ಬುಧವಾರ, ಏಪ್ರಿಲ್ 22, 2026

ಟಿ.ವಿ.ಎಸ್ ಟ್ರ್ಯಾಕ್ ನಲ್ಲಿ.. ( ಬ್ಯುಸಿನೆಸ್ ಡೈರಿ ಪುಟ - 30)


ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಮನುಷ್ಯ ಈಗ ಜಗತ್ತಿನ ಜೊತೆಗೆ ಸಾಗಲು ವಿವಿಧ ರೀತಿಯ ಪಯಣಗಳನ್ನು ನಡೆಸುತ್ತಾ ಇದ್ದಾನೆ. ಅದಕ್ಕೆ ಆವಿಷ್ಕಾರಗಳು ಹೇಗೆ ದಾರಿ ಮಾಡಿಕೊಟ್ಟಿವೆಯೋ.. ಹಾಗೆಯೇ ಆ ಹೊಸತನಕ್ಕೆ ಕಾರಣವಾದ ವ್ಯಕ್ತಿಗಳು, ದಾರಿಗಳು ಸಹ ವಿಭಿನ್ನವೇ.. ಬಡತನದಿಂದ ಸಿರಿತನಕ್ಕೇರಲು ಬ್ಯುಸಿನೆಸ್ ಒಂದು ಮಾರ್ಗವೇ ಆದರೂ.. ತನ್ನಂತೆಯೇ ತೊಳಲುತ್ತಾ ಹೊರ ಬರುವ ಮಾರ್ಗ ಅರಸುತ್ತಿರುವ ಎಷ್ಟೋ ಜನರಿಗೆ ಉದ್ಯೋಗವೂ ಆಗುವುದಲ್ಲದೆ.. ಅದರಿಂದ ಎಷ್ಟೋ ಜನರು ಉಪಕೃತರೂ ಆಗುತ್ತಾರೆ. ಉದಾಹರಣೆಗೆ ಒಂದು ಊರಿನಿಂದ ಮತ್ತೊಂದು ದೂರದ ಊರಿಗೆ ಹೋಗಲು ವಾಹನ ಸೌಲಭ್ಯ ಇಲ್ಲದಿರುವುದನ್ನು ಕಂಡು ಆ ಊರಿಗೆ ಬಸ್ ಪ್ರಯಾಣದ ವ್ಯವಸ್ಥೆ ಮಾಡಿದಾಗ, ಆತ ಬಸ್ ಮಾಲೀಕನಾಗಿ ಉದ್ಯಮವನ್ನು ಆರಂಭಿಸಿದರೆ.. ದೂರದೂರಿನ ಪ್ರಯಾಣ ವ್ಯವಸ್ಥೆಯಿಂದ ಎಷ್ಟೋ ಜನರು ಪ್ರತಿ ದಿನವೂ ಉಪಕೃತರಾಗುತ್ತಾರೆ. ಅದು ಆತನ ಆದಾಯದ ಮೂಲವಾದರೆ.. ಚಾಲಕ, ನಿರ್ವಾಹಕರಿಗೆ ಉದ್ಯೋಗದ ಮಾರ್ಗ, ಪ್ರಯಾಣಿಕರಿಗೆ ಸುಲಭದ ಪ್ರಯಾಣ. ಈ ರೀತಿಯ ಸಂದರ್ಭವನ್ನು ಕೇಳಿದಾಗ ನಿಮಗೆ ವಿಷ್ಣುವರ್ಧನ್ ಅಭಿನಯದ ಕನ್ನಡದ ಸೂರ್ಯವಂಶ ಸಿನಿಮಾ ನೆನಪಾಯಿತೇ..?? ಕೇವಲ ಸಿನಿಮಾಗಳಲ್ಲಿ ಮಾತ್ರ ಈ ರೀತಿಯ ಪ್ರಸಂಗವು ಬರುತ್ತದೆ ಎಂದುಕೊಂಡರೆ ಅದು ತಪ್ಪಾಗಬಹುದು. 


ಕೇವಲ ಎರಡು ಬಸ್ ಗಳನ್ನು ಮುಂದಿಟ್ಟುಕೊಂಡು ಸಾರಿಗೆ ಉದ್ಯಮ ಶುರು ಮಾಡಿದ ವ್ಯಕ್ತಿ ಕಟ್ಟಿದ ಬ್ಯುಸಿನೆಸ್ ನ ಬ್ರ್ಯಾಂಡ್ ಈಗ ಬೇರೆಯದ್ದೇ ರೂಪ ಪಡೆದು ನಿಂತಿದೆ. ಬ್ಯುಸಿನೆಸ್ ನ ಸ್ವರೂಪ ಬದಲಾಗುವುದೇ ಅದರ ಬೆಳವಣಿಗೆಯಲ್ಲವೇ..?? ಅಂತೆಯೇ.. ಟಿ.ವಿ.ಎಸ್ ನ ಟ್ರ್ಯಾಕ್ ಕೂಡಾ ಬದಲಾಗುತ್ತಾ ಬಂದಿದೆ. ಇಂದು ಟಿ.ವಿ.ಎಸ್ ಎಂಬ ಹೆಸರು ಕೇಳಿದಾಗ ನಾವು ಕೇವಲ ದ್ವಿಚಕ್ರ ವಾಹನಗಳನ್ನು ಮಾತ್ರ ಊಹೆ ಮಾಡಿಕೊಂಡರೆ ಅದು ತಪ್ಪಾಗಬಹುದು. ಅದು ಕೇವಲ ದ್ವಿಚಕ್ರ ವಾಹನಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಕರ್ನಾಟಕದ ನಂಜನಗೂಡಿನಲ್ಲಿ ಅದರ ಒಂದು ತಯಾರಿಕಾ ಘಟಕ, ಬೆಂಗಳೂರಿನ ಹತ್ತಿರದ ತಮಿಳುನಾಡಿಗೆ ಸೇರಿದ ಹೊಸೂರಿನಲ್ಲಿಯೂ ಅದರ ದೊಡ್ಡ ತಯಾರಿಕಾ ಘಟಕವಿದೆ. ಆದರೆ, ಅದರ ಕೇಂದ್ರ ಕಚೇರಿ ಇರುವುದು ಚೆನ್ನೈನಲ್ಲಿ.


ಭಾರತದಲ್ಲಿ ಇಂದು ಅತಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನದಲ್ಲಿರುವುದು ಆಟೋಮೊಬೈಲ್ ಕ್ಷೇತ್ರ ಎಂದರೂ ತಪ್ಪಾಗಲಾರದು. ಭಾರತದಲ್ಲಿ ಅತಿ ದೊಡ್ಡ ಆಟೋಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ..  ಭಾರತದಲ್ಲಿ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾಗಿರುವ, ಭಾರತದಲ್ಲಿ ದ್ವಿಚಕ್ರವಾಹನವನ್ನು ರಫ್ತು ಮಾಡುವ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯೂ ಆದ ಟಿ.ವಿ.ಎಸ್ ಇಂದು 60 ದೇಶಗಳಿಗಿಂತಲೂ ಹೆಚ್ಚು ದೇಶಗಳಲ್ಲಿ ತನ್ನ ವ್ಯಾಪಾರದ ಜಾಲವನ್ನು ಹರಡಿದೆ. 


ಇಂತಹಾ ಬ್ರ್ಯಾಂಡ್ ನ ಸ್ಥಾಪಕರ ಹೆಸರು ತಿರುಕ್ಕುರುನ್ಗುಡಿ ವೆಂಗಾರಮ್ ಸುಂದರಮ್ ಅಯ್ಯಂಗಾರ್. ಅವರ ಹೆಸರನ್ನು ಹಾಗೂ ಅವರ ನಾಲ್ಕು ಮಕ್ಕಳ ಹೆಸರಿನ ಸಂಕ್ಷಿಪ್ತ ರೂಪವನ್ನಾಗಿಸಿ ಟಿ.ವಿ ಅಯ್ಯಂಗಾರ್ ಅಂಡ್ ಸನ್ಸ್ ಅಂದರೆ ಟಿ.ವಿ.ಎಸ್ ಅನ್ನಾಗಿಸಿದರು.


ಟಿ.ವಿ ಅಯ್ಯಂಗಾರ್ ಅವರು ತಮ್ಮ ವೃತ್ತಿ ಬದುಕನ್ನು ಶುರು ಮಾಡಿದ್ದು ತಮ್ಮ ತಂದೆಯಂತೆ ವಕೀಲರಾಗಿಯಾದರೂ.. ನಂತರ ರೈಲ್ವೆ ಕ್ಷೇತ್ರದಲ್ಲಿಯೂ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಕೆಲಸ ಮಾಡಿದರು. ಆದರೆ, ತಮ್ಮ ವೃತ್ತಿಗಿಂತಲೂ ಬೇರೆಯ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಹಸ ಮಾಡಲು ಅವರ ಮನಸ್ಸು ತುಡಿಯುತ್ತಿತ್ತು. ಹಾಗಾಗಿ, ಮನಸ್ಸಿನ ಮಾತಿಗೆ ಓಗೊಟ್ಟು ತಮ್ಮ 35ನೇ ವರ್ಷದಲ್ಲಿ ಎಂದರೆ 1911ರಲ್ಲಿ ಅವರ ಕೆಲಸವನ್ನೆಲ್ಲ ತೊರೆದು ಗ್ರಾಮೀಣ ಸಾರಿಗೆ ವ್ಯವಸ್ಥೆ ಮಾಡಲು ಎರಡು ಬಸ್ ಗಳಿಂದ ಬಸ್ ಸರ್ವಿಸ್ ಶುರು ಮಾಡಿದರು. ಆ ಎರಡು ಬಸ್ಸುಗಳು ಮಧುರೈ ಹಾಗೂ ದೇವರಕೋಟೈ ನಡುವಿನ 100 ಕಿಲೋಮೀಟರ್ ಅಂತರವನ್ನು ಕ್ರಮಿಸುತ್ತಿದ್ದವು. ಶುರು ಮಾಡಿದ ಹೊಸದರಲ್ಲಿ 4 ರೂಪಾಯಿ ಟಿಕೆಟ್ ಬೆಲೆಯನ್ನಿಟ್ಟು ಜೊತೆಗೆ ಉಚಿತ ಊಟವನ್ನು ನೀಡುತ್ತಿದ್ದರು ಟಿ.ವಿ ಅಯ್ಯಂಗಾರ್. ಆಗಿನ ಕಾಲದಲ್ಲಿ ಮೊದಲ ಬಾರಿಗೆ ಟಿಕೆಟ್ ಮುದ್ರಿಸಿ ಪ್ರಯಾಣಿಕರಿಗೆ ನೀಡುವುದು, ಬಸ್ಸುಗಳ ಓಡಾಟಕ್ಕೆ ಸರಿಯಾದ ಸಮಯ ಪಾಲನೆ ಹಾಗೂ ಬಸ್ ಚಾಲಕರಿಗೆ ಟ್ರೈನಿಂಗ್ ಅನ್ನು ನೀಡಿದ ಖ್ಯಾತಿಯೂ ಇವರದ್ದೇ. ಬಸ್ ಪಂಚರ್ ಆದರೆ.. ಅದರ ರಿಪೇರಿಗೆ ಹೆಚ್ಚಿನ ಸಮಯ ಬೇಕಾಗಬಹುದೆಂದು.. ಮುನ್ನೆಚ್ಚರಿಕೆಯಾಗಿ ಬಸ್ ಅಡಿಯಲ್ಲಿ ಅಯಸ್ಕಾಂತವನ್ನಿಟ್ಟು ರಸ್ತೆಯಲ್ಲಿ ಬಿದ್ದಿರಬಹುದಾದ ಮೊಳೆ ಹಾಗೂ ಲಾಳ ಚುಚ್ಚದಂತೆ ಸೆಳೆಯುವ ವ್ಯವಸ್ಥೆಯನ್ನು ಮಾಡಿದರು. ದಕ್ಷಿಣ ಭಾರತದಲ್ಲಿ ಗ್ರಾಮೀಣ ಸಾರಿಗೆಯನ್ನು ಬಲಪಡಿಸಿದ ಹೆಗ್ಗಳಿಕೆ ಇವರದ್ದೇ..


ಬಸ್ಸಿನಿಂದ ಲಾರಿ ಸರ್ವಿಸ್ ಗೂ ಇವರ ಉದ್ಯಮ ವಿಸ್ತರಿಸಿತು. 1955 ರ ವರೆಗೂ.. ಅಂದರೆ ಟಿ.ವಿ ಅಯ್ಯಂಗಾರ್ ಅವರ ಮರಣದವರೆಗೂ 'ಸದರನ್ ರೋಡ್ ವೇಸ್ ಲಿಮಿಟೆಡ್' ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಈಗಿನ ಟಿ.ವಿ.ಎಸ್. 1978 ರಲ್ಲಿ ಅವರ ಮಗ ಟಿ.ಎಸ್ ದೊರೈಸ್ವಾಮಿ ಇದನ್ನು ಟಿ.ವಿ ಅಯ್ಯಂಗಾರ್ ಅಂಡ್ ಸನ್ಸ್ ಗ್ರೂಪ್ ಎಂದರೆ ಟಿ.ವಿ.ಎಸ್ ಗ್ರೂಪ್ಸ್ ಎಂದು ಬದಲಾಯಿಸಿದರು. 


ಟಿ.ವಿ.ಎಸ್ ಕೇವಲ ಆಟೋಮೊಬೈಲ್ ಕ್ಷೇತ್ರದಲ್ಲಿ ಮಾತ್ರವೇ ಇರಲಿಲ್ಲ. ಈಗ ಇದರ ಬ್ಯುಸಿನೆಸ್ ಬಹಳ ವಿಸ್ತಾರವಾಗಿತ್ತು. ಟಿ.ವಿ.ಎಸ್ ಗ್ರೂಪ್ಸ್ ಎಂಬ ಪೇರೆಂಟಿಂಗ್ ಕಂಪನಿಯ ಅಡಿಯಲ್ಲಿ ಟೈರುಗಳ ಉತ್ಪಾದನೆಗಾಗಿ 'ಟಿ.ವಿ.ಎಸ್ ಶ್ರೀಚಕ್ರ', ಸ್ಟೀಲ್ ಅನ್ನು ಒಳಗೊಂಡಿರುವ ಚಕ್ರಗಳ ಉತ್ಪಾದನೆಗಾಗಿ 'ವೀಲ್ಸ್ ಇಂಡಿಯಾ', ಆಟೋಮೊಟಿವ್ ಕಾಸ್ಟಿಂಗ್ ಕಂಪನಿಯಾಗಿ 'ಸುಂದರಮ್ ಕ್ಲೇಟನ್', ಬ್ರೇಕ್ ಗಳ ಉತ್ಪಾದನೆಗಾಗಿ 'ಸುಂದರಮ್ ಬ್ರೇಕ್', ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ 'ನಿಪ್ಪಾನ್ ಎಲೆಕ್ಟ್ರಿಕಲ್ಸ್', 'ಸುಂದರಂ ಫಾಸ್ಟ್ನರ್ಸ್' , 'ಸುಂದರಂ ಫೈನಾನ್ಸ್', 'ಟಿ.ವಿ.ಎಸ್ ಎಲೆಕ್ಟ್ರಾನಿಕ್ಸ್' ಹೀಗೆ ಹಲವಾರು ವಿಭಾಗಗಳು ಕಾರ್ಯಾ ನಿರ್ವಹಿಸುತ್ತಿವೆ.


1962 ರಲ್ಲಿ ಸುಂದರಮ್ ಕ್ಲೇಟನ್ ಶುರುವಾಯಿತು.I ಇದಕ್ಕೆ ಕಾರಣವಾದದ್ದು ಕ್ಲೇಟನ್ ದಿವಾನ್ರೇ ಹೋಲ್ಡಿಂಗ್ಸ್ ಮತ್ತು ಟಿ.ವಿ.ಎಸ್ ನಡುವಿನ ದ್ವಿಪಕ್ಷೀಯ ಒಪ್ಪಂದ. ಇಂದಿಗೂ ಟಿ.ವಿ.ಎಸ್ ಹೆಚ್ಚಿನ ಆದ್ಯತೆ ಇದಕ್ಕೇ.  1980ರಲ್ಲಿ ಭಾರತದ ಮೊದಲ ಟೂ-ಸೀಟರ್ ಮೊಪೆಡ್ ಟಿ.ವಿ.ಎಸ್ 50ಯನ್ನು ತಮಿಳುನಾಡಿನ ಹೊಸೂರು ತಯಾರಿಕಾ ಘಟಕದಿಂದ ಬಿಡುಗಡೆ ಮಾಡಿದರು. 


ತಂತ್ರಜ್ಞಾನದ ಕುರಿತಾಗಿ ಇನ್ನಷ್ಟು ಅರಿಯಬೇಕಿತ್ತು. ಹಾಗಾಗಿ 1987ರಲ್ಲಿ ಸುಂದರಂ ಕ್ಲೇಟನ್ ಲಿಮಿಟೆಡ್ ಜಪಾನಿನ ಕಾರು ದೈತ್ಯನಂದೇ ಹೆಸರಾಗಿದ್ದ ಸುಜುಕಿಯ ಜೊತೆ ಒಪ್ಪಂದ ಮಾಡಿಕೊಂಡು. ಟಿ.ವಿ.ಎಸ್-ಸುಜುಕಿಯ ಮೊದಲ ದ್ವಿಚಕ್ರ ವಾಹನವನ್ನು 1989ರಲ್ಲಿ ಬಿಡುಗಡೆ ಮಾಡಿತು. 


ಬ್ಯುಸಿನೆಸ್ ಹೆಚ್ಚು ಲಾಭದಾಯಕವಾಗುವುದು ಹಾಗೂ ಜನಪ್ರಿಯವಾಗುವುದು ಹೆಚ್ಚು ಜನರನ್ನು ತನ್ನತ್ತ ಸೆಳೆದಾಗ. ಹಾಗೆ ಸೆಳೆಯಲು ಸಾಧ್ಯವಾಗುವುದು ಜನರಿಗೆ ಉಪಯುಕ್ತವಾದಾಗ. ಅದರಲ್ಲಿಯೂ ಮಧ್ಯಮ ವರ್ಗದ ಜನರಿಗೆ ಹೆಚ್ಚು ಉಪಯುಕ್ತವಾದರೆ.. ಅದು ಬೆಳೆಯುವ ವೇಗವೂ ಹೆಚ್ಚು. ಮಧ್ಯಮ ವರ್ಗದ ಜನರನ್ನು ತಲುಪಲು.. ಅವರ ಅಗತ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಿದ ಸಾರಿಗೆ ಸರ್ವಿಸ್ ಪ್ರೊವೈಡರ್.. ನಂತರದ ದಿನಗಳಲ್ಲಿ ಹತ್ತಿರದ ಪ್ರಯಾಣಕ್ಕೆ ಸೂಕ್ತವಾದ ಹಾಗೂ ಸೈಕಲ್ ಗಿಂತ ವೇಗವಾಗಿ ಸಾಗುವ ಹಾಗೂ ಅದಕ್ಕಿಂತ ಹೆಚ್ಚಿನ ಸೌಲಭ್ಯ ಒದಗಿಸುವ ಮೊಪೆಡ್ ಗಳನ್ನು ತಯಾರಿಸುವತ್ತ ಗಮನಹರಿಸಿತು. 1980ರಲ್ಲಿ ಇಂಡಿಯಾದ ಟೂ-ಸೀಟರ್ ಮೊಪೆಡ್ ಆಗಿ ಮಾರುಕಟ್ಟೆಗೆ ಬಂದ ಟಿ.ವಿ.ಎಸ್ 50 ಯಿಂದ ಶುರುವಾದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಇಂದು ವರ್ಷವೊಂದಕ್ಕೆ 21 ಲಕ್ಷಕ್ಕಿಂತಲೂ ಹೆಚ್ಚಿನ ದ್ವಿಚಕ್ರವಾಹನಗಳನ್ನು ತಯಾರಿಸುತ್ತಿದೆ.


ಬಸ್ಸು ಹಾಗೂ ಲಾರಿಗಳ ಸರ್ವಿಸ್ ನಾಚೆಗೆ ಮೋಟರ್ ಸೈಕಲ್, ಸ್ಕೂಟರ್, ಮೊಪೆಡ್, ತ್ರಿಚಕ್ರವಾಹನಗಳು, ವಾಹನಗಳ ಬಿಡಿ ಭಾಗಗಳ ರಿಪ್ಲೇಸ್ಮೆಂಟ್ ಎಲ್ಲದರತ್ತ ಗಮನಹರಿಸಿತು ಟಿ.ವಿ.ಎಸ್. ಈ ಕಂಪನಿಯ ಏಳಿಗೆಗೆ ರಿಸರ್ಚ್ ಅಂಡ್ ಡೆವಲಪ್ಮೆಂಟ್ ವಿಭಾಗದ ಸಹಾಯವೂ ಹೆಚ್ಚಿನದ್ದು.


ಹಲವಾರು ವಿಶೇಷತೆಗಳನ್ನು ಹೊಂದಿರುವ ತನ್ನ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡಿದ ಹೆಗ್ಗಳಿಕೆ ಟಿ.ವಿ.ಎಸ್ ಗಿದೆ. ಡಿಜಿಟಲ್ ಇಗ್ನಿಷನ್ ಹೊಂದಿರುವ ಭಾರತದ ಪ್ರಥಮ ಮೋಟರ್ ಸೈಕಲ್ 'ಟಿ.ವಿ.ಎಸ್ ಚಾಂಪ್'. ಭಾರತದಲ್ಲಿ ಬ್ಲೂಟೂತ್ ಅಥವಾ ಸ್ಮಾರ್ಟ್ ಕನೆಕ್ಟಿವಿಟಿಯನ್ನು ಹೊಂದಿರುವ ಪ್ರಥಮ ಸ್ಕೂಟರ್ 'ಟಿ.ವಿ.ಎಸ್ ಎನ್ಟೋರ್ಕ್'. ಟಿ.ವಿ.ಎಸ್ ನ ಮೊದಲ ಎಲೆಕ್ಟ್ರಿಕ್ ವಾಹನ ಐಕ್ಯೂಬ್.   ಭಾರತದಲ್ಲಿಯೇ ಪ್ರಪ್ರಥಮವಾಗಿ ತಯಾರಾದ ಸಂಪೂರ್ಣ ಸ್ವದೇಶಿ ಮೋಟರ್ ಸೈಕಲ್ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು 'ಟಿ.ವಿ.ಎಸ್ ವಿಕ್ಟರ್'.


ಸ್ವಿಜರ್ಲ್ಯಾಂಡ್ ನಲ್ಲಿ ತನ್ನದೇ ಈ-ಬೈಕ್ ಕಂಪನಿಯನ್ನು 'ಇಗೋ ಮೂವ್ಮೆಂಟ್' ಎಂಬ ಹೆಸರಿನಿಂದ ನಡೆಸುತ್ತಿದೆ. ಯು.ಕೆಯಲ್ಲಿ ನೂರು ವರ್ಷಕ್ಕೂ ಹಳೆಯದಾದ ಮೋಟರ್ ಸೈಕಲ್ ಕಂಪನಿಯನ್ನು ಕೊಂಡು 'ನಾರ್ಟನ್ ಮೋಟರ್ ಸೈಕಲ್' ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದೆ. ನೈಜೀರಿಯಾದಲ್ಲಿ ಹೆಚ್ಚು ಖ್ಯಾತಿಯಾಗಿರುವ ಟ್ರೈ ಸೈಕಲ್ ಗಳು ಟಿ.ವಿ.ಎಸ್ ಕಂಪನಿಯದ್ದೇ.. ಜಗತ್ತಿನಾದ್ಯಂತ ಓಡುತ್ತಿರುವ ಬಿ.ಎಂ.ಡಬ್ಲ್ಯೂ ಬೈಕ್ ಗಳಲ್ಲಿ 17% ಬೈಕ್ ಗಳನ್ನು ಉತ್ಪಾದಿಸುತ್ತಿರುವುದು  ಟಿ.ವಿ.ಎಸ್ ಹೊಸೂರಿನ ತಯಾರಿಕಾ ಘಟಕ.


ಟಿ.ವಿ.ಎಸ್ ಮೋಟರ್ಸ್ ನ ಲೋಗೋವನ್ನು ಗಮನಿಸಿದರೆ ಅಲ್ಲಿ ನಾಗಾಲೋಟದಿಂದ ಓಡುತ್ತಿರುವ ಕುದುರೆಯನ್ನು ಗಮನಿಸಬಹುದು. ಅದು ಓಡುತ್ತಿರುವುದು ಬಲಭಾಗಕ್ಕೆ.. ಇಂಗ್ಲೀಷ್ ನ ರೈಟ್ ಡೈರೆಕ್ಷನ್ ಗೆ. ಅದಕ್ಕೆ ಸರಿಯಾದ ದಿಕ್ಕಿಗೆ ಎಂದು ವ್ಯಾಖ್ಯಾನಿಸುವ ಅವರು ಭವಿಷ್ಯದ ಸರಿಯಾದ ಹಾದಿಯಲ್ಲಿ ಸಾಗುವ ಬೆಳವಣಿಗೆ ಹಾಗೂ ವೇಗವನ್ನು ಸೂಚಿಸುತ್ತಿದೆ ಎನ್ನುತ್ತಾರೆ.


ಚಲನೆಯ ಮೂಲಕ ಸ್ಪೂರ್ತಿ ತುಂಬುತ್ತೇವೆ ಎನ್ನುವ ಧ್ಯೇಯದಿಂದ ಸಾಗುತ್ತಿರುವ ಇವರಿಗೆ ಹಲವಾರು ಪ್ರತಿಸ್ಪರ್ಧಿಗಳೂ ಇದ್ದಾರೆ. ಹೀರೋ ಹೋಂಡಾ, ಬಜಾಜ್, ಯಮಹಾದಂತಹಾ ಪ್ರತಿಸ್ಪರ್ಧಿಗಳೂ ಇದ್ದರೆ. ಇವೆಲ್ಲವನ್ನೂ ದಾಟಿ ತನ್ನದೇ ಛಾಪು ಮೂಡಿಸಿಕೊಳ್ಳುವುದು ಸುಲಭವೇನಲ್ಲ. ಅದಕ್ಕಾಗಿ ಇವರು ಅನುಸರಿಸುವ ಜಾಣ್ಮೆಯ ಬ್ಯುಸಿನೆಸ್ ತಂತ್ರಗಳು ಮೊದಲಿನಿಂದಲೂ ವಿಭಿನ್ನವೇ. 


ಮೊದಲ ಬಾರಿಗೆ ಬಸ್ ಸರ್ವೀಸ್ ಶುರು ಮಾಡಿದಾಗ ಗ್ರಾಹಕರಿಗೆ ಉಚಿತ ಊಟವನ್ನು ನೀಡುತ್ತೇವೆ ಎಂದು ಗ್ರಾಹಕರನ್ನು ಸೆಳೆಯುತ್ತಾರೆ. 


ಜನರಲ್ ಮೋಟಾರ್ಸ್ ನ ಡೀಲರ್ ಶಿಪ್ ಅನ್ನು ಕೊಂಡುಕೊಂಡಾಗ ಚೆವರ್ಲೆಟ್ ಕಂಪನಿಗಾಗಿ ಫೈರ್ ಸ್ಟೋನ್ ಟೈರುಗಳನ್ನು ಆಮದು ಹಾಗೂ  ರಫ್ತು ಮಾಡುತ್ತಿರುತ್ತಾರೆ. ಜನರಲ್ ಮೋಟರ್ಸ್ ನ ಡೀಲರ್ ಆದ ಹೊಸದರಲ್ಲಿ ಕಾರುಗಳ ಮಾರಾಟದ ತಂತ್ರಕ್ಕಾಗಿ ತಮ್ಮ ಓಡಾಟಕ್ಕಾಗಿ ಕುದುರೆಗಾಡಿಯನ್ನು ಬಳಸುತ್ತಿದ್ದ ಸ್ಥಳೀಯ ಗಣ್ಯರಿಗೆ, ಚಾಲಕನ ಸಮೇತವಾಗಿ ಒಂದು ವಾರದ ಓಡಾಟಕ್ಕೆ ಕಾರನ್ನು ಉಚಿತವಾಗಿ ನೀಡಿ ಅವರನ್ನು ತಮ್ಮತ್ತ ಸೆಳೆಯುತ್ತಾರೆ. ಹಾಗೆ ಕಾರಿನ ಮಾರಾಟವನ್ನು ಹೆಚ್ಚಿಸಿಕೊಂಡು ಭಾರತದಲ್ಲಿಯೇ ಜನರಲ್ ಮೋಟರ್ಸ್ ನ ಅತಿ ದೊಡ್ಡ ಡಿಸ್ಟ್ರಿಬ್ಯೂಟರ್ ಆಗಿ ಬೆಳೆಯುತ್ತಾರೆ.


2020 ಜುಲೈನಲ್ಲಿ ತರಬೇತಿ ಹೊಂದಿರುವ ಕೆಲಸಗಾರರ ಕೊರತೆಯಿಂದ ಬಿಡಿ ಭಾಗಗಳ ತಯಾರಿಕೆ ಹಾಗೂ ವಿತರಣೆ ವಿಳಂಬವಾಗುತ್ತದೆ. ಅದೇ ಸಂದರ್ಭದಲ್ಲಿ ಕೋವಿಡ್ ಲಾಕ್ಡೌನ್ ಸಹಾ ಇದ್ದುದರಿಂದ ಅದರ ಪ್ರಭಾವವೂ ಸೇರಿ 25% ನಷ್ಟು ಸೇಲ್ಸ್ ಕಡಿಮೆಯಾಗುತ್ತದೆ. ಆದರೆ, 2021ರ ಜುಲೈ ಅಷ್ಟೊತ್ತಿಗೆ ಮತ್ತೆ ಮೇಲೆದ್ದು ಬಂದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸೇಲ್ಸ್ ನಲ್ಲಿ 10% ಹೆಚ್ಚಿನ ಬೆಳವಣಿಗೆಯನ್ನು ತೋರುತ್ತಾರೆ. 'ಸೋಲೆಂಬುದು ಅಲ್ಪವಿರಾಮ'. ಅದು ಯಾವಾಗ ಎಂದರೆ ಅದರಿಂದ ಹೊರಬರಲು ತಕ್ಕ  ತಯಾರಿಯಿದ್ದಾಗ. ಟಿ.ವಿ.ಎಸ್ ನವರು ಕೂಡಾ ಸೋಲಿನಿಂದ ಆಚೆ ಬಂದದ್ದು ಹಾಗೆಯೇ..


2015ರಲ್ಲಿ ಎನ್.ಡಿ ಟಿ.ವಿಯ ಕಾರ್ ಮತ್ತು ಬೈಕ್ ಅವಾರ್ಡ್ ನಲ್ಲಿ ದ್ವಿಚಕ್ರ ವಾಹನ ತಯಾರಿಕಾ ಕ್ಷೇತ್ರದ ವಿಭಾಗದಲ್ಲಿ ಪ್ರಶಸ್ತಿ ಪಡೆಯುತ್ತಾರೆ. 2018ರಲ್ಲಿ ಭಾರತೀಯ ಮೋಟಾರ್ ಸೈಕಲ್ ಆಫ್ ದ ಇಯರ್ ಎಂದು, 2019ರಲ್ಲಿ ಬೈಕ್ ಅವಾರ್ಡ್ಸ್ ನಲ್ಲಿ ದ್ವಿಚಕ್ರ ವಾಹನದ ಉತ್ಪಾದನೆಯಲ್ಲಿ ವರ್ಷದ ಸಾಧನೆಗೆಂದು, 2018ರಲ್ಲಿ ಪ್ರತಿಷ್ಠಿತ ಜೆ.ಡಿ ಪವರ್ ಏಷ್ಯಾ-ಫೆಸಿಫಿಕ್ ಅವಾರ್ಡ್ ನಲ್ಲಿ ಗ್ರಾಹಕರ ತೃಪ್ತಿಯ ಅತ್ಯುತ್ತಮ ಬ್ರಾಂಡ್ ಎಂದು ಹೀಗೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬರುತ್ತವೆ. 


ಭಾರತದ ನಂಬಿಕೆಯ ಬ್ರ್ಯಾಂಡ್ ಆಗಿ ಬೆಳೆದ 110 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಕಂಪನಿಯಾಗಿ 8.5 ಬಿಲಿಯನ್ ಡಾಲರ್ ಗೂ ಹೆಚ್ಚಿನ ಮೌಲ್ಯವುಳ್ಳ ಕಂಪನಿಯಾಗಿ ಬೆಳೆದು ನಿಂತಿದೆ ಟಿ.ವಿ.ಎಸ್. ಗ್ರಾಹಕರನ್ನು ಅರಿತು ಅವರ ಅಗತ್ಯತೆಗೆ ತಕ್ಕ ಪ್ರಾಡೆಕ್ಟ್ ನೀಡಿದರೆ ಹಾಗೂ ಅದರಲ್ಲಿ ಗುಣಮಟ್ಟವೂ ಸರಿಯಾಗಿದ್ದರೆ ಅವರ ನಂಬಿಕೆಯನ್ನು ಗಳಿಸುವುದು ಹಾಗೂ ಅವರನ್ನು ತೃಪ್ತಿಪಡಿಸುವುದು ಹೆಚ್ಚಿನ ಹೊರೆಯಾಗದು ಎನ್ನುತ್ತಾ.. ಗ್ರಾಹಕರಿಗೆ ತಾವು ಸೆಳೆಯುವ ತಂತ್ರದಲ್ಲಿಯೂ ಹೊಸ ಆಕರ್ಷಣೆಯಿರಬೇಕು. ಆಗಷ್ಟೇ ವಿಭಿನ್ನತೆಯಿಂದ ಬ್ಯುಸಿನೆಸ್ ಅನ್ನು ಮುನ್ನಡೆಸುತ್ತಾ ಹೋಗಲು ಸಾಧ್ಯ. ಅಲ್ಲದೆ, ಟೆಕ್ನಾಲಜಿಗೆ ತಕ್ಕ ಅಪ್ಡೇಟ್ ಗಳನ್ನು ನೀಡುತ್ತಾ ತೃಪ್ತಿಯಾಗಿರುವ ಗ್ರಾಹಕರನ್ನು ಮತ್ತಷ್ಟು ತೃಪ್ತಿಪಡಿಸುವುದೇ ನಮ್ಮ ಆದ್ಯ ಕರ್ತವ್ಯವನ್ನು ತಿಳಿದಾಗ ಗ್ರಾಹಕನು ಕೈ ಬಿಡಲಾರ ಎನ್ನುತ್ತಾ ಬ್ಯುಸಿನೆಸ್ ನ ಪಾಠ ಹೇಳುತ್ತಿದೆ ಟಿ.ವಿ.ಎಸ್ 


ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ