ಸೋಮವಾರ, ಏಪ್ರಿಲ್ 20, 2026

ತೆರೆ ಸರಿಯಿತು (ಪುಸ್ತಕ ಯಾನ - 281)


ಪುಸ್ತಕದ ಶೀರ್ಷಿಕೆ : ತೆರೆ ಸರಿಯಿತು

ಲೇಖಕರು : ನುಗ್ಗೇಹಳ್ಳಿ ಪಂಕಜ

ಪ್ರಕಾಶಕರು : ಇಂದಿರಾ ಪ್ರಕಾಶನ

ಪ್ರಥಮ ಮುದ್ರಣ : 1985

ದ್ವಿತೀಯ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 132

ಬೆಲೆ : 70 ರೂ.


ಇದು ನಾನು ಓದಿದ ನುಗ್ಗೇಹಳ್ಳಿ ಪಂಕಜ ಅವರ ಮೊದಲ ಕಾದಂಬರಿ. ಎನ್. ಪಂಕಜ ಹಾಗೂ ನುಗ್ಗೇಹಳ್ಳಿ ಪಂಕಜ ಇಬ್ಬರೂ ಒಬ್ಬರೇ ಎಂಬ ನನ್ನ ಸಂದೇಹಕ್ಕೆ ಈ ಪುಸ್ತಕದಲ್ಲಿ ಉತ್ತರವೂ ಇದೆ. "ಈ ಹಿಂದೆ ಎನ್. ಪಂಕಜ ಎಂಬ ನಾಮಧೇಯದಲ್ಲಿ ಬರೆಯುತ್ತಿದ್ದೆ. ಚಲನಚಿತ್ರಗಳಾಗಿರುವ 'ಸಿಪಾಯಿ ರಾಮು' ಮತ್ತು 'ಗಗನ' ಆ ಹೆಸರಿನಲ್ಲಿಯೇ ಬಂದಿರುವುದು. ಆದರೆ, ಈಗ ಕಾರಣಾಂತರಗಳಿಂದ ನುಗ್ಗೇಹಳ್ಳಿ ಪಂಕಜ ಎಂಬ ನಾಮಧೇಯ." ಎಂದು ಅವರೇ ಉಲ್ಲೇಖಿಸಿದ್ದಾರೆ. 


ನುಗ್ಗೇಹಳ್ಳಿ ಪಂಕಜ ಅವರ ಕಾದಂಬರಿಯ ಶೈಲಿ ವಿಭಿನ್ನವಾಗಿರುವುದು ಅನುಭವಕ್ಕೆ ಬಂದಿತು. ಇದರಲ್ಲಿ ಹಲವಾರು ವಿಚಾರಗಳು.. ಅನುಭವಗಳಾಗಿ ಓದುಗರ ಜ್ಞಾನಾರ್ಜನೆಗೂ ಉಪಯುಕ್ತವಾಗುವಂತಿವೆ. ಎಲ್ಲಿಯೂ ಬೋರಾಗದಂತೆ ಅಲ್ಲಲ್ಲಿ ಹಾಸ್ಯದ ರೀತಿಯ ಸಂಭಾಷಣೆಗಳು ಮನಸ್ಸಿಗೆ ಮುದ ನೀಡುತ್ತವೆ. ಭಾವನೆಗಳಿಗಿಂತ ಹೆಚ್ಚಾಗಿ ವಾಸ್ತವಕ್ಕೆ ಮನ್ನಣೆ ನೀಡಿದ್ದಂತೆನಿಸಿತು ಈ ಕಾದಂಬರಿ. 


ಲೋಕೇಶ್ ತನ್ನ ಮಧುರ ನೆನಪಿನಲ್ಲಿ ಮುಳುಗಿದ್ದಾಗಲೆಲ್ಲಾ ಆತನ ಮನಃಶಾಂತಿಯನ್ನು ಆಗಾಗ ಕೆದಕುತ್ತಿದ್ದ ಆ ವ್ಯಕ್ತಿ ಸಜೀವವಾಗಿ ಕಣ್ಮುಂದೆ ಬಂದು ನಿಂತಾಗ ಮೊದಲಿಗೆ ಆಘಾತವಾಗಿತ್ತು. ಆಕೆ ತನುಶ್ರೀ. ಆಕೆಗೆ ಆತ ಪರಿಚಿತನಲ್ಲ. ಹಾಗೆಯೇ ಆತನೂ ಆಕೆಯನ್ನು ನೇರವಾಗಿ ನೋಡಿದ್ದು ಅದೇ ಮೊದಲ ಬಾರಿಗೆ. ಪರಿಚಯ ನಂತರ ಸ್ನೇಹವಾಗಿ ಪ್ರೇಮಕ್ಕೂ ತಿರುಗಿತಾದರೂ.. ನೆನಪು ಮಾತ್ರ ಹಿತಕರವಾಗಿರಲಿಲ್ಲ. ಲೋಕೇಶನ ಹೃದಯವನ್ನು ಕೊರೆಯುತ್ತಿದ್ದ ವೇದನೆ ಬೇರೆಯೇ ಇತ್ತು.


ಒಮ್ಮೆ ಥಿಯೇಟರಿನ ಎದುರಿನಲ್ಲಿ ಕಲಾತ್ಮಕ ಸಾಮಾನುಗಳನ್ನು ಮಾರುತ್ತಿದ್ದವರಿಗೆ ಸಹಾಯ ಮಾಡಬೇಕೆಂದುಕೊಂಡಾಗ ಒಂದಾದವರು. ಕೇರಳದ ಕಡೆಯ ಕಲೆಯನ್ನು, ಮಧುರೆಯ ಪಕ್ಕದ ಜನರುಗಳು ರೂಢಿಸಿಕೊಂಡಿದ್ದರು. ಎಮ್ಮೆಯ ಕೊಂಬುಗಳಿಂದ ಮಾಡಲ್ಪಡುವ ಸುಂದರ ಕಲಾಕೃತಿಗಳನ್ನು ತಮ್ಮ ಮುಂದಿನ ಪೀಳಿಗೆಗೂ ಕಲಿಸುತ್ತಾ.. ಮಾರುತ್ತಿದ್ದರು. ಓದು-ಬರಹ ಕಲಿತಿಲ್ಲದವರು. ಹೆಚ್ಚಿನ ಬಂಡವಾಳ ಬೇಕಾಗಿಲ್ಲದ ಅದಕ್ಕೆ, ಹೆಚ್ಚಿನ ಲಾಭ ಪಡೆದುಕೊಳ್ಳುವ ಬುದ್ಧಿವಂತಿಕೆಯೂ ಅವರಲ್ಲಿರಲಿಲ್ಲ. ಅಲ್ಲದೇ ಹಿಂಡುಹಿಂಡಾಗಿ ವಾಸಿಸುತ್ತಿದ್ದ ಅವರ ಪರಿಸರ ದೇವರಿಗೇ ಪ್ರೀತಿ.


ಇಂತಹವರಿಗೆ ಸಹಾಯ ಮಾಡಬೇಕೆಂದುಕೊಂಡು ಬಂದವರಲ್ಲಿ ರಾಮನಾಥ ಹಾಗೂ ಲೋಕೇಶ ಸಮಾನಮನಸ್ಕರಾಗಿ ಪರಿಚಿತರಾದರು. ಇಬ್ಬರ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸ. ಇಳಿ ವಯಸ್ಸಿನಲ್ಲಿದ್ದ ರಾಮನಾಥ ಯುವಕ ಲೋಕೇಶನಷ್ಟು ಚಾಕಚಕ್ಯತೆ ನನಗೆ ಬರಲಿಲ್ಲವೆಂದು ನೊಂದುಕೊಳ್ಳುತ್ತಿದ್ದ. ಲೊಕೇಶನಿಗೆ ಅದೆಲ್ಲವೂ ದೈವದತ್ತವಾಗಿ ಬಂದ ವರವಲ್ಲ. ಬದಲಾಗಿ, ಜೀವನ ಕಲಿಸಿದ ಪಾಠಗಳು. ಜೀವನದುದ್ದಕ್ಕೂ ಎದುರಾದ ಸಂಕಷ್ಟಗಳು ರೂಪಿಸಿದ ವ್ಯಕ್ತಿತ್ವ. ಅವನು ಮಾಡಿದ ಕೈಕಸುಬುಗಳು ಒಂದೆರಡಲ್ಲ.


ಹಣದ ಹೊಳೆಯನ್ನೇ ಕಾಣಬಹುದೆಂದು ಗಂಟುಮೂಟೆ ಕಟ್ಟಿ ಮುಂಬೈ ಸೇರಿದವರಲ್ಲಿ ಲೋಕೇಶನ ತಂದೆ-ತಾಯಿಗಳೂ ಇದ್ದರು. ಅವರು ಅಲ್ಲಿನ ಬದುಕಿಗೆ ಒಗ್ಗದೇ ಬೇಗನೆ ಜಗತ್ತನ್ನು ತ್ಯಜಿಸಿದರು. ಅನಾಥನಾದ ಲೋಕೇಶ್ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಗಳಿಸಬೇಕೆಂದು ಕನಸು ಕಂಡನು. ಅಲ್ಲದೇ ಅದಕ್ಕಾಗಿ ಶ್ರಮಿಸಿದನು. ಸಿಕ್ಕಿದ್ದ ಸಂಸ್ಕಾರವಾದ ಫಲವಾಗಿ ಅಡ್ಡದಾರಿ ಹಿಡಿಯದೆ, ಕೆಟ್ಟ ಕೆಲಸಗಳನ್ನು ಮಾಡದೆ, ಕೆಟ್ಟ ವಿದ್ಯೆಗಳನ್ನು ಕಲಿಯದೆ, ಯಾವ ಆಮಿಷಕ್ಕೂ ಒಳಗಾಗದೆ.. ಮನೆಮನೆಗೆ ಹಾಲು, ಪತ್ರಿಕೆಗಳನ್ನು ತಲುಪಿಸುವುದು, ಡಬ್ಬಾವಾಲಾ ಹೀಗೆ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಬೇರೆಬೇರೆಯವಾರ ಕೈಕೆಳಗೆ ಕೆಲಸ ಮಾಡುತ್ತಾ ಅವರ ಸಂಪರ್ಕದಿಂದ ಬೆಂಗಳೂರಿಗೆ ತಲುಪಿದ್ದ.


ಕಲಾತ್ಮಕ ವಸ್ತುಗಳ ಮಾರಾಟಕ್ಕೆ ಅರಬ್ ಜನರನ್ನು ಹಿಡಿಯೋಣವೆಂದು ರಾಮನಾಥನಿಗೆ ಹೇಳಿದಂತೆ.. ಲೀಲಾಜಾಲವಾಗಿ ಮಾಡಿಯೂ ಬಿಟ್ಟ. ನಂತರ, ಇಬ್ಬರೂ ಅರಬ್ ದೇಶಕ್ಕೂ ಹಾರಿಬಿಟ್ಟರು. ಲೋಕೇಶ ಅಲ್ಲಿ ತಾವು ತೊಡಗಿರುವ ಮಾರ್ಗ ಸರಿಯಿಲ್ಲವೆಂದರಿತು.. ಸಾಕಷ್ಟು ಹಣ ಮಾಡಿದ್ದರಿಂದ ಇದೆಲ್ಲವನ್ನು ತೊರೆದು ತಾಯ್ನಾಡಿಗೆ ಹೋಗೋಣವೆಂದು ಹೇಳಿದರೂ ರಾಮನಾಥ ಮಾತ್ರ ಒಪ್ಪಲಿಲ್ಲ. ಆಗಾಗ ರಾಮನಾಥ ಏನನ್ನೋ ನೆನೆದು ವ್ಯಥೆಪಡುವಂತೆ ಕಂಡರೂ ಬಾಯಿ ಬಿಡುತ್ತಿರಲಿಲ್ಲ. ಅನಾರೋಗ್ಯದ ಕಾರಣದಿಂದ ಸಾವಿನ ಮನೆಯ ಬಾಗಿಲು ತಟ್ಟಿದ ರಾಮನಾಥನನ್ನು ಬಿಟ್ಟು ಹೊರಡುವ ಸಂದಿಗ್ಧ ಪರಿಸ್ಥಿತಿ ಎದುರಾಯಿತು ಲೋಕೇಶನಿಗೆ. ಆತನ ಪಾಲಿನ ಹಣವನ್ನು ಆತನ ಮಗಳಿಗೆ ಕೊಡುವುದಾಗಿ ಹೇಳಿ ಹಿಂದಿರುಗಿದನಾದರೂ. ತನ್ನದೇ ಬದುಕಿನ ಜಂಜಾಟದಲ್ಲಿ ಸಿಲುಕಿದ. ರಾಮನಾಥ ಸತ್ತನೆಂದೇ ಭಾವಿಸಿ ಮತ್ತೆ ಅಲ್ಲಿಗೆ ಪತ್ರ ಬರೆಯಲು ಹೋಗಲಿಲ್ಲ. ಎಷ್ಟಾದರೂ ವಾಸ್ತವಕ್ಕೆ ಬೆಲೆ ಕೊಡುತ್ತಾ ಸಾಗಿದ್ದ ಮನುಷ್ಯ.


ಅಲ್ಲಿಂದ ಬಂದ ಲೋಕೇಶ್ ಮುಳುಗಿ ಹೋಗಿದ್ದ ಫ್ಯಾಕ್ಟರಿಯೊಂದನ್ನು ಕೊಂಡಿದ್ದ. ಹೀಗೆ ಇನ್ನಷ್ಟು ಫ್ಯಾಕ್ಟರಿಗಳನ್ನು ತೆಗೆದುಕೊಂಡು ನಡೆಸುತ್ತಿದ್ದ. ಹಾಗೆಂದು, ಆತ ಹಣವನ್ನು ಗಂಟು ಮಾಡಿಟ್ಟುಕೊಂಡವನಲ್ಲ. ಬದಲಾಗಿ ಸಮಾಜಮುಖಿ ಕಾರ್ಯಕ್ಕೆ, ಕಷ್ಟದಲ್ಲಿರುವವರಿಗೆ ನೆರವಾಗಲು ಸಹಾ ಬಳಸುತ್ತಿದ್ದ.


ಆತನ ಮನೆಯಲ್ಲಿ ದೂರದ ಸಂಬಂಧಿ ಗುಂಡಣ್ಣ ಹೆಂಡತಿ ಮಕ್ಕಳೊಂದಿಗೆ ಬಂದು ಠಿಕಾಣಿ ಹೂಡಿದ್ದ. ಆತ ಓಡಿಸಿದರು ಅಲ್ಲಿಂದ ಹೋಗುವಂತಿರಲಿಲ್ಲ. ತನ್ನ ಹೆಣ್ಣು ಮಕ್ಕಳಲ್ಲಿ ಯಾರನ್ನಾದರೂ ಲೋಕೇಶನಿಗೆ ಕೊಟ್ಟು ವಿವಾಹ ಮಾಡಬೇಕೆಂಬುದು ಆತನ ದುರಾಲೋಚನೆ. ಆದರೆ, ಲೋಕೇಶ ಅದಕ್ಕೆ ಬಗ್ಗಲಿಲ್ಲ. ಒಮ್ಮೆ ಮನೆ ಬಿಟ್ಟು ಓಡಿಸಲು ನೋಡಿದಾಗ ಅದನ್ನು ಕೈಬಿಡುವಂತೆ ಮಾಡಿದ ಗುಂಡಣ್ಣ. ಆತ ಹೇಳಿದ್ದ ಸತ್ಯ ಲೋಕೇಶನ ಬದುಕನ್ನೇ ಅಲ್ಲಾಡಿಸುವಂತಿತ್ತು. "ರಾಮನಾಥ ಸತ್ತಿರಲಿಲ್ಲ. ರಾಮನಾಥ ಸಾಯುವಂತಾದಾಗಲೂ ನೀನು ಸರಿಯಾಗಿ ನೋಡಿಕೊಳ್ಳಲಿಲ್ಲ. ಜೊತೆಗೆ, ಆತನಿಂದ ದುಡಿಸಿಕೊಂಡ ಹಣವನ್ನೆಲ್ಲ ನೀನೇ ಹೊತ್ತುಕೊಂಡು ಓಡಿ ಬಂದೆ. ಈ ಸತ್ಯ ಇಲ್ಲಿ ತಿಳಿದರೆ ನಿನ್ನ ಗಣ್ಯತೆ ಏನಾಗಬಹುದು" ಎಂದು ಬೆದರಿಸಿದ್ದ. ಆತನಿಂದ ದೂರ ಉಳಿಯಲು ತಾನೇ ಬೇರೆಡೆ ನೆಲೆಸಿದ ಲೋಕೇಶ್.


ಇತ್ತ ತನುಶ್ರೀಯ ಸ್ನೇಹವನ್ನು ಸಂಪಾದಿಸಿದ. ಆಕೆ ಈಗ ಇದ್ದದ್ದು ಗೆಳತಿ ಚಂದ್ರ ಹಾಗೂ ಆಕೆಯ ತಾಯಿಯ ಜೊತೆಗೆ. ಪೇಯಿಂಗ್ ಗೆಸ್ಟ್ ಆಗಿ. ಚಂದ್ರಳ ತಾಯಿಗೂ ಲೋಕೇಶ್, ತನುಶ್ರೀ ಮೇಲೆ ಅನುರಾಗ ಹೊಂದಿರುವುದು ತಿಳಿಯಿತು. ಲೋಕೇಶ ಹೋಗಿ ಬಂದು ಮನೆಯವನಂತೆಯೇ ಆಗಿಬಿಟ್ಟಿದ್ದ. ಆದರೆ, ಆತನಿಗೆ ತನುಶ್ರೀಯ ಹಿಂದಿನ ಬದುಕು ತಿಳಿದಿರಲಿಲ್ಲ. ಈಗ ಆಕೆ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ತನ್ನವರನ್ನೆಲ್ಲ ಬಿಟ್ಟು ಆಕೆ ಚಂದ್ರಳ ಮನೆಯಲ್ಲಿ ನೆಲೆಸಿದ್ದೇಕೆ..?


ಲೋಕೇಶನ ಮೇಲೆ ತನುಶ್ರೀ ಒಳ್ಳೆಯ ಅಭಿಪ್ರಾಯವನ್ನೇ ಮೂಡಿಸಿಕೊಂಡಿದ್ದ ಸಂದರ್ಭದಲ್ಲಿ.. ಆತನೇ ರಾಮನಾಥನ ಜೊತೆಯಲ್ಲಿದ್ದವನು ಹಾಗೂ ಆತನ ಹಣ ಕದ್ದವನು ಎಂದು ಆಕೆಗೆ ತಿಳಿಸಿದವರಾರು..? ಅದು ಗುಂಡಣ್ಣನಂತೂ ಅಲ್ಲ. ಹಾಗಾದರೆ, ಮತ್ತಾರು..?


ವಕೀಲರ ಮೂಲಕ ಆಕೆಯ ಹಣವನ್ನು ಆಕೆಗೆ ತಲುಪಿಸಲು ಲೋಕೇಶ್ ಪ್ರಯತ್ನಿಸಿದರೂ.. ಆಕೆ ತನ್ನ ತಂದೆಯ ಆಪ್ತ ಸ್ನೇಹಿತರಾದ ವಕೀಲರನ್ನು ಸಂದೇಹಿಸಿದ್ದೇಕೆ..?


ರಾಮನಾಥ್ ಸತ್ತಿರಲಿಲ್ಲವೆಂದು ಗುಂಡಣ್ಣನಿಗೆ ತಿಳಿದದ್ದೇಗೆ.. ಲೋಕೇಶ್ ಅದಾದ ನಂತರವೂ ಎಚ್ಚೆತ್ತುಕೊಳ್ಳದೆ, ತಡ ಮಾಡಿದ್ದೇಕೆ..?


ರಾಮನಾಥ್ ಹಾಗೂ ತನುಶ್ರೀಯರ ಭೇಟಿ ಹೇಗಾಯಿತು.. ರಾಮನಾಥ್ ಜೈಲಿಗೆ ಹೋಗಿದ್ದೇಕೆ.. ತನ್ನ ಬದುಕಿನ ಚಿತ್ರಣವನ್ನು ಲೋಕೇಶನಿಂದ ಮುಚ್ಚುಮರೆ ಮಾಡಿದ್ದೇಕೆ..? 


ಲೋಕೇಶ್ ತನುಶ್ರೀಯನ್ನು ಪ್ರೀತಿಸಿದ್ದು ಸ್ವಾರ್ಥಕ್ಕಾ ಅಥವಾ ನಿಜವಾಗಿಯೂ ಅದು ಪ್ರೀತಿಯಾ..?


"ತೆರೆ ಸರಿಯಿತು" ಎಂಬ ಕಾದಂಬರಿಯ ಶೀರ್ಷಿಕೆ ಕಂಡಾಗ ಇದು ಸುಖಾಂತ್ಯ ಇರಬಹುದು ಎಂದು ಊಹಿಸಿದರೂ ಈ ಕಾದಂಬರಿ ಎರಡು ಸಾಧ್ಯತೆಗಳನ್ನು ತೆರೆದಿಡುತ್ತದೆ. ತೆರೆ ಸರಿದ ನಂತರ ಕಂಡ ಸತ್ಯಾಸತ್ಯತೆಗಳೇನು, ಅಲ್ಲಿನ ಚಿತ್ರಣ ಹೇಗಿತ್ತು..? ಎಲ್ಲವನ್ನೂ ತಿಳಿಯಲು ಓದಿ "ತೆರೆ ಸರಿಯಿತು" ಕಾದಂಬರಿಯನ್ನು.


ಕಾದಂಬರಿಯಲ್ಲಿ ಹಲವಾರು ದೇಶಗಳ ವಿಚಾರಗಳನ್ನು ಲೇಖಕಿ ಕಟ್ಟಿಕೊಡುತ್ತಾರೆ. ಸಾಹಿತ್ಯದ ವಿಚಾರಗಳನ್ನು ಸಹಾ.. ಶೇಕ್ಸ್ಪಿಯರ್ ನ ಹೆನ್ರಿ ಫಿಫ್ತ್ ನಾಟಕ, ಎರಾಲ್ಡ್ ಫಿಸ್ ಎಂಬ ಮಹತ್ವಾಕಾಂಕ್ಷಿ ಆಂಗ್ಲ ನಟನ ಸಾಧನೆಯ ವಿಚಾರ, ಪೃಥ್ವಿ ವಲ್ಲಭ ಸಿನಿಮಾ, ಫಿಲಿಪ್ಪೈನ್ಸ್ ನವರ ಬೊಂಬು ನೃತ್ಯ, ಗಲ್ಫ್ ಕಂಟ್ರಿಗಳಲ್ಲಿನ ಹೆಣ್ಣು ಮಕ್ಕಳ ಬದುಕು ಹೀಗೆ ಸುಮಾರಷ್ಟು ವಿಚಾರಗಳು ಕಾದಂಬರಿಯ ನಡುವೆ ಲೋಕೇಶನ ಅನುಭವದ ಮಾತುಗಳಾಗಿ ಕಾಣುತ್ತವೆ.


ಇಲ್ಲಿನ ನಾಯಕಿ ತನುಶ್ರೀ ಶ್ರೀಮಂತೆಯಾದರೂ.. ಆದರ್ಶವಾದಿ ಹಾಗೂ ಸರಳ ಜೀವಿ. ಜೊತೆಗೆ ಎಲ್ಲವನ್ನು ಆಲೋಚಿಸಿ ಮಾಡುವವಳು. ಆದರೂ.. ಅಲ್ಲೊಮ್ಮೆ ಇಲ್ಲೊಮ್ಮೆ ಯಾಮಾರುವ ಹಾಗೂ ದುಡುಕುವ ವಿಚಾರಗಳನ್ನು ಚಿತ್ರಿಸಿದ್ದಾರೆ. ಯಾರೂ ಪರಿಪೂರ್ಣರಲ್ಲ ಎನ್ನುವಂತಹಾ ಪಾತ್ರಗಳಿವೆ. ತನುಶ್ರೀ ಹಾಗೂ ಲೋಕೇಶರ ಸಂಭಾಷಣೆಗಳಲ್ಲಿ ಸಿನಿಮಾ ನೋಡಿ ಪಾತ್ರಗಳನ್ನು ವಿಶ್ಲೇಷಿಸುವಾಗ ಮನೋವೈಜ್ಞಾನಿಕ ನೆಲೆಯಿಂದ ಚರ್ಚಿಸುತ್ತಾರೆ. ಈ ಚರ್ಚೆ ಪ್ರೌಢವಾಗಿರುವವರ ಮಾತುಗಳಲ್ಲಿರುವಂತೆ ಕಂಡುಬಂದಿತು. ತನುಶ್ರೀಯ ಓದಿನ ಮುಂದೆ ತಾನು ಕೀಳಿರಿಮೆಯಿಂದ ಬಳಲಬಾರದು ಎಂದು ಲೋಕೇಶ್ ಓದುವುದನ್ನು ರೂಢಿಸಿಕೊಳ್ಳಲು ಹೊರಡುವ ಚಿತ್ರಣವೂ ಇದೆ. ಓದಿನ ಮಹತ್ವವನ್ನು ಸಹಾ ತಿಳಿಯಬಹುದು. ಈ ಕಾದಂಬರಿಯ ಓದು ವಿಭಿನ್ನವಾದ ಅನುಭವವನ್ನಂತೂ ನೀಡಿತು. ಕಥಾ ನಿರೂಪಣೆ ಹಾಗೂ ಶೈಲಿ ವಿಭಿನ್ನವಾದರೂ.. ತೀರಾ ಸರಾಗವಾಗಿ ಓದುವುದಕ್ಕಿಂತ ಸಮಯ ಬೇಡುತ್ತದೆ ಎನ್ನಿಸಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ