ಪುಸ್ತಕದ ಶೀರ್ಷಿಕೆ : ಪುನರ್ನವ
ಲೇಖಕರು : ಸಚಿನ್ ನಾಯಕ್
ಪ್ರಕಾಶಕರು : ಬಿ. ಎಫ್. ಸಿ
ಪ್ರಥಮ ಮುದ್ರಣ : 2022
ಪುಟಗಳು : 174
ಬೆಲೆ : 280 ರೂ.
ಸಾಮಾನ್ಯನೊಬ್ಬ ಬದುಕುವ ಸಮಾಜದಲ್ಲಿಯೇ ಒಬ್ಬರ ಅಭಿಪ್ರಾಯ ಮತ್ತೊಬ್ಬರಿಗಿಂತ ಬಹಳವೇ ವಿಭಿನ್ನ. ನಮ್ಮ ಬದುಕು ನಮಗೆ ಕಾಣುವುದಕ್ಕೂ.. ಇತರರಿಗೆ ಕಾಣುವುದಕ್ಕೂ ಬಹಳ ವಿಭಿನ್ನತೆ ಇರುತ್ತದೆ. ನೋಡುವ ನೋಟದಲ್ಲಿ ಹಾಗೂ ಆಲೋಚಿಸುವ ರೀತಿಯಲ್ಲಿಯೂ.. ಇನ್ನು ಮಹಾಕಾವ್ಯವಾಗಿರುವ ಮಹಾಭಾರತ ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ರೀತಿ. ನಾವು ಸಾಮಾನ್ಯವಾಗಿ ವ್ಯಾಸ ವಿರಚಿತ ಮಹಾಭಾರತವನ್ನೇ ಓದಿರುತ್ತೇವೆ. ಆದರೆ, ಮಹಾಭಾರತದ ಉಳಿದ ಪಾತ್ರಗಳ ಮೂಲಕ ಕಥೆಯನ್ನು ನೋಡಲು ಹೊರಟರೆ.. ಬಹಳಷ್ಟು ವಿಭಿನ್ನವಾದ ನೋಟಗಳು ದಕ್ಕುತ್ತವೆ. ಆದರೆ, ಮೂಲ ಮಹಾಭಾರತದ ಕಥೆಗೂ ಇಲ್ಲಿ ಪಾತ್ರಗಳು ವ್ಯಕ್ತಪಡಿಸುವ ಅಭಿಪ್ರಾಯವನ್ನು ನಾವು ಕೆಲವೊಮ್ಮೆ ಮನಸ್ಫೂರ್ತಿ ಒಪ್ಪಲು ಸಾಧ್ಯವಿಲ್ಲದಿದ್ದರೂ.. ಆ ವಿಭಿನ್ನ ದೃಷ್ಟಿಕೋನವನ್ನು ಅಲ್ಲಗೆಳೆಯಲಾಗದು.
ಇಲ್ಲಿ ಸಚಿನ್ ನಾಯಕ್ ಅವರು ಮಹಾಭಾರತದ ಕಥೆಯನ್ನು ಭೀಮನ ಪತ್ನಿ ಕಾಶಿಯ ರಾಣಿ ಬಲಂಧರೆಯ ಮೂಲಕ ಕಟ್ಟಿಕೊಡುತ್ತಾರೆ. ಸಚಿನ್ ನಾಯಕ್ ಅವರು ಸಿದ್ದಾಪುರದ ಶಿರಸಿಯಲ್ಲಿ ಹುಟ್ಟಿ ಬೆಳೆದವರು. ವೃತ್ತಿಯಲ್ಲಿ ಒಳಾಂಗಣ ವಿನ್ಯಾಸಕಾರ (ಸ್ಪೇಸ್ ಸ್ಟೈಲಿಸ್ಟ್). ಇವರು ಹವ್ಯಾಸಿ ಕಂಠದಾನ ಕಲಾವಿದರು. ಅನೇಕ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಆಡಿಯೋ ಪುಸ್ತಕಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಧ್ವನಿ ನೀಡಿದ್ದಾರೆ. ಪುನರ್ನವ ಇವರ ಮೊಟ್ಟ ಮೊದಲ ಕೃತಿ. ಆದರೆ, ಎಲ್ಲಿಯೂ ಮೊಟ್ಟ ಮೊದಲ ಕೃತಿ ಎಂದೆನ್ನಿಸದು. ಪಳಗಿದ ಭಾಷೆಯ ಶೈಲಿ ಹಾಗೂ ಭಾವಗಳು ಹೆಚ್ಚು ಕಾಡುತ್ತವೆ. ಪುಸ್ತಕದ ಫಾಂಟ್ ಕೂಡಾ ಸಾಮಾನ್ಯಕ್ಕಿಂತ ಕೊಂಚ ದೊಡ್ಡದಾಗಿಯೇ ಇದ್ದು ಓದಲು ಸುಲಭವಾಗಿದೆ. ಈ ಕಾದಂಬರಿಯಲ್ಲಿ ಪಿತೃವಾಕ್ಯ ಎನ್ನುವ ಅಧ್ಯಾಯದ ಮೂಲಕ ಲೇಖಕರ ತಂದೆ ಬಿ.ಹೆಚ್ ನಾಯಕ್ ಅವರು ಮಹಾಭಾರತದ ಮಹಾನಾಯಕನ ಕತೆಯನ್ನು ತನ್ನದೇ ಆದ ರೀತಿಯಲ್ಲಿ ಹೊಸ ರೂಪದಲ್ಲಿ ಹೇಳಲು ಹೊರಟಿರುವ ಲೇಖಕರ ಪ್ರಯತ್ನಕ್ಕೆ ಹಾರೈಸಿದ್ದು ವಿಶೇಷವೆನ್ನಿಸಿತು.
ಗಂಗೆಯ ತಟದಲ್ಲಿರುವ ಕಾಶಿ ಪಟ್ಟಣದ ರಾಜ ಸುಬಾಹು ಹಾಗೂ ಇಳಾವತಿಯರ ಮಗಳು ಬಲಂಧರೆ. ಸೇನೇಶ ಆಕೆಯ ಅಣ್ಣ. ಪುಟ್ಟ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರು. ಅಣ್ಣ ಸೇನೇಶ ತಂದೆಯಂತೆಯೇ ನಿಂತು ಪೋಷಿಸಿ. ಆತನ ಪಾಲಿಗೆ ಬಲಂಧರೆ ಮಗಳೆಂದರೂ ತಪ್ಪಾಗಲಾರದು. ಅತ್ತಿಗೆ ಸುಲೋಚನೆ ಕೂಡಾ ಸೇನೇಶನಿಗೆ ತಕ್ಕರಾಣಿ. ತಂದೆಯ ಮೂಲಕ ಸಿಕ್ಕ ಇಬ್ಬರು ಪುಟ್ಟ ಬಾಲಕಿಯರೇ ಬಲಂಧರೆಯ ಚಿಕ್ಕ ವಯಸ್ಸಿನಿಂದಲೂ.. ವೃದ್ಧಾಪ್ಯದವರೆಗೂ ಜೊತೆಗೆ ಬಂದ ಸಖಿಯರು. ಅವರೇ ಚಿತ್ರಾಕ್ಷಿ ಹಾಗೂ ಗೌರಾಂಗಿ. ಗೌರಂಗಿಯಂತೂ ಬಲಂಧರೆಯ ನೆರಳಂತೆಯೇ ಇದ್ದವಳು. ಅವಿವಾಹಿತೆಯಾಗಿಯೇ ಉಳಿದವಳು.
ಬಲಂಧರೆ ಪ್ರಾಪ್ತ ವಯಸ್ಕಳಾದಾಗ ಆಕೆಯ ವಿವಾಹದ ಪ್ರಸ್ತಾವನೆ ಇಟ್ಟಿದ್ದು ಸೇನೇಶ. ಆ ಸಮಯದಲ್ಲಿ ಆಕೆ ವರಿಸಿದ್ದು ಭೀಮನನ್ನು. ಈ ವಿವಾಹದ ಪ್ರಸಂಗ ಹೇಗಿದೆ ಎಂದು ನೀವೇ ಓದಿ ತಿಳಿಯಿರಿ. ಆ ಸಮಯದಲ್ಲಿ ಭೀಮನ ಸಾರಥಿಯಾಗಿದ್ದವನು ವಿಶೋಕ. ಮುಂದೆ ವಿಶೋಕ ಹಾಗೂ ಚಿತ್ರಾಕ್ಷಿಯರ ವಿವಾಹವೂ ಆಗುತ್ತದೆ.
ಭೀಮ ಬಲಂಧರೆಯನ್ನು ವಿವಾಹವಾಗುವ ಮುನ್ನವೇ ಹಿಡಿಂಬೆಯ ಜೊತೆಗೆ ಆತನ ವಿವಾಹವಾಗಿತ್ತು. ಹಾಗೆಯೇ.. ದ್ರೌಪದಿಯ ಜೊತೆಗೂ..
ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ. ಇದು ಭೀಮ ಬಲಂಧರೆಗೆ ಹೇಳುವ ಮಾತು.
"ಹಿಡಿಂಬೆ ನನ್ನ ಮೊದಲ ಪತ್ನಿ. ಅವಳ ಸ್ಥಾನ ಅವಳಿಗಿದೆ. ನಿನ್ನನ್ನು ಅವಳ ಬದಲಿ ಎಂದು ಭಾವಿಸಿಲ್ಲ, ಭಾವಿಸಲಾರೆ. ಬಲಂಧರೆ ಭೀಮನ ಪತ್ನಿ. ಭೀಮ ಬಲಂಧರೆಯ ಪತಿ. ಇದಿಷ್ಟೇ ನಮ್ಮ ವಾಸ್ತವ."
ಆಗಿನ ಕಾಲದಲ್ಲಿ ಬಹುಪತ್ನಿತ್ವ ಜಾರಿಯಲ್ಲಿದ್ದ ಸಮಯ. ಈ ಸಂದರ್ಭದಲ್ಲಿ ಅವರವರ ಸ್ಥಾನವನ್ನು ಅವರವರಿಗೆ ಕೊಡುತ್ತಿದ್ದರಾದರೂ.. ಅಷ್ಟೇ ಪ್ರೀತಿಯನ್ನೂ ಹಂಚಬೇಕಾಗಿತ್ತು. ಬಲಂಧರೆ ಕುತೂಹಲದಿಂದ ಹಿಡಿಂಬೆ, ಹಿಡಿಂಬ ಹಾಗೂ ಬಕರ ಕುರಿತು ರಾಕ್ಷಸರು ಹಾಗೂ ನರಭಕ್ಷಕರು ಎಂದು ಮಾತನಾಡುವಾಗ ಅದಕ್ಕೆ ಭೀಮ ಕೊಡುವ ಉತ್ತರ ಸಮರ್ಪಕವೆನ್ನಿಸಿತು. ಇಲ್ಲಿ ಅತೀಂದ್ರಿಯ ಶಕ್ತಿ ಅಥವಾ ಮತ್ತಿತರ ವಿಚಾರಗಳಿಗಿಂತ.. ವಾಸ್ತವಕ್ಕೆ ಹೊಂದುವಂತೆ ಕಟ್ಟಿಕೊಟ್ಟಿದ್ದಾರೆ.
ಕಾಶಿಯಿಂದ ಬಲಂಧರೆ ಇಂದ್ರಪ್ರಸ್ಥದತ್ತ ಭೀಮನ ಜೊತೆ ಅಡಿಯಿಟ್ಟಳು. ಆಗ ಮೊದಲಿಗೆ ಸಿಕ್ಕಿದ್ದು ಸ್ನೇಹಮಯಿ ಸಹದೇವ. ಸಹದೇವ, ನಕುಲ, ಅರ್ಜುನ, ಯುಧಿಷ್ಠಿರ, ಕುಂತಿ, ದ್ರೌಪದಿ ಎಲ್ಲರೂ ಬಲಂಧರೆಯ ದೃಷ್ಟಿಯಲ್ಲಿ ನಮಗೆ ಕಾಣಸಿಗುತ್ತಾರೆ. ಅದರಲ್ಲಿಯೂ ಸಹದೇವನ ಸ್ನೇಹದ ಸ್ವಭಾವ ಹಾಗೂ ಯುಧಿಷ್ಠಿರನ ಪಗಡೆಯಾಟದ ಹುಚ್ಚು ಆಗಾಗ ಹೆಚ್ಚು ಕಾಣುತ್ತದೆ.
ದ್ರೌಪದಿ ಹಾಗೂ ಬಲಂಧರೆಯರ ಸಮ್ಮಿಲನದಲ್ಲಿ ಬಲಂಧರೆಗೆ ದ್ರೌಪದಿಯ ಕಣ್ಣಲ್ಲಿ ಚಿಕ್ಕ ಇರ್ಷ್ಯೆ ಮೂಡಿದಂತಿತ್ತು ಎಂಬ ಭಾವ ವ್ಯಕ್ತವಾಗುತ್ತದೆ. ಆದರೆ, ಬಲಂಧರೆಗೆ ದ್ರೌಪದಿಯ ಕುರಿತು ಮನದಲ್ಲಿ ಅಸೂಯೆ ಮೂಡಲಿಲ್ಲ ಎಂಬುದು ಸಹಾ ಅಷ್ಟೇ ಸ್ಪಷ್ಟವಾಗಿದೆ.
ಭೀಮನಿಗೆ ಆತನೇ ಚಿಕ್ಕಂದಿನಿಂದ ಸಾಕಿ ಬೆಳೆಸಿದ ಆನೆ ಕೇಶವನ ಕುರಿತು ಇರುವ ವಿಶೇಷ ಪ್ರೀತಿ, ಕಾಳಜಿ ವ್ಯಕ್ತವಾಗುತ್ತದೆ. ಇಲ್ಲಿ ಹೀಗೆ ವ್ಯಕ್ತವಾದ ಪ್ರೀತಿ ಹಾಗೂ ಸಹದೇವ ಅಂದು ಅಲ್ಲಿ ಆಡಿದ ಮಾತು ಮುಂದೆ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿಯೂ ನಮಗೆ ಕಾಣಸಿಗುತ್ತದೆ. ಅದು ಈ ಕಾದಂಬರಿಯಲ್ಲಿ ಲೇಖಕರು ಕನೆಕ್ಟ್ ಮಾಡಿದ ರೀತಿಯಲ್ಲಿ ಇಷ್ಟವಾಯಿತು.
ಸುಭದ್ರೆಯ ಪುಟ್ಟ ಮಗ ಅಭಿಮನ್ಯು ಹುಟ್ಟಿದ ಸಂದರ್ಭ ಹಾಗೂ ಬಲಂಧರೆಯ ಸ್ಪರ್ಶಕ್ಕೆ ಆತ ಪ್ರತಿಕ್ರಿಯಿಸಿದ ರೀತಿ ಅಪ್ಯಾಯಮಾನವಾಗುತ್ತದೆ.
ಅದಾದ ನಂತರ ಬಲಂಧರೆಯಲ್ಲಿಯೂ ಗರ್ಭ ಮೊಳೆಯುವ ಸೂಚನೆ ಕಾಣುತ್ತದೆ. ಅಷ್ಟರಲ್ಲಾಗಲೇ ರಾಜಸೂಯ ಯಾಗಕ್ಕೆ ಸಿದ್ಧತೆಗಳು ಆರಂಭವಾಗಿರುತ್ತವೆ. ಅನಿವಾರ್ಯ ಕಾರಣಗಳಿಂದ ಬಲಂಧರೆ ಇಂದ್ರಪ್ರಸ್ಥಕ್ಕೆ ಬೆನ್ನು ತಿರುಗಿಸಿ ಹೊರಡಬೇಕಾದ ಪ್ರಸಂಗ ಬರುತ್ತದೆ. ಇತ್ತ ಭೀಮ, ಕೃಷ್ಣಾರ್ಜುನರೊಡಗೂಡಿ ಜರಾಸಂಧನನ್ನು ಗೆಲ್ಲಲು ಹೊರಡುತ್ತಾನೆ. ವಿಪರ್ಯಾಸವೆಂದರೆ, ಆತನಿಗೆ ಬಲಂಧರೆ ಗರ್ಭವತಿ ಎಂಬ ಸತ್ಯವೇ ಅರಿವಿರುವುದಿಲ್ಲ. ಆ ವಿಚಾರವನ್ನು ಮುಚ್ಚಿಡಲು ಕಾರಣನಾಗಿದ್ದು ಕೃಷ್ಣ. ಏಕೆ ಎಂಬುದನ್ನು ನೀವೇ ಓದಿ.
ಮಗುವಿನ ಹಾಗೂ ಅವಳ ಕ್ಷೇಮ ಸಮಾಚಾರ ಭೀಮನಿಗೆ ತಿಳಿಯುತ್ತಿತ್ತೋ.. ಇಲ್ಲವೋ.. ವಿಶೋಕನ ಮೂಲಕ ಅಲ್ಲಿನ ಪ್ರತಿ ವಿಚಾರವೂ ಬಲಂಧರೆಗೆ ತಿಳಿಯುತ್ತಲೇ ಇರುತ್ತದೆ. ಅದು ಬಲಂಧರೆಯ ನೆನಪಿನಿಂದ ನಮಗೂ ತಿಳಿಯುತ್ತದೆ. ಭೀಮ ಹಾಗೂ ಬಲಂಧರೆಯ ಮಗ ಸರ್ವಗ ಬೆಳೆದು ಪ್ರಾಪ್ತ ವಯಸ್ಕನಾದಾಗ ಆತನ ವಿವಾಹವನ್ನು ಮಾಡುತ್ತಾರೆ. ಸೇನೇಶನಿಗೆ ಮಕ್ಕಳಿಲ್ಲದ ಕಾರಣ ಸರ್ವಗ ಕಾಶಿಯ ಯುವರಾಜನಾಗುತ್ತಾನೆ. ವಿಪರ್ಯಾಸವೆಂದರೆ, ಅದುವರೆಗೂ ಆತನಿಗೆ ತನ್ನ ತಂದೆಯ ಮುಖ ನೋಡುವ ಸೌಭಾಗ್ಯವೇ ದೊರೆತಿರುವುದಿಲ್ಲ.
ಭೀಮ, ಬಲಂಧರೆ ಹಾಗೂ ಸರ್ವಗರ ಸಮ್ಮಿಲನವಾದದ್ದು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ. ಅದು ಕಾಶಿಯಿಂದ ಪಾಂಡವರ ಬೆಂಬಲವಾಗಿ ಸೈನ್ಯ ಹೊರಟಾಗ. ಅದರ ಮುಂದಾಳತ್ವ ವಹಿಸಿಕೊಂಡು ಸರ್ವಗ ಹೊರಡುತ್ತಾನೆ. ಶ್ರೀರಕ್ಷೆಯಾಗಿ ಬಲಂಧರೆಯೂ..
ಬಲಂಧರೆಗೆ ಅಭಿಮನ್ಯು, ಸೋಮಸುತರ ಭೇಟಿಯೂ ಆಗುತ್ತದೆ. ಹಾಗೆಯೇ ಉಪ ಪಾಂಡವರದ್ದು ಸಹಾ.. ಕುರುಕ್ಷೇತ್ರ ಯುದ್ಧದ ದಿನಗಳು ಹಾಗೂ ದೈನಂದಿನ ದಿನಚರಿಯನ್ನು ನಾವು ಬಲಂಧರೆಯ ನೋಟದ ಮೂಲಕವೇ ಕಾಣುತ್ತೇವೆ. ಶಿಖಂಡಿಯ ಸೇನೆ ಪಾಂಡವರ ಬಿಡಾರದಲ್ಲಿದ್ದ ಸ್ತ್ರೀಯರನ್ನು ಕಾಯುತ್ತಿರುವುದು, ಹಿಡಿಂಬೆ ಹಾಗೂ ಭೀಮರ ಪುತ್ರ ಘಟೋತ್ಕಜ ಬೆಂಬಲವಾಗಿ ಧಾವಿಸಿ ಬರುವುದು ಹಾಗೂ ಆತನ ಮರಣದ ಸಂದರ್ಭದಲ್ಲಿ ಭೀಮ ಅವನಿಗೊಂದು ಗೌರವಪೂರ್ಣ ದೇಹಕ್ರಿಯೆ ಮಾಡುವುದು, ಅಭಿಮನ್ಯುವಿನ ಮರಣ ಇವೆಲ್ಲವೂ ಭಾವುಕರನ್ನಾಗಿಸುತ್ತದೆ.
ಸಾಮಾನ್ಯವಾಗಿ ನಾವು ಮಹಾಭಾರತದಲ್ಲಿ ಅಭಿಮನ್ಯು ಹಾಗೂ ಘಟೋತ್ಕಜರ ಮರಣವನ್ನು ಯುದ್ಧ ಭೂಮಿಯಲ್ಲಿಯೇ ಕಾಣುತ್ತೇವೆ. ಉಪ ಪಾಂಡವರ ಮರಣ ನಂತರ ಅಶ್ವತ್ಥಾಮನಿಂದ ಆಯಿತು ಎಂಬುದು ಗೊತ್ತಿದೆ. ಇಲ್ಲಿ ಸರ್ವಗ ಏನಾಗುತ್ತಾನೆ..? ಆತ ಕುರುಕ್ಷೇತ್ರ ಯುದ್ಧದಲ್ಲಿ ಮೊದಮೊದಲಿಗೆ ಭಾಗವಹಿಸುವುದು ಬೇಡ ಎಂದದ್ದೇಕೆ..? ಅವನು ಮಾತ್ರವಲ್ಲ.. ಚಿಕ್ಕ ವಯಸ್ಸಿನ ಯಾವ ಹುಡುಗರನ್ನೂ ಕುರುಕ್ಷೇತ್ರದ ಕಣಕ್ಕೆ ಬಿಡದೆ ಇದ್ದದ್ದೇಕೆ..? ಸರ್ವಗನ ಕುರಿತು ಭೀಮನ ನಿಲುವು ಏನಾಗಿತ್ತು..?
ಬಲಂಧರೆ ತನ್ನ ಮುಂದಿನ ಬದುಕು ಮತ್ತೆ ಕಳೆಯಲು ಬಂದಿದ್ದು ಕಾಶಿ ಪಟ್ಟಣಕ್ಕೆ. ಅಂದಿನಿಂದ ಆಕೆಯ ಕೊನೆಯ ದಿನದವರೆಗೂ ನೆರಳಂತಿದ್ದದ್ದು ಮಾತ್ರ ಚಿತ್ರಾಕ್ಷಿ ಹಾಗೂ ಗೌರಂಗಿಯರು. ಅದರಲ್ಲಿಯೂ ಗೌರಂಗಿಯಂತೂ ಅವಳನ್ನು ಬಿಟ್ಟಿರುತ್ತಿರಲಿಲ್ಲ.
ಯುಧಿಷ್ಠಿರನ ಜೂಜಿನ ವ್ಯಸನ ಬಲಧರೆಯ ಕಣ್ಣಲ್ಲಿ ಕಂಡ ಹಾಗೆ, ಕೃಷ್ಣನ ಕುರಿತು ಎಲ್ಲರೂ ಮಹಾಪುರುಷನೆಂಬ ನಿಲುವನ್ನೂ ವಿಭಿನ್ನವಾಗಿ ನೋಡುತ್ತೇವೆ. ಆತನ ಕೆಲವು ನಡೆಗಳನ್ನು ಬಲಂಧರೆ ಒಪ್ಪುವುದಿಲ್ಲ.
ಬಲಂಧರೆ ಮತ್ತೆ ಕಾಶಿಗೆ ಧಾವಿಸಿದ್ದೇಕೆ..? ಅದೂ ಭೀಮನಿಲ್ಲದೆ..!
ಕೌರವರ ಪಕ್ಷವನ್ನು ತೊರೆದು ಬಂದ ಯುಯುತ್ಸುವಿಗೆ ಸಿಕ್ಕ ಗೌರವಕ್ಕೂ.. ಯುಧಿಷ್ಠಿರ ತನ್ನ ತಮ್ಮಂದಿರಿಗೆ ನೀಡಿದ ಗೌರವಕ್ಕೂ, ಸ್ಥಾನಮಾನಕ್ಕೂ ಇರುವ ವ್ಯತ್ಯಾಸವೂ ಕಾಣುತ್ತದೆ. ಕಾಶಿಗೆ ಬಂದರೆ ಮಹಾರಾಜನ ಪಟ್ಟವನ್ನೇ ಬಿಟ್ಟುಕೊಡಲು ಸಿದ್ಧವಿದ್ದರೂ.. ಭೀಮ ಇಲ್ಲಿಗೆ ಬರಲು ಸಿದ್ಧವಿರುವುದಿಲ್ಲ. ಬಲಂಧರೆಯ ದೃಷ್ಟಿಯಲ್ಲಿ ಭೀಮನ ಕುರಿತ ಗೌರವ ಎಂದಿಗೂ.. ಯಾವ ಸಂದರ್ಭದಲ್ಲಿಯೂ ಕಿಂಚಿತ್ತು ಕಡಿಮೆಯಾಗುವುದಿಲ್ಲ. ಇಷ್ಟಾದರೂ ಕಾಯುವಿಕೆ ಮುಗಿಯುವುದಿಲ್ಲ.
ಈ ಶೀರ್ಷಿಕೆಗೂ ಹಾಗೂ ಬಲಂಧರೆಯ ಕಾಯುವಿಕೆಗೂ ಬಹಳ ನಿಕಟವಾದ ಸಂಬಂಧವಿದೆ. ಬಲಂಧರೆಯ ಕೊನೆಯ ಉಸಿರಿನವರೆಗೂ ಆಕೆಯ ಬದುಕನ್ನು ಕಾಣಬಹುದು.
ಈ ಕಾದಂಬರಿಯ ಓದಿಗೆ ಬಹಳಷ್ಟು ದಕ್ಕುತ್ತದೆ. ಮೇಲೆ ಉಲ್ಲೇಖಿಸಿರುವುದು ಕೇವಲ ಕುತೂಹಲವನ್ನು ತಣಿಸುವ ಕೆಲವು ವಿಚಾರಗಳು ಹಾಗೂ ಕಾದಂಬರಿಯಲ್ಲಿ ನನಗೆ ಬಹಳ ಇಷ್ಟವಾದ ವಿಚಾರಗಳನ್ನು ಮಾತ್ರ. ಸತ್ವಯುತವಾದ ಭಾಷೆಯ ಮೂಲಕ ಮಹಾಭಾರತವೆಂಬ ಮಹಾಸಮುದ್ರದಲ್ಲಿ ಕಳೆದು ಹೋದ ಬಲಂಧರೆಯನ್ನು ಮುಖಾಮುಖಿಯಾಗಿಸುತ್ತಾರೆ ಲೇಖಕರು. ಇವರ ಲೇಖನಿಯಿಂದ ಮತ್ತಷ್ಟು ಸತ್ವಯುತ ಪುಸ್ತಕಗಳು ಮೂಡಿಬರಲಿ ಎಂಬ ಹಾರೈಕೆ ನನ್ನದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ