್ರಕೃತಿಯ ಸೌಂದರ್ಯವನ್ನು ಅದರಲ್ಲಿಯೂ ಸೇತುವೆಯ ಮೇಲೆ ನಿಂತು ಕೆಳಗೆ ಹರಿಯುವ ನೀರನ್ನು ನೋಡುವುದು ಪ್ರಭುವಿನ ಅಭ್ಯಾಸ. ಈ ಸ್ಥಳ ಕಾದಂಬರಿಯಲ್ಲಿ ಆಗಾಗ ಕಾಣಿಸುತ್ತದೆ. "ನೋಟ ಒಂದಿಷ್ಟು ವಿಶಾಲವಾದರೆ ನಿಸರ್ಗ ಅತ್ಯಂತ ರಮಣೀಯ" ಎನ್ನುವ ಮಾತಂತೂ ಬಹಳವೇ ಸತ್ಯ. 


ಚಿದಂಬರಯ್ಯ ಹಾಗೂ ಸೌಭಾಗ್ಯ ಅವರ ಏಕೈಕ ಪುತ್ರ ಪ್ರಭುಪ್ರಸಾದ್ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದವನು. ವಿದ್ಯಾರ್ಥಿಗಳೆಲ್ಲರಿಗೂ ಅಚ್ಚುಮೆಚ್ಚು. ಕಾಲೇಜಿನಲ್ಲಿಯೂ ಬಹಳ ಒಳ್ಳೆಯ ಹೆಸರಿತ್ತು. ಪಾಠ ಹೇಳುವ ರೀತಿಯಲ್ಲಿ ಮೋಡಿ ಇದ್ದಂತೆ, ಅಷ್ಟೇ ಶಿಸ್ತಿನ ಅಧ್ಯಾಪಕ ಕೂಡಾ. ಆತನಿಗೆ ಅಷ್ಟೇ ಹೆದರುತ್ತಿದ್ದರು ವಿದ್ಯಾರ್ಥಿಗಳು. ಅಂತಹಾ ವಿದ್ಯಾರ್ಥಿಗಳ ನಡುವಲ್ಲಿ ವಿಭಿನ್ನ ನಡೆಯಿಂದ ಪ್ರಭುವನ್ನು ಚಿಂತೆಗೊಳಪಡಿಸಿದವಳು ಸವಿತಾ.


ಹೆಸರಾಂತ ಉದ್ಯಮಿಗಳಾದ ಹರಿಹರನ್ ಅವರ ಮಗಳು. ನೇರವಾಗಿ ಪ್ರಭುವಿನ ಬಳಿಯಲ್ಲಿ ಪತ್ರದ ಮೂಲಕ ಪ್ರೇಮ ಪ್ರಸ್ತಾಪ ಮಾಡಿದ್ದಳು. ಆದರೆ, ಪ್ರಭು ಅದನ್ನು ಮೊದಲಿಗೆ ಹುಡುಗಾಟಿಕೆ ಎಂದು ನಿರ್ಲಕ್ಷಕ್ಕೆ ಅದರ ಕುರಿತಾಗಿ ಎಚ್ಚರಿಕೆ ನೀಡಿದ್ದರೂ ಅದು ತಪ್ಪಿರಲಿಲ್ಲ. ಅದಾದ ನಂತರದ ಘಟನೆಗಳು ಆತನ ಬದುಕಿನಲ್ಲಿ ನೆಮ್ಮದಿ ತಂದುಕೊಟ್ಟಿದ್ದವು. ಅದಕ್ಕೆ ಕಾರಣ ಸವಿತಾ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೊರಟದ್ದು. ಎರಡು ವರ್ಷಗಳ ನಂತರ ಬಂದ ಸವಿತಾ ಮತ್ತೆ ಧುತ್ತೆಂದು ಅವನ ಎದುರಲ್ಲಿ ನಿಂತಳು. ಆಗಲೂ ಮತ್ತದೇ ಪ್ರೇಮ ಪ್ರಸ್ತಾವನೆಯೇ.. 


ಪ್ರಭುವಿನ ಪಕ್ಕದ ಮನೆಯಲ್ಲಿದ್ದದ್ದು ಶಾಂತಿ ಹಾಗೂ ಮಾಧವರ ಪುಟ್ಟ ಸುಂದರ ಸಂಸಾರ. ಗಂಡ-ಹೆಂಡತಿ ಇಬ್ಬರೂ ಅತಿಥಿಸತ್ಕಾರ ಮಾಡುವುದರಲ್ಲಿ ಎತ್ತಿದ ಕೈ. ಅದರಲ್ಲೂ ಚಿಕ್ಕಂದಿನಿಂದ ಸ್ನೇಹಿತರಂತೆಯೇ ಬೆಳೆದಿದ್ದ ಶಾಂತಿಗೆ ಪ್ರಭುವಿನಲ್ಲಿ ಸಲುಗೆ ಹೆಚ್ಚು. ಪ್ರಭುವಿಗೂ ಅಷ್ಟೇ ಶಾಂತಿ ಎಂದರೆ ಒಂದು ರೀತಿಯ ಸಲುಗೆ ಹಾಗೂ ಗೌರವ. ಇವರ ಸ್ನೇಹಕ್ಕೆ ಹಾಗೂ ನಿಷ್ಕಲ್ಮಶವಾದ ಬಂಧಕ್ಕೆ ಎಂದಿಗೂ ಅಡ್ಡ ಬಂದವನಲ್ಲ ಮಾಧವ. ಅವರಿಗೆ ಪ್ರೀತಿಯ ಪುಟ್ಟ ಮಗಳು ಸ್ವಪ್ನ ಇದ್ದಳು. ಶಾಂತಿ ಹಾಗೂ ಮಾಧವರ ಅನ್ಯೋನ್ಯ ದಾಂಪತ್ಯವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ ಲೇಖಕಿ.


ಪ್ರಭುವಿನ ತಾಯಿ ಇಲ್ಲದಾಗ ಅಥವಾ ತನ್ನ ಮನೆಯಲ್ಲಿ ಏನೇ ವಿಶೇಷವಾದ ತಿಂಡಿ ಮಾಡಿದರೂ ಅದು ಪ್ರಭುವಿಗೆ ಸಿಗುತ್ತಿತ್ತು. ಅವನೆಂದರೆ, ಒಂದು ರೀತಿಯ ಆರಾಧನೆಯ ಭಾವವೂ ಹೌದು. ನಿಷ್ಕಲ್ಮಶ ಬಂಧವೊಂದು ರೂಪುಗೊಂಡ ಬಗೆಯೇ ವಿಶೇಷ.


ಹರಿಹರನ್ ಪೇಪರ್ ಮಿಲ್ ಮತ್ತು ಹರಿಹರನ್ ಸಿಮೆಂಟ್ ಮಾಲೀಕರಾದ ಹರಿಹರನ್ ಅವರಿಗೆ ತಮ್ಮ ಮಗಳು ಸವಿತಾ ತೀರಾ ಮಧ್ಯಮ ವರ್ಗದ ಅಧ್ಯಾಪಕ ಪ್ರಭುವನ್ನು ಪ್ರೀತಿಸಿದ್ದು ಇಷ್ಟವಾಗಲಿಲ್ಲವಾದರೂ.. ಪ್ರಭುವನ್ನು ಕಂಡಾಗ ಆತನ ಪ್ರಾಮಾಣಿಕ ವ್ಯಕ್ತಿತ್ವ ಹಾಗೂ ನೇರ ಗುಣ ಸೆಳೆದಿತ್ತು.  ಪ್ರಭುವಿನ ವ್ಯಕ್ತಿತ್ವದ ಮತ್ತೊಂದು ವಿಚಾರ ಹೇಳುತ್ತಾರೆ. ಶ್ರೀಮಂತರನ್ನು ಕಂಡಾಗ ಅವನಲ್ಲಿ ಇನ್ಫಿರಿಯಾರಿಟಿ ಕಾಂಪ್ಲೆಕ್ಸ್ ಬಾಧಿಸದು ಎಂದು. ಮನುಷ್ಯನಲ್ಲಿ ಇನ್ಫಿರಿಯಾರಿಟಿ ಹಾಗೂ ಸುಪೀರಿಯಾರಿಟಿ ಕಾಂಪ್ಲೆಕ್ಸ್ ಗಳು ಒಳ್ಳೆಯವಲ್ಲ ಎಂಬುದನ್ನು ಲೇಖಕಿ ತಮ್ಮ ಕಾದಂಬರಿಗಳಲ್ಲಿ ಧೀಮಂತ ವ್ಯಕ್ತಿತ್ವಗಳ ಮೂಲಕ ಓದುಗರಿಗೆ ಸೊಗಸಾಗಿ ಕಟ್ಟಿಕೊಡುತ್ತಾರೆ. ಸವಿತಾಳಲ್ಲಿಯೂ ಪ್ರೇಮ ನಿವೇದನೆ ಮಾಡುವಾಗ ಹಾಗೂ ಪ್ರಭುವಿನ ಬಳಿಯಲ್ಲಿ ಇರುವ ನಡೆ, ಆಕೆ ಬ್ಯುಸಿನೆಸ್ ನೋಡಿಕೊಳ್ಳುವಾಗಿನ ಗಾಂಭೀರ್ಯತೆಗಿನ್ನ ವಿಭಿನ್ನವಾಗಿದೆ. ಕೌಟುಂಬಿಕವಾಗಿ ಮೃದುವಾಗಿರುವವಳು, ವ್ಯಾವಹಾರಿಕವಾಗಿ ಎಷ್ಟು ಗಂಭೀರ ಎಂದು ತೋರುತ್ತಾರೆ.


ಮಗಳು ಎಲ್ಲಾ ವರಗಳನ್ನು ತಿರಸ್ಕರಿಸಿ ಮದುವೆಯಾದರೆ ಪ್ರಭುವನ್ನೇ ಎಂದು ಗಟ್ಟಿಯಾಗಿ ನಿರ್ಧರಿಸಿದಾಗ ಇಂತಹ ಅಪರೂಪದ ಪ್ರಭು ಅವರಿಗೆ ಮೆಚ್ಚುಗೆಯಾದರೂ.. ಮುಂದೆ ಎದುರಾಗುವ ಸಮಸ್ಯೆಗಳು ಅವರನ್ನು ಕಾಡುತ್ತಲೇ ಇತ್ತು. ಅದಕ್ಕೆ ತಾನೇ ಪರಿಹಾರ ಸೂಚಿಸುವಂತೆ ಪ್ರಭು, ತನ್ನ ಮನೆಯನ್ನು, ಅಲ್ಲಿನ ಪರಿಸ್ಥಿತಿಯನ್ನು ಕಂಡಾಗ ತನ್ನ ಶ್ರೀಮಂತಿಕೆ ಎದುರು ಇದು ಸಪ್ಪೆಯಾಗಿ ಕಂಡು ಅವಳೇ ಇದರಿಂದ ಹಿಂದೆ ಸರಿಯಬಹುದೆಂದು ಯೋಚಿಸಿದ. ಹಾಗಾಗಿ, ಅವಳನ್ನು ತನ್ನ ಮನೆಗೆ ಕರೆದೊಯುತ್ತಾನಾದರೂ ಯಾವುದಕ್ಕೂ ಜಗ್ಗದ ಸವಿತಾ ಚಿದಂಬರಯ್ಯನವರು, ಸೌಭಾಗ್ಯಮ್ಮ ಹಾಗೂ ಶಾಂತಿಗೆ ಬಹಳ ಹತ್ತಿರವಾಗುತ್ತಾಳೆ.


ವಿವಾಹವಾದ ನಂತರ ಪ್ರಭು ತನ್ನ ಕೆಲಸವನ್ನಾಗಲಿ, ಧೀಮಂತಿಕೆಯನ್ನಾಗಲಿ ನಿಲುವನ್ನಾಗಲಿ ಬದಲಿಸಿಕೊಳ್ಳುವುದಿಲ್ಲ. ಸವಿತಾ ತನ್ನ ತಂದೆಯ ಬ್ಯುಸಿನೆಸ್ ಅನ್ನು ನೋಡಿಕೊಳ್ಳುತ್ತಲೇ ಈ ಮನೆಗೆ ಹೊಂದಿಕೊಂಡು ಹೋಗುತ್ತಿರುತ್ತಾಳೆ. ಅತ್ತ ತಂದೆಯ ಮನೆಯಲ್ಲಿ ಹಾಗೂ ಇತ್ತ ಗಂಡನ ಮನೆಯಲ್ಲಿ ಎಲ್ಲರನ್ನೂ ಹೊಂದಿಕೊಂಡು ನಡೆಯುತ್ತಿರುತ್ತಾಳೆ. ತನ್ನ ಶ್ರೀಮಂತಿಕೆಯನ್ನು ಬದಿಗೊತ್ತಿ ಎಲ್ಲರ ಮನಗೆಲ್ಲುತ್ತಾಳೆ. ಆದರೆ, ಪ್ರಭುವಿನ ಒಂದು ನಡೆ ಮಾತ್ರ ಆಗಾಗ ಅವಳ ಮನಸ್ಸಿನಲ್ಲಿ ಕಹಿ ಮೂಡಿಸುತ್ತಿರುತ್ತದೆ. ಮುಂದೆ ಅದೇ ಅವಳ ಸಂಶಯಕೂ ಕಾರಣವಾಗುತ್ತದೆ. ಆ ಕಹಿ ಏನು..?


ಅದಷ್ಟೇ ಕಾರಣವಾಗದೆ.. ಆಗಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಇರುಸು-ಮುರಿಸುಗಳು ಸಹ ತಲೆದೋರುತ್ತಿರುತ್ತವೆ. ಇದೇ ಸಮಯದಲ್ಲಿ ಸವಿತಾಳ ಚಿಕ್ಕಪ್ಪ ಪಾರ್ಥಸಾರಥಿಯವರ ಆಗಮನವಾದಾಗ ಪ್ರಭುವಿನ ವ್ಯಕ್ತಿತ್ವಕ್ಕೆ, ಸ್ವಾಭಿಮಾನಕ್ಕೆ ಪೆಟ್ಟು ಬೀಳುವಂತಹಾ ಕೆಲ ಘಟನೆಗಳು ಸಹಾ ನಡೆಯುತ್ತವೆ. ಆದರೆ, ಪ್ರಭು ಆದಷ್ಟು ಸಹಜವಾಗಿಯೇ ನಡೆದುಕೊಳ್ಳಲು ಪ್ರಯತ್ನಿಸಿದರೂ ಕೆಲವೊಮ್ಮೆ ಸಂದರ್ಭ ಹಾಗೂ ಸನ್ನಿವೇಶಗಳು ಸವಿತಾ ಹಾಗೂ ಅವನ ಸಂಬಂಧದ ಮೇಲೆ ಪರಿಣಾಮ ಬೀರುತ್ತಿರುತ್ತವೆ. 


ಶಾಂತಿಯ ಪುಟ್ಟ ಮಗಳು ಸ್ವಪ್ನಳಿಗೆ ಚಾಕಲೇಟ್ ಗೆ ಎಂದು ಹತ್ತರ ನೋಟನ್ನು ಕೊಟ್ಟ ಸವಿತಾ ಮುಂದೆ ಪರಿತಪಿಸುವಂತಾಗುತ್ತದೆ. ಆ ಹಣ ಹಿಡಿದು ಓಡುತ್ತಿದ್ದ ಸ್ವಪ್ನ ಕಾರಿಗೆ ಸಿಕ್ಕಳು ಎಂಬ ಸುದ್ದಿ ತಿಳಿದಾಗ ಭಯಂಕರ ಪ್ರಳಯವಾದಂತೆ ಬಿಚ್ಚಿಬಿದ್ದ ಪ್ರಭು. ಪ್ರಭೂವಿಗೆ ಇಷ್ಟು ಆಘಾತ ತಂದ ವಿಷಯ ಶಾಂತಿ ಹಾಗೂ ಮಾಧವರನ್ನು ಯಾವ ರೀತಿ ಬಾಧಿಸಿತು..?


ಅರಿಯದೆಯೇ ಹಣಕೊಟ್ಟು ತಪ್ಪು ಮಾಡಿದ ಸವಿತಾ ಅಪರಾಧಿ ಭಾವವನ್ನು ಅನುಭವಿಸುತ್ತಿದ್ದಾಗ ಅವಳು ವರ್ತಿಸಿದ ಪರಿ ಹೇಗಿತ್ತು.. ಈ ಸಂದರ್ಭದಲ್ಲಿ ಪ್ರಭು ಹಾಗೂ ಸವಿತಾ ಸಂಬಂಧ ಏನಾಯ್ತು..? ಸ್ವಪ್ನ ಹುಷಾರಾದಳೇ..? ಶಾಂತಿ ಹಾಗೂ ಪ್ರಭುವಿನ ಸ್ನೇಹಕ್ಕೇನಾದರೂ ಧಕ್ಕೆ ಬಂದಿತಾ..? 


ಹೇಮಂತದ ಸೊಬಗಿನಲ್ಲಿ ಎಲ್ಲಿ ನೋಡಿದರೂ ರಾಶಿಗಟ್ಟಲೇ ಹಿಮದ ಬಿಂದುಗಳು. ಅಲ್ಪ ಕಾಲ ಮಿನುಗಿ ಬಿಸಿಲು ಏರಿದಂತೆ ಮಾಯವಾಗುವಂತೆ, ಅವರ ಬದುಕಿನ ಕಷ್ಟಗಳು ಮಾಯವಾದವೇ.. ಅಥವಾ ಭಾಂದವ್ಯವೇ ಮಾಯವಾಯಿತೇ..? ಉತ್ತರ ತಿಳಿಯಲು ಓದಿ ಸಾಯಿಸುತೆಯವರ "ಹೇಮಂತದ ಸೊಗಸು" ಕಾದಂಬರಿಯನ್ನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ