ಬುಧವಾರ, ಏಪ್ರಿಲ್ 22, 2026

ಮಾರ್ಜಾಲ ಮೋಹಿನಿಯರು (ಪುಸ್ತಕ ಯಾನ - 306)



ಪುಸ್ತಕದ ಶೀರ್ಷಿಕೆ : ಮಾರ್ಜಾಲ ಮೋಹಿನಿಯರು

ಲೇಖಕರು : ಸುಕನ್ಯಾ ಕಳಸ

ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2024

ಪುಟಗಳು : 96

ಬೆಲೆ : 125 ರೂ.


ಸುಕನ್ಯಾ ಕಳಸಾ ಅವರು ಎಂ.ಎ ಪದವೀಧರೆ. ಇವರು ಭಾರತೀಯ ಅಂಚೆ ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಪಡೆದಿದ್ದಾರೆ. ಹಾಸ್ಯ ಬರಹಗಾರ್ತಿ ಹಾಗೂ ಕವಯತ್ರಿಯೂ ಹೌದು. ಇವರ ಮೊದಲನೆಯ ಹಾಸ್ಯ ಸಂಕಲನ 'ಕಂಪ್ಯೂಟರ್ ಕುಟ್ಟಿ'. ಎರಡನೇ ಹಾಸ್ಯ ಸಂಕಲನವೇ 'ಮಾರ್ಜಾಲ ಮೋಹಿನಿಯರು'. ಇವರು ಕವಯತ್ರಿಯೂ ಆಗಿರುವುದರಿಂದ ಪದಗಳ ಲಾಸ್ಯವನ್ನು ಶೀರ್ಷಿಕೆಯಲ್ಲಿಯೂ ಹಾಗೂ ಹಾಸ್ಯಬರಹದಲ್ಲಿಯೂ ಚೆಂದವಾಗಿ ಕಾಣಬಹುದು. ಈ ಸಂಕಲನದಲ್ಲಿರುವ 'ನಮ್ಮ ಕಾರು ಸತ್ತುಹೋಗಿದ್ದು' ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ. ಪ್ರಜಾವಾಣಿಯ ಭೂಮಿಕಾ, ಸಂಕ್ರಾಂತಿ ಹಾಸ್ಯಲೇಖನಗಳ ಸ್ಪರ್ಧೆಯಲ್ಲಿಯೂ ಬಹುಮಾನಗಳಿಸಿದೆ. ಮಾರ್ಜಾಲ ಮೋಹಿನಿಯರು ಸಹಾ ಆಕಾಶವಾಣಿ ಮಂಗಳೂರಿನಿಂದ ಬಿತ್ತರಗೊಂಡಿದೆ. ಇಲ್ಲಿನ ಹಲವು ಹಾಸ್ಯಲೇಖನಗಳು ಆಕಾಶವಾಣಿ ಮಂಗಳೂರು ಹಾಗೂ ಭದ್ರಾವತಿಯಿಂದ ಬಿತ್ತರವಾಗಿವೆ. 


ಲೇಖಕಿಯ ಅಂಚೆ ಇಲಾಖೆಯ ಅನುಭವಗಳು ಹಾಸ್ಯ ಬರಹಗಳಲ್ಲಿಯೂ ಕಂಡು ಬಂದು ಅವರ ವೃತ್ತಿ ಬದುಕು ಹಾಗೂ ಹಾಸ್ಯ ಪ್ರವೃತ್ತಿ ಎರಡನ್ನೂ ಮಿಳಿತಗೊಳಿಸಿ ಓದುಗರಿಗೆ ಕಚಗುಳಿ ನೀಡುತ್ತವೆ. ಅಲ್ಲದೇ ತಮ್ಮ ಕುರಿತು ತಾವೇ ಹಾಸ್ಯ ಮಾಡಿಕೊಳ್ಳುವ ಪರಿ ಆರೋಗ್ಯಕರ ಹಾಸ್ಯವನ್ನು ನೆನಪಿಸುತ್ತದೆ. ಅಲ್ಲಲ್ಲಿ ಪನ್ ಗಳು ಹಾಗೂ ಲಾಸ್ಯವಿರುವ ಕನ್ನಡ ಪದಗಳು ಸೇರಿ ಹಾಸ್ಯವನ್ನು ಮತ್ತಷ್ಟು ಚೆಂದವಾಗಿಸಿದೆ. ಇವು ಬಹಳ ದೀರ್ಘ ಬರಹಗಳೇನೂ ಅಲ್ಲ. ಚೆಂದವಾಗಿ ಮನಸ್ಪೂರ್ತಿ ನಗಿಸುವ ಅನುಭವದ ತುಣುಕುಗಳಾಗಿ ಕಾಣುತ್ತವೆ. 


'ನಮ್ಮ ಕಾರು ಸತ್ತು ಹೋಗಿದ್ದು' ಎನ್ನುತ್ತಲೇ "ಕಾರು ಎಲ್ಲಾದ್ರೂ ಸಾಯುತ್ತಾ..? ಸಾಯೋಕೆ ಅದೇನು ಕಾರೇ ಅಥವಾ ಎಮ್ಮೆ ಕರುವೇ ಅಂತ ಗಂಟುಮುಖ ಮಾಡಿಕೊಳ್ಳಬೇಡಿ ಮಾರಾಯ್ರೆ" ಎಂದೇ ಶುರು ಮಾಡುತ್ತಾರೆ. ಗಂಟು ಮುಖ ಆರೋಗ್ಯಕರ ಜೀವನ ಶೈಲಿಗೆ ಹಾಗೂ ಆರ್ಥಿಕ ಪರಿಸ್ಥಿತಿಗೂ ಮಾರಕವೆನ್ನುವ ಎಚ್ಚರಿಕೆ ಕೊಡುತ್ತಲೇ ಅವರ ಮನೆಯ ಕಾರಿನ ವಿಚಾರವನ್ನು ಹೇಳುತ್ತಾರೆ. 


ಮನೆಯಲ್ಲಿ ಬೆಕ್ಕು, ನಾಯಿಗಳನ್ನು ಸಾಕುವಾಗ ಅವುಗಳ ಮೇಲೆ ಹುಟ್ಟುವ ಮೋಹದಂತೆ ಹಾಗೂ ಅಲ್ಲಲ್ಲಿ ಪಡುವ ಪಡಿಪಾಟಲನ್ನು 'ಮಾರ್ಜಾಲ ಮೋಹಿನಿಯರು' ಎನ್ನುತ್ತಾ ಅವುಗಳ ಬಾಲದ ರೋಮಗಳಿಗಿಂತಲೂ ಜಾಸ್ತಿ ಇರುವ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ.


'ಹೆಬ್ಬಲಸು ಪುರಾಣ'ದಲ್ಲಿ ಹಲಸಿನ ಹಣ್ಣಿನ ಕಾಲದಲ್ಲಿ ಬರುವ ಮಂಗಗಳ ಮಂಗಾಟ ಹಾಗೂ ಹಣ್ಣುದಕ್ಕುವ ಪರಿಯನ್ನು ಹೇಳುತ್ತಲೇ ಬಾಲ್ಯದ ನೆನಪುಗಳೊಂದಿಗೆ ಸವಿಯಾಗಿಸಿದ್ದಾರೆ. 


ಹೆಣ್ಣು ಮಕ್ಕಳು ತೆಳ್ಳಗಿದ್ದರೂ ದಪ್ಪಗಿದ್ದರೂ ಅದರ ಕುರಿತು ಮಾತನಾಡುವವರು ಇದ್ದೇ ಇರುತ್ತಾರೆ. ಆದರೆ ಲೇಖಕಿ ಹೊಂದಿದ 'ರೂಪಾಂತರ'ಕ್ಕೆ ಅವರ ಕುರಿತು ಅವರೇ ಹೇಳುತ್ತಾ ತೆಳ್ಳಗಿದ್ದಾಗಲೂ.. ದಪ್ಪವಾದಾಗಲೂ ತಮಗಾದ ಅನುಭವಗಳನ್ನು, ಅದಕ್ಕೆ ಸಿಕ್ಕ ಸಲಹೆಗಳು ಅದಕ್ಕೆ ಇವರು ಮಾಡಿದ ಪ್ರಯತ್ನ ಫಲಗಳನ್ನು.. ಬಸ್ಸಿನಲ್ಲಿ, ಕೆಲಸದ ಕಡೆ ಎಲ್ಲೆಡೆ ಅವರಿಗಾದ ಅನುಭವಗಳನ್ನು ತೆರೆದಿಟ್ಟಿದ್ದಾರೆ. 


'ಗೊಣಗುಟುರು ಪ್ರಿಯರು' ಎಂಬ ಶಬ್ದ ಕೇಳಿ ಏನಿದು ಎನ್ನುವ ಅಚ್ಚರಿಯಾಗುತ್ತಿದೆಯೇ..!

ಲೇಖಕಿಯೇ ಹೇಳುವಂತೆ ಅವರು ನಿಜಕ್ಕೂ "ಅಪ್ಪಟ ತಾಜಾ ಬೆಣ್ಣೆ ಹಾಕಿದ ಹೊಸ ಶಬ್ದಲಭ್ಧೆ!" ಈ ಕುರಿತು ನೀವೇ ಓದಿ ನೋಡಿ.


'ಕಂಪ್ಯೂಟರ್ ಕುಟ್ಟಿ'ಯು 'ಆಮೆ ನಡಿಗೆಯ ಅಂಚೆ', 'ಓಬಿರಾಯನ ಕಾಲ'ದ್ದು ಅಂತೆಲ್ಲಾ ಬಿರುದಾಂಕಿತವಾಗಿದ್ದ ಇವರು ಕೆಲಸ ಮಾಡುತ್ತಿದ್ದ ಅಂಚೆ ಇಲಾಖೆಗೆ ಬಂದಾಗ ಲೇಖಕಿಗೆ ನೆನಪಾದದ್ದೇ ಅಕ್ಟೋಪಸ್. "ಕಂಪ್ಯೂಟರ್ ಫೋಬಿಯಾ ಬಿಟ್ಟುಬಿಡಿ" ಎಂದು ಹೇಳುತ್ತಿದ್ದ ಕಾರ್ಯಪಡೆಗೆ ಓಗೊಟ್ಟು ಅದರ ಎದುರು ಕುಳಿತಾಗ ಕಂಪ್ಯೂಟರ್ ಕುಟ್ಟಿಯ ಹಾಗೆ ಅಂದರೆ ಮಗುವಿನ ಹಾಗೆ ವರ್ತಿಸತೊಡಗಿದ್ದನ್ನು ಹಾಗೂ ಅದರಿಂದ ಉಂಟಾದ ಸಿಹಿ ಸವಿ ಅಪಘಾತಗಳನ್ನು ಓದಿ ತೆರೆದಿಟ್ಟಿದ್ದಾರೆ. 


'ಏಪ್ರಿಲ್ ಫೂಲ್'ಗೆ ಎಲ್ಲರೂ ವಿವಿಧ ಉಪಾಯಗಳನ್ನು ಮಾಡಿದರೆ.. ಇವರು ಮಾಡಿದ ಉಪಾಯ ಪಿಯರ್ಸ್ ಸೋಪಿನದ್ದು. ರಾತ್ರಿಯೆಲ್ಲಾ ಪ್ಲಾನ್ ಮಾಡಿ ಹೊಸ ಪಿಯರ್ ಸೋಪಿನ ಡಬ್ಬಕ್ಕೆ ಜಾಗ್ರತೆಯಿಂದ ಸಗಣಿ ತುಂಬಿ ಇಟ್ಟಿದ್ದರು. ಅಷ್ಟಕ್ಕೂ ಫೂಲ್ ಆದವರು ಯಾರೆಂದು ನೀವೇ ಓದಿ ತಿಳಿಯಿರಿ. 


'ಇದ್ದದ್ದನ್ನು ಇದ್ದ ಹಾಗೆ' ಹೇಳಿದರೆ ಆಗುವ ಅವಾಂತರಗಳೆಷ್ಟು ಅಲ್ಲವೇ..?! ಅಂತಹಾ ಅವಾಂತರಗಳನ್ನು ಹಾಸ್ಯದ ಮೂಲಕ ಹೀಗಾದರೆ ಎನ್ನುವ ಕಲ್ಪನೆಯಲ್ಲಿಯೇ ಕಟ್ಟಿ ಕೊಟ್ಟಿದ್ದಾರೆ. 


'ಬಸ್ ಪ್ರಯಾಣ ಮತ್ತು ಚಿರಯೌವ್ವನ' ಎನ್ನುತ್ತಾ ಪ್ರಯಾಣಕ್ಕೆ ಐಹೀಲ್ಡ್ ಶೂಗಳಿಗಿಂತ ಶೋಲಾಪುರಿ ಚಪ್ಪಲಿಗಳೇ ಆರೋಗ್ಯಕರ ಎನ್ನುತ್ತಾರೆ. ಅದರ ಜೊತೆ ಹಲವಾರು ಸಲಹೆಗಳನ್ನು ಆ ಬಸ್ ಪ್ರಯಾಣದ ರಕ್ಷಣೆಯಿಂದ ಪಾರಾಗಲು ಕೊಡುತ್ತಾರೆ. ಕೊಡುವ ಒಂದೊಂದು ಸಲಹೆಗಳೂ ನಗೆಯುಕ್ಕಿಸುತ್ತವೆ. 


ಬಸ್ ಓಡಾಟದ ದಿನನಿತ್ಯದ ಬಳಕೆಗೆ ಎಂದು ಕೊಟ್ಟ ಸಲಹೆಗಳನ್ನೇ ನವೀಕರಿಸಿ 'ಸಿಟಿ ಬಸ್ಸಿನಲ್ಲಿ ಒಂದು ಸರ್ಕಸ್ಸು' ಎನ್ನುತ್ತಾ ಪ್ರಯಾಣದ ಪರಿಯನ್ನು ಕಟ್ಟಿಕೊಡುತ್ತಾರೆ. ಬಸ್ಸಿನೊಳಗಿನಷ್ಟೇ ಅಲ್ಲದೆ.. ಅಲ್ಲಿಯ ಜನರ ಪರದಾಟಗಳು ಹಾಗೂ ಚೀಟಿಗಾಗಿ ಪರದಾಡುವ ಪರಿ ಎಲ್ಲೋ ಇಳಿಯುವ ಸ್ಟಾಪುಗಳು ಹೀಗೆ ಹಲವಾರು ವಿಚಾರಗಳನ್ನು ತೆರೆದಿಡುತ್ತಾರೆ.


'ಬಾಲ್ಯಕಾಲದ ನೆನಪೆಂದರೆ..' ಸುಂದರ ಉದ್ಯಾನವನದಲ್ಲಿ ಚಿಟ್ಟೆಯಂತೆ ವಿಹಾರಿಸುವುದು ಎನ್ನುತ್ತಾ ಶಾಲೆಯ ಚೇತೋಹಾರಿ ನೆನಪುಗಳನ್ನು ಆಕಾಶದಲ್ಲಿ ಎಷ್ಟು ನಕ್ಷತ್ರಗಳೋ ಅಷ್ಟು ಬಾಲ್ಯದ ನೆನಪುಗಳು ಎಂದು ತೆರೆದಿಡುತ್ತಾರೆ.


ನಮ್ಮ ನೆರೆಯವರು ಹೊರೆಯಾಗುವುದು ಒಂದೋ ಅವರು ಸಾಲಕೋರರಾಗಿರುವಾಗ ಅಥವಾ ಜಗಳಗಂಟರಾಗಿದ್ದಾಗ ಎನ್ನುವ ಅನುಭವಕ್ಕಿಂತಲೂ ವಿಭಿನ್ನವಾದ ಅನುಭವ ಅವರಿಗೆ ಸಿಕ್ಕಿದ್ದು 'ಸಂಗೀತ ಪ್ರೇಮಿ ನೆರೆಹೊರೆಯವರು'ಸಿಕ್ಕಾಗ. ಹಾಗೆ ಸಿಕ್ಕ ಇಬ್ಬರೂ ನೆರೆಹೊರೆಯವರು ಬಿಟ್ಟಿ ಮನರಂಜನೆ ಕೊಟ್ಟದ್ದನ್ನು ಹಾಗೂ ಸಂಗೀತ ಪ್ರೇಮಿಗಳಿಗೂ ನೆರೆಮನೆಯಲ್ಲಿಯೇ ಇರುವ ಸಂಗೀತ ಪ್ರೇಮಿಗಳಿಗೂ ಇರುವ ಅಜಗಜಾಂತರ ವ್ಯತ್ಯಾಸವಿರುವ ಅನುಭವವನ್ನು ಹಂಚಿಕೊಳ್ಳುತ್ತಾರೆ. 


ಪ್ರಯೋಗಶೀಲರಾಗಿರುವವರಿಗಂತೂ 'ಸಂಡೇ ಸ್ಪೆಷಲ್' ಎಂದರೆ ಆ ಪದಗಳ ಜೋಡಿಯೇ ಮೋಡಿ ಮಾಡುತ್ತದೆ. ಅದರಲ್ಲಿಯೂ ಸಂಡೇ ಸ್ಪೆಷಲ್ ತಿಂಡಿಗಳನ್ನು ನೆನೆದರೆ ಬಾಯಲ್ಲಿ ನೀರೂರುತ್ತದೆ. ಆದರೆ ಲೇಖಕಿಗೆ ಒಮ್ಮೆ ಮಾತ್ರ ಅವರ ಪತಿ ಸಂಡೇ ಸ್ಪೆಷಲ್ ಕೇಳಿದ್ದು. ಅದಾದ ನಂತರ ಕೇಳಲೇ ಇಲ್ಲವಂತೆ..! ಅವರ ಪಾಕಪ್ರಯೋಗದ ಸ್ಪೆಷಲ್ ಅನುಭವ ಇಲ್ಲಿದೆ. 


'ಮಹಿಳಾ ಮಡದಿಯರು' ಎಂಬ ಶೀರ್ಷಿಕೆ ಕಂಡಾಗ ನಮ್ಮ ಮನಸ್ಸಿನಲ್ಲಿರುವುದೇ ಅವರೂ ಹೇಳಿಬಿಡುತ್ತಾರೆ. "ಮಹಿಳಾ ಮಡದಿ ಅಂದ್ರೆ ಅದೆಂತದ್ದು ಮಾರಾಯರೇ.. ಪುರುಷ ಮಡದಿ ಬೇರೆ ಇರೋದು ಸಾಧ್ಯವಾ..? ಅಂತ ಹುಬ್ಬಾರೋಹಣ ಮಾಡಿರುವುದು ನನ್ನ ದಿವ್ಯದೃಷ್ಟಿಗೆ ಕಾಣುತ್ತಿದೆ." ಎನ್ನುತ್ತಲೇ ಮಹಿಳಾ ಮಡದಿಯ ಕುರಿತು ತೆರೆದಿಡುತ್ತಾರೆ. 


ಇವರ ಅಂಚೆ ಕಚೇರಿಯ ಅನುಭವವನ್ನಿಲ್ಲಿ 'ಕೌಂಟರ್ ಕಣ್ಣಲ್ಲಿ' ಕಾಣಬಹುದು. ಅವರು ಕೌಂಟರ್ ನಲ್ಲಿ ಪಾರ್ಸೆಲ್ಗಳು ಹಾಗೂ ಇತರ ವಿಚಾರಗಳಿಗಾಗಿ ಗ್ರಾಹಕರ ಜೊತೆ ಒಡನಾಡುವ ಪೇಚಾಟದ ಸಂದರ್ಭಗಳು ಹಾಸ್ಯವಾಗಿ ಇಲ್ಲಿದೆ. 


'ಪಬ್ಲಿಕಾಲಾಫೀಸು' ಎಂದರೆ ಅಯೋಮಯವಾಯಿತಲ್ಲವೇ..?! ಪಬ್ಲಿಕ್ ಕಾಲ್ ಆಫೀಸ್ ಅಂದರೆ ಸ್ವಂತ ಟೆಲಿಫೋನ್ ಮತ್ತು ಟೆಲಿಫೋನ್ ಬೂತುಗಳು ಎಲ್ಲೆಡೆ ಇರದೆ, ಪೋಸ್ಟ್ ಆಫೀಸಿನ ಪಬ್ಲಿಕ್ ಕಾಲ್ ಆಫೀಸಿನ ಟೆಲಿಫೋನ್ ಅನ್ನು ಸಾರ್ವಜನಿಕರು ಹೆಚ್ಚಾಗಿ ಬಳಸುತ್ತಿದ್ದಾಗಿನ ಕಾಲದ ಕಥೆ ಹಾಗೂ ಅವಾಂತರಗಳು ಇಲ್ಲಿವೆ.


ಲೆಕ್ಕ ಬರೆದವರು ಚಪ್ಪಲಿ ತಯಾರಕರಾಗಲು ಲಾಯಕ್ ಆಗುತ್ತಾರೆ ಎಂಬ ಲೇಖಕಿಯ ಎಣಿಕೆಗೆ ಕಾರಣವಾದದ್ದು.. ಚಪ್ಪಲಿಯ ಮೇಲಿದ್ದ ಬೆಲೆ 250 ರೂ. 95 ಪೈಸೆ. ಹತ್ತು ರೂಪಾಯಿಗಳಿಗೇ ಚಿಲ್ಲರೆ ಸಿಕ್ಕದ ಕಾಲದಲ್ಲಿ 95 ಪೈಸೆ ಸಿಕ್ಕಲು ಹೇಗೆ ಸಾಧ್ಯವೆನ್ನುವ ಲೇಖಕಿಯ ವಾದಕ್ಕೆ ಅಂಗಡಿಯವರೇ ಸೋತರೇ ಅಥವಾ 95 ಪೈಸೆಗಿಂತ ಹೆಚ್ಚುಕೊಟ್ಟು ಇವರೇ ಸೋತರೋ 'ಒಂದು ಪಾದುಕಾ ಪ್ರಕರಣಂ'ನಲ್ಲಿ ಓದಿನೋಡಿ. 


'ಅತಿಥಿ ದೇವೋಭವ' ಎನ್ನುವ ಮನೆಗೆ ಅತಿಥಿಗಳ ಹಿಂಡೇ ಬಂದಾಗ ಅದು ಹೇಗಿರಬಹುದು..?! ಅದರಲ್ಲಿಯೂ ಅವರ ಪತಿ ಸರ್ಪಸುತ್ತಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ನೋಡಲು ಬಂದವರ ಮಾತುಗಳು ಅದಕ್ಕೆ ಅವರ ಪತಿಯ ಪ್ರತಿಕ್ರಿಯೆ ಜೊತೆಗೆ ಅಡಿಗೆ ಮನೆಯಲ್ಲಿ ಇವರು ಇಡೀ ಅತಿಥಿ ದೇವೋಭವ ಪ್ರಸಂಗ ಸಾಗುತ್ತಿದ್ದದ್ದು ಹೇಗೆ ಎನ್ನುತ್ತಾ.. ಸೀರಿಯಸ್ ಸಂದರ್ಭವನ್ನೂ ಹಾಸ್ಯಮಯವಾಗಿಯೇ  ಬಿಚ್ಚಿಡುತ್ತಾರೆ.


'ಮಾರ್ಜಾಲ ಮೋಹಿನಿ'ಯರನ್ನು ಕಂಡಂತೆ ಇಲ್ಲಿ ಇವರ 'ಶ್ವಾನ ಪ್ರೇಮ'ವನ್ನು ಕಾಣಬಹುದು. ಶಿವ ಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಎಂಬ ಗಾದೆಗೆ ಬದಲಾಗಿ ಶಿವ ಪೂಜೆಯಲ್ಲಿ ನಾಯಿ ಬಿಟ್ಟಹಾಗೆ ಎನ್ನುವ ಹೊಸ ಗಾದೆ ಹೊಳೆದು ಲೇಖಕಿ ನಕ್ಕದ್ದೇಕೆ..? ಓದಿ ನೀವೂ ನಕ್ಕುಬಿಡಿ.


ಅಂಚೆ ಕಚೇರಿಯಲ್ಲಿ ಇವರು ಡಿಸ್ಪ್ಯಾಚ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾಗ.. ಕಚೇರಿ ಎಂದರೆ ಕಜ್ಜಾಯಗಳ ಪಾಂಡೋರಾಳ ಪೆಟ್ಟಿಗೆಯೇ ಸರಿ ಎನಿಸುತ್ತಿದ್ದದ್ದು ಹಾಗೂ ಆ ಪತ್ರಗಳ ಘಮಲುಗಳನ್ನು 'ಕಚೇರಿ ಕಜ್ಜಾಯಗಳು' ಎನ್ನುತ್ತಾ ಸಿಹಿಯಾಗಿಯೇ ಹೇಳಿದ್ದಾರೆ.


ರೆಡಿ ಮೇಡ್ ಬಟ್ಟೆಗಳಿರದ ಕಾಲದಲ್ಲಿ 'ದರ್ಜಿಯ ಮರ್ಜಿ'ಯಲ್ಲಿಯೇ ಫ್ಯಾಷನ್ ರೂಪುಗೊಳ್ಳಬೇಕಿತ್ತು. ಅವರು ಹೊಲೆದದ್ದೇ ಫ್ಯಾಶನ್. ಆಗ ಒಬ್ಬರ ಅಳತೆಗೆ ಮತ್ತೊಬ್ಬರ ಬಟ್ಟೆ ಹೊಲಿದದ್ದು.. ಪ್ರತಿ ಬಾರಿಯೂ ಬಟ್ಟೆಗೆ ಸರಿಯಾದ ಅಳತೆ ಕೊಟ್ಟರೂ.. ಬಟ್ಟೆ ಸರಿಯಾಗದಿದ್ದದ್ದು.. ಇದು ಅವರು ಸಣ್ಣವರಿದ್ದಾಗ ಅನುಭವಿಸಿದ ಪಡಿಪಾಠಲಾದರೆ.. ಇನ್ನು ಅವರೇ ಸ್ವಯಂ ದರ್ಜಿಯ ಕೆಲಸ ಮಾಡಲು ಹೋದಾಗಿನ ಅನುಭವಗಳೂ ಮೇಳೈಸಿವೆ. 


ಇಲ್ಲಿನ ಎಷ್ಟೋ ಸಂದರ್ಭಗಳು ನಮ್ಮದೇ ಅನುಭವಗಳಂತೆ ಕಾಣುತ್ತವೆ. ಮಾರ್ಜಾಲ ಮೋಹಿನಿಯರು, ಶ್ವಾನ ಪ್ರೇಮ, ಬಸ್ಸಿನ ಪುರಾಣಗಳು, ದರ್ಜಿ ಹಾಗೂ ಬಟ್ಟೆಯ ಅವಾಂತರಗಳು ಇವೆಲ್ಲವೂ ನಮ್ಮದೇ ಅನುಭವಗಳ ರೂಪಾಂತರಗಳಂತೆಯೇ ಕಾಣಸಿಗುತ್ತವೆ. ಆದರೆ, ಲೇಖಕಿ ಇದನ್ನು ಪ್ರಸ್ತುತಪಡಿಸಿರುವ ರೀತಿ ಹಾಸ್ಯಮಯ ಶೈಲಿ ಓದುಗರನ್ನು ನಗೆಗಡಲಿನಲ್ಲಿ ತೇಲಿಸುವುದರಲ್ಲಿ ಅನುಮಾನವಿಲ್ಲ. ಎಂತಹಾ ಗಂಟು ಮುಖವು ಸಡಿಲಗೊಳ್ಳುವ ಹಾಸ್ಯಲೇಖನಗಳು ಇಲ್ಲಿವೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ