ಬುಧವಾರ, ಏಪ್ರಿಲ್ 22, 2026

ಹಮಾರಾ ಬಜಾಜ್ ನ ಹಿಟ್ ಮತ್ತು ಫ್ಲಾಪ್ ( ಬ್ಯುಸಿನೆಸ್ ಡೈರಿ ಪುಟ - 18)


ಬಿಸಿನೆಸ್ ನಲ್ಲಿ ಹಿಟ್ ಆಗಲಿ ಅಥವಾ ಫ್ಲಾಪ್ ಆಗಲಿ ಅದನ್ನು ಸಮಾನವಾಗಿ ತೆಗೆದುಕೊಂಡು ಮುಂದುವರೆಯಬೇಕು. ಇಲ್ಲವಾದರೆ ಕಷ್ಟವಾಗುತ್ತದೆ. ಹಿಟ್ ಆದರೆ ಅದನ್ನು ಮತ್ತಷ್ಟು ಇನ್ನೋವೇಟಿವ್ ಆಗಿ ಗ್ರಾಹಕರಿಗೆ ನೀಡುತ್ತಾ.. ಫ್ಲಾಪ್ ಆದಲ್ಲಿ ಎಲ್ಲಿ ಸೋತೆವು..?? ಎನ್ನುತ್ತಾ ಅದನ್ನು ಮನನ ಮಾಡಿಕೊಂಡು ಸರಿಪಡಿಸಿಕೊಳ್ಳುವುದು ಸಹಾ ಅಷ್ಟೇ ಮುಖ್ಯವಾಗುತ್ತದೆ. ಆದರೆ, ಅದಕ್ಕೆ ತೆಗೆದುಕೊಳ್ಳುವ ಸಮಯವೂ ಅಷ್ಟೇ ಮುಖ್ಯ. ಈ ಮಾತನ್ನು ನಾನು ಏಕೆ ಹೇಳುತ್ತಿದ್ದೇನೆ ಎಂದರೆ ಹಿಟ್ ಹಾಗೂ ಫ್ಲಾಫ್ ಗಳ ನಡುವೆ ಪಯಣ ಮಾಡಿದ್ದು ಬಜಾಜ್.


ಬಜಾಜ್ ಎಂದರೆ ಮೊದಲಿಗೆ ನೆನಪಾಗುವುದು ಸ್ಕೂಟರ್ ಹಾಗೂ ಆಟೋಗಳು. ಬಜಾಜ್ ಆಟೋಗಳು ಇಂದಿಗೂ ವ್ಯಾಪಕವಾಗಿದ್ದರೂ.. ಸ್ಕೂಟರ್ ಗಳು ಎಲ್ಲಿಯೋ ಕಾಣೆಯಾಗಿಬಿಟ್ಟಿವೆ. ಅಲ್ಲವಾ..?? ಸ್ಕೂಟರ್ ಗಳ ಬದಲಿಗೆ ಸ್ಕೂಟಿಗಳು ಅವುಗಳ ಜಾಗವನ್ನು ಆಕ್ರಮಿಸಿವೆ. ಈಗ ಕಾಣೆಯಾಗಿರುವ.. ಆದರೆ, ಆರಂಭದ ಕಾಲದಲ್ಲಿ ಈ ಸ್ಕೂಟರ್ ಗಳನ್ನೇ ಮಾರ್ಕೆಟ್ ಮಾಡಿಕೊಂಡು.. ದ್ವಿಚಕ್ರವಾಹನಗಳ ರಾಜನಂತಿತ್ತು ಬಜಾಜ್. ವಿಶ್ವದಲ್ಲೇ ಹೆಚ್ಚು ಮೋಟಾರ್ ಸೈಕಲ್ ತಯಾರಿಸುವ ಮೂರನೇ ಹಾಗೂ ಭಾರತದಲ್ಲಿ ಎರಡನೇ ಪ್ರಸಿದ್ಧ ತಯಾರಿಕಾ ಸಂಸ್ಥೆ ಇದಾಗಿತ್ತು. ಕುಟುಂಬದಲ್ಲಿ ನಮ್ಮವರ ಸೋಲು-ಗೆಲುವುಗಳನ್ನು ನಾವು ಹೇಗೆ ಒಪ್ಪಿ-ಅಪ್ಪಿ ನಡೆಯುತ್ತವೆಯೋ ಹಾಗೆಯೇ ಈ ಬಜಾಜ್ ಅನ್ನು ಕೂಡ ಮಧ್ಯಮ ವರ್ಗದವರು ಒಪ್ಪಿ ನಡೆದ ಹಾಗೂ ಅದನ್ನು ನಡೆಸಿದ ವಿಚಾರವಿದೆ ಇಲ್ಲಿ. ಹಾಗಾಗಿ ಇದು ಎಂದಿಗೂ "ಹಮಾರಾ ಬಜಾಜ್" ಎಂದರೆ "ನಮ್ಮ ಬಜಾಜ್".


'ಬಜಾಜ್' ಮೂಲತಃ ಪಂಜಾಬಿ ಪದ. ಪಂಜಾಬಿನ 'ಬಜಾಜಿ' ಎನ್ನುವ ಪದದಿಂದ ಬಂದಿದೆ. ಇದರರ್ಥ 'ಬಟ್ಟೆ' ಎಂಬುದಾಗಿ. ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ಒಂದು ಪಂಗಡದವರಿಂದ ಇದಕ್ಕೆ ಈ ಹೆಸರು ಅನ್ವರ್ಥನಾಮದಂತಾಯಿತು. ಸಿಂಧ್ ಪ್ರಾಂತ್ಯದ ಮಾರ್ವಾಡಿಗಳು, ಪಂಜಾಬಿಗಳು, ಸಿಂಧಿಗಳಲ್ಲಿ ಹೆಚ್ಚಿನವರ ಸರ್ ನೇಮ್ 'ಬಜಾಜ್' ಎಂಬುದನ್ನು ಗಮನಿಸಬಹುದು. 


ಈಗ ಬಜಾಜ್ ಸಂಸ್ಥೆಯನ್ನು ಮುನ್ನಡೆಸುತ್ತಿರುವವರು ರಾಜೀವ್ ಬಜಾಜ್. ಆದರೆ, ಇದರ ಹರಿಕಾರ ಜಮನ್ ಲಾಲ್ ಬಜಾಜ್. ಇವರು ರಾಜಸ್ಥಾನದ ಒಂದು ಪುಟ್ಟ ಮಾರ್ವಾಡಿ ಬಡ ಕುಟುಂಬದಲ್ಲಿ ಜನಿಸಿದವರು. ಆದರೆ, ಜಮನ್ ಲಾಲ್ ಬೆಳೆದದ್ದು ಸೇಟ್ ಬಚ್ರಾಜ್ ಅವರ ಕುಟುಂಬದಲ್ಲಿ. ಅವರು ಜಮನ್ ಲಾಲ್ ತಂದೆಯ ದೂರದ ಸಂಬಂಧಿಕರಾಗಿದ್ದವರು. ತಮ್ಮ ಸ್ವಂತ ಮಗನಂತೆಯೇ ಜಮನ್ ಲಾಲ್ ರನ್ನು ಪೋಷಿಸಿದರು. ಜಮನ್ ಲಾಲ್ ಆಗಲೇ ಅವರ ಕುಟುಂಬದ ಬ್ಯುಸಿನೆಸ್ ಗಳಲ್ಲಿ ಪಾಲ್ಗೊಳ್ಳುತ್ತಾ ತನ್ನನ್ನು ತಾನು ಬ್ಯುಸಿನೆಸ್ ಮನ್ ಆಗಿ ರೂಪಿಸಿಕೊಂಡದ್ದು. ಬುಕ್ ಕೀಪರ್ ನಿಂದ ಟ್ರೇಡ್ಸ್ ವರೆಗೂ ಕೆಲಸ ಮಾಡಿದ ಜಮನ್ ಲಾಲ್ ಬಾಲ್ಯ ಬಚ್ರಾಜ್ ಅವರ ಪ್ರಭಾವದಿಂದಾಗಿತ್ತು. ನಂತರ, ಅವರು ತಮ್ಮದೇ ಸ್ವಂತ ಟ್ರೇಡಿಂಗ್ ಕಂಪನಿಯೊಂದನ್ನು ಸ್ಥಾಪಿಸಿದರು. ಅದೇ "ಬಚ್ರಾಜ್ ಟ್ರೇಡಿಂಗ್ ಕಂಪನಿ". ಅದೇ ಮುಂದೆ "ಬಜಾಜ್ ಗ್ರೂಪ್" ಎಂದು ಹೆಸರು ಬದಲಿಸಿಕೊಂಡದ್ದು. ಜಮನ್ ಲಾಲ್ ಸ್ವಾತಂತ್ರ್ಯ ಹೋರಾಟಗಾರರು ಸಹಾ ಆಗಿದ್ದು ಗಾಂಧೀಜಿಯವರ ಅನುಯಾಯಿ ಹಾಗೂ ಆಪ್ತರೂ ಆಗಿದ್ದರು. ಗಾಂಧಿ ತತ್ವಗಳನ್ನು ರೂಢಿಸಿಕೊಂಡು, ಗಾಂಧೀಜಿಯವರ ಜೊತೆ ಆಶ್ರಮದಲ್ಲೇ ಉಳಿಯುತ್ತಾ ತಮ್ಮ ಕೊನೆಯ ದಿನಗಳನ್ನು ಕಳೆದರು. 


ಜಮನ್ ಲಾಲ್ ಕಟ್ಟಿ ಬೆಳೆಸಿದ್ದ ಸಾಮ್ರಾಜ್ಯವನ್ನು 1942ರ ಅವರ ಮರಣಾನಂತರ ಕೈಗೆತ್ತಿಕೊಂಡದ್ದು ಅವರ ಹಿರಿಯ ಮಗ ಕಮಲ್ ನಯನ್ ಬಜಾಜ್. ಕೇವಲ ದ್ವಿಚಕ್ರ-ತ್ರಿಚಕ್ರ ವಾಹನಗಳ ಟ್ರೇಡಿಂಗ್ ಕಂಪನಿ ಆಗಿದ್ದ ಅದನ್ನು ಸಿಮೆಂಟ್, ಎಲೆಕ್ಟ್ರಿಕ್ ಅಪ್ಲೈಯನ್ಸಸ್, ಸ್ಕೂಟರ್ ತಯಾರಿಕಾ ಸಂಸ್ಥೆಯನ್ನಾಗಿ ಕಟ್ಟಿ ಬೆಳೆಸಿದರು. ಜೊತೆಗೆ, ಸ್ಟೀಲ್ ಮತ್ತು ಹತ್ತಿಯ ಫ್ಯಾಕ್ಟರಿಗಳನ್ನೂ ಶುರು ಮಾಡಿದರು. ಇದಿಷ್ಟೂ ವಿಸ್ತರಣೆಯಾಗಿದ್ದು ಕಮಲ್ ಬ್ಯುಸಿನೆಸ್ ಅನ್ನು ಕೈಗೆತ್ತಿಕೊಂಡ ಕೇವಲ ಮೂರು ವರ್ಷಗಳಲ್ಲಿ. ಆಗಲೇ ಬಜಾಜ್ ಆಟೋ ಸಹಾ ಶುರುವಾಗಿದ್ದು. ವಾಹನಗಳ ತಯಾರಿಕೆಗಾಗಿ ಇಟಾಲಿಯನ್ ದ್ವಿಚಕ್ರ ಕಂಪನಿಯಾಗಿದ್ದ ಪಿಯಾಗ್ಗಿಯೋ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಬಜಾಜ್.. ಸ್ಕೂಟರ್ ತಯಾರಿಕೆಯನ್ನು ಶುರು ಮಾಡಿತ್ತು. 1972ರವರೆಗೂ ಕಮಲ್ ಬಜಾಜ್ ನಲ್ಲಿ ಎಂ.ಡಿ ಆಗಿದ್ದರು. 


ಬಜಾಜ್ ಗ್ರೂಪ್ ನ ಪ್ರಮುಖರಾದವರ ಪಟ್ಟಿಯಲ್ಲಿ ಮೊದಲ ಹೆಸರು ಕಾಣುವುದು ರಾಹುಲ್ ಬಜಾಜ್ ಅವರದ್ದು. (2022 ರಲ್ಲಿ ಮರಣ ಹೊಂದಿದರು). ಅವರು ಕಮಲ್ ಅವರ ಹಿರಿಯ ಮಗ. 1938 ಜೂನ್ 10ರಂದು ಕೊಲ್ಕತ್ತಾದಲ್ಲಿ ಜನಿಸಿದ ಇವರು, ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ್ದು ದೆಹಲಿಯ ಸ್ಟೀಫನ್ಸ್ ಕಾಲೇಜಿನಲ್ಲಿ. ನಂತರ ಅವರು ಕಾನೂನು ಪದವಿಯನ್ನು ಅಭ್ಯಾಸ ಮಾಡುತ್ತೇನೆ ಎನ್ನುತ್ತಾ ಮುಂಬೈಯ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಆದರೆ, ಅಷ್ಟರಲ್ಲಾಗಲೇ ಬ್ಯುಸಿನೆಸ್ ಸಾಮ್ರಾಜ್ಯ ಅವರನ್ನು ಸೆಳೆದಿತ್ತು. ಹಾಗಾಗಿ, ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಎಂ.ಬಿ.ಎ ಪದವಿ ಪಡೆದರು. 


ಅಲ್ಲಿ ಎಂ.ಬಿ.ಎ ಪದವಿ ಪಡೆದು ಅವರು ನೇರ ಬಂದದ್ದು ಬಜಾಜ್ ಕಂಪನಿಗೆ. ಆಗಿನ ಬಜಾಜ್ ಆಟೋ ದ ಸಿ.ಈ.ಓ ಆಗಿದ್ದ ನಾವೆಲ್ ಕೆ. ಫಿರೋಡಿಯ ಅವರ ಕೈ ಕೆಳಗೆ ಕೆಲಸ ಮಾಡುತ್ತಾ.. ಮಾರ್ಕೆಟಿಂಗ್ ಅಕೌಂಟ್ಸ್, ಆಡಿಟ್ ಹೀಗೆ ಎಲ್ಲಾ ವಿಭಾಗದಲ್ಲಿಯೂ ತಮ್ಮ ಅನುಭವವನ್ನು ವಿಸ್ತರಿಸಿಕೊಂಡರು. ಬರುಬರುತ್ತಾ.. ಫಿರೋಡಿಯ ಹಾಗೂ ರಾಹುಲ್ ನಿರ್ಣಯಗಳಲ್ಲಿ ವಿರೋಧಾಭಾಸಗಳು ಉಂಟಾದವು. 1968ರಿಂದ ಬಜಾಜ್ ಆಟೋದ ಸಿ.ಇ.ಒ ಆದರು ರಾಹುಲ್ ಬಜಾಜ್. 


ತಮ್ಮ ಮಾತು ಹಾಗೂ ನಡೆಗಳಿಂದ ರಾಹುಲ್ ಬಜಾಜ್ ಎಂದರೆ ಭಯವಿಲ್ಲದ ಬ್ಯುಸಿನೆಸ್ ಮನ್ ಎಂದೇ ಖ್ಯಾತಿಯಾಗಿದ್ದವರು. ಇದಕ್ಕೆ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಅದೆಂದರೆ.. 1970ರ ಸಂದರ್ಭದಲ್ಲಿ ಇಂಡಸ್ಟ್ರಿಗಳಿಗೆ ಒಂದು ನಿಯಮವಿತ್ತು. ಒಂದು ಕಂಪನಿಯ ತಯಾರಿಕಾ ಘಟಕದಿಂದ ಒಂದು ವರ್ಷಕ್ಕೆ ಗರಿಷ್ಠ 20,000 ವಾಹನಗಳನ್ನಷ್ಟೇ ಬಿಡುಗಡೆ ಮಾಡಬೇಕಿತ್ತು. ಆದರೆ, ಗ್ರಾಹಕರಿಂದ ಬರುತ್ತಿದ್ದ ಬೇಡಿಕೆಗಳು ಬಹಳಷ್ಟು ಹೆಚ್ಚಿದ್ದವು. ಒಂದು ಬೈಕ್ ತಮ್ಮ ಕೈ ಸೇರಬೇಕೆಂದಿದ್ದರೆ.. ಆ ಗ್ರಾಹಕರು ಒಂದು ವರ್ಷದ ಮೊದಲೇ ಅದಕ್ಕಾಗಿ ಆರ್ಡರ್ ನೀಡಿರಬೇಕಿತ್ತು. ರಾಹುಲ್ ಈ ಯಾವ ನಿಯಮಗಳಿಗೂ ಒಳಪಡದೆ.. ಗ್ರಾಹಕರ ಬೇಡಿಕೆಗೆ ತಕ್ಕಂತೆ.. 20,000 ಕ್ಕೂ ಹೆಚ್ಚಿನ ವಾಹನಗಳನ್ನು ತಯಾರಿಸಿ ಪೂರೈಸುತ್ತಿದ್ದರು. ಡಿಮ್ಯಾಂಡ್ ಗೆ ತಕ್ಕ ಸಪ್ಲೈ ನೀಡುವಲ್ಲಿ ಅವರು ಸರ್ಕಾರದ ನಿಯಮವನ್ನು ಮುರಿದಿದ್ದರೂ.. ಅದಕ್ಕೆ ತಕರಾರುಗಳನ್ನು ಎದುರಿಸಿ.. ತಕ್ಕ ಉತ್ತರ ನೀಡಲು ಸಹಾ ಸಿದ್ಧರಿದ್ದರು. ಆದರೆ, ಮುಂದಿನ ದಿನಗಳಲ್ಲಿ ಆ ನಿಯಮವನ್ನು ಮಾರ್ಪಡಿಸಲಾಯಿತು. 


1972ರ ತಮ್ಮ ತಂದೆಯ ಮರಣದ ನಂತರ ಬಜಾಜ್ ಆಟೋದ ಎಂ.ಡಿ ಆದರು ರಾಹುಲ್. ಮಧ್ಯಮ ವರ್ಗದವರಿಗೆ ಕಾರು ದುಬಾರಿಯಾಗಿತ್ತು. ಹಾಗಾಗಿ, ಅವರಿಗೆಂದೇ ಸ್ಕೂಟರ್ ತಯಾರಿಸುವ ಯೋಜನೆ ಹಾಕಿಕೊಂಡು ಅದಕ್ಕೆ ಮೊದಲಿಟ್ಟರು. ಆಗ ಬಂದ ಮೊದಲ ಸವಾಲನ್ನು ಅವರು ಎದುರಿಸಲೇಬೇಕಿತ್ತು, ಅದೇನೆಂದರೆ ಅದುವರೆಗೂ ತಮ್ಮ ಕಂಪನಿಯ ಜೊತೆಗೆ ಕೈಜೋಡಿಸಿದ್ದ ಪಿಯಾಗ್ಗಿಯೋ ತನ್ನ ಹಾಗೂ ಬಜಾಜ್ ನಡುವಿನ ಲೈಸೆನ್ಸ್ ಅನ್ನು ರಿನ್ಯೂವಲ್ ಮಾಡಲು ನಿರಾಕರಿಸಿತ್ತು. ಈಗ ರಾಹುಲ್ ಬಜಾಜ್ ತಯಾರಿಕೆ ನಿಲ್ಲಿಸಬೇಕಿತ್ತು ಇಲ್ಲವೇ ಬೇರೆಯದ್ದೇ ದಾರಿ ಹುಡುಕಿಕೊಬೇಕಾಗಿತ್ತು. ಬ್ಯುಸಿನೆಸ್ ನಲ್ಲಿ ಇಂತಹಾ ಸವಾಲುಗಳಿಗೆ ಎದೆಗುಂದುತ್ತಾ ಹೋದರೆ ಮುಂದೆ ಹೆಜ್ಜೆ ಇಡುವುದೇ ಅಸಾಧ್ಯ. ಹಾಗಾಗಿ, ರಾಹುಲ್ ತನ್ನದೇ ಒಂದು ಸ್ವಂತ ನಿರ್ಧಾರಕ್ಕೆ ಬಂದು ಪಿಯಾಗ್ಗಿಯೋದವರ ಸಹಕಾರವಿಲ್ಲದೆ.. ತಾನೇ ತನ್ನ ಸ್ವಂತ ಸ್ಕೂಟರ್ ಮಾಡೆಲ್ ತಯಾರಿಸುತ್ತೇನೆ ಎಂಬ ಹಠಕ್ಕೆ ಬಿದ್ದು ತಯಾರಿಸಿದ ಸ್ಕೂಟರ್ ಅವರಿಗೆ ಬಹಳ ಯಶಸ್ಸು ಹಾಗೂ ಹೆಸರನ್ನು ತಂದುಕೊಟ್ಟಿತು. ಅದರ ಹೆಸರೇ 'ಚೇತಕ್'.


ಹೀಗೆ ಬಜಾಜ್ ಚೇತಕ್ ಶುರುವಾಗಿದ್ದು 1972 ರಿಂದ. ಆಗ ವೆಸ್ಪ ಎಂಬ ಕಂಪನಿಯ ಜೊತೆ ಟೆಕ್ನಿಕಲ್ ಒಪ್ಪಂದವನ್ನು ಮಾಡಿಕೊಂಡ ಬಜಾಜ್ ಚೇತಕ್ ಜೊತೆಗೆ ಸೂಪರ್ ಹಾಗೂ ಪ್ರಿಯ ಎನ್ನುವ ಬೈಕುಗಳನ್ನೂ ಬಿಡುಗಡೆ ಮಾಡಿತು. ಮಧ್ಯಮ ವರ್ಗದವರ ಕೈಗೆಟುಕುವ ವಾಹನವೊಂದು ಸಿದ್ಧವಾಗಿತ್ತು. ಗಂಡ-ಹೆಂಡತಿ ನಡುವೆ ಕುಳಿತ ಒಂದು ಮಗು ಹಾಗೂ ಮುಂದೆ ನಿಂತುಕೊಂಡ ಒಂದು ಮಗುವನ್ನು ಒಳಗೊಂಡ ಜಾಹೀರಾತು "ಹಮಾರಾ ಬಜಾಜ್" ಎನ್ನುತ್ತಾ ಬಜಾಜ್ ಚೇತಕ್ ಅನ್ನು ಎಲ್ಲರಿಗೂ ಹತ್ತಿರವಾಗಿಸಿತು. 


1990 ರ ನಂತರದ ದಿನಗಳಲ್ಲಿ ಸ್ಕೂಟರುಗಳು ನಿಧಾನವೆಂದು ಆಗಲೇ ತಮ್ಮ ಛಾಪನ್ನು ಕಳೆದುಕೊಂಡು ಅದಕ್ಕಿಂತ ವೇಗವಾಗಿದ್ದ ಬೈಕ್ ಗಳತ್ತ ಮುಖ ಮಾಡಿದ್ದರು. 2005ರ ಹೊತ್ತಿಗೆ ಚೇತಕ್ ಅದಾಗಲೇ ತನ್ನ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿತ್ತು. ಅದನ್ನು ಮುಂದುವರಿಸುವುದು ಬೇಡ ಎಂದು ರಾಹುಲ್ ಬಜಾಜ್ ಹಾಗೂ ಅವರ ಮಗ ರಾಜೀವ್ ಬಜಾಜ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ, 2006ರಲ್ಲಿ ಬಜಾಜ್ ಚೇತಕ್ ಅನ್ನು ಸ್ಥಗಿತಗೊಳಿಸಿ ಹೊಸದಾದ 'ಕ್ರಿಸ್ಟಲ್' ಎನ್ನುವ ಸ್ಕೂಟರ್ ಅನ್ನು ಬಿಡುಗಡೆ ಮಾಡಿತು. ಆದರೆ, ಅದು ಸಹ ಹಿಟ್ ಆಗದೇ ಫ್ಲಾಪ್ ಆದ ಬಳಿಕ.. 2009ರಲ್ಲಿ ತನ್ನ ಸ್ಕೂಟರ್ ಸೆಗ್ಮೆಂಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು ಬಜಾಜ್. 


ಹೀಗೆ 35 ವರ್ಷಗಳ ಏಕ ಚಕ್ರಾಧಿಪತ್ಯದಂತಿದ್ದ ಬಜಾಜ್ ಗೆ ಮತ್ತಷ್ಟು ಹೊಡೆತ ಬಿದ್ದಿದ್ದು ರಾಜೀವ್ ಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಿ.ಆಗ ಆದ ರಫ್ತು ಮತ್ತು ಆಮದು ತಿದ್ದುಪಡಿಯಿಂದ. ಅದುವರೆಗೂ ವಿದೇಶಿ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ತಮ್ಮ ಅಧಿಪತ್ಯ ಸ್ಥಾಪಿಸಿರಲಿಲ್ಲ. ಆದರೆ, ಈಗ ವಿದೇಶಿ ಕಂಪನಿಗಳು ಹಾಗೂ ಭಾರತೀಯ ಕಂಪನಿಗಳ ನೇರ-ನೇರ ಹಣಾಹಣಿ ಶುರುವಾಯಿತು.


ಸ್ಕೂಟರ್ ಜೊತೆ ಜೊತೆಗೆ ಬಜಾಜ್ ಬೈಕುಗಳನ್ನು ಸಹಾ ತಯಾರಿಸುತ್ತಿದ್ದಾದರೂ.. 2001ರ ಸಮಯದಲ್ಲಿ ಅದಕ್ಕೆ ಬಹು ದೊಡ್ಡ ಪ್ರತಿಸ್ಪರ್ಧಿಯಾಗಿ ನಿಂತದ್ದು ಹೋಂಡಾ. ಭಾರತದ ಹೀರೋ ಕಂಪನಿಯ ಜೊತೆಗೆ ಹೋಂಡಾ ಬೈಕುಗಳನ್ನು ತಯಾರಿಸಲು ಹಾಗೂ ಕೈನೆಟಿಕ್ ಕಂಪನಿಯ ಜೊತೆಗೆ ಸ್ಕೂಟಿಗಳನ್ನು ತಯಾರಿಸಲು ಶುರುವಿಟ್ಟಿತು. ಅದೇ ಸಮಯದಲ್ಲಿ ಮಾರುಕಟ್ಟೆಗೆ ಆಗ ಕಾಲಿಡುತ್ತಿದ್ದ ವಿದೇಶಿ ಕಂಪೆನಿಗಳು ಯಮಹಾ, ಸುಜುಕಿ ಇವೆಲ್ಲವೂ ಬಜಾಜ್ ನ ಮಾರುಕಟ್ಟೆಗೆ ಬಹುದೊಡ್ಡ ಹೊಡೆತಗಳನ್ನೇ ಕೊಟ್ಟವು. 


ಇವೆಲ್ಲದರ ಪ್ರತಿಸ್ಪರ್ಧಿಯಾಗಿ ತಯಾರಾದ ಬೈಕ್ ಇಂದಿಗೂ ಭಾರತದ ಪ್ರಸಿದ್ಧ ಬೈಕ್ಗಳಲ್ಲಿ ಒಂದಾಗಿದೆ. ಇದೇ.. ಆಗಿನ ಕಾಲದ ಟ್ರೆಂಡ್ ಸೆಟ್ಟರ್ ಹಾಗೂ ಹೊಸ ಮಿಲೆನಿಯಂ ಸೀರೀಸ್ ಎಂದೇ ಶುರುವಾದ ಪಲ್ಸರ್. ನಂತರದ ವರ್ಷಗಳಲ್ಲಿ ಮತ್ತೆ ಹೊಸದಾದ ತಾಂತ್ರಿಕತೆ ಅಥವಾ ಡಿಸೈನ್ ಅನ್ನು ಮತ್ತೆ ಮತ್ತೆ ಮಾಡಿಫೈ ಮಾಡಿ ಪಲ್ಸರ್ ಅನ್ನು ಹೊಸ ರೀತಿಯಲ್ಲಿ ಹೊರ ಬಿಡಲಾಗುತ್ತಿದೆ. 


ಭಾರತವನ್ನು ಹೊರತುಪಡಿಸಿ ಬಜಾಜ್ ಸುಮಾರು 79 ದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ. ಅಲ್ಲಿಯೂ ಪ್ರತಿಸ್ಪರ್ಧಿಗಳಿದ್ದರು. ಚೀನಾದ ಬೈಕುಗಳ ದರ ಕಮ್ಮಿ ಇರುತ್ತಿದ್ದರಿಂದ ಹೆಚ್ಚಿನವರು ಅದಕ್ಕೆ ಆಕರ್ಷಿತರಾಗುತ್ತಿದ್ದರು. ಆಗ, ಬಜಾಜ್ ಬಿಡುಗಡೆ ಮಾಡಿದ್ದು 'ಬಾಕ್ಸರ್' ಎನ್ನುವ ಬೈಕ್ ಅನ್ನು. ಇದರಲ್ಲಿ ಚೈನೀಸ್ ಬೈಕುಗಳಿಗಿಂತ ಹೆಚ್ಚು ಇಂಧನ ಉಳಿತಾಯವಾಗುತ್ತಿತ್ತು. ಬೆಲೆಯಲ್ಲಿ ಅದಕ್ಕಿಂತ ಕೊಂಚ ಮಾತ್ರ ಜಾಸ್ತಿ. ಇದರಿಂದಾಗಿ ಗ್ರಾಹಕರು ಬಜಾಜ್ ಕಡೆಗೆ ಹೆಚ್ಚು ಆಕರ್ಷಿತರಾದರು. ಕೇವಲ ನೈಜೀರಿಯಾ ಮಾತ್ರವಲ್ಲದೆ.. ಶ್ರೀಲಂಕಾ, ಬಾಂಗ್ಲಾ,ಕೊಲಂಬಿಯಾ, ಫಿಲಿಫೈನ್ಸ್ ಮುಂತಾದ ದೇಶಗಳಲ್ಲಿ ಇದೇ ತಂತ್ರ ಮುಂದುವರೆಯಿತು. 


ರಾಹುಲ್ ಬಜಾಜ್ ಕೇವಲ ಬಜಾಜ್ ಕಂಪನಿಯನ್ನು ಮಾತ್ರ ಮುನ್ನಡೆಸಿದ್ದಲ್ಲದೆ.. ಇಂಡಿಯನ್ ಏರ್ಲೈನ್ಸ್ ನ ಚೇರ್ಮನ್ ಆಗಿದ್ದರು. 2001ರಲ್ಲಿ ಪದ್ಮಭೂಷಣವನ್ನು ಪಡೆದಿದ್ದರು. ಮಹಾರಾಷ್ಟ್ರದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. 


ಬ್ಯುಸಿನೆಸ್ ಮಾತ್ರವಲ್ಲದೆ.. ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಶಾಲೆಗಳು, ಬಾಲವಾಡಿಗಳು, ಟೆಕ್ನಿಕಲ್ ಟ್ರೈನಿಂಗ್ ಸೆಂಟರ್, ಐ.ಟಿ.ಐ ಗಳನ್ನು ದತ್ತು ತೆಗೆದುಕೊಂಡು ಅವುಗಳ ಹೊಣೆ ಹೊರುತ್ತಿದ್ದರು. ಹೋಂ ಅಪ್ಲೈಯನ್ಸಸ್, ಇನ್ಸೂರೆನ್ಸ್, ಕ್ರೀಡೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಜಾಜ್ ಕಂಪನಿಯನ್ನು ವಿಸ್ತರಿಸಿತ್ತು. ರಾಹುಲ್ ತಮ್ಮ ಚೇರ್ಮನ್ ಸ್ಥಾನಕ್ಕೆ 2008ರಲ್ಲಿ ರಾಜೀನಾಮೆ ನೀಡಿದ್ದರು. ಅದಾದ ನಂತರ ಚೇರ್ಮನ್ ಸ್ಥಾನಕ್ಕೆ ಬಂದಿದ್ದು ಅವರ ಹಿರಿಯ ಮಗ ರಾಜೀವ್ ಬಜಾಜ್. 


ಈಗ ಬಜಾಜ್ 3 ವಿಭಾಗಗಳಾಗಿ ಕಾರ್ಯನಿರ್ವಹಿಸುತ್ತಿದೆ. ಬಜಾಜ್ ಆಟೋ ಎನ್ನುವ ಬ್ರಾಂಚ್ ಮೂಲಕ ವಾಹನ ಮಹಿವಾಟು, ಬಜಾಜ್ ಫಿನ್ಸರ್ ಎನ್ನುವ ಹೆಸರಿನಲ್ಲಿ ಫೈನಾನ್ಸ್ ವಿಭಾಗ ಹಾಗೂ ಮತ್ತೊಂದು ಹೋಲ್ಡಿಂಗ್ ಕಂಪನಿಯನ್ನು ಹೊಂದಿದೆ.


ಹೊಸದೊಂದು ಆಟೋ ರೀತಿಯ ಕಾರ್ ಮಾದರಿಯ ಹೊಸ ವಾಹನವೊಂದನ್ನು ರಾಜೀವ್ ಬಿಡುಗಡೆ ಮಾಡಿದ್ದಾರೆ. ಇದೀಗ ಎಲೆಕ್ಟ್ರಿಕ್ ವೆಹಿಕಲ್ ಗಳ ಕಾಲ. ಮುಂದೆ ಬಜಾಜ್ ಫ್ಲಾಪ್ ಆಗುತ್ತದೆಯೋ ಅಥವಾ ಹಿಟ್ ಆಗುತ್ತದೆಯೋ ಕಾದು ನೋಡಬೇಕಿದೆ. 


ಮೈಕೆಲ್ ಪೋರ್ಟರ್ ಹೇಳುತ್ತಾರೆ.. "ಬ್ಯುಸಿನೆಸ್ ನ ಮುಖ್ಯ ಸ್ಟ್ರಾಟೆಜಿ ಅಡಗಿರುವುದು ಯಾವುದನ್ನು ನಾವು ಮಾಡಬಾರದು ಎನ್ನುವುದರಲ್ಲಿ" ಎಂದು. 


2005ರ ರಲ್ಲಿ ಬಜಾಜ್ ಕಂಪನಿಯವರು ಚೇತಕ್ ತಯಾರಿಕೆಯನ್ನು ಕೈ ಬಿಟ್ಟದ್ದು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ಏಕೆಂದರೆ, 35ಕ್ಕೂ ಹೆಚ್ಚು ವರ್ಷಗಳ ಕಾಲ ಏಕಚಕ್ರಾಧಿಪತ್ಯ ಹೊಂದಿದ್ದ ಕಂಪನಿಗೆ 80% ಲಾಭ ಮಾಡಿಕೊಡುತ್ತಿದ್ದ ಚೇತಕ್ ಅನ್ನು ತಯಾರಿಸುವುದನ್ನು ನಿಲ್ಲಿಸುವುದಂತೂ ಸುಲಭದ ಮಾತಾಗಿರಲಿಲ್ಲ. ಯಾವಾಗಲೂ ಬ್ಯುಸಿನೆಸ್ ನಲ್ಲಿ ಭಾವನೆಗಳಿಗಿಂತ.. ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ನಿರ್ಧಾರಕ್ಕೆ ಕಾರಣರಾಗಿದ್ದು ರಾಹುಲ್ ಬಜಾಜ್ ಅಥವಾ ರಾಜೀವ್ ಬಜಾಜ್ ಇಬ್ಬರಲ್ಲಿ ಒಬ್ಬರು ಎನ್ನುವುದು ಹೌದಾದರೂ... ಈ ನಿರ್ಧಾರವನ್ನು ತೆಗೆದುಕೊಂಡವರು ಯಾರು ಎಂಬುದರಲ್ಲಿ ಇಂದಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಅದೇನೇ ಇರಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು.. ಬ್ಯುಸಿನೆಸ್ ನಲ್ಲಿ ಯಾವ ನಿರ್ಧಾರಕ್ಕೆ ಮಾನ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸುವಲ್ಲಿಯೂ ಬ್ಯುಸಿನೆಸ್ ನ ತಂತ್ರಗಾರಿಕೆ ಅಡಗಿದೆ. 


ಆಟೋ ಕಂಪನಿಯಿಂದ.. ಸ್ಕೂಟರ್ ಕಡೆಗೆ ನಂತರ ಫೈನಾನ್ಸ್ ಗ್ರೂಪ್ ಆಗಿ ಮಾರ್ಪಾಡಾಗುವುದರಲ್ಲಿ ಇರುವ ಶ್ರಮವೇನೂ ಕಡಿಮೆಯದಲ್ಲ. ಆದರೆ, ಕಾಲ-ಕಾಲಕ್ಕೆ ತಕ್ಕ ಇನ್ನೋವೇಟಿವ್ ಐಡಿಯಾಗಳನ್ನು ಮಾಡುತ್ತಾ.. ಮುಂದೆ ಸಾಗುವುದು ಬ್ಯುಸಿನೆಸ್ ಗೆ ಬೇಕಾದ ಚಾಕಚಕ್ಯತೆ. ಟೈಮಿಂಗ್ ನಲ್ಲಿ ಬಜಾಜ್ ಕೊಂಚ ಹಿಂದೆ ಉಳಿಯಿತೇನೋ.. ಎಂಬುದು ನನ್ನ ಅಭಿಪ್ರಾಯ. ಏಕೆಂದರೆ, ಇವರು ಸ್ಕೂಟರ್ ನಿಂದ ಬೈಕ್ ಗೆ ಹಾಗೂ ಬೈಕ್ ನಿಂದ ಸ್ಕೂಟಿಗೆ ಅಪ್ಡೇಟ್ ಆಗುವ ಸಮಯದಲ್ಲಿ ಬಹಳ ವ್ಯತ್ಯಾಸವಿದೆ.


ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಬ್ಯುಸಿನೆಸ್ ನಲ್ಲಿ ಅದರ ಮೇಲಿನ ಸ್ಥಾನದಲ್ಲಿ ಅದರಲ್ಲಿಯೂ ಚೇರ್ಮನ್ ಹಾಗೂ ಎಂ.ಡಿ ಯಾರಾಗಿರುತ್ತಾರೆ ಹಾಗೂ ಅವರ ಯೋಚನಾ ಶಕ್ತಿ ಹೇಗಿರುತ್ತದೆ ಎಂಬುದು ಕೂಡ ಬ್ಯುಸಿನೆಸ್ ನಲ್ಲಿ ಅಷ್ಟೇ ಮುಖ್ಯವಾಗುತ್ತದೆ. ಬಜಾಜ್ ನ 4 ತಲೆಮಾರುಗಳಲ್ಲಿ ನಾವು ಈ ಬದಲಾವಣೆಗಳನ್ನು ಕಾಣಬಹುದು. ಆದರೆ, ಒಬ್ಬರ ಕಾಲಘಟ್ಟಕ್ಕೆ ಮತ್ತೊಬ್ಬರನ್ನು ಹೋಲಿಸಲಾಗದಿದ್ದರೂ.. ಯೋಚನಾಲಹರಿಗಳಲ್ಲಿ ಅದೆಷ್ಟು ವಿಭಿನ್ನತೆಯಿದೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು. 


ಯಾವ ಸವಾಲುಗಳಿಗೂ ಎದೆಗುಂದದೆ.. ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಬಾಗಿಲು ತೆರೆದಿರುತ್ತದೆ ಎನ್ನುತ್ತಾ ಇನ್ನೋವೇಟಿವ್ ಆಗಿ ತಮ್ಮದೇ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುವುದು, ಭಾವನಾತ್ಮಕ ಸಂಘರ್ಷಗಳಿಗಿಂತ ವಾಸ್ತವಕ್ಕೆ ಬೆಲೆ ನೀಡಿ ತೀರ್ಮಾನ ಕೈಗೊಳ್ಳುವುದು, ಮಾರ್ಕೆಟಿಂಗ್ ತಂತ್ರಗಾರಿಕೆ ಹಾಗೂ ತೆಗೆದುಕೊಳ್ಳುವ ನಿರ್ಧಾರ ಹೀಗೆ ಎಲ್ಲವುದರಲ್ಲಿಯೂ ಬ್ಯುಸಿನೆಸ್ ನ ಹಿಟ್ ಮತ್ತು ಫ್ಲಾಪ್ ಅಡಗಿದೆ. ಏನೇ ಆದರೂ.. ಅದೆಲ್ಲವನ್ನೂ ಮೀರಿ ಮುನ್ನಡೆಯಬೇಕೆಂದು ಹೇಳುತ್ತಿದೆ "ಹಮಾರಾ ಬಜಾಜ್".


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. 

ಬಜಾಜ್ ಫಿನಾನ್ಸ್ ಕುರಿತು ನಾನಿಲ್ಲ ಉಲ್ಲೇಖಿಸಿಲ್ಲ. ಇದು ಕೇವಲ ವಾಹನ ಘಟಕಕ್ಕೆ ಸಂಬಂಧಿಸಿದಂತೆ ಬರೆದಿರುವ ಮಾಹಿತಿ ಮಾತ್ರ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ