ಪುಸ್ತಕದ ಶೀರ್ಷಿಕೆ : ಕಂಕಣಭಾಗ್ಯ
ಲೇಖಕರು : ಶ್ರೀಲಕ್ಷ್ಮಿ
ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ
ಪ್ರಥಮ ಮುದ್ರಣ : 2007
17 ಕಾದಂಬರಿಯನ್ನು ಬರೆದಿರುವ ಶ್ರೀಲಕ್ಷ್ಮಿಮೇಡಂ ಅವರ ನಾನು ಓದುತ್ತಿರುವ ಅವರ ಮೊದಲ ಕಾದಂಬರಿ.
ಇದು ಪ್ರೇಮದಾರತಿ ಹಾಗೂ ಕಂಕಣಭಾಗ್ಯ ಎಂಬ ಎರಡು ಸಂಯುಕ್ತ ಕಾದಂಬರಿಗಳ ಸಂಪುಟ. ನಾನೀಗ ಪರಿಚಯಿಸಲು ಹೊರಟಿರುವುದು ಕಂಕಣಭಾಗ್ಯ ಕಾದಂಬರಿಯನ್ನು. ಕಾದಂಬರಿಯ ಶೀರ್ಷಿಕೆ ನೋಡಿದಾಗ ಇದು ವಿವಾಹಕ್ಕೆ ಸಂಬಂಧಿಸಿದ ಕಾದಂಬರಿ ಎಂಬ ಊಹೆ ಇದ್ದರೂ.. ಇದು ಕಂಕಣವನ್ನು ಕೂಡಿಸಲು, ವಧು-ವರರನ್ನು ತೋರಿಸುವ ವೇದಿಕೆಯ ಹಿಂದಿನ ಕಥೆ.
ಮ್ಯಾಟ್ರಿಮೋನಿಯಲ್ ಬ್ಯೂರೋ ನಡೆಸುತ್ತಿದ್ದ ಸಾವಿತ್ರಮ್ಮನವರಿಗೆ ವಿವಿಧ ರೀತಿಯ ವಧು-ವರರ ಹಾಗೂ ಅವರ ತಂದೆ-ತಾಯಿಗಳ ಹಾಗೂ ಮನೆಯವರ ಪರಿಚಯವಾಗುತ್ತಿತ್ತು. ಕಾದಂಬರಿಯ ಆರಂಭದಲ್ಲಿ ಒಂದು ಪ್ರಸಂಗವಿದೆ. ದರ್ಪ, ಅಹಂಕಾರ, ದುರಾಸೆ ತುಂಬಿದ ಹಾಗೂ ನಾಚಿಕೆಯಿಲ್ಲದೆ ಇಷ್ಟುದ್ದ ಪಟ್ಟಿ ಕೊಡುವ ತಾಯಿ ತನ್ನ ಒಬ್ಬನೇ ಮಗನಿಗೆ ವಿವಾಹ ಮಾಡಲು ಹವಣಿಸುತ್ತಿರುತ್ತಾರೆ. ಅವರಿಗೆ ಆಸ್ತಿ-ಪಾಸ್ತಿಯ ಶ್ರೀಮಂತಿಕೆ ಬಹಳವಿದ್ದರೂ ಬರುವ ಕೆಲಸದವಳ ಸ್ಥಾನದಲ್ಲಿರಬೇಕೆಂದು ಬಯಸುತ್ತಿರುತ್ತಾರೆ. ಶ್ರೀಮಂತಿಕೆ ಇದ್ದರೂ ಮನಸ್ಸಿನಲ್ಲಿ ತೀರಾ ಬಡತನವನ್ನೇ ತುಂಬಿಕೊಂಡಿರುವ ಅವರ ಚಿತ್ರಣ ಇಲ್ಲಿದೆ. ಅಟ್ಟಹಾಸದ ತಾಯಿ, ದುರ್ಬಲ ಮಗನ ನಡುವೆ ಈ ಬಾನಿಯಲ್ಲಿ ಬಾಳುವ ಹುಡುಗಿ ಖಂಡಿತ ಸುಖವಾಗಿರಲಾರಳು ಎಂದು ಯೋಚಿಸಿದರಾದರೂ.. ಅವರು ಮತ್ತೆ ಏನನ್ನೂ ಮಾತನಾಡುವುದಿಲ್ಲ. ಇದು ಅವರ ವೃತ್ತಿಪರತೆಗೆ ಬೇಕಾದ ಮೌನದ ಅಗತ್ಯತೆಯನ್ನು ಲೇಖಕಿ ಸೂಕ್ಷ್ಮವಾಗಿ ತೆರೆದಿಡುತ್ತಾರೆ.
ಸರೋಜಮ್ಮನವರದ್ದು ಆರು ಜನ ಮಕ್ಕಳಿದ್ದ ದೊಡ್ಡ ಕುಟುಂಬ. ಅವರೇ ಹಿರಿಯ ಮಗಳು. ತಂದೆ ಪ್ರೈಮರಿ ಸ್ಕೂಲ್ ಮೇಷ್ಟ್ರಾಗಿದ್ದವರು. ಕುಟುಂಬ ದೊಡ್ಡದಾಗಿದ್ದರೂ.. ಆದಾಯ ಹೆಚ್ಚಿರದಿದ್ದದರಿಂದ ಅಪ್ಪನ ರೇಗಾಟ ಹಾಗೂ ಅಮ್ಮನ ಅಸಹಾಯಕತೆ ಅವರಿಗೆ ದುಡಿಯಲೇಬೇಕು ಎನಿಸುವಂತೆ ಮಾಡಿತ್ತು. ಹಾಗಾಗಿ, ತನ್ನ ಅತ್ತೆಯ ಮಗನನ್ನು ನಿರಾಕರಿಸಿ, ಮುಂದೆ ಓದಿ ಚಿನ್ನದ ಪದಕದೊಂದಿಗೆ ರ್ಯಾಂಕ್ ಪಡೆದಿದ್ದವರಿಗೆ ಸರ್ಕಾರಿ ಕೆಲಸವೂ ಸಿಕ್ಕಿತ್ತು.
ತಮ್ಮ ಶಾಮುವಿಗೆ ಓದಿಸಿದರು. ಓದು ಮುಗಿಸಿದವನಿಗೆ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಕೆಲಸ ಸಿಕ್ಕಿ, ಮನೆಯಿಂದ ವಿಮುಖನಾದ. ಮನೆಯವರಿಗೆ ಹೇಳದೆ, ಕೇಳದೆ ಮದುವೆ ಮಾಡಿಕೊಂಡು ಬೇರೆ ಮನೆ ಮಾಡಿಕೊಂಡ.
ತಂಗಿ ಸರಸು ತಾಯಿಯ ತಮ್ಮನೇ ಆಗಿದ್ದ ತನಗಿಂತ 12 ವರ್ಷ ದೊಡ್ಡವನಾದ ವಿಠಲನ ಜೊತೆಗೆ ವಿವಾಹಕ್ಕೆಮುಂದಾದಳು. ಸಾವಿತ್ರಿಗೆ ಮದುವೆಯಾಗದೇ, ಸರಸುವಿನ ಮದುವೆಯೇ ಎನ್ನುವಾಗ ಸಾವಿತ್ರಿಯೇ ಒಪ್ಪಿಸಿ ವಿವಾಹ ಮಾಡಿದ್ದಳು.
ಇದಾದ ನಂತರ ಅವರ ಮನೆಯಲ್ಲಿ ವರಸೆಯೇ ಬದಲಾಗಿತ್ತು. "ಮನೆಯಲ್ಲಿ ಗಂಡು ಮಗನಿದ್ದಂತೆ ಸಾವಿತ್ರಿ" ಎಂದು ಹೊಗಳುವ ತಂದೆ. "ಆಕೆಯೇ ಎಲ್ಲವನ್ನೂ ಮಾಡುತ್ತಾಳೆ" ಎನ್ನುತ್ತಿದ್ದ ತಾಯಿ. ತಂಗಿ ಸರಸು ಬಂದು ಚಿನ್ನದ ಬಳೆಗಾಗಿ ಬೇಡಿಕೆ ಇಟ್ಟಾಗ ತಿರಸ್ಕರಿಸಿದವಳಿಗೆ ತವರಿನಲ್ಲಿನ ಚುಚ್ಚುಮಾತು ಕೇಳಿ ಆಘಾತವಾಗಿತ್ತು. ಆಗ ಮದುವೆಗೆ ಮನಸ್ಸು ಮಾಡಿದರೂ ಕಂಕಣಭಾಗ್ಯ ಕೂಡಿ ಬರಲಿಲ್ಲ.
ತಂಗಿ ಕಾವೇರಿ ಗೆಳತಿಯ ಅಣ್ಣನನ್ನೇ ಪ್ರೀತಿಸಿ ಶ್ರೀಮಂತ ಮನೆತನಕ್ಕೆ ಸೊಸೆಯಾಗಿ ಹೋದಳು. ಅದಕ್ಕಾಗಿ ಮಾಡಿದ ಸಾಲವೂ ತಲೆಯ ಮೇಲೇರಿತು. ವತ್ಸಲಾ ಮದುವೆಯನ್ನು ಏರ್ಪೋರ್ಟ್ ಅಧಿಕಾರಿಯೊಂದಿಗೆ ಮಾಡಿದಳು. ಆಕೆ ದೂರದೂರಿಗೆ ಹೊರಟಳು. ತಮ್ಮ ಕೇಶವನ ಮದುವೆಯೂ ಆಯಿತು.
ಎಲ್ಲರೂ ಅವರವರ ಸಂಸಾರದೊಂದಿಗೆ ಸುಖವಾಗಿದ್ದರು. ತಂದೆ-ತಾಯಿಗಳು ಹೋದ ನಂತರ ತನ್ನ ಸ್ನೇಹಿತೆ ಭಾರತಿ ಮನೆಯಲ್ಲಿಯೇ ವಾಸವಿದ್ದಳು. ಎಲ್ಲರೂ ಇದ್ದರೂ ಅವಳ ಪಾಲಿಗೆ ಯಾರೂ ಇರಲಿಲ್ಲ. ಔಪಚಾರಿಕವಾಗಿಯೂ ತಮ್ಮ ಮನೆಗೆ ಬಂದಿರು ಎಂದು ಕರೆಯದ ತಮ್ಮಂದಿರು. ಶ್ರೀಮಂತ ಮನೆತನದ ಸೊಸೆ ಕಾವೇರಿಯ ಧಿಮಾಕು, ದೂರದೂರಿನ ವತ್ಸಲ. ಸರಸು ಕರೆದರೂ ಅವಳ ದಾಕ್ಷಿಣ್ಯಕ್ಕೆ ಸಿಲುಕುವ ಪರಿಸ್ಥಿತಿ. ಅದನ್ನು ನಿರಾಕರಿಸಿದಳು ಸಾವಿತ್ರಿ. ಭಾರತಿ ಹೃದಯದ ತೊಂದರೆಯಿಂದ ತೀರಿಕೊಂಡಾಗ ಅವಳ 18 ವರ್ಷದ ಮಗಳು ಪ್ರಿಯದರ್ಶಿನಿಯನ್ನೇ ತನ್ನ ಮಗಳೆಂದುಕೊಂಡಳು. ಪ್ರಿಯದರ್ಶಿನಿಗೆ ಚಿಟ್ ಫಂಡ್ ನಲ್ಲಿ ಕೆಲಸವಿತ್ತು. ಬ್ಯಾಂಕ್ ಅಥವಾ ಎಲ್.ಐ.ಸಿಯ ಉದ್ಯೋಗಕ್ಕಾಗಿ ಪರೀಕ್ಷೆಗೆ ಸಿದ್ಧವಾಗುತ್ತಿದ್ದಳು. ಮಗಳ ಹಾಗೆಯೇ ಹೊಂದಿಕೊಂಡಿದ್ದಳು.
ಸಾವಿತ್ರಿ ರಿಟೈರ್ಡ್ ಆದ ನಂತರ ಇದ್ದಕ್ಕಿದ್ದಂತೆಯೇ ಇಷ್ಟು ದಿನ ಇಲ್ಲದ ನೆಂಟರು ಹುಟ್ಟಿಕೊಂಡಿದ್ದರು. ಸರಸುವಂತೂ ಆಗಾಗ ತನ್ನ ಮಗನನ್ನೇ ನಿನ್ನ ಮಗ ಎಂದುಕೋ ಎನ್ನುತ್ತಾ ಸಂಸಾರಭಾರವನ್ನು ಹೊರಿಸಲು ಬರುತ್ತಿದ್ದಳು. ಸುಮ್ಮನೆ ಏನು ಮಾಡುತ್ತೀಯಾ..? ಎಂಬ ಜನರ ಪ್ರಶ್ನೆಗೆ "ಸುಮ್ಮನೆ ಕೂರಲಾರೆ, ನಾಲ್ಕು ಜನಕ್ಕೆ ಉಪಯೋಗವಾಗುವಂತಹದ್ದನ್ನು ಮಾಡುತ್ತೇನೆ" ಎಂದು ಪ್ರಾರಂಭಿಸಿದ್ದೇ ಕಂಕಣಭಾಗ್ಯ ಮ್ಯಾಟ್ರಿಮೋನಿಯಲ್ ಬ್ಯುರೋ. ಒಂದೇ ಒಂದು ಪೈಸೆ ಸೇವಾಶುಲ್ಕ ಪಡೆಯದೆ ಹುಡುಗ-ಹುಡುಗಿಯನ್ನು ಜೋಡಿಸಿಕೊಡುವ ಪ್ರಯತ್ನ ಮಾಡಲಾರಂಭಿಸಿದರು.
ಅವಿವಾಹಿತಳೇನು ಮಾಡುತ್ತಾಳೆಂದು ಆಡಿಕೊಂಡರೂ.. ಜನರಿಂದ ವಿರೋಧ ಬಂದರೂ ಕ್ರಮೇಣ ಹುಡುಗ-ಹುಡುಗಿಯರ ಜಾತಕಗಳು ಬರುತ್ತಿತ್ತು. ಹಲವರು ವಿವಾಹಿತರಾಗಿದ್ದರೂ.. ಅವಿವಾಹಿತರೆಂದು ಹೇಳಿ ಎರಡನೆಯ ಮದುವೆಗೆ ಪ್ರಯತ್ನಿಸುತ್ತಿದ್ದರು. ಇನ್ನು ಕೆಲವರದ್ದು ನಿಲ್ಲದ ಬೇಡಿಕೆ. ಕಮಿಷನ್ ಆಸೆ ತೋರಿದಾಗ, ಸುಳ್ಳು ಮದುವೆ ಮಾಡಿಸಲಾರೆ ಎಂದು ಮುಲಾಜಿಲ್ಲದೆ ಹೊರಗಟ್ಟುತ್ತಿದ್ದರು ಸಾವಿತ್ರಮ್ಮ. ವಿಧವೆ ಅಥವಾ ವಿಚ್ಛೇದಿತೆಯರಿಗೆ ವಿವಾಹ ಮಾಡಿಸುತ್ತೇನೆಂದು ಹೊರಟ ಆಕೆಯ ಪ್ರಯತ್ನಕ್ಕೆ ಸೋಲಾಗುತ್ತಿದ್ದದ್ದೇ ಹೆಚ್ಚು. ಆದರ್ಶವಾದಿಗಳು ಕಡಿಮೆಯೇ..!
ಪ್ರಿಯಾಳ ಗೆಳತಿ ರಾಜೇಶ್ವರಿಗೆ ಮನೆಯಲ್ಲಿ ವಿವಾಹದ ಪ್ರಯತ್ನ ಮಾಡುತ್ತಿರುವಾಗ.. ಪ್ರಿಯಾಳಿಗೂ ವಿವಾಹ ಮಾಡಬೇಕೆಂಬ ಸಾವಿತ್ರಮ್ಮನವರ ಪ್ರಯತ್ನ ಜಾರಿಯಾದಾಗ.. ಪ್ರಿಯಾ ತಾನು ಪ್ರೀತಿಸುತ್ತಿರುವ ವಿಚಾರ ಹೇಳಿದಳು. ಆಕೆ ಪ್ರೀತಿಸುತ್ತಿದ್ದ ರಾಜೇಶನನ್ನು ನೋಡಿ ಅವರ ಚಿಂತೆ ಪರಿಹಾರವಾಯಿತು. ಪ್ರಾಮಾಣಿಕವಾದ ಸ್ವಭಾವದಿಂದ ಇಷ್ಟವಾದನು. ಇದ್ದಿದ್ದನ್ನು ಇದ್ದಂತೆ ಹೇಳಿದ. ಆತನ ಅಕ್ಕನ ಮದುವೆಯ ಪ್ರಯತ್ನ ಮಾಡುತ್ತಿರುವ ವಿಚಾರ ತಿಳಿದು ಸಾವಿತ್ರಮ್ಮನವರೇ ಆಕೆಗೆ ಗಂಡು ನೋಡುವ ಪ್ರಯತ್ನ ನಡೆಸಿದರು. ಮೊದಲಿಗೆ ಎಲ್ಲಿಯೂ ಸೆಟ್ ಆಗದಿದ್ದಾಗ. ಅವರ ಮನೆಗೆ ಕರೆತಂದರು ರಂಜನಾಳನ್ನು.
ರಾಜೇಶ್ವರಿಗೆ ತೋರಿಸಿದ ಹುಡುಗನ ಉದ್ಯೋಗದ ವಿಚಾರದಲ್ಲಿ ನಿಜ ತಿಳಿದ ರಾಜೇಶ್ವರಿ ಮನೆಯವರು ಸಾವಿತ್ರಮ್ಮನವರನ್ನು ತಪ್ಪು ತಿಳಿದು ಮನಸ್ಸು ಕಹಿ ಮಾಡಿಕೊಂಡಿದ್ದರು. ಅಲ್ಲದೇ, ಕಮಿಷನ್ ಆಸೆಗೆ ಆಕೆ ಸುಳ್ಳು ಹೇಳಿದ್ದರು ಎಂಬ ತಪ್ಪು ತಿಳಿವಳಿಕೆ ಹೊಂದಿದರು.
ರಂಜನಾ ಹಾಗೂ ರಾಜೇಶ್ವರಿಯ ಸ್ನೇಹ ಬೆಳೆದಿತ್ತು. ರಂಜನಾಳಿಗೆ ತೋರಿಸಿದವನು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಆಟೋಮೊಬೈಲ್ ಇಂಜಿನಿಯರ್. ದೂರದ ಊರಾದರೂ ಪರವಾಗಿಲ್ಲವೆಂದು ಒಪ್ಪಿದರೆ ಆಕೆಯ ವಿವಾಹದ ವಿಷಯದಲ್ಲಿಯೂ ಸಮಸ್ಯೆ ಎದುರಾಯಿತು. ರಂಜನಾಳ ತಂದೆ-ತಾಯಿ ಚಿಕ್ಕಮಗಳೂರಿನಿಂದ ಇಲ್ಲಿಗೆ ಮನೆ ಮಾಡಿಕೊಂಡು ಬಂದರು. ಪುಣ್ಯಕ್ಕೆ ಪ್ರಿಯಾಳ ವಿಷಯದಲ್ಲಿ ರಾಜೇಶನ ಮನಸ್ಸು ಕಹಿಯಾಗಿರಲಿಲ್ಲ.
ಅತ್ತ ರಾಜೇಶ್ವರಿಗೆ ಗಿರೀಶ್ ಎಂಬತನ ಜೊತೆಗೆ ಓಡಾಟ ಹೆಚ್ಚಾಯಿತು. ಇತ್ತ ತಂದೆಗೆ ಸಾಲದ ಹೊರೆ ಹೊರಿಸಬಾರದೆಂದು ರಂಜನಾ ತನಗೆ ಪರಿಚಯವಾಗಿದ್ದ ಹುಡುಗನೊಬ್ಬನ ಜೊತೆಗೆ ಅಂತರ್ಜಾತಿ ವಿವಾಹಕ್ಕೆ ಸಿದ್ಧವಾಗಿದ್ದಳು. ಆದರೆ, ಇಬ್ಬರ ಓಡಾಟವೂ ಮನೆಯವರಿಗೆ ತಿಳಿದಿರಲಿಲ್ಲ. ಇದು ಬಿದ್ದದ್ದು ಸಾವಿತ್ರಮ್ಮನ ಕಣ್ಣಿಗೆ.
ಸಾವಿತ್ರಮ್ಮನವರ ಮನಸ್ಸು ಹೇಗಿತ್ತು.. ಈ ಹುಡುಗರನ್ನು ರಂಜನಾ ಹಾಗೂ ರಾಜೇಶ್ವರಿಯ ಜೊತೆ ನೋಡಿದ ನಂತರ ಅವರ ಮನಸ್ಸಿನಲ್ಲಿ ಮೂಡಿದ ವಿಚಾರವೇನು? ಅವರವರ ಮನೆಗಳಿಗೆ ಈ ವಿಚಾರ ತಿಳಿದಾಗ ಮುಂದೆ ಏನಾಯ್ತು..? ತನ್ನ ತಂಗಿ ಸರಸುವಿನ ಮಗ ಕೃಷ್ಣನ ವಿವಾಹವನ್ನು ಅವರು ಯಾರೊಂದಿಗೆ ನಿಶ್ಚಯಿಸಿದರು ?
ಎಲ್ಲಾ ತಪ್ಪು ತಿಳುವಳಿಕೆಗಳು ದೂರಾದವೇ ಅಥವಾ ಈ ವಿವಾಹದ ವಿಚಾರ ಮತ್ತಷ್ಟು ಕಗ್ಗಂಟಾಯಿತೇ ನೀವೇ ಓದಿ ತಿಳಿಯಿರಿ.
"ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು" ಎನ್ನುತ್ತಾರೆ. ಆದರೆ, ಸುಳ್ಳಿನ ಕೋಟೆಯ ಮೇಲೆ ಕಟ್ಟಿದ ವಿವಾಹಗಳು ಎಷ್ಟು ದಿನ ನಿಂತಿರಲು ಸಾಧ್ಯ..?
ವಿವಾಹಕ್ಕೆ ಇರುವ ಅಡೆತಡೆಗಳು, ವರನ ಅಥವಾ ವಧುವಿನ ಆಯ್ಕೆಯಲ್ಲಿರುವ ಕಗ್ಗಂಟು ಅದರ ನಂತರದ ಸಮಸ್ಯೆಗಳು, ವಿವಾಹದಲ್ಲಿನ ಹೊಂದಾಣಿಕೆ, ಮೋಸ ಮಾಡಿಕೊಂಡ ವಿವಾಹಗಳು, ಮೋಸ ಮಾಡಲು ಹೊರಟವರು.. ಹೀಗೆ ವಿವಾಹದ ವಿಚಾರದ ಎಷ್ಟು ವಿಚಾರಗಳನ್ನು ಸೂಕ್ಷ್ಮವಾಗಿ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಲೇಖಕಿ. ಇಂದಿನ ದಿನಗಳಲ್ಲಿ ವಿವಾಹದ ಕುರಿತಾಗಿ ಎಷ್ಟೇ ಎಚ್ಚರಿಕೆ ಇದ್ದರೂ ಸಾಲದು. ಇಂತಹ ಮೋಸದ ಜಾಲಗಳನ್ನು ಹಾಗೂ ಎಚ್ಚರಿಕೆಯಿಂದ ಇರಬೇಕಾದ ಪ್ರಸಂಗಗಳನ್ನು ಕಟ್ಟಿಕೊಡುವ ಕಾದಂಬರಿಯ ಚಂದದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ