ಪುಸ್ತಕದ ಶೀರ್ಷಿಕೆ : ಮನೆ ಬೆಳಕಾಯ್ತು
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಹೇಮಂತ ಸಾಹಿತ್ಯ
ಪ್ರಥಮ ಮುದ್ರಣ : 1990
ಎರಡನೇ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 160
ಬೆಲೆ : 80 ರೂ.
ಮನೆ ಬೆಳಗಲು ಆಕೆ ಕೇವಲ ಸೊಸೆಯೇ ಆಗಬೇಕಿಲ್ಲ. ಮಗಳೂ ಆಗಬಹುದು. ಮಗಳಿಂದ ಮನೆ ಬೆಳಗಿತ್ತು. ಆದರೆ, ತನ್ನನ್ನು ತಾನು ಸುಟ್ಟುಕೊಂಡು ಬೆಳಗಿಸಿಕೊಂಡ ಮಗಳೆಂಬ ಹಣತೆಗೆ ನೀಡಿದ ಗೌರವವೆಷ್ಟು..?? ಮನುಷ್ಯರು ಅದಕ್ಕೆ ತಕ್ಕ ಪ್ರತಿಫಲ ನೀಡಿದರೋ ಇಲ್ಲವೋ.. ಆದರೆ, ಆಕೆಯ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಕ್ಕಿತು. ಜೊತೆಗೆ ದೈವ ಬೆಂಬಲವೂ ಇತ್ತೆಂದರೂ ತಪ್ಪಾಗಲಾರದು. ಈ ಕಾದಂಬರಿಯ ನಾಯಕಿ ಜಯಶ್ರೀ.
ಗೋವಿಂದರಾಯರು ಸೀತಮ್ಮನವರಿಗೆ ಐವರು ಮಕ್ಕಳು. ಜಯಶ್ರೀ ಹಿರಿಯವಳು. ಕೇಶವ, ಮಾಧವ ಆಕೆಯ ತಮ್ಮಂದಿರು. ವೀಣಾ, ವಿದ್ಯಾ ಆಕೆಯ ತಂಗಿಯರು.
ಜಯಶ್ರೀ ಕುರಿತು ತಿಳಿಯುವ ಮುನ್ನ ಆಕೆಯ ತಾಯಿಯ ಕುರಿತು ಸಹಾ ತಿಳಿಯಬೇಕು. ನಾಗಮ್ಮ ಸೀತಮ್ಮ,ಪದ್ಮ ಹಾಗೂ ಶ್ರೀನಿವಾಸರ ತಾಯಿ. ಸೀತಮ್ಮ ಹಾಗೂ ಪದ್ಮರ ಅಣ್ಣ ಶ್ರೀನಿವಾಸ ತಾನು ಪ್ರೀತಿಸಿದ ಹುಡುಗಿ ರಾಜಲಕ್ಷ್ಮಿಯನ್ನು ವಿವಾಹವಾಗಲು ತಂಗಿಯರ ವಿವಾಹಕ್ಕಾಗಿ ತುದಿಗಾಲಲ್ಲಿ ನಿಂತಿದ್ದವನು.
ಸೀತಮ್ಮ ರೂಪವತಿಯಾದರೂ ಆ ಕುರಿತು ಅಹಂಕಾರವಿತ್ತು. ಎಷ್ಟೇ ಹುಡುಕಿದರೂ ವರಸಾಮ್ಯ ಹೊಂದದೇ.. ಎರಡನೇ ವಿವಾಹದ ವರನನ್ನು ಒಪ್ಪದೇ ತನ್ನ ಕುರೂಪಿ ತಂಗಿ ಮದುವೆಯಾದಾಗ.. ಅವಳ ಭಾಗ್ಯ ನೆನೆದು ಕರುಬುತ್ತಿದ್ದರು. ಸ್ವಂತ ತಂಗಿಯ ಮೇಲೆಯೂ ಅಸೂಯೆ. ಮನೆಯಲ್ಲಿಯೂ ಒತ್ತಡ ಹೆಚ್ಚಿದಾಗ ಮಾಸ್ತರರಾಗಿದ್ದ ಗೋವಿಂದರಾಯರನ್ನು ಒಪ್ಪಿ ಮದುವೆಯಾಗಿದ್ದರು. ಗೋವಿಂದರಾಯರು ತಬ್ಬಲಿ. ಅಕ್ಕ-ಬಾವ ಇದ್ದರೂ.. ಅವರೊಡನೆ ಒಡನಾಟವಿರಲಿಲ್ಲ. ದುಡ್ಡು ಕಾಸಿನ ಅಪೇಕ್ಷೆಯಿರದ ಆತ ಸರಳವಾಗಿಯೇ ವಿವಾಹವಾದವರು. ಮನೆಯಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿ.
ಪದ್ಮ ರೂಪವತಿಯೇನಲ್ಲ.. ರೂಪವತಿಯೆಂಬ ಹಮ್ಮಿನಿಂದ ಸೀತಮ್ಮ ಆಕೆಯನ್ನು ಕೆಣಕುತ್ತಿದ್ದರೂ ಸುಮ್ಮನಿದ್ದವಳಲ್ಲ. ಎರಡನೇ ವಿವಾಹವಾದರೂ.. ಮಲಮಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾ ಇದ್ದುದರಲ್ಲಿ ಸುಖವಾಗಿದ್ದವರು. ಮಲಮಗಳಾದ ಪದ್ಮನ ಮಗ ಪುನೀತನ ಹುಟ್ಟುಹಬ್ಬವನ್ನೂ ಆಚರಿಸಿದ್ದಳು. ಇಬ್ಬರು ಗಂಡುಮಕ್ಕಳು. ಆದರೆ, ಮಕ್ಕಳಾರೂ ರೂಪದಲ್ಲಿಯೂ, ಓದಿನಲ್ಲಿಯೂ ಮುಂದಿರಲಿಲ್ಲ. ಅಣ್ಣ-ಅತ್ತಿಗೆ, ಅಮ್ಮ ಸೀತಮ್ಮನಿಗಿಂತಲೂ ಪದ್ಮಳನ್ನೇ ಹೆಚ್ಚು ಆದರಿಸುತ್ತಿದ್ದರು. ಜಯಶ್ರೀಯನ್ನೂ ಮಗಳಂತೆಯೇ ಕಂಡವರು. ಅಜ್ಜಿ ನಾಗಮ್ಮನಿಗೂ ಜಯಶ್ರೀ ಅಚ್ಚುಮೆಚ್ಚು. ಶ್ರೀನಿವಾಸನ ಪತ್ನಿಗೆ ಶ್ರೀಮಂತಿಕೆಯ ಅಹಂ ಇದ್ದರೂ, ಬಡತನ-ಸಿರಿತನದ ಲೆಕ್ಕಿಸದೆ ಜಯಶ್ರೀಯ ರೂಪ, ಚುರುಕುತನ, ಕೆಲಸ ಕಂಡು ಸೊಸೆಯನ್ನಾಗಿಸಿಕೊಳ್ಳಲು ಬಯಸಿದ್ದವರು.
ಗೋವಿಂದರಾಯರು ಗೆಳೆಯ ಶ್ರೀನಾಥನ ಬಳಿ ಆಗಾಗ ಸಹಾಯ ಪಡೆಯುತ್ತಿದ್ದರಲ್ಲದೇ, ಮಕ್ಕಳಿಗೆ ಟ್ಯೂಷನ್ ಹೇಳಿಯೂ ಸಂಪಾದಿಸುತ್ತಿದ್ದರು. ಆದರೂ.. ಸಂಸಾರಕ್ಕೆ ಅದು ಕಡಿಮೆಯೇ. ಮಗಳ ಮದುವೆಗೆ ಸಂಬಂಧ ಕೂಡಿಬಂದಿದ್ದರೂ.. ದೂರಲೋಚನೆಯಿಂದ ಜಯಶ್ರೀಯನ್ನು ಉದ್ಯೋಗಕ್ಕೆ ಹಚ್ಚಿದರು.
ತಂದೆ ಕೆಲಸ ಮಾಡುತ್ತಿದ್ದ ಮಿಡಲ್ ಸ್ಕೂಲ್ ವಿಭಾಗದಲ್ಲಿಯೇ ಜನರಲ್ ಸಬ್ಜೆಕ್ಟ್ ಹಾಗೂ ಹಿಂದಿ ಬೋಧಿಸಲು ಸೇರಿದಳು. ಹಿಂದಿ ವಿಶಾರದಾ ಮುಗಿಸಿಕೊಂಡದ್ದು ಅವಳಿಗೆ ವರವಾಗಿತ್ತು. ತಂದೆ-ತಾಯಿಯ ಮಾತಿಗೆ ಬೆಲೆಕೊಟ್ಟು ಮದುವೆಗಿಂತ ಉದ್ಯೋಗಕ್ಕೆ ಪ್ರಾಮುಖ್ಯತೆ ನೀಡಿದಳು. ಬಡತನದಲ್ಲಿಯೇ ಬೆಳೆದಿದ್ದ ಆಕೆಗೆ ಉಳಿತಾಯಕ್ಕಿಂತಲೂ ಆ ಕ್ಷಣದಲ್ಲಿ ಹೆಚ್ಚಾಗಿ ಹೆಚ್ಚೆನಿಸಿದ್ದು.. ತಮ್ಮ ಆಸೆಗಳನ್ನೆಲ್ಲಾ ಪೂರೈಸಿಕೊಳ್ಳಬೇಕೆಂಬುದು. ಅಲ್ಲದೆ, ತಾಯಿಯ ಆಸೆಯನ್ನೆಲ್ಲಾ ಪೂರೈಸಿಕೊಳ್ಳಲು ನೆರವಾದಳು. ತಾನೇ ಒಪ್ಪಿಕೊಂಡ ಗಂಡ, ಬಡತನವನ್ನು ಸಹಿಸಿಕೊಂಡು.. ತಮ್ಮ ಆಸೆಗಳನ್ನೆಲ್ಲಾ ಅದುಮಿಟ್ಟುಕೊಂಡು ಬದುಕುತ್ತಿದ್ದ ಸೀತಮ್ಮ ಈಗ ಬಣ್ಣವಾಗಿ ಉಟ್ಟು, ತೊಟ್ಟು ನಲಿದಾಡುತ್ತಿದ್ದರು.
ಶ್ರೀನಿವಾಸ ಹಾಗೂ ರಾಜಲಕ್ಷ್ಮಿಯರ ಮುದ್ದಿನ ಏಕೈಕ ಮಗ ವೆಂಕಟೇಶ ಶ್ರೀಮಂತಿಕೆಯಿಂದಲೇ ಬೆಳೆದಿದ್ದವನು. ಬ್ಯಾಂಕ್ ಆಫೀಸರ್ ಆಗಿದ್ದ ರೂಪವಂತ. ಆತನಿಗೆ ವ್ಯಾಮೋಹವಿದ್ದದ್ದು ರೂಪದ ಮೇಲೆ. ಆದರೆ, ಜಯಶ್ರೀಯ ಕೆಲಸಕ್ಕೆ ಸೇರಿ ಮದುವೆ ತಿರಸ್ಕರಿಸಿದ್ದಕ್ಕೆ ಆಕೆಯ ಮೇಲಿನ ಕೋಪದಿಂದ ಹಾಗೂ ಹಣದ ವ್ಯಾಮೋಹಕ್ಕೆ ಸಿಲುಕಿ ಪದ್ಮಳ ಸ್ವಂತ ಮಗಳು ಲಲಿತಳನ್ನು ಮದುವೆಯಾದ. ಜಯಶ್ರೀಯಷ್ಟು ಭಾವುಕನೂ ಅಲ್ಲ. ಮದುವೆಯಾದ ಮೇಲೂ ಜಯಶ್ರೀಯ ಮೇಲೆ ಮೋಹವಿಟ್ಟುಕೊಂಡಿದ್ದವನು.
ಗೋವಿಂದರಾಯರ ಆತ್ಮೀಯ ಗೆಳೆಯರಾಗಿದ್ದ ಶ್ರೀನಾಥ್ ಕಷ್ಟಕಾಲದಲ್ಲಿ ಸಂಸಾರ ಸರಿದೂಗಿಸಲು ಸಹಾಯ ಮಾಡುತ್ತಿದ್ದವರು, ಜಯಶ್ರೀಯ ಕೆಲಸದ ವಿಚಾರದಲ್ಲಿಯೂ ಸಹಾಯಕವಾಗಿದ್ದವರು. ತಾನು ಹೇಳಿದ ವರನನ್ನು ಜಯಶ್ರೀ ಒಪ್ಪಲಿಲ್ಲವೆಂದ ಕಾರಣಕ್ಕಾಗಿ.. ಅಹಂಗೆ ಪೆಟ್ಟು ಬಿದ್ದಂತಾಗಿ ವರ್ತನೆಯನ್ನೇ ಬದಲಾಯಿಸಿಕೊಂಡರು. ಆಕೆಯ ತಂದೆಯನ್ನು ಟ್ಯೂಷನ್ ನಿಂದ ಬಿಡಿಸಿದಾಗ ಜಯಶ್ರೀ ಅವರಿಗೆ ಸ್ಟೋರ್ ಕೀಪರ್ ಕೆಲಸ ಕೊಡಿಸಿದಳು.
ತಮ್ಮ ಕೇಶವನಿಗೆ ಪಾಕೆಟ್ ಮನಿ ಹೊಂದಿಸಿಕೊಳ್ಳುವ ಸಲುವಾಗಿ ಕೆಲ ವಿದ್ಯಾರ್ಥಿಗಳ ಟ್ಯೂಷನ್ ನಿರ್ವಹಿಸಲು ವಹಿಸಿದ್ದಳು. ಆದರೂ, ಆಕೆಯ ಬಗ್ಗೆ ಕಹಿಯನ್ನೇ ಬೆಳೆಸಿಕೊಂಡವನು ಓದು ಮುಗಿದ ತಕ್ಷಣ ನೌಕರಿ ಹಿಡಿದು ಮನೆಯಿಂದ ದೂರ ಉಳಿಯಲು ಹವಣಿಸಿದ. ಮನೆಯಲ್ಲಿ ಹೇಳದೆ,ಕೇಳದೆ ಅಂತರ್ಜಾತಿಯ ವಿವಾಹವಾಗಿ ಮನೆಯಿಂದ ದೂರವಾದ.
ಜಯಶ್ರೀಯ ತಂಗಿ ವೀಣಾ ತಾಯಿ ಮನೆಯಲ್ಲಿಲ್ಲದ ಸಮಯದಲ್ಲಿ ರಾಜನೊಡನೆ ಸ್ನೇಹ ಬೆಳೆಸಿಕೊಂಡಳು. ಸ್ನೇಹ ದುರ್ಬಳಕೆಯಾಗಿ ಗರ್ಭಿಣಿಯಾಗಿದ್ದಳು. ಜಯಶ್ರೀಗೆ ಮದುವೆಯಾಗದೆ, ಅವಳಿಗೆ ರಾಜನೊಂದಿಗೆ ಮದುವೆ ಮಾಡಿಬಿಟ್ಟರು. ಜಯಶ್ರೀಯ ಮತ್ತೊಬ್ಬ ತಂಗಿ ವಿದ್ಯಾ ಕೂಡಾ ಪ್ರೀತಿಸಿ ಮದುವೆಯಾದಳು.
ಜಯಶ್ರೀಯ ಕೊನೆಯ ತಮ್ಮ ಮಾಧವನಿಗೆ ಅದೇ ಊರಿನ ಎಲೆಕ್ಟ್ರಿಕ್ ಶಾಪ್ ನಲ್ಲಿ ಕೆಲಸ ಸಿಕ್ಕಿತು. ಸಿಡಿದೆದ್ದು ಮನೆ ಬಿಟ್ಟು ಹೋಗದಿದ್ದರೂ.. ತಾಯಿಯ ಚಿತಾವಣೆಗೂ ಸಿಲುಕಲಿಲ್ಲ. ನಿರ್ಲಿಪ್ತ ಸ್ವಭಾವದ ಹುಡುಗನೂ ದೂರಾದ.
ಜಯಶ್ರೀ ಎಲ್ಲರಿಗೂ ಅದರಲ್ಲೂ ತಾಯಿಗಂತೂ ಆಕೆ ಮಾಡಿದ್ದು ಹೆಚ್ಚೇ ಇದ್ದಿತ್ತು. ಆದರೆ, ಕೈಯಲ್ಲಿ ಕೆಲಸವಿರುವಷ್ಟು ದಿನ ಮಾತ್ರವಿದ್ದ ಹಣವಿತ್ತು. ನೌಕರಿ ಹೋಗಿ, ಹಣವೂ ಖಾಲಿಯಾಗಿತ್ತು. ಉಳಿತಾಯದ ಮಹತ್ವ ಅರ್ಥವಾಗುವಷ್ಟರಲ್ಲಿ ತನ್ನವರಿಗಾಗಿ ಮಾಡಿದ್ದೆನೆಂಬ ಭ್ರಮೆಯೂ ಹರಿದಿತ್ತು.
ಸುನಯನ ದೆಸೆಯಿಂದ ಸಾಹಿತ್ಯ ಆಕೆಯ ಕೈಬಿಡದೆ.. ಅಂದುಕೊಳ್ಳದಿದ್ದರೂ ಲೇಖಕಿಯಾದಳು. ಸುನಯನ ಯಾರು ? ಆದರೆ, ಲೇಖಕಿಯಾಗಿ ಅವಳು ಸಂಪಾದಿಸಿದ್ದೇನು..? ಶ್ರೀಹರಿಯ ಭೇಟಿ ಅವಳ ಬದುಕಲ್ಲಿ ಮೂಡಿಸಿದ ಬದಲಾವಣೆಗಳೇನು..? ಅರ್ಚಕರ ಕುಟುಂಬದವರ ದೆಸೆಯಿಂದ ಅವಳ ಬದುಕಲ್ಲಿ ಬೆಳಕು ಮೂಡಿತೇ..? ವೆಂಕಟೇಶ ಹಾಗೂ ಲಲಿತರ ದಾಂಪತ್ಯ ಹೇಗಿತ್ತು ? ಜಯಶ್ರೀ ದಾಂಪತ್ಯ ಜೀವನ ಯಾರೊಂದಿಗೆ ಶುರುವಾಯಿತು ಹಾಗೂ ಹೇಗಿತ್ತು.. ಎಲ್ಲವನ್ನೂ ತಿಳಿಯಲು ಓದಿ 'ಮನೆ ಬೆಳಕಾಯ್ತು' ಕಾದಂಬರಿಯನ್ನು.
ಹಣವಿಲ್ಲದಾಗ ತಾಯಿಯ ನಡೆ ಹೀಗೂ ಇರಬಹುದಾ ಎಂದು ಅಚ್ಚರಿಯಾಗುತ್ತದೆ. ಹಣವೇ ಮುಖ್ಯವಾದಾಗ ಬಾಂಧವ್ಯ ನಶಿಸುವ ಬಗೆಯನ್ನೂ ಕಾಣಬಹುದಾಗಿದೆ.
ಕಥಾನಾಯಕಿ ಲೇಖಕಿಯಾಗುವ ವಿಶೇಷ ಇಲ್ಲಿದೆ. ಆಕೆಗೆ ಭಾವುಕತೆ ಇದ್ದರೂ.. ಮೊದಲಿನಿಂದಲೂ ಸಾಹಿತ್ಯದ, ಬರವಣಿಗೆಯ ಕ್ಷೇತ್ರದಲ್ಲಿ ಅಷ್ಟಾಗಿ ತೊಡಗಿಕೊಂಡವಳಲ್ಲ. ಆದರೆ, ಸುನಯನ ಎಂಬ ಲೇಖಕಿಯ ಪ್ರಭಾವದಿಂದ ಸಾಹಿತ್ಯವನ್ನು ಅಭ್ಯಸಿಸಿ, ವಿಮರ್ಶೆಗಳನ್ನು, ಅತ್ಯುತ್ತಮ ಪುಸ್ತಕಗಳನ್ನು ಓದಿ.. ಓದನ್ನೇ ಮುನ್ನುಡಿಯಾಗಿಸಿಕೊಂಡು ಸೂಕ್ಷ್ಮ ಗ್ರಹಿಸುವಿಕೆಯಿಂದ ಲೇಖಕಿಯಾದವರು.
'ಹೆಣ್ಣೊಂದು ಕಲಿತರೆ, ಶಾಲಿಯೊಂದು ತೆರೆದಂತೆ' ಎಂದು ಹೇಳುತ್ತಾರೆ. ಕೇವಲ ಕಲಿಯುವುದು ಮಾತ್ರವಲ್ಲದೇ.. ತನ್ನ ಜ್ಞಾನವನ್ನು ಹಾಗೂ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸರಿಯಾದ ಹಾದಿಯಲ್ಲಿ ಸಾಗಿದಾಗ ಅದಕ್ಕೆ ದೈವ ಬೆಂಬಲವು ಸಿಕ್ಕಿ, ಒಳ್ಳೆಯ ಮನಯೂ ಸಿಕ್ಕಿ, ಉಳಿತಾಯದ ಪಾಠವನ್ನು ಕಲಿತು ಮನೆಯನ್ನು ಬೆಳಗುವ ಪರಿ ಅಚ್ಚರಿಗೊಳಿಸುತ್ತದೆ. ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿ, ನಂತರ ಪಡೆಯುವ ಸುಖ ಹಾಗೂ ನೆಮ್ಮದಿಗೆ ಹೆಚ್ಚಿನ ಬೆಲೆ ಇರುತ್ತದೆ. ಜಯಶ್ರೀಯೂ ಹಂತ-ಹಂತವಾಗಿಯೇ ದುಡಿಮೆಯ ಹಾಗೂ ಕಷ್ಟದ ಹಾದಿಯಲ್ಲಿ ಎಂದಿಗೂ ಹತಾಶಳಾಗದಂತೆ ಸಾಗುತ್ತಾ ಬದುಕನ್ನು ಬೆಳಗಿಕೊಳ್ಳುತ್ತಾಳೆ. ಅಂತೆಯೇ.. ಹುಟ್ಟಿದ ಹಾಗೂ ಮೆಟ್ಟಿದ ಮನೆಯನ್ನು ಬೆಳಗುತ್ತಾಳೆ. ಚೆಂದದ ಕಾದಂಬರಿಯ ಸುಂದರ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ