ಪುಸ್ತಕದ ಶೀರ್ಷಿಕೆ : ಶರಪಂಜರ
ಲೇಖಕರು : ತ್ರಿವೇಣಿ
ಪ್ರಕಾಶಕರು : ರವಿ ಪಬ್ಲಿಕೇಶನ್ಸ್
ಮರು ಮುದ್ರಣ : 2011
ಪುಟಗಳು : 214
ಬೆಲೆ : 110 ರೂ.
ಮನೋವೈಜ್ಞಾನಿಕ ಕಾದಂಬರಿಗಳ ಪಟ್ಟಿಯಲ್ಲಿ ಇಂದಿಗೂ ಮೊಟ್ಟ ಮೊದಲು ನೆನಪಾಗುವುದೆಂದರೆ ಲೇಖಕಿ ತ್ರಿವೇಣಿಯವರ ಅತ್ಯಂತ ಪ್ರಸಿದ್ಧ ಕಾದಂಬರಿ ಶರಪಂಜರ ಶರಪಂಜರ ಕಾದಂಬರಿಯನ್ನು ಓದುವ ಮೊದಲೇ ನಾನು ಸಿನಿಮಾ ನೋಡಿದ್ದರಿಂದ ಕಾದಂಬರಿ ಓದುವಾಗಲೂ ಕಾವೇರಿಯ ಪಾತ್ರದಲ್ಲಿ ನನ್ನ ಕಲ್ಪನೆಯಲ್ಲಿ ಇದ್ದಿದ್ದು ಮಿನುಗುತಾರೆ ಕಲ್ಪನಾರೇ.. ಇದು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನ ಹಾಗೂ ಕಲ್ಪನಾರ ನಟನಾಶಕ್ತಿ ಎಂದರೂ ತಪ್ಪಾಗಲಾರದು. ಆದರೆ, ಆ ನಟನೆ ಹಾಗೂ ಚಿತ್ರಕಥೆಯಷ್ಟೇ ಕಾದಂಬರಿ ಕೂಡ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ಅಲ್ಲದೇ, ಈ ಕಾದಂಬರಿ ಓದಿ ಮುಗಿಸಿದಾಗ ದಟ್ಟವಾದ ವಿಷಾದ ಛಾಯೆಯ ಜೊತೆಯಲ್ಲಿ ಆಲೋಚನೆಗೆ ಹಚ್ಚುವಂತಹಾ ವಿಚಾರಗಳು ಮನಸ್ಸಿನಲ್ಲಿ ಓಡುತ್ತಲೇ ಇರುತ್ತವೆ. ಈ ಕಾದಂಬರಿಯನ್ನು ಓದಿದ ನಂತರ ಈ ಕಾದಂಬರಿಯ ಗುಂಗು ಕಾಡುತ್ತದೆ. ಈ ಪುಸ್ತಕವನ್ನು ಓದಿದ ನಂತರ ಒಂದೆರಡು ದಿನ ನಾನು ಯಾವ ಪುಸ್ತಕವನ್ನು ಓದಲಾಗಿರಲಿಲ್ಲ. ಕಾವೇರಿಯ ಮನಸ್ಥಿತಿ ಅಷ್ಟು ಕಲಕುವುದು ಆಕೆಯನ್ನು ಲೇಖಕಿ ಕಟ್ಟಿಕೊಟ್ಟಿರುವ ಬಗೆಯಿಂದ ಎಂದರೆ ತಪ್ಪಾಗಲಾರದು.
ಕಾದಂಬರಿ ಶುರುವಾಗುವುದು ಕಾವೇರಿ ತನ್ನ ಆಸ್ಪತ್ರೆಯ ವಾಸ ಮುಗಿಸಿ ಮತ್ತೆ ಮನೆಗೆ ಬರುವಾಗ. ಕಾವೇರಿಯ ಮನಸ್ಸಿನ ಭಾವಗಳು ಮೊದಲಿನಂತೆಯೇ ಓಡುತ್ತಿದ್ದವು. ಗಂಡ ತನ್ನ ಕಡೆ ಗಮನಹರಿಸಲಿ.. ತನ್ನ ಜೊತೆ ಮಾತನಾಡಲಿ, ಅಲಂಕಾರವನ್ನು ಗಮನಿಸಲಿ ಎನ್ನುತ್ತಾ ಸಹಜ ಆಸೆಗಳಿಂದ ಅಪೇಕ್ಷಿಸುತ್ತಿದ್ದರೆ ಅದಕ್ಕೆ ಪತಿ ಸತೀಶನ ಪ್ರತಿಕ್ರಿಯೆಗಳು ಮಾತ್ರ ವ್ಯತಿರಿಕ್ತವಾಗಿಯೇ ಕಾಣುತ್ತಿದ್ದವು. ಕಾವೇರಿ ಸಹಜ ಸುಂದರಿ. ಅಲ್ಲದೇ ಅಲಂಕಾರ ಅವಳ ಸೌಂದರ್ಯವನ್ನು ಮತ್ತಷ್ಟು ಮೆರಗುಗೊಳಿಸಿತ್ತು. ಮೊದಲಿನಿಂದಲೂ ಆಕೆ ತನ್ನ ಸೌಂದರ್ಯ ಪ್ರಜ್ಞೆಯಿಂದ ಆತನನ್ನು ಸೆಳೆಯುತ್ತಿದ್ದಳು. ಈಗಲೂ ಅದೇ ಅಪೇಕ್ಷೆ ಹಾಗೂ ಮನಸ್ಸು ಅದೇ ಪ್ರೀತಿಯನ್ನು ಬಯಸುವುದು ತಪ್ಪಲ್ಲವಾದರೂ.. ಹೃದಯದಲ್ಲಿದ್ದ ಭಾವನೆಗಳು ಕರಗಲು ಸತೀಶನ ನಿರ್ಲಿಪ್ತ ಮನಸ್ಸು ಹಾಗೂ ಅನ್ಯ ಮನಸ್ಕತೆಯೇ ಸಾಕಿತ್ತು.
ಕಾವೇರಿ ಎಷ್ಟು ಸೂಕ್ಷ್ಮತೆಯಿಂದ ಪ್ರತಿಯೊಂದನ್ನೂ ಗಮನಿಸುತ್ತಿದ್ದಳು ಎಂದರೆ.. ಬದುಕಿನ ಬಗ್ಗೆ ಇದ್ದ ಆಸಕ್ತಿಯೂ ಅಷ್ಟೇ ಸೂಕ್ಷ್ಮವಾಗಿತ್ತು. ಆಕೆಯ ಆಸಕ್ತಿಯ ಆಳವೇ ವಿಭಿನ್ನ. ಪ್ರತಿಯೊಂದೂ ಉತ್ತಮವಾದದ್ದೇ ಬೇಕಿತ್ತು. ತನ್ನ ಮನೆ 'ಚಂದ್ರಹಾಸ'ವನ್ನು ಅವಳು ರೂಪಿಸಿದ್ದ ರೀತಿಯೇ ಹಾಗಿತ್ತು. ಸತೀಶ ಹಾಗೂ ಕಾವೇರಿಯ ದಾಂಪತ್ಯವೂ ಅರ್ಥೈಸಿಕೊಳ್ಳುವಿಕೆಯ ಮೇಲೆ ಅಷ್ಟು ಚೆಂದವಾಗಿ ನಿಂತಿತ್ತು. ಜೊತೆಗೆ ಅಶೋಕ ಹುಟ್ಟಿದ ಮೇಲಂತೂ ಅವರ ಬದುಕಿನಲ್ಲಿ ತಗ್ಗದ ಉತ್ಸಾಹ. ಅತ್ತೆ ಸುಂದರಮ್ಮನವರ ವಿಚಾರದಲ್ಲಿಯೂ ಕಾವೇರಿ ಅತ್ಯಂತ ಆಸಕ್ತಿ ವಹಿಸಿದ್ದಳು. ಆಕೆಗೂ ಸೊಸೆಯ ಮೇಲೆ ಅಷ್ಟೇ ಮಮತೆ.
ಪ್ರೀತಿಸುವ ಚೆಲುವಾದ ಪತಿ, ಮುದ್ದಾದ ಮಕ್ಕಳು, ನಡೆದರೆ ಸವೆದಾಳೆಂದು ನೋಡಿಕೊಳ್ಳುತ್ತಿದ್ದ ಅತ್ತೆ, ಅಕ್ಕರೆಯಿಂದ ಕಾಣುತ್ತಿದ್ದ ತಂದೆ-ತಾಯಿ, ಬಂಧು-ಬಳಗ, ಶ್ರೀಮಂತ ಜೀವನ, ವಿದ್ಯೆ, ರೂಪ ಹೀಗೆ ಕೊರತೆಯೇ ಇಲ್ಲದ ಬದುಕು ಅವಳದ್ದು.
ಹೀಗಿದ್ದ ಬದುಕು ಎರಡು ವರ್ಷಗಳ ಹಿಂದೆ ತಲೆಕೆಳಗಾಗಿ ಹೋಗಿತ್ತು. ಎರಡು ಮನೆತನಗಳಲ್ಲಿಯೂ ತಲೆತಲಾಂತರಗಳಿಂದ ಇಲ್ಲದ, ಕಂಡು-ಕೇಳಿರದ ರೋಗ ಕಾವೇರಿಯನ್ನು ಆಕ್ರಮಿಸಿತ್ತು. ಅಶೋಕ ಪುಟ್ಟ ಮಗುವಾದರೆ.. ಅರವಿಂದ ಇನ್ನೂ ಕೈಗೂಸು. ಕಾವೇರಿ ಆ ಇಬ್ಬರು ಮಕ್ಕಳನ್ನು ಬಿಟ್ಟು ಆಸ್ಪತ್ರೆಗೆ ನಡೆಯಬೇಕಾಗಿ ಬಂದದ್ದು ದುರಂತ.
ಈಗ ಆ ದುರಂತವೆಲ್ಲಾ ಮರೆಯಾಗಿ ಹೊಸಬಾಳು ಪ್ರಾರಂಭಿಸಬೇಕಾಗಿತ್ತು ಕಾವೇರಿ. ಬದುಕನ್ನು ನಿತ್ಯನೂತನವನ್ನಾಗಿಸುತ್ತಿದ್ದ ಅವಳ ಆಸಕ್ತಿ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ. ಈಗ ಅವಳು ಮತ್ತದೇ ಉತ್ಸಾಹದಿಂದ ಹೊಸ ಬದುಕು ಆರಂಭಿಸಲು ಹೊರಟಿದ್ದಳು.
ಸತೀಶ ಒಬ್ಬನೇ ಮಗನಾದ್ದರಿಂದ ಎಲ್ಲ ರೀತಿಯಿಂದಲೂ ಅನುರೂಪನಾದ ಸೊಸೆಯನ್ನು ತರಬೇಕೆಂದು ಸುಂದರಮ್ಮ ಹಂಬಲಿಸುತ್ತಿದ್ದರು. ವಿದ್ಯೆ, ರೂಪ, ಶ್ರೀಮಂತಿಕೆ ಯಾವುದರಲ್ಲಿಯೂ ಆತನನ್ನು ತೆಗೆದುಹಾಕುವಂತಿರಲಿಲ್ಲ. ಗೆಳೆಯನೊಬ್ಬನ ಮದುವೆಯಲ್ಲಿ ಭಾಗವಹಿಸುವ ಸಲುವಾಗಿ ಸತೀಶ ಮಡಿಕೇರಿಗೆ ಹೋಗಿದ್ದಾಗ ಅಲ್ಲಿ ಆತನ ಪ್ರೇಮಯುತ ದೃಷ್ಟಿ ಬಿದ್ದದು ಕಾವೇರಿಯ ಮೇಲೆ. ನಂತರ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕು ಮದುವೆಯು ಸುಸೂತ್ರವಾಗಿ ಸಾಗಿತ್ತು. ಕಾವೇರಿಯ ವಿಚಾರದಲ್ಲಿ ಕೆಲವೊಂದು ಒಡಕು ಮಾತು ಬಂದಿದ್ದರೂ ಸತೀಶ ಅದನ್ನು ನಿರ್ಲಕ್ಷಿಸಿದ್ದ.
ಪ್ರೇಮಮಯ ಬದುಕಿನಲ್ಲಿ ಅಶೋಕನ ನಂತರ ಹೆಣ್ಣುಮಗು ಬೇಕೆಂದು ಹಂಬಲಿಸಿದ್ದ ಕಾವೇರಿಗೆ ಅರವಿಂದ ಹುಟ್ಟಿದ್ದ. ಆದರೆ, ನಂತರ ಆಕೆಯ ಮನಸ್ಸು ಸೂಕ್ಷ್ಮ ಸ್ಥಿತಿಗೆ ತಲುಪಿ ಆಸ್ಪತ್ರೆ ಸೇರುವಂತಾಗಿತ್ತು.
ಆಸ್ಪತ್ರೆಯಲ್ಲಿ ಹಳೆ ಕಾವೇರಿ ಸತ್ತು ಹೊಸ ಕಾವೇರಿ ಹುಟ್ಟಿದ್ದರೂ.. ಕಹಿ ನೆನಪುಗಳನ್ನೆಲ್ಲಾ ಮರೆತು ಬಿಡಬೇಕೆಂದು ಆಕೆಯೂ ಅಂದುಕೊಂಡಿದ್ದರೂ ಮನೆಯಲ್ಲಿ ಮೌನ ಸಾಮ್ರಾಜ್ಯ. ಮಕ್ಕಳು ತಾಯಿಯಿಂದ ದೂರವಿದ್ದುದರಿಂದ ತಾಯಿ ಅವರಿಗೆ ಅಪರಿಚಿತಳೇ.. ಮನೆಯ ಯಜಮಾನಿಕೆ ಈಗ ಸತೀಶನ ಅಕ್ಕ ವಿಜಯಮ್ಮನ ಬಳಿ ಇತ್ತು. ಹಾಗೆಂದು, ಆಕೆ ದರ್ಪ ತೋರಿದವರಲ್ಲ ಬದಲಾಗಿ ಕಾವೇರಿಯ ಅನುಪಸ್ಥಿತಿಯಲ್ಲಿ ಮನೆ, ಮಕ್ಕಳು ತಾಯಿಯನ್ನು ನಿಭಾಯಿಸಿದವರು. ಆದರೆ, ಕಾವೇರಿಗೆ ಈ ಎಲ್ಲದರ ಅನುಭವ ಆಕೆಯನ್ನು ತಾನು ನೆಂಟರ ಮನೆಯಲ್ಲಿದ್ದೇನೇನೋ ಎಂಬ ಭಾವ ಹುಟ್ಟುವಂತೆ ಮಾಡಿತ್ತು.
ಸುಂದರಮ್ಮನವರು ಕಾವೇರಿಗೆ ಬದಲು ನುಡಿಯುತ್ತಿರಲಿಲ್ಲವಾದರೂ ಆತಂಕವಂತೂ ಇದ್ದೇ ಇತ್ತು. ಸೊಸೆಯ ಹಿಂದಿನ ಪರಿಸ್ಥಿತಿಯನ್ನು ಸಹಾ ಅವಲೋಕಿಸಿದ್ದವರು ಮತ್ತೆಗೆ ಆಕೆಗೆ ಹೆಚ್ಚಿನ ಕಷ್ಟ ಕೊಡಬಾರದೆಂದುಕೊಂಡಿದ್ದರು. ಮಗನ ಬದುಕು ಮದುವೆಯಾಗಿದ್ದರೂ ಆಗಿಲ್ಲದಂತಿದ್ದುದನ್ನು ಕಂಡು ಬೇಸರದಲ್ಲಿದ್ದರು. ಸತೀಶನಂತೂ ಆಕೆಯ ಕುರಿತು ತಾತ್ಸಾರ ಭಾವ ತಳೆದಿದ್ದ ಆಕೆಯನ್ನು ರೋಗಿಯಂತೆ ಕಂಡವನಿಗೆ ಮತ್ತೆ ಪತ್ನಿಯಂತೆ ಸ್ವೀಕರಿಸಲಾಗಿರಲಿಲ್ಲ. ಮಕ್ಕಳಿಂದ ಪತಿಯಿಂದ ದೂರವಿದ್ದೇನೆ ಎಂದುಕೊಂಡಿದ್ದವಳಿಗೆ ಕೊಂಚವಾದರೂ ಅಮೃತಧಾರೆ ಎರೆದವರು ಆಕೆಯ ತಾಯಿ. ಎಷ್ಟಾದರೂ ತಾಯಿಯ ಮಮತೆ ಮಗಳನ್ನು ಬಿಟ್ಟು ಕೊಡುವುದೇ..?
ಆದರೆ, ತನ್ನದಲ್ಲದ ತಪ್ಪಿನಿಂದ.. ತನ್ನದೇ ಕಾರಣದಿಂದ ತಂಗಿಯ ವಿವಾಹವೂ ನಿಂತಾಗ ಕಾವೇರಿಗೆ ಆದ ಆಘಾತ ಇನ್ನೂ ಹೆಚ್ಚಿನದು. ಎಲ್ಲವನ್ನು ತಾನೇ ಸರಿಪಡಿಸಿಕೊಳ್ಳುತ್ತೇನೆ. ತಾನೇ ಮುಂದಡಿ ಇಡುತ್ತೇನೆ ಎಂದು ಹೊರಟವಳಿಗೆ ಎಲ್ಲಾ ಕಡೆ ಸಿಕ್ಕಿದ್ದು ಸೋಲು. ಜೊತೆಗೆ ಅವಳ ಮಾನಸಿಕ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ ಎಂಬ ಕುಹಕನುಡಿ. ಅಲ್ಲದೇ ಅನುಮಾನಗಳು ಚಂದ್ರಹಾಸದ ಅನಭಿಷಿಕ್ತ ರಾಣಿಯಾಗಿದ್ದವಳು ಈಗ ಯಾರಿಗೂ ಬೇಡವಾಗಿ ಬದುಕುವ ರೀತಿ ಅವಳನ್ನು ಕ್ಷಣಕ್ಷಣಕ್ಕೂ ಕುಗ್ಗಿಸುತ್ತಾ ಹೋಯಿತು. ಅದರಲ್ಲಿಯೂ ಸತೀಶ ಹಾಗೂ ವಿಮಲರ ಸಂಬಂಧ ತಿಳಿದಾಗಲಂತೂ ಹಾಕಿ ಭೂಮಿಗಿಳಿದಳು. ಇದೆಲ್ಲದರ ಪರಿಣಾಮ ಮತ್ತೆ ಕಾವೇರಿ ತಾನೇ ಗೊಣಗುಟ್ಟಿಕೊಂಡದ್ದು. "Veni vedi veci ನಾನು ಬಂದೆ ನಾನು ನೋಡಿದೆ ನಾನು ಗೆದ್ದೆ"
ಲೇಖಕಿ ಹೇಳುತ್ತಾರೆ ಗೆದ್ದವಳು ಮಾತ್ರ ಕಾವೇರಿಯಾಗಿರಲಿಲ್ಲವೆಂದು. ಆದರೆ, ಸುತ್ತಲಿನ ಸಮಾಜವೂ ಗೆಲ್ಲಲಿಲ್ಲ. ಸೋತವರ ಪಟ್ಟಿಯಲ್ಲಿ ಸಮಾಜ, ಕುಟುಂಬ ಹಾಗೂ ಪ್ರತಿಯೊಬ್ಬರೂ ಸೇರುತ್ತಾರೆ.
ಕಾವೇರಿಯ ಕುರಿತು ಕೇಳಿದ್ದ ಒಡಕು ಮಾತುಗಳೇನು..? ಶ್ರೀರಂಗಪಟ್ಟಣದ ಪ್ರಸಂಗ ಕಾವೇರಿಯ ಮನಸ್ಸಿನ ಮೇಲೆ ಬೀರಿದ ಪರಿಣಾಮವೇ ಇದೆಲ್ಲದಕ್ಕೆ ಕಾರಣವೇ..? ಕಾವೇರಿಯ ಬದುಕಿನಲ್ಲಿ ಹಿಂದೆ ಎಂದಾದರು ದುರಂತ ನಡೆದಿತ್ತೇ..? ಆಸ್ಪತ್ರೆಯ ಅವಳ ವಾಸದ ದಿನಗಳು ಹಾಗೂ ವೈದ್ಯರ ಅಭಿಪ್ರಾಯಗಳು ಏನಿದ್ದವು ಎಲ್ಲವನ್ನೂ ತಿಳಿಯಲು ಓದಿ ಶರಪಂಜರ ಕಾದಂಬರಿಯನ್ನು.
ಬದುಕಿನ ಮಹತ್ತರ ಆಸೆಗಳು ಹಾಗೂ ಆಕಾಂಕ್ಷೆಗಳು ನೆರವೇರದಿದ್ದಾಗ ಮನಸ್ಸು ಸೂಕ್ಷ್ಮತೆಯತ್ತ ಜಾರುತ್ತಾ ಹೋಗುತ್ತದೆ ಸೂಕ್ಷ್ಮ ಮನಸ್ಸಿಗೆ ಬೇಕಾದದ್ದು ಆರೈಕೆ. ಒಂದಿಷ್ಟು ಪ್ರೀತಿ. ಅನುಕಂಪ, ಸಹಾನುಭೂತಿಗಳಲ್ಲ. ಬಹುಶಃ ಇಂದಿಗೂ ಈ ವಿಚಾರದಲ್ಲಿ ಸಮಾಜ ಹೆಚ್ಚು ಬದಲಾಗಿಲ್ಲವೆಂದೇ ಅನ್ನಿಸುತ್ತದೆ. ಕಾವೇರಿಯ ಪರಿಸ್ಥಿತಿಯಂತೆ ಮತ್ತಾವ ಹೆಣ್ಣಿಗೂ ಇಂತಹ ಪರಿಸ್ಥಿತಿ ಬಾರದಿರಲಿ ಎಂದೇ ಪ್ರಾರ್ಥಿಸುವೆ. ಸುತ್ತಮುತ್ತಲಿನ ಶರಪಂಜರಕ್ಕೆ ಆಘಾತಗೊಂಡ ಕಾವೇರಿಯ ಕುರಿತು ನೆನೆದಾಗಲೆಲ್ಲ ತಲ್ಲಣ, ಸಂಕಟಗಳೇ.
ಬಹುಶಃ ಚಲನಚಿತ್ರದಲ್ಲಿಯಾದರೂ ಇದು ದುರಂತ ಅಂತ್ಯ ಕಾಣದೆ ಇದ್ದಿದ್ದರಾದರೂ ಸ್ವಲ್ಪವಾದರೂ ಸಮಾಧಾನ ಸಿಗುತ್ತಿತ್ತೇನೋ.. ಮನಕಲಕಿದ ಕಾದಂಬರಿಯ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ