ಪುಸ್ತಕದ ಶೀರ್ಷಿಕೆ : ಶರದೃತುವಿನ ಚಂದ್ರ
ಲೇಖಕರು : ಸಾಯಿಸುತೆ
ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್
ಪ್ರಥಮ ಮುದ್ರಣ : 1985
ಐದನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 116
ಬೆಲೆ : 105 ರೂ.
'ಮುಗಿಲತಾರೆ' ಕಾದಂಬರಿಯ ಮುಂದುವರಿದ ಭಾಗವೇ ಸಾಯಿಸುತೆಯವರ ಶರದೃತುವಿನ ಚಂದ್ರ. ಈಗಾಗಲೇ 'ಮುಗಿಲತಾರೆ' ಕಾದಂಬರಿಯ ಪರಿಚಯ ಮಾಡಿದ್ದೇನೆ. ಲೇಖಕಿಯೇ ಹೇಳುವಂತೆ ಮುಗಿಲತಾರೆ ಬರೆದ ಮೇಲೆ ಅದನ್ನು ಮುಂದುವರಿಸುವ ಇಚ್ಛೆ ಅವರಿಗಿರಲಿಲ್ಲವಂತೆ. ಆದರೆ, ಹಲವಾರು ಮಹಿಳೆಯರು ಕಾದಂಬರಿಯ ವಸ್ತುವಿನ ಬಗ್ಗೆ ಚರ್ಚೆ ಮಾಡಿದಾಗ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಒದಗಿ ಬಂದಿತ್ತು. ಅವರ ಕೆಲವು ಪ್ರಶ್ನೆಗಳಿಗೆ ಉತ್ತರ ಎನ್ನುವಂತೆ ಈ ಮುಂದುವರಿದ ಭಾಗ ಪ್ರಕಟವಾಯಿತು ಎನ್ನುತ್ತಾರೆ.
ಭಾಷ್ಯಂರವರ ಇಬ್ಬರು ಹೆಣ್ಣುಮಕ್ಕಳು ಚೈತ್ರ ಹಾಗೂ ಸ್ಮಿತಾ. ಸ್ಮಿತಾಳಿಗೆ ಸಂದೀಪನೊಡನೆ ವಿವಾಹವಾಗಿತ್ತು. ಅದಾಗಲೇ ಸ್ಮಿತಾ ಗರ್ಭಿಣಿ. ಚೈತ್ರ ತನ್ನ ಗಂಡನ ಒಲ್ಲದ ನಡೆಯಿಂದ ಸಿಡಿದು ಬಂದಿದ್ದವಳು ಮತ್ತೆ ಅತ್ತ ತಿರುಗಿಯೂ ನೋಡಿರಲಿಲ್ಲ. ಈ ಕೊರಗೇ ಆಕೆಯ ತಾಯಿಯ ಸಾವಿಗೂ ಕಾರಣವಾಗಿತ್ತು. ಅದಾದ ನಂತರ ಮನೆಯವರೆಲ್ಲರೂ ಕುಗ್ಗಿಹೋಗಿದ್ದರು. ಅದರಲ್ಲಿಯೂ ಚೈತ್ರಾಳಿಗೆ ತನ್ನ ನಡೆ ಸರಿ ಇದ್ದರೂ.. ಮನೆಯವರೆಲ್ಲ ತನ್ನಿಂದ ನೋಯುತ್ತಿರುವುದಕ್ಕೆ ಬಹಳವೇ ಕೊರಗು. ಸದ್ಯಕ್ಕೆ ಆಕೆಯ ಗೆಳತಿ ಸುಚಿತ್ರಾ ಒಬ್ಬಳೇ ಆಕೆಯ ಪಾಲಿನ ಬಂಧು.
ಸಿನಿಮಾ, ಸ್ನೇಹಿತರು ಎಂದು ಓಡಾಡಿಕೊಂಡಿದ್ದ ಸ್ಮಿತಾ ಹಾಗೂ ಸಂದೀಪರಿಗೆ ಈಗ ಸಾಮಾನ್ಯವಾಗಿ ಪುಟ್ಟ ಜವಾಬ್ದಾರಿಯನ್ನು ಹೊರಲು ಕಷ್ಟವೇ..! ಆದರೆ, ಈಗ ಸಂದೀಪನಿಗೆ ಮಡದಿಯ ಚಿಂತೆ. ಮೂರು ಹೊತ್ತೂ ಅವಳ ಮುಂದೆ ಕೂರಲಾಗದು. ಹಾಗೆಂದು, ಕುಗ್ಗಿ ಹೋದ ಮನಸ್ಥಿತಿಯಲ್ಲಿ ಗರ್ಭಿಣಿ ಹೆಂಡತಿಯನ್ನು ಬಿಡಲಾಗದು. ಹಾಗಾಗಿಯೇ ಅವಳನ್ನು ಇಲ್ಲಿಯೇ ತಂದು ಬಿಡಬಹುದಾ ಎಂಬ ಆಲೋಚನೆ.
ಚೈತ್ರಳ ಗಂಡ ದಿವಾಕರ ಹೇಗೆ ನೋಡಿದರೂ.. ಸ್ವಾರ್ಥದ ಪರಾಕಾಷ್ಟೆಯಾಗಿ ಹಾಗೂ ಮಹಾತ್ವಾಕಾಂಕ್ಷೆಯ ವ್ಯಕ್ತಿಯಾಗಿ ಮಾತ್ರವೇ ಕಾಣುತ್ತಿದ್ದನೇ ಹೊರತು ಪ್ರೇಮಮಯಿ ಜೀವಿಯಾಗಲ್ಲ. ಈಗ ಸತೀಶ್ ಚಂದ್ರರ ಎದುರು ಚೈತ್ರದ ನಡೆಯಿಂದ ಸೋತಂತಾಗಿತ್ತು.
ಎಂದೂ ದಿವಾಕರನೊಂದಿಗೆ ಬಾಳುವ ಪ್ರಸಕ್ತಿಯೇ ಬರುವುದಿಲ್ಲವೆಂದು ದೃಢವಾಗಿ ಚೈತ್ರ ಹೇಳಿದ್ದ ಮಾತುಗಳು ಸತೀಶ್ ಚಂದ್ರನಿಗೆ ನೆನಪಾಗಿತ್ತು. ಈ ವಿಚಾರ ಗೊತ್ತಿಲ್ಲದ ದಿವಾಕರ ನಟಿಸಲು ಪ್ರಯತ್ನಿಸಿ ಸೋತ. ಆದರೂ.. ಮನೆಯಲ್ಲಿ ತಂದೆ ಶ್ರೀಕಂಠಯ್ಯನವರ ಎದುರಲ್ಲಿ ಅವನ ಪ್ರತಾಪ ಇದ್ದೇ ಇತ್ತು, ಅವಳನ್ನು ಜೊತೆಯಲ್ಲಿ ಅಮೆರಿಕಾಗೆ ಕರೆದುಕೊಂಡು ಹೋಗುವ ಹೊಸ ಪ್ರಸ್ತಾಪವನ್ನಿಟ್ಟ. ಅಣ್ಣನ ಆರೋಗ್ಯಸ್ಥಿತಿ ಹದಗೆಟ್ಟಿದ್ದನ್ನು ಕಂಡು ಗಿರಿಜಮ್ಮನವರು ಸಹಾ ಪತಿ ಹಾಗೂ ಮಗನ ಮುಂದೆ ಕಣ್ಣೀರಿಟ್ಟರು.
ದಿವಾಕರನಿಗೆ ಒಮ್ಮೆ ಚೈತ್ರ ಅವನ ಕೈಗೆ ಸಿಕ್ಕಿಬಿದ್ದರೆ ಅವಳಲ್ಲಿನ ಸ್ವಾಭಿಮಾನ, ಕೆಚ್ಚು ಆತ್ಮವಿಶ್ವಾಸ ಎಲ್ಲವನ್ನೂ ಹಾಳು ಮಾಡಿ ತನ್ನ ಕೈಯಲ್ಲಿ ಕುಣಿಯುವ ಕೀಲುಗೊಂಬೆ ಮಾಡಿಕೊಂಡು ಬಿಡುವ ಛಲ ಇನ್ನೂ ಹೆಚ್ಚಾಗುತ್ತಿತ್ತೇ ಹೊರತು ಕಡಿಮೆಯಾಗುತ್ತಲೇ ಇರಲಿಲ್ಲ. ತನ್ನ ಭವ್ಯ ಭವಿಷ್ಯದ ನಿರ್ಮಾಣದ ಹಂತದಲ್ಲಿ ತಾನೇ ಒಂದೆಜ್ಜೆ ಸೋತು ಮುಂದೆ ಹೋಗಲು ತೀರ್ಮಾನಿಸಿದರೂ.. ಅದು ಆತನಿಗೆ ಸೋಲಲ್ಲ ಗೆಲುವಿನ ಮೊದಲ ಹೆಜ್ಜೆ ಎಂದೆನಿಸುತ್ತಿತ್ತು.
ಅತ್ತೆಯಂತೂ ಹೋಗಿಯಾಗಿದೆ. ಈಗ ಮಾವನೂ ಅದೇ ಹಾದಿ ಹಿಡಿಯಬೇಕೇ ಎಂದವನ ಮಾತು ಕೇಳಿದವಳಿಗೆ ಅಂದಿನ ಘಟನೆಗಳೆಲ್ಲಾ ನೆನಪಾಗಿ ಮತ್ತಷ್ಟು ಕುಗ್ಗಿದಳು. ತಾನು ಬರದಿದ್ದರೆ ತಾಯಿ ಬದುಕಿರುತ್ತಿದ್ದರೇನೋ.. ತಂಗಿಯೂ ನೆಮ್ಮದಿಯಾಗಿ ಅವರ ಮಡಿಲಿನಲ್ಲಿರುತ್ತಿದ್ದಳು ಎಂಬ ಆಲೋಚನೆ ಚೈತ್ರಳಿಗೆ.
ತನ್ನ ವಿದ್ಯಾಭ್ಯಾಸದ ಮುಂದುವರೆಸಲು ಸರ್ಟಿಫಿಕೇಟ್ ಗಳ ಅವಶ್ಯಕತೆ ಇರುವುದರಿಂದ ಮುಂಬೈಗೆ ಒಬ್ಬಳೇ ಫ್ಲೈಟ್ ನಲ್ಲಿ ಹೋಗಿದ್ದಳು. ಆದರೆ, ದಿವಾಕರ ದೆಹಲಿಗೆ ಹೋಗಿದ್ದ. ಅಲ್ಲದೇ ಆತನಿಗೆ ಕೀಲಿ ಕೊಡುವ ಮನಸ್ಥಿತಿಯೂ ಇರಲಿಲ್ಲ. ಆತನ ವಿಚಿತ್ರ ನಡವಳಿಕೆಯಿಂದ ಮತ್ತಷ್ಟು ಕುಗ್ಗಿದವಳ ಸಹಾಯಕ್ಕೆ ಬಂದ ಸತೀಶ್ ಚಂದ್ರ ಮನುಷ್ಯನಂತೆ ನಡೆದುಕೊಂಡದ್ದು ಇದ್ದುದರಲ್ಲಿ ಸಮಾಧಾನ ತಂದಿತ್ತು. ಆದರೂ.. ದಿವಾಕರನ ನಡೆಯಿಂದ ಸತೀಶ್ ಚಂದ್ರರ ಮನಸ್ಥಿತಿಯನ್ನು ಬೇರೆಯ ರೀತಿಯಲ್ಲಿ ಊಹಿಸಲಾಗುತ್ತಿರಲಿಲ್ಲ ಅವಳಿಗೆ.
ಮುಂದೆ ಭಾಷ್ಯಂರವರ ಸಲಹೆಯ ಮೇರೆಗೆ ಓದು ಮುಂದುವರಿಸಲು ಹಾಗೂ ಬಂಧನವನ್ನು ಕಡಿದುಕೊಳ್ಳಲು ಲಾಯರ್ ಬಳಿ, ಓಡಾಡುತ್ತಿದ್ದ ಸಂದರ್ಭದಲ್ಲಿ ಸ್ಮಿತಾಳಿಗೆ ಅದಾಗಲೇ ಏಳು ತಿಂಗಳು. ಆಕೆಯನ್ನು ತವರಿಗೆ ಕರೆತರಬೇಕಿತ್ತು. ಇದೆಲ್ಲದರ ನಡುವೆ ಮಗನ ವಿಚಾರ ಗೊತ್ತಿದ್ದರೂ ಶ್ರೀಕಂಠಯ್ಯ ಹಾಗೂ ಗಿರಿಜಮ್ಮನವರಿಗೆ ಮಗ-ಸೊಸೆಯ ಸಂಸಾರ ಹಾಳಾಗುವುದು ಬೇಡವಾಗಿತ್ತು.
ಹೃದಯ, ಮನಸ್ಸು, ಕೌಟುಂಬಿಕಕ್ಕೆ ಸಂಬಂಧಿಸಿದ ಸಮಸ್ಯೆಗಳು ಅತ್ಯಂತ ಸೂಕ್ಷ್ಮ. ಒಂದು ಎಳೆ ತುಂಡಾಗಬೇಕಾದರೂ.. ಹತ್ತಾರು ಜನ ನೋಯಬೇಕು. ಆದರೆ, ಇದರ ನಡುವೆ ಚೈತ್ರ ಮತ್ತಷ್ಟು ಧೃಡಳಾಗುತ್ತಿದ್ದಳು. ಸತೀಶ್ ಚಂದ್ರ ಚೈತ್ರಳ ಸಹಾಯಕ್ಕೆ ನಿಂತದ್ದನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥೈಸಿಕೊಂಡ ದಿವಾಕರನಿಗೆ ಹೇಳಿಕೊಳ್ಳಲಾಗದ ಭಾವಗಳು ಹಾಗೂ ಕೋಪ.
ಈಗ ದಿವಾಕರನಿಗೆ ಆಶಾರಾಣಿಯ ಪರಿಚಯ ಮತ್ತಷ್ಟು ಹತ್ತಿರವಾಗಿತ್ತು ಅದೆಲ್ಲ ಪ್ರೇಮ, ಪ್ರೀತಿಯಲ್ಲ. ಹೊಂದಾಣಿಕೆ, ಸೇರುವಿಕೆ, ತಮ್ಮತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವಂತಹಾ ಸಂಬಂಧಗಳ ಒಪ್ಪಿಕೊಂಡಿದ್ದ ಕ್ಷಣಗಳು.
ದೃಢವಾದ ಚೈತ್ರ.. ಸ್ಮಿತಾಳ ಆರೈಕೆಗೆ ನಿಂತಳು. ಮತ್ತದು ಅಗತ್ಯವೂ ಇತ್ತು. ಗೆಲುವಾಗಿ ಓಡಾಡಿಕೊಂಡಿರುತ್ತಿದ್ದ ಸ್ಮಿತಾ ಕೆಲವೊಮ್ಮೆ ಮಂಕಾಗಿ ಬಿಡುತ್ತಿದ್ದಳು. ಸಂದೀಪನ ಮುಖದಲ್ಲಿಯೂ ಇತ್ತೀಚೆಗೆ ಅಶಾಂತತೆ. ದ್ವಾರಕಾನಾಥ್ ಮಗನ ಭವಿಷ್ಯದ ವ್ಯವಸ್ಥೆ ಮಾಡಿಬಿಡಬೇಕೆಂದು ಹೊರಟಿದ್ದರು. ಆಗೆಲ್ಲಾ.. ಅಣ್ಣಂದಿರ ತೋರಿಕೆ, ಪ್ರೀತಿ-ವಿಶ್ವಾಸ ವ್ಯಂಗ್ಯದಂತೆನಿಸುತ್ತಿತ್ತು.
ಸಂಧಾನಗಳ ನಡುವೆಯೂ ಚೈತ್ರ ತನ್ನ ಮನಸ್ಸು ಬದಲಿಸಲಿಲ್ಲ. ಪ್ರೀತಿ-ವಿಶ್ವಾಸ, ಗೌರವ, ಅಭಿಮಾನ ಕಳೆದುಕೊಂಡ ವ್ಯಕ್ತಿಯೊಡನೆ ಸಂಸಾರಕ್ಕಿಂತ ಆತ್ಮಹತ್ಯೆಯೇ ಮೇಲು ಎಂಬ ಆಲೋಚನೆ ಅವಳಿಗಿತ್ತು. ಆದರೆ, ವಿಚ್ಛೇದನ ಪಡೆಯಬೇಕಾದರೆ ಸತ್ಯ ಸಂಗತಿಯನ್ನು ಕೋರ್ಟ್ ಮುಂದೆ ಇಡಬೇಕಾಗುತ್ತದೆ ಎಂದು ತಂದೆ ಹೇಳಿದಾಗ ಅವಳಿಗೆ ಶ್ರೀಕಂಠಯ್ಯ ಹಾಗೂ ಗಿರಿಜಮ್ಮನವಾರ ಸೌಮ್ಯಮುಖ ನೆನಪಿಗೆ ಬಂತು. ಪ್ರೀತಿಯ ಹಿರಿಯರನ್ನು ಹಾಗೂ ಮುದ್ದಿನ ತಂಗಿ ಸ್ಮಿತಾಳನ್ನು ತಾನೇ ಅಂಧಕಾರಕ್ಕೆ ನೂಕುತ್ತಿರುವೆನೇನೋ ಎಂಬ ಭಾವವೂ ಕಾಡಿತು.
ಕೆಲ ದಿನಗಳು ಕಳೆದ ನಂತರ ಭಾಷ್ಯಂರವರೇ "ದಿವಾಕರ ಪಶ್ಚಾತಾಪಪಟ್ಟರೆ ನೀನು ಹೋಗಲು ಸಿದ್ಧವೇ..?" ಎಂದು ದಿಢೀರ್ ಪ್ರಶ್ನೆ ಹಾಕಿದ್ದರು. ಚೈತ್ರಳಿಗೆ ಆತನ ಸಂಪೂರ್ಣ ಮನಸ್ಥಿತಿ ಹಾಗೂ ನಡವಳಿಕೆಯ ಅರಿವಿತ್ತು. ಅದಕ್ಕೆ ಆಕೆ ಸಿದ್ಧವಿರಲಿಲ್ಲವಾದರೂ.. ಪರಿಸ್ಥಿತಿಗಳು ಅವಳನ್ನು ಮತ್ತೆ ಅಲುಗಾಡಿಸುತ್ತಿತ್ತು. ತಂದೆಯ ದೃಢತೆಯನ್ನೇ ಸೋಲಕುವಂತೆ ಮಾಡಿದ್ದು ಯಾವುದು ಎಂದು ಅಚ್ಚರಿಯಾಯಿತು.
ಸಮಾಜ, ಬಂದು-ಬಾಂಧವರು, ಸಂಪ್ರದಾಯ, ಹಕ್ಕು ಎಲ್ಲವೂ ಇದ್ದ ದಿವಾಕರನ ಬಳಿಯಲ್ಲಿ ಮಾನವೀಯತೆ ಇರಲಿಲ್ಲ. ಸ್ವಾರ್ಥವಿತ್ತು. ಚೈತ್ರಳಿಗೆ ಅದಾವುದೂ ಇರದಿದ್ದರೂ ಸ್ವಾಭಿಮಾನವಿತ್ತು . ಚೈತ್ರ ತನ್ನ ಮುಂದಿನ ಬದುಕಿನ ನಿರ್ಧಾರವನ್ನು ಹೇಗೆ ಮಾಡಿದಳು .?
ಭಾರತೀಯ ಹೆಣ್ಣು ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಯಾದಾಗ ಅವಳಿಂದ ತೆಗೆದುಕೊಳ್ಳಲ್ಪಡುವ ತೀರ್ಮಾನ ಹೇಗಿರುತ್ತದೆ..?
ದಿವಾಕರನ ಈ ಸ್ವಭಾವ ಮತ್ತು ಮುಂದುವರಿಯಿತು. ಯಾವುದರ ವಿರುದ್ಧ ಚೈತ್ರ ಸೆಟೆದು ನಿಂತಿದ್ದಳು ನೈತಿಕತೆ ಹಾಳಾಗುವವರೆಗೂ ಅದನ್ನು ಬಿಡುವವನಲ್ಲ ಅವನು. ಅವನ ಮುಂದಿನ ಯೋಜನೆ ಹೇಗಿತ್ತು..?
ಭಾಷ್ಯಂರವರ ತೀವ್ರ ಅನಾರೋಗ್ಯದ ನಂತರ, ಹದಗೆಟ್ಟ ಪರಿಸ್ಥಿತಿಯಲ್ಲಿ ಚೈತ್ರ ಏನು ಮಾಡಿದಳು..? ಸ್ಮಿತಾ ಹಾಗೂ ಸಂದೀಪನ ಸಂಬಂಧ ಹೇಗಿತ್ತು..? ಎಲ್ಲದಕ್ಕೂ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಸುಚಿತ್ರ ಇಲ್ಲಿಯೂ ಹಾಗೆಯೇ ಅನಿಸಿದರೆ.. ಸುಚಿತ್ರಾ ಬದುಕು ಸಹ ಕಾಡುತ್ತದೆ. ಹೆಣ್ಣಿನ ಸ್ವಾಭಿಮಾನ ಹಾಗೂ ದೃಢನಿರ್ಧಾರಕ್ಕೆ ಸಮಾಜದಿಂದ ಬರುವ ಪ್ರತಿಕ್ರಿಯೆ ಹಾಗೂ ಅವಳ ಮನದ ತಲ್ಲಣಗಳೇ ಹೆಚ್ಚು ಕಾಡುತ್ತವೆ. ಕಾದಂಬರಿಯುದ್ದಕ್ಕೂ ತಲ್ಲಣವನ್ನು ಹುಟ್ಟಿಸುವ ಕಥಾವಸ್ತು ಹಾಗೂ ಭಾವಪೂರ್ಣತೆ ಕಥೆಯ ಅಂತ್ಯಕ್ಕೆ ಸ್ವಲ್ಪ ಸಮಾಧಾನ ತರುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ