ಪುಸ್ತಕದ ಶೀರ್ಷಿಕೆ : ಹಿಮಗಿರಿ ನವಿಲು
ಲೇಖಕರು : ಸಾಯಿಸುತೆ
ಪ್ರಕಾಶಕರು : ಕರ್ನಾಟಕ ಸಾಹಿತ್ಯ ಪ್ರಕಾಶನ
ಪ್ರಥಮ ಮುದ್ರಣ : 1982
ದ್ವಿತೀಯ ಮುದ್ರಣ : 2010 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 154
ಬೆಲೆ : 90 ರೂ.
ಮನುಷ್ಯನ ಬದುಕಲ್ಲಿ ಅವನಿಟ್ಟ ನಂಬಿಕೆಗಳು ಹಾಗೂ ಅವನಿಗೆ ಹೆಚ್ಚು ಹಚ್ಚಿಕೊಂಡ ಸಂಬಂಧಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯೆ ಸಿಗದಿದ್ದಾಗ.. ಅವನ ಪರಿಸ್ಥಿತಿ ಏನು ಅವನ ತಲ್ಲಣಗಳೇನು ಎನ್ನುವ ಚಿತ್ರಣ ಹೊಂದಿರುವ ಸುಂದರ ಕಾದಂಬರಿ ಹಿಮಗಿರಿ ನವಿಲು. ಈ ಕಾದಂಬರಿಯಲ್ಲಿ ನನಗೆ ಇಷ್ಟವಾದ ಮತ್ತೊಂದು ಅಂಶವೆಂದರೆ ಕೆಲವೊಮ್ಮೆ ಮನುಷ್ಯ ತಾನು ಪ್ರೀತಿಸಿದ್ದನ್ನು ಹೆಚ್ಚು ಕಾಲ ತನ್ನ ಬಳಿ ಇರಿಸಿಕೊಳ್ಳದಿದ್ದರೂ.. ತಾನು ಅಷ್ಟೇ ಪ್ರೀತಿ, ಅಂತಃಕರಣವನ್ನು ಅವನಿಗರಿವಿಲ್ಲದೆಯೇ ಮತ್ತೊಬ್ಬರಿಂದ ಪಡೆಯುತ್ತಿರುತ್ತಾನೆ.
ಡಾಕ್ಟರ್ ಚಕ್ರವರ್ತಿ ಹಾಗೂ ಜಗದೀಶ್ ಇಬ್ಬರೂ ಒಳ್ಳೆಯ ಸ್ನೇಹಿತರು. ಚಿಕ್ಕಂದಿನ ಸ್ನೇಹ ಈಗ ಹೆಚ್ಚು ಆಪ್ತವಾಗಿತ್ತು. ಭಾವನೆಗಳನ್ನು ಹಂಚಿಕೊಳ್ಳಲು, ನೋವು-ನಲಿವನ್ನು ಪರಸ್ಪರರು ಹೇಳಿಕೊಳ್ಳಲು, ಅನುಭವಿಸಲು ಇಬ್ಬರಿಗೂ ಒಬ್ಬರಿಗೊಬ್ಬರು ಬೇಕಿತ್ತು.
ಜಗದೀಶ್ ಮಗಳು ಹುಟ್ಟಿದಾಗಲೇ ತನ್ನ ಪತ್ನಿಯನ್ನು ಕಳೆದುಕೊಂಡಿದ್ದರು. ಮಗಳು ಗಾಯಿತ್ರಿಯನ್ನು ಜೀವವೆನ್ನುವಂತೆ ಪ್ರೀತಿಸಿದ್ದರು. ಈಗಲೂ ಅವರು ನೆನಪಿಸಿಕೊಂಡರೆ ಪತ್ನಿ ಸರಸ್ವತಿಯ ಮುಖ ಹೆಚ್ಚು ನೆನಪಿಗೆ ಬರುತ್ತಿರಲಿಲ್ಲ. ಅವಿಭಕ್ತ ಕುಟುಂಬದಲ್ಲಿ, ಸಂಪ್ರದಾಯದಲ್ಲಿ ಬೆಳೆದಿದ್ದ ಹೆಣ್ಣು ಸರಸ್ವತಿಯನ್ನು ಮದುವೆಯಾಗಿದ್ದರು. ಅವಿಭಕ್ತ ಕುಟುಂಬ ಒಡೆದು ಹೋಗುವ ಸಮಯಕ್ಕೆ ಗಾಯಿತ್ರಿ ಹುಟ್ಟಿದ್ದು. ಮಗು ಹೆತ್ತು ಕಣ್ಮುಚ್ಚಿಕೊಂಡಳು. ಅವರ ಊಟ-ತಿಂಡಿಯನ್ನು ಗಮನಿಸುತ್ತಾ.. ಗಾಯತ್ರಿಯನ್ನು ಸಾಕಿದ್ದು ಆಕೆಯ ದೂರದ ಸಂಬಂಧಿ ಅಂಬಕ್ಕ. ಗಾಯಿತ್ರಿಯ ಮಿಡಲ್ ಸ್ಕೂಲ್ ನಂತರ ಭೇಟಿಯಾದ ಚಕ್ರವರ್ತಿ ಅವಳ ಬುದ್ಧಿವಂತಿಕೆಯನ್ನು ಗಮನಿಸಿ ಸಿಟಿಯಲ್ಲಿ ಶಿಕ್ಷಣ ಕೊಡಿಸುವಂತೆ ಬುದ್ಧಿ ಹೇಳಿದರು. ಮುಂದೆ ಉನ್ನತ ಶಿಕ್ಷಣದಲ್ಲಿ ಕಾಂಪ್ಲೆಕ್ಸ್ ಬೆಳೆಯಬಾರದು ಎಂಬುದು ಅವರ ಕಳಕಳಿಯಾಗಿತ್ತು. ಆದರೆ, ಅಂಬಕ್ಕ ಅದಕ್ಕೆ ಒಪ್ಪಲಿಲ್ಲ. ಚಕ್ರವರ್ತಿ ತಮ್ಮ ಮನೆಯಲ್ಲಿರಿಸಿಕೊಂಡು ಓದಿಸುತ್ತೇನೆ ಎಂಬುದಕ್ಕೂ ಒಪ್ಪದಿದ್ದಾಗ.. ಜಗದೀಶ್ ಸಿಟಿಯಲ್ಲಿ ಮನೆ ಮಾಡಿದ್ದರು. ಅಲ್ಲಿ ಅಡುಗೆ-ತಿಂಡಿಗೆ ಸರಸ್ವತಿಯ ದೂರದ ಸಂಬಂಧಿಯಾಗಿದ್ದ ಭರಣಿ ಇದ್ದನು. ಅಂಬಕ್ಕ ಆಳು-ಕಾಳುಗಳನ್ನು ನೋಡುತ್ತಾ ಹಳ್ಳಿಯಲ್ಲಿಯೇ ಉಳಿದರು. ಜಗದೀಶ್ ಎರಡು ಕಡೆಗೂ ಬಂದು ಹೋಗಿ ಮಾಡುತ್ತಿದ್ದರು.
ಅಪ್ಪ.. ಅಪ್ಪ.. ಎಂದು ಹಿಂದೆ ಮುಂದೆ ಸುತ್ತುತ್ತಾ ಹೊಸ ಲೋಕ ಸೃಷ್ಟಿಸಿದ್ದ ಮಗಳನ್ನು ಅವಳೇ ಜೀವ ಎಂದುಕೊಂಡಿದ್ದರು. ಮೆರಿಟ್ ಸ್ಟೂಡೆಂಟ್ ಅಲ್ಲದ ಅವಳನ್ನು ಡೊನೇಷನ್ ಕೊಟ್ಟು ಮೆಡಿಕಲ್‌ಗೆ ಸೇರಿಸಿದರು. ಆದರೆ, ಅವಳ ಹೊಸ ಜಗತ್ತಿನಲ್ಲಿ ಅವಳ ಸೀನಿಯರ್ ಆಗಿದ್ದ ದೇಶಪಾಂಡೆಯ ಪರಿಚಯ ಪ್ರೇಮಕ್ಕೆ ತಿರುಗಿತ್ತು. ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಆತನೊಟ್ಟಿಗೆ ವಿವಾಹ ಮಾಡಿಕೊಂಡು ವಿದೇಶಕ್ಕೆ ಹಾರಿದಳು. ಜಗದೀಶ್ ರವರಿಗೆ ಇಷ್ಟವಿಲ್ಲದಿದ್ದರೂ.. ಮಗಳ ಆಸೆಗೆ ಕಲ್ಲು ಹಾಕಲಿಲ್ಲ. ಆಕೆ ಒಂದೆರಡು ವರ್ಷ ಕಳೆದರೆ ಮತ್ತೆ ವಾಪಸ್ ಬರುತ್ತಾಳೆ ಎಂಬ ನಂಬಿಕೆಯಿಂದ ಅವಳ ಮಾತಿನಂತೆ ಅದೇ ಮನೆಯಲ್ಲಿ ಕಾಯುತ್ತಿದ್ದರು. ಯಾರೆಷ್ಟೇ ಹೇಳಿದರೂ ವಿದೇಶಕ್ಕೆ ಹೋದವರು ವಾಪಸ್ ಬರುವುದಿಲ್ಲ ಎನ್ನುವ ಸತ್ಯವನ್ನು ನಂಬಲಿಲ್ಲ. ಮುಂದಿನ ಮನೆಯ ನಾಯರ್ ದಂಪತಿಗಳಿಗೆ ಆ ಕಟುಸತ್ಯ ಅನುಭವಿಸಿ ಅರ್ಥವಾಗಿತ್ತು. ಅದೇ ನೋವಲ್ಲಿ ಯಾರೊಂದಿಗೂ ಬೆರೆಯದೇ ಬದುಕುತ್ತಿದ್ದರು ಅವರು.
ಅಂಬಕ್ಕ ತನ್ನ ದೂರದ ಸಂಬಂಧಿ ಗೌರಿಯನ್ನು ದೂರದ ಆಸೆಯಿಂದ ಮನೆಗೆ ತಂದಿರಿಸಿಕೊಂಡಿದ್ದಳು. ಚಿಕ್ಕ ವಯಸ್ಸಿನಲ್ಲಿಯೇ ಗಂಡ ತೀರಿಹೋಗಿ, ತವರು ಮನೆ, ಗಂಡನ ಮನೆ ಎರಡು ಕಡೆಯಲ್ಲಿಯೂ ಕಷ್ಟವಿತ್ತು ಎಂದು ಜಗದೀಶ್ ಗೆ ಹೇಳಿದಾಗಲೂ ಅವರ ಮನದಾಸೆ ಜಗದೀಶ್ ಗೆ ಅರ್ಥವಾಗಲಿಲ್ಲ. ಅವರು ಗೌರಿಯನ್ನು ಆ ದೃಷ್ಟಿಯಲ್ಲಿ ನೋಡಲಿಲ್ಲ. ಹಾಗೆ, ಅವರಿಗೆ ಆಸರೆ ಬೇಕಿದ್ದರೆ ಸರಸ್ವತಿಯ ತೀರಿಕೊಂಡ ನಂತರವೇ ವಿವಾಹವಾಗುತ್ತಿದ್ದರೇನೋ..
ಜಗದೀಶ್ ರವರ ಬದುಕಿನಲ್ಲಿ ಮತ್ತೊಂದು ಹೆಣ್ಣಿನ ಪ್ರವೇಶವಾಗಿತ್ತು. ಆಕೆ ನಾಯರ್ ಮನೆಗೆ ಬಂದಿದ್ದ ಹುಡುಗಿ ಲಾವಣ್ಯ. ಅವರ ಮಗಳು ಗಾಯಿತ್ರಿಯ ವಯಸ್ಸಿನವಳೇ.. ಗಾಯತ್ರಿಯಲ್ಲಿಲ್ಲದ ಲವಲವಿಕೆ, ಜೀವನೋತ್ಸಾಹ, ಪ್ರತಿಯೊಂದರಲ್ಲೂ ತೋರಿಸುತ್ತಿದ್ದ ಅದಮ್ಯ ಜೀವನ ಪ್ರೀತಿ, ಬದಲಾವಣೆಗಾಗಿ ಅವಳು ತುಡಿಯುತ್ತಿದ್ದ ಬಗೆ ಎಲ್ಲವೂ ಅವರ ಬದುಕಲ್ಲಿ ಉತ್ಸಾಹದ ಬುಗ್ಗೆಯನ್ನು ಉಕ್ಕಿಸುತ್ತಿತ್ತು. ಅವಳ ಓದಿನ ಪ್ರೀತಿ ಹಾಗೂ ಸಿನಿಮಾದ ನೋಟದಿಂದ ಹುಟ್ಟುತ್ತಿದ್ದ ಪ್ರಶ್ನೆಗಳಿಗೆ ಅವರೂ ಒಂದಷ್ಟು ಹುಡುಕಾಡಲು ಶುರು ಮಾಡಿದರು. ಹೊರನೋಟಕ್ಕೆ ದಕ್ಕುವಂತೆಯೇ ಹಲವಾರು ಬದಲಾವಣೆಗಳಾಗಿದ್ದವು.
ಮಗಳ ಪತ್ರಗಳು ಮೊದಮೊದಲು ಬರುತ್ತಿದ್ದರೂ.. ಕ್ರಮೇಣ ನಿಂತು ಹೋಗಿದ್ದವು. ಬಂದ ಪತ್ರಗಳಲ್ಲಿಯೂ ಅವಳ ಕುರಿತಾದ ವಿಷಯವೇ ತುಂಬಿರುತ್ತಿತ್ತು. ತಂದೆಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವುದೂ ಆಕೆಗೆ ಮರೆತು ಹೋದಂತಿತ್ತು. ಕ್ರಮೇಣ ಪತ್ರಗಳು ನಿಂತವು. ಫೋನ್ ಕರೆಗೂ ಸಿಕ್ಕುತ್ತಿರಲಿಲ್ಲ. ಅವರಿಗೆ ಎಲ್ಲವನ್ನು ಹಂಚಿಕೊಳ್ಳಲು ಇದ್ದ ಗೆಳೆಯನೆಂದರೆ ಚಕ್ರವರ್ತಿ. ಆದರೆ, ಅವರ ಬಳಿಯೂ ಲಾವಣ್ಯನ ಅಥವಾ ಗೌರಿಯ ವಿಚಾರವನ್ನು ಹಂಚಿಕೊಂಡವರಲ್ಲ.
ಚಕ್ರವರ್ತಿಯ ಮೂರನೆಯ ಮಗ ಪ್ರೇಮ್ ಮಾತ್ರ ಜಗದೀಶ್ ರ ಅಭಿಪ್ರಾಯವನ್ನೆಲ್ಲಾ ತಲೆಕೆಳಗು ಮಾಡಿಬಿಟ್ಟಿದ್ದ. ಆತ ಓದಿನಲ್ಲಿ ಬುದ್ಧಿವಂತನಲ್ಲ, ಬೇಜವಾಬ್ದಾರಿಯವ ಎಂದು ಅವನ ಅಪ್ಪ-ಅಮ್ಮ ಇವನ ಬಗ್ಗೆ ಚಿಂತೆ ಹಚ್ಚಿಕೊಂಡದ್ದು ಗೊತ್ತಿತ್ತು. ಆದರೆ, ಆತನಲ್ಲಿ ಜೀವನದ ಬಗ್ಗೆ, ಜನರ ಬಗ್ಗೆ, ಸುತ್ತಮುತ್ತಲ ಸಮಾಜದ ವಿಷಯದಲ್ಲಿ ಪ್ರೀತಿಯ ಅನನ್ಯತೆ ಅರ್ಥವಾಗುತ್ತಾ ಹೋಗಿ ಬೇರೆಯದ್ದೇ ಪ್ರೇಮ್ ಕಾಣಿಸುತ್ತಿದ್ದ. ಆತನ ಹಾಗೂ ಗಾಯತ್ರಿಯ ವಿವಾಹವಾಗಿದ್ದರೆ ಎಂದು ಒಮ್ಮೆ ಬಡಬಡಿಸಿದ್ದರು ಪ್ರೇಮ್ ಬಳಿ. ಅದನ್ನೇ ಕೇಳಿ ಆತ ಗಾಯಿತ್ರಿಯ ಕುರಿತಾದ ಅಭಿಪ್ರಾಯ ನೀಡಿದಾಗ ಅವರಿಗೂ ಅದು ತಪ್ಪಾಗಿ ಕಂಡಿರಲಿಲ್ಲ.
"ಹಾಯ್ ಹ್ಯಾಂಡ್ ಸಮ್" ಎಂದು ಯಾವಾಗಲೂ ಸುಳಿದಾಡುತ್ತಾ ತನ್ನದೇ ಪ್ರಭಾವಳಿ ಸೃಷ್ಟಿಸಿದ್ದ ಲಾವಣ್ಯ ಮಾನವೀಯ ಸಂಬಂಧದಿಂದ ಹತ್ತಿರವಾಗುತ್ತಿದ್ದಂತೆ.. ಇತ್ತ ಗೌರಿ ತನ್ನ ಮೌನ ಹಾಗೂ ಅಚ್ಚುಕಟ್ಟುತನ, ನಿಷ್ಠೆಯಿಂದ ಅಂಬಕ್ಕನಿಗೆ ಹತ್ತಿರವಾಗಿದ್ದಳು.
ಅಂಬಕ್ಕ ಗಾಯಿತ್ರಿಯ ಕುರಿತು ಸಾಕಷ್ಟು ಕನಸು ಕಟ್ಟಿಕೊಂಡಿದ್ದರು. ಅವರ ಅನಾರೋಗ್ಯದ ಪರಿಸ್ಥಿತಿ, ಜಗದೀಶ್ ರ ಮನಸಲ್ಲಿ ಮೂಡಿದ ಭಾವನೆಗಳೇನು..? ಭರಣಿ ಆಪ್ತನಾಗಿದ್ದರೂ.. ಆತನಿಗೆ ಹಳ್ಳಿಯ ತುಡಿತ. ಆತನ ಮುಂದಿನ ಬದುಕು ಹೇಗಿತ್ತು..? ಗಾಯಿತ್ರಿ ಇಲ್ಲಿಯೇ ಓದನ್ನು ಸಂಪೂರ್ಣಗೊಳಿಸಿದ್ದರೆ ಚೆನ್ನಾಗಿತ್ತು ಎಂಬ ಜಗದೀಶ್ವರ ಆಲೋಚನೆಗೆ ಕಾರಣವಾದ ಪ್ರಸಂಗವೇನು..? ಮಗಳ ಮನಸ್ಥಿತಿಗೆ ಕನ್ನಡಿ ಹಿಡಿದಂತೆ ದೊರೆತ ಪತ್ರದಲ್ಲಿ ಏನಿತ್ತು..? ಡಾ. ಚಕ್ರವರ್ತಿ ಅವರ ಬದುಕು ಅವರಿಗೆ ಹಾಗೂ ಹೊರನೋಟಕ್ಕೆ ಕಾಣುವಂತೆ ಸುಂದರವಾಗಿತ್ತೇ..
ಹಲವಾರು ಪ್ರಶ್ನೆಗಳನ್ನು ಹಾಕುತ್ತಾ ಬೌದ್ಧಿಕವಾಗಿ ಹಾಗೆ ಮಾನವೀಯತೆ ಎರಡು ದೃಷ್ಟಿಯಿಂದ ಆಲೋಚಿಸುವಂತೆ ಮಾಡುವ ಲಾವಣ್ಯ ಯಾರು? ಅವಳ ಹಿನ್ನೆಲೆ ಏನು..? ಹಿಮಗಿರಿಯ ಮೇಲೆ ಕುಳಿತ ಚೆಂದದ ನವಿಲು ಬದುಕಿಗೊಂದು ಅರ್ಥ ಬರೆದದ್ದಕ್ಕೆ, ಬದುಕಿನಲ್ಲಾದ ಬದಲಾವಣೆಗಳೇನು..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ "ಹಿಮಗಿರಿ ನವಿಲು".
ಸಾಯಿಸುತೆಯವರ ಕಾದಂಬರಿಗಳಲ್ಲಿ ಪಾತ್ರಗಳು ಹತ್ತಿರವಾಗುವುದು ಹಾಗೂ ಇಷ್ಟವಾಗುವುದು ಅವರ ಮಾನವೀಯ ಗುಣಗಳಿಂದ ಹಾಗೂ ಅವರು ತೋರುವ ಆಪ್ತ ಪ್ರೀತಿಯಿಂದ. ಇಲ್ಲಿ ಭರಣಿ, ಗೌರಿ, ಲಾವಣ್ಯ, ಚಕ್ರವರ್ತಿ, ಪ್ರೇಮ್ ಎಲ್ಲರೂ ಇಷ್ಟವಾಗುತ್ತಾರೆ.
ಅಷ್ಟು ಅಚ್ಚೆಯಲ್ಲಿ ಬೆಳೆದ ಗಾಯತ್ರಿ ಅಷ್ಟು ಕಟು ಹೃದಯಿಯಾಗಿ, ಅಪ್ಪನ ಪ್ರೇಮವನ್ನು ಮರೆತು, ಅವರ ಕುರಿತು ಆಲೋಚನೆಯೂ ಮಾಡದಂತೆ ತಾನು ಪ್ರೀತಿಸಿದವನ ಹಿಂದೆ ನಡೆದುದರ ಕುರಿತು ಆಲೋಚಿಸುವಾಗ ಇಂದಿನ ಜನಾಂಗದ ಪ್ರತಿನಿಧಿಯಂತೆ ಕಾಣುತ್ತಾಳೆ. ಸ್ವಾರ್ಥವೇ ಹೆಚ್ಚಾಗುತ್ತಿರುವ ಜನಾಂಗದ ಪ್ರತಿನಿಧಿಯಂತೆ ತೋರುತ್ತಾಳೆ. ಜಗದೀಶ್ ರವರ ಪೇರೆಂಟಿಂಗ್ ನಲ್ಲಿ ತಪ್ಪಾಯಿತೇ ಎಂದು ಆಲೋಚಿಸುವಂತೆಯೂ ಆಗುತ್ತದೆ.
ಬದುಕಿನಲ್ಲಿ ಮಕ್ಕಳ ಕುರಿತು ತೀರಾ ನಿರೀಕ್ಷೆ ಇಟ್ಟುಕೊಂಡು ಮುದ್ದಾಡುವ ಪೋಷಕರ ಕುರುಹಾಗಿ ನಿಲ್ಲುತ್ತಾರೆ ಜಗದೀಶ್ ಹಾಗೂ ನಾಯರ್ ದಂಪತಿಗಳು. ಅದರಾಚೆಗೂ ಇರುವ ತಮ್ಮ ಬದುಕನ್ನು ಚಂದವಾಗಿ ಬದುಕಬೇಕಾದ ರೀತಿಯನ್ನು ಹೇಳಿದಂತಿದೆ ಈ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ