ಶನಿವಾರ, ಏಪ್ರಿಲ್ 18, 2026

ದಿಗಂತದಾಚೆ (ಪುಸ್ತಕ ಯಾನ - 257)


ಪುಸ್ತಕದ ಶೀರ್ಷಿಕೆ : ದಿಗಂತದಾಚೆ

ಲೇಖಕರು : ಮೈತ್ರೇಯಿ

ಪ್ರಕಾಶಕರು : ವ್ಯಾಸ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 2006


ಇದು ಎರಡು ಸಂಯುಕ್ತ ಸಂಪುಟದ ಕಾದಂಬರಿ. 'ದಿಗಂತದಾಚೆ' ಕಾದಂಬರಿ ನಾನು ಓದಿದ ಈ ಲೇಖಕಿಯ ಮೊದಲ ಪುಸ್ತಕ.


'ದಿಗಂತದಾಚೆ' ಎಂಬ ಶೀರ್ಷಿಕೆಯನ್ನು ಹೊತ್ತ ಈ ಸುಂದರ ಕಾದಂಬರಿ ಕುರಿತು ಸರಳವಾಗಿ ಹೇಳುವುದಾದರೆ ಎರಡು ಗಂಡುಗಳನ್ನು ಪ್ರೀತಿಸಿ ಅವರ ಪ್ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗದೆ ಒದ್ದಾಡುವ ಹೆಣ್ಣೊಬ್ಬಳ ಕಥೆ.


ಲೇಖಕಿ ಅವರ ಮುನ್ನುಡಿಯಲ್ಲಿ "ಇಬ್ಬರನ್ನು ಸರಿಸಮವಾಗಿ ಪ್ರೀತಿಸಿದ ಕಥಾನಾಯಕಿ ಕೊನೆಗೆ ಆರಿಸಿಕೊಂಡದ್ದು ಯಾರನ್ನು..?" ಎಂಬ ಉತ್ತರ ಕಾದಂಬರಿಯಲ್ಲಿದೆ" ಎಂದು ಹೇಳಿದ್ದಾರೆ. ಆದರೆ, ಇಬ್ಬರನ್ನು ಸರಿಸಮವಾಗಿ ಪ್ರೀತಿಸುತ್ತಾರೆ ಎಂಬ ಮಾತನ್ನು ಅಷ್ಟು ಸುಲಭವಾಗಿ ಒಪ್ಪಲಾಗಲಿಲ್ಲ. ಇಲ್ಲಿ ಆ ಪ್ರೀತಿಸಿದ ಕಾಲಘಟ್ಟ ಅಥವಾ ಸಮಯ ವಿಭಿನ್ನವಾಗಿದ್ದು.. ಪ್ರೀತಿ ಸರಿಸಮವಾಗಿಯೂ ಇರಬಹುದು ಎಂಬ ಅರ್ಥವೂ ಆಗಿರಬಹುದು ಎಂದು ಓದಲು ಶುರುಮಾಡಿದೆ. 


'ದರ್ಪಣ' ಪತ್ರಿಕೆಯ ದೀಕ್ಷಿತ್ ಎಂದರೆ ಜ್ಞಾನದ ಸಾಗರವಿದ್ದಂತೆ. ಅಲ್ಲದೇ, ರಾಜಕಾರಣಿಗಳ ಮೈಯಲ್ಲಿ ನಡುಕ ಹುಟ್ಟಿಸುವ ಸತ್ಯಾಸತ್ಯತೆಯನ್ನು ತೆರೆದಿಡುವ ಪತ್ರಿಕೆಯನ್ನು ನಡೆಸುತ್ತಿದ್ದ ವ್ಯಕ್ತಿ. ಅದಕ್ಕಾಗಿ ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಪತ್ರಿಕೋದ್ಯಮಕ್ಕೆ ಇಳಿದಿದ್ದರು. ಭ್ರಷ್ಟಾಚಾರಿಗಳ ಪಾಲಿಗೆ ಸಿಂಹಸ್ವಪ್ನದಂತಿದ್ದವರು. ಲಾಭಾಂಶದ ಒಂದು ಭಾಗವನ್ನು ಚಾರಿಟಿಗಳಿಗೆ ಕೊಟ್ಟು ಬಿಡುತ್ತಿದ್ದರು. ಆ ಪತ್ರಿಕೆಯಲ್ಲಿ ಕೆಲಸ ಮಾಡುವುದೇ ಒಂದು ಹೆಮ್ಮೆ. ಇಂತಹಾ ಅಪರೂಪದ 'ದರ್ಪಣ' ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವಳು ಶ್ರದ್ದಾ. ಇವಳೇ ನಮ್ಮ ಈ ಕಾದಂಬರಿಯ ನಾಯಕಿ. ರ‍್ಯಾಂಕ್‌ ವಿದ್ಯಾರ್ಥಿಯಾಗಿದ್ದವಳಿಗೆ ಹಲವಾರು ಕಡೆ ಕರೆ ಬಂದರೂ ಎಲ್ಲೂ ಹೋಗದೆ ದರ್ಪಣಕ್ಕೆ ಸೇರಿಕೊಂಡು ಕೆಲಸ ಮಾಡಿ ಭೇಷ್ ಎನ್ನಿಸಿಕೊಳ್ಳುತ್ತಿದ್ದಳು. ದೀಪಾವಳಿ ವಿಶೇಷಾಂಕಕ್ಕಾಗಿ ಭಾರತದ ಅಪರೂಪದ ಶಿಲ್ಪಿಗಳು ಎಂಬ ವಿಷಯದ ಮೇಲೆ ಅಪರೂಪದ ಲೇಖನವೊಂದನ್ನು ಸಿದ್ಧಪಡಿಸಿಟ್ಟಿದ್ದಳು. ಅದಕ್ಕಾಗಿ ಎಷ್ಟೋ ಕಷ್ಟಪಟ್ಟು ಅಪರೂಪದ ಫೋಟೋಗಳನ್ನು ಸಂಗ್ರಹಿಸಿದ್ದಳು. ಆದರೆ, ಅದಕ್ಕೆಂದೇ ಒಂದು ವಾರ ಕಷ್ಟಪಟ್ಟು ಹತ್ತಾರು ಲೈಬ್ರರಿಗೆ ಅಲೆದಿದ್ದವಳಿಗೆ ಕೋಪ ಬಂದದ್ದು ಮರುದಿನ ಅದೇ ಲೇಖನಕ್ಕೆ ಅವಳು ಕೊಟ್ಟಿದ್ದ ಹೆಡ್ಡಿಂಗ್ ಬದಲಾಗಿ, ಹಲವಾರು ಬದಲಾವಣೆಗಳನ್ನು ಮಾಡಲಾಗಿತ್ತು. ಯಾವತ್ತೂ ತನ್ನ ಲೇಖನವನ್ನು ತಿದ್ದಿಸಿಕೊಳ್ಳಲು ಇಷ್ಟಪಡದಿದ್ದವಳು ನಖಶಿಕಾಂತ ಉರಿದಿದ್ದಳು. 


ಕಾರಣ ತಿಳಿದದ್ದು ದೀಕ್ಷಿತ್ ರವರು ಪರಿಚಯಿಸಿದ ಆಕಾಶ್ ನನ್ನು ಕಂಡಾಗ. ಮೊದಲು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ಈಗ ದರ್ಪಣ ಸೇರಿದ್ದರು. ಇನ್ನು ಮುಂದೆ ಶ್ರದ್ದಾ ಅವರೊಟ್ಟಿಗೆ ಕೆಲಸ ಮಾಡಬೇಕೆಂದು ಹೇಳಿದ್ದು ಅವಳಿಗೆ ಇನ್ನೂ ಕೋಪ ತರಿಸಿತ್ತು. ಆಕಾಶ್ ಮೇಲಿನ ದುಸಮುಸು ಹಾಗೆಯೇ ಇದ್ದರೂ.. ದೀಕ್ಷಿತ್ ರವರ ಮಾತಿಗೆ ಬೆಲೆ ಕೊಟ್ಟು ಆದಷ್ಟೂ ಆತನೊಟ್ಟಿಗೆ ಕೆಲಸ ಮಾಡಲು ಯತ್ನಿಸುತ್ತಿದ್ದಳು ಶ್ರದ್ದಾ. ಆಕಾಶ್ ಬುದ್ಧಿವಂತಿಕೆಯ ಅರಿವಾದರೂ.. ಕೋಪವಂತೂ ಇದ್ದೇ ಇತ್ತು.


ವೆಂಕಟೇಶ ಹಾಗೂ ಗಿರಿಜಾರವರ ಮುದ್ದಿನ ಮಗಳು ಶ್ರದ್ದಾ. ಅವಳು ಹಾಗೂ ದೀಪ್ತಿ ಅಕ್ಕ-ತಂಗಿಯರಾದರೂ.. ಸ್ವಭಾವದಲ್ಲಿ ತದ್ವಿರುದ್ಧವಾಗಿದ್ದವರು. ದೀಪ್ತಿ ಹಾಗೂ ಶ್ರದ್ದಾ ಇಬ್ಬರೂ ಶಾಪಿಂಗ್ ಗೆ ಹೋದಾಗ ನಡೆದ ಘಟನೆ ದೀಪ್ತಿಗೆ ಆಕಾಶ್ ಮೇಲಿನ ಗೌರವವನ್ನು ಹೆಚ್ಚಾಗಿಸಿತ್ತು.


ಪೃಥ್ವಿ ಶ್ರದ್ಧಾಳ ಬಾಲ್ಯದ ಗೆಳೆಯ. ಮಡಿಕೇರಿಗೆ ಅಜ್ಜಿ ಮನೆಗೆ ಹೋಗುತ್ತಿದ್ದಾಗ ಪರಿಚಯವಾಗಿದ್ದವನು. ವಯಸ್ಸಿನ ಭೇದವಿಲ್ಲದೆ, ಬೆರೆಯುತ್ತಿದ್ದ ಸಂದರ್ಭದಲ್ಲಿ ಪಕ್ಕದ ತೋಟದವರ ಮಗನಾದ ಪೃಥ್ವಿ ಶ್ರದ್ಧಾ ಜೊತೆಗೆ ಬರುತ್ತಿದ್ದನು. ಸ್ವಭಾವತಃ ಬಜಾರಿಯಾಗಿದ್ದ ಶ್ರದ್ದಾ ಯಾರ ಮಾತನ್ನೂ ಕೇಳದೆ, ಹುಡುಗರ ಸಮಕ್ಕೆ ನಿಂತು ಬಿಡುತ್ತಿದ್ದಳು. ಪೃಥ್ವಿಗೂ ಅವಳಿಗೂ ಸದಾ ಜಗಳ ನಡೆಯುತ್ತಿತ್ತು. ಆದರೆ, ಕ್ರಮೇಣ ಜಗಳ, ಮಾತು ಬಿಡುವುದು ಮತ್ತೆ ಸ್ನೇಹ ಮಾಡುವುದು ಎಲ್ಲವೂ ಮಾಮೂಲಾಗುತ್ತಾ ಜಗಳ ಕಾಯುತ್ತಲೇ.. ಬೆಳೆದು ದೊಡ್ಡವರಾಗುವಷ್ಟರಲ್ಲಿ, ಕಾಲೇಜಿಗೆ ಬರುವಷ್ಟರಲ್ಲಿ ಗೆಳೆತನ ಪ್ರೀತಿಯಾಗಿ ಮಾರ್ಪಟ್ಟಿತ್ತು. ಇಬ್ಬರ ಮನೆಯಲ್ಲಿಯೂ ಇದಕ್ಕೆ ವಿರೋಧವೇನಿರಲಿಲ್ಲ. ಪಿ.ಯು.ಸಿ ನಂತರ ಪೃಥ್ವಿ ಏರ್ಪೋರ್ಟ್ ಟ್ರೈನಿಂಗ್ ಗೆ ಸೇರಿದರೆ, ಶ್ರದ್ಧಾ ತನ್ನಿಷ್ಟದಂತೆ ಡಿಪ್ಲೋಮಾ ಎಂಜಿನಿಯರಿಂಗ್ ಗೆ ಸೇರಿದಳು. ಚಿಕ್ಕಂದಿನಿಂದಲೂ ಯಾರನ್ನೂ ಲೆಕ್ಕಿಸದೆ, ಧೈರ್ಯದಿಂದ ಬೆಳೆದಿದ್ದ ಶ್ರದ್ದಾಳಿಗೆ ಸಾಹಸಗಳೆಂದರೆ ಇಷ್ಟ. ಅದಕ್ಕಾಗಿ ಅವಳು ಆಯ್ದುಕೊಂಡ ಮಾರ್ಗ ಪತ್ರಿಕೋದ್ಯಮ. 


ಪೃಥ್ವಿಗೆ ಸಮಯ ಸಿಕ್ಕಾಗ, ಶ್ರದ್ಧಾಳಿಗೂ ಸಮಯವಿದ್ದಾಗಲೆಲ್ಲಾ ಅವರ ಮಾತುಕತೆಯ ವಿಚಾರಗಳ ವಿನಿಮಯ ನಡೆಯುತ್ತಲೇ ಇತ್ತು. ಹಾಗೆಂದು ಅವು ಬಾಲಿಶ ಪ್ರೇಮದ ಮಾತುಕತೆಗಳಲ್ಲ. ಬದಲಾಗಿ ಸಮಾಜಕ್ಕೆ ತಮ್ಮಿಂದಾಗುವ ಸೇವೆಯ ಕುರಿತಾದ ನಿಸ್ವಾರ್ಥದ ಮಾತುಕತೆಗಳೇ. ಇಬ್ಬರ ನಡುವೆ ರೇಗಿಸುವಿಕೆಯೂ ಇರುತ್ತಿತ್ತು. ಆಕಾಶನ ವಿಚಾರ ಹೇಳಿದಾಗಲೆಲ್ಲಾ.. ಪೃಥ್ವಿ ಜಗಳ, ಮುನಿಸು ಎಂದು ಪ್ರೇಮವಾದೀತು ರೇಗಿಸುತ್ತಿದ್ದದ್ದೂ ಇತ್ತು. 


ಈ ನಡುವೆ ಆಫೀಸಿನಿಂದ ಎಲ್ಲರೂ ಸೇರಿ ಆಕಾಶ್ ನೇತೃತ್ವದಲ್ಲಿ ಗೋವಾ ಟ್ರಿಪ್ ಗೆ ಹೊರಟಿದ್ದರು. ಆ ಸಮಯದಲ್ಲಿ ಆಕಾಶ್ ನನ್ನು ಕಳಿಸಲು ಬಂದ ಅವರ ಮನೆಯವರೊಬ್ಬರ ಪರಿಚಯವಾಗಿತ್ತು ಶ್ರದ್ಧಾಳಿಗೆ. ಅದಾದ ನಂತರ ಅವಳು ಆಕಾಶ್ ನನ್ನು ನೋಡುವ ರೀತಿಯೇ ಬದಲಾಗಿತ್ತು. ಈ ಟ್ರಿಪ್ ಮುಗಿದ ನಂತರ ಅವರ ಬಾಂಧವ್ಯ ಹೆಚ್ಚುತ್ತಿತ್ತು ಎಂದರೂ ತಪ್ಪಾಗಲಾರದು. ಅದಕ್ಕೆ ಒಂದು ಕಾರಣವೂ ಇತ್ತು. ತಲೆನೋವೆಂದು ಆಕೆ ಬಳಲುತ್ತಿದ್ದಾಗ.. ಇದ್ದಕ್ಕಿದ್ದಂತೆ ತಲೆಸುತ್ತು ಬಂದು, ಸಮುದ್ರದಲ್ಲಿ ಮುಳುಗುವ ಸಂದರ್ಭದಲ್ಲಿ ಆಕಾಶ್ ಅವಳನ್ನು ಕಾಪಾಡಿದ್ದ. ಆತನ ಮೇಲಿನ ಗೌರವ ಪ್ರೀತಿಯಾಗಿ ಬದಲಾಗುತ್ತದೆ. 


ಪೃಥ್ವಿಯ ಯಾವ ವಿಚಾರವೂ ಆಕಾಶ್ ಗೆ ತಿಳಿದಿರಲಿಲ್ಲ. ಇತ್ತ ಶ್ರದ್ಧಾ ತನ್ನ ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ. ಹಾಗೆಂದು, ಅದು ಅವಳು ಬೇಕೆಂದು ಮರೆಮಾಚಿದ್ದೇನಲ್ಲ. 


ಆಕಾಶ್ ಹಾಗೂ ಪೃಥ್ವಿ ಇಬ್ಬರ ಮೇಲಿನ ಪ್ರೇಮವೂ ಹೆಚ್ಚು-ಕಡಿಮೆಯ ಅಳತೆಗೋಲಿಗೆ ಸಿಗುವಂತಹದ್ದಾಗಿರಲಿಲ್ಲ. ಹಾಗಾದರೆ, ಯಾರ ಪಾಲಿಗೆ ಶ್ರದ್ಧಾ ದಿಗಂತದಂತೆ ಭಾಸವಾಗಿದ್ದು..?? ಏಕೆ ಎಂದು ತಿಳಿಯಲು ಮೈತ್ರೇಯಿ ಅವರ 'ದಿಗಂತದಾಚೆ' ಕಾದಂಬರಿ ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ