ಬುಧವಾರ, ಏಪ್ರಿಲ್ 22, 2026

ಪತ್ನೀ ಸಮೇತ ಪ್ರಣವ (ಪುಸ್ತಕ ಯಾನ - 303)


ಪುಸ್ತಕದ ಶೀರ್ಷಿಕೆ : ಪತ್ನೀ ಸಮೇತ ಪ್ರಣವ

ಲೇಖಕರು : ಎಂ. ಮನೋಹರ ಪೈ

ಪ್ರಕಾಶಕರು : ಶೋಭಾ ಎಂಟರ್ಪ್ರೈಸಸ್

ಪ್ರಥಮ ಮುದ್ರಣ : 2023

ಪುಟಗಳು : 152

ಬೆಲೆ : 170 ರೂ. 


'ಪತ್ನೀ ಸಮೇತ ಪ್ರಣವ' ಎನ್ನುವ ಕಾದಂಬರಿಯ ಶೀರ್ಷಿಕೆ ಕಂಡಾಗ ಮೊದಲಿಗೆ ಇದು ಕೌಟುಂಬಿಕ ಕಾದಂಬರಿ ಎನ್ನಿಸಿದರೂ ಸಹಾ ಇದು ರೋಚಕ ಕಾದಂಬರಿಯ ಪಟ್ಟಿಗೆ ಸೇರುವ ಕಾದಂಬರಿ. ಇಂತಹಾ ಕಾದಂಬರಿಗಳಲ್ಲಿ ಕೊನೆಯ ಭಾಗದವರೆಗೂ ರೋಚಕತೆಯನ್ನು ಹಾಗೂ ಗುಟ್ಟನ್ನು ಎಲ್ಲಿಯೂ ಬಿಟ್ಟು ಕೊಡದಂತೆ ಸಾಗುವ ಚಾಕಚಕ್ಯತೆ ಇರಬೇಕು. ಇದು ಈ ಕಾದಂಬರಿಯಲ್ಲಿ ವ್ಯಕ್ತವಾಗಿದೆ ಸಹಾ ಚಲನಚಿತ್ರವಾಗಬಹುದಾದ ಕಾದಂಬರಿಯ ರೂಪದಂತೆನ್ನಿಸಿತು. 


ಸಾಮಾನ್ಯವಾಗಿ "ಒಂಟಿ ಪ್ರವಾಸ ಹೋಗುವಾಗ ಅವರು ಒಂಟಿಯಾಗಿಯೇ ಹೋಗುತ್ತಾರೆ ಎನ್ನುವ ನಂಬಿಕೆ ಏನು..?" ಎನ್ನುವ ಭಾವ ನಮ್ಮಲ್ಲಿ ಮೂಡಿದಾಗ ನಂಬದೇ ವಿಧಿಯಿಲ್ಲ ಎನ್ನುವ ಆಲೋಚನೆ ಬರುತ್ತದೆ. ಆದರೆ, ಲೇಖಕರಿಗೆ ಈ ರೀತಿಯ ಆಲೋಚನೆ ಬಂದಾಗಲೇ ಕಥಾಹಂದರ ಹೊಳೆದದ್ದು. ಹಾಗೆ ಬರೆದದ್ದೇ.. ಪ್ರಣವನ ಬದುಕಿನ ಕತೆಯನ್ನು. ಕಾದಂಬರಿಯನ್ನು ಓದಿದಾಗ ಹಾಗೂ ಓದಿದ ನಂತರ ಅನಿಸಿದ್ದು ದಾಂಪತ್ಯದಲ್ಲಿ ನಂಬಿಕೆ ಎಂಬುದು ಎಷ್ಟು ಮುಖ್ಯವೋ ಅವರ ನಡುವಿನ ಅರ್ಥೈಸಿಕೊಳ್ಳುವಿಕೆ ಹಾಗೂ ಒಬ್ಬರ ನಂಬಿಕೆಯಂತೆ ಮತ್ತೊಬ್ಬರು ಇರುವುದು ಹಾಗೂ ಮೋಸ ಮಾಡದಿರುವಿಕೆ, ಕಣ್ಣಿಗೆ ಮಣ್ಣೆರಚದೇ ಬದುಕುವುದು ಸಹಾ ಅಷ್ಟೇ ಪ್ರಮುಖವಾಗುತ್ತದೆ. ಅಂತಹಾ ದಾಂಪತ್ಯಗಳು ಮಾತ್ರ ಹೆಚ್ಚಿನ ಕಾಲ ಬಾಳಬಲ್ಲವು. 


ವೆಂಕಟೇಶ್ವರ ಇಂಡಸ್ಟ್ರೀಸ್ ನ ಮಾಲಕಿ ಶ್ರೀಮತಿ ಉಮಾದೇವಿಯವರು. ಅವರೇ ಆಯ್ಕೆ ಮಾಡಿದ ಹಾಗೂ ನಂಬಿಕೆ ಇಟ್ಟಿದ್ದ ಜನರಲ್ಲಿ ಮ್ಯಾನೇಜರ್ ಪ್ರಣವ್ ಪ್ರಮುಖ. ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ.. ಇಬ್ಬರ ನಡುವೆ ಔದ್ಯೋಗಿಕ ಸಂಬಂಧಕ್ಕಿಂತ ಹೆಚ್ಚಾಗಿ ತಾಯಿ ಮಗನಂತಹಾ ಕಾಳಜಿ ಹಾಗೂ ಬಾಂಧವ್ಯವಿತ್ತು ಎಂದರೂ ತಪ್ಪಾಗಲಾರದು. ಆಫೀಸಿನ ಮೂಲಕವೇ, ಆಫೀಸಿನ ಕೆಲಸಕ್ಕಾಗಿ ಪ್ರಣವ್ ಭುವನೇಶ್ವರಕ್ಕೆ ಹೋಗಬೇಕಾಗಿತ್ತು. ಅದಕ್ಕಾಗಿ ರಿಸೆಪ್ಶನಿಸ್ಟ್ ಕಾಮ್ಯಳ ಮೂಲಕ ಎಲ್ಲಾ ವ್ಯವಸ್ಥೆಯೂ ಆಗಿತ್ತು. ವಿಮಾನದ ಟಿಕೆಟ್, ಹೋಟೆಲ್ ಡಿಟೇಲ್ಸ್ ಎಲ್ಲವೂ ಅವಳಿಂದ ಸಿಗಲಿತ್ತು. ಮುಂದಿನ ಐದು ದಿನಗಳ ಕಾಲ ಕಂಪನಿಯ ಗ್ರಾಹಕರನ್ನು ಭೇಟಿ ಮಾಡುವ ಸಲುವಾಗಿ ಭುವನೇಶ್ವರಕ್ಕೆ ತೆರಳಬೇಕೆಂದು ಮೊದಲೇ ನಿಶ್ಚಯವಾಗಿತ್ತು. ಆದರೆ, ಉಮಾದೇವಿಯವರಿಗೆ ತಿಳಿಯದ ವಿಷಯವೊಂದಿತ್ತು. ಅದೆಂದರೆ ಪ್ರಣವ್ ಈ ಕೆಲಸಕ್ಕಾಗಿ ಒಬ್ಬನೇ ಹೋಗುತ್ತಿರಲಿಲ್ಲ. ಸ್ವಾಮಿಕಾರ್ಯ ಹಾಗೂ ಸ್ವಕಾರ್ಯವೆಂಬಂತೆ ಅದೇ ಮೊದಲ ಬಾರಿಗೆ ಯಾರಿಗೂ ತಿಳಿಯದಂತೆ ಮತ್ತೊಂದು ಯುವತಿಯ ಜೊತೆಯಾಗಿ ಹೋಗಲಿದ್ದ ಪ್ರಣವ್.


ಹಾಗೆಂದು, ಪ್ರಣವ್ ಅವಿವಾಹಿತನೇನಲ್ಲ. ವಿದೇಶದಲ್ಲಿ ಉದ್ಯೋಗ ಸಿಕ್ಕಿದ್ದರೂ.. ತನ್ನ ದೇಶದಲ್ಲಿಯೇ ಕೆಲಸ ಮಾಡಬೇಕೆಂಬ ಹಂಬಲದಿಂದ ಭಾರತಕ್ಕೆ ಮರಳಿದ್ದ ಪ್ರಣವ್ ಸ್ವಂತದ್ದೇ ಕಂಪನಿಯೊಂದನ್ನು ಆರಂಭಿಸುವ ಪ್ರಯತ್ನದಲ್ಲಿದ್ದ. ಆದರೆ, ಪಾಲುದಾರನ ಮೋಸದಿಂದ ಕಂಪನಿಯನ್ನು ಆರಂಭಿಸುವ ಯೋಚನೆ ಕಾರ್ಯರೂಪಕ್ಕೆ ಬರಲಿಲ್ಲ. ಬದಲಾಗಿ ವೆಂಕಟೇಶ್ವರ ಕಂಪನಿಯ ಮಾಲಕಿ ಉಮಾದೇವಿಯವರ ಗಮನ ಸೆಳೆದಿದ್ದ. ಪತಿ ಹಾಗೂ ಪುತ್ರನ ದುರ್ಮರಣದ ಬಳಿಕ ಒಂಟಿಯಾಗಿ ಕಂಪನಿಯ ಜವಾಬ್ದಾರಿ ಹೊತ್ತಿದ್ದ ಉಮಾದೇವಿಯವರಿಗೆ ಪ್ರಣವ್ ನಲ್ಲಿ ತನ್ನ ಮಗ ಪ್ರಭಾತ್ ಕಾಣಿಸಿದ್ದ. ಕಠಿಣ ಪರಿಶ್ರಮದಿಂದ ಒಂದೆರಡು ವರ್ಷಗಳಲ್ಲೇ ಯಶಸ್ಸಿನ ಉತ್ತುಂಗದಲ್ಲಿದ್ದುದರಿಂದ ಆತನ ಕುರಿತು ಮೆಚ್ಚುಗೆ ಬೆಳೆಸಿಕೊಂಡಿದ್ದ ಉಮಾದೇವಿಯವರಿಗೆ ಮತ್ತೊಂದು ಆಸೆಯೂ ಇದ್ದಿತು. ಕಂಪನಿಯ ಪ್ರತಿ ವಿಭಾಗದ, ಪ್ರತಿ ತೊಂದರೆಗಳಿಗೂ ಪ್ರಣವ್ ಬಳಿ ಸೂಕ್ತ ಪರಿಹಾರಗಳಿರುತ್ತಿದ್ದವು. ಅಲ್ಲದೆ, ಅವುಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದ. ಅವನಿಗೆ ಒಂದು ವರ್ಷದ ಹಿಂದೆಯಷ್ಟೇ ಜೊತೆಯಾಗಿದ್ದ ಬಾಳಸಂಗಾತಿ ಪ್ರಾಚಿ ಮನಸ್ಸು, ಮನೆ ತುಂಬಿದ್ದಳು. ಪ್ರಾಚಿಯೊಂದಿಗೂ ಉಮಾದೇವಿಯವರಿಗೆ ಉತ್ತಮ ಸಂಬಂಧವಿತ್ತು. 


ಆದರೆ ಇದೀಗ ಉಮಾದೇವಿಯವರ ನಂಬಿಕೆಯ ವಿರುದ್ಧ ಹಾಗೂ ಪ್ರಾಚಿಯ ಹಾಗೂ ಪ್ರಣವ್ ದಾಂಪತ್ಯದ ನಡುವಲ್ಲಿ ಸುಳಿದವಳೇ ಕಾಮ್ಯ ಲೋಕೇಶ್. ಅದೇ ಕಂಪನಿಯ ರಿಸೆಪ್ಶನಿಸ್ಟ್ ಆಗಿದ್ದವಳು. ತಂದೆ-ತಾಯಿಯರ ಒಬ್ಬಳೇ ಮುದ್ದಿನ ಮಗಳಾಗಿದ್ದವಳು. ತನ್ನ ಜೀವನವನ್ನು ತನ್ನಿಷ್ಟದಂತೆ ಬಾಳಿ ಬದುಕುವ ಸ್ವತಂತ್ರ್ಯ ಆಲೋಚನೆ ಇದ್ದವಳು. ಮದುವೆಯಾಗಿದ್ದರೂ.. ಆ ವಿವಾಹ ಬಹಳ ದಿನ ನಿಂತಿರಲಿಲ್ಲ. ಪ್ರಣವ್ ಕಂಪನಿಯನ್ನು ಸೇರಿದ ಮೊದಲ ದಿನದಿಂದಲೇ ಕಾಮ್ಯ ಅವನತ್ತ ಆಕರ್ಷಿತಳಾಗಿದ್ದಳು. ಮೊದಲೆಲ್ಲಾ ಪ್ರಣವ್ ತನ್ನ ಕೆಲಸ ಬಿಟ್ಟು ಬೇರೆ ಯಾವುದೇ ವಿಷಯಗಳಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಆದರೆ, ಕಾಮ್ಯ ಬೀಸಿದ ಬಲೆಗೆ ಪ್ರಣವ್ ತನಗರಿಯದಂತೆಯೇ ಸಿಕ್ಕಿಬಿದ್ದಿದ್ದ. ಅದರ ಹಿಂದಿನ ಕಾರಣವೇನು..?


ಆದರೆ, ಪ್ರಣವ್ ಎಲ್ಲೆಡೆಯೂ ತನ್ನ ಸಂಯಮವನ್ನು ತೋರಿದ್ದ. ಆದರೂ.. ಇಂತಹಾ ಸಂಬಂಧಗಳು ಅನುಭವಿ ಕಣ್ಣಿಗೆ ಬಿದ್ದಾಗ ಸಂದೇಹ ಉಂಟಾಗುತ್ತದೆ. ವಿಮಾನದಲ್ಲಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಕಾಮ್ಯಳ ಕತ್ತಿನಲ್ಲಿ ತಾಳಿ ಇಲ್ಲದೆ ಇದ್ದದ್ದನ್ನು, ಆತ ತನ್ನ ಪತ್ನಿ ಎಂದು ಪರಿಚಯಿಸಿದ್ದನ್ನು ನಂಬದಿದ್ದರೂ.. ಮತ್ತೆ ಆಕೆ ಎದುರಾಗುವ ಪ್ರಸಂಗ ಬಂದದ್ದು ಪ್ರಾಚಿ ಭುವನೇಶ್ವರಕ್ಕೆ ಬಂದಾಗ.


ಕಾಮ್ಯ ಹಾಗೂ ಪ್ರಣವ್ ಇಬ್ಬರೂ ಭುವನೇಶ್ವರಕ್ಕೆ ತಲುಪಿದ ನಂತರದ ಸಂದರ್ಭ ಅವರಿಗೇ ಅರಿಯದಂತೆ ಬದಲಾಗಿತ್ತು. ಪ್ರಣವ್ ಆಸ್ಪತ್ರೆಯಲ್ಲಿದ್ದ ಆ ಸಂದರ್ಭದಲ್ಲಿ ಪ್ರಾಚಿಯ ಮೊಬೈಲ್ ನಂಬರನ್ನು ನೀಡಿದ ಕಾಮ್ಯ ನಾಪತ್ತೆಯಾಗಿದ್ದಳು. ಉಮಾದೇವಿಯವರೊಂದಿಗೆ ಅಲ್ಲಿಗೆ ತಲುಪಿದ ಪ್ರಾಚಿ ದಿಗ್ಭ್ರಮೆಯಲ್ಲಿದ್ದಳು. ಗಂಡನ ಮೇಲಿನ ನಂಬಿಕೆ ಹೋಗುವ ಸಂದರ್ಭಗಳು ಸೃಷ್ಟಿಯಾಗಿದ್ದವು. ಆದರೆ, ತನ್ನ ಜಾಣ್ಮೆಯಿಂದ ತನ್ನ ಮೇಲಿನ ಅಪನಂಬಿಕೆಯನ್ನು ನಿವಾರಿಸಿಕೊಳ್ಳಲು ಪ್ರಣವ್ ಪ್ರಯತ್ನಿಸಿದನಾದರೂ ಸಫಲನಾಗಲಿಲ್ಲ.


ಸಂಬಂಧದಲ್ಲಿ ಬಿರುಕು ಮೂಡದಂತಿರಲು ಹಾಗೂ ಕಾಮ್ಯ ನಾಪತ್ತೆಯಾಗಿದ್ದನ್ನು ಕಂಡು ಸುಮ್ಮನಿದ್ದನಾದರೂ.. ಪ್ರಣವ್ ಗೆ ಬ್ಲಾಕ್ಮೇಲ್ ಎದುರಾಗಿತ್ತು. ಅದಕ್ಕಾಗಿ ಆತ ಮತ್ತೆ ಭುವನೇಶ್ವರಕ್ಕೆ ಹೋಗಬೇಕಾಗಿತ್ತು. ಆದರೆ, ಈ ಬಾರಿ ಆತ ಹೋದದ್ದು ಕಂಪನಿಯ ಕೆಲಸದ ಮೇಲಲ್ಲ.. ವೈಯಕ್ತಿಕ ಕೆಲಸಕ್ಕಾಗಿ. ಪ್ರಾಚಿ ತನ್ನೆಲ್ಲಾ ಅಂತರಂಗದ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದದ್ದು ಆಕೆಯ ಗೆಳತಿ ದಮಯಂತಿಯ ಜೊತೆಗೆ. ಹಾಗೆ ಇತ್ತೀಚಿಗೆ ಪರಿಚಯವಾದದ್ದು ಆಕೆ ಭುವನೇಶ್ವರಕ್ಕೆ ಹೋದ ಸಂದರ್ಭದಲ್ಲಿ ಅವಳು ನಿತ್ಯ ಮಾಡುತ್ತಿದ್ದ ನಾಯಿಗೆ ಬಿಸ್ಕೆಟ್ ಹಾಕುತ್ತಿದ್ದ ಕಾಯಕವನ್ನು ಮಾಡುತ್ತಿದ್ದ ಶ್ರೀಹರಿ.


ದಮಯಂತಿಯ ಜೊತೆ ಚರ್ಚಿಸಿ ಆಕೆಯ ಸಹಾಯದಿಂದ ಪ್ರಣವ್ ನ ಹಿಂದೆ ಬೀಳಲು ಪ್ರಯತ್ನಿಸಿದ ಪ್ರಾಚಿ ಭುವನೇಶ್ವರಕ್ಕೆ ಹೋಗಬೇಕಾಗಿದ್ದರೂ.. ರೈಲು ಹೋಗುತ್ತಿದ್ದದ್ದು ಪುರಿಗೆ. ಅದು ಸಹಾ ರಥಯಾತ್ರೆಯ ಸಮಯ. ಅಚಾನಕ್ಕಾಗಿ ಹಾಗೂ ಅನಿವಾರ್ಯವಾಗಿ ಆಕೆ ಶ್ರೀಹರಿಯ ಜೊತೆಯಾಗಬೇಕಾಗುತ್ತದೆ. ಒಬ್ಬಳೇ ಹೋಗುತ್ತಿದ್ದ ಅವಳಿಗೆ ಅದು ಅನಿವಾರ್ಯ ಎಂದೆನಿಸಿದರೂ ಆಕೆಗೆ ಪ್ರಣವ್ ಕುರಿತ ಆಲೋಚನೆಯೇ.. 


ಭುವನೇಶ್ವರ, ಪುರಿಯ ಪರಿಸರ ಹಾಗೂ ಅಲ್ಲಿಯ ಸಂಭಾಷಣೆ ಹಾಗೂ ಚೇತೋಹಾರಿ ಹಾಗೂ ಕೆಲವು ಮನೋಲ್ಲಾಸಕಾರಿ ಸಂಭಾಷಣೆಗಳಿಂದ ಕಾದಂಬರಿಯನ್ನು ಕಟ್ಟಿ ಕೊಟ್ಟಿದ್ದಾರೆ ಲೇಖಕರು. 


ಅಪರಿಚಿತನಾದ ಶ್ರೀಹರಿ ಪ್ರಾಚಿಯ ಜೊತೆಗೆ ಹೇಗೆ ನಡೆದುಕೊಳ್ಳುತ್ತಾನೆ..? ಪ್ರಾಚಿ ಭುವನೇಶ್ವರ ತಲುಪಿದಳೇ..? ಅಲ್ಲಿ ಆಕೆಗೆ ಯಾವ ರೀತಿಯ ಸಹಾಯ ಒದಗುತ್ತದೆ..? ಅಲ್ಲಿ ಆಕೆ ಕಂಡುಕೊಂಡ ಸತ್ಯವೇನು.. ಪ್ರಣವ್ ಬ್ಲಾಕ್ ಮೇಲರ್ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದರೂ ಹೆಜ್ಜೆ-ಹೆಜ್ಜೆಗೂ ಎದುರಾದ ಅವನ ಸಂಕಷ್ಟ ಹೀಗಿತ್ತು..? ಕಾಮ್ಯಳ ಪತ್ತೆಯಾಯಿತೇ..?? ಪ್ರಣವ್ ಮತ್ತೆ ಪತ್ನಿ ಸಮೇತನಾದನೇ ಅಥವಾ ಪತ್ನಿ ಸಮೇತನಾಗಿದ್ದ ಪ್ರಣವ ಆಕೆಯಿಂದ ದೂರವಾಗಬೇಕಾಗಿ ಬಂದಿತೇ.. ಉಮಾದೇವಿಯವರ ಬದುಕು ಸಹಾ ಈ ಘಟನೆಗಳಿಗೆ ತಳಕು ಹಾಕಿಕೊಂಡಿರುತ್ತದೆ. ಅದು ಹೇಗೆ..? ಇದೆಲ್ಲದಕ್ಕಿಂತ ಹೆಚ್ಚಿನ ಅಚ್ಚರಿ ತರುವುದು ಕೊನೆಯ ಪುಟದಲ್ಲಿ ಉಲ್ಲೇಖವಾಗಿರುವ ವಿಚಾರವನ್ನು ಕಂಡು.


ಕೊನೆಯ ಪುಟದವರೆಗೂ ಎಲ್ಲಿಯೂ ರೋಚಕತೆ ಕಳೆದುಕೊಳ್ಳದಂತೆ ಓದಿಸಿಕೊಂಡು ಹೋಗುವ ಸರಾಗ ಓದಿಗೆ ದಕ್ಕುವ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ