ಪುಸ್ತಕದ ಶೀರ್ಷಿಕೆ : ಅನ್ವೇಷಿಕಾ - ಲಾಂದ್ರದ ಬೆಳಕು
ಲೇಖಕರು : ರಾಘವೇಂದ್ರ ಬಿ. ರಾವ್ ( ಅನು ಬೆಳ್ಳೆ )
ಪ್ರಕಾಶಕರು : ಅಪರಂಜಿ ಪ್ರಕಾಶನ
ಪ್ರಥಮ ಮುದ್ರಣ : 2010
'ಅನ್ವೇಷಿಕಾ' ಎಂಬುದು ಅನು ಬೆಳ್ಳೆಯವರ ಏಳು ಪತ್ತೇದಾರಿ ಕಾದಂಬರಿಗಳ ಸಂಯುಕ್ತ ಸಂಪುಟ. ಇದರಲ್ಲಿ ನಾನೀಗ ಪರಿಚಯಿಸುತ್ತಿರುವ ಪತ್ತೇದಾರಿ ಕಾದಂಬರಿ 'ಲಾಂದ್ರದ ಬೆಳಕು'.
ಲೇಖಕರು ಕಾದಂಬರಿಯ ಮೊದಲಲ್ಲಿ ತಮ್ಮ ಮಾತುಗಳಲ್ಲಿ ಟಿ. ಕೆ ರಾಮರಾವ್ ಅವರ ಕಥನ ಶೈಲಿಯನ್ನು ನೆನೆಸಿಕೊಂಡು ಪತ್ತೇದಾರಿ ಸಾಹಿತ್ಯಕ್ಕೆ ಕ್ಲಾಸಿಕಲ್ ಮೆರಗು ನೀಡಿದವರು ಎಂದು ನೆನೆಯುತ್ತಾರೆ. ಅಲ್ಲದೇ, ಅತಿಯಾದ ಸೆಕ್ಸ್, ಅಸಂಗತಗಳನ್ನು ಬಳಸಿಕೊಂಡು ಬರೆಯುವುದಕ್ಕಿಂತಲೂ ನವಿರಾಗಿ ಕಥನವನ್ನು ಬಿಚ್ಚಿಡುವುದು ಒಂದು ರೀತಿಯಲ್ಲಿ ಆಕರ್ಷಕವೆಂದು ನನ್ನ ಅನಿಸಿಕೆ ಎಂದು ಹೇಳುತ್ತಾರೆ. ಇಡೀ ಕಾದಂಬರಿಯನ್ನು ಹಾಗೆಯೇ ಬರೆದಿದ್ದಾರೆ ಸಹಾ. ಇದು ಓದುಗರಲ್ಲಿಯೂ ಮುಜುಗರ ಉಂಟು ಮಾಡದು ಜೊತೆಗೆ ಓದುಗರಿಗೆ ಆಪ್ತವಾಗುವ ಬರಹದ ಶೈಲಿ ಇದು. ಇಲ್ಲಿಯ ಕಥೆಯಲ್ಲಿ ಮುಖ್ಯವಾಗಿ ಇಷ್ಟವಾದದ್ದು ಹೆಣ್ಣೊಬ್ಬಳು ಯೋಚಿಸುವ ರೀತಿ ಹಾಗೂ ತಾನು ಪತ್ತೇದಾರಿ ಅಲ್ಲದಿದ್ದರೂ.. ತಾನು ಆ ಸುಳಿವಿನಲ್ಲಿ ಸಿಕ್ಕಾಗ ಪತ್ತೇದಾರಿಕೆಗೆ ಹೊರಡುವ ಪರಿ, ಧೈರ್ಯ.
ಮಕ್ಕಳಿಲ್ಲದ ಪದ್ಮಾವತಿ ತನ್ನ ತಮ್ಮ ಶೇಖರನ ತಾಯಿ ಇಲ್ಲದ ಮಗಳು ತೃಷಾಳನ್ನು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ ಬೆಳೆಸಿದ್ದಳು. ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟು ಮಗಳ ಜೊತೆಗೆ ಅಕ್ಕನ ಮನೆ ಸೇರಿದ್ದ ಶೇಖರ. ಈಗ ತೃಷಾ ವೈದ್ಯಕೀಯ ವೃತ್ತಿ ಕಲಿಯಲೆಂದು ದೂರದ ಊರು ಸೇರಿದ್ದಳು. ತೃಷಾಳಿಗೆ ಮದುವೆ ಮಾಡುವವರೆಗೂ ಪದ್ಮಾವತಿಗೆ ನೆಮ್ಮದಿ ಇರಲಿಲ್ಲ. ಆದರೆ, ತೃಷಾ ತಾನು ಕಲಿತು ವೃತ್ತಿ ಸೇರಿ ಎರಡು ವರ್ಷದ ನಂತರ ವಿವಾಹ ಮಾಡಿಕೊಳ್ಳುವುದೆಂದಿದ್ದಳು. ಹದಿಹರೆಯದ ವಯಸ್ಸಿನ ಮಕ್ಕಳ ಹಲವು ಕಥೆಗಳನ್ನು ಕೇಳಿದ್ದ ಶೇಖರನಿಗೆ ಇತ್ತ ಭಯವಿತ್ತು.
ಕೆಲಸದಲ್ಲಿರುವ, ಚಂದದ ಹುಡುಗನ ಚುರುಕುತನವೂ ಇರುವಂತೆ ಕಾಣುವ ಫೋಟೋ ಹಾಗೂ ಜಾತಕ ವಿಳಾಸಕ್ಕೆ ಬಂದಾಗ ಶೇಖರ ಮಗಳ ಮದುವೆಗೆ ಮುಂದಾಗಿದ್ದ. ಪದ್ಮಾವತಿ ಬೆಳ್ಳಗಿರುವುದೆಲ್ಲಾ ಹಾಲಲ್ಲವೆಂದೇ ಎಚ್ಚರಿಸಿದ್ದಳು. ಆದರೂ.. ನೋಡೋಣವೆಂದು ಇಬ್ಬರೂ ಕಾರವಾರಕ್ಕೆ ಹೊರಟರು. ಆ ಹುಡುಗನೇ ಗಗನ್ ದೀಪ್. ಆದರೆ ,ಆತ ಕಥೆ ಬರೆಯುತ್ತಾನೆ ಎನ್ನುವುದು ತಿಳಿದದ್ದು ಅಲ್ಲಿ ಹೋದಾಗ, ಒಂದು ಪೇಪರಿನಲ್ಲಿ ಆತನ ಚಿತ್ರ ನೋಡಿದಾಗಲೇ.. ಆಟೋ ಚಾಲಕನ ಅಭಿಮಾನದ ಮಾತುಗಳನ್ನು ಕೇಳಿದರೂ.. ಶೇಖರನಿಗೆ ಮನಸ್ಸಿನಲ್ಲೊಂದು ಅಳುಕಿತ್ತು. ಆತ ಕೇವಲ ಕಥೆ ಬರೆಯುವವನು ಮಾತ್ರವಾಗಿದ್ದರೆ...! ಎಂದು. ಆದರೆ ವಿಚಾರ ಹಾಗಿರಲಿಲ್ಲ. ಆತ ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಬರಹಗಾರ. ಆದರೆ, ಅಂದು ಆತ ಭೇಟಿಗೆ ಸಿಗಲಿಲ್ಲ. ಆತ ಕಥೆ ಬರೆಯಲೆಂದು ದೂರದ ಊರಿಗೆ ಹೋಗಿದ್ದಾನೆಂದು.. ಆತನ ತಾಯಿ ತನ್ನ ಮಗನ ಕುರಿತು ಹೇಳಿ ಆತನನ್ನು ಮದುವೆಗೆ ಒಪ್ಪಿಸುತ್ತೇನೆಂದು ಹೇಳಿದಳು.
ಇತ್ತ ಗಗನ್ ಬಂದದ್ದು ಕುದ್ರು ಎಂಬಲ್ಲಿಯ ದ್ವೀಪದಂತಹಾ ಊರಿಗೆ. ಆದರೆ, ಆತ ಈ ಬಾರಿ ಬಂದದ್ದು ಪತ್ತೇದಾರಿ ಕಾದಂಬರಿ ಬರೆಯಲಿಕ್ಕಲ್ಲ. ಬದಲಾಗಿ, ಪ್ರೇಮ ಕಾದಂಬರಿಯೊಂದರ ರಚನೆಗೆ. ಆದರೆ, ಆತನಿಗೆ ರಾತ್ರಿಯಲ್ಲಿ ಹೆಣ್ಣಿನ ಧ್ವನಿ ಕೂಗಿದಂತೆ ಕೇಳಿಸುತ್ತಿತ್ತು. ಹೊರಬಂದು ನೋಡಿದರೆ ರಾತ್ರಿಯಲ್ಲಿ ಮೋಹಿನಿ ಲಾಂದ್ರವನ್ನು ಹಿಡಿದುಕೊಂಡು ಓಡಾಡುತ್ತಿರುವಂತೆ ಕಂಡಾಗ, ಆಕೆಯನ್ನು ಹಿಂಬಾಲಿಸಿ ಹೋದನಾದರೂ.. ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಲಾಂದ್ರದಿಂದ ಕಾಲಿಗೆ ಸುಟ್ಟ ಗಾಯವೂ ಆಗಿತ್ತು.
ಊರಿಗೆ ಹೋಗಿ ಬಂದಿದ್ದ ತೃಷಾ ಆತನನ್ನು ಭೇಟಿ ಮಾಡಿ ಮಾತನಾಡಲು ಬಂದಿದ್ದಳು. ಆತನ ಗಾಯ ಕಂಡು ಆತನಿಗೆ ಉಪಚರಿಸಿದಳು ಸಹಾ. ಅವನ ಅಮ್ಮ ಸಣ್ಣಮ್ಮ ಈ ವಿಚಾರಕ್ಕೆ ಖುಷಿ ಪಟ್ಟರು.
ಲಂದ್ರದ ಬೆಳಗಿನಿಂದ ಆ ರೀತಿಯ ಗಾಯವಾಗಲು ಸಾಧ್ಯವೇ..? ಎಂದು ಯೋಚಿಸುತ್ತಲೇ ಆಸ್ಪತ್ರೆಯ ಕಾರಿಡಾರ್ ನಲ್ಲಿ ತನ್ನ ಕೆಲಸಗಳನ್ನು ಮಾಡುತ್ತಿರುವಾಗ ತನ್ನದೇ ಡಿಪಾರ್ಟ್ಮೆಂಟ್ ನ ಹುಡುಗಿ ಹರ್ಷಿತಾ ಕೈಯ್ಯಲ್ಲಿ ಕೂಡ ಅಂತಹದ್ದೇ ಗಾಯ. ಬಲಗೈಯ ಉದ್ದಕ್ಕೂ ಹಸಿಗಾಯ ಮಾಡಿಕೊಂಡದ್ದು ಕಂಡಿತು.
ಇದಕ್ಕೂ ಗಗನ್ ದೀಪ್ ಗೂ ಏನಾದರು ಸಂಬಂಧವಿರಬಹುದಾ ಅಥವಾ ಆತ ಹುಡುಗಿಯ ಜೊತೆಗೆ ಹೊರಗೆ ಹೋಗಿರಬಹುದಾ ಎಂಬ ಅನುಮಾನ ಕಾಡಿತು. ಹರ್ಷಿತಾಳ ಮಾತು ಕೇಳಿದಾಗ ಆಕೆಯ ದೂರದ ಸಂಬಂಧಿಯೊಬ್ಬರು ಸಹ ಅದೇ ಊರಿನಲ್ಲಿ ಇರುವುದು ತಿಳಿಯಿತು.
ಈ ಕುರಿತು ಗಗನ್ ಬಳಿ ಕೇಳಲು ಮತ್ತೆ ಮನೆಗೆ ಹೋದಾಗ ಆತ ಬರೆದಿಟ್ಟಿದ್ದ 'ಲಾಂದ್ರದ ಬೆಳಕು' ಕಾದಂಬರಿಯ ಕೊನೆಯ ಸಾಲುಗಳನ್ನು ಓದಿ ಆತನ ಮೇಲೆ ಅಪಾರ್ಥ ಮಾಡಿಕೊಂಡಳು. ಆದರೆ, ನಂತರ ಆತನ ಮಾತುಗಳಿಂದ ಅಪಾರ್ಥ ಕಾಣದಂತಿದ್ದರೂ.. ಮನಸ್ಸಿನಲ್ಲಿ ಆಲೋಚನೆ ಹಾಗೆಯೇ ಇತ್ತು
ಜೊತೆಗೆ.. ಹೊರಗಿನವರ ಒಡಕು ಮಾತುಗಳು ಅವಳ ಹಾಗೂ ಅವಳ ಮನೆಯವರ ಕಿವಿಗೆ ಬಿದ್ದಿದ್ದವು. ಗಗನ್ ದೀಪ್ ಯಾವುದೋ ಹುಡುಗಿಗೆ ಪ್ರೀತಿಸಿ ಮೋಸ ಮಾಡಿದ್ದಾನಂತೆ. ಈಗ ಆಕೆ ಹುಚ್ಚಿಯಾಗಿದ್ದಾಳೆ ಎನ್ನುವ ಮಾತುಗಳೂ ಕೇಳಿದ್ದವು.
ಸಣ್ಣಮ್ಮ ಹಾಗೂ ಗಗನ್ ಇಬ್ಬರೂ ಹೇಳುವ ಪ್ರಕಾರ ಆತ ಸಾಯಲು ಹೊರಟಿದ್ದ ಹುಡುಗಿಯನ್ನು ರಕ್ಷಿಸಿದ. ಆಕೆ ಮಾತ್ರ.. ಆತನೇ ತನ್ನ ಪ್ರೇಮಿ ಎಂದು ಹೇಳುತ್ತಾ ಸಮಸ್ಯೆಯನ್ನು ತಂದೊಡ್ಡಿದಳು. ನಂತರ, ಪೊಲೀಸರ ಮಧ್ಯಸ್ಥಿಕೆಯಲ್ಲಿ ಅದು ಬಗೆಹರಿದಿದೆ ಎಂದು.
ಗಗನ್ ದೀಪ್ ಮನೆಗೆ ಹೋಗಿ ಬಂದವಳು ಸಣ್ಣಮ್ಮ ಬರುವವರೆಗೂ ಇರದೇ ಹೊರಟು ಬಂದಳು. ಸಣ್ಣಮ್ಮ ಮಾತ್ರ ಅವಳ ಅನುಮಾನವನ್ನು ಬಗೆಹರಿಸಲು ಆಕೆಯನ್ನು ಕರೆತರಲು ಮಗನನ್ನು ಕಳುಹಿಸುವಷ್ಟರಲ್ಲಿ ಆಕೆ ಮಾಯವಾಗಿದ್ದಳು. ಇತ್ತ ಶೇಖರ ಹಾಗೂ ಪದ್ಮಾವತಿಗೂ ಆಕೆ ಸಿಗಲಿಲ್ಲ. ಹಾಸ್ಟೆಲ್ ನಲ್ಲಿಯೂ ಅವಳಿರಲಿಲ್ಲ. ಅಪ್ಪ, ಅತ್ತೆಗೂ ಹೇಳದೇ ಹೊರಟವಳನ್ನು ಹುಡುಕುತ್ತಾ ಹೊರಟರೆ ಆಕೆ ಹಾಗೂ ಹರ್ಷಿತ ಇಬ್ಬರೂ ಹೊರಟ ಸ್ಥಳ ಒಂದೇ ಎಂದು ಹಾಸ್ಟೆಲ್ ನ ಲೆಡ್ಜರ್ ನಿಂದ ತಿಳಿಯಿತು.
ಇವರಿಬ್ಬರಲ್ಲಿ ಒಬ್ಬರನ್ನೊಬ್ಬರು ಬೆನ್ನತ್ತಿ ಹೊರಟರಾ ಅಥವಾ ಇದು ಕಾಕತಾಳೀಯವಾ..?
ತೃಷಾ ಯೋಚಿಸಿದಂತೆ ಗಗನ್ ಹಾಗೂ ಹರ್ಷಿತಾರ ನಡುವೆ ಏನಾದರೂ ಸಂಬಂಧವಿತ್ತೇ..?
ಅಷ್ಟಕ್ಕೂ ತೃಷಾ ಅಲ್ಲಿಗೆ ಹೋದದ್ದೇಕೆ.. ಆಕೆ ಗಗನ್ ದೀಪ್ ನನ್ನು ಪ್ರೇಮಿಸುತ್ತಿದ್ದಳೇ.. ಮದುವೆಗೆ ಒಪ್ಪದ ತೃಷಾ ಆತನೆಡೆಗೆ ಆಕರ್ಷಿತವಾದದ್ದೇಕೆ..?
ತೃಷಾ ತಾಯಿಯ ಸಾವು ಹೇಗಾಗಿತ್ತು.. ಶೇಖರ ಊರಿನಿಂದ ಉಟ್ಟ ಬಟ್ಟೆಯಲ್ಲಿಯೇ ಹೊರಟು ಬಂದದ್ದೇಕೆ..?
ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಕಾದಂಬರಿ 'ಲಾಂದ್ರದ ಬೆಳಕು'. ಅಂದ ಹಾಗೆ ಇದು ಗಗನ್ ದೀಪ್ ನ ಪ್ರೇಮ ಕಾದಂಬರಿಯೂ ಹೌದು. ಅನು ಬೆಳ್ಳೆಯವರ ಪತ್ತೇದಾರಿ ಕಾದಂಬರಿಯೂ ಹೌದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ