ಪುಸ್ತಕದ ಶೀರ್ಷಿಕೆ : ಸಮನ್ವಯ ಸಾಹಿತ್ಯದ ಲೇಖಕಿ ಎ. ಪಿ. ಮಾಲತಿ
ಲೇಖಕರು : ಡಾ. ಶೈಲಾ ಯು.
ಪ್ರಕಾಶಕರು : ಕನ್ನಡ ಸಂಘ ಕಾಂತಾವರ
ಪ್ರಥಮ ಮುದ್ರಣ : 2016
ಪುಟಗಳು : 52
ಬೆಲೆ : 45 ರೂ.
ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರನ್ನು ಪರಿಚಯಿಸುವ ಮಾಲಿಕೆಯಲ್ಲಿ ಮೂಡಿ ಬಂದಿರುವ ಪುಸ್ತಕ ಇದು. ಇಲ್ಲಿ ಲೇಖಕಿ ಎ. ಪಿ. ಮಾಲತಿಯವರ ಬಾಲ್ಯದ ಹಾಗೂ ಬದುಕಿನ ಹಾದಿಯ ಜೊತೆಗೆ ಅವರು ಕೃತಿ ಕಟ್ಟಿಕೊಟ್ಟ ಬಗೆ, ಸಾಹಿತ್ಯದ ಹಾದಿಯಲ್ಲಿ ನಡೆದದ್ದು ಹಾಗೂ ಅವರ ಸಾಹಿತ್ಯ ಕೃತಿಗಳ ಚೆಂದದ ವಿಮರ್ಶೆಯೂ ಇದೆ. ನಾನು ಅವರ ಆರೆಂಟು ಪುಸ್ತಕಗಳನ್ನು ಮಾತ್ರ ಓದಿರುವುದರಿಂದ.. ಅವರ ಕೃತಿಗಳ ಕುರಿತ ವಿಮರ್ಶೆಯನ್ನು ಓದಿ ಆ ಕೃತಿಗಳನ್ನು ಓದುವ ಮನಸ್ಸಾಗಿದೆ. ಹಾಗಾಗಿ, ಈ ಪುಸ್ತಕದಲ್ಲಿ ಅವರ ಕೃತಿಗಳ ಪರಿಚಯದ ಹೊರತಾಗಿರುವ ಅವರ ಜೀವನದ ಕೆಲವು ಚಿತ್ರಣಗಳನ್ನು ನಾನು ಮಾತ್ರ ಹೇಳುತ್ತಾ ಹೋಗುತ್ತೇನೆ. ಈ ಪುಸ್ತಕ ಪರಿಚಯ ಕೇವಲ ಲೇಖಕಿಯ ಕುರಿತು ಆಸಕ್ತಿ ಮೂಡಿಸಲಿಕ್ಕಷ್ಟೇ.. ಇದು ಪೂರ್ಣ ಪರಿಚಯವಲ್ಲ. ಕೃತಿ ಓದಿಯೇ ಅವರ ಪೂರ್ಣ ಪರಿಚಯ ತಿಳಿಯಿರಿ.
ಸಾಹಿತ್ಯಾಸಕ್ತ ದಂಪತಿಗಳಾದ ಗಣೇಶ ಕೃಷ್ಣಭಟ್ಟರು ಹಾಗೂ ಕಾವೇರಿಯವರ ಇಬ್ಬರು ಮಕ್ಕಳಲ್ಲಿ ಹಿರಿಯ ಮಗಳು ಮೋಹಿನಿ. ಮದುವೆಯಾಗಿ ಗಂಡನ ಮನೆಗೆ ಹೋಗುವ ಹೋದಾಗ ಅಲ್ಲಿ ಆಕೆಗೆ ಬೇರೆ ಹೆಸರಿಡುವ ಕ್ರಮವಿದ್ದಾಗ ಅವರು ಮಾಲತಿಯಾಗಿರಬಹುದು ಎಂದು ಹೇಳುತ್ತಾರೆ. ಗಂಡನ ಮನೆಯಲ್ಲಿ ಮೋಹಿನಿ ಮಾಲತಿಯಾದರು.
ತುಂಬು ಕುಟುಂಬದಲ್ಲಿ ಬೆಳೆದವರು. ಅವರ ಪ್ರೀತಿಯ ಸವಿಯನ್ನು ಉಣ್ಣುತ್ತಾ ಬೆಳೆದ ಈಕೆ ಕಷ್ಟ, ನೋವು, ಸಿಟ್ಟು ದ್ವೇಷ, ನಕಾರಾತ್ಮಕ ಪರಿಸರ ಕಂಡವರೇ ಅಲ್ಲ ಎನ್ನುತ್ತಾರೆ. ಅಜ್ಜ ಆಯುರ್ವೇದ ಪಂಡಿತರಾದ ಕೃಷ್ಣಭಟ್ಟರು. ಅವರ ಪ್ರಭಾವ ಮಾಲತಿಯವರ ಮೇಲೆ ಸಾಕಷ್ಟಿತ್ತು. ಬಾಲ್ಯದಿಂದಲೇ ಸಸ್ಯ ಪ್ರೀತಿಯನ್ನು ಬೆಳೆಸಿಕೊಂಡವರು. ಸಾಹಿತ್ಯಪ್ರಿಯ ತಾಯಿಯ ನೆರಳಲ್ಲಿ, ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಬೆಳೆದವರಿಗೆ ಯಕ್ಷಗಾನ ಪ್ರಿಯ. ಅಜ್ಜ ಹಾಗೂ ತಂದೆಯಿಂದ ಬರವಣಿಗೆ ವಂಶವಾಹಿನಿಯಲ್ಲಿಯೇ ಹರಿದು ಬಂದಿರಬೇಕು ಎಂದು ಪರಿಚಯಿಸುತ್ತಾರೆ. ಕೃಷ್ಣಭಟ್ಟರಿಗೆ ಸಾಹಿತ್ಯದಲ್ಲಿ ಅಪಾರ ಒಲವು. ಆ ಕಾಲಕ್ಕೆ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದ ಮೇಧಾವಿ. ಜೊತೆಗೆ ಇನ್ನೂ ಕೆಲವು ಗ್ರಂಥಗಳನ್ನು, ಆಯುರ್ವೇದ ಪುಸ್ತಕಗಳನ್ನು ರಚಿಸಿದ್ದರು.
ಮಾಲತಿಯವರ ಓದು ಹಾಗೂ ಸಾಹಿತ್ಯ ಪ್ರೀತಿ, ಕವಿಹೃದಯ, ಯಕ್ಷಗಾನದ ಕುರಿತಾದ ಒಲವು ಹಾಗೂ ಬೆಳೆದು ಬಂದ ವಾತಾವರಣದ ಚಿತ್ರಣವಿದೆ. ಮಾಲತಿಯವರು ತನ್ನ ತಮ್ಮ ಸುಬ್ರಾಯನ ಜೊತೆ ಧಾರವಾಡದ ಆಕಾಶವಾಣಿಯ ಪ್ರತೀ ವಾರದ ಕಾರ್ಯಕ್ರಮ 'ಗಿಲಿವಿಂಡು'ವಿನಲ್ಲಿ ಭಾಗವಹಿಸುತ್ತಿದ್ದರು. ಸುಬ್ರಾಯರಿಗೂ ನಾಟಕ ಹಾಗೂ ನಟನೆಯಲ್ಲಿ ಅಪಾರ ಆಸಕ್ತಿ. ಅಕ್ಕ ತಮ್ಮ ಇಬ್ಬರು ಸೇರಿ ತಮ್ಮದೇ ಕಲ್ಪನೆಯಲ್ಲಿ ಕಥೆ, ಕವನ, ನಾಟಕಗಳನ್ನು ರಚಿಸಿದ್ದರು. ಭಟ್ಕಳದಲ್ಲಿ ಅಜ್ಜನ ಮನೆಯಲ್ಲಿ ರಜಾದಿನಗಳಲ್ಲಿ ಅತ್ತೆ, ಚಿಕ್ಕ ಮಾವನ ಮಕ್ಕಳನ್ನೆಲ್ಲಾ ಸೇರಿಸಿಕೊಂಡು ತಾವೇ ರಚಿಸಿದ ನಾಟಕಗಳನ್ನು ಅಭ್ಯಾಸ ಮಾಡಿಸಿ, ಅವರಿಂದ ನಾಟಕ ಆಡಿಸುತ್ತಿದ್ದ ಪ್ರಸಂಗ ಹಾಗೂ ಸಂದರ್ಭಗಳನ್ನು ಕೇಳಿ ಅವರ ಸೃಜನಶೀಲತೆ ಹಾಗೂ ಸಾಹಿತ್ಯಿಕ ಪ್ರಜ್ಞೆಯ ಕುರಿತು ಹೆಮ್ಮೆಯಾಗುತ್ತದೆ.
ಮಾಲತಿಯವರು ಪತ್ತೇದಾರಿ ಕಾದಂಬರಿಕಾರ ನರಸಿಂಹಯ್ಯನವರ ಪ್ರಭಾವದಿಂದ ತಮ್ಮ 15ನೇ ವಯಸ್ಸಿನಲ್ಲಿ, ಸುಬ್ರಾಯನ ಸಹಕಾರದಿಂದ ಎರಡು ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಆದರೆ, ಇವು ಪ್ರಕಟಗೊಳ್ಳಲಿಲ್ಲ. ಅವರ ಹಸ್ತ ಪ್ರತಿಗಳನ್ನು ಅನೇಕರು ಕೊಂಡೊಯ್ದು ಓದುವಾಗ ಕೈ ಬದಲಾಗಿ ಹಿಂದಿರುಗಿಸದೆ.. ಅವೆರಡೂ ಕಾಣೆಯಾದವಂತೆ. ಅದನ್ನು ಕಳೆದುಕೊಂಡ ದುಃಖದಲ್ಲಿ ಹುಟ್ಟಿದ ಹಠದಿಂದ ಬರೆದ ಒಂದು ಲೇಖನ, ಎರಡು ಕಥೆ ಆಗಿನ ಪ್ರಸಿದ್ಧ ವಾರಪತ್ರಿಕೆ 'ಕರ್ಮವೀರ'ದಲ್ಲಿ ಪ್ರಕಟವಾದವು. ಅದರಿಂದ ಸಂಭಾವನೆಯೂ ಸಿಕ್ಕಿತು.
ಮಾಲತಿಯವರು ಮದುವೆಯಾಗಿ ಬಂದದ್ದು ಸುಸಂಸ್ಕೃತ ಜಮೀನ್ದಾರಿ ಮನೆತನದ ತುಂಬಿದ ಕುಟುಂಬದ ಎರಡನೇ ಸೊಸೆಯಾಗಿ. ಇವರ ಮಾವ ಪ್ರಸಿದ್ಧ ಅನುವಾದಕರಾದ ಎ. ಪಿ ಸುಬ್ಬಯ್ಯನವರು. ಅದಾಗಲೇ ಇಂಗ್ಲೀಷ್ ನಿಂದ ಡೇವಿಡ್ ಕಾಫರ್ ಫೀಲ್ಡ್, ಲಾ ಮಿಸರೆಬಲ್ಸ್ ಮುಂತಾದ ಹಲವರ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅತ್ತೆ ಗೃಹಿಣಿ. ಪತಿ ಗೋವಿಂದ ಭಟ್ಟರು ಅಧ್ಯಾಪಕ ವೃತ್ತಿಯಲ್ಲಿದ್ದವರು. ಪತ್ನಿಯ ಬರೆಯುವ ಹವ್ಯಾಸವನ್ನು ಅಭಿಮಾನದಿಂದ ಪ್ರೋತ್ಸಾಹಿಸಿದವರು. ಸಹೋದರಿಯರಂತೆ ಪ್ರೀತಿಸುವ ಅತ್ತಿಗೆ-ನಾದಿನಿಯರು. ಓರ್ವ ಅತ್ತಿಗೆಯ ಗಂಡ ಪ್ರಸಿದ್ಧ ವಿಜ್ಞಾನ ಲೇಖಕರಾದ ಜಿ. ಟಿ ನಾರಾಯಣ ರಾವ್ ಅವರು.
ಜಿ.ಟಿ.ಎನ್ ಅವರು ಮಾಲತಿಯವರ ಮಾವನ ಒಡಹುಟ್ಟಿದ ತಂಗಿ ಮಗ. ಹಾಗೂ ಅವರ ಹಿರಿಮಗಳು ಲಕ್ಷ್ಮಿದೇವಿಯ ಗಂಡ. "ಅರ್ಜುನನಿಗೆ ಶ್ರೀಕೃಷ್ಣ ಸಾರಥಿ ಇದ್ದಂತೆ ಗೋವಿಂದನಿಗೆ ನಾನು ಸಾರಥಿ" ಎಂದು ಗರ್ವದಲ್ಲಿ ಹೇಳುತ್ತಾ ಮದುವೆಗೆ ಸಾಕ್ಷಿಯಾದ ಪ್ರಸಂಗವನ್ನು ಹೇಳುತ್ತಾರೆ. ಅಲ್ಲದೇ, ಮಾಲತಿಯವರ ಪುಸ್ತಕ ಪ್ರಕಟಣೆಯಲ್ಲಿ ಅವರ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ. ಆ ವೇಳೆಗೆ ಸಮಾಜ ಪುಸ್ತಕಾಲಯದಿಂದ ಮಾಲತಿಯವರ ಎರಡು ಕಾದಂಬರಿಗಳು ಬೆಳಕು ಕಂಡು, ಸಣ್ಣಕಥೆಗಳು ಆಗಾಗ ಪತ್ರಿಕೆಯಲ್ಲಿ ಬಂದದ್ದು ಜಿ.ಟಿ.ಎನ್ ಅವರ ಗಮನಕ್ಕೂ ಬಂದಿತ್ತು. ಮಾಲತಿಯವರ ಸಣ್ಣಕಥೆ 'ಮಾನ ತೆಗೆದ ಉಡುಪು' ಕರ್ಮವೀರದಲ್ಲಿ ಪ್ರಕಟವಾಗಿದ್ದಾಗ ಆ ಕಥೆ ಓದಿ ಮೆಚ್ಚಿದ ಜಿ.ಟಿ.ಎನ್ ಮೈಸೂರಿನ ತಮ್ಮ ಇಬ್ಬರು ಆಪ್ತ ಸ್ನೇಹಿತರಿಗೆ ಮಾಲತಿಯವರನ್ನು ಪರಿಚಯಿಸಿದರು. ಅವರಲ್ಲಿ ಒಬ್ಬರು ಡಿ.ವಿ.ಕೆ ಮೂರ್ತಿ. ಇನ್ನೊಬ್ಬರು ಗೀತಾ ಬುಕ್ ಹೌಸ್ ನ ಪ್ರಕಾಶಕ ಎಮ್. ಸತ್ಯನಾರಾಯಣರಾವ್. ಎಂ. ಸತ್ಯನಾರಾಯಣರಾವ್ ಅವರು ತಾವು ಪ್ರಕಟಿಸಿದ ಮಾಲತಿಯವರ ಪುಸ್ತಕದ ಒಂದು ಗೌರವ ಪ್ರತಿಯನ್ನು ತಪ್ಪದೇ ಜಿ.ಟಿ. ನಾರಾಯಣರಾವ್ ಅವರಿಗೆ ತಲುಪಿಸುತ್ತಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ಶಿವರಾಮ ಕಾರಂತರ ಜೊತೆಗೆ ಅವರ ಒಡನಾಟದ ಕುರಿತು ಓದುವಾಗ ಬಾಲವನ ಹಾಗೂ ಕಾರಂತರ ಆಪ್ತತೆಯ ಅರಿವಾಗುತ್ತದೆ. ಶಿವರಾಮ ಕಾರಂತರು ಮಾಲತಿಯವರ ಮಾವನವರಾದ ಎ.ಪಿ ಸುಬ್ಬಯ್ಯನವರ ಕುಟುಂಬ ಸ್ನೇಹಿತರು. ಪ್ರತಿದಿನ ಸಾಯಂಕಾಲ ಬಾಲವನದಿಂದ ನಡೆದುಕೊಂಡೇ ಬಂದು ಇವರ ಮನೆಯಲ್ಲಿ ಒಂದರ್ಧ ಗಂಟೆ ಕುಳಿತು ಹೋಗುತ್ತಿದ್ದ ವಾಡಿಕೆಯನ್ನು ನೆನೆಯುತ್ತಾರೆ. ಅವರನ್ನು ಮಾತನಾಡಿಸುವ ಹೆಬ್ಬಯಕೆಯಿಂದ ಅಳುಕು, ಭಯದಲ್ಲಿಯೇ ಮೊದಲ ಬಾರಿಗೆ ಕಾರಂತರ ಮನೆಗೆ ಹೋದಾಗ ಅವರು ತಮ್ಮ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟರಂತೆ. ಕಾರಂತರ ಮಡದಿ ಲೀಲಾ ಕಾರಂತರು "ನಮ್ಮ ಗೋವಿಂದನಿಗೆ ಅಮೂಲ್ಯವಾದ ರತ್ನ ಸಿಕ್ಕಿದೆ" ಎಂದಾಗ ಮಾಲತಿಯವರ ಸಂತೋಷಕ್ಕೆ ತಾರವೇ ಇರಲಿಲ್ಲವಂತೆ. ಮುಂದೆಯೂ ಅನೇಕ ಬಾರಿ ಅವರೊಂದಿಗೆ ಮಾತನಾಡಿದ ಹಾಗೂ ಕೃತಿಗಳನ್ನು ಓದಿದ ಅವಕಾಶವನ್ನು ನೆನಪಿಸಿಕೊಳ್ಳುತ್ತಾರೆ.
ಪತಿಯ ಮನೆಯ ಸದಸ್ಯರು ಸಂಗೀತ, ಸಾಹಿತ್ಯ, ಲಲಿತ ಕಲೆಗಳಲ್ಲಿ ಆಸಕ್ತಿ ಹೊಂದಿದ್ದು.. ಪರಸ್ಪರರ ಭಾವನೆಗಳನ್ನು ಗೌರವಿಸುತ್ತಿದ್ದರು. ಇಂತಹ ಪ್ರಾಕೃತಿಕ ಹಾಗೂ ಕೌಟುಂಬಿಕ ಪರಿಸರದಲ್ಲಿದ್ದರೂ ಅದು ತುಂಬು ಕುಟುಂಬ. ಎಲ್ಲರೂ ಕೆಲಸವನ್ನು ಹಂಚಿಕೊಂಡರೂ ಬಿಡುವಿಲ್ಲದ ಕೆಲಸದಲ್ಲಿ, ವಿದ್ಯುತ್ ಇಲ್ಲದ ಮನೆಯಲ್ಲಿ.. ಬುಡ್ಡಿ ದೀಪದ ಬೆಳಕಿನಲ್ಲಿ ಅವರ ಕಥಾಹಂದರ ಮೊಳೆಯುತ್ತಿದ್ದ ಬಗ್ಗೆ ಹಾಗೂ ಅದರ ಕಥಾವಸ್ತುಗಳ ಕುರಿತು ಹೇಳಿದ್ದಾರೆ.
ನಂತರ ಅವರು ಕೃಷಿಯನ್ನೇ ವೃತ್ತಿಯನ್ನಾಗಿಸಿಕೊಂಡ ಬಗ್ಗೆ, ಸಮಕಾಲೀನರ ಭೇಟಿ ಎಲ್ಲವನ್ನು ನೆನಪಿಸಿಕೊಳ್ಳುತ್ತಾರೆ.
ಎ.ಪಿ.ಮಾಲತಿಯವರ ಕಾದಂಬರಿಗಳ ಲೋಕ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅವರ ಕಾದಂಬರಿಗಳ ವಿಸ್ತಾರ ಓದು ನಮ್ಮ ಕೈಗೆ ಎಟುಕುವಂತಿದ್ದರೂ.. ಅದಕ್ಕೆ ತೋರುವ ದಾರಿದೀಪದಂತಿದೆ ಈ ಪುಸ್ತಕದಲ್ಲಿನ ಕೃತಿಗಳ ಪರಿಚಯ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ