ಚಿಕ್ಕಂದಿನಲ್ಲಿ ನೀವು ಬಳಸಿದ ಬ್ರಾಂಡ್ ಯಾವುದೇಂದು ನೆನಪಿದೆಯೇ..?? ಒಂದು ನಟರಾಜ್ ಇಲ್ಲವೇ ಅಪ್ಸರಾ. ನಟರಾಜ್ ಪೆನ್ಸಿಲ್ ಗಿಂತ ಅಪ್ಸರಾ ಪೆನ್ಸಿಲ್ ನ ಬೆಲೆ ಕೊಂಚ ಹೆಚ್ಚು. ಆಗ ಅಪ್ಸರಾ ಹಾಗೂ ನಟರಾಜ್ ಪೆನ್ಸಿಲ್ ಬಳಸುವವರಲ್ಲಿ ತನ್ನದೇ ಬೆಸ್ಟ್ ಎಂದು ಭಾಜಿ ಕಟ್ಟುವುದೂ ಇತ್ತು. ಶಾಲೆಗಳಲ್ಲಿ ಪ್ರಶಸ್ತಿ ಕೊಡುತ್ತಿದ್ದದ್ದೂ ಪುಸ್ತಕ, ಪೆನ್ನು, ಪೆನ್ಸಿಲ್ ಗಳನ್ನೇ.. ಎಷ್ಟೋ ಬಾರಿ ಆ ಪೆನ್ಸಿಲ್‌ಗಳಲ್ಲಿ ಹೆಚ್ಚಿನ ಸ್ಥಾನ ಪಡೆದಿರುತ್ತಿದ್ದದ್ದೇ ಅಪ್ಸರಾ ಪೆನ್ಸಿಲ್. ನಟರಾಜ್ ಅಥವಾ ಅಪ್ಸರಾ ಎಂದು ಭಾಜಿ ಕಟ್ಟುತ್ತಿದ್ದ ಮಕ್ಕಳಿಗೂ ಆಗ ಗೊತ್ತಿರದಿದ್ದದ್ದು.
ಇವೆರಡೂ ಬೇರೆ-ಬೇರೆ ಕಂಪನಿಯ ಪೆನ್ಸಿಲ್ ಗಳಲ್ಲ. ಇವೆರಡು ಒಂದೇ ಕಂಪನಿಯ ಪೆನ್ಸಿಲ್ ಗಳೆಂದು. ಇವೆರಡನ್ನು ಪ್ರೊಡಕ್ಷನ್ ಮಾಡುತ್ತಿದ್ದ ಕಂಪನಿಯ ಹೆಸರು 'ಹಿಂದುಸ್ತಾನ್ ಪೆನ್ಸಿಲ್ಸ್'. ಆಗಿನ ಕಾಲದಲ್ಲಿ ಭಾರತದ ಅತಿ ದೊಡ್ಡ ಪೆನ್ಸಿಲ್ ಹಾಕು ಸ್ಟೇಷನರಿ ಪ್ರಾಡಕ್ಟ್ ತಯಾರಕರು ಎಂದೇ ಹೆಸರಾಗಿದ್ದ ಕಂಪನಿ ಇದು. ಒಂದೇ ಕಂಪನಿಯ ಬ್ರ್ಯಾಂಡ್ ನಲ್ಲಿ ಇಷ್ಟು ವೈವಿಧ್ಯತೆ ಹಾಗೂ ಒಂದಕ್ಕೊಂದು ಹೋಲಿಕೆ ಇಲ್ಲದಂತೆ ಎರಡು ಬೇರೆ-ಬೇರೆ ಬ್ರ್ಯಾಂಡ್ ಪೆನ್ಸಿಲ್ ಗಳಂತೆ ತೋರುತ್ತಿದ್ದುದರ ಹಿಂದೆ ಕಂಪನಿಯ ಮಾರ್ಕೆಟಿಂಗ್ ಸ್ಟ್ಯಾಟರ್ಜಿ ಕೂಡಾ ಇದೆ. ಅದೇನು ಎಂಬುದನ್ನು ತಿಳಿಯೋಣ ಬನ್ನಿ.
ಮೊದಲಿಗೆ ಇದಕ್ಕೂ ಮೊದಲು ಬೇರೆ ಯಾವ ಪೆನ್ಸಿಲ್ ಕಂಪನಿಗಳಿದ್ದವು ಎಂಬುದನ್ನು ತಿಳಿಯೋಣ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲು ಪೆನ್ಸಿಲ್ ಗಳನ್ನು ಉತ್ಪಾದಿಸುತ್ತಿದ್ದರಾದರೂ.. ವಿದೇಶಿ ಕಂಪನಿಗಳ ಪೆನ್ಸಿಲ್ ಗಳಿಂದ ಬಹಳ ಸ್ಪರ್ಧೆ ಇರುತ್ತಿತ್ತು. ಏಕೆಂದರೆ, ವಿದೇಶದಿಂದ ಆಮದು ಮಾಡಿಕೊಂಡ ಪೆನ್ಸಿಲ್ ಗಳನ್ನು ಬಳಸುತ್ತಿದ್ದದ್ದೇ ಹೆಚ್ಚು. 1939-40ರ ಸಮಯದಲ್ಲಿ ಇಂಗ್ಲೆಂಡ್, ಜರ್ಮನಿ ಹಾಗೂ ಜಪಾನ್ ಗಳಿಂದ ಸುಮಾರು 6.5 ಲಕ್ಷ ರೂಪಾಯಿಯ ಪೆನ್ಸಿಲ್ ಗಳು ಆಮದಾಗುತ್ತಿದ್ದವು. ನಂತರದ ಸಮಯದಲ್ಲಿ.. 1944-45 ರಷ್ಟರಲ್ಲಿ ಇದು ಕಡಿಮೆಯಾಯಿತು. ಏಕೆಂದರೆ ಇಲ್ಲಿಯವರು ವಿದೇಶಿ ವಸ್ತುಗಳನ್ನು ನಿರಾಕರಿಸಿ ಸ್ವದೇಶಿ ವಸ್ತುಗಳಿಗೆ ಮುಂದಡಿ ಇಡುತ್ತಿದ್ದರು ಎಂಬುದು ಹೌದಾದರೂ 2ನೇ ವಿಶ್ವಯುದ್ಧದ ಸಮಯದಲ್ಲಿ ಆ ದೇಶಗಳಲ್ಲಿ ನಡೆದ ಹಲವಾರು ಬದಲಾವಣೆಗಳಿಂದ.. ಬೇಡಿಕೆಯಲ್ಲಿದ್ದಷ್ಟೂ ಪೆನ್ಸಿಲ್ ಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ನಿಧಾನವಾಗಿ ವಿದೇಶದಿಂದ ಆಮದಾಗುತ್ತಿದ್ದ ಪೆನ್ಸಿಲ್ ಬೆಲೆ 2.3 ಲಕ್ಷಕ್ಕಿಳಿದು ಒಮ್ಮೆ ಕಡಿಮೆಯಾಗುತ್ತಾ ಹೋಗುತ್ತಿತ್ತು.
ಬ್ಯುಸಿನೆಸ್ ನಲ್ಲಿ ಕೆಲವರಿಗೆ ನಷ್ಟವಾದರೆ, ಅದೇ ನಷ್ಟ ಮತ್ತೆ ಹಲವರಿಗೆ ಲಾಭ ಮಾಡಿಕೊಡುತ್ತದೆ ಎಂಬುದಂತೂ ಹೌದು. ವಿದೇಶದಿಂದ ಆಮದಾಗದೆ ಕಡಿಮೆಯಾಗುತ್ತಿದ್ದ ಪೆನ್ಸಿಲ್ ಗಳಿಂದಾಗಿ ಭಾರತೀಯ ಪೆನ್ಸಿಲ್ ತಯಾರಿಕರ ಮಾರ್ಕೆಟ್ ಗೆ ಬೇಡಿಕೆ ಬಂದಂತಾಯಿತು. ಈ ಸಮಯದಲ್ಲಿ ಹಲವಾರು ಪೆನ್ಸಿಲ್ ತಯಾರಕರು ಅಲ್ಲಲ್ಲಿ ತಮ್ಮ ಬ್ಯುಸಿನೆಸ್ ಗಳನ್ನು ಸ್ಥಾಪಿಸಲು ಹೊರಟರು. ಅದರಲ್ಲಿಯೂ ಕಲ್ಕತ್ತಾ, ಮುಂಬೈ ಹಾಗೂ ಮದ್ರಾಸ್ ಗಳಲ್ಲಿ ಹೆಚ್ಚಿನ ತಯಾರಕರು ಹುಟ್ಟಿಕೊಂಡರು.
ಎಲ್ಲಾ ಬ್ಯುಸಿನೆಸ್ ಗಳೂ ಶುರುವಾದ ಮಾತ್ರಕ್ಕೆ ಯಶಸ್ವಿಯಾಗುವುದಿಲ್ಲ. ಹಾಗೆಯೇ ಭಾರತೀಯ ಪೆನ್ಸಿಲ್ ತಯಾರಕರು ಹುಟ್ಟಿಕೊಂಡರಾದರೂ.. ಅವರಿಗೆ ದಿನೇ-ದಿನೇ ಸಮಸ್ಯೆಗಳೇ ಹೆಚ್ಚಾದವು. ಅದರಲ್ಲಿಯೂ ಗ್ರಾಹಕರಿಂದ ಅತಿ ಹೆಚ್ಚಿನ ದೂರುಗಳು ಬರುತ್ತಾ ಹೋದವು. ಕಾರಣವಿಷ್ಟೇ..ವಿದೇಶಿ ಪೆನ್ಸಿಲ್ ಗಳಿಗೆ ಹೋಲಿಸಿದರೆ.. ತಯಾರಾಗುತ್ತಿದ್ದ ಭಾರತೀಯ ಪೆನ್ಸಿಲುಗಳ ಗುಣಮಟ್ಟ ಕಡಿಮೆಯಿತ್ತಲ್ಲದೆ, ಬೆಲೆಯೂ ಹೆಚ್ಚಿತ್ತು. ಹಣ ಕೊಟ್ಟು ಕಡಿಮೆ ಗುಣಮಟ್ಟಕ್ಕೆ ಕಣ್ಮುಚ್ಚಿ ಒಪ್ಪಲು ಸಾಧ್ಯವೇ..??
ಅಬ್ಬಬ್ಬಾ ಎಂದರೆ ಪೆನ್ಸಿಲ್ ಬಳಕೆದಾರರು ಎಷ್ಟಿರಬಹುದು.. ಕೇವಲ ವಿದ್ಯಾರ್ಥಿಗಳು ತಾನೇ..? ಎಂದು ನೀವು ಕೇಳಬಹುದಾದರೂ.. ಆ ಸಮಯದಲ್ಲಿ ಪೆನ್ಸಿಲ್ ಬಳಸುವವರೇ ಹೆಚ್ಚಿದರು. ವಿದ್ಯಾರ್ಥಿಗಳು, ಆರ್ಕಿಟೆಕ್ಟ್ ಗಳು, ಕಾರ್ಪೆಂಟರ್ ಗಳು, ಆರ್ಟಿಸ್ಟ್ ಗಳು, ಇಂಜಿನಿಯರ್ ಗಳು.. ಹೀಗೆ ಬರೆಯಲು, ಡ್ರಾಯಿಂಗ್, ಕಲರಿಂಗ್, ಸ್ಕೆಚ್ಚಿಂಗ್, ಶೇಡಿಂಗ್ ಹೀಗೆ ಎಲ್ಲದಕ್ಕೂ ಪೆನ್ಸಿಲ್ ಗಳ ಬಳಕೆಯಾಗುತ್ತಿತ್ತು. ಈಗ ಹೆಚ್ಚಿನಂಶದ ಆರ್ಕಿಟೆಕ್ಟ್ ಹಾಗೂ ಆರ್ಟಿಸ್ಟ್ ಗಳು ಡಿಜಿಟಲ್ ಗೆ ಬದಲಾಗಿದ್ದಾರೆ.
ಹೀಗೆ ಭಾರತೀಯ ಪೆನ್ಸಿಲ್ ಮಾರ್ಕೆಟ್ ಬೂಮ್ ಆಗುತ್ತಿದೆ ಎನ್ನಿಸುವಾಗಲೇ... 1958ರ ಸಮಯದಲ್ಲಿ ಇದೆಲ್ಲವನ್ನು ಗಮನಿಸುತ್ತಿದ್ದ ಮೂರು ಆಪ್ತ ಸ್ನೇಹಿತರು ಈ ಬ್ಯುಸಿನೆಸ್ ಗೆ ಕಾಲಿಟ್ಟರು. ಅವರೇ ಬಿ.ಜೆ ಸಂಗ್ವಿ (ಬಾಬು ಬಾಯಿ), ರಾಮನಾಥ್ ಮೆಹ್ರಾ ಹಾಗೂ ಮನ್ಸೂಕ್ನಿ. ಮೂವರಿಂದ ಮುಂಬೈಯಲ್ಲಿ ಶುರುವಾದ ಕಂಪನಿಯೇ 'ಹಿಂದೂಸ್ತಾನ್ ಪೆನ್ಸಿಲ್ಸ್'. ತಮ್ಮ ದೇಶದಲ್ಲಿ ತಯಾರಾಗುವ ಪೆನ್ಸಿಲ್‌ಗಳ ಗುಣಮಟ್ಟ ಏಕೆ ಕಡಿಮೆ..?? ಇದನ್ನು ಎಲ್ಲಿ ಸರಿಪಡಿಸಬಹುದು..?? ಎಂದು ರಿಸರ್ಚ್ ಮಾಡಿಕೊಂಡು ಬರಲು ಅವರು ಜರ್ಮನಿಗೂ ಹೋಗಿದ್ದರು. ಹೀಗೆ ಹಿಂದುಸ್ತಾನ್ ಪೆನ್ಸಿಲ್ ನಿಂದ ತಯಾರಾದ ಮೊಟ್ಟ ಮೊದಲ ಪೆನ್ಸಿಲ್ ಬ್ರ್ಯಾಂಡ್ "ನಟರಾಜ್ ಹೆಚ್.ಬಿ 621" ಪೆನ್ಸಿಲ್. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪೆನ್ಸಿಲ್‌ಗಳಲ್ಲಿ ಅತ್ಯುತ್ತಮ ಕ್ವಾಲಿಟಿಯ ಗ್ರಾಫೈಟ್ ಬಳಕೆ ಶುರುವಾಯಿತು. ಸ್ಪೆಷಲ್ ಬಾಂಡೆಡ್ ಗ್ರಾಫೈಟ್ ಗಳನ್ನು ಇದರಲ್ಲಿ ಬಳಸಲಾಗುತ್ತಿತ್ತು. ಈ ಲೆಡ್ ಬಹಳ ಕಾಲ ಉಳಿಯುತ್ತಿತ್ತಲ್ಲದೆ.. ಉಳಿದ ಲೆಡ್ ಗಳಿಕೆ ಹೋಲಿಸಿದರೆ ಗಟ್ಟಿ ಕೂಡಾ.
ಮುಂದಿನ ದಿನಗಳಲ್ಲಿ ಪೆನ್ಸಿಲ್ ಗಳಿಗೆ ಬೇಕಾದ ಟಿಂಬರ್ ಗಾಗಿ ಹೊಸದಾದ ಒಂದು ಟಿಂಬರ್ ಪ್ಲಾಂಟೇಶನ್ ಅನ್ನು ಸೆಟ್ ಮಾಡುತ್ತಾರೆ. ಗುಜರಾತ್ ನ ವಿಶೇಷವಾದ ಏಕನಾಮಿಕ್ ಜೋನ್ ನಲ್ಲಿ ಸುಮಾರು 265ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಈ ಟಿಂಬರ್ ಪ್ಲಾಂಟೇಶನ್ ಅನ್ನು ನಿರ್ಮಿಸುತ್ತಾರೆ.
ನಾವು ಬೆಳೆಯುತ್ತಾ ಹೋದಂತೆ ಪೆನ್ಸಿಲ್ ಬಳಕೆಯಿಂದ ದೂರಾಗಬಹುದು. ಆದರೆ, ಪೆನ್ಸಿಲ್ ನ ಬಳಕೆಯ ನೆನಪುಗಳು ಸದಾ ನಮ್ಮ ಹೃದಯದಲ್ಲಿ ತಾಜಾ ಆಗಿಯೇ ಉಳಿಯುತ್ತದೆ ಎಂಬರ್ಥದಲ್ಲಿ ನಟರಾಜ್ ಪೆನ್ಸಿಲ್ ನ ಮೊದಲ ಜಾಹೀರಾತು ತಯಾರಾಗುತ್ತದೆ. ಆ ಜಾಹೀರಾತಿನ ಮುಖ್ಯ ಸಾಲು 'ಕೆಲವು ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ'.
ನೆನಪುಗಳನ್ನು ಅಳಿಸಲಾಗುವುದಿಲ್ಲ ನಿಜ. ಆದರೆ ತಪ್ಪು ಬರೆದಾಗ ಚಿತ್ತು,ಕಾಟುಗಳನ್ನು ಹಾಕಿ ಬರೆಯುವ ಬದಲಿಗೆ ಅವುಗಳನ್ನು ಅಳಿಸುವುದೇ ಒಳ್ಳೆಯದಲ್ಲವೇ..?? ಸುಂದರವಾದ ನೆನಪುಗಳು ಹಾಗೂ ಬರಹಕ್ಕೆ ಅಳಿಸುವಿಕೆಯಲ್ಲಿಯೂ ಮೌಲ್ಯವಿದೆ. ಈ ನಿಟ್ಟಿನಲ್ಲಿ ಅವರು ಪೆನ್ಸಿಲ್ ನಿಂದ ರಬ್ಬರ್ ತಯಾರಿಕೆಯತ್ತ ಮುನ್ನಡೆದರು. ಹೀಗೆ ಎರೇಸರ್ ಗಳು, ಶಾರ್ಪ್ನರ್, ಸ್ಕೇಲ್, ವ್ಯಾಕ್ಸ್ ಕ್ರಯಾನ್, ಆಯಿಲ್ ಕಲರ್, ಪೇಸ್ಟಲ್ ಕಲರ್, ಮ್ಯಾಥಮೆಟಿಕಲ್ ಇನ್ಸ್ಟ್ರುಮೆಂಟ್ (ಜಾಮೆಟ್ರಿ ಬಾಕ್ಸ್), ಪೆನ್ ಹೀಗೆ ಹಲವಾರು ಪ್ರಾಡಕ್ಟ್ ಗಳು ತಯಾರಾದವು. ಕಾಲಕ್ರಮೇಣ ನಟರಾಜ್ ಪೆನ್ಸಿಲ್ ಗೆ ಬೇರೆ-ಬೇರೆ ಬ್ರ್ಯಾಂಡ್ ಗಳಿಂದ ಪೈಪೋಟಿ ಉಂಟಾಗುತ್ತಿತ್ತು. ಕ್ಲಾಸ್ ಮೇಟ್ಸ್ ನಿಂದ ಹೆಚ್ಚೇ ಪೈಪೋಟಿ ಇತ್ತು. ಈ ಸಂದರ್ಭದಲ್ಲಿಯೇ.. ಅಂದರೆ 1970ರಲ್ಲಿ 'ಅಪ್ಸರಾ' ಎನ್ನುವ ಹೊಸ ಪೆನ್ಸಿಲ್ ಬಿಡುಗಡೆಯಾಗುತ್ತದೆ.
ನಟರಾಜ್ ಪೆನ್ಸಿಲ್ ಅತಿ ದೀರ್ಘಕಾಲ ಉಳಿಯುವ ಗುಣಮಟ್ಟದ್ದು. 'ನಟರಾಜ್ ಫಿರ್ ಸೇ ಚಾಂಪಿಯನ್' ಎನ್ನುವ ಘೋಷವಾಕ್ಯದೊಂದಿಗೆ ಮಾರುಕಟ್ಟೆಯಲ್ಲಿ ಇದು ಪ್ರೊಫೆಷನಲ್ ಗಳು, ಹವ್ಯಾಸಿಗಳಿಗೆ ಹಾಗೂ ಇಂಜಿನಿಯರ್ ಗಳಿಗಾಗಿ ಉತ್ತಮ ಎನ್ನುತ್ತಾ ತನ್ನ ಜಾಹೀರಾತಿನೊಂದಿಗೆ ಎಲ್ಲೆಡೆ ಪಸರಿಸುತ್ತಿದ್ದರೆ.. "ನೀವು ಶಾಲೆಗಳಲ್ಲಿ ನೂರಕ್ಕೆ ನೂರಾ-ಐದು ಮಾರ್ಕ್ಸ್ ಗಳನ್ನು ತೆಗೆಯಬೇಕೇ..?? ಹಾಗಾದರೆ, ಅಪ್ಸರಾವನ್ನೇ ಬಳಸಿ." ಎನ್ನುವ ಅಪ್ಸರಾ ಪೆನ್ಸಿಲ್ ನ ಹೊಸ ಜಾಹೀರಾತೊಂದು ಮಿಂಚುತ್ತಿತ್ತು. ಅರೆ..! ನೂರಕ್ಕೆ 105 ಅಂಕಗಳಾ ಎಂದು ಅಚ್ಚರಿಪಡುವಾಗಲೇ.. ನೂರಕ್ಕೆ ನೂರು ನಿಮ್ಮ ಜ್ಞಾನಕ್ಕೆ ಸಂಬಂಧಿಸಿದರೆ, ಉಳಿದ ಐದು ನಿಮ್ಮ ಸುಂದರ ಕೈಬರಹಕ್ಕೆ ಎನ್ನುವ ಉತ್ತರ ನೀಡಿದ್ದರು ಅಪ್ಸರಾ. ಆ ಸಮಯದಲ್ಲಿ ಕೆಲವು ಶಾಲೆಗಳಲ್ಲಿ ಸುಂದರ ಕೈ ಬರಹ ಅಥವಾ ಗುಡ್ ಹ್ಯಾಂಡ್ ರೈಟಿಂಗ್ ಎನ್ನುವ ಹೆಸರಿನಲ್ಲಿ ಐದು ಮಾರ್ಕ್ ಗಳನ್ನು ನೀಡುವ ಅಭ್ಯಾಸವಿತ್ತು. ಅಪ್ಸರಾ ಪೆನ್ಸಿಲ್ ತಯಾರಕರು ಅದನ್ನು ಹೆಚ್ಚಾಗಿ ಡಾರ್ಕ್ ಆಗಿ ಬರೆಯುವಂತೆ.. ಮತ್ತು ಸುಂದರ ಕೈಬರಹಕ್ಕಾಗಿಯೇ ನೆರವಾಗುವಂತೆ ರೂಪಿಸಿದ್ದರು. ಅಪ್ಸರಾ ಪೆನ್ಸಿಲ್ ಗಳು ವಿದ್ಯಾರ್ಥಿಗಳಿಗೆ, ಆರ್ಟಿಸ್ಟ್ ಗಳಿಗೆ ಎಂದೇ ವಿಶೇಷವಾಗಿ ತಯಾರಾಗುತ್ತಿದೆ ಎನ್ನುವ ಪದಗಳನ್ನು ಒತ್ತು ನೀಡಿ ವಿಧವಿಧವಾದ ಬೋಲ್ಡ್ ಹಾಗೂ ಶೇಡಿಂಗ್ ಪೆನ್ಸಿಲ್ ಗಳನ್ನು ಸಹಾ ತಯಾರಿಸಿದರು.
ನಟರಾಜ್ ಹಾಗೂ ಅಪ್ಸರಾ ಎರಡೂ ಪೆನ್ಸಿಲ್ ಗಳು ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಘರ್ಷಣೆಗಳಿಲ್ಲದೆ ರಾಜ-ರಾಣಿಯಂತೆ ತಮ್ಮ ತಮ್ಮದೇ ಆದ ಗ್ರಾಹಕ ವರ್ಗಕ್ಕೆ ತಲುಪುತ್ತಾ ಪೆನ್ಸಿಲ್ ಮಾರುಕಟ್ಟೆಯನ್ನು ಸುಮಾರು 60-65 % ಆವರಿಸಿದವು. ಇದನ್ನು ಬ್ಯುಸಿನೆಸ್ ನಲ್ಲಿ 'ಡ್ಯುಯಲ್ ಬ್ರ್ಯಾಂಡ್ ಸ್ಕ್ರಾಟರ್ಜಿ' ಎಂದು ಕರೆಯುತ್ತಾರೆ. ವಿವಿಧ ವಿಭಾಗಗಳ ವಿವಿಧ ರೀತಿಯ ಗ್ರಾಹಕರನ್ನು ತಲುಪಲು ಹಾಗೂ ತಮಗೆ ಯಾವುದೇ ಪ್ರತಿಸ್ಪರ್ಧಿಗಳಿರದಂತೆ.. ಬೇರೆಯವರು ತಮ್ಮ ಕಂಪನಿಗೆ ಸರಿಸಮವಾಗಿ ಬರೆದಂತೆ, ತಮ್ಮ-ತಮ್ಮಲ್ಲಿಯೇ ಕಾಂಪಿಟೇಶನ್ ಇದೆ ಎಂದು ಮೇಲ್ನೋಟಕ್ಕೆ ತೋರಿಸುತ್ತಾ.. ತಮ್ಮ ಕಂಪನಿಗೇ ಲಾಭ ಮಾಡಿಕೊಳ್ಳುವ ಒಂದು ಬಿಸಿನೆಸ್ ಸ್ಟ್ರ್ಯಾಟಜಿ ಇದಾಗಿದೆ.
ಕಂಪನಿಯ ಮುಂದುವರಿದ ದಿನಗಳಲ್ಲಿ ಮೆಹ್ರಾ ಹಾಗೂ ಮನ್ಸೂಕ್ನಿ ಇಬ್ಬರೂ ವೈಯಕ್ತಿಕ ಕಾರಣಗಳಿಂದ ಸಂಗ್ವಿಗೇ ಕಂಪನಿಯ ಸಂಪೂರ್ಣ ವಹಿವಾಟನ್ನು ಬಿಟ್ಟು ಹೊರನಡೆಯುತ್ತಾರೆ. ಹಿಂದುಸ್ಥಾನ್ ಪೆನ್ಸಿಲ್ಸ್ ಭಾರತದಲ್ಲಿಯೇ ಅತಿ ದೊಡ್ಡ ಪೆನ್ಸಿಲ್ ತಯಾರಕರು ಎಂಬ ಪಟ್ಟವನ್ನು ತಮ್ಮದಾಗಿಸಿಕೊಂಡರಷ್ಟೇ ಅಲ್ಲದೆ.. ಸುಮಾರು 50 ದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ. ದಿನವೊಂದಕ್ಕೆ 8.5 ಮಿಲಿಯನ್ ಗಳಷ್ಟು ಪೆನ್ಸಿಲ್ ಗಳು, 1.7 ಮಿಲಿಯನ್ ಗಳಷ್ಟು ಶಾರ್ಪ್ನರ್ ಗಳು, 2.7 ಮಿಲಿಯನ್ ಗಳಷ್ಟು ಎರೇಸರ್ ಗಳು ಹಾಗೂ ಒಂದು ಮಿಲಿಯನ್ ಗಳಷ್ಟು ಪೆನ್ನುಗಳು ತಯಾರಾಗುತ್ತವೆ.
'ಕೊಲೊರೊಮಾ' ಎನ್ನುವ ಹೆಸರಿನಲ್ಲಿ ತಯಾರಾಗುವ ವ್ಯಾಕ್ಸ್ ಕ್ರಯಾನ್ ಕಂಪನಿ ಕೂಡಾ ಹಿಂದೂಸ್ತಾನ್ ಪೆನ್ಸಿಲ್ ನವರದ್ದೇ. ಇವರಿಗೆ ಸಂಬಂಧಿಸಿದ ಪುಟ್ಟ ಘಟನೆಯೊಂದನ್ನು ಉಲ್ಲೇಖಿಸಲು ಇಚ್ಚಿಸುತ್ತೇನೆ. ಘಟನೆ ಪುಟ್ಟದಾದರೂ ಮಹತ್ವದ ಘಟನೆ ಎಂದೇ ಹೇಳಬಹುದು. 2013ನೇ ಜೂನ್ ನಲ್ಲಿ ಜಿಲ್ಲಾ ಗ್ರಾಹಕರ ಕೇಂದ್ರದಲ್ಲಿ ಕೊಲೊರೊಮಾ ವಿರುದ್ಧ ಒಂದು ಆನ್ಲೈನ್ ಪಿಟಿಷನ್ ದಾಖಲಾಗುತ್ತದೆ. ಈ ಆನ್ಲೈನ್ ಪಿಟೀಷನ್ ನಲ್ಲಿ 3100 ಸಹಿಗಳಿದ್ದವು. ಇದಕ್ಕೆ ಕಾರಣ ಕೊಲೊರೊಮಾ ಕ್ರಯಾನ್ಸ್ ನಲ್ಲಿ 'ಸ್ಕಿನ್' ಕಲರ್ ಎಂಬ ಹೆಸರಿನ ಕ್ರಯಾನ್. ಈ ಬಣ್ಣದ ಹೆಸರು ಸ್ಕಿನ್ ಕಲರ್ ಎಂದಾಗದೇ ಬದಲಾಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ಈ ಪೆಟಿಷನ್ ದಾಖಲಾಗುವಂತೆ ಮಾಡಿ ಇದೆಲ್ಲದಕ್ಕೂ ಮೂಲ ಕಾರಣವಾಗಿದ್ದು ಬೆಂಗಳೂರಿನ ಕಾನೂನು ವಿದ್ಯಾರ್ಥಿಯಾಗಿದ್ದ 20 ವರ್ಷದ ಯುವಕ 'ಚಿರಾಯು ಜೈನ್'.
ಈ ಪಿಟಿಷನ್ ದಾಖಲು ಮಾಡುವ ಮೊದಲು ಆತ ಹಿಂದೂಸ್ಥಾನ್ ಪೆನ್ಸಿಲ್ ನ ಮುಖ್ಯ ಕಛೇರಿಯನ್ನು ಸಂಪರ್ಕಿಸಿ ಈ ಕುರಿತು ಗಮನ ಸೆಳೆದಿದ್ದ. ಸ್ಕಿನ್ ಕಲರ್ ಎಂಬುದರ ಬದಲಾಗಿ ಬೇರೆ ಹೆಸರಿಡಲು ಸೂಚಿಸಿದ್ದ. ಆದರೆ, ಅವರು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿರಲಿಲ್ಲವಾಗಿ.. ಕಾನೂನಾತ್ಮಕ ಹೋರಾಟಕ್ಕೆ ಸಿದ್ಧನಾಗಿದ್ದ. ಈ ಬದಲಾವಣೆಗೆ ಒಂದು ಕಾರಣವಿತ್ತು. ಎಲ್ಲರ ಚರ್ಮದ ಬಣ್ಣವು ಒಂದೇ ಆಗಿರುವುದಿಲ್ಲ. ಅದರಲ್ಲೂ ಈ ಸ್ಕಿನ್ ಕಲರ್ ಎಂಬುದು ಹೆಚ್ಚಿನ ಭಾರತೀಯರ ಚರ್ಮದ ಬಣ್ಣಕ್ಕೆ ಸ್ವಲ್ಪವೂ ಹೋಲಿಕೆಯಾಗುತ್ತಿಲ್ಲ. ಹಾಗಾಗಿ ಇದನ್ನು ಬದಲಾಯಿಸಬೇಕು ಎಂದಿದ್ದ. ಬಾಲ್ಯದಿಂದ ಆತನೂ.. ಆತನ ಬಣ್ಣದ ಕಾರಣಕ್ಕಾಗಿ ಬೇರೆಯವರಿಂದ ಮಾನಸಿಕ ಕಿರುಕುಳಕ್ಕಾಗಿ ಒಳಗಾಗಿದ್ದ. ತನ್ನಂತೆಯೇ ಇತರರಿಗೂ ಆಗಬಾರದು ಎಂಬ ಕಾರಣಕ್ಕಾಗಿ ಆತ ಇಂತಹಾ ಹೋರಾಟಗಳಿಗಾಗಿ 'ಬ್ರೌನ್ ಅಂಡ್ ಪ್ರೌಡ್' ಎನ್ನುವ ಎನ್.ಜಿ.ಓ ವನ್ನೂ ಸ್ಥಾಪಿಸಿದ್ದ.
2013ರಲ್ಲಿ ದಾಖಲಾದ ಈ ಕೇಸಿನಲ್ಲಿ ಆತ ಸೋತಿದ್ದ. ಆದರೆ ಸೋಲು ಎಂದಿಗೂ ತಾತ್ಕಾಲಿಕ, ನನ್ನ ಹೋರಾಟಕ್ಕೆ ಫಲ ಸಿಕ್ಕಿಯೇ ಸಿಗುತ್ತದೆ ಎನ್ನುತ್ತಾ ರಾಜ್ಯ ಮಟ್ಟದ ಕನ್ಸ್ಯುಮರ್ ಕಮಿಷನ್ ಗೆ ಒಯ್ದು 2015 ರ ವರೆಗೂ ಆತ ಹೋರಾಡುತ್ತಲೇ ಇದ್ದ.
ಕೇವಲ ಹಿಂದುಸ್ತಾನ್ ಪೆನ್ಸಿಲ್ ಮಾತ್ರವಲ್ಲದೆ ಬೇರೆಯ ಕಂಪನಿಗಳು ಸಹಾ ಆ ಬಣ್ಣವನ್ನು ಸ್ಕಿನ್ ಕಲರ್ ಎಂದೇ ಗುರುತಿಸುತ್ತಿದ್ದವು. ಫ್ಯಾಬರ್-ಕ್ಯಾಸ್ಟಲ್ ಹಾಗೂ ಕ್ಯಾಮೆಲಿನ್ ಬ್ರ್ಯಾಂಡ್ ಗಳು ಅದನ್ನು 'ಫ್ಲೆಶ್ ಟಿಂಟ್' ಎಂದು ಕರೆಯುತ್ತಿದ್ದವು. ಈ ವಾದವನ್ನು ಹಿಂದುಸ್ತಾನ್ ಪೆನ್ಸಿಲ್ ನವರು ಮುಂದಿಟ್ಟಾಗ.. ಉಳಿದ ಕಂಪನಿಗಳು ಭಾರತೀಯ ಮೂಲದ ಕಂಪನಿಗಳಲ್ಲ. ಆದರೆ, ಮೂಲ ಹಾಗೂ ಹೆಸರಿನಲ್ಲಿಯೇ 'ಹಿಂದೂಸ್ಥಾನ್' ಎಂಬ ಹೆಸರಿರುವುದಾಗಿಯೂ.. ಆ ಬಣ್ಣಕ್ಕೂ ಹೆಚ್ಚಿನ ಭಾರತೀಯರ ಬಣ್ಣದ ಹೋಲಿಕೆಗೆ ತಾಳೆಯಾಗುವುದಿಲ್ಲ. ಅಲ್ಲದೇ, ಜನರಿಗೂ ಬಣ್ಣದ ಕುರಿತಾಗಿ ಇಲ್ಲಿಂದಲೇ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ಇದು ವರ್ಣ ತಾರತಮ್ಯದ ಮೂಲವೂ ಆಗಬಹುದು ಎಂಬ ವಾದವನ್ನು ಮುಂದಿಟ್ಟರು ಚಿರಾಯು.
ಭಾರತದಲ್ಲಿ ಇದು ಮೊದಲಾದರೂ.. ಅಮೆರಿಕಾದಲ್ಲಿ 1962ರಲ್ಲಿಯೇ ಈ ರೀತಿಯ ಘಟನೆ ಘಟಿಸಿತು. ಅಮೆರಿಕಾದ ಸಿವಿಲಿಯನ್ ರೈಟ್ಸ್ ನವರು ಅಲ್ಲಿನ 'ಕ್ರಯೋಲಾ' ಎನ್ನುವ ಕ್ರಯಾನ್ ಬ್ರ್ಯಾಂಡ್ ಒಂದಕ್ಕೆ 'ಫ್ಲೆಶ್' ಹಾಗೂ ಸ್ಕಿನ್ ಕಲರ್ ಎಂದಿರುವ ಬಣ್ಣಗಳ ಬದಲಾಗಿ 'ಪೀಚ್' ಎನ್ನುವ ಹೆಸರಿಡಲು ಸೂಚಿಸಿದ್ದರು. 1992ರಲ್ಲಿ ಅದೇ ಕಂಪನಿ ಗ್ರಾಹಕರ ಬೇಡಿಕೆಗೆ ಮಣಿದು ಚರ್ಮದ ಬಣ್ಣಕ್ಕೆ ಹೊಂದಾಣಿಕೆಯಾಗುವ 8 ವಿವಿಧ ಶೇಡ್ ನ ಕ್ರೆಯಾನ್ ಗಳನ್ನು ತಯಾರಿಸಿತು ಕೂಡಾ..
2015ರಲ್ಲಿ ಕರ್ನಾಟಕ ಸ್ಟೇಟ್ ಕನ್ಸ್ಯುಮರ್ ಕಮಿಷನ್ ನಿಂದ ಬಂದ ತೀರ್ಪಿನಲ್ಲಿ ಚಿರಾಯು ಗೆದ್ದಿದ್ದ. ತೀರ್ಪು ಬಂದ ತಕ್ಷಣವೇ ನವನೀತ್ ಎಜುಕೇಶನ್ ಲಿಮಿಟೆಡ್ ಎನ್ನುವ ಮತ್ತೊಂದು ಕ್ರಯಾನ್ಸ್ ಕಂಪೆನಿ ತನ್ನ ಕ್ರಯಾನುಗಳ ಮೇಲಿದ್ದ ಪೇಪರ್ ನಲ್ಲಿ ಸ್ಕಿನ್ ಕಲರ್ ಎನ್ನುವ ಬದಲಾಗಿ 'ಪೀಚ್' ಕಲರ್ ಎಂದು ಮುದ್ರಿಸಿತು. ಇದಾದ ನಂತರದಲ್ಲಿ ಫ್ಲಶ್ ಅಥವಾ ಸ್ಕಿನ್ ಕಲರ್ ಎಂದು ಮುದ್ರಣ ಮಾಡುತ್ತಿದ್ದ ಎಲ್ಲ ಕ್ರಯಾನ್ ಕಂಪನಿಗಳೂ ಈ ಬಣ್ಣವನ್ನು ಪೀಚ್ ಕಲರ್ ಎಂದೇ ಮುದ್ರಣ ಮಾಡಲು ಶುರುವಿಟ್ಟವು. ಒಂದು ಸಣ್ಣ ಆಲೋಚನೆ ಕೂಡಾ ಎಷ್ಟೆಲ್ಲಾ ಬದಲಾವಣೆಗಳನ್ನು ತರಬಲ್ಲದು ಎಂಬುದಕ್ಕೆ ಚಿರಾಯು ಜೈನ್ ಹಾಗೂ ಕೊಲೊರೊಮಾದ ಘಟನೆಯು ಸಾಕ್ಷಿಯಾಗುತ್ತದೆ.
ಇದರಿಂದ ಬ್ಯುಸಿನೆಸ್ ಗೆ ಯಾವ ರೀತಿಯ ತೊಂದರೆಯೂ ಆಗಲಿಲ್ಲವಾದರೂ.. ಡಿಸ್ಟಿಕ್ಟ್ ನಿಂದ ಸ್ಟೇಟ್ ಕನ್ಸ್ಯೂಮರ್ ಕಮಿಷನ್ ಗೆ ಕೇಸ್ ಅನ್ನು ಒಯ್ದಾಗ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಕೂಡ ಚಿರಾಯು ಕೇಳಿದ್ದರು. ಇಲ್ಲಿ ನಾನು ಬ್ಯುಸಿನೆಸ್ ನ ಲಾಭ ಹಾಗೂ ನಷ್ಟದ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಸಣ್ಣ-ಪುಟ್ಟ ಆಲೋಚನೆಗಳು ವಿಚಾರಗಳು ಹೇಗಿರಬೇಕು ಹಾಗೂ ಗ್ರಾಹಕರ ಸಣ್ಣ ಮೌಲ್ಯಯುತ ಬೇಡಿಕೆಗೆ ಸ್ಪಂದನೆ ಸಿಗದಾಗ ಆಗುವ ಬದಲಾವಣೆ ಎಂತಹಾ ಬದಲಾವಣೆಯನ್ನು ತರಬಲ್ಲದು ಎಂಬುದನ್ನು ಮಾತ್ರ ಹೇಳುತ್ತಿದ್ದೇನೆ.
ತಮ್ಮ ಎರಡು ಬ್ರ್ಯಾಂಡ್ ಗಳನ್ನು ಒಂದೇ ಕಂಪೆನಿಯದ್ದು ಎಂಬಂತೆ ಬಿಂಬಿಸದೇ 'ಡ್ಯುಯಲ್ ಬ್ರಾಂಡ್ ಸ್ಟ್ರ್ಯಾಟಜಿಯನ್ನು ಬಳಸಿದಾಗ, ಬ್ಯುಸಿನೆಸ್ ನಲ್ಲಿ ಗೆದ್ದ ನಟರಾಜ್ ಹಾಗೂ ಅಪ್ಸರಾ ಪೆನ್ಸಿಲ್ ಗಳು.. ಹಾಗೂ ಕೊಲೊರೊಮಾ ಮೂಲಕ ಬ್ಯುಸಿನೆಸ್ ನಲ್ಲಿ ಇರಬೇಕಾದ ಸಣ್ಣ-ಸಣ್ಣ ಎಚ್ಚರಿಕೆಗಳು ಇವುಗಳ ಮೂಲಕ ಬ್ಯುಸಿನೆಸ್ ನ ಪಾಠ ಹೇಳುತ್ತಿದೆ ಹಿಂದೂಸ್ತಾನ್ ಪೆನ್ಸಿಲ್ಸ್.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ