ಮಂಗಳವಾರ, ಏಪ್ರಿಲ್ 21, 2026

ಹೂವು ದೇವರ ಸೇವೆಗೆ (ಪುಸ್ತಕ ಯಾನ - 290)


ಪುಸ್ತಕದ ಶೀರ್ಷಿಕೆ : ಹೂವು ದೇವರ ಸೇವೆಗೆ

ಲೇಖಕರು : ನವರತ್ನರಾಮ್

ಪ್ರಕಾಶಕರು : ಹೇಮಂತ ಸಾಹಿತ್ಯ

ಪ್ರಥಮ ಮುದ್ರಣ : 1990

ಎರಡನೇ ಮುದ್ರಣ : 2013 (ನನ್ನ ಓದಿಗೆ ಸಿಕ್ಕಿದ್ದು)


"ಹೂವು ದೇವರ ಸೇವೆಗೆ" ಇದು ಎರಡು ಸಂಯುಕ್ತ ಕಾದಂಬರಿಗಳ ಸಂಪುಟ. ಹೂವು ದೇವರ ಸೇವೆಗೆ ಗಂಭೀರ ಶೈಲಿಯದ್ದಾದರೆ.. ನಂ. ೬೭ ಹ್ಯಾರಿಸ್ ರಸ್ತೆ ಹಾಸ್ಯ ಪ್ರಧಾನ ಶೈಲಿಯಲ್ಲಿದೆ. ಇದೀಗ ನಾನು ಪರಿಚಯಿಸುತ್ತಿರುವುದು "ಹೂವು ದೇವರ ಸೇವೆಗೆ" ಕಾದಂಬರಿಯನ್ನು. ಇದು ನಾನು ಓದಿದ ನವರತ್ನರಾಮ್ ಅವರ ಮೊದಲ ಪುಸ್ತಕ. 


ಗೊತ್ತಿಲ್ಲದ ಹೂವನ್ನು ಕಂಡಾಗ.."ಯಾವ ಜಾತಿ ಹೂವು ಇದು..?" ಎಂದು ಕೇಳಿರುತ್ತೇವೆ. ಸಾಮಾನ್ಯವಾಗಿ ನಾವಾದರೂ ಒಂದು ಬಾರಿ ಹೀಗೆ ಯೋಚಿಸಿರುತ್ತೇವೆ. ಆದರೆ, ಇಲ್ಲಿನ ಕಾದಂಬರಿ ಓದಿದಾಗ "ಎಲ್ಲಾ ಹೂವಿನ ಜಾತಿನೇ" ಎನ್ನುವ ನಿರ್ಮಲ ನಮ್ಮ ಕಣ್ತೆರೆಸುತ್ತಾಳೆ. 


"ಎಲ್ಲಾ ಹೂವು ದೇವರಿಗೆ ಅರ್ಪಿತವಾಗಬಹುದೆಂದು, ಎಲ್ಲಾ ಹೂವು ತಂದಿದ್ದೇನೆ. ಹೂವಿಗೆ ಯಾವುದೇ ಜಾತಿ, ಭೇದ ತಿಳಿಯದು. ಅದು ಹೇಗಿದ್ದರೂ ಸುಂದರವಾದದ್ದು" ಎನ್ನುವ ನಿರ್ಮಲಾ ಹೂ ಬಿಡಿಸುವುದು ಸಹ ವಿಭಿನ್ನವಾಗಿಯೇ..


"ಹೂವನ್ನ ಕೀಳಬಾರದು... ಬಿಡಿಸಬೇಕು. ಅಗಲಿಕೆಯನ್ನು ಗಿಡಕ್ಕೆ ತಿಳಿಯದ ಹಾಗೆ ಬಿಡಿಸಬೇಕು. ಕೀಳೋದು ಕಟುಕರ ಕೆಲಸ." ಎನ್ನುವ ನಿರ್ಮಲ ಹೂ ಬಿಡಿಸುವ ಪರಿಯನ್ನು ಸಹಾ ಹೇಳಿಕೊಡುತ್ತಾಳೆ. ಹಾಗಾದರೆ, ಈ ಕಾದಂಬರಿಯ ಮುಖ್ಯ ಪಾತ್ರವಾದ ನಿರ್ಮಲ ಯಾರು ಎಂಬುದನ್ನು ತಿಳಿಯುವುದಕ್ಕೂ ಮುನ್ನ ಮತ್ತೆ ಹಲವರ ಪರಿಚಯ ಮಾಡಿಕೊಂಡು ಬರೋಣ.


ಶಂಕರ ಶಾಸ್ತ್ರಿಗಳು ಹಾಗೂ ಕಮಲಮ್ಮನವರ ಮಕ್ಕಳು ವಾರಿಣಿ ಹಾಗೂ ರವಿಶಂಕರ. ಶಾಸ್ತ್ರಿಗಳು ನಿಷ್ಠಾವಂತರು ಹಾಗೂ ಸಂಪ್ರದಾಯಸ್ಥರು. ಆಡಂಬರವಿಲ್ಲದ ಜೀವನ, ಅಚ್ಚುಕಟ್ಟಾಗಿ ಸಂಸಾರ ಸಾಗಿಸುತ್ತಿದ್ದರು. ಮನೆಯ ನೀತಿ-ನಿಯಮಗಳು, ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದಿದ್ದ ವಾರಿಣಿ ಹಾಗೂ ರವಿಯ ಭಾವಗಳು, ಯೋಚನೆಗಳು ಅದೇ ರೀತಿಯಲ್ಲಿತ್ತು. ಮನೆಯ ಸುತ್ತಮುತ್ತ ಹೂವಿನ ತೋಟ ಬೆಳೆಯುವುದೆಂದರೆ ಶಾಸ್ತ್ರಿಗಳಿಗೆ ಅಚ್ಚುಮೆಚ್ಚಿನ ಕೆಲಸ. ಅವರ ಪ್ರತಿ ದಿನದ ಪೂಜೆಗೆ ಅವರೇ ಹೂ ಬಿಡಿಸುತ್ತಿದ್ದರು. ಅದಕ್ಕೂ ರೀತಿ-ರಿವಾಜಿತ್ತು. ನಂತರ ಹೂವು ಬಿಡಿಸಿ ಕೊಡುತ್ತಿದ್ದದ್ದು ವಾರಿಣಿ.


ಕಮಲಮ್ಮನವರಿಗೆ ಇದ್ದದ್ದು ಒಬ್ಬನೇ ಅಣ್ಣ ಶಿವರಾಮಯ್ಯ. ಸಕಲೇಶಪುರದ ಭಾರಿ ಪ್ಲಾಂಟರ್ ಸಚ್ಚಿದಾನಂದರ ಏಕಮಾತ್ರ ಪುತ್ರಿ ಮೀನಾಕ್ಷಿಯನ್ನು ಕೈ ಹಿಡಿಯುವ ಮೂಲಕ ಮನೆಯ ಅಳಿಯನಾಗಿ ಅಲ್ಲಿಯೇ ನೆಲೆಸಿದ್ದರು. ಅವರಿಗೆ ಇದ್ದದ್ದು ಒಬ್ಬಳೇ ಮಗಳು ಕಾಮಿನಿ. ಶಾಸ್ತ್ರಿಯವರು "ಮಾವಯ್ಯನ ಅಳಿಯಂದಿರು" ಎಂದೇ ಶಿವರಾಮಯ್ಯನವರಿಗೆ ಕರೆಯುತ್ತಿದ್ದದ್ದು. ಶಿವರಾಮಯ್ಯನವರಿಗೆ ಗೌರವವಿದ್ದರೂ.. ಹಣದ ವಿಚಾರದಲ್ಲಿ ಸ್ವಾತಂತ್ರ್ಯವಿರಲಿಲ್ಲ. ಮೀನಾಕ್ಷಿ ಎಲ್ಲಾ ವಿಚಾರದಲ್ಲಿಯೂ ತನ್ನ ತಾಯಿಯಂತೆ ಹಣಕ್ಕೆ, ಆಡಂಬರಕ್ಕೆ ಮಹತ್ವ ಕೊಡುತ್ತಿದ್ದಳು. ಆದರೆ, ಪ್ರತಿಬಾರಿಯೂ ಶಿವರಾಮಯ್ಯನವರೊಂದಿಗೆ ಬಂದಾಗ ಶಾಸ್ತ್ರಿಗಳು ಹಾಗೂ ಕಮಲಮ್ಮನವರ ಮನೆಯಲ್ಲಿ ವಾರಿಣಿ ಹಾಗೂ ರವಿಯರೊಂದಿಗೆ ಬೆರೆಯುತ್ತಾ ಇರುತ್ತಿದ್ದಳು. ಕಾಮಿನಿಯ ಪ್ರತಿ ಸ್ವಭಾವವೂ ಅಲ್ಲಿಯವರಿಗಿಂತ ವ್ಯತಿರಿಕ್ತವಾಗಿಯೇ ಇತ್ತು.


ಕಾಮಿನಿ ಬಿ.ಎ ಪದವಿ ಮುಗಿಸಿದಾಗ, ರವಿಶಂಕರನದ್ದು ಇಂಜಿನಿಯರಿಂಗ್ ಮುಗಿಸಿ ಅಂಚೆ ಹಾಗೂ ತಂತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ. ಸಚ್ಚಿನಂದಯ್ಯರವರು ಹಾಗೂ ಮೀನಾಕ್ಷಿಯವರೆಗೂ ರವಿಯ ಸ್ವಭಾವ, ಗಾಂಭೀರ್ಯ ಎಲ್ಲವೂ ಇಷ್ಟವಾಗಿ ಕಾಮಿನಿ ಅನ್ನು ವಿವಾಹ ಮಾಡಿಕೊಡುವ ಇರಾದೆ ಹೊಂದಿದ್ದರು. ಆದರೆ, ಶ್ರೀಮಂತನಲ್ಲವೆಂಬ ವಿಚಾರ ಬಂದಾಗ ತಮ್ಮ ಆಸ್ತಿಯನ್ನೇ ನೀಡಿ, ಆತನನ್ನು ಇಲ್ಲಿಯೇ ಇರುವಂತೆ ಮಾಡೋಣ ಎಂಬ ಕನಸು ಕಾಣುತ್ತಿದ್ದರು. 


ರಜಾ ದಿನಗಳಿಗೆಂದು ಅಲ್ಲಿ ಹೋದಾಗಲೇ ರವಿಗೆ ಕಾಮಿನಿಯ ವಿಭಿನ್ನ ಸ್ವಭಾವದ ಅರಿವಾಗಿದ್ದು. ಆಕೆ ತನ್ನ ತಾಯಿ ಇದ್ದಾಗಲೇ ಒಂದು ರೀತಿ, ಇಲ್ಲದಾಗಲೇ ಒಂದು ರೀತಿಯ ಸ್ವಭಾವ ತೋರುತ್ತಿದ್ದದ್ದು ಅರಿವಾದವನು ಬಂಗಾರದ ಪಂಜರದಿಂದ ತಾನು ಹಾರಿ ಹೋದರೆ ಸಾಕೆಂದು ಆಶಿಸುತ್ತಿದ್ದ. 


ಮೀನಾಕ್ಷಿ ಎಂದಿಗೂ ಕಮಲಮ್ಮನವರ ಮನೆಗೆ ಬಂದ ಪ್ರಸಂಗವೇ ಇರಲಿಲ್ಲ. ವಾರಿಣಿಯ ಮದುವೆಗೂ ಸಹಾ ಭಾರೀ ಉಡುಗೊರೆ ಕೊಟ್ಟು, ಗಂಡ ಹಾಗೂ ಮಗಳನ್ನು ಕಳುಹಿಸಿದ್ದರು. ಅದರಲ್ಲಿ ಭಾವೀ ಬೀಗರಾಗುವವರು ಎನ್ನುವ ವರ್ತನೆ ಹಾಗೂ ಆಡಂಬರವೇ ಹೆಚ್ಚಾಗಿತ್ತು. ವಾರಿಣಿಗೆ ಸುಧೀಂದ್ರನ ಜೊತೆಗೆ ಮದುವೆಯಾಯಿತು.


ವಾರಿಣಿ ಹೋಗುವಾಗ ಕಾಮಿನಿಗೆ ತನ್ನ ಹೂ ಬಿಡಿಸುವ ಕೆಲಸವನ್ನು ಒಪ್ಪಿಸಿದ್ದಳಾದರೂ.. ಕಾಮಿನಿಗೆ ಅದು ಕಷ್ಟವೇ ಆಗಿತ್ತು. ವಾರಿಣಿಯ ಮದುವೆಯಾದ ನಂತರ ರವಿಗೆ ವಿದೇಶಕ್ಕೆ ಹೆಚ್ಚಿನ ವ್ಯಾಸಂಗಕ್ಕೆ ಹೋಗುವ ಅವಕಾಶ ಲಭಿಸಿತ್ತು. ಸರ್ಕಾರದಿಂದಲೇ ಸಂಬಳ ಹಾಗೂ ಓದಿನ ಸವಲತ್ತುಗಳು ದೊರೆತಿದ್ದವು. ಆದರೆ, ಇದೆಲ್ಲವೂ ಇಷ್ಟವಾದದ್ದು ಕಾಮಿನಿ ಹಾಗೂ ಅವರ ಮನೆಯವರಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಅಷ್ಟು ದಿನ ತನ್ನ ಮಗಳು ಕಾಯಬೇಕೆಂದು ಯೋಚಿಸಿ ಕಾಮಿನಿಯನ್ನು ಮದುವೆ ಮಾಡಿಕೊಂಡೇ ಕರೆದುಕೊಂಡು ಹೋಗಲಿ ಎನ್ನುವ ಯೋಚನೆ ಇತ್ತು ಮೀನಾಕ್ಷಿಗೆ. ಆದರೆ, ರವಿ ಅದಕ್ಕೆ ಅವಕಾಶವಿಲ್ಲದರಿಂದ ಒಪ್ಪಲಿಲ್ಲ. ಕಾಮಿನಿಯ ಮಾತಿಗೆ ಒಪ್ಪದೇ ಹೊರಟು ನಿಂತಾಗ ಕಾಮಿನಿ ಆತನ ಜೊತೆಗೆ ಸಂಬಂಧವನ್ನೇ ಕಡಿದುಕೊಳ್ಳುವವಳಂತೆ ಕಟುವಾಗಿ ವರ್ತಿಸಿದ್ದಳು. ಅಂತಹಾ ನಡೆ ರವಿಯನ್ನು ಅವಳಿಂದ ವಿಮುಖವಾಗಿಸಿತು.


"ಪ್ಯಾರಿಸ್ ಇಸ್ ದ ಸಿಟಿ ಆಫ್ ಲವರ್ಸ್ ಅಂಡ್ ಪೊಯೆಟ್ಸ್" ಎನ್ನುವ ಮಾತನ್ನು ಆಗಾಗ ನೆನಪಿಸುತ್ತಲೇ ಪ್ಯಾರಿಸ್ ಹಾಗೂ ಸುತ್ತಲಿನ ಪರಿಸರವನ್ನೆಲ್ಲಾ ವರ್ಣಿಸುತ್ತಾರೆ ಲೇಖಕರು. ಅಲ್ಲಿನ ನಗರ ಸೌಂದರ್ಯದ ಸವಿಯನ್ನು ನೀವು ಓದಿಯೇ ಸವಿಯಬೇಕು. ಅಲ್ಲಿ ಫ್ರೆಂಚ್ ಕಲಿಯುವ ಸಲುವಾಗಿ ಮತ್ತೊಂದು ಸ್ಥಳಕ್ಕೆ ಕಳುಹಿಸಿದರು ರವಿಯನ್ನು. ತಾನು ಪ್ರಯಾಣದ ಸಂದರ್ಭದಲ್ಲಿಯೇ ಕಂಡ.. ನೋಡಲು ಕಾಮಿನಿಯಂತೆಯೇ ಇದ್ದ.. ಆದರೆ, ಅದಕ್ಕಿಂತಲೂ ಸೌಮ್ಯವಾದ ಹಾಗೂ ವಿನಯವಾದ, ಸ್ನೇಹಮಯಿ ಹುಡುಗಿ ಬುದ್ಧಿವಂತೆ ನಿರ್ಮಲ ಜೊತೆಯಾದಳು. ಕನ್ನಡಿಗರು ಎಂಬ ಸಲುಗೆಯಿಂದ ಬೆಳೆದ ಸ್ನೇಹ, ಪ್ರೀತಿಯವರೆಗೂ ಹೋಯಿತು.


ಕಮಲಮ್ಮನವರ ಕಡೆಯಿಂದ ಆಗಾಗ ಕಾಮಿನಿಯ ಕುರಿತ ಪ್ರಸ್ತಾಪ ಬರುತ್ತಿದ್ದರೆ.. ಶಾಸ್ತ್ರಿಗಳು ಮೌನವಹಿಸಿದ್ದರು. ತನ್ನ ಪ್ರೇಮದ ವಿಚಾರವನ್ನು ಮನೆಗೆ ತಿಳಿಸುತ್ತಾನಾ ರವಿ..? ರವಿ ಹಾಗೂ ನಿರ್ಮಲಾರ ಸಂಬಂಧವನ್ನು ಉಳಿದವರು ಯಾವ ದೃಷ್ಟಿಯಿಂದ ನೋಡಿದರು ಹಾಗೂ ಹೇಗೆ ಸ್ವೀಕರಿಸಿದರು.. ಇದಕ್ಕೆ ಕಾಮಿನಿ ಹಾಗೂ ಮನೆಯವರ ಪ್ರತಿಕ್ರಿಯೆ ಹೇಗಿತ್ತು..? ಇದೆಲ್ಲದಕ್ಕೂ ಶಿವರಾಮಯ್ಯನವರ ಪ್ರತಿಕ್ರಿಯೆ ಏನಿತ್ತು, ಶಾಸ್ತ್ರಿಗಳು ತಟಸ್ಥರಾಗಿ ಉಳಿಯಲು ಕಾರಣವೇನ..? ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ "ಹೂವು ದೇವರ ಸೇವೆಗೆ" ಕಾದಂಬರಿಯನ್ನು.


ಇಲ್ಲಿ ಇರುವ ಮತ್ತೊಂದು ಸಮಸ್ಯೆ ಎಂದರೆ ನಿರ್ಮಲಳ ಜಾತಿಯ ಕುರಿತಾದದ್ದು.. ಹೂವಿನ ಜಾತಿಯನ್ನೇ ಒಪ್ಪದ ನಿರ್ಮಲ ಜಾತಿ ವ್ಯವಸ್ಥೆಯನ್ನು ಹೇಗೆ ಕಂಡಳು..? ರವಿ ಇದನ್ನು ಹೇಗೆ ಸ್ವೀಕರಿಸಿದ..?


ಸಮಾಜದ ಮುಖ್ಯ ಸಮಸ್ಯೆಯೊಂದನ್ನು ತೆರೆದಿಟ್ಟ ಕಾದಂಬರಿ ಇದು. ರವಿಯ ಮನೆಯ ವಾತಾವರಣ, ಕಾಮಿನಿಯ ಮನೆಯ ವಾತಾವರಣ, ಪ್ಯಾರಿಸ್ ನ ದಿನಗಳು, ಸ್ಥಳಗಳು ಅಲ್ಲಿಯ ಹವಾಮಾನ ಅಲ್ಲಿನ ಜನರು, ಸ್ವಭಾವ ಹೀಗೆ ಪ್ರತಿಯೊಂದನ್ನೂ ಸಮರ್ಥವಾಗಿ ಚಿತ್ರಿಸಿದ್ದಾರೆ ಲೇಖಕರು. ಶೀರ್ಷಿಕೆಗೂ ಇಲ್ಲಿನ ಕಥಾವಸ್ತುವಿಗೂ ಸಂಬಂಧ ಕಲ್ಪಿಸಿರುವ ಪರಿ ಇಷ್ಟವಾಯಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ