ಬುಧವಾರ, ಏಪ್ರಿಲ್ 22, 2026

ಶುದ್ಧತೆಯ ಜೊತೆಗೆ ಸ್ವಚ್ಛತೆಯ ಹಾರ್ಪಿಕ್ ( ಬ್ಯುಸಿನೆಸ್ ಡೈರಿ ಪುಟ - 17)


ಮನೆಗಳಲ್ಲಿ ಅಥವಾ ಎಲ್ಲಿಯಾದರೂ ಹೋದ ಕಡೆಗಳಲ್ಲಿ ಶೌಚಾಲಯ ಬಳಸುವವರು ಮೊದಲು ಗಮನಿಸುವ ಅಂಶವೆಂದರೆ ಅದರ ಸ್ವಚ್ಛತೆ. ಅದರಲ್ಲೂ ಕೋವಿಡ್-19 ಬಂದ ನಂತರವಂತೂ ಸ್ವಚ್ಛತೆಯ ಆದ್ಯತೆ ಮತ್ತಷ್ಟು ಹೆಚ್ಚಾಗಿದೆ. ಇದರಿಂದಾಗಿ ಇಂದು ಹೈಜಿನ್ ನ ಮಾರ್ಕೆಟ್ ನಲ್ಲಿ ಒಂದು ವರ್ಷಕ್ಕೆ ಸರಾಸರಿ 60 ಕೋಟಿಯಷ್ಟು ವ್ಯವಹಾರ ನಡೆಯುತ್ತಿದೆ. ನಂಬುಗೆಯ ಹೈಜಿನ್ (ನೈರ್ಮಲ್ಯ) ಪ್ರಾಡಕ್ಟ್ ಅಥವಾ ಟಾಯ್ಲೆಟ್ ಕ್ಲೀನರ್ ಎಂಬ ಪದ ಬಂದಾಗ ಅದಕ್ಕೆ ಹೆಚ್ಚಿನವರು ಪರ್ಯಾಯವೆಂಬಂತೆ ಬಳಸುವ ಪದ ಹಾರ್ಪಿಕ್. ಹಾರ್ಪಿಕ್ ಗೆ ಮತ್ತೊಂದು ಪ್ರಬಲಶಾಲಿಯಾದ ಎದುರಾಳಿ ಕೂಡಾ ಇದೆ ಅದೇ ಹಿಂದೂಸ್ತಾನ್ ಯುನಿಲಿವರ್ ಕಂಪನಿಯ ಡೊಮೆಕ್ಸ್. ಅದರ ಕುರಿತು ಮುಂದಿನ ಬಿಜಿನೆಸ್ ಡೈರಿಯಲ್ಲಿ ತಿಳಿದುಕೊಳ್ಳೋಣ. ಇಂದು ನಾನು ಹೇಳಲು ಹೊರಟಿರುವುದು ಹಾರ್ಪಿಕ್ ಬಗ್ಗೆ.


ಇಂದು ಭಾರತದಲ್ಲಿ ನಾಲ್ಕು ಜನರಲ್ಲಿ ಒಬ್ಬರಿಗೆ ಮಾತ್ರ ಶೌಚಾಲಯದ ವ್ಯವಸ್ಥೆಯಿದೆ ಎಂಬುದು ಹೌದಾದರೂ.. ಇತ್ತೀಚಿಗೆ ಹಳ್ಳಿಗಳಲ್ಲಿಯೂ ಶೌಚಾಲಯಗಳ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆಗಳು ಹಾಗೂ ಅಂಗನವಾಡಿಯವರು ಸಹಾ ಇದರ ಅಗತ್ಯತೆಯ ಕುರಿತು ಅರಿವು ಮೂಡಿಸುತ್ತಿದ್ದಾರೆ. ಏಕೆಂದರೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲು ನಮ್ಮ ಮನೆಯ ಒಳಗೆ,ಹೊರಗೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಳ್ಳೆಯದು. ಪರಿಸರದ ಕಾರಣದಿಂದ ದೇಹವನ್ನು ರೋಗ-ರುಜಿನಗಳ ತಾಣವಾಗಿಸಿಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಹೀಗೆ ಸ್ವಚ್ಛತೆ ಎಂದಾಗ ಮೊದಲು ಮನೆಯ ಒಳಗಿನ ಸ್ವಚ್ಛತೆಯ ಅದರಲ್ಲಿಯೂ ಶೌಚಾಲಯಗಳ ಸ್ವಚ್ಛತೆ ಮುಖ್ಯವಾಗುತ್ತದೆ. ಮೊದಲೆಲ್ಲಾ ಫಿನಾಯಿಲ್, ಬ್ಲೀಚಿಂಗ್ ಪೌಡರ್, ಡಿಟರ್ಜೆಂಟ್ ಗಳು, ಆ್ಯಸಿಡ್ ಹೀಗೆ ಹಲವಾರು ಕೆಮಿಕಲ್ ಗಳನ್ನು ಬಳಸಿ ಶೌಚಾಲಯ ಹಾಗೂ ಸ್ನಾನಗೃಹಗಳನ್ನು ಸ್ವಚ್ಛ ಮಾಡುತ್ತಿದ್ದರು. ಆದರೆ, ಈಗ ಕಾಲ ಬದಲಾದಂತೆ ಮನೆಗಳ ವಾತಾವರಣಗಳು ಕೂಡಾ ಬದಲಾಗಿವೆ. ಮನೆಗಳಲ್ಲೆಲ್ಲಾ ಟೈಲ್ಸ್, ಕಮೋಡ್ ಗಳು ಸರ್ವೇಸಾಮಾನ್ಯ ಎಂಬಂತಾಗಿವೆ. ಇವುಗಳನ್ನು ನಾಜೂಕಾಗಿ ಸ್ವಚ್ಛ ಮಾಡುವ ರೀತಿಯೂ ಹೆಚ್ಚಾಗಿದೆ. ಎಲ್ಲಾ ರೀತಿಯ ಸ್ವಚ್ಛತೆಗಳಿಗೂ ಈಗ ಹೆಚ್ಚು ಬಳಸಲ್ಪಡುವ ಹಾರ್ಪಿಕ್ ಗೆ ನೂರು ವರ್ಷಗಳ ಇತಿಹಾಸವಿದೆ ಎಂದರೆ ನೀವು ನಂಬುತ್ತೀರಾ..?? ಹೌದು.. ಹಾರ್ಪಿಕ್ ಶುರುವಾದದ್ದು 1920 ರಲ್ಲಿ. ಇದಕ್ಕೆ ಕಾರಣವಾಗಿದ್ದು ಹ್ಯಾರಿ ಪಿಕ್ ಅಪ್. ಇಂಗ್ಲೀಷ್ ಅಕ್ಷರಗಳ ಕ್ರಮಾನುಸಾರ ಇವರ ಹೆಸರಿನ ಅರ್ಧಭಾಗ ಹಾಗೂ ಸರ್ ನೇಮ್ ನ ಅರ್ಧ ಭಾಗವನ್ನು ಬಳಸಿಕೊಂಡು ಹೆಸರಿಸಿದ್ದು ಹಾರ್ ಪಿಕ್ ಎಂದು.


ಹ್ಯಾರಿ ಪಿಕ್ ಅಪ್ ಹುಟ್ಟಿ ಬೆಳೆದಿದ್ದೆಲ್ಲವೂ ಲಂಡನ್ ನಲ್ಲಿ. ಆತ ಲಂಡನ್ ನಲ್ಲಿ ಹೀಟಿಂಗ್ ಹಾಗೂ ಸ್ಯಾನಿಟರಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆ ಸಮಯದಲ್ಲಿ ಲಂಡನಿನ ನೂರಾರು ಸಾರ್ವಜನಿಕ ಶೌಚಾಲಯ ಹಾಗೂ ಮನೆಗಳಲ್ಲಿನ ಶೌಚಾಲಯಗಳಲ್ಲಿ ಉಂಟಾಗುತ್ತಿದ್ದ ಏಕೈಕ ಸಮಸ್ಯೆ ಎಂದರೆ ಅದರ ಸ್ವಚ್ಛತೆ. ಅದೊಂದು ಬಗೆಹರಿಸಲಾರದ ಸಮಸ್ಯೆಯಂತೆ ಎಲ್ಲರಿಗೂ ಕಾಡಿದ್ದು ಹೌದು. ಏಕೆಂದರೆ, ಅಲ್ಲಿನ ನೀರು ಹಾರ್ಡ್ ವಾಟರ್. ಆ ನೀರನ್ನು ಉಪಯೋಗಿಸಿ ಮಾಮೂಲಿನಂತೆ ಸ್ವಚ್ಛ ಮಾಡಿದರೂ ಟಾಯ್ಲೆಟ್ ನ ಬೌಲ್ ಹಾಗೂ ರಿಮ್ ಗಳಲ್ಲಿ.. ನೀರು ತನ್ನ ನೀರಿನ ಕರೆ ಅಥವಾ ಲೈಮ್ ಸ್ಕೇಲ್ ಅನ್ನು ಉಳಿಸಿಯೇ ಹೋಗುತ್ತಿತ್ತು. ಹೀಗೆ ಉಳಿದು ಹೋಗುತ್ತಿದ್ದ ಲೈಮ್ ಸ್ಕೇಲ್ ಅನ್ನು ತಡೆಯಲು ಮತ್ತೊಂದು ವಿಧಾನವೂ ಇತ್ತು. ಅದೆಂದರೆ, ಹಾರ್ಡ್ ವಾಟರ್ ಅನ್ನು ಸಾಫ್ಟ್ ವಾಟರ್ ಆಗಿ ಬದಲಾಯಿಸುವುದು. ಆದರೆ, ನೀರಿನ ಶುದ್ಧೀಕರಣದ ಕೆಲಸ ಬಹಳಷ್ಟು ಖರ್ಚನ್ನು ಬೇಡುತ್ತಿತ್ತು. ಹಾಗಾಗಿ ಎಲ್ಲೆಡೆಯೂ ಇದೇ ವಿಧಾನವನ್ನು ಅನುಸರಿಸಲು ಕಷ್ಟವಾಯಿತು. 


ಈ ಸಮಸ್ಯೆ ಹೆಚ್ಚುತ್ತಾ ಹೋದಂತೆ ಇದಕ್ಕೆ ಪರಿಹಾರ ಸೂಚಿಸಲೂ ಸಹಾ ಯಾರೂ ಮುಂದಕ್ಕೆ ಬರಲಿಲ್ಲ. ಕೆಲವೊಂದು ಸಮಸ್ಯೆಗೆ ಪರಿಹಾರಗಳು ನಾವಾಗಿಯೇ ಹುಡುಕಿದಾಗ ಸತಾಯಿಸುತ್ತವೆ. ಆದರೆ, ಎಷ್ಟೋ ಅಚಾನಕ್ ಅನ್ವೇಷಣೆಗಳ ಫಲವಾಗಿ ಇಂತಹಾ ಸಮಸ್ಯೆಗಳಿಗೆ ಪರಿಹಾರ ದೊರೆತದ್ದೂ ಇದೆ. ಇಲ್ಲಿನ ಪರಿಹಾರ ಅರ್ಧ ಅಚಾನಕ್ ಪ್ರಯೋಗದಿಂದ ದೊರೆತರೆ, ಇನ್ನರ್ಧ ಸತತ ಪ್ರಯೋಗ, ಪರಿಶ್ರಮದಿಂದ ಸಿಕ್ಕಿದ್ದು. 


1920ರ ಸಮಯದಲ್ಲಿ ಹ್ಯಾರಿಗೆ ಅದೇ ಮೊದಲ ಬಾರಿಗೆ ಒಂದು ಕಾಂಟ್ರಾಕ್ಟ್ ಸಿಕ್ಕಿತ್ತು. ಆಗ ಅದು ಮೊದಲನೇ ವಿಶ್ವಯುದ್ಧದ ಸಮಯ. ಅಲ್ಲಿ  ಯುದ್ದೋಪಕರಣಗಳನ್ನು ತಯಾರಿಸುವ ಕಾರ್ಖಾನೆಗಳಿಂದ ಬಳಕೆಗೆ ವರ್ಜ್ಯವಾದ, ಅನುಪಯುಕ್ತ ಅಂದರೆ ವೇಸ್ಟ್ ಪ್ರಾಡಕ್ಟ್ ಗಳನ್ನು ತೆರವುಗೊಳಿಸಬೇಕಿತ್ತು. ಅದೇ ಕಾಂಟ್ರಾಕ್ಟ್ ಹ್ಯಾರಿಗೆ ದೊರೆತದ್ದು. ಹೀಗೆ ಒಂದು ದಿನ ಆತ ಸೈಟ್ ವಿಸಿಟ್ ಗೆಂದು ಹೋಗಿದ್ದಾಗ ವೇಸ್ಟ್ ಪ್ರಾಡಕ್ಟ್ ನಲ್ಲಿ ಕೂಡ ಕೆಲವು ಸ್ಪೋಟಕದಂತಹಾ ವಸ್ತುಗಳಿದ್ದದ್ದು ಹಾಗೂ ಅವುಗಳು ಇನ್ನೂ ಪ್ರಬಲವಾಗಿದ್ದದ್ದು ಕಂಡು ಬಂದಿತು. 


ಹಾಗೆ ಕಂಡುಬಂದಂತಹ ವಸ್ತುಗಳಲ್ಲಿ ಅವನ ಗಮನ ಸೆಳೆದಂತಹ ವಸ್ತುವೆ ನೈಟ್ರ್ ಕೇಕ್. ಅಂದರೆ ಪೊಟ್ಯಾಶಿಯಂ ನೈಟ್ರೇಟ್. ಗನ್ ಪೌಡರ್ ಗಳಲ್ಲಿ ಈ ವಸ್ತುವನ್ನು ಬಳಸುತ್ತಿದ್ದರು. ಈ ನೈಟ್ರ್ ಕೇಕ್ ಅನ್ನು ನೀರಿನೊಡನೆ ಮಿಶ್ರಣ ಮಾಡಿದಾಗ ಉಂಟಾಗುತ್ತಿದ್ದದ್ದು ಒಂದು ಆ್ಯಸಿಡ್. ಆಗ ಹ್ಯಾರಿ ತನ್ನ ಪ್ರಯೋಗದಲ್ಲಿ ಈ ನೈಟ್ರ್ ಕೇಕ್ ಅನ್ನು ಬಳಸಿ ಹೊಸ ಪ್ರಯೋಗವನ್ನು ಮಾಡಲು ಹೊರಡುತ್ತಾನೆ. ಅದನ್ನು ಕಾಫಿ ಗ್ರೈಂಡಿಂಗ್ ಮೆಷೀನ್ ನಲ್ಲಿ ಪುಡಿ ಮಾಡಿ, ನಂತರ ಅದಕ್ಕೆ ನೀರನ್ನು ಮಿಶ್ರಣ ಮಾಡಿ ಬೇರೆ-ಬೇರೆ ಕೆಮಿಕಲ್ ಗಳನ್ನು ಸಹಾ ಸೇರಿಸುತ್ತಾನೆ. ಹಾಗೆ ಉಂಟಾದ ಹೊಸ ವಸ್ತು ದೊಡ್ಡದೊಂದು ಸಮಸ್ಯೆಗೆ ಪರಿಹಾರ ನೀಡಿತ್ತು. ಅದೇ ಹಾರ್ಪಿಕ್ ಕ್ಲೀನರ್. ಅದು ನೀರಿನಿಂದ ಉಂಟಾಗುತ್ತಿದ್ದ ಲೈಮ್ ಸ್ಕೇಲ್ ಗಳನ್ನು ಕರಗಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿತ್ತು. ಆಗ ಆ ಪ್ರಾಡಕ್ಟ್ ಗೆ ಏನೆಂದು ಹೆಸರಿಡಲಿ ಎಂದು ಯೋಚಿಸುತ್ತಿದ್ದಾಗಲೇ.. ತನ್ನ ಹೆಸರಿನ ಎರಡು ಅರ್ಧಗಳನ್ನು ಕೂಡಿಸಿ 'ಹಾರ್ಪಿಕ್' ಎಂದು ಹೆಸರಿಟ್ಟದ್ದು. ನಂತರ ಅದನ್ನು ತಯಾರಿಸಲು ಒಂದು ಕಂಪನಿಯನ್ನೇ ತೆರೆದ. ಅದೇ ಹಾರ್ಪಿಕ್ ಮ್ಯಾನುಫ್ಯಾಕ್ಚರಿಂಗ್ ಕೊ ಲಿಮಿಟೆಡ್. 


ಆ ಸಂದರ್ಭದಲ್ಲಿ ಜನರಿಗೆ ಇದರ ಮೇಲೆ ವಿಶ್ವಾಸ ಮೂಡಿಸಲು ಇದರ ಜೊತೆಗೆ ಪ್ರಮೋಷನ್ ವಸ್ತುವಾಗಿ ಟಾಯ್ಲೆಟ್ ರೋಲ್ ಅನ್ನು ಸಹಾ ಕೊಡಲಾಗುತ್ತಿತ್ತು. ದಿನೇ ದಿನೇ ಹಾರ್ಪಿಕ್ ಪ್ರಸಿದ್ಧಿ ಹೆಚ್ಚಾಗುತ್ತಿದ್ದಂತೆ ರೆಕ್ಕಿಟ್ ಬೆನ್ಕೈಸರ್ ಗ್ರೂಪ್ ನವರ ಕಣ್ಣು ಇದರ ಮೇಲೆ ಬಿದ್ದಿತ್ತು. ಹ್ಯಾರಿ ಮೂಲತಃ ಬ್ಯುಸಿನೆಸ್ ಮೆನ್ ಅಲ್ಲದ ಕಾರಣ.. ಅಲ್ಲದೆ, ಆತನಿಗೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಆಸಕ್ತಿ ಇರುವುದರಿಂದ ಇದನ್ನು ರೆಕ್ಕಿಟ್ ಗ್ರೂಪ್ ಗೆ ಮಾರಿ ತಾನು ಅದರಲ್ಲಿ ಉದ್ಯೋಗಿಯಾಗಿ ಮುಂದುವರಿಯುತ್ತಾನೆ. ಮುಂದೆ ಆತ ಇನ್ನೋವೇಟಿವ್ ಆದ ಮತ್ತಷ್ಟು ಕ್ಲೀನರ್ ಗಳನ್ನು ಸಹಾ  ಕಂಡುಹಿಡಿದನು. ಮ್ಯಾನ್ ಹೋಲ್ ನಲ್ಲಿ ಬಳಸುವ ಲಾಕ್ ಅಂಡ್ ಲಿಫ್ಟ್ ಹಾಗೂ ಕ್ಯಾಸ್ಟ್ ಐರನ್ ಹೀಟಿಂಗ್ ನಲ್ಲಿ ಬಳಸಲಾಗುವ ಸೀಲೆಂಟನ್ನು ಕಂಡುಹಿಡಿದದ್ದು ಸಹಾ ಹ್ಯಾರಿ. 


1932 ರಲ್ಲಿ ಹಾರ್ಪಿಕ್ ಅನ್ನು ತನ್ನ ವಶ ಮಾಡಿಕೊಂಡ ರೆಕ್ಕಿಟ್ ಗ್ರೂಪ್ಸ್ ಇಂಗ್ಲೆಂಡಿನ ಸ್ಲೋಗ್ ಅನ್ನು ತನ್ನ ಹೆಡ್ ಕ್ವಾರ್ಟರ್ ನ್ನಾಗಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿತ್ತು. ಹಾರ್ಪಿಕ್ ಕ್ಲೀನರ್ ಮೂಲ ವಸ್ತುಗಳಿಗೆ ಬದಲಾಗಿ ಬೇರೆ-ಬೇರೆ ಸಬ್ಸ್ಟಿಟ್ಯೂಟ್ ಗಳನ್ನು ಸಹಾ ಬಳಸಿ ತಯಾರಾಯಿತು. ಈಗಿನ ಹಾರ್ಪಿಕ್ ನಲ್ಲಿ 10% ಹೈಡ್ರೋಕ್ಲೋರಿಕ್ ಆಸಿಡ್ ಜೊತೆಗೆ ಬ್ಯುಟೈಲ್ ಒಲೆಯೊಲೋಮೈನ್ ಹಾಗೂ ಇನ್ನಿತರ ಕೆಮಿಕಲ್ ಗಳು ಸೇರಿ ಅದು ದ್ರಾವಕದ ರೂಪದಲ್ಲಿ ಲಭ್ಯವಿದೆ. ರೆಕ್ಕಿಟ್ ಗ್ರೂಪ್ ನವರು ಇನ್ನು ಹಲವಾರು ಹೈಜಿನ್, ಆರೋಗ್ಯ ಹಾಗೂ ಮನೆ ಬಳಕೆಯ ವಸ್ತುಗಳನ್ನು ಕೂಡಾ ತಯಾರಿಸುತ್ತಿದ್ದಾರೆ. ಹಾರ್ಪಿಕ್ ಭಾರತಕ್ಕೆ ಕಾಲಿಟ್ಟದ್ದು 1984ರಲ್ಲಿ. 


ಮೊದಲಿಗೆ ಹಾರ್ಪಿಕ್ ಅನ್ನು ಭಾರತಕ್ಕೆ ತಂದು ಪರಿಚಯಿಸಿದಾಗ ಟಾಯ್ಲೆಟ್ ಕ್ಲೀನರ್ ಎಂಬುದು ಇಲ್ಲಿನವರಿಗೆ ಹೊಸ ವಿಷಯವೇ ಆಗಿತ್ತು. ಮೊದಮೊದಲು ಇಲ್ಲಿನ ಜನತೆ ಅದಕ್ಕೆ ಅಷ್ಟು ಆದ್ಯತೆಯನ್ನು ನೀಡಲಿಲ್ಲ. ಮೊದಮೊದಲು ಇದನ್ನು ದೊಡ್ಡ ಪಿಂಗಾಣಿ ಪಾತ್ರಗಳಲ್ಲಿನ ಕಲೆಗಳನ್ನು ತೆಗೆಯಲು ಬಳಸುತ್ತಿದ್ದರು. ಹಾರ್ಪಿಕ್ ನ ಸ್ವಚ್ಛತೆಯ ದ್ರಾವಣದ ಜೊತೆಗೆ ವೈಪ್ಸ್, ಟ್ಯಾಬ್ಲೆಟ್, ಟಾಯ್ಲೆಟ್ ಬೌಲ್ ಗಳು, ಸಿಸ್ಟರ್ನ್, ಬ್ಲಾಕ್ಸ್, ಬ್ರಷ್ ಮುಂತಾದ ಹಲವಾರು ಪ್ರಾಡಕ್ಟ್ ಗಳು ಸಹಾ ಒಂದೊಂದಾಗಿ ಕಾಲಿಟ್ಟವು. ಆ್ಯಸಿಡ್ ಅಥವಾ ಹಾರ್ಪಿಕ್ ಮೊದಲಿದ್ದ ದ್ರಾವಣಕ್ಕಿಂತ...  ವಾಸನೆಯಿಂದಲೇ ಸೆಳೆಯುವಂತಹ ಪರಿಮಳಭರಿತ ದ್ರಾವಣಗಳು ಜನಪ್ರಿಯವಾದವು. 


ಹಾರ್ಪಿಕ್ ತನ್ನ ಪ್ರಾಡಕ್ಟ್ ನ ಮಾರ್ಕೆಟಿಂಗ್ ನಲ್ಲಿಯೂ ಸಹ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಂಡಿತು. ಮೊದಲನೆಯದಾಗಿ ಹಾರ್ಪಿಕ್ ತನ್ನ ಗ್ರಾಹಕರು ಯಾರು ಎಂಬುದನ್ನು ಸರಿಯಾಗಿ ಗುರುತಿಸಿತು. ಅವರೇ ಗೃಹಿಣಿಯರು ಹಾಗೂ ಬ್ಯಾಚುಲರ್ ಗಳು. ಇಂದಿಗೂ ಅದರ ಪಾಯಿಂಟ್ ಆಫ್ ವ್ಯೂ ಬದಲಾಗಿಲ್ಲ. ಏಕೆಂದರೆ, ಜಾಹೀರಾತುಗಳಲ್ಲಿ ನೀವು ನೋಡಿರಬಹುದು.. ಇವರು ಮೊದಲು ಗೃಹಿಣಿಯರಿಗೆ ಈ ಸ್ವಚ್ಛತೆಯ ಕುರಿತು ಅರಿವು ಮೂಡಿಸುತ್ತಾರೆ. ಕುಟುಂಬದ ಹೈಜಿನ್ ಗಾಗಿ ಇದು ಬಹಳ ಸುಲಭವಾದ ಸೊಲ್ಯೂಷನ್ ಎನ್ನುತ್ತಾ ಗೃಹಿಣಿಯರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಾರೆ. 

ಗೃಹಿಣಿಯರನ್ನೇ ಟಾರ್ಗೆಟ್ ಮಾಡಿದಾಗ ಕೆಲವರು ತಕರಾರೆತ್ತುತ್ತಾರೆ. "ಹೆಂಗಸರಿಗೆ ಮಾತ್ರ ಸ್ವಚ್ಛತೆಯ ಅರಿವು ಮಾಡಿಸಬೇಕೇ..?? ಸ್ವಚ್ಛತೆ ಎಲ್ಲರ ಕರ್ತವ್ಯವೂ ಅಲ್ಲವೇ..?? ಎಂಬುದಾಗಿ. 

ಹಾರ್ಪಿಕ್ ಇದಕ್ಕೆ ತನ್ನ ಕೆಲಸದ ಮೂಲಕವೇ ಉತ್ತರಿಸುತ್ತದೆ. ಮೊದಲು ಗೃಹಿಣಿಯರನ್ನು ಮಾತ್ರ ತಮ್ಮ ಟಾರ್ಗೆಟ್ ಗ್ರಾಹಕರು ಎಂದುಕೊಂಡಿದ್ದ ಹಾರ್ಪಿಕ್ ನವರು ನಂತರ ಬ್ಯಾಚುಲರ್ ಗಳು, ಒಂಟಿಯಾಗಿರುವ ಹುಡುಗರಿಗೂ ಸಹಾ ಇದರ ಅಗತ್ಯತೆಯನ್ನು ತಿಳಿಸಿ ತಮ್ಮ ಪ್ರಾಡಕ್ಟ್ ಗಳನ್ನು ಪ್ರಮೋಟ್ ಮಾಡಿದ್ದಾರೆ.


ಬಹುಶಃ, ಅಂದಿನ ಕಾಲಘಟ್ಟದಲ್ಲಿ ಪರಿಸ್ಥಿತಿ ಹಾಗೆಯೇ ಇದ್ದಿತೋ ಏನೋ.. ಆದರೆ, ಈಗ ಕಾಲ ಬದಲಾಗಿದೆ. ಸ್ವಚ್ಛತೆ ಕೇವಲ ಗೃಹಿಣಿಯರ ಕೆಲಸ ಮಾತ್ರವಲ್ಲ. ಮನೆಯ ಪ್ರತಿಯೊಬ್ಬರೂ ಸಹಾ  ಇದರ ಪ್ರಾಮುಖ್ಯತೆಯನ್ನು ಅರಿತಿರಬೇಕು. ಈಗ ಹಾರ್ಪಿಕ್ ತನ್ನ ಜಾಹೀರಾತನ್ನು ಸಹಾ ಬದಲಿಸಿಕೊಂಡಿದೆ. ಮನೆಯ ಪ್ರತಿ ಕೆಲಸಗಳನ್ನೂ ಗಂಡ-ಹೆಂಡತಿ ಹಂಚಿಕೊಂಡು ಮಾಡುತ್ತಾರೆ ಎಂಬ ಅರ್ಥ ಬರುವ ರೀತಿಯ ಜಾಹೀರಾತುಗಳಿಂದ ಗಂಡು-ಹೆಣ್ಣು ಎಂಬ ಭೇದವಿಲ್ಲದೆ.. ಸ್ವಚ್ಛತೆಯ ವಿಚಾರದ ಕುರಿತಾದ ಅರಿವು ಮೂಡಿಸುತ್ತಿದ್ದಾರೆ. ಇತ್ತೀಚಿನ ಹಾರ್ಪಿಕ್ ಜಾಹೀರಾತು ನೋಡಿದರೆ ಬದಲಾವಣೆ ಖಂಡಿತವಾಗಿಯೂ ಗೋಚರವಾಗುತ್ತದೆ. ಅಲ್ಲದೆ, ಹಾರ್ಪಿಕ್ ಎಲ್ಲೆಡೆಯೂ ದೊರೆಯುವಂತೆ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಆನ್ಲೈನ್ ಹಾಗೂ ಆಫ್ಲೈನ್ ಶಾಪಿಂಗ್ ಎರಡೂ ಕಡೆಯಲ್ಲಿಯೂ ನಾವು ಇದನ್ನು ಗಮನಿಸಬಹುದು. 


ಇವರು ತಮ್ಮ ಪ್ರಾಡಕ್ಟ್ ಡಿಸೈನ್ ಅನ್ನು ಸಹ ವಿಭಿನ್ನವಾಗಿಯೇ ಮಾಡಿದ್ದಾರೆ. ಹಾರ್ಪಿಕ್ ನ ಬಾಟಲಿನ ಮೇಲ್ಭಾಗವನ್ನು ನೋಡಿದರೆ ಅದನ್ನು ಕೊಂಚ ಬೆಂಡ್ ಮಾಡಿದ್ದಾರೆ. ಕಾರಣವೆಂದರೆ, ಟಾಯ್ಲೆಟ್ ರಿಮ್ ನ ಭಾಗಕ್ಕೂ ತಲುಪುವಂತೆ ಸೊಲ್ಯೂಷನ್ ಅನ್ನು ಹಾಕಲು ಸುಲಭವಾಗಲಿ ಎನ್ನುವ ಕಾರಣಕ್ಕೆ. ಈ ರೀತಿಯ ಡಿಸೈನ್ ಅನ್ನು ಗ್ರಾಹಕರು ಕೇಳದಿದ್ದರೂ ಸಹಾ ಅವರನ್ನು ಅರ್ಥ ಮಾಡಿಕೊಂಡು ಡಿಸೈನ್ ನೀಡಿದ್ದಾರೆ. ಕೇಳದಿದ್ದರೂ ಅಗತ್ಯತೆಯನ್ನು ಅರ್ಥ ಮಾಡಿಕೊಂಡು ಪ್ರಾಡಕ್ಟ್ ನೀಡುವುದರಲ್ಲಿಯೂ ಬ್ಯುಸಿನೆಸ್ ನ ತಂತ್ರಗಾರಿಕೆಯಿದೆ. 


ಹಾರ್ಪಿಕ್ 1920 ರಲ್ಲಿ ಶುರುವಾದರೂ.. ತನ್ನ ಮೊದಲ ಜಾಹೀರಾತು ನೀಡಿದ್ದು 1957ರಲ್ಲಿ. "ಹಾರ್ಪಿಕ್ : ಇದು ಸ್ವಚ್ಛತೆಯ ಕುರುಹು ಹಾಗೂ ಸ್ವಚ್ಛ ಮನೆಯ ಕುರುಹು" ಎಂಬ ಹೇಳಿಕೆಯೊಂದಿಗೆ ಶುರುವಾಯಿತು ಈ ಜಾಹೀರಾತು.

ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವುದು ಸಹ ಅತ್ಯಗತ್ಯ. ಈ ಕಾರಣಕ್ಕಾಗಿ ಜಾಹೀರಾತು ಮಾತ್ರವಲ್ಲದೆ, ಹಲವಾರು ಅಭಿಯಾನಗಳ ಮೂಲಕ ಹಾರ್ಪಿಕ್ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಕೇವಲ ಜಾಹೀರಾತುಗಳು ಮಾತ್ರವಲ್ಲದೆ, ಅಭಿಯಾನಗಳು ಕೂಡಾ ಪ್ರಾಡಕ್ಟ್ ಅನ್ನು ಜನರ ಬಳಿ ಕೊಂಡೊಯುವಲ್ಲಿ ಸಹಕಾರಿಯಾಗಿದೆ. ಹೆಚ್ಚು ಜನ ಸೇರುವಂತಹ ಜಾಗದಲ್ಲಿ ಸ್ವಚ್ಛತೆಯ ಕುರಿತಾದ ಪ್ರಶ್ನೋತ್ತರಗಳು ಹಾಗೂ ಚರ್ಚೆಗಳನ್ನು ಹಮ್ಮಿಕೊಂಡು ಸಹಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ ಹಾರ್ಪಿಕ್. 


ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಬಳಸಿಕೊಂಡು ಕ್ಯೂ.ಆರ್ ಕೋಡ್ ಪ್ರಿಂಟ್ ಮಾಡುತ್ತಾ ತನ್ನ ಪ್ರಾಡಕ್ಟ್ ಅನ್ನು.. ಒರಿಜಿನಲ್ ಹೌದಾ.. ಅಲ್ಲವಾ ಎಂದು ಪರೀಕ್ಷಿಸಲು ಜನರಿಗೆ ಅನುವು ಮಾಡಿಕೊಡುತ್ತಿರುವ ಮೊದಲ ಹೈಜಿನ್ ಉತ್ಪನ್ನ ಹಾರ್ಪಿಕ್. 

"ಸಾಫ್ ನಹಿ ಸ್ವಚ್ಛ್' ಎನ್ನುತ್ತಾ ಕೇವಲ "ಶುದ್ಧತೆ ಮಾತ್ರವಲ್ಲ.. ಸ್ವಚ್ಛತೆ ಕೂಡಾ" ಎನ್ನುವ ಮಾತುಗಳನ್ನು ತನ್ನ ಕುರಿತಾಗಿ ಹೇಳಿಕೊಳ್ಳುತ್ತದೆ. 


ಹಾರ್ಪಿಕ್ ಕುರಿತಾಗಿ ಕೇಳಿಬರುವ ಜನಜನಿತ ಮಾತು "ಹಾರ್ಪಿಕ್ ಸೊಲ್ಯೂಷನ್ ನಿಂದ 99.9 % ಹಾನಿಕಾರಕ ಕೀಟಾಣುಗಳನ್ನು ಸ್ವಚ್ಛಗೊಳಿಸಬಹುದು." ಎಂಬುದು. 100% ಸ್ವಚ್ಛತೆ ಎನ್ನುವ ಮಾತಿಗಿಂತ 99.9% ಎನ್ನುವ ಮಾತಿನಲ್ಲಿ ಅದು ತಾನು ಹೇಳುವ ಮಾತಿನಲ್ಲಿ ಸತ್ಯವನ್ನು ಬಿಂಬಿಸುವುದನ್ನು ಸಹಾ ಸೂಚಿಸುತ್ತದೆ. ಬಹುಶಃ, ಮುಂಬರುವ ದಿನಗಳಲ್ಲಿ ಇದು 100% ಆಗಬಹುದಾ..?? ಗೊತ್ತಿಲ್ಲ. ಆದರೆ, ಕೋವಿಡ್ ಸಮಯದಲ್ಲಿ ನಡೆದ ಕೆಲವು ಸಂಶೋಧನೆಗಳಿಂದ ಈ ದ್ರಾವಣವನ್ನು ನೀರಿನಲ್ಲಿ ಮಿಶ್ರ ಮಾಡದೇ ಬಳಸಿದಾಗ ಕೋವಿಡ್-ಸಾರ್ಸ್-2 ವೈರಸ್ ಅನ್ನು ನಾಶಪಡಿಸಬಲ್ಲದು ಎಂಬುದು ಸಾಬೀತಾಗಿದೆ. 


ಹಾರ್ಪಿಕ್ ನ ಪ್ರಾಡಕ್ಟ್ ನಲ್ಲಿ ಇಂದಿಗೂ ತರಹೇವಾರಿ ಪ್ರಾಡಕ್ಟ್ ಗಳು ನಿರ್ಮಾಣವಾಗುತ್ತಲೇ ಇವೆ. ಲಿಕ್ವಿಡ್ ರೀತಿಯ ಸಲ್ಯೂಷನ್ ನಿಂದ ಈಗ ಫ್ಲಶ್ ಟ್ಯಾಂಕ್ ಒಳಗೆ ಒಂದು ಟ್ಯಾಬ್ಲೆಟ್ ಅನ್ನು ಹಾಕಿದರೆ ಅದರಿಂದ ಪ್ರತಿ ಬಾರಿಯೂ ಸ್ವಚ್ಛ ಮಾಡುವ ವಿಧಾನವನ್ನು ನಾವು ನಿಮಗೆ ನೀಡುತ್ತಿದ್ದೇವೆ ಎನ್ನುತ್ತಾ ತಮ್ಮ "ಡ್ರಾಪ್ ಇನ್ ಟ್ಯಾಂಕ್ ಟ್ಯಾಬ್ಲೆಟ್" - "ಹಾರ್ಪಿಕ್ ಫ್ಲೆಶ್ ಮ್ಯಾಟಿಕ್" ಮೂಲಕ ಹೊಸದೊಂದು ಪ್ರಾಡಕ್ಟ್ ಅನ್ನು ಮುಂದಿಟ್ಟಿದ್ದಾರೆ. 


ಹಾರ್ಪಿಕ್ ಗೆ ಎದುರಾಳಿಗಳೇ ಇಲ್ಲವೆಂದಲ್ಲ. ಕೇವಲ ಪ್ರಬಲ ಎದುರಾಳಿಗಳಾದ ಡೊಮೆಕ್ಸ್, ಸ್ಯಾನಿ ಫ್ರೆಶ್ ಮಾತ್ರವಲ್ಲದೆ.. ಹಲವಾರು ಸಣ್ಣ-ಪುಟ್ಟ ಕಂಪನಿಗಳು ಸಹಾ ಹಾರ್ಪಿಕ್ ನಂತೆ ಕಾಣುವ ನಕಲಿ ಪ್ರಾಡಕ್ಟ್ ಗಳನ್ನೇ ತಯಾರಿಸಿ ಬಿಡುಗಡೆ ಮಾಡುತ್ತಿವೆ. ಆದರೆ ಹಾರ್ಪಿಕ್ ನ ಬೆಲೆ, ಗುಣಮಟ್ಟ ಹಾಗೂ ಹೊಸ-ಹೊಸ ಪ್ರಾಡಕ್ಟ್ ಮೂಲಕ ಹಾರ್ಪಿಕ್ ಗ್ರಾಹಕರಲ್ಲಿ ಹೆಚ್ಚಿನ ಭರವಸೆ ಮೂಡಿಸಿದೆ.


ನೂರು ವರ್ಷ ದಾಟಿದ ನಂತರವೂ ಬ್ಯುಸಿನೆಸ್ ನಲ್ಲಿ ಗಟ್ಟಿಯಾಗಿ ಹೆಜ್ಜೆಯೂರಿ ನಿಲ್ಲುವುದು ಸುಲಭದ ಮಾತಲ್ಲ. ಅದಕ್ಕೆ ಬೇಕಾಗಿರುವುದು ತಮ್ಮ ಗ್ರಾಹಕರನ್ನು ಹಿಡಿದಟ್ಟುಕೊಳ್ಳುವ ಪರಿ. ಪ್ರತಿದಿನವೂ ತನ್ನನ್ನು ಅಪ್ಡೇಟ್ ಮಾಡಿಕೊಂಡು, ಗ್ರಾಹಕರ ಕೆಲಸವನ್ನು ಸುಲಭವಾಗಿಸುತ್ತಾ, ಗ್ರಾಹಕರನ್ನು ಕೇವಲ ಟಿ.ವಿ ಜಾಹೀರಾತಿನ ಮೂಲಕ ಮಾತ್ರವಲ್ಲದೆ.. ಅಭಿಯಾನಗಳು ಹಾಗೂ ಆನ್ಲೈನ್ ಜಾಹೀರಾತುಗಳ ಮೂಲಕವೂ ತಲುಪುವುದು, ಎದುರಾಳಿಗಳ ತಂತ್ರಕ್ಕೆ ಮಣಿಯದೆ ತನ್ನಷ್ಟಕ್ಕೆ ತಾನು ತನ್ನ ಬ್ಯುಸಿನೆಸ್ ಅನ್ನು ನೋಡಿಕೊಳ್ಳುತ್ತಾ.. ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದರ ಕುರಿತು ಮಾತ್ರ ಗಮನಹರಿಸುವುದು. ಇದೆಲ್ಲದರಿಂದ ಬ್ಯುಸಿನೆಸ್ ನಲ್ಲಿ ಗಟ್ಟಿಯಾಗಿ ಕಾಲೂರಿ ನಿಲ್ಲಬಹುದು ಎನ್ನುತ್ತಾ ತನ್ನ ಬ್ಯುಸಿನೆಸ್ ಪಾಠ ಹೇಳುತ್ತಿದೆ ಹಾರ್ಪಿಕ್.


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ