ದಕ್ಷಿಣ ಕೊರಿಯಾದ ಬ್ಯುಸಿನೆಸ್ ಬ್ರ್ಯಾಂಡ್ ಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಸ್ಯಾಮ್ಸಂಗ್ ಆದರೆ ಎರಡನೆಯ ಸ್ಥಾನ ಪಡೆದುಕೊಂಡಿರುವುದು ಲಕ್ಕಿ ಗೋಲ್ಡ್ ಸ್ಟಾರ್ ಅರ್ಥಾತ್ ಲೈಫ್'ಸ್ ಗುಡ್ ಅಂದರೆ ಎಲ್.ಜಿ ಗ್ರೂಪ್ಸ್. ಎಲ್.ಜಿ ಎಂದರೆ ಈಗ ಲೈಪ್ಸ್'ಸ್ ಗುಡ್ ಎಂಬುದಾದರೂ.. ಇದು ರೂಪಾಂತರಗೊಂಡ ಬಗೆಯನ್ನು ತಿಳಿದು ಬರೋಣ ಬನ್ನಿ.
ಎಲ್.ಜಿ ಸಂಸ್ಥೆಯ ಸ್ಥಾಪಕ ಕೂ ಇನ್ - ಹವೋಯಿ. 1906 ಆಗಸ್ಟ್ 27ರಂದು ಕೊರಿಯಾದ ರಾಜ ಮನೆತನದಲ್ಲಿ ಜನಿಸಿದ ಈತ ಹುಟ್ಟುವ ಹೊತ್ತಿಗಾಗಲೇ ರಾಜಮನೆತನ ಇರಲಿಲ್ಲ. ಈತನ ತಂದೆ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸಿಯೋಲ್ ನ ಸೆಂಟ್ರಲ್ ನಾರ್ಮಲ್ ಹೈಸ್ಕೂಲ್ ನಲ್ಲಿ ತನ್ನ ಹೈಸ್ಕೂಲ್ ವ್ಯಾಸಂಗವನ್ನು ಮುಗಿಸಿ ಯಾವುದಾದರೂ ವ್ಯಾಪಾರ ಮಾಡುತ್ತೇನೆಂದು ನಿರ್ಧರಿಸಿದರು. ಆದರೆ, ಈತ ಮರಳಿ ಮನೆಗೆ ಬರುವಾಗ ಆತನಿಗೆಂದು ಒಂದು ಹುದ್ದೆ ಕಾಯುತ್ತಿತ್ತು. 1926ರಲ್ಲಿ ತನ್ನ ಊರಿನ ಬ್ಯುಸಿನೆಸ್ ಕಾರ್ಪೊರೇಟಿವ್ ಯೂನಿಯನ್ ನ ಮುಖ್ಯಸ್ಥನಾಗಿ ತನ್ನ ಮೊದಲ ಕೆಲಸವನ್ನು ಶುರು ಮಾಡುತ್ತಾನೆ. ನಂತರ, ಈ ಕೆಲಸ ತನಗಲ್ಲವೆಂದು ಅದನ್ನು ತೊರೆದು 1927ರಲ್ಲಿ ಡಾಂಗ್-ಎ ಇಲ್ಬೋ ಎನ್ನುವ ದಿನಪತ್ರಿಕೆಯಲ್ಲಿ ಹೆಡ್ ಆಗಿ ಕಾರ್ಯನಿರ್ವಹಿಸುತ್ತಾನೆ.
ಈ ಕೆಲಸವೂ ಹಿಡಿಸದೆ.. 1931 ರಲ್ಲಿ ತನ್ನ ಕಿರಿಯ ಸಹೋದರನಾದ ಕೂ ಚುಲ್ಲ್ ಜೊತೆ ಸೇರಿ ದಕ್ಷಿಣ ಜಿಯೋಂಗ್ ಸಾಂಗ್ ನ, ಜಿಂಜುವಿನಲ್ಲಿ ತನ್ನದೇ ಆದ ವ್ಯಾಪಾರ ಶುರು ಮಾಡಬೇಕೆಂದು ಅಂಗಡಿಯೊಂದನ್ನು ತೆರೆಯುತ್ತಾನೆ. ಆದರೆ, ಅದೃಷ್ಟ ಆತನ ಕೈಹಿಡಿಯಲಿಲ್ಲ. ಬಹಳ ನಷ್ಟವನ್ನು ಅನುಭವಿಸಿ ಆ ಅಂಗಡಿಯನ್ನು ಮುಚ್ಚಬೇಕಾದ ಪ್ರಸಂಗ ಬರುತ್ತದೆ. ಆದರೆ, ಆತನ ಬ್ಯುಸಿನೆಸ್ ಮಾಡುವ ತುಡಿತ ಎಷ್ಟಿರುತ್ತದೆ ಎಂದರೆ ತನ್ನ ಮನೆಯ ಎಲ್ಲಾ ಆಸ್ತಿಪಾಸ್ತಿಗಳನ್ನು ಅಡವಿಟ್ಟು.. ಅತಿ ದೊಡ್ಡ ಮೊತ್ತದ ಲೋನ್ ಹಾಗೂ ಸಾಲವನ್ನು ಪಡೆದು ತಾನು ಬ್ಯುಸಿನೆಸ್ ಮಾಡಿಯೇ ತೀರುತ್ತೇನೆ. ಅದರಲ್ಲಿಯೇ ತನ್ನ ಭವಿಷ್ಯವಿದೆ ಎಂದು ಗಟ್ಟಿಯಾಗಿ ನಂಬಿ ಬ್ಯುಸಿನೆಸ್ ಮಾಡಲು ತೀರ್ಮಾನಿಸುತ್ತಾನೆ. ಏಕೆಂದರೆ, ಆ ಹೊತ್ತಿಗಾಗಲೇ ತನ್ನ ಸಂಬಂಧಿಯೊಬ್ಬರ ಜೊತೆಗೆ ಈ ಕುರಿತ ಮಾತುಕತೆ ನಡೆದಾಗಿರುತ್ತದೆ.
ಹವೋಯಿಯ ಸಂಬಂಧಿಯಾದ ಹ್ಯೂ ಮನ್-ಜುಂಗ್ ನ ಮಗ ಓದು ಮುಗಿಸಿಕೊಂಡು ಜಪಾನ್ ನಿಂದ ವಾಪಸ್ ಆಗಿರುತ್ತಾನೆ. ಆತನಿಗೆ ಈಗ ಬ್ಯುಸಿನೆಸ್ ತಂತ್ರಗಳನ್ನು ಕಲಿಯಬೇಕಾಗಿರುತ್ತದೆ. ಆದರೆ, ಕೇವಲ ತನ್ನ ಮಗನ ಬ್ಯುಸಿನೆಸ್ ಗಾಗಿ.. ಒಬ್ಬನೇ ಹೂಡಿಕೆ ಮಾಡಲು ಆತ ಹಿಂಜರಿಯುತ್ತಾನೆ. ಹವೋಯಿ ಜೊತೆ ಸೇರಿ ಆತ ಪಾಲುದಾರಿಕೆಯಲ್ಲಿ ತನ್ನ ಬ್ಯುಸಿನೆಸ್ ಅನ್ನು ಶುರು ಮಾಡುತ್ತಾನೆ. ನಂತರ, ಹವೋಯಿಯೇ ಎಲ್ಲವನ್ನೂ ಮುಂದುವರಿಸಿಕೊಂಡು ಹೋಗುತ್ತಾನೆ.
1947 ಆಗಸ್ಟ್ 5 ರಂದು ಶುರು ಮಾಡಿದ ಬಿಸಿನೆಸ್ ಲಕ್ ಉಹಿ ಕೆಮಿಕಲ್ಸ್ ಎಂಬ ಕಾಸ್ಮೆಟಿಕ್ಸ್ ತಯಾರಿಕಾ ಕಂಪೆನಿ. ಕೊರಿಯಾದ ಲಕ್ ಉಹಿ ಎಂದರೆ ಎಲ್ಲರಿಗೂ ಖುಷಿ ತರುವಂತದ್ದು ಎಂದರ್ಥ. ಇದೇ ಇಂಗ್ಲಿಷ್ ನಲ್ಲಿ ಲಕ್ಕಿ ಎಂದಾಯಿತು. ಲಕ್ಕಿ ಕೆಮಿಕಲ್ಸ್ ಶುರುವಾದ ನಂತರ ಆತನ ಬ್ಯುಸಿನೆಸ್ ನ ಲಕ್ ಬದಲಾಯಿತು ಎಂದರೆ ತಪ್ಪಾಗುವುದಿಲ್ಲ.
ಕೊರಿಯಾದ ಮೊದಲ ಮೇಕಪ್ ಕ್ರೀಮ್ ಲಕ್ಕಿ ಕ್ರೀಂ ಕಂಪೆನಿಗೆ ಬಹಳ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡುತ್ತದೆ. ಆ ಕ್ರೀಮ್ ನಿಂದಾಗಿಯೇ ಜನ ಕಂಪನಿಯನ್ನು ಗುರುತಿಸಲು ಶುರುಮಾಡುತ್ತಾರೆ. ಇಷ್ಟಕ್ಕೇ ನಿಲ್ಲದೆ.. ಪ್ಲಾಸ್ಟಿಕ್ ಜೊತೆಗೆ ಹೇರ್ ಬ್ರಷ್ ಒಂದನ್ನು ತಯಾರಿಸಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಅದೇ ಟೂಥ್ ಬ್ರಷ್. ಜೊತೆಗೆ ವಾಶ್ ಬೌಲ್ ಕೂಡಾ ಲಕ್ಕಿ ಕಂಪನಿಯಲ್ಲಿಯೇ ತಯಾರಾಗುತ್ತವೆ. ಡಿಟರ್ಜೇಂಟ್ ಪೌಡರ್ ಅನ್ನೂ ಲಕ್ಕಿ ಕಂಪನಿ ತಯಾರಿಸಲು ತೊಡಗುತ್ತದೆ. 1974ರಲ್ಲಿ ಲಕ್ಕಿ ಟೂಥ್ ಪೇಸ್ಟ್ ಹೊರಬರುತ್ತದೆ. ಆಗ ಕೊರಿಯಾದಲ್ಲಿ ಲಕ್ಕಿ ಎಂಬ ಕಂಪನಿಗಳ ಹೆಸರಿಗೇನೂ ಕಡಿಮೆ ಇರಲಿಲ್ಲ. ಆಗ ಆ ಕಂಪನಿಯನ್ನು ಲಕ್ಕಿ ಕೋ.ಲಿಮಿಟೆಡ್ ಎಂದು ಹೆಸರು ಬದಲಾಯಿಸಿ ಕರೆಯಲಾಗುತ್ತದೆ.
1958ರಲ್ಲಿ ಹವೋಯಿ ತನ್ನ ಬ್ಯುಸಿನೆಸ್ ಅನ್ನು ಮತ್ತಷ್ಟು ವಿಸ್ತರಿಸಲು ಇಷ್ಟಪಡುತ್ತಾನಾದರೂ.. ಅದು ಬೇರೆಯ ವಿಭಾಗದ ಬ್ಯುಸಿನೆಸ್ ಆಗಿರಬೇಕೆಂಬ ಆಲೋಚನೆಯಿಂದ ದಕ್ಷಿಣ ಕೊರಿಯಾದ ಸಿಯೋಲ್ ನ ಯೋಯುಡೊ-ಡಾಂಗ್ ನಲ್ಲಿ ಎಲೆಕ್ಟ್ರಾನಿಕ್ಸ್ ಕಂಪನಿಯೊಂದನ್ನು ಶುರು ಮಾಡುತ್ತಾನೆ. ಕೊರಿಯಾದ ಮೊದಲ ಎಲೆಕ್ಟ್ರಾನಿಕ್ ಕಂಪೆನಿಯಾದ ಅದರ ಹೆಸರು ಜಿಯೋಮ್ಸೇಂಗ್. ಕೊರಿಯಾದ ಈ ಪದ ಇಂಗ್ಲಿಷ್ ನಲ್ಲಿ ಗೋಲ್ಡ್ ಸ್ಟಾರ್. ಗೋಲ್ಡ್ ಸ್ಟಾರ್ ನಿಂದ ಹೊರಬಂದ ಮೊದಲ ಪ್ರಾಡಕ್ಟ್ ಆದ ರೇಡಿಯೋ ಕೊರಿಯಾದ ಮೊದಲ ಹೋಂ-ಮೇಡ್ ರೇಡಿಯೋ ಎಂದೇ ಹೆಸರಾಗುತ್ತದೆ. ಇದಾದ ನಂತರ ಫೋನ್, ಫ್ಯಾನ್, ಎ.ಸಿ ರೆಫ್ರಿಜರೇಟರ್, ಟಿ.ವಿ ಇತ್ಯಾದಿಗಳು ತಯಾರಾಗುತ್ತವೆ.
ಬ್ಯುಸಿನೆಸ್ ಕೇವಲ ಹಣ ಗಳಿಕೆಯ ಮಾರ್ಗ ಮಾತ್ರವಲ್ಲ. ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಮಾರ್ಗವೂ ಹೌದು, ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ರಹದಾರಿಯೂ ಹೌದು.
ಹವೋಯಿಯ ಕನಸುಗಳು ಚಿಕ್ಕದಾಗಿರಲಿಲ್ಲ. ಹಾಗಾಗಿ, ಆತ ತನ್ನ ಕಂಪನಿಯನ್ನು ಎಲ್ಲೆಡೆಯೂ ವಿಸ್ತರಿಸುವ ಸಲುವಾಗಿ ಹಲವಾರು ಕಂಪನಿಗಳನ್ನು ಕೊಂಡುಕೊಂಡ. ಪೆಟ್ರೋಕೆಮಿಕಲ್ಸ್, ಸೆಮಿಕಂಡಕ್ಟರ್, ಎನರ್ಜಿ, ಕನ್ಸ್ಟ್ರಕ್ಷನ್, ಸೆಕ್ಯೂರಿಟಿ, ಡಿಸ್ಟ್ರಿಬ್ಯೂಷನ್, ಇನ್ಸೂರೆನ್ಸ್ ಹೀಗೆ ಎಲ್ಲೆಡೆಯಲ್ಲಿಯೂ ಎಲ್.ಜಿ ತನ್ನ ಸಾಮ್ರಾಜ್ಯ ಸ್ಥಾಪಿಸಿತ್ತು. ಕೊರಿಯಾದ ಯುದ್ಧದ ನಂತರ ದೇಶವನ್ನು ಮತ್ತೆ ಮುನ್ನೆಲೆಗೆ ತರುವ ಬ್ಯುಸಿನೆಸ್ ಮನ್ ಗಳಲ್ಲಿ ಪ್ರಮುಖರಾಗಿದ್ದರು ಹವೋಯಿ.
ಗೋಲ್ಡ್ ಸ್ಟಾರ್ ಶುರುವಾದ ನಂತರ ತನ್ನ ಅಂತರರಾಷ್ಟ್ರೀಯ ಫ್ಯಾಕ್ಟರಿಯನ್ನು ಮೊದಲು ಶುರು ಮಾಡಿದ್ದು ಅಮೇರಿಕಾದ ಅಲಭಾಮದ ವಿಲ್ಲೆಯಲ್ಲಿ 1982ರಲ್ಲಿ.
1988ರಲ್ಲಿ ಜಗತ್ತಿನ ಮೊಟ್ಟ ಮೊದಲ 60 ಇಂಚಿನ ಪ್ಲಾಸ್ಮಾ ಟಿ.ವಿಯನ್ನು ಬಿಡುಗಡೆ ಮಾಡಿತ್ತು. 1999ರಲ್ಲಿ ಫಿಲಿಪ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡ ಎಲ್.ಜಿ 2010ರಷ್ಟೊತ್ತಿಗೆ ಜಗತ್ತಿನ ಅತಿ ದೊಡ್ಡ ಎಲ್.ಸಿ.ಡಿ ತಯಾರಕರು ಎಂದು ಹೆಸರಾಗಿದ್ದರು. 2013ರ ಸರ್ವೆಯ ಪ್ರಕಾರ ಜಗತ್ತಿನ ಎರಡನೆಯ ಅತಿ ದೊಡ್ಡ ಎಲ್.ಸಿ.ಡಿ ಟಿವಿ ತಯಾರಕರು ಎಂಬ ಖ್ಯಾತಿ ಎಲ್.ಜಿಯದ್ದು.
1982ರವರೆಗೂ ಲಕ್ಕಿ ಹಾಗೂ ಗೋಲ್ಡ್ ಸ್ಟಾರ್ ಆಗಿದ್ದ ಕಂಪನಿ 1983 ರಲ್ಲಿ ತನ್ನ ಎರಡು ಕಂಪನಿಯ ಹೆಸರುಗಳನ್ನು ಒಟ್ಟುಗೂಡಿಸಿ 1983ರಿಂದ 'ಲಕ್ಕಿ ಗೋಲ್ಡ್ ಸ್ಟಾರ್ ಗ್ರೂಪ್' ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸತೊಡಗಿತು. ಆದರೆ, ತನ್ನ ಅಂತರಾಷ್ಟ್ರೀಯ ಗ್ರಾಹಕರಿಗೆ ಈ ಹೆಸರು ಕಷ್ಟಕರವಾಗಿದ್ದರಿಂದ ಚಿಕ್ಕದಾಗಿ ಎಲ್.ಜಿ ಗ್ರೂಪ್ಸ್ ಎಂದು ಹೆಸರಾಯಿತು.
ಎಲ್.ಜಿ ಗ್ರೂಪ್ಸ್ ದಿನೇ-ದಿನೇ ಬೆಳೆಯುತ್ತಲೇ ಇತ್ತು. ಕೊರಿಯಾದಲ್ಲಿ ಹಲವಾರು ಮೊದಲುಗಳನ್ನು ಶುರು ಮಾಡಿದ ಖ್ಯಾತಿ ಎಲ್.ಜಿಯದ್ದು. ಕೊರಿಯಾದ ಮೊದಲ ಪ್ಲಾಸ್ಟಿಕ್ ಇಂಡಸ್ಟ್ರಿ ಎಲ್.ಜಿಯದ್ದೇ. ಕೊರಿಯಾದಲ್ಲಿ ಕೋಕಾ-ಕೋಲಾ ಬಾಟಲಿಂಗ್ ಕಂಪನಿಯಾಗಿಯೂ ಎಲ್.ಜಿ ಕಾರ್ಯನಿರ್ವಹಿಸಿತು. 1989ರಿಂದ ಸಿಯೋಲ್ ನ ಬೇಸ್ ಬಾಲ್ ಓನರ್ ಶಿಪ್ ಅನ್ನು ವಹಿಸಿಕೊಂಡಿತು. ಇಷ್ಟೇ ಅಲ್ಲದೆ.. ಹಲವಾರು ಸ್ಪೋರ್ಟ್ಸ್ ಕ್ಲಬ್ ಗನ್ನೂ ಆಪರೇಟ್ ಮಾಡುತ್ತಿತ್ತು. ರಿಯಲ್ ಎಸ್ಟೇಟ್ ಗೂ ಎಲ್.ಜಿ ಕಾಲಿಟ್ಟಿತು.
ಹವೋಯಿ ಕೂಡಾ ತನ್ನ ತಂದೆಯ ಹಾದಿಯಲ್ಲಿಯೇ ನಡೆಯುತ್ತಾ.. ಕೊರಿಯಾದ ಶಾಂಗೈನಲ್ಲಿದ್ದ ಸರ್ಕಾರಕ್ಕೆ ಬೇಕಾದ ನೆರವನ್ನು ನೀಡುತ್ತಿದ್ದರು. ಇದರಿಂದಾಗಿ.. ಸರ್ಕಾರಿ ಅಧಿಕಾರಿಗಳೊಂದಿಗೆ ವ್ಯಾವಹಾರಿಕ ಸಂಬಂಧವೂ ಬೆಳೆಯಿತು. ಇದರಿಂದಾಗಿ ಎಲ್.ಜಿ ಪಡೆದುಕೊಂಡ ಗೌರವವೆಂದರೆ ಕೊರಿಯಾದಿಂದ ಅಮೆರಿಕಾದ ಸೇನೆಗೆ ಬೇಕಾದ ಟ್ರೇಡ್ ಮಾಡತೊಡಗಿತು. ಅಮೆರಿಕಾದ ಆರ್ಮಿ ಮಿನಿಸ್ಟ್ರಿಯಿಂದ ಅಧಿಕೃತವಾಗಿ ಟ್ರೇಡ್ ಅನುಮೋದನೆ ಪಡೆದುಕೊಂಡ ಕೊರಿಯಾದ ಮೊದಲ ಕಂಪನಿ ಎಲ್.ಜಿ.
1995ರಲ್ಲಿ ಎಲ್.ಜಿ ಇಂದ ಬಂದ ಜಾಹೀರಾತೊಂದು ಮುಂಜಾನೆಯ ದಿನಪತ್ರಿಕೆಗಳಲ್ಲಿ ಪ್ರಸಾರವಾಗಿ ಎಲ್ಲರ ಮನಸೆಳೆಯಿತು. ಕಣ್ಣು ಮಿಟುಕಿಸುವ, ಕೆಂಪು ಬಣ್ಣದ ನಗುಮುಖವೊಂದು 'ಹ್ಯಾಪಿ ನ್ಯೂ ಇಯರ್' ಎನ್ನುತ್ತಾ ತನ್ನ ಹೊಸ ರೂಪದಲ್ಲಿ ಕಾಣಿಸಿಕೊಂಡಿತ್ತು. ನ್ಯೂ ಇಯರ್ ರಜೆಗಳು ಮುಗಿದ ನಂತರ.. ಜನವರಿ 4ರಂದು ಎಲ್.ಜಿ ಬಗ್ಗೆ ಸಾರ್ವಜನಿಕರನ್ನು ಕುತೂಹಲಗೊಳಿಸುವಂತೆ ಒಂದಿಡೀ ಪುಟದ ಆರ್ಟಿಕಲ್ ಪ್ರಕಟವಾಗಿತ್ತು.
ಲಕ್ಕಿ ಗೋಲ್ಡ್ ಸ್ಟಾರ್ ಎಲ್.ಜಿ ಎಂದು ಬದಲಾಗಿದೆ ಎನ್ನುತ್ತಾ ಎಲ್.ಜಿ ಗ್ರೂಪ್s ನ ಮೊದಲ ಆಫೀಶಿಯಲ್ ಗ್ರೀಟಿಂಗ್ ಅನ್ನು ಸಾರ್ವಜನಿಕರಿಗಾಗಿ ನೀಡಿತ್ತು. ಎಲ್.ಜಿ ಎಂದರೆ ಇನ್ನು ಮುಂದೆ ಲೈಫ್'ಸ್ ಗುಡ್. ನಿಮ್ಮ ಲೈಫಿನಲ್ಲಿ ಒಳ್ಳೆಯ ಪ್ರಾಡಕ್ಟ್ಗಳನ್ನೆಲ್ಲಾ ನಾವು ನಿಮಗೆ ನೀಡುತ್ತೇವೆ ಎನ್ನುವ ಆಶ್ವಾಸನೆಯೊಂದಿಗೆ ತಾವು ಬದಲಾಗುತ್ತಿದ್ದೇವೆ ಎನ್ನುವ ಸಂದೇಶವನ್ನು ನೀಡಿದ್ದಷ್ಟೇ ಅಲ್ಲದೆ.. ಹೊಸ ವರ್ಷಕ್ಕಾಗಿ ತನ್ನ ರೆಸಲ್ಯೂಷನ್ ಅನ್ನೂ ಹೇಳಿತ್ತು. ಅಂದಿನಿಂದಲೂ ತನ್ನ ರೆಸಲ್ಯೂಷನ್ ಅನ್ನು ಉಳಿಸಿಕೊಳ್ಳುತ್ತಾ ಬಂದಿದೆ ಎಲ್.ಜಿ. ಅದೇನೆಂದರೆ.. ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ.. ಎಲ್.ಜಿ ಗ್ರಾಹಕನನ್ನು ನಾವು ಗೌರವಿಸುತ್ತೇವೆ. ಅಲ್ಲದೆ.. ಗ್ರಾಹಕರ ಅಪೇಕ್ಷೆಯ ತೃಪ್ತಿಯುತವಾದ ಸೇವೆಯನ್ನು ಒದಗಿಸುತ್ತೇವೆ.
ಇದಾದ 20 ವರ್ಷಗಳ ನಂತರ 2015 ಡಿಸೆಂಬರ್ 31 ರಲ್ಲಿ ಒಂದು ಪುಟ್ಟ ಬದಲಾವಣೆ ಹೊಂದಿತು. ಅದೆಂದರೆ, ಎಲ್.ಜಿ ಲೋಗೋದ ಅಕ್ಷರಗಳ ಫಾಂಟ್ ಬದಲಾಗಿತ್ತು. ಮತ್ತಷ್ಟು ಸ್ಮಾರ್ಟ್ ಆಗಿ ತಾವು ಅಪ್ಡೇಟ್ ಆಗುತ್ತಿದ್ದೇವೆ ಎನ್ನುವ ಪುಟ್ಟ ಸಂದೇಶವನ್ನು ನೀಡಿತ್ತು ಎಲ್.ಜಿ.
ಎಲ್.ಜಿ ಯ ಮಾರ್ಕೆಟಿಂಗ್ ತಂತ್ರಗಳು ಕೂಡ ಹಲವಾರು ಜನರಿಗೆ ಸ್ಪೂರ್ತಿಯಾಗುವಂಥದ್ದು. ಮೊದಲೆಲ್ಲಾ ಬಿಲ್ ಬೋರ್ಡ್ ಗಳಲ್ಲಿ ಮಾತ್ರ ಜಾಹೀರಾತನ್ನು ನೀಡುತ್ತಿದ್ದ ಎಲ್.ಜಿ ನಿಧಾನವಾಗಿ ಸೋಶಿಯಲ್ ಮೀಡಿಯಾ, ಟಿ.ವಿ, ಪ್ರಿಂಟ್ ಮೀಡಿಯಾಗಳನ್ನು ಆವರಿಸಿಕೊಂಡದ್ದರ ಜೊತೆಗೆ ಕ್ರೀಡೆಗಳಿಗೆ ಸ್ಪಾನ್ಸರ್ ಮಾಡಲು ಶುರುವಿಟ್ಟಿತು. 1999ರ ವರ್ಲ್ಡ್ ಕಪ್ ಕ್ರಿಕೆಟ್ ನಲ್ಲಿ ಸ್ಪಾನ್ಸರ್ ಮಾಡುವ ಜೊತೆಗೆ 8 ಮಿಲಿಯನ್ ಡಾಲರ್ ಗಳಿಗೂ ಹೆಚ್ಚಿನ ಹಣವನ್ನು ಕ್ರೀಡಾ ಕ್ಷೇತ್ರದಲ್ಲಿನ ಜಾಹೀರಾತು ಹಾಗೂ ಮಾರ್ಕೆಟಿಂಗೆಂದು ತೆಗೆದಿಟ್ಟಿತು. 2003ರ ವರ್ಲ್ಡ್ ಕಪ್ ಗೂ ಸ್ಪಾನ್ಸರ್ ಮಾಡಿತು. ಕ್ರೀಡೆಗಳಿಗೆ ಸ್ಪಾನ್ಸರ್ ಮಾಡುವ ಮೂಲಕ ಯುವಜನರನ್ನು ತನ್ನತ್ತ ಸೆಳೆಯತೊಡಗಿತ್ತು ಎಲ್.ಜಿ.
ಹಲವಾರು ಲೋಕಲ್ ಈ ಕಾಮರ್ಸ್ ವೆಬ್ಸೈಟ್ಗಳಲ್ಲಿಯೂ ತನ್ನ ಜಾಹೀರಾತನ್ನು ನೀಡತೊಡಗಿತು. ಉದಾಹರಣೆಗೆ: ಫ್ಯಾಬ್-ಮಾಲ್.ಕಾಮ್, ರೆಡ್ಇಫ್.ಕಾಮ್, ಇಂಡಿಯಾಟೈಮ್ಸ್.ಕಾಮ್, ಇಂಡಿಯಾಪ್ಲಾಜಾ.ಕಾಂ ಮುಂತಾದವು.
ಇಂದು ಜಗತ್ತಿನಾದ್ಯಂತ ಎಲ್.ಜಿ ತನ್ನ ತಯಾರಿಕಾ ಘಟಕಗಳನ್ನು ಸ್ಥಾಪಿಸಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕಚ್ಚಾ ವಸ್ತುಗಳ ರವಾನೆಗೆ ನೀಡಬೇಕಾದ ಹಣ ಹೆಚ್ಚು ಎಂದು ಅಲ್ಲಲ್ಲಿಯೇ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಗಳನ್ನು ಸ್ಥಾಪಿಸಿದೆ. ಹೀಗೆ ಭಾರತದಲ್ಲಿ ನೋಯ್ಡಾದಲ್ಲಿ ಕಂಪ್ಯೂಟರ್ ಮಾನಿಟರ್ ಹಾಗೂ ಫ್ರಿಡ್ಜ್ ತಯಾರಿಕಾ ಘಟಕಗಳಿವೆ.
ಎಲ್.ಜಿ ಯಾವುದೇ ಮಧ್ಯವರ್ತಿಗಳ ಮೂಲಕ ಕಂಪನಿಯ ಪ್ರಾಡಕ್ಟ್ ಗಳನ್ನು ಪ್ರಾದೇಶಿಕವಾಗಿ ಡಿಸ್ಟ್ರಿಬ್ಯುಟ್ ಮಾಡಲಿಲ್ಲ. ಬದಲಾಗಿ, ಕಂಪನಿಯಿಂದ ನೇರವಾಗಿ ತನ್ನ ಪ್ರಾಡಕ್ಟ್ ಗಳನ್ನು ಕಳುಹಿಸತೊಡಗಿತು. ಇದರಿಂದ ಯಾವ ಭಾಗದಲ್ಲಿ ತನ್ನ ಪ್ರಾಡಕ್ಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಹಾಗೂ ಎಷ್ಟಿದೆ ಎಂಬುದರ ಅರಿವಿನಿಂದ ಅದು ತನ್ನ ಪ್ರಾಡಕ್ಟ್ ಗಳನ್ನು ರೋಟೇಶನ್ ಮಾಡಲು ಅನುಕೂಲವಾಗುತ್ತಿತ್ತು. ಇದರಿಂದ ಹಲವಾರು ಪಟ್ಟಣ ಹಾಗೂ ಹಳ್ಳಿಗಳಲ್ಲಿಯೂ ತನ್ನ ಪ್ರಾಡಕ್ಟ್ ಗಳನ್ನು ವೇಗವಾಗಿ ತಲುಪಿಸಲು ಸಹಾಯಕವಾಯಿತು.
ಯಾವುದೇ ಬ್ಯುಸಿನೆಸ್ ನಲ್ಲಿಯೂ ರಿಸರ್ಚ್ ಅಂಡ್ ಡೆವಲಪ್ಮೆಂಟ್ ತಂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗೆ, ಪ್ರತಿ ದೇಶದಲ್ಲಿಯೂ ತನ್ನದೇ ಆದ ಆರ್&ಡಿ ಸೌಲಭ್ಯವನ್ನು ಹೊಂದಿದೆ. ಭಾರತದಲ್ಲಿ ಎಲ್.ಜಿಯ ರಿಸರ್ಚ್ & ಡೆವಲಪ್ಮೆಂಟ್ ಕೇಂದ್ರಗಳು ಇರುವುದು ಬೆಂಗಳೂರು ಹಾಗೂ ಪುಣೆಯಲ್ಲಿ.
ನೀವು ಟಿ.ವಿಗಳಲ್ಲಿ ಗೇಮ್ ಆಡುತ್ತಿದ್ದದ್ದು ನೆನಪಿದೆಯೇ..?? ಈಗಿನ ಇಂಟರ್ನೆಟ್ ಅಥವಾ ಸಿ.ಡಿಗಳನ್ನು ಹಾಕಿ ಆಡುವ ಆಟವಲ್ಲ. ಬದಲಾಗಿ ಟಿವಿಗಳಲ್ಲಿಯೇ ರಿಮೋಟ್ ಬಳಸಿ ಗೇಮ್ ಗಳನ್ನು ಆಡುವ ವ್ಯವಸ್ಥೆ ಇತ್ತು. ಈ ರೀತಿ ಟಿವಿಗಳಲ್ಲಿ ಮೊದಲು ಗೇಮ್ ಗಳನ್ನು ಅಳವಡಿಸಿದ್ದೇ ಎಲ್.ಜಿ. ಅದರಲ್ಲಿಯೂ.. ಕ್ರಿಕೆಟ್ ಪ್ರೇಮದಿಂದಾಗಿ ಕ್ರಿಕೆಟ್ ಗೇಮ್ ಅನ್ನು ಟಿ.ವಿಯ ಗೇಮ್ಸ್ ನಲ್ಲಿ ಅಳವಡಿಸಿದ ಕೀರ್ತಿಯೂ ಎಲ್.ಜಿ ಗೆ ಸಲ್ಲುತ್ತದೆ. ಟಿ.ವಿ ಮೆನುಗಳಲ್ಲಿ ಕೇವಲ ಇಂಗ್ಲಿಷ್ ಮಾತ್ರ ಬರುತ್ತಿದ್ದದ್ದನ್ನು ಬದಲಾಯಿಸಿ ಹಿಂದಿ ಹಾಗೂ ಅಲ್ಲಿಯ ಪ್ರಾದೇಶಿಕ ಭಾಷೆಗಳೂ ಬರುವಂತೆ ಮಾಡಿದ್ದು ಎಲ್.ಜಿ.
ಎಲ್.ಜಿ ತಂತ್ರಜ್ಞಾನದ ಬದಲಾವಣೆಗಳಿಗೆ ತನ್ನನ್ನು ತಾನು ಸಮರ್ಥವಾಗಿ ಓಡ್ಡಿಕೊಂಡಿದೆ. ಕೋವಿಡ್ ಸಮಯದಲ್ಲಿ ಮಾನವರಹಿತ ಸ್ಟೋರ್ ಗಳನ್ನು ಸ್ಥಾಪಿಸಿತ್ತು. ಆ ಸಮಯದಲ್ಲಿ ಸ್ಟೋರ್ ಗಳಲ್ಲಿ ಆಪರೇಟ್ ಮಾಡಲು ಯಾವುದೇ ಮನುಷ್ಯರು ಇರುತ್ತಿರಲಿಲ್ಲ. ಗ್ರಾಹಕರು ಬಂದಾಗ ಅವರು ಕ್ಯೂ.ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಒಳಬಂದು ನಂತರ ಅದರ ಮೂಲಕವೇ ತಮಗೆ ಬೇಕಾದ ಮಾಹಿತಿಗಳನ್ನು ತಮ್ಮ ಸ್ಮಾರ್ಟ್ ಫೋನ್ ಮೂಲಕ ತಿಳಿದುಕೊಳ್ಳಬಹುದಾಗಿತ್ತು. ಈ ವ್ಯವಸ್ಥೆ ಲಭ್ಯವಿದ್ದದ್ದು ಕೇವಲ ಕೊರಿಯಾದ ಎಲ್.ಜಿ ಸ್ಟೋರ್ ಗಳಲ್ಲಿ ಮಾತ್ರವೇ.
ಎಲ್.ಜಿ 2018ರಲ್ಲಿ ತಾನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಅಳವಡಿಸುವ ಐಡಿಯಾದೊಂದಿಗೆ ತನ್ನ ಪ್ರಾಡಕ್ಟ್ಗಳಲ್ಲಿ ವೈ-ಫೈ ಚಿಪ್ ಗಳ ಮೂಲಕ ಇಂಟರ್ನೆಟ್ ಆಫ್ ಥಿಂಗ್ಸ್ ಅನ್ನು ಅಳವಡಿಸಿಕೊಳ್ಳಲು 'ಥಿಂಕ್ಯೂ' ಎನ್ನುವ ತನ್ನದೇ ಆದ ಅಪ್ಲಿಕೇಶನ್ ಅನ್ನು ಬಳಸಿತು. ಇದು 'ಎಲ್.ಜಿ ಥಿಂಕ್ಯೂ' ಎಂದೇ ಹೆಸರಾಗಿದೆ.
ಇದುವರೆಗೂ 70 ಮಿಲಿಯನ್ ಗಳಿಗೂ ಹೆಚ್ಚು ಸ್ಮಾರ್ಟ್ ಟಿ.ವಿ ಗಳನ್ನು ಮಾರಾಟ ಮಾಡಿ 5 ಮಿಲಿಯನ್ ಗೂ ಹೆಚ್ಚಿನ ಅಪ್ಲೈಯನ್ಸಸ್ ಅನ್ನು ಮಾರಾಟ ಮಾಡಿದೆ. ಟೆಕ್ನಾಲಜಿಗಳು ಮಿಳಿತವಾಗಿರುವ ಈ ಸ್ಮಾರ್ಟ್ ಅಪ್ಲೈಯನ್ಸಸ್ ಹೆಚ್ಚಾಗುತ್ತಿರುವಂತೆ.. ಎಲ್.ಜಿ ಬಳಸುತ್ತಿದ್ದ ಸರ್ವರ್ ಕಾರ್ಯವೂ ಹೆಚ್ಚಾಯಿತು. ಅದಕ್ಕಾಗಿ 2016ರಲ್ಲಿಯೇ ತನ್ನ ಸಾವಿರಕ್ಕೂ ಹೆಚ್ಚಿದ ಸರ್ವರ್ ಗಳ ಸಮೇತ ಈಗ ಅದು ಅಮೆಜಾನ್ ಕ್ಲೌಡ್ ಸರ್ವಿಸ್ ಅನ್ನು ಬಳಸುತ್ತಿದೆ.
ಹಾಗೆಂದು ಎಲ್.ಜಿ ಎಲ್ಲಿಯೂ ತಪ್ಪಿಯೇ ಇಲ್ಲವಾ..?? ಅಥವಾ ತನ್ನ ಎಲ್ಲಾ ಪ್ರಾಡಕ್ಟ್ಗಳಲ್ಲಿಯೂ ಕೇವಲ ಲಾಭವನ್ನೇ ಕಂಡಿದೆಯಾ..?? ಎಂದರೆ ಇಲ್ಲ. 2021ರಿಂದ ಎಲ್.ಜಿ ತನ್ನ ಮೊಬೈಲ್ ವಿಭಾಗವನ್ನು ವಿಭಾಗವನ್ನು ಮುಚ್ಚಿದೆ. ಇದಕ್ಕೆ ಕಾರಣ ಗ್ರಾಹಕರು ಎಲ್.ಜಿ ಮೊಬೈಲ್ ಗಳ ಕುರಿತು ಕಡಿಮೆ ಆಸಕ್ತಿ ತೋರಿದ್ದು ಹಾಗೂ ಎಲ್.ಜಿ ಮೊಬೈಲ್ ಗೆ ಬರುತ್ತಿದ್ದ ಬೇಡಿಕೆ ಕೂಡ ಕಡಿಮೆ. ಏಕೆಂದರೆ, ಇದರ ಪ್ರತಿಸ್ಪರ್ಧಿಗಳೂ ಕಡಿಮೆ ಏನಿಲ್ಲ. ಸ್ಯಾಮ್ಸಂಗ್, ಒಪ್ಪೋ ಹೀಗೆ ಹಲವಾರು ದಿಗ್ಗಜರ ನಡುವೆ ತನ್ನ ಮೊಬೈಲ್ ಅನ್ನು ಸ್ಪರ್ಧೆಗೊಡ್ಡಲು ಸಾಧ್ಯವಾಗದೆ.. ತನ್ನ ಮೊಬೈಲ್ ವಿಭಾಗವನ್ನು ಮುಚ್ಚಿತು.
ಕೇವಲ ಒಂದು ಪ್ರದೇಶ ಅಥವಾ ಒಂದು ದೇಶದ ಮೇಲೆ ಮಾತ್ರ ಸೀಮಿತವಾಗದೆ, ವಿಶ್ವದಲ್ಲಿನ ತನ್ನೆಲ್ಲಾ ಗ್ರಾಹಕರಿಗೆ ಉತ್ತಮ ಸರ್ವೀಸ್ ನೀಡುತ್ತಾ.. ತನ್ನ ಎಲೆಕ್ಟ್ರಿಕ್ ಹಾಗೂ ಕೆಮಿಕಲ್ ಕಂಪನಿಯ ಮೂಲಕ ದಿನೇ-ದಿನೇ ಅಪ್ಗ್ರೇಡ್ ಆಗುತ್ತಾ.. ತನ್ನ ಬ್ಯುಸಿನೆಸ್ ಅನ್ನು ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತಿದೆ ಎಲ್.ಜಿ. ಲೈಫ್ ಅನ್ನು ಗುಡ್ ಆಗಿಸಲು ಬೇಕಾದ ಸ್ಮಾರ್ಟ್ ಡಿವೈಸ್ ಗಳನ್ನು ಹಾಗೂ ಸೇವೆಗಳನ್ನು ನೀಡುತ್ತೇವೆ ಎಂದು ಬ್ಯುಸಿನೆಸ್ ನಲ್ಲಿ ಗುಡ್ ಲೈಫ್ ಅನ್ನು ಹೊಂದಿ ನಷ್ಟದಿಂದ ಲಾಭದ ಹಾದಿಯಲ್ಲಿ ಸಾಗುತ್ತಾ ತನ್ನ ಬ್ಯುಸಿನೆಸ್ ನ ಗುಡ್ ಲೈಫ್ ಮೂಲಕವೇ ಬ್ಯುಸಿನೆಸ್ ನ ಪಾಠ ಹೇಳುತ್ತಿದೆ ಎಲ್.ಜಿ.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ