ಬುಧವಾರ, ಏಪ್ರಿಲ್ 22, 2026

ಬಲೂನ್ ನಿಂದ ಟೈರ್ ವರೆಗೆ : ಎಂ.ಆರ್.ಎಫ್ ( ಬ್ಯುಸಿನೆಸ್ ಡೈರಿ ಪುಟ - 10)


ಯಾವುದಾದರೂ ಬ್ಯುಸಿನೆಸ್ ಐಡಿಯಾ ಬಂದಾಗ ಅದನ್ನು ಆ ಕ್ಷಣಕ್ಕೆ ಅಳವಡಿಸಿಕೊಂಡು ಬಿಡಬೇಕು. ಯಾರಿಗೆ ಗೊತ್ತು ..?? ಮುಂದೆಲ್ಲೋ ಆ ಅನುಭವವೇ ಬ್ಯುಸಿನೆಸ್ ನ ಮತ್ತೊಂದು ಹಾದಿಯ ದಾರಿದೀಪವಾಗಬಲ್ಲದು. ಹೀಗೆ ಬಲೂನ್ ತಯಾರಿಸಿ ಮಾರುವುದರಿಂದ.. ಭಾರತದ ಟಾಪ್ ಟೈರ್ ಕಂಪನಿ ಎಂದೇ ಹೆಸರು ಮಾಡಿದ ಎಂ.ಆರ್.ಎಫ್ ನಮ್ಮ ಮುಂದಿದೆ. 


ಇಂದು ಸೈಕಲ್, ಕಾರ್, ಬೈಕ್, ಟ್ರಕ್, ಲಾರಿ, ಟ್ರ್ಯಾಕ್ಟರ್ ಹೀಗೆ ಎಲ್ಲವುದರ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು ಇದ್ದರೂ ಅದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ಅವರು ಅದೇ ಫ್ಯಾಕ್ಟರಿಯಲ್ಲಿ ತಯಾರು ಮಾಡುವುದಿಲ್ಲ. ಅದಕ್ಕೆ ಬದಲಾಗಿ ಒಂದೊಂದು ಕಂಪನಿಯಿಂದ ಅಥವಾ ಅವರದ್ದೇ ತಯಾರಿಕಾ ಘಟಕದಿಂದ ಒಂದೊಂದು ಪಾರ್ಟ್ ಗಳನ್ನು ತರಿಸಿ, ಒಟ್ಟಾಗಿ ಸೇರಿಸಿ ಅಸೆಂಬಲ್ ಮಾಡುತ್ತಾರೆ. ಆಗ ನಮಗೆ ಬೇಕಾದ ವಾಹನ ಸಿದ್ದವಾಗುತ್ತವೆ. ಒಂದು ವಾಹನಕ್ಕೆ ಬಹಳ ಮುಖ್ಯವಾಗಿ ಬೇಕಾಗುವ ಪಾರ್ಟ್ ಟೈರ್. ಮೊದಲಿಗೆ ವಾಹನದ ಚಕ್ರಗಳನ್ನು ಮರದಲ್ಲಿ ಮಾಡುತ್ತಿದ್ದರು. ಆದರೆ, ನಂತರ ಕಾಲ ಬದಲಾದಂತೆ ರಬ್ಬರ್ ನಿಂದ ಟೈರ್ ಮಾಡಲು ಶುರು ಮಾಡಿದರು. ರಬ್ಬರ್ ಗಳಲ್ಲಿಯೂ ಬೇರೆ ಬೇರೆಯ ರೀತಿಗಳಿವೆ. ಜೇಮ್ ಶೆಡ್ ಜಿ ಟಾಟಾ ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಭಾವಿಸಿ.. ಬಲೂನು ತಯಾರಿಕೆಯಿಂದ ಹಿಡಿದು ಇಂದು ಭಾರತದ ನಂಬರ್ 1 ಟೈಯರ್ ಫ್ಯಾಕ್ಟರಿ ಎಂದೇ ಹೆಸರು ಮಾಡಿರುವ ಕೆ.ಎಂ ಮಾಮೆನ್ ಮಾಪಿಲ್ಲೈ ಅವರ ಹಾದಿ ಏನೂ ಟೈರು ಸರಾಗವಾಗಿ ಓಡುವಷ್ಟು ಸಪಾಟಾಗಿರಲಿಲ್ಲ. ಅವರ ಏಳು-ಬೀಳಿನ ಹಾದಿಯನ್ನೊಮ್ಮೆ ನೋಡಿ ಬರೋಣ ಬನ್ನಿ. 


ಎಂ.ಆರ್.ಎಫ್ ಎಂದರೆ ಮದರಾಸ್ ರಬ್ಬರ್ ಫ್ಯಾಕ್ಟರಿ ಎಂದು. ಇದರ ಮೂಲ ಕಂಪನಿ ಇರುವುದು ಮದ್ರಾಸ್ ಅಂದರೆ ಈಗಿನ ಚೆನ್ನೈನಲ್ಲಿ. ಆದರೆ, ಈ ವ್ಯಕ್ತಿ ಮೂಲತಃ ತಮಿಳುನಾಡಿನವರಲ್ಲ. ಕೇರಳದಲ್ಲಿ ಸಿರಿಯನ್ ಕ್ರಿಶ್ಚಿಯನ್ ಫ್ಯಾಮಿಲಿಯಲ್ಲಿ ಜನಿಸಿದ ಮಾಮೆನ್ ಮಾಪಿಲ್ಲೈ ಮನೆಯಲ್ಲಿ 10 ಜನ ಮಕ್ಕಳು. ಇವರಿಗೆ 8 ಜನ ಅಣ್ಣಂದಿರು ಹಾಗೂ ಒಬ್ಬರು ಸಹೋದರಿ. ಇವರ ತಂದೆ ತಮ್ಮದೇ ಆದ ಬ್ಯಾಂಕ್ ಇಟ್ಟುಕೊಂಡಿದ್ದರು. ಅಲ್ಲದೇ, ನ್ಯೂಸ್ ಪೇಪರ್ ಅನ್ನು ಸಹಾ ನಡೆಸುತ್ತಿದ್ದರು. ಆದರೆ, ಯಾವುದೋ ಕಾರಣಗಳನ್ನು ಹೇಳಿ ತಿರುವಾಂಕೂರಿನ ರಾಜರು ಇವರ ತಂದೆಯನ್ನು ಜೈಲಿಗೆ ಕಳುಹಿಸಿ ಇವರ ಮನೆಯ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡರು. 


ಸ್ಥಿತಿವಂತರಾಗಿ ಬದುಕುತ್ತಿದ್ದ ಇವರ ಕುಟುಂಬದವರೆಲ್ಲಾ ದಿಕ್ಕಾಪಾಲಾದರು. ಆಗ ಇವರು ತಮ್ಮ ಕಾಲೇಜನ ವ್ಯಾಸಂಗ ಮಾಡುತ್ತಿದ್ದರು. ನಂತರ ಮದ್ರಾಸ್ ಗೆ ಬಂದು ಅಲ್ಲಿನ ಪ್ರಖ್ಯಾತ ಕಾಲೇಜ್ ಆದ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಗಿಸಿದರು. ಆದರೆ, ಮುಂದೇನು ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ. ಅಷ್ಟರಲ್ಲಾಗಲೇ ಅವರಿಗೆ ವಿವಾಹವಾಗಿತ್ತು. ಅವರ ಹೆಂಡತಿ ಕುಂಜಮ್ಮ ಅವರು ಕೆಮಿಸ್ಟ್ ಆಗಿದ್ದರು. ಗಂಡ-ಹೆಂಡತಿ ಇಬ್ಬರೂ ಕೈಕಟ್ಟಿ ಸುಮ್ಮನೆ ಕೂರಲಿಲ್ಲ. ತಮ್ಮ ಹತ್ತಿರವಿದ್ದ ಪುಟ್ಟ ಶೆಡ್ ಒಂದರಲ್ಲಿಯೇ ಯಾವುದೇ ರೀತಿಯ ಮೆಷೀನುಗಳನ್ನೂ ಬಳಸದೆ.. ಮಕ್ಕಳ ಆಟದ ಸಾಮಾನುಗಳ ತಯಾರಿಕೆಗೆ ಮುಂದಾದರು. ಅದರ ಫಲವಾಗಿ ಮೊದಲು ಅವರು ತಯಾರಿಸಿದ್ದೇ ಬಲೂನುಗಳನ್ನು. ಮಾಮೆನ್ ರವರು ಈ ಬಲೂನುಗಳನ್ನು ದಿನವಿಡೀ ರೋಡಿನ ಬದಿಯಲ್ಲಿ ನಿಂತು ಮಾರಾಟ ಮಾಡುತ್ತಾ.. ಅದರಿಂದ ಬಂದ ಹಣದಲ್ಲಿ ಮೆಶೀನ್ ಕೊಳ್ಳಲು ಹಣ ಕೂಡಿಡುತ್ತಿದ್ದರು. 


ನಿಧಾನವಾಗಿ ಹಣ ಕೈಗೆ ಸೇರುತ್ತಾ ಹೋಯಿತು. 1949ರಲ್ಲಿ ಪ್ಲಾಸ್ಟಿಕ್ ನಿಂದ ಚಿಕ್ಕ ಪುಟ್ಟ ಗೊಂಬೆಗಳನ್ನು ತಯಾರಿಸಲು ಶುರು ಮಾಡಿದರು. ನಂತರ ಇಂಡಸ್ಟ್ರಿಯಲ್ಲಿ ಬಳಕೆಯಾಗುವ ಗ್ಲೋವ್ಸ್ ಗಳನ್ನು ಹಾಗೂ ಕಾಂಡೋಮ್ ಗಳನ್ನು ತಯಾರಿಸಲು ಶುರುವಿಟ್ಟರು. ಹೀಗೆ ಹಂತ-ಹಂತವಾಗಿ ಮೇಲೇರುತ್ತಾ ಮದ್ರಾಸ್ ನ ತಂಬು ಚೆಟ್ಟಿ ಬೀದಿಯಲ್ಲಿ ತಮ್ಮ ಮೊದಲ ಆಫೀಸ್ ಅನ್ನು ಶುರು ಮಾಡಿದರು. ತಮ್ಮ ಆಫೀಸಿಗೆ ಬೇಕಾದ ರಬ್ಬರ್ ಗಾಗಿ ಮೊದಲ ಮಿಷನ್ ಕೊಂಡದ್ದು 1952 ರಲ್ಲಿ. ಆ ಮೊದಲ ಮಿಷಿನ್ ನಿಂದ ರಬ್ಬರ್ ಮಿಲ್ ಸ್ಥಾಪನೆಗೆ ಮುಂದಾದರು. ನಂತರ ಟೈರ್, ಕನ್ವೆಯರ್ ಬೆಲ್ಟ್, ಪೈಂಟ್ ಹೀಗೆ ಎಲ್ಲದರಲ್ಲೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು. 


ನೋಡ ನೋಡುತ್ತಿದ್ದಂತೆಯೇ ಇವರ ವ್ಯಾಪಾರ ಇನ್ನೂ ಹೆಚ್ಚಾಯಿತು. 1956 ರಲ್ಲಿ ರಬ್ಬರ್ ಮಾರುಕಟ್ಟೆಯ ಶೇಕಡಾ 50ರಷ್ಟನ್ನು ಇವರು ಆವರಿಸಿಯಾಗಿತ್ತು. ಅದೇ ಸಮಯಕ್ಕೆ ಇವರು ತಮ್ಮ ದೂರದ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದಾಗ ಅವರು ಮನೆಯಲ್ಲಿಯೇ ಮಾಡುತ್ತಿದ್ದ ವ್ಯಾಪಾರವನ್ನು ಕಂಡರು. ಅದೇ ಟೈರ್ ರೀ-ಟ್ರೇಡಿಂಗ್. ಅಂದರೆ, ಈಗಾಗಲೇ ತಯಾರಾಗಿರುವ ಟೈರ್ ಗಳನ್ನು ಮತ್ತೆ ಬೇರೆ ಬೇರೆಯ ಕಂಪನಿಗಳಿಗೆ ಮಾರಾಟ ಮಾಡುವುದು. ಇದನ್ನು ಕಂಡ ಮಾಮೆನ್ ತಲೆಯಲ್ಲಿ ಬೇರೆಯ ಐಡಿಯಾಗಳು ಬಂದವು. ಜೇಮ್ ಶೆಡ್ ಜಿ ಟಾಟಾ ರವರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸಿದ್ದ ಅವರು.. ತಾವೇ ಏಕೆ ಟೈರುಗಳ ತಯಾರಿಕೆಗೆ ಮುಂದಾಗಬಾರದು ಎಂದುಕೊಂಡರು. 


ಆದರೆ, ಭಾರತದಲ್ಲಿ ಅದಾಗಲೇ ವಿದೇಶಿ ಟೈರು ಕಂಪನಿಗಳಾದ ಡನ್ಲಪ್, ಫೈರ್ ಸ್ಟೋನ್ ಹಾಗೂ ಗುಡ್ ಇಯರ್ ಎಂಬ ಕಂಪನಿಗಳು ತಮ್ಮ ಛಾಪನ್ನು ಮೂಡಿಸಿದ್ದವು. ಅದಾಗಲೇ.. ಭಾರತ ಸ್ವತಂತ್ರವಾಗಿದ್ದು ಭಾರತದಲ್ಲಿ ಯಾವ ಯಾವ ಕೈಗಾರಿಕೆಗಳು ಬಂದರೆ ಒಳ್ಳೆಯದು ಎಂದು ಚರ್ಚೆ ನಡೆಯುತ್ತಿತ್ತು. ಹಾಗಾಗಿ, ಟಾರಿಫ್ ಕಮಿಷನ್ ನವರು ಈ ಕುರಿತು ಗಮನಹರಿಸಿದರು. ಅಲ್ಲದೇ, ಮತ್ತೊಂದು ಯೋಚನೆ ಎಂದರೆ.. ಅಕಸ್ಮಾತ್ ಭಾರತ ಮತ್ತೆ ಯಾವುದಾದರೂ ಯುದ್ಧದಲ್ಲಿ ಭಾಗವಹಿಸಬೇಕಾದರೆ ಅಥವಾ ದೊಡ್ಡಮಟ್ಟದ ಸಾಗಾಣಿಕೆಯನ್ನೇನಾದರೂ ಮಾಡಬೇಕಾಗಿದ್ದರೆ.. ದೊಡ್ಡ ದೊಡ್ಡ ಟ್ರಕ್ ಗಳು ಹಾಗೂ ಸಾಗಾಣಿಕಾ ವಾಹನಗಳು ಬಹಳ ಅವಶ್ಯವಿದ್ದವು. ಇದಕ್ಕಾಗಿ ಯಾವಾಗಲೂ ಬೇರೆಯ ದೇಶದವರನ್ನು ಅವಲಂಬಿಸಲು ಆಗುತ್ತಿರಲಿಲ್ಲ. ಹಾಗಾಗಿ, ಭಾರತದಲ್ಲಿಯೇ ಟೈರ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಶುರು ಮಾಡಲು ಯೋಚಿಸಿದರು. ಆಗ ಅದಾಗಲೇ ಮುಂಚೂಣಿಯಲಿದ್ದ ಕೆಲವು ಉದ್ಯಮಿಗಳಿಗೆ ಸರ್ಕಾರದ ವತಿಯಿಂದ ಸಹಾಯ ಸಿಕ್ಕಿತು. ಆಗ ರೂಪುಗೊಂಡದ್ದು ನಾಲ್ಕು ಕಂಪನಿಗಳು. ಅವುಗಳೇ ಎಂ.ಆರ್.ಎಫ್, ಪ್ರೀಮಿಯರ್, ಇನ್-ಚೆಕ್ ಹಾಗೂ ನ್ಯಾಷನಲ್.


ಈ ಕಂಪನಿಗೆ ಹೂಡಿಕೆ ಮಾಡಲು ಹೆಚ್ಚಿನ ಹಣವಿಲ್ಲದಿದ್ದಾಗ ಇವರು ಉಪಯೋಗಿಸಿದ ತಂತ್ರವೇ ಐ.ಪಿ.ಓ ಎಂದರೆ ಇನಿಷಿಯಲ್ ಪಬ್ಲಿಕ್ ಆಫರಿಂಗ್. ಮದ್ರಾಸ್ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಇವರು ಈ ತಂತ್ರವನ್ನು ಬಳಸಿದರು. ಹಾಗೆಂದರೆ, ಸಾರ್ವಜನಿಕರು ಸಹಾ ಈ ಕಂಪನಿಯ ಶೇರುಗಳಲ್ಲಿ ಹೂಡಿಕೆ ಮಾಡಬಹುದಾಗಿತ್ತು.


1961 ರಲ್ಲಿ ಎಂ.ಆರ್.ಎಫ್ ತನ್ನ ಅಧಿಕೃತವಾದ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ಅನ್ನು ಮದ್ರಾಸ್ ನಲ್ಲಿ ಶುರು ಮಾಡಿತು. ಆಗ ಅಲ್ಲಿನ ಮುಖ್ಯಮಂತ್ರಿಗಳಾಗಿದ್ದ ಲೇಟ್ ಕಾಮರಾಜ್ ಅವರು ಮೊದಲ ಟೈರ್ ಅನ್ನು ಬಿಡುಗಡೆಗೊಳಿಸಿದರು. ಈ ಟೈರ್ ಉತ್ಪಾದನಾ ಘಟಕಕ್ಕಾಗಿ ತಮ್ಮ ಬಳಿ ಟೆಕ್ನಾಲಜಿ ಇಲ್ಲದ ಕಾರಣಕ್ಕಾಗಿ ಎಂ.ಆರ್.ಎಫ್ ನವರು ಅಮೆರಿಕಾದ ಓಹಿಯೋದ ಮೆನ್ಸ್ ಫೀಲ್ಡ್ ಟೈರ್ ಅಂಡ್ ರಬ್ಬರ್ ಕಂಪನಿಯನ್ನು ತಮ್ಮ ಜೊತೆ ಟೆಕ್ನಾಲಜಿ ಪಾರ್ಟ್ನರ್ ಆಗಿ ಮಾಡಿಕೊಂಡರು.ಆದರೆ, ಆಗ ತಿಳಿಯದ ಸಮಸ್ಯೆ ಮುಂದಿನ ದಿನಗಳಲ್ಲಿ ಕಂಡುಬಂದಿತು. ಭಾರತದ ರಸ್ತೆಗಳು ಈ ಟೆಕ್ನಾಲಜಿಯ ಟೈರ್ ಗಳನ್ನು ಬಳಸಲು ಬಹಳವೇ ಕಷ್ಟವಿತ್ತು. ಹಾಗಾಗಿ, ಇದಕ್ಕೆ ಪರಿಹಾರ ಕಂಡುಹಿಡಿಯಲೇ ಬೇಕು ಎನ್ನುವಾಗಲೇ ಮತ್ತೊಂದು ಪುಕಾರು ಎದ್ದಿತು. 


ವಿದೇಶಿ ಕಂಪನಿಗಳು ಈಗಾಗಲೇ ಒಂದು ಸುದ್ದಿಯನ್ನು ಹರಡಿದ್ದವು ಯಾವುದೇ ಭಾರತೀಯ ಕಂಪನಿಗಳು ಸಹ ಟೈರ್ ಮ್ಯಾನುಫ್ಯಾಕ್ಚರ್ ಮಾಡಲು ಸಾಧ್ಯವೇ ಇಲ್ಲ. ಅದೇನಿದ್ದರೂ.. ನಮ್ಮ ಸ್ವತ್ತು ಮಾತ್ರ ಎಂಬುದಾಗಿ. ಇದಕ್ಕೆ ಮೂಲ ಕಾರಣವಾಗಿದ್ದು ಮೂರು ಕಂಪನಿಗಳು. ಅವೇ ಡನ್ಲಪ್ ,ಫೈರ್ ಸ್ಟೋನ್ ಹಾಗೂ ಗುಡ್ ಇಯರ್. ಇದುವರೆಗೂ ಭಾರತದಲ್ಲಿ, ಯಾವುದೇ ವಾಹನಗಳಿಗೆ ಟೈರ್ ಬೇಕಾಗಿದ್ದರೆ..ಅದಕ್ಕೆ ಮೊದಲು ಸಂಪರ್ಕಿಸುತ್ತಿದ್ದದ್ದೇ ಡನ್ಲಪ್ ಅನ್ನು. ಈ ಮೂರು ಕಂಪನಿಗಳಲ್ಲಿ ಒಳ ಒಪ್ಪಂದವಿತ್ತು. ಟೈರ್ ಬೆಲೆಗಳು ಹಾಗೂ ಎಷ್ಟು ಟೈರ್ ಪ್ರೊಡಕ್ಷನ್ ಆಗಬೇಕು ಹಾಗೂ ಇದರ ಸಪ್ಲೈ ಮಾಡುವವರು ಇವೆಲ್ಲವನ್ನು ಅವು ಹಂಚಿಕೊಂಡಿದ್ದವು. ಹಾಗಾಗಿ, ಅಲ್ಲಿ ಪ್ರತಿಸ್ಪರ್ಧಿಗಳಿಲ್ಲದಿದ್ದಾಗ ಹೊಸ ಪ್ರತಿಸ್ಪರ್ಧಿ ಹುಟ್ಟಿಕೊಂಡಿದ್ದು ಅವುಗಳಿಗೆ ನುಂಗಲಾರದ ತುತ್ತಾಗಿತ್ತು .


1963 ರಲ್ಲಿ ನೆಹರು ರಬ್ಬರ್ ರಿಸರ್ಚ್ ಸೆಂಟರ್ ಗೆ ತಿರುವೊಟ್ಟಿಯೂರ್ ನಲ್ಲಿ ಚಾಲನೆ ಕೊಟ್ಟರು. ಅದಾದ ನಂತರ ಎಂ.ಆರ್.ಎಫ್ ನ ಸಮಸ್ಯೆಗೆ ಪರಿಹಾರ ಸಿಕ್ಕಿತ. ಇದಾದ ನಂತರ ಎಂ.ಆರ್.ಎಫ್ ಹಾದಿ ಸುಗಮವಾಯಿತು. 1964 ರಲ್ಲಿ ಇದು ವಿದೇಶಗಳಿಗೂ ಟೈರ್ ಗಳನ್ನು ರಫ್ತು ಮಾಡಲು ಶುರು ಮಾಡಿತು. ಟೈರ್ ಟೆಕ್ನಾಲಜಿ ಯ ಜನ್ಮಸ್ಥಳ ಎಂದೇ ಖ್ಯಾತವಾಗಿದ್ದ ಅಮೆರಿಕಾಗೂ 1967 ರಲ್ಲಿ ಟೈರು ರಫ್ತು ಮಾಡಿತು. ಅಮೆರಿಕಾಗೆ ಟೈರ್ ಗಳನ್ನು ರಫ್ತು ಮಾಡಿದ ಮೊದಲ ಭಾರತೀಯ ಕಂಪನಿ ಇದು ಎಂಬ ಹೆಗ್ಗಳಿಕೆ ಇದರದ್ದು. ಅದುವರೆಗೂ ಎಂ.ಆರ್.ಎಫ್ ಟೈರ್ ಗಳನ್ನು ಕೇವಲ ಹಾಳಾದ ಟೈರ್ ರಿಪ್ಲೇಸ್ಮೆಂಟ್ ಗಾಗಿ ಬಳಸುತ್ತಿದ್ದರು. ನಂತರ, ವಾಹನಗಳ ಮೊದಲ ಬಾರಿಯ ಒರಿಜಿನಲ್ ಟೈರು ಅಳವಡಿಕೆಯಲ್ಲಿಯೇ ಬಳಸಲು ಶುರು ಮಾಡಿದರು. 1989 ರಲ್ಲಿ ಎಂ.ಆರ್.ಎಫ್ ಟೈಯರ್ಡೋನ್ ಎನ್ನುವ ಮೊದಲ ವೀಲ್ ಕೇರ್ ಕಾಂಪ್ಲೆಕ್ಸ್ ಅನ್ನು ಚೆನ್ನೈಯಲ್ಲಿ ಸ್ಥಾಪಿಸಿತು.


2006ರಲ್ಲಿ ಭಾರತದ ಅತ್ಯಂತ ನಂಬಿಕೆಯ ಟೈರ್ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಜೆಡಿ ಪವರ್ ಏಷ್ಯಾ ಪೆಸಿಫಿಕ್ ಕೊಡುವ ಕಸ್ಟಮರ್ ಸಾಟಿಸ್ಫ್ಯಾಕ್ಷನ್ ಅವಾರ್ಡ್ ಗೆ ಒಂದಲ್ಲ ಎರಡಲ್ಲ ಹತ್ತು ಬಾರಿ ಪಾತ್ರವಾಗಿದೆ. 1993ರಲ್ಲಿ ಮಾಮೆನ್ ಮಾಪಿಲ್ಲೈ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಒಲಿದು ಬಂತು. ದಕ್ಷಿಣ ಭಾರತದಲ್ಲಿ ಅದುವರೆಗೂ ಯಾವ ಉದ್ಯಮಿಗೂ ಸಹಾ ಪದ್ಮಶ್ರೀ ಕೊಟ್ಟಿರಲಿಲ್ಲ. ದಕ್ಷಿಣ ಭಾರತದಲ್ಲಿಯೇ ಪದ್ಮಶ್ರೀ ಪಡೆದ ಮೊದಲ ಉದ್ಯಮಿ ಇವರು. ಹೀಗೆಯೇ ಹಲವಾರು ಪ್ರಶಸ್ತಿಗಳು ಅರಸಿ ಬಂದವು. 


ಯಾವುದೇ ಬ್ಯುಸಿನೆಸ್‌ನಲ್ಲಿಯೂ ಅಡ್ವರ್ಟೈಸ್ಮೆಂಟ್ ಅಂದರೆ ಜಾಹೀರಾತು ಎನ್ನುವ ಅಂಶ ಬಹಳ ಮುಂಚೂಣಿಯಲ್ಲಿ ನಿಲ್ಲುತ್ತದೆ. ಒಂದು ಪ್ರಾಡಕ್ಟ್ ಎಷ್ಟೇ ಪ್ರಸಿದ್ಧಿಯಾದರೂ ಜನ ಅದನ್ನು ಜಾಹೀರಾತಿನಲ್ಲಿ ಕಂಡರೆ ಅದನ್ನು ಸುಲಭಕ್ಕೆ ಮರೆಯುವುದಿಲ್ಲ. ಆದರೆ, ಎಂ.ಆರ್.ಎಫ್ ಜಾಹೀರಾತಿನ ಹಿಂದೆ ಹೋಗಲಿಲ್ಲ. ಆದರೆ, ಜಾಹೀರಾತು ತಂಡದವರೇ ಎಂ.ಆರ್.ಎಫ್ ಗಾಗಿ ಜಾಹೀರಾತು ತಯಾರಿಸಿದರು.  ಆ ಕಾಲಕ್ಕೆ ಅಡ್ವಟೈಸ್ಮೆಂಟ್ ಗೇಮ್ ಚೇಂಜರ್ ಎಂದೆ ಹೆಸರಾಗಿದ್ದ 'ಆಲಿಕ್ಯು ಪದಂಸಿ' ಎನ್ನುವಾತ ಜಾಹೀರಾತಿನ ಕ್ವಾಲಿಟಿ ಜೊತೆಗೆ ಒಳ್ಳೊಳ್ಳೆಯ ಪ್ರಾಡಕ್ಟ್ ಗಳನ್ನು ಮಾತ್ರವೇ ಜಾಹೀರಾತು ನೀಡಬೇಕು ಎಂದುಕೊಂಡಿದ್ದ. ಟ್ರಕ್ ಹಾಗೂ ಇನ್ನಿತರ ವಾಹನಗಳ ಸವಾರರ ಬಳಿ ವಿಚಾರಿಸಿದಾಗ ಅವರು ಹೇಳಿದ ತಮ್ಮ ನಂಬಿಕೆಯ ಬ್ರಾಂಡ್ ಎಂ.ಆರ್.ಎಫ್. ಅದಕ್ಕಾಗಿಯೇ ಒಂದು ವಿಶಿಷ್ಟ ಜಾಹೀರಾತು ತಯಾರಾಯಿತು. ಅದೇ ಎಂ.ಆರ್.ಎಫ್ ಮಜಲ್ ಮ್ಯಾನ್. ಎಂ.ಆರ್.ಎಫ್ ಟೈರ್ ಅನ್ನು ಹೊತ್ತು ನಿಂತಿರುವ ಒಬ್ಬ ಜಟ್ಟಿಯ ಹಾಗಿದ್ದ ಮನುಷ್ಯ. 


ಎಂ.ಆರ್.‌ಎಫ್‌ ನ ಅಡ್ವರ್ಟೈಸ್ಮೆಂಟ್ ಇಲ್ಲಿಗೇ ನಿಲ್ಲಲಿಲ್ಲ. ಕ್ರಿಕೆಟ್ ಹಾಗೂ ಕುಸ್ತಿ ಕ್ಷೇತ್ರಗಳಲ್ಲಿ ಸ್ಪಾನ್ಸರ್ ಮಾಡುವ ಮೂಲಕ ಕಾಣಿಸಿಕೊಂಡರು. ಎಷ್ಟೋ ಕ್ರಿಕೆಟ್ ಬ್ಯಾಟ್ ಗಳ ಮೇಲೆ ನಾವು ಎಂ.ಆರ್.ಎಫ್ ಎನ್ನುವ ಹೆಸರು ನೋಡಿರುತ್ತೇವೆ. ಹಾಗೆಂದು ಇವರು ಕ್ರಿಕೆಟ್ ಬ್ಯಾಟ್ ತಯಾರಕರಲ್ಲ. ಬದಲಿಗೆ ತಮ್ಮ ಲೋಗೋವನ್ನು ಅದರ ಮೇಲೆ ಮುದ್ರಿಸಿರುವವರು ಅಷ್ಟೇ. ಏಕೆಂದರೆ, ಯುವಜನತೆಗೆ ಹೆಚ್ಚು ಸೆಳೆಯುವುದೇ ಕ್ರಿಕೆಟ್.ಈ ಕ್ರೇಜ್ ನಿಂದ ಮೊದಲಿಗೆ ಎಂ.ಆರ್.ಎಫ್ ಎಂದು ಬರೆದಿರುವ ಕ್ರಿಕೆಟ್ ಬ್ಯಾಟ್ ಅನ್ನು ಕೊಳ್ಳುತ್ತಿದ್ದವರು ಮುಂದೆ ಎಂ.ಆರ್‌.ಎಫ್ ನಿರ್ಮಿಸುವ ಎಲ್ಲಾ ಪ್ರಾಡಕ್ಟ್ ಗಳನ್ನು ಕೊಳ್ಳುತ್ತಾರೆ ಎನ್ನುವ ದೂರಾಲೋಚನೆ ಅವರದ್ದು. ಹೀಗೆ 39 ದೇಶಗಳು ಪಾಲ್ಗೊಳ್ಳುವ ಕುಸ್ತಿಯಲ್ಲಿಯೂ ಸ್ಪಾನ್ಸರ್ ಮಾಡಿದರು.


ಇವರು ದೇಶವಿಡೀ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಹಳ್ಳಿ ಹಳ್ಳಿಗೂ, ದೇಶದ ಮೂಲೆಮೂಲೆಗೂ ಹೋಗಿ ಅಲ್ಲಿನ ಸಣ್ಣ ಪುಟ್ಟ ಡೀಲರ್ಸ್ ಗಳಿಗೂ ಈ ಕುರಿತು ಹೇಳಿದರು. 


1990ರಲ್ಲಿ ರೇಸಿಂಗ್ ಗಾಗಿ ಎಫ್-3 ರೇಸಿಂಗ್ ಕಾರ್ ಗಳನ್ನು ಮ್ಯಾನುಫ್ಯಾಕ್ಚರ್ ಮಾಡಿದರು. ನಂತರ, ಇದು ಕ್ಲಿಕ್ ಆಗದ ಕಾರಣ ಆ ಕಾರುಗಳ ಮ್ಯಾನುಫ್ಯಾಕ್ಚರನ್ನು ನಿಲ್ಲಿಸಿದರು. ಬ್ಯುಸಿನೆಸ್ ನಲ್ಲಿ ಯಾವುದನ್ನು ಮುಂದುವರಿಸಬೇಕು ಹಾಗೂ ಯಾವುದನ್ನು ನಿಲ್ಲಿಸಬೇಕು ಎನ್ನುವುದರ ಅರಿವು ಸಹಾ ಅತ್ಯವಶ್ಯಕ. 


2003ರಲ್ಲಿ ಮಾಮನ್ ಮಾಪಿಲೈ ಅವರು ತೀರಿಕೊಂಡರು. ಆದರೆ, ಅವರ ಬ್ಯುಸಿನೆಸ್ ತಂತ್ರಗಳಿಂದ ಎಂ.ಆರ್.ಎಫ್ ಇಂದಿಗೂ ಭಾರತದ ನಂಬರ್ ಒನ್ ಬ್ರಾಂಡ್ ನಲ್ಲಿ ಅಚ್ಚಳಿಯದೆ ನಿಂತಿದೆ. 


ಇಂತಹದ್ದೇ ಗುರಿ ಎನ್ನುವ ಗುರಿ ಇಟ್ಟು ನಡೆಯುವವರಿಗಿಂತ ವಿಭಿನ್ನ ಸಾಲಿನಲ್ಲಿ ನಿಲ್ಲುತ್ತಾರೆ ಮಾಮೆನ್. ಆಸ್ತಿ, ಹಣ ಎಲ್ಲವನ್ನೂ ಕಳೆದುಕೊಂಡಿದ್ದಾಗ ಅವರು ನಂಬಿಕೆ ಇಟ್ಟದ್ದು ಕೇವಲ ಶ್ರದ್ಧೆ ಹಾಗೂ ಮುಂದೆ ತನ್ನದೇ ಬ್ಯುಸಿನೆಸ್ ಸ್ಥಾಪಿಸುತ್ತೇನೆ ಎನ್ನುವ ಆಶಾವಾದದಲ್ಲಿ. ತಾವೇ ಜಾಹೀರಾತು ಅಥವಾ ಹಣದ ಹಿಂದೆ ಹೋಗಲಿಲ್ಲ. ಅವರನ್ನು ಜಾಹೀರಾತು ಹಣ ಅಷ್ಟೇ ಅಲ್ಲದೆ ಪ್ರಶಸ್ತಿಗಳು, ಹೆಸರು ಎಲ್ಲವೂ ಹುಡುಕಿ ಬಂದವು. ಯುವ ಜನತೆಯನ್ನು ಸೆಳೆಯುವತ್ತ .. ಬ್ರ್ಯಾಂಡ್ ಸೃಷ್ಟಿ ಮಾಡುವತ್ತ ಮಾತ್ರ ಗಮನ ಹರಿಸಿ, ಯಾವ ಪುಕಾರುಗಳಿಗೂ ಜಗ್ಗದೆಯೇ ಮುನ್ನಡೆಯುತ್ತಾ.. ಭವಿಷ್ಯದಲ್ಲಿ ತಮ್ಮ ಹೆಸರನ್ನು ಮೂಡಿಸುವ ಒಂದು ಬ್ಯುಸಿನೆಸ್ ಬ್ರ್ಯಾಂಡ್ ಗೆ, ಹಣಕ್ಕೆ ತಕ್ಕ ಸೇವೆ ನೀಡುವ, ಸಾಮಾನ್ಯರಿಗೂ ಕೈಗೆಟುಕುವ ರೀತಿಯಲ್ಲಿ ತನ್ನದೇ ಬ್ಯುಸಿನೆಸ್ ನ ಪಾಠ ಹೇಳುತ್ತದೆ ಎಂ.ಆರ್.ಎಫ್.


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ