ಬುಧವಾರ, ಏಪ್ರಿಲ್ 22, 2026

ಹುಣಸೇ ಚಿಗುರು ಮತ್ತು ಇತರ ಕತೆಗಳು (ಪುಸ್ತಕ ಯಾನ - 310)


ಪುಸ್ತಕದ ಶೀರ್ಷಿಕೆ : ಹುಣಸೇ ಚಿಗುರು ಮತ್ತು ಇತರ ಕತೆಗಳು

ಲೇಖಕರು : ದೀಪದ ಮಲ್ಲಿ

ಪ್ರಕಾಶಕರು : ಕಾವ್ಯಮನೆ ಪ್ರಕಾಶನ

ಪ್ರಥಮ ಮುದ್ರಣ : ಜುಲೈ 2024

ಪುಟಗಳು : 88

ಬೆಲೆ : 100 ರೂ.


ಇದು ದೀಪದ ಮಲ್ಲಿಯವರ ಚೊಚ್ಚಲ ಕಥಾ ಸಂಕಲನ. ಆದರೆ, ಮೊದಲ ಕಥಾ ಸಂಕಲನವೆಂದೆನಿಸುವುದಿಲ್ಲ. ನಿರೂಪಣೆ, ಭಾಷಾ ಶೈಲಿ ಹಾಗೂ ಕಥಾವಸ್ತುಗಳು ಓದುಗರನ್ನು ಹಿಡಿದಿಡುವುದನ್ನು ಸತ್ಯ. ಈ ಕಥಾಸಂಕನದಲ್ಲಿ 10 ಕಥೆಗಳಿವೆ. ಈ ಕಥೆಗಳ ಕಥಾವಸ್ತುಗಳ ಕುರಿತಾಗಿ ಕುತೂಹಲ ಮೂಡವಂತೆ ಪರಿಚಯಿಸಬಲ್ಲೆನಷ್ಟೇ.. ಏಕೆಂದರೆ ಈ ಕಥೆಗಳೊಳಗಿನ ಭಾವಗಳು ಪದಗಳಿಗೆ ನಿಲುಕದ್ದು. 


ಆಧಾರ್ :  ಪುಟ್ಟ ಪರ್ಸ್ ನಲ್ಲಿ ಒಂದಿಷ್ಟು ದುಡ್ಡು ಜೊತೆಗೆ ಆಧಾರ್ ಕಾರ್ಡ್. ಒಂದು ಕ್ಷಣ ಮೈಮರೆತು ತನುಜಾ ಹೆಸರ ಮೇಲೆ ಬೆರಳಾಡಿಸಿದಳು. ಐಡೆಂಟಿಟಿ ಇಲ್ಲದವಳ ಐಡಿ ಕಾರ್ಡ್.. ಆಧಾರವೇ ಇಲ್ಲದವಳ ಆಧಾರ್ ಕಾರ್ಡ್.. ತನ್ನ ದೇಹವನ್ನು ಇನ್ನಿಲ್ಲದಂತೆ ಪ್ರಯೋಗಶಾಲೆಯಾಗಿಸಿಕೊಂಡವಳ ಹೆಸರು ತನುಜಾ. ತನುಜಾಳಂತಹಾ ಎಷ್ಟೋ ಅಸಹಾಯಕ ಹೆಣ್ಣುಮಕ್ಕಳ ಕಥೆಯನ್ನು ತೆರೆದಿಡುತ್ತಿದೆ ಇದು. ಆಧಾರ್ ಕಾರ್ಡ್ ಕೇವಲ ಐಡೆಂಟಿಟಿ ಮಾತ್ರವಲ್ಲ ಅಸ್ತಿತ್ವ. ಹಾಗೆಂದು ಅಸ್ತಿತ್ವವೇ ಇಲ್ಲದವರ ಅಸಹಾಯಕತೆಯ ಇಕ್ಕಟ್ಟಿನ ಪರಿಸ್ಥಿತಿಯನ್ನು ಬಾಡಿಗೆ ತಾಯಿಯಾಗಲು ಪ್ರೇರೇಪಿಸುವಂತಹ ಕಥಾವಸ್ತು. ಆದರೆ, ಆ ಹೆಣ್ಣುಮಕ್ಕಳ ಮನದ ಭಾವನೆ, ತಲ್ಲಣ ಬಾಡಿಗೆ ತಾಯಿಯಂದಿರ ಹಿಂದಿನ ಬದುಕು ಹಾಗೂ ಮುಂದಿನ ಪರಿಣಾಮ ಎಲ್ಲವೂ ಶಕ್ತವಾಗಿ ಚಿತ್ರಿತವಾಗಿದೆ.


ಜಾಕ್ಸನ್ ತಿಪ್ಪೇಸ್ವಾಮಿ : ಜಾಕ್ಸನ್ ಗೆ ಕಸದೊಡನೆ ಅವಿನಾಭಾವ ನೆಂಟಸ್ತಿಕೆ. ಅವನ ಜಗತ್ತೇ ಕಸಮಯ. ಅವನ ಕನಸಲ್ಲೂ ಕಸ.. ಮನಸ್ಸೂ ಕಸದೆಡೆಗೆ. ಕಸ ಒಂದೇ ಅವನ ಆಸ್ತಿ ಎಂಬಂತಿದ್ದ ಜಾಕ್ಸನ್.  ಬದುಕು ಇದ್ದದ್ದೇ ಹಾಗೆ ಎಂದು ಬದುಕುತ್ತಿದ್ದವನಿಗೆ 500, 1000 ನೋಟುಗಳ ಕಂತೆ ಹಣ ದೊರೆತಿತ್ತು. ಅದೂ ಬರೋಬ್ಬರಿ ನಾಲ್ಕು ಲಕ್ಷ. ಆದರೆ ಎಲ್ಲಾ ನೋಟು ಬರೀ ಕಾಗದ ಬರೀ ಕಸವಾಗಿದ್ದು ಹಾಗೂ ಪ್ರಪಂಚದ ಕಣ್ಣಿಗೆ ಅದು ಕಂಡದ್ದು ಹಾಗೆ.. ಎಂದೂ ಅವನತ್ತ ತಿರುಗಿಯೂ ನೋಡದವರು ಸಹಾ ಇದೀಗ ಮಾತಿಗೆ ಮಾತು ಪೋಣಿಸುತ್ತಿದ್ದರು. ಜಾಕ್ಸನ್ ಜೊತೆಗೆ ಇಲ್ಲಿ ಗುರುಮೂರ್ತಿಯೊ ಕಾಣಸಿಗುತ್ತಾರೆ.


ಹುಣಸೇ ಚಿಗುರು : ಅವಳ ನೆನಪು ಶುರುವಾಗಿದ್ದೇ ಅಪ್ಪನ ಜೊತೆ ಸಂತೆಗೆಂದು ಹೊರಟಾಗ ಅಂದು ಬಿದ್ದ ಹುಣಸೇ ಚಿಗುರಿನ ಬೆತ್ತದ ಏಟಿನಿಂದ. ಅಲ್ಲಿಂದ ಅವಳ ತಂದೆ-ತಾಯಿ ಹಾಗೂ ಯೌವ್ವನದ ದಿನಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಗೌಡರ ಮನೆಯೇ ಆಸರೆ ಎಂಬಂತಿದ್ದವಳಿಗೆ ಅದು ತಪ್ಪಿ ಹೋಗುವ ಪರಿಸ್ಥಿತಿ ಜೊತೆಗೆ ಮೇಲೊಂದು ಅಪವಾದ. ಅದಲ್ಲದರ ಮೂಲ ಎಲ್ಲಿತ್ತು ಅಥವಾ ತಿಳಿಯದ ವಯಸ್ಸಿನ ತಪ್ಪಿಗೆ ಕಾರಣರು ಯಾರು..?


ಮೌನಂ ನ ಸಮ್ಮತಿ ಲಕ್ಷಣಂ : ಮನೆಯ ಮೊದಲ ಮಗಳು ಅವಳು. ಯೂನಿವರ್ಸಿಟಿ ಟಾಪರ್ ಆಗಿ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದವಳಿಗೆ.. ಅಪ್ಪ ಅಳೆದು ತೂಗಿ ಡಾಕ್ಟರ್ ಓದಿದ ಹುಡುಗನಿಗೆ ಕೊಟ್ಟು ವಿವಾಹ ಮಾಡಿದ್ದರು. ಆದರೆ, ನಾಲ್ಕು ತಿಂಗಳ ಗರ್ಭಿಣಿಯನ್ನು ದುಡ್ಡಿಗಾಗಿ ಪೀಡಿಸಿ, ಕಾಡಿಸಿ ಹೊಟ್ಟೆಗೆ ಒದ್ದು ಮನೆಯಿಂದ ಆಚೆಗಟ್ಟಿದ್ದ. ಎರಡು ವರ್ಷ ಕಾಡಿಸಿ, ಸತಾಯಿಸಿ ಅಂತು ಡೈವೋರ್ಸ್ ಕೊಟ್ಟ. ಮಗು ಅಂದೇ ತೀರಿಕೊಂಡಿತ್ತು. ಇತ್ತ ಗಂಡನೂ ಇರಲಿಲ್ಲ. ವರದಕ್ಷಿಣೆ ಕಿರುಕುಳ ಅನುಭವಿಸಿದ ಎಷ್ಟೋ ಹೆಣ್ಣುಮಕ್ಕಳ ಕಥೆಯಂತೆ ಕಂಡರೂ.. ಅದಾದ ನಂತರದ ಕಥೆ ಇಲ್ಲಿನ ಪ್ಲಸ್ ಪಾಯಿಂಟ್. ಅವಳ ಹಿಂದೆ ಇದ್ದ ಇನ್ನೊಬ್ಬಳು ಹೆಣ್ಣುಮಗಳಿಗೆ ಮದುವೆಯಲ್ಲಿ ನಂಬಿಕೆಯೇ ಹೊರಟು ಹೋಗಿತ್ತು. ದೊಡ್ಡಮಗಳಿಗೆ ಮತ್ತೊಂದು ಮದುವೆ ಮಾಡಬೇಕೆನ್ನುವ ಅಮ್ಮ. ಆದರೆ, ಅಪ್ಪನ ಮನಸ್ಥಿತಿಯೇ ಬೇರೆ ಇತ್ತು. ತಂಗಿಗೆ ಅಪ್ಪನನ್ನು ಬಿಟ್ಟು ಉಳಿದ ಗಂಡಸರ ಬಗ್ಗೆ ಅಕ್ಕನ ಗಂಡನ ಬಗೆಗಿದ್ದ ತಾತ್ಸಾರವೇ.. ಅಪ್ಪನೂ ಹೊರಟ ನಂತರ ಮೌನಿಯಾಗುತ್ತಾ ಹೊರಟ ಅಕ್ಕನ ಮನದಲ್ಲೇನಿತ್ತು..? ಅಮ್ಮ ಹಾಗೂ ತಂಗಿಯರು ಅವಳನ್ನು ಅರಿತದ್ದು ಹೇಗೆ..?


ಮುಳ್ಕಟ್ಟಮ್ಮನ ಆಶೀರ್ವಾದ : ಕಾಳೇಗೌಡರ ಮನೆತನಕ್ಕೆ ಕಳಂಕವೆನಿಸಿದ್ದ ಮಗ ಲೋಕೇಶನನ್ನು ಕರೆದುಕೊಂಡು ಮುಳ್ಕಟ್ಟಮ್ಮನಿಗೆ ಉಡಿ ತುಂಬಲು ಹೋದರು ಗೌಡರ ಹೆಂಡತಿ ಲಕ್ಷ್ಮಮ್ಮ.

ಅಂದು ಬಂದಿದ್ದ ಒಂದು ಹೆಂಗಸರ ಗುಂಪಿನಲ್ಲಿ ಒಬ್ಬ ಹೆಣ್ಣು ಮಗಳಿಗೆ ತೊಂದರೆಯಾದಾಗ ಲೋಕೇಶನೇ ಹೋಗಿ ಬಾವಿಯಲ್ಲಿ ನೀರು ಸೇದಿ ತಂದ. ಆ ತಾಯಿ ನಿನ್ನ ಚೆನ್ನಾಗಿಟ್ಟಿರಲಿ ಕಂದ ಎಂದು ಹರಸಿ ಕೈ ಮುಗಿದಳು. ಲೋಕೇಶನ ತಾಯಿಗಂತೂ ಆ ಕ್ಷಣದಲ್ಲಿ ದೇವರೇ ಕಲ್ಲಿನಂತೆ ಅನಿಸಿ ಆಕೆಯೇ ನಿಜವಾದ ತಾಯಿ ಅನ್ನಿಸಿತ್ತು. 

ಅಷ್ಟಕ್ಕೂ ಲೋಕೇಶನಿಗೆ ಅಂಟಿದ್ದ ಕಳಂಕವೇನು..? ಮುಳ್ಕಟ್ಟಮ್ಮನ ಆಶೀರ್ವಾದ ದೊರೆಯಿತೇ..? ಓದಿ ನೋಡಿ. 


ಓಡಿ ಹೋದವಳು: ಇಂತಹಾ ಹಣೆಪಟ್ಟಿ ಹಚ್ಚಿಕೊಂಡ ಹೆಣ್ಣುಮಕ್ಕಳು ಅಲ್ಲಲ್ಲಿ ಕಾಣಬಹುದೇನೋ.. ಊರು ಬದಲಾದರೂ.. ಬದುಕು ಬದಲಾದರೂ.. ಹತ್ತಿರದವರ ಆಡುಮಾತಿನಲ್ಲಿ ಅದೇ ಅನ್ವರ್ಥನಾಮ ಉಳಿದು ಹೋಗಿ ಬಿಡುವುದು ವಿಪರ್ಯಾಸ. ಅಂತಹಾ ಹಣೆಪಟ್ಟಿ ಹಚ್ಚುವ ಹಿಂದಿನ ಕಥೆ ವ್ಯಥೆಯಾಗಿ ಬಿಚ್ಚಿಕೊಳ್ಳುತ್ತದೆ. 


ಒಂದು ಥ್ರೆಡ್ಡಿನ ಕಥೆ : ಉಷಾ ಮದುವೆಯಾಗಿ ಎರಡು ವರ್ಷವಾಗುತ್ತಲೇ ಮಕ್ಕಳಾಗಲಿಲ್ಲವೆಂದು ಬಾವಿಕಟ್ಟೆಗೆ ಹಾರಲು ಹೋಗಿದ್ದಳು. ತನ್ನನ್ನು ಬದುಕಿಸಿ ತಂದ ಗಂಡನ ಉದಾತ್ತತೆಗೆ ಪ್ರತಿಯಾಗಿ ತಾನೇ ನಿಂತು ಮತ್ತೊಂದು ಮದುವೆ ಮಾಡಿದಳು. ಮಗು ಹುಟ್ಟಿದಾಗಲೂ ಸಡಗರದಿಂದ ತಾನೇ ಬಾಣಂತನ ಮಾಡಿದಳು. ಸಂಬಳದ ದಿನ ಮಗುವಿಗೆ ತಂದ ಕಾಲಂದಿಗೆಯನ್ನೇ ಅವಳ ಗಂಡ ಬಿಚ್ಚಿಕೊಂಡು ಹೋಗಿದ್ದನು. ಕುಡಿದು ಬಂದವನಿಗೆ ಬೈದು ಮುಟ್ಟುವುದಕ್ಕೂ.. ಅವನ ಕೈ ಸ್ವಾಧೀನ ಹೋಗುವುದಕ್ಕೂ ಸರಿಯಾಗಿತ್ತು. ಮುಂದಿನದ್ದು ಬೇರೆಯದ್ದೇ ರೀತಿಯ ಆರೋಪ. ಒಂಟಿ ಎತ್ತಿನಂತೆ ದುಡಿಯುತ್ತಿದ್ದವಳ ಮನದ ಮಾತುಗಳು ನೆನಪುಗಳು ಥ್ರೆಡ್ಡಿನೊಂದಿಗೆ ತಳುಕಿ ಹಾಕಿಕೊಂಡದ್ದು ಹೇಗೆ..? ಏಕೆ..?


ಮಿಸೆಸ್. ರೀನಾ ರವೀಶ್: ರೀನಾ ಬದುಕನ್ನು ಎಂದು ಈಸಿಯಾಗಿ ತೆಗೆದುಕೊಂಡವಳಲ್ಲ. ಚ್ಯೂಸಿಯಾಗಿ ತೆಗೆದುಕೊಂಡವಳು. ಅವಳನ್ನು ಇಂಪ್ರೆಸ್ ಮಾಡುವುದು ಸುಲಭದ ಮಾತಾಗಿರಲಿಲ್ಲ. ಅಂತಹವಳ ಸಂಗಾತಿಯೇ ರವೀಶ್. ಅವರಿಬ್ಬರ ಸಾಂಗತ್ಯ ತೆರೆದುಕೊಂಡಂತೆಯೇ ಅವರಿಬ್ಬರ ಮೌನವೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದು ದೀರ್ಘ ಮೌನ ಹಾಗೂ ದೊಡ್ಡ ಕಂದಕ ಒಂದು ಉಳಿದು ಹೋದದ್ದಾದರೂ ಏಕೆ..? ಇಂದಿನ ಜನರೇಶನ್ ಗೆ ಬಹಳ ಹೊಂದಿಕೆಯಾಗುವಂತಹ ಕಥೆ ಇದು ಎಂದೆನಿಸಿತು. 


ವೆಲ್ವೆಟ್ ಪರ್ಸು :  ನಿಮ್ಮಮ್ಮ ತಲೆ ಸುತ್ತಿ ಬಿದ್ದಿದ್ದಾರೆ ಎಂದು ಅಮ್ಮ ಕೆಲಸ ಮಾಡುತ್ತಿದ್ದ ಮನೆಯಿಂದ ಬಂದ ಫೋನಿಗೆ ಸಿಗರೇಟ್ ಸೇದುತ್ತಿದ್ದ ಶ್ರೀಧರನಿಗೆ ಒಂದು ಕ್ಷಣ ಭಯವೇ ಆಗಿತ್ತು. ಅಮ್ಮ ಇಲ್ಲದ ಅವನ ಬದುಕನ್ನು ಅವನೆಂದಿಗೂ ಊಹಿಸಿಕೊಂಡಿರಲಿಲ್ಲ. ಅಮ್ಮ ಕೆಲಸ ಮಾಡುವ ಮನೆಗಳು ಎಲ್ಲಿದ್ದಾವೆಂದೂ ಅವನಿಗೆ ಗೊತ್ತಿರಲಿಲ್ಲ. ಅದೇ ನಂಬರಿಗೆ ಕರೆ ಮಾಡಿ ಅಡ್ರೆಸ್ ಪಡೆದವನು ಹೋಗಿ ನಿಂತದ್ದು ಪೊಲೀಸ್ ಸ್ಟೇಷನ್ ಗೆ. ಮುಂದಿನ ಕಥೆಯೇ ವಿಭಿನ್ನ. ಅಷ್ಟಕ್ಕೂ ಈ ವೆಲ್ವೆಟ್ ಪರ್ಸು ರಾಶಿ ನೋವಿನ ಸಂತೆಯ ಕೆಳಗೆ ಅಡಗಿತ್ತು. ಏನಿದರ ಮರ್ಮ..? ಓದಿ ನೋಡಿ.


ಡಿಯರ್ ಸರ್ : ಡೌನ್ ಸಿಂಡ್ರೋಮ್ ಇದ್ದ ತಮ್ಮ ಮಧುಸೂದನೊಟ್ಟಿಗೆ ಬದುಕುತ್ತಾ.. ತಮ್ಮನ್ನು ತಾವು ತಮ್ಮೊಳಗೇ ಕಳೆದುಕೊಂಡಿದ್ದ ಶೇಷಾದ್ರಿಯವರು ನಿವೃತ್ತಿಯಾಗಿ ಅದಾಗಲೇ ಆರು ವರ್ಷಗಳಾಗಿದ್ದವು. ಯೌವ್ವನದಲ್ಲಿಯೂ ಜೊತೆಗಾತಿ ಬೇಕು ಎಂದೇ ಅನ್ನಿಸಿರದ ದಿನಗಳು. ಇದೀಗ ತಮ್ಮ ಮನೆಯ ಟೆರೇಸಿಗೆ ಬಂದಿದ್ದ ಹುಡುಗಿಯ ಕಾಳಜಿಗೆ ಅವರ ಮನಸ್ಸು ಗೊಂದಲದಲ್ಲಿತ್ತು. ಅಲ್ಲದೇ ಅವರು ತಮ್ಮೊಳಗೆ ತಾವು ಕಳೆದು ಹೋಗಿದ್ದ ಬದುಕು ಬದಲಾಗಿತ್ತು. ಹಾಗಾದರೆ ಇಲ್ಲಿ ಮೂಡಿದ ಭಾವಗಳೇನು..?


ಹೆಚ್ಚಿನ ಕಥೆಗಳ ಭಾವ ನಮ್ಮೊಳಗೆ ಮೂಡುತ್ತಾ.. ಆಲೋಚನೆಗೆ ಹಚ್ಚುತ್ತವೆ. ಅದರಲ್ಲಿಯೂ ಹೆಣ್ಮನದ ಭಾವಗಳಂತೂ ಹೆಚ್ಚೇ ಕಾಡುತ್ತವೆ. ಪ್ರತಿ ಕಥೆಯೂ ವಾಸ್ತವದ ನೆಲೆಗಟ್ಟಿನಲ್ಲಿ ಚಿತ್ರಿತವಾಗಿದ್ದರೂ.. ಭಾವ ಪ್ರಧಾನವಾದವು ಎಂದು ನನಗನ್ನಿಸಿತು. ಚೆಂದದ ಕಥೆಗಳನ್ನು ನಿಮ್ಮದಾಗಿಸಿಕೊಳ್ಳಲು ಓದಿ ನೋಡಿ "ಹುಣಸೇ ಚಿಗುರು ಮತ್ತು ಇತರ ಕತೆಗಳು" 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ