ಮಂಗಳವಾರ, ಏಪ್ರಿಲ್ 21, 2026

ಕಮಲಾದೇವಿ ಚಟ್ಟೋಪಾಧ್ಯಾಯ (ಬದುಕು - ಸಾಧನೆ) (ಪುಸ್ತಕ ಯಾನ - 295)



ಪುಸ್ತಕದ ಶೀರ್ಷಿಕೆ : ಕಮಲಾದೇವಿ ಚಟ್ಟೋಪಾಧ್ಯಾಯ (ಬದುಕು - ಸಾಧನೆ)

ಲೇಖಕರು > 

ಕೊಂಕಣಿ ಮೂಲ : ಡಾ|| ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್

ಕನ್ನಡ ಅನುವಾದ : ಡಾ|| ಗೀತಾ ಶೆಣೈ

ಪ್ರಕಾಶಕರು : ನವಕರ್ನಾಟಕ ಪ್ರಕಾಶನ

ಪ್ರಥಮ ಮುದ್ರಣ : 2012

ಪುಟಗಳು : 120

ಬೆಲೆ : 70 ರೂ.


ಕಮಲಾದೇವಿ ಚಟ್ಟೋಪಾಧ್ಯಾಯರ ಕುರಿತ ಈ ಪುಸ್ತಕವು ಡಾ|| ಕಮಲಾ ರತ್ನಂ ಅವರ 'ಕಮಲಾದೇವಿ : ಏಕ್ ಸಮರ್ಪಿತ್ ವ್ಯಕ್ತಿತ್ವ್' ಎಂಬ ಹಿಂದಿ ಗ್ರಂಥವನ್ನು ಆಧರಿಸಿದೆ. ಈ ಪುಸ್ತಕದಲ್ಲಿ ಕಮಲಾದೇವಿಯವರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಜೊತೆಗೆ ಅವರ ಬಹುಮುಖಿ ವ್ಯಕ್ತಿತ್ವವೂ ಸಮರ್ಥವಾಗಿ ಚಿತ್ರಿತವಾಗಿದೆ. ದೇಶಪ್ರೇಮ ಹಾಗೂ ದೇಶಸೇವೆ ಎಂದರೆ ಅದು ಸುಲಭದ ಮಾತಲ್ಲ. ಅದರಲ್ಲಿಯೂ.. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಣ್ಣೊಬ್ಬಳ ದಿಟ್ಟ ನಡೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹದ್ದು. ಕಮಲಾದೇವಿಯವರ ವ್ಯಕ್ತಿತ್ವ ಪ್ರೇರಣಾದಾಯಕ ಹಾಗೂ ಗೌರವಯುತವಾಗಿದೆ. 


ಅನಂತಯ್ಯ ಧಾರೇಶ್ವರ ಕಂದಾಯ ಇಲಾಖೆಯ ಅಧಿಕಾರಿಯಾಗಿ ಬ್ರಿಟಿಷರ ಕಾಲದಲ್ಲಿ ಕಲೆಕ್ಟರ್ ಆಗಿದ್ದವರು. ಗಿರಿಜಾಬಾಯಿ ಇವರ ದ್ವಿತೀಯ ಪತ್ನಿ. ಇವರು ಶ್ರೀಮಂತ ಜಮೀನ್ದಾರಿ ಮನೆತನದ ಹೆಣ್ಣುಮಗಳು. ಇವರ ಮಗಳೇ ಕಮಲಾದೇವಿ. ಹುಟ್ಟಿದ್ದು 1903 ಏಪ್ರಿಲ್ ಮೂರರಂದು ಮಂಗಳೂರಿನಲ್ಲಿ. ಇವರಿಗಿಂತ ಮೊದಲು ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳು ಹುಟ್ಟಿ ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡಿದ್ದರು. ಕಮಲಾದೇವಿಯವರಿಗಿಂತ ಮೊದಲು ಆಕೆಯ ಸೋದರಿ ಸಗುಣ ಇದ್ದರು. ಇವರಿಬ್ಬರನ್ನು ತುಂಬು ಪ್ರೀತಿಯಲ್ಲಿ ಬೆಳೆಸಿದರು. ಅನಂತಯ್ಯನವರಿಗೆ ಮೊದಲ ಪತ್ನಿಯಿಂದ ಇಬ್ಬರು ಗಂಡು ಮಕ್ಕಳಿದ್ದರು. ಅವರು ಉದ್ಯೋಗದಲ್ಲಿದ್ದರೂ.. ಮನೆಯಲ್ಲಿ ಬಂದು ಹೋಗುವವರು ಹೆಚ್ಚು. ತುಂಬು ಕುಟುಂಬದಲ್ಲಿ ಗಿರಿಜಾಬಾಯಿಯವರು ನಿಭಾಯಿಸಿಕೊಂಡು ಹೋಗುತ್ತಿದ್ದರು. ಕಮಲಾದೇವಿಯವರು ಎಲ್ಲರನ್ನೂ ನಿಭಾಯಿಸುವ ಗುಣ ಹಾಗೂ ಸೌಂದರ್ಯದ ಪ್ರೀತಿಯನ್ನು ಬಾಲ್ಯದಿಂದಲೇ ಕಲಿತಿದ್ದರು. 


ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಮನೆಯಲ್ಲಿ ಸ್ವಾವಲಂಬನೆಯ ಪಾಠ ಎಷ್ಟು ದೊರೆಯುತ್ತಿತ್ತು ಎಂಬುದನ್ನು ಅವರು ತಮ್ಮ ಆತ್ಮಚರಿತ್ರೆಯಲ್ಲಿಯೂ ನೆನಪಿಸಿಕೊಂಡಿದ್ದಾರೆ. ಹೊಲಿಗೆ, ಕಸೂತಿ, ಹೂದೋಟ ಮಾಡುವುದು, ತರಕಾರಿ ಬೆಳೆಸುವುದು, ಮನೆಮದ್ದು, ಅಡುಗೆ ತರಬೇತಿ ಹೀಗೆ.. ಇದೆಲ್ಲವೂ ಕಷ್ಟ ತೊಂದರೆಗಳನ್ನು ಸಹಿಸಿಕೊಳ್ಳಲು ಹಾಗೂ ಶಕ್ತಿವಂತರನ್ನಾಗಿಸುತ್ತಿತ್ತು ಎಂಬುದು ಅವರ ಅಭಿಪ್ರಾಯ. ಕಮಲಾದೇವಿಯವರು ಬೆಳೆದ ಮುಕ್ತ ವಾತಾವರಣ ಹಾಗೂ ಮನೆಯ ಪರಿಸ್ಥಿತಿಯಲ್ಲಿ ವಿಶ್ವಬಂಧುತ್ವದ ಪರಿಸರವಿತ್ತು. ಸ್ವಂತಿಕೆ ರೂಪುಗೊಳ್ಳುತ್ತಿತ್ತು. ಗಿರಿಜಾಬಾಯಿಯವರಿಗೂ ಓದಿನ ಹವ್ಯಾಸವಿದ್ದುದರಿಂದ ಶ್ರೀರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಸ್ವಾಮಿ ರಾಮತೀರ್ಥರ ಗ್ರಂಥಗಳನ್ನೆಲ್ಲಾ ತರಿಸಿ ಓದುತ್ತಿದ್ದರು. ಗಿರಿಜಾಬಾಯಿಯವರು ಹಾಗೂ ಅವರ ತಾಯಿ ಸಂಸ್ಕೃತ ವಿದುಷಿಯೂ ಆಗಿದ್ದರಿಂದ ಕಮಲಾಬಾಯಿಯವರ ಮೇಲೆ ಅವರ ವ್ಯಕ್ತಿತ್ವ ಪರಿಣಾಮ ಬೀರಿತು. 


ಕಮಲಾದೇವಿಯವರ ಶಿಕ್ಷಣ ಕಾನ್ವೆಂಟ್ ನಲ್ಲಿ ನಡೆಯುತ್ತಿದ್ದರಿಂದ ಬ್ರಿಟಿಷರ ಪ್ರಭಾವವಿದ್ದರೆ, ಮನೆಯಲ್ಲಿ ರಾಷ್ಟ್ರಾಭಿಮಾನದ ಶಿಕ್ಷಣ ಸಿಗುತ್ತಿತ್ತು. ಎರಡು ರೀತಿಯ ವಿಚಾರಗಳನ್ನು ತಿಳಿದುಕೊಂಡು ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಶಕ್ತರಾಗಿದ್ದರು.


ಅನಂತಯ್ಯನವರು ತಮ್ಮ ಪತ್ನಿಯ ಪ್ರಗತಿಶೀಲ ವಿಚಾರಗಳಿಗೆ ಬೆಂಬಲ ನೀಡಿದ್ದರು. ಆದರೆ, ಅಂದಿನ ದಿನದ ರೂಢಿಯಂತೆ ತಮ್ಮ ಮಗಳ ವಿವಾಹವನ್ನು ಸ್ನೇಹಿತನ ಮಗನೊಂದಿಗೆ ನಿಶ್ಚಯಿಸಿದರು. ಅನಂತಯ್ಯನವರು ಕಾಯಿಲೆಯಿಂದ ತೀರಿಕೊಂಡ ಸಂದರ್ಭದಲ್ಲಿಯೇ ಅವರು ಸಂಪಾದಿಸಿದ್ದ ಮತ್ತು ಪಿತ್ರಾರ್ಜಿತ ಆಸ್ತಿಯೆಲ್ಲವೂ ಮೊದಲ ಹೆಂಡತಿಯ ಮಕ್ಕಳ ಪಾಲಾಯಿತು. ವಾಸದ ಮನೆ ಮಾತ್ರ ಗಿರಿಜಾಬಾಯಿಯವರಿಗೆ ಸೇರಿತು. ಕಮಲಾಬಾಯಿಯವರನ್ನು ವಿವಾಹ ಮಾಡಿಕೊಟ್ಟಿದ್ದ ನಯಂಪಳ್ಳಿ ಕೃಷ್ಣರಾವ್ ಅವರು ಒಂದೇ ವರ್ಷದಲ್ಲಿ ತೀರಿ ಹೋದದ್ದು ದುರಂತ. ಜನರ ಕಟು ಮಾತುಗಳಿಗೆ ಯಾವುದೇ ಗಮನ ನೀಡದೆ ಗಿರಿಜಾಬಾಯಿಯವರು ತಮ್ಮ ಮಗಳಿಗೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸುವಂತೆ ಮಾಡಿದರು. 


ಗಿರಿಜಾಬಾಯಿ, ಸಗುಣ ಹಾಗೂ ಕಮಲಾಬಾಯಿಯವರು ಮದ್ರಾಸ್ ತಲುಪಿದ ನಂತರ ಅವರ ಸೋದರಮಾವ ಕಲ್ಲೇ ನಾರಾಯಣರಾವ್ ಅವರ ಆಶ್ರಯದಲ್ಲಿದ್ದರು. ಅವರು ಲಾ ಕಾಲೇಜಿನ ಮೊದಲ ಭಾರತೀಯ ಪ್ರಾಂಶುಪಾಲರು. ಅಲ್ಲದೇ, ಪ್ರಸಿದ್ಧ ವಕೀಲರು. ರಾಷ್ಟ್ರೀಯ ಚಳುವಳಿಯ ಕಾರ್ಯದಲ್ಲಿ ಕ್ರಿಯಾಶೀಲರಾಗಿದ್ದರಿಂದ ಆ ಕಾಲದ ರಾಜಕೀಯ ವ್ಯಕ್ತಿಗಳು ಸಹಾ ಭೇಟಿ ನೀಡುತ್ತಿದ್ದರು. ಹೀಗಾಗಿ ಕಮಲಾದೇವಿಯವರಿಗೆ ಇದೆಲ್ಲದರ ಸಖ್ಯ ಬೆಳೆಯಿತು. ಅನಿಬೆಸೆಂಟ್ ಮತ್ತು ಮಾರ್ಗರೇಟ್ ಕಸಿನ್ಸ್ ರವರ ಕರ್ಮಭೂಮಿ ಮದ್ರಾಸ್ ಆಗಿದ್ದರಿಂದ ಅವರು ನಡೆಸುತ್ತಿದ್ದ ಶಿಕ್ಷಣ ಮತ್ತು ಸಮಾಜ ಸೇವೆಯ ಗಾಢ ಪರಿಚಯವಾಯಿತು.


ಚಟ್ಟೋಪಾಧ್ಯಾಯ ಕುಟುಂಬದ ಹರೀಂದ್ರನಾಥ್ ಬಹುಮುಖ ಪ್ರತಿಭಾಶಾಲಿ, ಕವಿ, ಭಾಷಣಕಾರ, ನಟ, ನಾಟಕಕಾರ ಹೀಗೆ ಆಕರ್ಷಕ ವ್ಯಕ್ತಿತ್ವದವರು. ಅದೇ ಕುಟುಂಬದ ಸುಹಾಸಿನಿ ಚಟ್ಟೋಪಾಧ್ಯಾಯ ಸರೋಜಿನಿ ನಾಯ್ಡು ಅವರ ಸಹೋದರಿ. ಕಮಲಾದೇವಿಯವರ ಸಹಪಾಠಿಯಾಗಿದ್ದವರು. ನಂತರ ಎರಡು ಕುಟುಂಬಗಳೂ ಹತ್ತಿರವಾಗುತ್ತಿದ್ದರು. ಕಮಲಾದೇವಿ ಹಾಗೂ ಹರೀಂದ್ರರ ವಿವಾಹವೂ ನಡೆಯಿತು. ಕಮಲಾದೇವಿಯವರ ಪುನರ್ವಿವಾಹದ ಕುರಿತು ಕಮಲಾದೇವಿಯ ಮೊದಲ ಪತಿಯ ತಂದೆಗೆ ಆಕ್ಷೇಪಣೆ ಇರಲಿಲ್ಲವಾದರೂ.. ಹುಡುಗ ಯೋಗ್ಯನಾಗಿರಬೇಕೆಂದು ಅವರ ಅಪೇಕ್ಷೆಯಾಗಿತ್ತು. ಆದರೆ, ಹರೀಂದ್ರ ಅವರ ಮನಸ್ಸಿಗೆ ಬರಲಿಲ್ಲ. ಕಾರಣ ನೀವೇ ಓದಿ ನೋಡಿ. ಹರೀಂದ್ರನಾಥರು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. ಕಮಲಾದೇವಿ ಮಂಗಳೂರಿಗೆ ಮರಳಿ ಬಂದರು. ಮಂಗಳೂರಿಗೆ ಮರಳಿ ಬಂದ ಕೆಲವೇ ದಿನಗಳಲ್ಲಿ ಸಗುಣಳ ಸಾವು ಸಂಭವಿಸಿತು. ಅದಕ್ಕೆ ಕಾರಣ ಕೌಟುಂಬಿಕ ಸಮಸ್ಯೆ. ಕಾಲಾನಂತರ, ಕಮಲಾದೇವಿಯವರ ದಾಂಪತ್ಯವೂ ವಿಷಮವಾಗಿದ್ದು ದುರಂತ. 


1919ರಲ್ಲಿ ಗಾಂಧೀಜಿಯವರು ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ರೀತಿಯಲ್ಲಿ ಕಾನೂನು ಭಂಗ ಮಾಡುವ ಚಳುವಳಿ ಪ್ರಾರಂಭಿಸಿದ ಸಂದರ್ಭದಲ್ಲಿ ಸರೋಜಿನಿ ನಾಯ್ಡು ಅವರು ಕಮಲಾದೇವಿಯವರಿಗೆ ಗಾಂಧೀಜಿಯವರನ್ನು ಹತ್ತಿರದಿಂದ ನೋಡುವ ಅವಕಾಶ ಕಲ್ಪಿಸಿಕೊಟ್ಟರು. ಅಂದಿನ ಸಂದೇಶದಂತೆ ಗಾಂಧೀಜಿ ಬರೆದ 'ಹಿಂದ್ ಸ್ವರಾಜ್ಯ' ಮತ್ತು ರಸ್ಕಿನ್ ಕವಿಯ 'ಅನ್ ಟು ದಿ ಲಾಸ್ಟ್' ಗುಜರಾತಿ ಭಾಷಾಂತರವನ್ನು ಕಮಲಾದೇವಿ ತಮ್ಮ ಕೈಲಾದಷ್ಟು ಮಾರಾಟ ಮಾಡಿ ಹಣ ಸಂಗ್ರಹಣೆ ಮಾಡಿ ನೀಡಿದರು. 


1922ರಲ್ಲಿ ಕಮಲಾದೇವಿ ತಮ್ಮ ಪತಿ ಹರೀಂದ್ರನಾಥ್ ಅವರೊಂದಿಗೆ ಯುರೋಪ್ ಇಡೀ ಸುತ್ತಾಡಿ ಬಂದರು. ಹರೀಂದ್ರನಾಥ್ ಅವರ ಅಣ್ಣನಾಗಿದ್ದ ಪ್ರಸಿದ್ಧ ಕ್ರಾಂತಿಕಾರಿ ವೀರೇಂದ್ರನಾಥರು ಇಂಗ್ಲೆಂಡಿನಿಂದ ಗಡಿಪಾರಾಗಿ ಬರ್ಲಿನ್ ನಲ್ಲಿದ್ದರು. ಅವರ ಸಾಕಷ್ಟು ಪ್ರಭಾವ ಕಮಲಾದೇವಿಯವರ ಮೇಲಾಯಿತು. 1923ರಲ್ಲಿ ಈ ದಂಪತಿಗಳಿಗೆ ರಾಮು ಎಂಬ ಮಗ ಜನಿಸಿದ. 


1924ರಲ್ಲಿ ಉಮಾಬಾಯಿ ಕುಂದಾಪುರ ಹಾಗೂ ಡಾಕ್ಟರ್ ಎನ್. ಎಸ್. ಹರ್ಡಿಕರ್ ಅವರ ಪ್ರಭಾವದಿಂದ ಸ್ವಯಂಸೇವಕಳಾಗಲು ಸಿದ್ದರಾದವರು ಸೇವಾದಳ ಸೇರಿದರು. ಸೇವಾದಳದ ತರಬೇತಿ ಬಹಳ ಕಠಿಣ ಹಾಗೂ ಶ್ರಮದಾಯಕವಾಗಿತ್ತು. ಬೆಳಗಾವಿಯ ಪರಿಸರಕ್ಕೂ ಹೊಂದಿಕೊಳ್ಳಬೇಕಿತ್ತು. ಎಲ್ಲದಕ್ಕೂ ಹೊಂದಿಕೊಂಡ ಇವರು ಮುಂದೆ 1927 ನೇ ಇಸವಿಯಲ್ಲಿ ಮದ್ರಾಸ್ ಅಧಿವೇಶನದ ಸ್ವಯಂ ಸೇವಿಜಾ ತಂಡದ ಮುಖಂಡರಾದರು. ಕಪ್ಪುವರ್ಣದ ಬದಲು ಕೇಸರಿ ಬಣ್ಣದ ಸೀರೆಯನ್ನು ಪ್ರಚಾರಕ್ಕೆ ತಂದರು ಈ ದಳಕ್ಕೆ ಆರೆಂಜ್ ಬ್ರಿಗೇಡ್ ಎನ್ನುವ ಹೆಸರು ಬಂದಿತು. ಕೆಲವು ವರ್ಷದ ನಂತರ ಯುರೋಪಿಗೆ ಹೋಗುವ ಸಂದರ್ಭ ಬಂದಾಗ ಧ್ವಜದ ಬಣ್ಣದ ಸೀರೆಗೆ ಬದಲಾಗಿ ಸೀರೆಯಿಂದಲೇ ಧ್ವಜ ನಿರ್ಮಾಣವಾದ ಚಮತ್ಕಾರ ಅವರ ಕೈಯಿಂದಲೇ ಘಟಿಸಿತು. ಒಮ್ಮೆ ರಾಷ್ಟ್ರಧ್ವಜವನ್ನು ಕಾಪಾಡಿದ ಪ್ರಸಂಗ ಮೈನವಿರೇಳಿಸುತ್ತದೆ. ಕಮಲಾದೇವಿಯವರ ಸೌಂದರ್ಯ ಪ್ರಜ್ಞೆ ಹಾಗೂ ದೇಶಾಭಿಮಾನ ಸ್ಪಷ್ಟವಾಗುತ್ತಾ.. ದಿನೇ ದಿನೇ ಹೆಚ್ಚುತ್ತಲೇ ಹೋಯಿತು. 


ಕಮಲಾದೇವಿಯವರ ಮೇಲೆ ಹೆಚ್ಚಿನ ಪ್ರಭಾವ ಬೀರಿದವರು ಮಾರ್ಗರೇಟ್ ಕಸಿನ್ಸ್ (ಗ್ರೆಟಾ) ಐರ್ಲೆಂಡಿನಲ್ಲಿ ಹುಟ್ಟಿದ ಗ್ರೆಟಾ ಥಿಯೋಸಾಫಿಕಲ್ ಸೊಸೈಟಿ ತತ್ವದಿಂದ ಆಕರ್ಷಿತವಾಗಿ ಭಾರತಕ್ಕೆ ಬಂದವರು. ಮುಂದೆ ಗ್ರೆಟಾರ ಆಗ್ರಹದ ಮೇರೆಗೆ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್ ಮಹಿಳೆಯರಿಗಾಗಿಯೇ ಒಂದು ಸ್ಥಾನವನ್ನು ಘೋಷಿಸಿದಾಗ ಕಮಲಾದೇವಿಯವರು ಸ್ಪರ್ಧಿಸಿದರು. ದೇಶದಲ್ಲಿ ಅದೇ ಮೊದಲ ಬಾರಿಗೆ ಚಿಕ್ಕವಯಸ್ಸಿನ ಮಹಿಳೆಯೊಬ್ಬರು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದು. ಅದಕ್ಕೆ ಕಾರಣವಾಗಿದ್ದು ರಾಜಕೀಯವಾಗಿ ದೇಶದ ಭವಿಷ್ಯವನ್ನು ಇನ್ನಷ್ಟು ಸದೃಢಗೊಳಿಸಬಹುದು ಎಂಬ ಕಮಲಾದೇವಿಯವರ ಆಶಯ. ಆದರೆ, ಕಡಿಮೆ ಸಮಯವಿದ್ದುದರಿಂದ ಆ ಚುನಾವಣೆಯನ್ನು ಗೆಲ್ಲಲಾಗಲಿಲ್ಲ. ಕಮಲಾದೇವಿಯವರು ಭಾರತದ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರಪ್ರಥಮ ಮಹಿಳೆ ಎನಿಸಿಕೊಂಡರು. 


ಕಮಲಾದೇವಿಯವರ ದೃಷ್ಟಿಯಲ್ಲಿ ಭಗತ್ ಸಿಂಗ್ ಒಬ್ಬ ವಿಚಾರಶೀಲ ಕ್ರಾಂತಿಕಾರಿಯಾಗಿದ್ದವರು. ಅವರಿಗೆ ಮರಣ ಶಿಕ್ಷೆ ವಿಧಿಸಬಾರದೆಂದು ಅವರ ಭಾವನೆ. ಆದರೆ, ಅದನ್ನು ತಡೆಯಲಾಗದ ನೋವು ಅವರಲ್ಲಿದೆ. ಆ ಸಂಧರ್ಭದ ಚಿತ್ರಣ ಇದರಲ್ಲಿದೆ.


ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ.. ಕಮಲಾದೇವಿಗೆ ತನ್ನ ಆದರ್ಶ, ದೇಶದ ಅಗತ್ಯತೆ ಮತ್ತು ಯುವಜನರು ಮಾಡಬೇಕಾದ ಕೆಲಸದ ಕುರಿತು ಸ್ಪಷ್ಟ ಕಲ್ಪನೆಯಿತ್ತು. ಅವರು ವಹಿಸಿಕೊಳ್ಳಬೇಕಾದ ಜವಾಬ್ದಾರಿಯ ತಿಳುವಳಿಕೆ ಕೂಡ ಇತ್ತು. ತಾವೆಲ್ಲರೂ ಪೂರ್ಣ ಸ್ವರಾಜ್ಯಕ್ಕೆ ಹೋರಾಡಬೇಕು ಎಂಬುದನ್ನು ಧ್ವನಿಸುತ್ತಿದ್ದರು ಹಾಗೂ ಅವರ ಸ್ಪಷ್ಟ ಭಾಷಣದಲ್ಲಿ ಇದು ಸಮರ್ಥವಾಗಿ ಹೇಳಲ್ಪಡುತ್ತಿತ್ತು. ತಮ್ಮ ದಿಟ್ಟ ನಿಲುವುಗಳು ಹಾಗೂ ಸ್ಪಷ್ಟ ನುಡಿಗಳಿಂದ ಭಾಷಣದ ಮೂಲಕವೂ ಕಮಲಾದೇವಿ ಹೆಚ್ಚಿನವರ ಮೇಲೆ ಪ್ರಭಾವ ಬೀರಿದ್ದರು. 


ಕಮಲಾದೇವಿಯವರು ಸೇವೆಯಿಂದ ಮುಖಂಡತ್ವಕ್ಕೆ ಬಂದ ಸಂದರ್ಭ ಉಪ್ಪಿನ ಸತ್ಯಾಗ್ರಹದಲ್ಲಿ. ಗಾಂಧೀಜಿಯವರ ಕರೆಗೆ ಓಗೊಟ್ಟರೂ.. ಮೊದಲಿಗೆ ದಂಡೀಯಾತ್ರೆಯಲ್ಲಿ ಗಾಂಧೀಜಿಯವರು ಮಹಿಳೆಯರನ್ನು ಸೇರಿಸಿರಲಿಲ್ಲ. ಆದರೆ, ಅವರು ಅನೇಕ ಮಹಿಳೆಯರನ್ನು ಕಾರ್ಯಕರ್ತರಾಗಿ ತಯಾರು ಮಾಡಿದ್ದರು. ಗಾಂಧೀಜಿಯವರ ಈ ನಿರ್ಧಾರವನ್ನು ಬದಲಿಸಿ ಮಹಿಳೆಯರನ್ನು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಕಮಲಾದೇವಿಯವರೇ..


ಉಪ್ಪಿನ ಸತ್ಯಾಗ್ರಹದ ನಂತರ, ಅಸಹಕಾರ ಚಳುವಳಿಯನ್ನು ಮುಂದುವರಿಸಿದ ಕಾರಣಕ್ಕಾಗಿ, ಸಣ್ಣ ಅಂತರದಲ್ಲಿ ಮತ್ತೊಮ್ಮೆ ಬಂಧನ, ನಂತರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ.. ನಾಲ್ಕು ಬಾರಿ ಕಮಲಾದೇವಿಯವರಿಗೆ ಜೈಲುವಾಸ ಸಿಕ್ಕಿತ್ತು. ಕಾರಾಗೃಹವೆಂದರೆ ಕೊಲೆ, ದರೋಡೆ ಹಾಗೂ ಅಪರಾಧವೆಸಗಿದ ಜನರನ್ನು ಒಟ್ಟು ಕೂಡಿಸಿ ಹಾಕುತ್ತಿದ್ದ ಕೊಟ್ಟಿಗೆಯಂತಹಾ ಸ್ಥಳವಾಗಿತ್ತು. ಆ ಅನಾರೋಗ್ಯಕರ ವಾತಾವರಣದಲ್ಲಿ ಬದಲಾವಣೆಗಳನ್ನು ತರಲು ಹೋರಾಟ ನಡೆಸಿದರು ಕಮಲಾದೇವಿಯವರು. ಜೈಲುವಾಸದಲ್ಲಿ ಸಿಕ್ಕ ಗೆಳೆತನಗಳು ಅವರ ಹೋರಾಟಕ್ಕೆ ಮತ್ತಷ್ಟು ಬಲ ನೀಡಿದ್ದೂ ಇದೆ.


ಕಮಲಾದೇವಿಯವರು ವಿಶ್ವ ಸಂಚಾರ ನಡೆಸಿ, ಜನರನ್ನು ತಲುಪಲು ಸಾಧ್ಯವೇ ಇಲ್ಲದ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿಯೂ ಹೋಗಿ ತಮ್ಮ ಹೋರಾಟ ಹಾಗೂ ಸ್ವಾತಂತ್ರ್ಯದ ಮಹತ್ವವನ್ನು ಹೇಳಿ ಹೋರಾಟಕ್ಕಾಗಿ ಒಗ್ಗೂಡಿಸುತ್ತಿದ್ದರು.


ಸ್ವಾತಂತ್ರ್ಯಾನಂತರ ಅವರು ರಾಜಕೀಯ ರಂಗದಿಂದ ಹಿಂದೆ ಸರಿದರು ಅಥವಾ ಅಂತಹ ಸಂದರ್ಭ ಸೃಷ್ಟಿಯಾಯಿತು ಎಂದರೂ ಸರಿಯೇ.. ಆದರೂ.. ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು ಎಷ್ಟೋ ಕಲೆಗಳಿಗೆ, ಕಲೆಗಳನ್ನೇ ನೆಚ್ಚಿದ್ದ ಕುಟುಂಬಗಳಿಗೆ ಮರುಜೀವ ನೀಡಿ ಬದುಕಿಸಿದ್ದಾರೆ ಎಂದರೂ ತಪ್ಪಾಗಲಾರದು. ಅದರಲ್ಲಿ ಪೋಚಂಪಲ್ಲಿ ಹಾಗೂ ಪೈತಾನೀ ಕಲೆಗಳು ಹಾಗೂ ಗೊಂಬೆಯಾಟವನ್ನು ಉದಾಹರಣೆಯಾಗಿ ನೀಡಬಹುದು.


ಕರಕುಶಲ ಮಂಡಳಿಯಿಂದ ದೂರವಾದರೂ.. ಪ್ರತಿ ರಾಜ್ಯದಲ್ಲಿ ಅವರು ಪ್ರಾರಂಭಿಸಿದ ಕ್ರಾಫ್ಟ್ ಕೌನ್ಸಿಲ್ ಗಳೊಂದಿಗೆ ಅವರ ಸಂಬಂಧ ಮುಂದುವರಿದಿತ್ತು. ಕಲೆಗಾಗಿ, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಕಮಲಾದೇವಿಯವರ ಬದುಕು ಅನಾರೋಗ್ಯದಿಂದ ಅಕ್ಟೋಬರ್ 29 1988ರಲ್ಲಿ ಕೊನೆಯಾಯಿತು. 


ಈ ಪುಸ್ತಕದಲ್ಲಿ ಅವರ ವೈಯಕ್ತಿಕ ಬದುಕಿನ ಹೆಚ್ಚು ಚಿತ್ರಣವಿಲ್ಲ. ಬದಲಾಗಿ, ಅವರ ಹೋರಾಟದ ಬದುಕಿನ ಸಮಗ್ರ ಚಿತ್ರಣ ಕಾಣಿಸುತ್ತದೆ. ಅವರಲ್ಲಿನ ಸ್ಪಷ್ಟತೆ ಹಾಗೂ ಶಿಸ್ತು ಬಹಳ ಸೆಳೆಯುತ್ತದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ