ಬುಧವಾರ, ಏಪ್ರಿಲ್ 22, 2026

ಒರಾವೆಲ್ ಸ್ಟೇ ನಿಂದ ಓಯೋ ವರೆಗೂ : ರಿತೇಶ್ ಅಗರ್ವಾಲ್ ( ಬ್ಯುಸಿನೆಸ್ ಡೈರಿ ಪುಟ - 26)


ನಾವು ಇಂದು ಎಲ್ಲಿಗಾದರೂ ಪ್ರವಾಸ ಹೊರಟಾಗ ಮೊದಲಿನಂತೆ ಉಳಿದುಕೊಳ್ಳುವುದಕ್ಕೆ ಕಷ್ಟಪಡಬೇಕಾಗಿಲ್ಲ.. ಹಿಂದಿನಂತೆ ಉಚಿತವಾದ ಛತ್ರಗಲಿಲ್ಲ. ನಮಗೆ ಬೇಕಾದಷ್ಟು ಹಣಕ್ಕೆ ಸಿಗುವ ಹೋಟೆಲ್ ಗಳಲ್ಲಿ ಹೆಚ್ಚಿನ ಸೌಲಭ್ಯವನ್ನು ನಿರೀಕ್ಷಿಸಲಾಗದು. ಬ್ಯುಸಿನೆಸ್ ಅಥವಾ ಫ್ಯಾಮಿಲಿ ಟ್ರಿಪ್ ಗಳಲ್ಲಿ ಹೋಟೆಲ್ ಅಥವಾ ಲಾಡ್ಜ್ ಗಳ ಮೊರೆ ಹೋಗುವುದು ಅನಿವಾರ್ಯ. ಹೋಟೆಲ್ ಮತ್ತು ಲಾಡ್ಜ್ ಎಂದಾಗ ಪರ್ಯಾಯವೆಂಬಂತೆ ನೆನಪಾಗುವುದೇ ಓಯೋ. ಇಂಗ್ಲಿಷಿನ 3 ಅಕ್ಷರದ ಓ,ವೈ,ಓ ಎನ್ನುವ ಕೆಂಪು ಅಕ್ಷರದ ಬೋರ್ಡನ್ನು ಎಷ್ಟೋ ಹೋಟೆಲುಗಳಲ್ಲಿ ನೋಡುತ್ತಲೇ ಇರುತ್ತೇವೆ. ಹಾಗೆಂದರೆ, ಮತ್ತೇನಲ್ಲ... "ಆನ್ ಯುವರ್ ಓನ್" ಎಂಬ ಸಂಕ್ಷಿಪ್ತ ಶಬ್ದಗಳು. ನಾವು ಕೊಡುವ ಹಣಕ್ಕೆ ತಕ್ಕಂತೆ ಬೇಕಾದ ಸೌಲಭ್ಯವನ್ನು ಒದಗಿಸಿ.. ನಮ್ಮದೇ ಕೋಣೆ ಎಂಬಂತೆ ಭಾವಿಸುವಂತಿರುವ ರೂಮಿನ ವ್ಯವಸ್ಥೆ ಮಾಡುವ ಐಡಿಯಾವನ್ನು ಇಟ್ಟುಕೊಂಡು ಶುರು ಮಾಡಿದ ಒಬ್ಬ ಯುವಕನ ಕನಸು "ಓಯೋ". ಕಾಲೇಜ್ ಡ್ರಾಪ್ ಔಟ್ ಎಂದು ಕರೆಸಿಕೊಂಡ ಈ ಯುವಕ ಇಂದು ಏಷ್ಯಾದ ಯುವ ಕೋಟ್ಯಾಧಿಪತಿ ಕೂಡಾ ಹೌದು. ಈತನ ಹೆಸರನ್ನು ಊಹಿಸಿದಿರಾ..?? ಹೌದು. ಈತನೇ ರಿತೇಶ್ ಅಗರ್ವಾಲ್. ನಮ್ಮ ದೇಶದ ಯುವ ಜನತೆಗೆ ಮಾದರಿಯಾಗಬಲ್ಲಂತಹಾ ಉದ್ಯಮಿ.


ರಿತೇಶ್ ಅಗರ್ವಾಲ್ ಹುಟ್ಟಿದ್ದು ಒರಿಸ್ಸಾದ ರಾಯಗಢದ, ಬಿಸ್ಸಾಮ್ ಕಟಕ್ ನಲ್ಲಿ. ರಾಯಗಡದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ. ಶಾಲೆಯಲ್ಲಿ ಅದಾಗಲೇ ಬೇಸಿಕ್ ಸಿ ಹಾಗೂ ಪಾಸ್ಕೆಲ್ ನಂತಹ ಕಂಪ್ಯೂಟರ್ ಪ್ರೋಗ್ರಾಂಮಿಂಗ್ ಭಾಷೆಗಳನ್ನು ಕಲಿಸಲು ಶುರು ಮಾಡಿರುತ್ತಾರೆ. ರಿತೇಶ್ ಕೋಡಿಂಗ್ ಕಡೆಗೆ ಹೆಚ್ಚಿನ ಒಲವು ತೋರಿ ಮೊದಲ ಪ್ರೋಗ್ರಾಮ್ ಬರೆದಾಗ ಕೇವಲ 8 ವರ್ಷ. ಕೋಡಿಂಗ್ ಕುರಿತ ಆತನ ಆಸಕ್ತಿ ಎಷ್ಟಿತ್ತು ಎಂದರೆ.. ಆತನ ಹಿರಿಯ ಸಹೋದರನ ಪುಸ್ತಕಗಳಲ್ಲಿನ ಪ್ರೋಗ್ರಾಂಮಿಂಗ್ ಕೋಡಿಂಗ್ ಗಳನ್ನೂ ಆತ ಅದಾಗಲೇ ಮಾಡಿಯಾಗಿತ್ತು. ಕಂಪ್ಯೂಟರ್ ಜೊತೆಗೆ ಆಟವಾಡುತ್ತಾ..ಫನ್ ವಿಥ್ ಲರ್ನಿಂಗ್ ಎಂಬಂತೆ ವಿಭಿನ್ನ ರೀತಿಯಲ್ಲಿ ಅಭ್ಯಾಸ ನಡೆಸುತ್ತಾ.. ಕೋಡಿಂಗ್ ನಲ್ಲಿನ ತಪ್ಪುಗಳಿಂದಲೇ ಹೊಸ ಹೊಸ ಪ್ರಯೋಗಗಳನ್ನು ನಡೆಸಲು ಶುರು ಮಾಡಿದ್ದ. ಕೋಡಿಂಗ್ ಕುರಿತ ಆಸಕ್ತಿಯಿಂದ ಕೋಟಾದ ಐ.ಐ.ಟಿ ಕಾಲೇಜಿನ ಕಡೆಗೆ ಆತನ ಆಸಕ್ತಿ ಶುರುವಾಗಿತ್ತು.


ಆತನ ಸತತ ಪರಿಶ್ರಮದಿಂದ ಐ.ಐ.ಟಿ ಕೋಟಾಗೂ ಪ್ರವೇಶ ಪಡೆದನಾದರೂ.. ತನ್ನ ಕಲಿಕೆಯ ಕ್ರಮಕ್ಕೂ, ಅಲ್ಲಿನ ವಿದ್ಯಾಭ್ಯಾಸಕ್ಕೂ ಇರುವ ಅಂತರವನ್ನು ಕಂಡುಕೊಂಡು.. ಇದು ಕೋಡಿಂಗ್ ಕಲಿಯಲು ತನಗೆ ಸೂಕ್ತ ಸ್ಥಳವಲ್ಲ ಎಂದು ತೀರ್ಮಾನಿಸಿದ. ವಿದೇಶಕ್ಕೆ ಕಲಿಕೆಗಾಗಿ ಹೋಗಲು ಆತ ಸ್ಯಾಟ್ ಪರೀಕ್ಷೆಗೆ ತಯಾರಿ ನಡೆಸಿದ. ಅದಕ್ಕಾಗಿ ಆತನ ತಂದೆ ಆತನನ್ನು ಬನ್ಸಾಲ್ ಟ್ಯುಟೋರಿಯಲ್ ಗೂ ಸೇರಿಸಿದ್ದರು. ಆದರೆ, ಆತ ತನ್ನ ಬಿಡುವಿನ ವೇಳೆಯಲ್ಲಿ ಹೆಚ್ಚಿನ ಸಮಯವನ್ನು ಟ್ರಾವೆಲ್ಲಿಂಗ್ ನಲ್ಲಿಯೇ ಕಳೆಯಲು ಶುರು ಮಾಡಿದ್ದ. ಆತ ಸ್ಯಾಟ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಸಾಧ್ಯವಾಗಲಿಲ್ಲ. ಈ ಬಿಡುವಿನ ವೇಳೆಯಲ್ಲಿ "ಇಂಡಿಯನ್ ಇಂಜಿನಿಯರಿಂಗ್ ಕಾಲೇಜಸ್ : ಎನ್ಸೈಕ್ಲೋಪೀಡಿಯಾ ಆಫ್ ಟಾಪ್ 100 ಇಂಜಿನಿಯರಿಂಗ್ ಕಾಲೇಜಸ್" ಎಂಬ ಪುಸ್ತಕವೊಂದನ್ನು ಬರೆದರು. ಈ ಪುಸ್ತಕ ಫ್ಲಿಪ್ಕಾರ್ಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಹಾಗೂ ತ್ವರಿತವಾಗಿ ಮಾರಾಟವಾದ ಪುಸ್ತಕಗಳಲ್ಲಿ ಒಂದಾಯಿತು.


ಲಂಡನ್ ವಿಶ್ವವಿದ್ಯಾಲಯದ ಇಂಡಿಯನ್ ಕ್ಯಾಂಪಸ್ ನಲ್ಲಿ ಆತ ಸೇರಿದನಾದರೂ.. ಮೂರೇ ದಿನಕ್ಕೆ ಅದು ಬೇಸರ ಬಂದಿತು. ಪ್ರಾಜೆಕ್ಟ್ ಎಂದು ರಜಾ ತೆಗೆದುಕೊಂಡವನು ಮತ್ತೆ ಅಲ್ಲಿಗೆ ತಿರುಗಿ ಕಾಲಿಡಲೇ ಇಲ್ಲ. ಆತನ ಆಸಕ್ತಿಯಂತೆಯೇ.. ಕೋಡಿಂಗ್ ಗಾಗಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈನಲ್ಲಿ ನಡೆಸುವ ಏಷ್ಯನ್ ಸೈನ್ಸ್ ಕ್ಯಾಂಪ್ ಗಾಗಿ ಆಯ್ಕೆಯಾದ 240 ವಿದ್ಯಾರ್ಥಿಗಳಲ್ಲಿ ಈತನು ಒಬ್ಬನಾಗಿದ್ದ. ಆಗ ಈತನ ವಯಸ್ಸು ಕೇವಲ 16 ವರ್ಷ.


ಇದರ ಮರುವರ್ಷವೇ ಆತ ಪ್ರಖ್ಯಾತ ಥೈಲ್ ವಿದ್ಯಾರ್ಥಿ ವೇತನಕ್ಕಾಗಿ ಆಯ್ಕೆಯಾಗಿದ್ದ. 20 ವರ್ಷದ ಒಳಗಿನ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದ ಈ ಥೈಲ್ ವಿದ್ಯಾರ್ಥಿ ವೇತನದ ಸ್ಥಾಪಕ ಪೇ-ಪಾಲ್ ನ ಸಹಾಯಕ ಸಂಸ್ಥಾಪಕ ಹಾಗೂ ಫೇಸ್ಬುಕ್ ನ ಹೂಡಿಕೆದಾರನಾಗಿದ್ದ ಪೀಟರ್ ಥೈಲ್. ರಿತೇಶ್ ಪ್ರಸ್ತುತ ಪಡಿಸಿದ ಒಂದು ಐಡಿಯಾಗಾಗಿ ಈತನಿಗೆ ದೊರೆತ ಥೈಲ್ ವಿದ್ಯಾರ್ಥಿವೇತನವೆಷ್ಟು ಗೊತ್ತೇ..?? ಎರಡು ವರ್ಷಕ್ಕೆ ಬರೋಬ್ಬರಿ ಒಂದು ಲಕ್ಷ ಡಾಲರ್ ಗಳು. ಅಷ್ಟಕ್ಕೂ ಈತನ ಇನ್ನೋವೇಟಿವ್ ಐಡಿಯಾ ಏನಾಗಿತ್ತು ಗೊತ್ತೇ..??


ಈತ ಕೆಲವು ಕಾನ್ಫರೆನ್ಸ್ ಗಳಲ್ಲಿ ಭಾಗವಹಿಸಲು, ಸಂವಾದಗಳಿಗಾಗಿ, ಇನ್ನಿತರ ವೇದಿಕೆಗಳಿಗೆ ತನ್ನ ಐಡಿಯಾವನ್ನು ಪ್ರಸ್ತುತಗೊಳಿಸಲು ಹಾಗೂ ತನ್ನ ಹವ್ಯಾಸಕ್ಕಾಗಿ ಟ್ರಾವೆಲ್ ಮಾಡುತ್ತಿದ್ದಾಗ ಉಳಿದುಕೊಳ್ಳಲು ಹೋಟೆಲ್ ಅನ್ನೇ ಆಶ್ರಯಿಸಬೇಕಾಗಿತ್ತು. ಆದರೆ, ಆ ಹೋಟೆಲ್ ಗಳಲ್ಲಿ ಬೇಕಾದ ಸೌಲಭ್ಯಗಳಷ್ಟೂ ಇರಲಿಲ್ಲ. ಹಾಗೆಂದು, ರಿತೇಶ್ ಉಳಿದುಕೊಳ್ಳುತ್ತಿದ್ದ ಹೋಟೆಲ್ ಗಳು ತುಂಬಾ ದುಬಾರಿಯವೇನೂ ಅಲ್ಲ. ಮಧ್ಯಮ ವರ್ಗದ ಹೋಟೆಲುಗಳಲ್ಲಿ ಒಂದು ರಾತ್ರಿ ಅಥವಾ ಎರಡು ರಾತ್ರಿ ಉಳಿಯಲು ಆತನಿಗೆ ಬೇಕಾಗುತ್ತಿದ್ದ ವ್ಯವಸ್ಥೆಗಳು ಸಿಗುತ್ತಿದ್ದ ಹೋಟೆಲ್ ದುಬಾರಿ ಎನ್ನಿಸಿದವು. ಅಲ್ಲದೆ, ಆಗ ಹೋಟೆಲ್ ನಲ್ಲಿ ರೂಮ್ ಬೇಕಾದರೆ ತಾವೇ ಹೋಗಿ ಅಲ್ಲಿ ವಿಚಾರಿಸಿ ರೂಮು ತೆಗೆದುಕೊಳ್ಳಬೇಕಾಗಿತ್ತು ಅಥವಾ ಮಧ್ಯವರ್ತಿಯನ್ನು ಆಶ್ರಯಿಸಬೇಕಿತ್ತು. ಇದೆಲ್ಲದಕ್ಕೂ.. ಪರಿಹಾರ ನೀಡುವಂತೆ, ತಾವು ಕೊಡುವ ಹಣಕ್ಕೆ ತಕ್ಕದಾದ ಹೋಟೆಲಿನಲ್ಲಿ ಎ.ಸಿ, ವೈ-ಫೈ, ಕಂಫರ್ಟೆಬಲ್ ಆಗಿರುವ ಹಾಸಿಗೆಗಳು, ಊಟ-ತಿಂಡಿಯ ವ್ಯವಸ್ಥೆ ಇಷ್ಟೆಲ್ಲವೂ ಇರುವಂತೆ ಹಾಗೂ ಹತ್ತಿರದಲ್ಲಿಯೇ ಇರುವ ಹೋಟೆಲ್ ರೂಮಿನ ಲಭ್ಯತೆಯನ್ನು ಆನ್ಲೈನ್ ನಲ್ಲಿ ಪರೀಕ್ಷಿಸುವಂತೆ ತನ್ನದೇ ಆದ ಆನ್ಲೈನ್ ಸಾಫ್ಟ್ವೇರ್ ಒಂದನ್ನು ರೂಪಿಸಿ, ಹೋಟೆಲ್ ಲಾಡ್ಜಿಂಗ್ ಬ್ಯುಸಿನೆಸ್ ಚೈನ್ ಅನ್ನು ರೂಪಿಸಲು ಯೋಚಿಸಿದ್ದ. ಆ ಯೋಜನೆಯನ್ನು ಜಾರಿಗೂ ತಂದ. ಒರಾವೆಲ್ ಸ್ಟೇ ಎನ್ನುವ ಹೆಸರಿನಲ್ಲಿ 2011ರಲ್ಲಿ ಇದು ಜಾರಿಗೆ ಬಂದಿತು. ಆಗ ರಿತೇಶ್ ಗೆ ಕೇವಲ 17 ವರ್ಷ.


ಒರಾವೆಲ್ ಎಂಬ ಪರಿಕಲ್ಪನೆ ಆತನಿಗೆ ಮೂಡಿದ್ದು ಹೌದಾದರೂ.. ಏರ್-ಬಿ-ಎನ್-ಬಿ ಹೋಟೆಲ್ ನ ಮಾದರಿಯಿಂದ ಆತ ಪ್ರೇರಿತನಾಗಿದ್ದ ರಿತೇಶ್ ಗೆ ಮತ್ತಷ್ಟು ಮಾರ್ಗದರ್ಶನ ನೀಡಿದ್ದು ಭಾವನಾ ಅಗರ್ವಾಲ್. ಭಾವನ ಅಗರ್ವಾಲ್ ಸೆವೆಂಟಿ-ಎಂಎಂ ಎನ್ನುವ ಈ-ಕಾಮರ್ಸ್ ಪ್ಲಾಟ್ ಫಾರ್ಮ್ ನ ಸಿ.ಈ.ಓ ಆಗಿದ್ದವರು. ನಂತರ  ಓಯೋ ಬೋರ್ಡ್ ಮೆಂಬರ್ ಗಳಲ್ಲಿ ಒಬ್ಬರಾದರು. ಥೈಲ್ ವಿದ್ಯಾರ್ಥಿ ವೇತನದ ಜೊತೆಗೆ ವೆಂಚರ್ ನರ್ಸರಿ ಎಂಬ ಕಂಪನಿಯಿಂದ 30 ಲಕ್ಷದ ಹೂಡಿಕೆಯಿಂದ ಶುರುವಾದ ಈ ಕಂಪನಿ ರಿತೇಶ್ ಕನಸನ್ನು ಪೂರ್ಣಮಟ್ಟದಲ್ಲಿ ಯಶಸ್ವಿ ಮಾಡಲಿಲ್ಲ.


ಹತ್ತಿರದಲ್ಲೇ ಇದ್ದ ಹೋಟೆಲ್ ಗಳ ಲಭ್ಯತೆಯ ಕುರಿತು ಗ್ರಾಹಕರಿಗೆ ಮಾಹಿತಿ ದೊರೆಯುತ್ತಿದ್ದಾದರೂ.. ಅವರಿಗೆ ಬೇಕಾದ ಸರ್ವಿಸ್ ಅಷ್ಟು ಕಡಿಮೆ ಹಣದಲ್ಲಿ ಸಿಗಲು ಸಾಧ್ಯವಿರಲಿಲ್ಲ. ಆಗ ಭಾವನಾ ಅಗರ್ವಾಲ್ ಸಲಹೆಯ ಮೇರೆಗೆ ತಾವೇ ಹೋಟೆಲ್ ಜಾಗಕ್ಕೆ ಹೋಗಿ.. ಅಲ್ಲಿ ಕಡಿಮೆಯಿದ್ದ ಸೌಲಭ್ಯಗಳನ್ನು ಒದಗಿಸಿ, ಒಪ್ಪಿತವಾದವುಗಳನ್ನು ತಮ್ಮ ಬ್ರ್ಯಾಂಡ್ ಅಡಿಯಲ್ಲಿ ಸೇರಿಸಿಕೊಂಡರು. ಈ ರೀತಿ ಒರಾವೆಲ್ ಸ್ಟೇ 2013ರಲ್ಲಿ ಓಯೋ ಎಂಬ ಹೆಸರಿನಲ್ಲಿ ಪುನಃ ಶುರುವಾಯಿತು. 


2013 ಏಪ್ರಿಲ್ ನಲ್ಲಿ ಭಾರತದಲ್ಲಿ ಮೊದಲಿಗೆ 30 ಸ್ಥಳಗಳಲ್ಲಿ ಶುರುವಾದ ಓಯೋ ಇಂದು 80 ದೇಶಗಳಲ್ಲಿ, 800 ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 2018ರಲ್ಲಿ ಮಲೇಷಿಯಾದಲ್ಲಿ ತನ್ನ ಮೊದಲ ಅಂತರಾಷ್ಟ್ರೀಯ ಆಪರೇಷನ್ ಅನ್ನು ಶುರು ಮಾಡಿತು. ಅಂದಿನಿಂದ ಇಂದಿನವರೆಗೂ ಇದು ವಿಶ್ವದ ಮೂರನೇ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಲೀಸ್ ಹಾಗೂ ಫ್ರಾಂಚೈಸಿ ಪಡೆದಿರುವ ಹೋಟೆಲ್, ಮನೆ ಹಾಗೂ ಲಿವಿಂಗ್ ಏರಿಯಾಗಳಲ್ಲಿ ಎರಡನೇ ಸ್ಥಾನ ಪಡೆದಿದೆ. 'ಖೈಲಿ ಜೆನ್ನರ್' ಬಳಿಕ ವಿಶ್ವದ ಯುವ ಬಿಲಿಯನೇರ್ ಎಂದೇ ಹೆಸರುವಾಸಿಯಾಗಿರುವವರು ರಿತೇಶ್ ಅಗರ್ವಾಲ್.


ಈಗ ಓಯೋದಲ್ಲಿ ಒಂದು ತಿಂಗಳಿಗೆ ಒಂದು ಕೋಟಿಗೂ ಅಧಿಕ ಬುಕ್ಕಿಂಗ್ ಗಳಾಗುತ್ತಿವೆ. 1,30,000ಕ್ಕೂ ಅಧಿಕ ಮನೆಗಳಿವೆ. ಓಯೋ ಕೇವಲ ಮಧ್ಯಮ ವರ್ಗದವರ ಆನ್ಲೈನ್ ಹೋಟೆಲ್ ಮಾತ್ರವಲ್ಲ. ಅವರವರ ಸ್ಟೇಟಸ್ ಗೆ ಹಾಗೂ ಹಣಕ್ಕೆ ತಕ್ಕಂತೆ ಸೇವೆಗಳನ್ನು ನೀಡುವತ್ತಲೂ ಗಮನಹರಿಸಿ ಈಗ ಹಲವಾರು ಹೆಸರಿನಿಂದ ತನ್ನ ಸೇವೆಯನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಬೇಕಾದ ವಸತಿಗಾಗಿ 'ಓಯೋ ಲೈಫ್', ರಜಾದಿನಗಳಿಗೆ ಮಾತ್ರ ಬೇಕಾದ ವೆಕೇಷನ್ ಮನೆಗಳಿಗಾಗಿ ಬಾಡಿಗೆ ನೀಡುವ ಬ್ಯುಸಿನೆಸ್ ಟ್ರಾವೆಲರ್ ಗಳಿಗಾಗಿ ಅತಿ ಹೆಚ್ಚು ಮತ್ತು ಕಡಿಮೆ ದಿನಗಳ ಟ್ರಿಪ್ ಗಳಿಗೆ ನೋಡಿಕೊಂಡು 'ಸಿಲ್ವರ್ ಕೀ' ಎಂಬ ಹೆಸರಿನಲ್ಲಿ, ಪ್ರೀಮಿಯಂ ಎಕಾನಮಿ ಜನರಿಗಾಗಿ 'ಓಯೋ ಟೌನ್-ಹೌಸ್' ಎಂದು, ಕಾರ್ಪೊರೇಟ್ ನವರಿಗೆ ಬೇಕಾದ ಹೈ ಸ್ಪೀಡ್ ವೈ-ಫೈ ವರ್ಕ್ ಸ್ಟೇಷನ್ ಗಳಿಗೆಂದು 'ಓಯೋ ವರ್ಕ್ ಸ್ಪೇಸ್', ಮದುವೆಯ ಪ್ರತಿ ಚಟುವಟಿಕೆಗಳನ್ನು ನಿಭಾಯಿಸಲು 'ಓಯೋ ವೆಡ್ಡಿಂಗ್ಸ್.ಇನ್' ಹೀಗೆ ಹಲವು ರೂಪಗಳಲ್ಲಿ ಓಯೋ ತನ್ನ ಛಾಪು ಮೂಡಿಸಿದೆ. 


ಒಂದೇ ಒಂದು ಸ್ವಂತ ಹೋಟೆಲ್ ಅನ್ನು ಕೂಡಾ ಹೊಂದಿರದೆ 'ಓಯೋ' ಎಂಬ ಬ್ರ್ಯಾಂಡ್ ನೇಮ್ ಅಡಿಯಲ್ಲಿ ಹಲವಾರು ಹೋಟೆಲುಗಳನ್ನು ಒಗ್ಗೂಡಿಸಿದ ಓಯೋ ಗೆಲುವನ್ನು ಕಂಡು ಹಲವಾರು ಸುತ್ತಿನ ಹೂಡಿಕೆಗಳು ಒದಗಿ ಬಂದಿವೆ. 2013 ರಿಂದ ಈಚೆಗೆ ಲೈಟ್ ಸ್ಪೀಡ್ ವೆಂಚರ್ ಪಾರ್ಟ್ನರ್ ನವರು ನಾಲ್ಕು ಕೋಟಿ ಹೂಡಿಕೆ ಮಾಡಿದ್ದು, ಡಿಎಸ್‍ಜಿ ಕನ್ಸ್ಯುಮರ್ ಪಾರ್ಟ್ನರ್ ಕೂಡಾ ಹೂಡಿಕೆ ಮಾಡಿದ್ದಾರೆ. ಜಪಾನಿನ ಬಹುದೊಡ್ಡ ಹೂಡಿಕೆದಾರರಾದ ಸಾಫ್ಟ್ ಬ್ಯಾಂಕ್ ನೂರು ಮಿಲಿಯನ್ ಡಾಲರ್ ಗಳಷ್ಟು ಹೂಡಿಕೆ ಮಾಡಿದ್ದು.. 2018ರಲ್ಲಿ ಯೂನಿಕಾರ್ನ್ ಕಂಪನಿಯ ಅಡಿಯಲ್ಲಿ ಓಯೋ ಹೆಸರನ್ನು ಕಂಡಾಗ.. ಮತ್ತೆ 80 ಮಿಲಿಯನ್ ಡಾಲರ್ ಗಳಷ್ಟು ಹೂಡಿಕೆಯನ್ನು ಮಾಡಿದೆ. ಜುಲೈ 2018ರಲ್ಲಿ ಮೈಕ್ರೋಸಾಫ್ಟ್ ಕೂಡ ಐದು ಮಿಲಿಯನ್ ಡಾಲರ್ ಗಳಷ್ಟು ಹೂಡಿಕೆ ಮಾಡಿದೆ. ಕೈಯಲ್ಲಿ ಹಣವನ್ನು ಇಟ್ಟುಕೊಂಡೇ ಬ್ಯುಸಿನೆಸ್ ಮಾಡಬೇಕು ಎಂದೇನಿಲ್ಲ. ಕೆಲವು ಬ್ಯುಸಿನೆಸ್ ಐಡಿಯಾಗಳು ಹಾಗೂ ಮುನ್ನುಗುವ ಚಾಣಕ್ಷತೆ, ಆಲೋಚನ ತಂತ್ರಗಳು.. ಬ್ಯುಸಿನೆಸ್ ಗೆ ಬಂಡವಾಳವನ್ನು ಹೀಗೆಯೂ ತರಬಲ್ಲವು ಎಂಬುದಕ್ಕೆ ಓಯೋ ಒಂದು ಉತ್ತಮ ಉದಾಹರಣೆ.


ಹಾಗೆಂದು, ಓಯೋ ರಾತ್ರೋ-ರಾತ್ರಿಯಲಿ ವಿಶ್ವಪ್ರಸಿದ್ಧಿಯಾದ ಬ್ರ್ಯಾಂಡ್ ಏನಲ್ಲ. ಇದಕ್ಕೂ ಹಲವಾರು ಏಳು-ಬೀಳಿನ ಕಥೆಗಳಿವೆ. ಇದರ ಹಿಂದೆ ಹಲವಾರು ಗಾಳಿ ಸುದ್ದಿಗಳೂ ಇವೆ. ಕೋವಿಡ್ ನ ದುರಿತಕಾಲದ ನಷ್ಟವೂ ಇದೆ.


2018ರಲ್ಲಿ 211 ಮಿಲಿಯನ್ ಡಾಲರ್ ಗಳಷ್ಟು ವಹಿವಾಟು ನಡೆಸಿದ ಓಯೋ ವಹಿವಾಟು 2018 ಕ್ಕಿಂತ 6 ಪಟ್ಟು ಹೆಚ್ಚು. ಹಾಗೆಯೇ.. 2019ರಲ್ಲಿ ಇದು 951 ಮಿಲಿಯನ್ ಡಾಲರ್ ಗಳಷ್ಟು. ಎಂದರೆ, 2018 ಕ್ಕಿಂತ ನಾಲ್ಕುವರೆ ಪಟ್ಟಿನಷ್ಟು ಹೆಚ್ಚಾಗಿತ್ತು. ಆದರೆ, 2020-21ರ ಕೋವಿಡ್ ಸಮಯದಲ್ಲಿ 50-60% ನಷ್ಟವನ್ನು ಹೊಂದಿದೆ. ಆ ನಷ್ಟವನ್ನು ಸರಿದೂಗಿಸಲು ಉದ್ಯೋಗಿಗಳಿಗೆ ತಮ್ಮ ಸಂಬಳದ ಮುಕ್ಕಾಲು ಭಾಗವನ್ನಷ್ಟೇ ಪಾವತಿ ಮಾಡಲಾಗುತ್ತಿತ್ತು. 


ಓಯೋ ಹೋಟೆಲ್ ವಸತಿಗಳಲ್ಲಿ ಕೆಲವು ಆತ್ಮಹತ್ಯೆ ಹಾಗೂ ಬೇರೆಯ ಪ್ರಕರಣಗಳು ದಾಖಲಾಗಿವೆ. ಅದು ಹೋಟೆಲಿಗೆ ಸಂಬಂಧಿಸಿದ ಕಾನೂನಿನ ವಿಚಾರವಾಗಿದ್ದರೂ.. ಹೋಟೆಲಿಗೆ ತನ್ನ ಸಹಕಾರ ನೀಡಿ ಕಾನೂನಿನ ಸಮರಕ್ಕೆ ಜೊತೆಯಾಗಿದೆ. ಆದರೆ, 2019ರಲ್ಲಿ ಬೆಂಗಳೂರಿನ ಹೋಟೆಲ್ ಒಂದು ರಿತೇಶ್ ಅಗರ್ವಾಲ್ ಹಾಗೂ ಆರು ಇನ್ನಿತರರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಇದಕ್ಕೆ ಕಾರಣ ಓಯೋದಿಂದ ತಿಂಗಳೊಂದಕ್ಕೆ ತನಗೆ ಏಳು ಲಕ್ಷ ರೂಪಾಯಿ ಬರಬೇಕಾಗಿದ್ದರೂ.. ಅದನ್ನು ತನಗೆ ನೀಡಿಲ್ಲ. ಮೋಸ ಮಾಡಿದ್ದಾರೆ ಎಂಬುದು. ಆದರೆ, ರಿತೇಶ್ ಅಗರ್ವಾಲ್ ಹಾಗೂ ಓಯೋ ಕಂಪನಿ ಇದನ್ನು ಅಲ್ಲಗೆಳೆದಿದ್ದು ಪ್ರಕರಣ ಅಷ್ಟಕ್ಕೇ ನಿಂತಿದೆ.


ಉತ್ತರ ಭಾರತದ ಕೆಲವು ಹೋಟೆಲುಗಳು ಓಯೋ ತಮ್ಮಿಂದ ಪ್ಲಾಟ್ಫಾರ್ಮ್ ಫೀ ಎಂದು.. ಪಾವತಿಸಿಕೊಳ್ಳುವ ಹಣಕ್ಕಿಂತ ಹೆಚ್ಚಿನ ಹಣವನ್ನು ಪಡೆಯುತ್ತಿದೆ. ಇದು ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದವು. ಆದರೆ ಓಯೋ ಈ ಆರೋಪವನ್ನು ನಿರಾಕರಿಸಿದ್ದು.. ಪ್ಲಾಟ್ಫಾರ್ಮ್ ಫೀಸ್ ಹಾಗೂ ವಿಸಿಬಿಲಿಟಿ ಬೂಸ್ಟ್ ಎಂದು ಆ ಹೋಟೆಲು ಹೆಚ್ಚು ಜನರಿಗೆ ರೆಕಮೆಂಡ್ ಆಗಲು ಬೇಕಾದಷ್ಟು ಹಣವನ್ನಷ್ಟೇ ನಾವು ತೆಗೆದುಕೊಳ್ಳುತ್ತಿದ್ದೇವೆ ಎಂಬ ಸಮರ್ಥನೆ ನೀಡಿದೆ. ಉತ್ತರ ಭಾರತದ 300 ಹೋಟಲುಗಳು ತಾವು ಓಯೋದಿಂದ ಹೊರ ಬಂದಿದ್ದೇವೆ ಎಂದು ಘೋಷಿಸಿದರು. ಆದರೆ, ಓಯೋ ದಲ್ಲಿ ಆ ಹೋಟಲುಗಳ ಹೆಸರುಗಳನ್ನು ಕೈಬಿಡದೆ ಆ ಹೋಟೆಲ್ಗಳ ರೂಂ ಪೂರ್ತಿ ಬುಕ್ ಆಗಿದೆ ಎಂದು ತೋರಿಸುತ್ತಿದೆ ಎಂಬ ಆರೋಪವನ್ನೂ ಮಾಡಿದ್ದರು. ಆದರೆ ಓಯೋ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ, ಇದು ತನಗೆ ನಷ್ಟವೇ ಅಲ್ಲ. ಈ ರೀತಿಯ ಯಾವ ಪ್ರಕರಣಗಳು ನಡೆಯುತ್ತಿಲ್ಲ.. ಎಂದು ಹೇಳಿ, ಬ್ಯುಸಿನೆಸ್ ನಲ್ಲಿ ಇಂತಹಾ ತಪ್ಪು ಆರೋಪಗಳನ್ನು ಸಹಾ ಎದುರಿಸಲು ಸಿದ್ಧರಾಗಿರಬೇಕು. ಅಲ್ಲದೇ, ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು ಎಂದು ಹೇಳಿ ಸುಮ್ಮನಾಗಿದೆ. ಹಾಗೆಂದು ಓಯೋ ಖ್ಯಾತಿಯೇನೂ ಕುಗ್ಗಿಲ್ಲ. ಅದರ ಲಾಭವೂ ಕುಗ್ಗಿಲ್ಲ.


ರಿತೇಶ್ ಅಗರ್ವಾಲ್ ನನ್ನು ಕೇವಲ ಕಾಲೇಜ್ ಡ್ರಾಪ್ ಔಟ್ ನಂತೆಯೋ ಇಲ್ಲ ಕೇವಲ ಕೋಟ್ಯಾಧಿಪತಿಯಂತೆಯೋ ನೋಡಿದರೆ  ಸರಿಯಾಗದು. ಎರಡೂ ವಿರುದ್ಧ ದೃಷ್ಟಿಕೋನಗಳು ಎಂದರೂ ತಪ್ಪಾಗಲಾರದು. ಆತ ಕಾಲೇಜ್ ಡ್ರಾಪ್ ಔಟ್ ಆಗಿರಬಹುದಾದರೂ.. ಆತನ ಕೌಶಲ್ಯವೆಷ್ಟಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು. ಆತ ಕೋಟ್ಯಾಧಿಪತಿ ಎಂದು ಮಾತ್ರವೇ ಗಮನಿಸುವವರು.. ಆತ ಅದಕ್ಕಾಗಿ ಪಟ್ಟ ಶ್ರಮ, ಮಾಡಿದ ತಪ್ಪುಗಳು, ಆ ತಪ್ಪುಗಳಿಂದ ಕಲಿತ ಪಾಠ ಅದಕ್ಕೆ ತೆತ್ತ ಬೆಲೆಯನ್ನೂ ಗಮನಿಸಬೇಕು.


'ಬ್ಯುಸಿನೆಸ್ ಎಂದರೆ ಕೇವಲ ಸಾಮ್ರಾಜ್ಯವನ್ನು ನಿರ್ಮಾಣ ಮಾಡುವುದಲ್ಲ.. ಕೇವಲ ಸಂಪತ್ತನ್ನು ಒಟ್ಟುಗೂಡಿಸುವುದಲ್ಲ.. ಬದಲಾಗಿ ಅದನ್ನು ಸಮಾಜಕ್ಕೆ ತಿರುಗಿ ಕೊಡಬೇಕು.' ಇದಕ್ಕಾಗಿಯೇ ನಾನು ಜನರಿಗೆ ಸಹಾಯ ಮಾಡಲು ಹಾಗೂ ಅವರಿಗೆ ತಕ್ಕ ಹೋಟೆಲ್ ವ್ಯವಸ್ಥೆ ಮಾಡಲು ಪಾಕೆಟ್ ಫ್ರೆಂಡ್ಲಿಯಾದ ಓಯೋವನ್ನು ನಿರ್ಮಿಸಿದ್ದು ಎನ್ನುತ್ತಾರೆ ರಿತೇಶ್ ಅಗರ್ವಾಲ್.


ಬ್ಯುಸಿನೆಸ್ ಎಂಬುದು ಕೇವಲ ಅಂತಿಮ ಫಲಿತಾಂಶ ಪಡೆಯುವುದಲ್ಲ. ಬದಲಾಗಿ ಅದು ಪ್ರತಿದಿನದ ಯುದ್ಧವೇ ಸರಿ. ಇದಕ್ಕಾಗಿ ಪ್ರತಿದಿನವೂ ಬರುವ ಪ್ರತಿ ಸವಾಲುಗಳನ್ನೂ ಎದುರಿಸಬೇಕು. ಹಾಗೆಯೇ ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಆಲೋಚಿಸಬೇಕು. ಇದಕ್ಕಾಗಿ ಬೇಕಾಗಿರುವುದು ಕೇವಲ ಯೋಚನಾ ಶಕ್ತಿ. ಅದರಲ್ಲೂ ವಿಭಿನ್ನವಾದ ಯೋಚನಾಲಹರಿ. ತನ್ನ ಇಷ್ಟದ ಫೀಲ್ಡ್ ನಲ್ಲಿಯೇ ಮುಂದುವರಿದು, ಅದರಲ್ಲಿ ಎಕ್ಸ್ಪರ್ಟ್ ಆಗಿ, ತಾಳ್ಮೆ ಹಾಗೂ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎನ್ನುತ್ತಾ ಯುವಕರಿಗೆ ಮಾರ್ಗದರ್ಶಿಯಾಗಿ ನಿಲ್ಲುತ್ತಾ.. ಸೋತೇ ಹೋದೆ ಎನ್ನುವವರಿಗೆ ಬಲ ತುಂಬುತ್ತಾ.. ಓಯೋ ಮೂಲಕ ಬ್ಯುಸಿನೆಸ್ ನ ಪಾಠ ಹೇಳುತ್ತಿದ್ದಾರೆ ರಿತೇಶ್ ಅಗರ್ವಾಲ್. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ