ಕವನ ಸಂಕಲನ : ಶತಮಾನದ ಕಾವ್ಯ
ಸಂಪಾದಕರು : ಎಚ್. ಎಸ್ ವೆಂಕಟೇಶಮೂರ್ತಿ
*****************************************
ಕವಿ : ವಿ. ಕೃ. ಗೋಕಾಕ್ (ವಿನಾಯಕ)
ಕವಿತೆಯ ಶೀರ್ಷಿಕೆ : ಕಂಡೆ
ಮೂಲ ಕವನ ಸಂಕಲನ : ಸಮುದ್ರ ಗೀತೆಗಳು
ಸಮುದ್ರವನ್ನು ಕಂಡಾಗ ಮನಸ್ಸಿನಲ್ಲಿ ಭಾವಗಳ ಹೆದ್ದೆರೆಯೇ ಉಕ್ಕುಕ್ಕಿ ಬರುತ್ತದೆ. ಗೋಕಾಕರ ಈ ಕವನ ಸಂಕಲನದಲ್ಲಿ 1956-58 ರ ಅವಧಿಯಲ್ಲಿ ಬರೆದಿರುವ ಸಮುದ್ರದ ಕುರಿತ ಹಲವಾರು ಕವಿತೆಗಳಿವೆ. ಈ ಕವಿತೆಗಳು ಸಮುದ್ರವನ್ನು ಕಂಡಾಗ ಮೊದಲ ಬಾರಿಯ ಪುಳಕದ ಕವಿತೆಗಳು ಮಾತ್ರವಲ್ಲ.. ಶಬ್ದ ಲಾಲಿತ್ಯ ಹಾಗೂ ಭಾವದಲ್ಲಿಯೂ ಓದುಗರನ್ನು ಸೆಳೆಯುತ್ತವೆ. ಸಾಮಾನ್ಯವಾಗಿ ಪ್ರೇಮ ಕವಿತೆಗಳು ಅಥವಾ ನಿಸರ್ಗದ ಕುರಿತಾದ ಕವಿತೆಗಳನ್ನು ಓದುವಾಗ ಸಮುದ್ರದ ಕುರಿತೆ ಕವಿತೆಗಳ ಪುಸ್ತಕ ಸಿಕ್ಕರೆ..! ಎಂದೆನಿಸಿತ್ತು. ಏಕೆಂದರೆ ಸಮುದ್ರದ ಸೆಳೆತವೇ ವಿಭಿನ್ನವಾಗಿರುತ್ತದೆ. ಕೆಲವರಿಗೆ ಸಮುದ್ರ ಕೇವಲ ನೀರು. ಅದರಲ್ಲಿಯೂ ಯಾವುದೇ ಬಳಕೆಗೆ ಸೂಕ್ತವಲ್ಲದ ಉಪ್ಪು ನೀರು. ಆದರೆ, "ರವಿ ಕಾಣದನ್ನು ಕವಿ ಕಂಡ" ಎಂಬಂತೆ.. ಕವಿ ಮನಸ್ಸಿಗೆ ಮಾತ್ರ ಇಂತಹಾ ವಸ್ತು ವಿಷಯಗಳು ವಿಭಿನ್ನವಾಗಿ ಮನಸ್ಸಿಗಿಳಿಯುತ್ತವೆ. ಹೀಗೆ ಅವರ ಸಮುದ್ರ ಗೀತೆಗಳಲ್ಲಿ ಕಂಡ ಕವಿತೆ ಇದು.
ಕಂಡೆ! ನಿನ್ನನು ಮೊದಲಿಗೊಮ್ಮೆ ಕಂಡೆ!
ಓ ಸನಾತನ ಸಮುದ್ರರಾಜ!
ಸಂಕ್ರಾಂತಿ ಪುರುಷ! ಓ!
ಸಮುದ್ರವನ್ನು ನಾವು ಆಗಾಗ ನೋಡುತ್ತಿದ್ದರು ನಮಗೆ ಪ್ರತಿ ಬಾರಿ ಸಿಗುವ ಸಮುದ್ರ ವಿಭಿನ್ನವಾಗಿರುತ್ತದೆ ಆದರೆ ಇಲ್ಲಿ ಮೊದಲ ಬಾರಿಗೆ ಕಂಡಾಗ ಕವಿ ಮನಕ್ಕೆ ಮೂಡಿದ ಸಮುದ್ರ ಕಾಣಿಸುತ್ತಿದೆ.
ಸಾಮಾನ್ಯವಾಗಿ ನದಿಯನ್ನು ಹೆಣ್ಣಿಗೂ ಹಾಗೂ ಸಮುದ್ರವನ್ನು ಗಂಡಿಗೂ ಹೋಲಿಸುವ ಹೋಲಿಕೆ ಇಲ್ಲಿನ ಕವಿ ಭಾವದಲ್ಲಿ ಸಮುದ್ರ ರಾಜ, ಸಂಕ್ರಾಂತಿ ಪುರುಷ ಎಂಬ ಪದದಲ್ಲಿ ಕಂಡುಬಂದಿದೆ. ಅದರಲ್ಲಿಯೂ ಸನಾತನ ಸಮುದ್ರರಾಜ ಎಂಬ ಪದವು ಅದರ ಹಿರಿಮೆಯನ್ನು ಹೇಳುತ್ತದೆ.
ಹಳೆಯದೆಲ್ಲ ಒಳಗೊಳಗೆ ಕಾಯ್ದು
ಹೊಸದನೆಲ್ಲ ಹೊರಗೆ ಸೂರೆಗೆಯ್ದು
ಚಿರಸನಾತನವಾಗಿ
ಪುನರ್ನವವಾಗಿ
ಸಲಿಲ ಲೀಲೆಯಲ್ಲಿರುವ ಚೈತನ್ಯವೆ!
ಸುಮನೋಹರ ಮೂರ್ತಿ
ಕಂಡೆ!
ನಿನ್ನನ್ನು ಮೊದಲಿಗೊಮ್ಮೆ ಕಂಡೆ!
ಸಮುದ್ರದ ಅಲೆಗಳು ಬಂದಾಗ ತೀರದಲ್ಲಿರುವ ವಸ್ತುಗಳನ್ನೆಲ್ಲ ಒಳಗೆ ಹೊತ್ತೊಯ್ಯುತ್ತವೆ ಅವುಗಳನ್ನು ತನ್ನೊಳಗೆ ಲೀನವಾಗಿಸಿಕೊಳ್ಳುತ್ತದೆಯೇನೋ ಎನ್ನುವ ಭಾವ ಹುಟ್ಟುವಷ್ಟರಲ್ಲಿಯೇ.. ಅದರ ಹಿಂದಿನಿಂದಲೇ ಬಂದ ತೆರೆ ತನ್ನ ಓಡಲೊಳಗಿನ ಎಷ್ಟೋ ಅಮೂಲ್ಯ ವಸ್ತುಗಳನ್ನು ಹೊರದೂಡುತ್ತದೆ. ಇಲ್ಲಿ ಹಳೆಯದನ್ನು ಒಳಗೊಳಗೆ ಕಾಯ್ದು ಅಮೂಲ್ಯವಾಗಿಸುವ, ಹೊಸದನ್ನು ತನ್ನೊಳಗೆ ಸೇರಿಸಿಕೊಳ್ಳುವ ಲೀಲೆಯಿದೆ. ಅದು ಅಲೆಗಳ ಆಟದ ಮೇಲೆ ನಿರ್ಣಯವಾಗುತ್ತದೆ. ಎಷ್ಟೋ ಬಾರಿ ದುಃಖದಲ್ಲಿರುವವರಿಗೆ ಸಮುದ್ರ ಚೈತನ್ಯವನ್ನು ಹುಟ್ಟಿಸಿದ್ದಿದೆ. ಸಮುದ್ರವನ್ನೇ ಒಂದು ವ್ಯಕ್ತಿಯಂತೆ ಕಂಡು.. ಸುಮನೋಹರ ಮೂರ್ತಿ ಕಂಡೆ ಎನ್ನುತ್ತಾರೆ ಕವಿ.
ಬಹುಶಃ, ಸಮುದ್ರದ ಸನಿಹವನ್ನು ಇಷ್ಟಪಡುವ ಪರಿಸರ ಪ್ರೇಮಿಗಳಿಗಂತೂ ಈ ಸಮುದ್ರ ಗೀತೆಗಳು ಇಷ್ಟವಾಗುತ್ತವೆ. ಮೊದಲ ನೋಟಕ್ಕೆ ನಮಗೆ ದಕ್ಕಿದ ಸಮುದ್ರಕ್ಕೂ.. ಇಲ್ಲಿನ ಸಮುದ್ರರಾಜನ ಸುಮನೋಹರ ಮೂರ್ತಿಗೂ ಇರುವ ಭವ್ಯತೆಯ ಅರಿವಾಗುತ್ತದೆ.
*****************************************
ಕವಿತೆ : ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು
ಕವಿ : ಮಂಜೇಶ್ವರ ಗೋವಿಂದ ಪೈ
ಕವಿಗಳು ತಮ್ಮ ಭಾವವನ್ನು ಕವಿತೆಗಳನ್ನಾಗಿಸಿದಂತೆ.. ವಾಸ್ತವವನ್ನು ಸಹಾ ಕವಿತೆಗಳಲ್ಲಿ ಕಟ್ಟಿಕೊಡುತ್ತಾರೆ. ಆದರೆ, ಅದ್ಭುತ ವ್ಯಕ್ತಿತ್ವಗಳನ್ನು, ವ್ಯಕ್ತಿಗಳ ಬದುಕನ್ನು ಕವಿತೆಗಳಾಗಿ ಕಟ್ಟಿಕೊಡುವುದು ಸುಲಭವಲ್ಲ. ಅದರಲ್ಲಿಯೂ.. ಸಾವಿನ ಸಂದರ್ಭದಲ್ಲಿ ಅವರ ಅಗಾಧ ವ್ಯಕ್ತಿತ್ವವನ್ನು ಒಂದಿಷ್ಟು ಪದಗಳಲ್ಲಿ ಕಟ್ಟಿಕೊಡುವುದು ಸುಲಭವಲ್ಲವೇ ಅಲ್ಲ. ಇಲ್ಲಿ ಕವಿ ಮಂಜೇಶ್ವರ ಗೋವಿಂದ ಪೈ ಅವರು ಮಹಾತ್ಮ ಗಾಂಧಿಯವರು ಹುತಾತ್ಮರಾದ ಸಂದರ್ಭದಲ್ಲಿ ರಚಿಸಿರುವ ಕವಿತೆ ಇದೆ.
ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು!
ಈಗ ಭಾರತಕತ್ಯಗತ್ಯವಿದೆ ನಿನ್ನ;
ಬಿರುಗಾಳಿಗೊಲೆವ ಹಡಗಂತಿಹುದಾದಾಸತ್ತು
ನಿನ್ನ ಹೊರತಾರೊಯ್ಯೆರೇವಿನೊಳದನ್ನ?
ಹಿಮನಗವೋ ನಿನ್ನಚಲ ವಿಮಲ ಭಗವದ್ಭಕ್ತಿ,
ಜಗವನಪ್ಪುವ ವಾರ್ಧಿಯೆನೆ ಜಗತ್ಪ್ರೀತಿ,
ನಿನ್ನ ಸೂರ್ಯಾತಪಕಾಭಿನ್ನಮಾತ್ಮಿಕ ಶಕ್ತಿ
ಕಾದುವೈ ನಮ್ಮನೀವರಮೇಕ ರೀತಿ!
ಸ್ವಾರ್ಥಪರರಾಗಿಹೆವು, ದೇವರಿಲ್ಲೆಮಗಿಂದು
ಸೋದರತೆ ಇಲ್ಲ, ಮುಂದಿನದಿಲ್ಲ ಗೊಡವೆ;
ಧರ್ಮಬಾಹಿರರೆಮ್ಮನೆತ್ತಲಿನ್ನಾರೆಂದು
ತೋಚದೆ ಮಹಾತ್ಮ ನಿನಗಿಂತು ಮೊರೆಯಿಡುವೆ.
ಗಾಳಿ ಕಾಣದೆ ಬೀಸಿ ಉಸುರುಗೊಳಿಪಂತೆ!
ತಾರ ನವ ಜೀವನವ ನಮ್ಮನುಳಿಪಂತೆ!
ಗಾಂಧೀಜಿಯವರು 'ಮಹಾತ್ಮ' ಎಂಬ ಬಿರುದಾಂಕಿತರು. ಅವರ ಅಗತ್ಯ ನಮ್ಮ ದೇಶಕ್ಕೆಷ್ಟಿತ್ತು ಎಂಬ ಅಗತ್ಯತೆಯನ್ನು ಉಲ್ಲೇಖಿಸುತ್ತಲೇ.. ಬಿರುಗಾಳಿಗೆ ಸಿಲುಕಿದ ಹಡಗಿನಂತಹಾ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟ ಪರಿಯನ್ನು ನೆನಪಿಸಿಕೊಂಡು ನಿನ್ನ ಹೊರತು ಮತ್ತಾರು ಎನ್ನುತ್ತಾ ಅವರ ಭವ್ಯ ವ್ಯಕ್ತಿತ್ವವನ್ನು ತೋರುತ್ತಾರೆ, ಅವರ ಜನರ ಮೇಲಿನ ಪ್ರೀತಿ ಹಾಗೂ ದೇಶದ ಮೇಲಿನ ಭಕ್ತಿಗೆ ಅದ್ಭುತವಾದ ಹೋಲಿಕೆಗಳನ್ನು ಮಾಡುತ್ತಾರೆ. ಯಾರಾದರೂ ತೀರಿ ಹೋದಾಗ ಮೊದಲಿಗೆ "ದೇವರಿಲ್ಲ..! ಇಂಥವರನ್ನು ಇಷ್ಟು ಬೇಗ ಕರೆಸಿಕೊಂಡನೇ..?!" ಎಂಬ ಭಾವ ಮೊಳೆಯುತ್ತದೆ. ಇಲ್ಲಿ ಅದೇ ಭಾವವನ್ನು ಕಾಣಬಹುದು. ಮುಂದಿನ ಭವಿಷ್ಯದ ಯೋಚನೆಯಿಲ್ಲದೆ, ಒಬ್ಬರಿಗೊಬ್ಬರು ಸಹಕಾರ ನೀಡದೆ, ಭ್ರಾತೃತ್ವ ವನ್ನು ಮರೆತು ಅವರನ್ನು ಕೊನೆಗಾಣಿಸಿದ ಬಗೆಯನ್ನು ಹೇಳುವಲ್ಲಿ ದೇಶದ ಕುರಿತಾದ ಭವಿಷ್ಯದ ಚಿಂತೆಯೂ ಸೇರಿದೆ. ಅದಕ್ಕೆ ಬೇಕಾದ ಪರಿಹಾರವನ್ನು ಮಹಾತ್ಮನಲ್ಲಿಯೇ ಮೊರೆ ಇಡುತ್ತಿದ್ದಾರೆ.
ಇಲ್ಲಿ ಗಾಂಧೀಜಿಯವರ ಹಿರಿಮೆಯನ್ನು ಎತ್ತಿ ಹಿಡಿದು, ಅವರ ಅವಶ್ಯಕತೆಯನ್ನು ಅರುಹುತ್ತಾ.. ಅವರ ಕೊನೆಯ ದಿನಗಳ ಕೃತ್ಯದ ಪರಿಣಾಮವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರಲ್ಲದೆ, ಇದನ್ನು ಹೇಳಿರುವುದು ಅತ್ಯಂತ ಪ್ರೀತಿ ಪೂರ್ವಕವಾದ ವ್ಯಕ್ತಿಯೊಬ್ಬರನ್ನು, ಗೌರವಿಸುವ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಾಗಿನ ಪ್ರಲಾಪದಲ್ಲಿ ಹಿರಿಮೆಯನ್ನೇ ಹೆಚ್ಚು ಎತ್ತಿ ಹಿಡಿದಂತಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ